ನೆನಪುಗಳೆ ಹಾಗೆ

   
     ನೆನಪುಗಳೆ ಹಾಗೆ;
ಮಳೆಗಾಲದಲ್ಲಿ ನೆಲದೊಳಕ್ಕಿಳಿದ ನೀರಿನ ತುಳುಕು,
ಬೇಸಿಗೆಗೆ ಬಾನೆಲ್ಲ ನೀರ ನೆಳಲು;
ಕಾಯುವ ನೆಲಕ್ಕಿಳಿವ ಸರಿಯ ಬಿಳಲು;
ಸುಟ್ಟು ಹಿಡಿಬೂದಿಯಾದಪ್ಪ ಮರಳುತ್ತಾನೆ
ನಾಳ ನಾಳಗಳಲ್ಲಿ ತೀರ್ಥರೂಪ;
ಮೂಲಾಧಾರದಿಂದಾಜ್ಞೆವರೆಗೆ ಚಕ್ರಚ್ಯವನ;
ಯಾತ್ರೆ ಹೋಗದೆ ಬೇರೆ ದಾರಿ ಇಲ್ಲ;
ಮಾರುತಲೆ ಗುರುತಿಸದ ತಲೆಮಾರುಗಳ ಅಲೆಮಾರಿ;
ಬರಿಯ ಮೂಲಾಧಾರ, ಬಡ್ಡಿ ಶುನ್ಯ.
    ನಿದ್ದೆಯೆಳೆಯನ್ನು ಛೇದಿಸುವ ವಾಸ್ತವದರಚು,
ಹೊದಿಕೆಯೆಲ್ಲಾ ಬೆವರು, ಕುನ್ನಿ - ಕಿರಚು;
ಕನಸಲ್ಲಿ ಕಿಟಕಿಕದ ತೆರೆದು ತೊಳೆಯುವ ಎರಚು;
ಅಲ್ಲಿ ಗಾಳಿಗೆ ಮಾನವ ಚಾಚು -
ಮರವೆ ಎಂಬುದೆ ಇಲ್ಲ, ಮರವೆ ಎಲ್ಲ.
    ಕರುಳು ಕಿವುಚಿದ ಹಾಗೆ ಒಂದೊಂದು ಸಲ:
ಅಮ್ಮನೆದೆಯಿಂದೆತ್ತಿ ಗುಮ್ಮ ಪಾತಾಳಕ್ಕೆ
ಎತ್ತಿ ಕುಕ್ಕಿದ ಹಾಗೆ;
ಸರಭರದ ಮಳೆ ಹೊರಗೆ; ಚಳಿಯ ನೆಗಸಿನ ಮೇಲೆ
ಪಾತಿ ನನ್ನದು ಪುಟ್ಟಿ ಹಾಸು; ತಿರುಗಣಿ ಮಡುವಿನಲ್ಲಿ
ಗಿರಕಿ, ಕುಗ್ಗುತಿರಲು ಚಕ್ರಪರಿಧಿ.
ಕಣ್ಣಿಗೆ ಕಣ್ಣು ತಾಗಿ ತಾಗದೆ, ಒಳಗೆ ತಣ್ಣನೆಯ ಕೈ
ಅಮುಕುವೆದೆ; ಹೊರಗಡೆಗೆ
ತಣ್ಣ  ತಣ್ಣನೆ ಗಾಳಿ, ಕುಣಿಕೆಯೆಸೆವ ಕರಾಳ
ಕತ್ತ ಬಿಗಿಯುತ್ತಲಿರೆ, ನಾಲಗೆಯನೆಬ್ಬಿಸದ
ತಡಕೊಳ್ಳಲಾರದೊಳ ಕಿರಿಚು - ನಿಶ್ಯಬ್ದ.
     ಬಹಳ ವರ್ಷದ ಹಿಂದೆ ಮೊಗೇರಿಯಲ್ಲಿ
ಬೇರು ನೆಟ್ಟಿರುವ ನನ್ನೂರಿನಲ್ಲಿ;
ಹೊದಿಕೆಯೊಳಗಡೆ ಕುಗ್ಗಿ ಕುಗ್ಗಿ ಬೊಟ್ಟಾಗಿ ಮಿರುಗುವ ಹರಳು;
ಪರದೆ ಮೇಲಕ್ಕೆ ಸುರುಳಿ ಸುರುಳಿ ಬಿಚ್ಚಿ ಸಾಗುತ್ತಿರುವ
ಅನಂತ ಚಲನೆಯ ನಿರಂತರ ವಿಚಿತ್ರ.
    ಮಳೆ ಕಳೆದು ಬೆಸಲಾದ ಮೇಲೆ ಮತ್ತೂ ನೆನಪು;
ಸಹಸ್ರ ತೂತುಗಳಿಂದ ಸೂಕ್ಷ್ಮ ರೂಪ
ಹಬ್ಬಿ ಮಂದಯಿಸುವ ಮಹಾಬಿಲಕ್ಕೆ ಬೆಳ್ಳಿಯ ಪರದೆ,
ಏಳು ಬಣ್ಣಗಳ ನೋರೇಳು ಕ್ಷೇಪ.
ಆಸಾಡಿಗಾಳಿ ಕಾಯುತ್ತ ಕೂರುವ ಕೆಲಸ
ಕಾಡು ಕೆಂಪಾಗಿರುವ ರಂಧ್ರಗಳಿಗೆ;
ಬಿರುಗಾಳಿ ಮಳೆ ಗುಡುಗು ಸಿಡಿಲು ಕೋಲಾಹಲ,
ಧಾತುಧಾರೆಗೆ ಚಿಗಿವ ಜೀವಜಾಲ.
ಒಳಗಿಂದ ಹೊರಗೆ, ಹೊರಗಿಂದೊಳಗೆ, ಮೇಲಿಂದ
ಕೆಳಕ್ಕೆ, ಮೇಲಕ್ಕೆ ರಾಟಿ ಚಲನೆ;
ಚುಕ್ಕಾಣಿ ಹಿಡಿದಷ್ಟೆ ತೃಪ್ತಿ ಬುದ್ದಿಗೆ; ದಿಕ್ಕು
ದಾರಿ ನಡೆ ನಿರ್ಧಾರ ಅದರಾಚೆಗೆ.

               - ಗೋಪಾಲಕೃಷ್ಣ ಅಡಿಗ
('ವರ್ಧಮಾನ' ಕವನ ಸಂಕಲನದಿಂದ)

ಮಗು

ಚಿತ್ರ ಕೃಪೆ: http://pixdaus.com/single.php?id=19487 

ಪ್ರತಿಯೊಂದು ಮಗು ಕೂಡ ಬಾನಿಂದಲೇ ಕೆಳ
ಕ್ಕಿಳಿದು ಮಣ್ಣಿಗೆ ಬಿದ್ದ ಬೆಳಕಿನ ಮರಿ;
ಗರಿಸುಟ್ಟ ಗರುಡ ಬರುತ್ತಾನೆ ಆರಯ್ಕೆಗೆ
ನಮ್ಮ ನಿಮ್ಮವರಿವರ ಎಡೆಗೆ, ತೊಡೆಗೆ.

ತೊಳದಿಟ್ಟ ಮನದ ಮೇಲೇನ ಬರೆಯುತ್ತೀರಿ,
ಯಾವರ್ಥ, ಯಾವ ಪುರುಷಾರ್ಥ?
ಯಾವ ಮೇಲ್ಪಂಕ್ತಿ? ನೆಲ ಕಚ್ಚಿ ಬೇರ್ಪಟ್ಟು
ಅಂತರಿಕ್ಷಕ್ಕೇನೆ ತುಡಿವ ಪಂಥ?

ಅಥವಾ ಬಗ್ಗಿ ತಗ್ಗಿ ಮಣ್ಣುಣಿಯಾಗಿ, ಅರಗಿಣಿಯಾಗಿ
ಮಣ್ಣುಗೂಡುವ ವ್ಯರ್ಥ ಯಾತ್ರೆ?
ನಕ್ಷತ್ರವಾಗುವುದ ಮರೆತು ಉಲ್ಕಾಪಾತ
ವಾಗಿ ಕರಕುವ ಅರ್ಥವಿರದ ವಾರ್ತೆ?

ನಮ್ಮ ಬದುಕಿನ ಮುನ್ದಿನಧ್ಯಾಯವೇ ಮಗು.
ಅನನ್ತವೇದದನುಕ್ತ ಸೂಕ್ತ.
ಯಾವ ದೇವರ ಹಾರಿ, ಯಾವ ಶಕ್ತಿಗೆ ಹೋರಿ,
ತೆರೆಯುವುದು ಯಾವುದು ದಿಗಂತ?

ಪ್ರತಿಯೊಬ್ಬನೆದೆಯಲ್ಲು ಇರುತ್ತದೊಂದೊಂದು ಮಗು,
ಮಾಂಸದಲ್ಲಿಳಿದು ಕಲ್ಪನೆಗೆ ಬೆಳೆದು,
ಕನಸಿನಾಕಾಶದಾಕಾರಶತ ತಳೆಯುವುದು
ಅಮೃತಕಲಶವ ಹೊರುವ ಉಕ್ಕಿನ ಸತು.

           - ಗೋಪಾಲಕೃಷ್ಣ ಅಡಿಗ
('ಮೂಲಕ ಮಹಾಶಯರು' ಕವನ ಸಂಕಲನದಿಂದ)