"ಮರುಳ ಮುನಿಯನು ನಾನು ಮಂಕುತಿಮ್ಮನ ತಮ್ಮ" ಎಂದು ತನ್ನ ಪರಿಚಯ ಮಾಡಿಕೊಳ್ಳುವ ಮರುಳ ಮುನಿಯ ಮಾನ್ಯ ಡಿ.ವಿ.ಜಿಯವರ ಅವಳಿ ಮಾನಸ ಪುತ್ರರಲ್ಲಿ ಪ್ರಖ್ಯಾತ ಮಂಕುತಿಮ್ಮನ ಸಹೋದರನೆ ಸರಿ. ಜೀವನ ಸೌಂದರ್ಯ, ಜೀವನ ಶ್ರದ್ದೆ, ಜೀವನ ರಸಾನುಭವಗಳ ಸಮ್ಯಕ್ ದೃಷ್ಟಿ ಹೊಂದಿದ್ದ ಡಿ.ವಿ.ಜಿಯವರ ಈ ರಚನೆಗಳು ಪ್ರಬುದ್ಧ ತಾತ್ವಿಕ ಸತ್ಯಗಳನ್ನು ನಿತ್ಯ ಜೀವನದ ಹಸಿ ಸತ್ಯಗಳ ಜೊತೆಗೂಡಿಸಿ ಚೆಲುವ ಕಾವ್ಯ ಮಾಧ್ಯಮದಲ್ಲಿ ಕಟ್ಟಿ ಕೊಡುತ್ತವೆ. ಇದರ ಸೊಬಗು ಅನುಭವಿಸುವ ಸಹೃದಯನಿಗೆ ಸಾಮಾನ್ಯ ಜೀವನದ ಅಸಾಮಾನ್ಯ ದಿವ್ಯದಿಗ್ದರ್ಶನದ ಸಾಕ್ಷಾತ್ಕಾರ ಉಂಟು ಮಾಡುತ್ತದೆ.
001
ಶ್ರೀಮಜ್ಜಗನ್ಮುಕುರ ವಿಸ್ತರದೊಳಾರ್ ತನ್ನ |
ಮೈಮೆಯ ಪ್ರತಿಬಿಂಬ ಚಿತ್ರಗಳ ನೋಡು- ||
ತ್ತಾಮೋದಬಡುತಿಹನೊ ಆತನಡಿದಾವರೆಯ |
ನಾಮರಸುವಂ ಬಾರೊ -ಮರುಳಮುನಿಯ ||
(ಶ್ರೀಮತ್+ಜಗತ್+ಮುಕುರ)(ವಿಸ್ತರದೊಳ್+ಆರ್)(ನೋಡುತ್ತ+ಆಮೋದ+ಪಡುತಿಹನೊ)
(ಆತನ+ಅಡಿದಾವರೆಯ)(ನಾಂ+ಅರಸುವಂ)
002
ಶ್ರೀಮಜ್ಜಗದ್ದರ್ಪಣದೊಳಾವ ರಾಜಂ ಸ್ವ |
ಸಾಮ್ರಾಜ್ಯ ಬಿಂಬಗಳ ತಾಂ ಕಾಣಲೆಂದು ||
ಈ ಮೋಹನಾಗಾರವಂ ನಿರವಿಸಿದನವನ ||
ನಾಮರಸುವಂ ಬಾರೊ - ಮರುಳಮುನಿಯ ||
(ಶ್ರೀಮತ್+ಜಗತ್+ದರ್ಪಣದೊಳ್+ಆವ)(ಕಾಣಲ್+ಎಂದು)(ಮೋಹನ+ಆಗಾರವಂ)(ನಿರವಿಸಿದಂ+ಅವನಂ+ಆಂ+ಅರಸುವಂ)
003
ಈ ಭುವನ ಮುಕುರದೊಳಗಾವಾಸಿತಂ ತನ್ನ |
ವೈಭವ ವಿಲಾಸಗಳ ಕಾಣಲೆಂದೆಳಸಿ ||
ಈ ಭಿದುರ ಭಿತ್ತಿಗಳ ನಿರವಿಸದನೋ ಅವನ |
ಶೋಭೆಗೆರಗುವ ಬಾರೊ - ಮರುಳಮುನಿಯ ||
(ಮುಕುರದ+ಒಳಗೆ+ಆವಾಸಿತಂ) (ಕಾಣಲ+ಎಂದು+ಎಳಸಿ) (ಶೋಭೆಗೆ+ಎರಗುವ)
004
ಶ್ರೀಮಂತನಾವನೀ ಭುವನ ಮುಕುರದಿ ನಿಜ |
ಸ್ವಾಮಿತೆಯ ಲೀಲೆಗಳ ನೋಡಿ ನಲಿಯಲ್ಕೀ ||
ಭೂಮ ಪ್ರಪಂಚವಂ ನಿರವಿಸಿದನೋ ಅವನ |
ನಾಮರಸುವಂ ಬಾರೊ - ಮರುಳ ಮುನಿಯ ||
(ಶ್ರೀಮಂತನ್+ಆವನ್+ಈ) (ನಲಿಯಲ್ಕೆ+ಈ) (ಆವನಮ್+ಆಂ+ಅರಸುವಂ)
005
ದ್ವಂದ್ವ ತರ್ಕದಿನಾಚೆ ಶುಭ ಅಶುಭದಿಂದಾಚೆ |
ಇಂದ್ರಿಯ ಸ್ಪರ್ಶನದ ಸುಖ ದುಃಖದಾಚೆ ||
ಸಂದಿರ್ಪುದೊಂದು ದಶೆಯದು ನಿತ್ಯಸೌಖ್ಯದಶೆ |
ಎಂದುಮರಸದನು ನೀ -ಮರುಳ ಮುನಿಯ ||
(ಎಂದುಮ್+ಅರಸು+ಅದನು)
006
ಮರುಳ ಮುನಿಯನು ನಾನು ಮಂಕುತಿಮ್ಮನ ತಮ್ಮ |
ಕೊರಗೆನ್ನೆದೆಯ ತಿತ್ತಿಯೊಳಗೆ ತುಂಬಿಹುದು |
ಸುರಿವೆನದನಿಲ್ಲಿ ಸಾಧುಗಳು ಸರಿಪೇಳರೇಂ |
ಗುರುವಲೇ ಜಗ ನಮಗೆ -ಮರುಳ ಮುನಿಯ ||
(ಕೊರಗು+ಎನ್ನ+ಎದೆಯ)(ತಿತ್ತಿ+ಒಳಗೆ)(ತುಂಬಿ+ಇಹುದು)(ಸುರಿವೆನ್+ಅದನ್+ಇಲ್ಲಿ)
007
ಮರುಳ ಮುನಿಯನು ನಾನು ಮಂಕುತಿಮ್ಮನ ತಮ್ಮ |
ಸುರಿವೆನೆನ್ನೆದೆಚೀಲದೆಲ್ಲ ಪುರುಳುಗಳ |
ಸರಿ ನೋಡಿ ಕೊಡುವ ಸಜ್ಜನರಿಹರೆ ಲೋಕದಲಿ |
ಶರಣಪ್ಪೆನವರಿಂಗೆ - ಮರುಳ ಮುನಿಯ ||
(ಸುರಿವೆನು+ಎನ್ನ+ಎದೆಯ+ಚೀಲದ+ಎಲ್ಲ)(ಸಜ್ಜನರು+ಇಹರೆ)(ಶರಣು+ಅಪ್ಪೆಂ+ಆವರಿಂಗೆ)
008
ಮರುಳ ಮುನಿಯನ ಮನಸು ಸರಳ ಬಾಳ್ವೆಯ ಕನಸು |
ಸರಸ ಋತ ಸೌಜನ್ಯ ಶಾಂತಿಗಳ ಸೊಗಸು ||
ಕೆರೆಯಿನೆದ್ದಲೆಯೆರಚಿ ತಣಿವು ತುಂತುರನಿನಿತು |
ಮರಳಿ ತೆರೆ ಸೇರ‍್ವುದಲ - ಮರುಳ ಮುನಿಯ ||
(ಕೆರೆಯಿನ್+ಎದ್ದ+ಅಲೆ+ಎರಚಿ)(ತುಂತುರಂ+ಇನಿತು)(ಸೇರ‍್ವುದು+ಅಲ)
009
ಕಗ್ಗವಿದು ಬೆಳೆಯುತಿದೆ ಲಂಕೆಯಲಿ ಹನುಮಂತ |
ಹಿಗ್ಗಿ ಬೆಳಸಿದ ಬಾಲದಂತೆ ಸಿಗ್ಗುಳಿದು ||
ನುಗ್ಗಿ ಬರುತಿರೆ ಲೋಕದ ಪ್ರಶ್ನೆಗಳ ಧಾಳಿ |
ಉಗ್ಗು ಬಾಯ್ಚಪಲವಿದು - ಮರುಳ ಮುನಿಯ ||
(ಕಗ್ಗ+ಇದು)(ಸಿಗ್ಗು+ಉಳಿದು)(ಬಾಯ್+ಚಪಲ+ಇದು)
010
ಬಿನದ ಕಥೆಯಲ್ಲ ಹೃದ್ರಸದ ನಿರ್ಝರಿಯಲ್ಲ |
ಮನನಾನುಸಂಧಾನಕಾದುದೀ ಕಗ್ಗ ||
ನೆನೆನೆನೆಯುತೊಂದೊಂದು ಪದ್ಯವನದೊಮ್ಮೊಮ್ಮೆ |
ಅನುಭವಿಸಿ ಚಪ್ಪರಿಸೊ - ಮರುಳ ಮುನಿಯ ||
(ಮನನ+ಅನುಸಂಧಾನಕೆ+ಅದುದು+ಈ)(ನೆನೆನೆನೆಯುತ+ಒಂದು+ಒಂದು) (ಪದ್ಯವನು+ಅದು+ಒಮ್ಮೊಮ್ಮೆ)
011
ಈಶ್ವರನೆನಿಪ್ಪವನ ಬೆಂಗಡೆಯೆ ತಾಂ ಬ್ರಹ್ಮ |
ಶಾಶ್ವತಂ ಬ್ರಹ್ಮ ತಾತ್ಕಾಲಿಕಂ ದೇವರ್ ||
ವಿಶ್ವಮಂ ನಿರ್ಮಿಸಿಯೆ ನಿರ್ವಹಿಪನೀಶ್ವರಂ |
ನಿಷ್ಕ್ರಿಯಂ ಪರಬೊಮ್ಮ -ಮರುಳ ಮುನಿಯ ||
(ಈಶ್ವರನ್+ಎನಿಪ್ಪವನ) (ನಿರ್ವಹಿಪನ್+ಈಶ್ವರಂ)
012
ಉಸಿರೇನು ಹಸಿವೇನು ಅಳುವೇನು ನಗುವೇನು |
ಬಿಸಿಯೇನು ತಣಿವೇನು ಹೊಸಹೊಳಪದೇನು ||
ಅಸುವಿನೆಲ್ಲನುಭವಂಗಳು ಬ್ರಹ್ಮ ಚೈತನ್ಯ |
ರಸವಿಸರವಲ್ಲವೇ -ಮರುಳ ಮುನಿಯ ||
(ಅಸುವಿನ+ಎಲ್ಲ+ಅನುಭವಂಗಳು)
013
ಸತತ ಕಲ್ಲೋಲಮುಖ ನೋಡು ಮೇಲ್ಗಡೆ ಜಲಧಿ |
ವಿತತ ಶಾಂತಿಯ ರಾಶಿಯದು ತೆರೆಗಳಡಿಯೋಳ್ ||
ಕೃತಕ ಸಂಸಾರಿ ದಶೆ ಮೇಲಂತು ಬೊಮ್ಮಂಗೆ |
ಸ್ವತ ಅವನು ನಿಶ್ಚೇಷ್ಟ - ಮರುಳ ಮುನಿಯ ||
(ತೆರೆಗಳ+ಅಡಿಯೋಳ್)
014
ಕೊಂಬೆರೆಂಬೆಗಳೆಲೆಗಳಲುಗುವುವು ಮೇಲುಗಡೆ |
ಕಂಬದಂತಚಲವಲೆ ಮರದ ಬುಡ ಮುಂಡ ||
ಜೃಂಭಿಪುದು ಜೀವಾಳಿ ಮಾಯಾನಿಲದೊಳಂತು |
ಕಂಪಿಸನು ಪರಬೊಮ್ಮ - ಮರುಳ ಮುನಿಯ ||
(ಕೊಂಬೆರೆಂಬೆಗಳ+ಎಲೆಗಳು+ಅಲುಗುವುವು)(ಕಂಬದಂತೆ+ಅಚಲವು+ಅಲೆ)(ಮಾಯ+ಅನಿಲದೊಳು+ಅಂತು)
015
ಚರಚರ್ಯಲೋಕದೊಳ್ ಸ್ಥಿರ ಪುರುಷತನವೊಂದು |
ಪುರುಷತ್ವದೊಳ್ ಸ್ಥಿರಂ ಪ್ರಗತಿಮತಿಯೊಂದು ||
ಸ್ಥಿರಲಕ್ಷ್ಯವಾಪಥದೊಳಾತ್ಮದುನ್ನತಿಯೊಂದು |
ಪರಮಸ್ಥಿರಂ ಬ್ರಹ್ಮ -ಮರುಳ ಮುನಿಯ ||
(ಸ್ಥಿರಲಕ್ಷ್ಯವು+ಆ+ಪಥದ+ಒಳ್+ಆತ್ಮದ+ಉನ್ನತಿ+ಒಂದು)
016
ಕನ್ನಡಿಯೆದುರು ನಿಂತು ಮಾನವನು ತನ್ನ ಲಾ-|
ವಣ್ಯಗಳ ನೋಡಿ ನೋಡುತ ಹಿಗ್ಗುವಂತೆ ||
ಚಿನ್ಮಯಂ ಸೃಷ್ಟಿ ಚಿತ್ರದಿ ತನ್ನ ವೀರ್ಯ ಸಂ-|
ಪನ್ನತೆಯನನುಭವಿಪ - ಮರುಳ ಮುನಿಯ ||
(ಸಂಪನ್ನತೆಯನು+ಅನುಭವಿಪ)
017
ಇರುವುದೊಂದೋ ಎರಡೊ ಎರಡರಂತೆಸೆವೊಂದೊ |
ಅರೆಮರೆಯೊಳಿಪ್ಪುದೇನದು ಲೆಕ್ಕಕಿಲ್ಲ ||
ಸ್ಥಿರದಿರ್ಕೆಯೇ ಇರ‍್ಕೆ ಧರಣಿಯೊಳ್ ಸ್ಥಿರಮೆಲ್ಲಿ? |
ಪರಮಾತ್ಮನೇ ಸ್ಥಿರವು - ಮರುಳ ಮುನಿಯ ||
(ಇರುವುದು+ಒಂದೋ) (ಎರಡರಂತೆ+ಎಸೆವ+ಒಂದೊ) (ಅರೆಮರೆಯೊಳು+ಇಪ್ಪುದು+ಏನದು) (ಸ್ಥಿರದ+ಇರ್ಕೆಯೇ) (ಧರಣಿಯ+ಒಳ್)(ಸ್ಥಿರಂ+ಎಲ್ಲಿ)
018
ಕಡಲಿಂಗೆ ಧುಮ್ಮಿಕ್ಕಿ ಕಣ್ಮೂಗುಗಳ ಬಿಗಿದು |
ಮುಳುಗಿ ತಡಕಾಡಿ ಮೇಲ್ಬಂದು ದಡ ಸೇರ‍್ವ ||
ಕಡಲಾಡಿವೋಲ್ಬೊಮ್ಮಚೈತನ್ಯವಾಡುವುದು |
ಪೊಡವಿಯಾ ಮಡುವಿನಲಿ - ಮರುಳ ಮುನಿಯ ||
(ಕಣ್+ಮೂಗುಗಳ) (ಕಡಲಾಡಿ+ವೋಲ್+ಬೊಮ್ಮ+ಚೈತನ್ಯವು+ಆಡುವುದು)
019
ಲೀನಂ ಪರಬ್ರಹ್ಮದೊಳಗಿರ್ದನಾತ್ಮ ತಾಂ |
ಕ್ಷೋಣೀವಿಲಾಸದೊಳು ತಾನು ಬೇರೆನಿಪಾ ||
ಮಾನುಷ್ಯವನು ತಳೆದು ನಾನಾಕೃತಿಯ ತಾಳಿ |
ಹೀನತೆಯ ಪಡುತಿಹನೊ - ಮರುಳ ಮುನಿಯ ||
(ಪರಬ್ರಹ್ಮದೊಳಗೆ+ಇರ್ದನ್+ಆತ್ಮ)(ಬೇರೆ+ಎನಿಪಾ)(ನಾನಾ+ಆಕೃತಿಯ)(ಪಡುತ+ಇಹನೊ)
020
ಸಾಗರಂ ಬ್ರಹ್ಮವದರಿಂದೆ ತಾತ್ಕಾಲದುಪ- |
ಯೋಗಕಾಗಿಹ ಕಾಲ್ವೆಯೆಲ್ಲ ದೇವರ‍್ಕಳ್ ||
ವಾಗೀಶ ಲಕ್ಷ್ಮೀಶ ಗೌರೀಶಮುಖರೆಲ್ಲ |
ರಾಗ ಭೋಗಕ್ಕಲ್ತೆ - ಮರುಳ ಮುನಿಯ ||
(ಬ್ರಹ್ಮ+ಅದರಿಂದೆ)(ತಾತ್ಕಾಲದ+ಉಪಯೋಗಕೆ+ಆಗಿಹ)(ಭೋಗಕ್ಕೆ+ಅಲ್ತೆ)
021
ಒಂದಿರುವುದೆಂದೆಂದುಮೊಂದು ತಾನೇ ತಾನು |
ಹಿಂದೆನಿಪುದಿಲ್ಲ ಮುಂದೆನಿಪುದಿಲ್ಲೆತ್ತಲ್ ||
ಸಂದಿನಲಿ ಬಯಲಿನಲಿ ಬೀಡಿನಲಿ ಕಾಡಿನಲಿ |
ವಂದಿಸೊ ಅದೊಂದಕ್ಕೆ-ಮರುಳ ಮುನಿಯ ||
(ಒಂದಿರುವುದು+ಎಂದೆಂದುಂ+ಒಂದು) (ಹಿಂದೆ+ಎನಿಪುದು+ಇಲ್ಲ) (ಮುಂದೆ+ಎನಿಪುದು+ಇಲ್ಲ+ಎತ್ತಲ್)
022
ಇರುವುದೊಂದೆಂದೆಂದುಮೆತ್ತೆತ್ತಲುಂ ಮರೆಯೊಳ್ |
ಇರುವುದದು ಹೆರುವುದದು ಹೊರುವುದೆಲ್ಲವದು ||
ಪಿರಿದು ತಾನಾಗಿರುವ ಕಿರಿದೆನಿಪುದೆಲ್ಲವನು |
ಶರಣು ಅವೊಂದಕ್ಕೆ - ಮರುಳ ಮುನಿಯ ||
(ಇರುವುದು+ಒಂದು+ಎಂದೆಂದುಂ+ಎತ್ತೆತ್ತಲುಂ) (ಹೊರುವುದು+ಎಲ್ಲ+ಅದು) (ಕಿರಿದು+ಎನಿಪುದು+ಎಲ್ಲವನು)
023
ಒಬ್ಬಂಟಿ ದೈವವದು ಹಬ್ಬದೂಟವನೆಳಸಿ |
ಇಬ್ಬರಾಟಕ್ಕಿಳಿದು ಹಲವಾಗಿ ಮತ್ತೆ ||
ದಿಬ್ಬಣವ ನಡಸುತಿಹುದುಬ್ಬಿದೀ ಲೋಕದಲಿ |
ಅದ್ಭುತಕೆ ನಮಿಸೆಲವೊ-ಮರುಳ ಮುನಿಯ ||
(ದೈವವು+ಅದು)(ಹಬ್ಬದ+ಊಟವನು+ಎಳಸಿ)(ಇಬ್ಬರ+ಆಟಕ್ಕೆ+ಇಳಿದು) (ನಡಸುತ+ಇಹುದು+ಉಬ್ಬಿದ+ಈ)(ನಮಿಸು+ಎಲವೊ)
024
ನೂರು ನೂರ್ ಗುಡಿಗಳಲಿ ನೂರ್ ನೂರ್ ಪೆಸರುಗಳ |
ನೂರು ನೂರಾಕೃತಿ ವಿಲಾಸ ವಿಭವಗಳಿಂ- ||
ದಾರಾಧನೆಯನಾವನಂಗೀಕರಿಪನೊ ಅವ-|
ನೋರುವಂಗೀ ನಮನ -ಮರುಳ ಮುನಿಯ ||
(ವಿಭವಗಳಿಂದ+ಆರಾಧನೆಯನು+ಆವನ್+ಅಂಗೀಕರಿಪನೊ)(ಅವನ್+ಓರುವಂಗೆ+ಈ)
025
ದೇವನೋ ಧರ್ಮವೋ ಕಾಲವೋ ಕರ್ಮವೋ |
ದೇವಿಯೋ ತತ್ತ್ವವೋ ಸ್ವಾಮಿಯೋ ವಿಭುವೋ ||
ಪಾವನಾತ್ಮವೋ ಸಾಕ್ಷಿಯೋ ಪರಬ್ರಹ್ಮವೋ |
ಆವಗಂ ನತಿಯವಗೆ -ಮರುಳ ಮುನಿಯ ||
(ಪಾವನ+ಆತ್ಮವೋ)(ನತಿ+ಅವಗೆ)
026
ದೈವವೊಂದೇ ಸತ್ತ್ವವದರ ನೆರಳೆ ಜಗತ್ತು |
ಆವಗಮದೆಲ್ಲೆಡೆಯು ಗೂಢಮಿರುತಿಹುದು ||
ನೋವು ಸಾವುಗಳೆಲ್ಲವಿರುವುದರ ದವಲತ್ತು |
ನಾವದಕೆ ಮಣಿವಮೆಲೊ- ಮರುಳ ಮುನಿಯ ||
(ದೈವವು+ಒಂದೇ)(ಸತ್ತ್ವ+ಅದರ)(ಆವಗಮ್+ಅದು+ಎಲ್ಲೆಡೆಯು)(ಗೂಢಮ್+ಇರುತ+ಇಹುದು)(ಸಾವುಗಳು+ಎಲ್ಲ+ಇರುವುದರ)(ನಾವು+ಅದಕೆ)(ಮಣಿವಂ+ಎಲೊ)
027
ಜಗಕೆಲ್ಲ ಕಾರಣಂ ಪ್ರೇರಣಂ ಧಾರಣಂ |
ಭಗವಂತನೆಂಬೊಂದದೇನೊ ಇಹುದಲ್ತೆ ||
ಬಗೆವ ನಾಮದರ ಸಂಬಂಧಗಳ ಗೂಢಮದು |
ಮುಗಿವ ಕೈಗಳನದಕೆ - ಮರುಳ ಮುನಿಯ ||
(ಭಗವಂತನ್+ಎಂಬ+ಒಂದು+ಅದು+ಏನೊ) (ಇಹುದು+ಅಲ್ತೆ) (ನಾಂ+ಅದರ) (ಗೂಢಂ+ಅದು)(ಕೈಗಳನ್+ಅದಕೆ)
028
ಶ್ರೀಮಂತನಾರ್ ತನ್ನ ಸಿರಿವಂತಿಕೆಯ ವಿಭವ |
ಸಾಮರ್ಥ್ಯಗಳ ನೋಡಿ ಸಂತಸಿಸಲೆಂದೀ |
ಭೂಮ್ಯಾದಿಯಿಂ ಜಗದ್ದರ್ಪಣವ ರಚಿಸಿಹನೊ |
ಆ ಮಹಾತ್ಮಂಗೆ ನಮೊ - ಮರುಳ ಮುನಿಯ ||
(ಶ್ರೀಮಂತನ್+ಆರ್)(ಸಂತಸಿಸಲ್+ಎಂದು+ಈ)(ಭೂಮಿ+ಅದಿಯಿಂ)(ಜಗತ್+ದರ್ಪಣವ)
029
ಜಾಗರೂಕತೆ ಸಹನೆ ಸದಸದ್ವಿವೇಕಮೀ |
ತ್ರೈಗುಣ್ಯ ನೀಗುವುದು ಬಹು ಕಷ್ಟಗಳನು ||
ಆಗದೊಡೆ ದೈವಕ್ಕೆ ತಲೆಬಾಗು ಶರಣೆಂದು |
ಬಾಗು ತಲೆಯನು ನಗುತ - ಮರುಳ ಮುನಿಯ ||
(ಸತ್+ಆಸತ್+ವಿವೇಕಂ+ಈ) (ಶರಣು+ಎಂದು)
030
ಪ್ರಕಟರಂಗದೊಳಾರು ನಿಜ ಬಾಲರನು ವಿವಿಧ |
ವಿಕಲ ಪಾತ್ರದ ನಟನೆಯಾಡುವುದ ನೋಡಿ ||
ಸಕಲ ತಾನಿರುತ ಗೂಢದಲಿ ನಲಿಯುತ್ತಲಿಹ |
ವಿಕಟರಸಿಕಂಗೆ ನಮೊ -ಮರುಳ ಮುನಿಯ ||
(ಪ್ರಕಟರಂಗದ+ಒಳು+ಆರು)(ನಟನೆ+ಆಡುವುದ)(ತಾನ್+ಇರುತ)(ನಲಿಯುತ್ತಲ್+ಇಹ)
031
ಲೀಲೆಗೆಂದೀಜಗವ ರಚಿಸಿ ಲೀಲೆಗೆ ತಾನೆ |
ಮೂಲಾದಿಯೆನಿಪವೋಲ್ ನಾಮರೂಪಗಳ ||
ಚೀಲಂಗಳೊಳ್ಗವಿತು ಜಗವ ವೀಕ್ಷಿಸುತಿರ‍್ಪ |
ಪಾಲಕನ ನೆನೆ ಮಣಿದು - ಮರುಳ ಮುನಿಯ ||
(ಲೀಲೆಗೆ+ಎಂದು+ಈ+ಜಗವ)(ಮೂಲ+ಆದಿ+ಎನಿಪವೋಲ್)(ಚೀಲಂಗಳ+ಒಳ್ಗೆ+ಅವಿತು)(ವೀಕ್ಷಿಸುತ+ಇರ‍್ಪ)
032
ಅವ್ಯಕ್ತ ಸತ್ತು ತಾಂ ವ್ಯಕ್ತವಹೆನೆನೆ ಚಿತ್ತು |
ಅವ್ಯಾಜದಿಂ ಚಿತ್ತು ಲೀಲಿಸೆ ಜಗತ್ತು ||
ಸುವ್ಯಕ್ತ ಸಚ್ಚಿದಾನಂದಮೆ ಸಕಲ ಜಗತ್ತು |
ಸೇವ್ಯವದು ಸರ್ವರ್ಗೆ - ಮರುಳ ಮುನಿಯ ||
(ವ್ಯಕ್ತ+ಅಹೆನ್+ನೆ)(ಸೇವ್ಯವು+ಅದು)
033
ಲೀನಮುಂ ವಿಶದಮುಂ ಸಕ್ಕರೆಯು ನೀರಿನೊಳು |
ಪಾನಕಂ ಬಾಯ್ಗೆ ಸವಿ ಕಣ್ಗೆಕೈಗಿರದು ||
ನೀನಂತು ವಿಶ್ವಜೀವನಕಾಗು ಸನ್ಮಿತ್ರ |
ನೀನಾಗು ನಾನಿರದೆ - ಮರುಳ ಮುನಿಯ ||
(ನೀನ್+ಅಂತು)(ವಿಶ್ವಜೀವನಕೆ+ಆಗು)(ನೀನ್+ಆಗು)(ನಾನ್+ಇರದೆ)
034
ಸದಸದ್ವಿವೇಕ ವೈಶದ್ಯವಂ ನೀಡುವ |
ಚಿದನಂತರೂಪಿ ಭಕ್ತರ‍್ಗೆ ಸರ್ವರೊಳಂ ||
ಹೃದಯ ಪದ್ಮಾವಾಸ ಲೀಲಾಪ್ತನಾ ಶಿವನ |
ಪದವ ನೀಂ ಪಿಡಿ ಬಿಡದೆ - ಮರುಳ ಮುನಿಯ ||
(ಸದಸತ್+ವಿವೇಕ)
035
ಇರುವೊಂದು ಮೆರೆವೊಂದು ಅರಿವೊಂದು ಮೂರನುಂ |
ಪೊರುವೊಂದು ಪರಿಕಿಸಿದರರ್ಥವಂ ಮರುಳೆ ||
ಇರುವುದದು ಸತ್ಯ ಮೆರೆವುದು ಲೋಕ ಅರಿವಾತ್ಮ |
ವೊರುವುದೇ ಬ್ರಹ್ಮವನು -ಮರುಳ ಮುನಿಯ ||
(ಇರುವು+ಒಂದು)(ಮೆರೆವು+ಒಂದು)(ಅರಿವು+ಒಂದು)(ಪೊರು+ಒಂದು)(ಪರಿಕಿಸು+ಇದರ+ಅರ್ಥವನು)
(ಇರುವುದು+ಅದು)(ಅರಿವು+ಆತ್ಮ)
036
ಅಕ್ಷಯಾಖಂಡ ನಿರ್ಲಿಪ್ತ ವಸ್ತುವೋ ಶಿವನು |
ಶಿಕ್ಷೇರಕ್ಷೇಗಳವನ ಲಕ್ಷಣವೇನಿಪ್ಪಾ ||
ವಿಕ್ಷೆಪಮುಂ ಬ್ರಹ್ಮನಾಟಕ ಭ್ರಮೆಯಂಶ |
ಸಾಕ್ಷಿಮಾತ್ರನೋ ಶಿವನು - ಮರುಳ ಮುನಿಯ |
(ಅಕ್ಷಯ+ಅಖಂಡ) (ಶಿಕ್ಷೇರಕ್ಷೇಗಳು+ಅವನ) (ಲಕ್ಷಣ+ಏನಿಪ್ಪ+ಆ) (ಭ್ರಮೆಯ+ಅಂಶ)
037
ಕಣ್ಣೀರ ಸುರಿ ಕೆರಳು ಕಾದು ಕೊಲ್ ಕೊಲ್ಲಿಸಿಕೊ |
ಬಿನ್ನಣಿಸು ಹಂಬಲಿಸು ದುಡಿ ಬೆದರು ಬೀಗು ||
ಚಿಣ್ಣರಾಟವೆನೆ ನೋಡುತೆ ನಿನ್ನ ಪಾಡುಗಳ |
ತಣ್ಣಗಿರುವನು ಶಿವನು - ಮರುಳ ಮುನಿಯ ||
(ಚಿಣ್ಣರ+ಆಟ+ಎನೆ)(ತಣ್ಣಗೆ+ಇರುವನು)
038
ದಶಮುಖನ ಕಾಮಾಂಧ್ಯ ಕುರುಪತಿಯ ಲೋಭಾಂದ್ಯ |
ಕುಶಿಕಜನ ತಪದುರುಬು ಮೋಹದುರುಬುಗಳು ||
ರುಷೆಯೊ ರುಜಿವನೊ ರಿಕ್ತತೆಯೊ ರಾಗಚೇಷ್ಟೆಗಳೊ |
ರಸದೂಟ ಶಿವನಿಗದು - ಮರುಳ ಮುನಿಯ ||
(ಕಾಮ+ಆಂಧ್ಯ)(ಲೋಭ+ಆಂದ್ಯ)(ತಪದ+ಉರುಬು)(ಮೋಹದ+ಉರುಬುಗಳು)(ರಸದ+ಊಟ)
039
ತವಿಸುಗೆ ಹರಿಶ್ಚಂದ್ರನಳುತಿರ‍್ಕೆ ಚಂದ್ರಮತಿ |
ಧವನ ನೆನೆದಲೆದಾಡುತಿರ‍್ಕೆ ದಮಯಂತಿ ||
ಕುವರನಳಿಯೆ ಸುಭದ್ರೆ ಫಲುಗುಣರ್‌ಗೋಳಿಡುಗೆ |
ಶಿವನಿಗದು ನವರುಚಿಯೊ - ಮರುಳ ಮುನಿಯ ||
(ಹರಿಶ್ಚಂದ್ರನು+ಅಳುತ+ಇರ‍್ಕೆ)(ನೆನೆದು+ಅಲೆದಾಡುತ+ಇರ‍್ಕೆ)(ಕುವರನು+ಅಳಿಯೆ)(ಫಲುಗುಣರ್+ಗೋಳ್+ಇಡುಗೆ)(ಶಿವನಿಗೆ+ಅದು)
040
ರಸಭಾಂಡವೀ ಲೋಕ ರಸಲೋಲುಪನು ಶಿವನು |
ಕುಸುಮಗಳು ಜೀವಿಗಳು ಬಗೆಬಗೆಯ ಮಧುವು ||
ಹಸಿದನವೊಲೊಂದೊಂದನುಂ ಬಿಡದೆ ಸವಿಪನಾ-|
ಪಶುಪತಿಯೊ ರಸಪತಿಯೊ-ಮರುಳ ಮುನಿಯ ||
(ರಸಭಾಂಡವು+ಈ)(ಹಸಿದನವೊಲು+ಒಂದು+ಒಂದನುಂ)(ಸವಿಪನು+ಆ)
041
ಲೀನವಿಹವೀಶನಲಿ ಸತ್ಯಗಳು ಮಿಥ್ಯೆಗಳು |
ಮಾನಗಳು ಮೇಯಗಳು ಪ್ರಕೃತಿ ಮಾಯೆಗಳು ||
ಭಾನಗಳಭಾನಗಳು ಪೂಜ್ಯಗಳಪೂಜ್ಯಗಳು |
ಸೂನೃತಗಳಘಬೀಜ - ಮರುಳ ಮುನಿಯ ||
(ಲೀನ+ಇಹುವು+ಈಶನಲಿ) (ಭಾನುಗಳು+ಅಭಾನಗಳು) (ಪೂಜ್ಯಗಳು+ಅಪೂಜ್ಯಗಳು) (ಸೂನೃತಗಳ+ಅಘಬೀಜ)
042
ಉದಧಿಯಲಿ ನದಿನದಗಳುದಕ ಭೇದಗಳೈಕ್ಯ |
ಬದುಕಿನಲಿ ಮತ(ರೀತಿ)ಭೇದಂಗಳೈಕ್ಯ ||
ಸಮದಲಾತ್ಮದೊಳೆಲ್ಲ ಲೋಕಭೇದಗಳೈಕ್ಯ |
ಇದಿರಿಗಿಹುದೇಕಾತ್ಮ - ಮರುಳ ಮುನಿಯ ||
(ನದಿನದಗಳಾ+ಉದಕ) (ಭೇದಗಳೂ+ಐಕ್ಯ) (ಭೇದಂಗಳೂ+ಐಕ್ಯ) (ಸಮದಲ+ಆತ್ಮದ+ಒಳು+ಎಲ್ಲ) (ಲೋಕಭೇದಗಳು+ಐಕ್ಯ) (ಇದಿರಿಗೆ+ಇಹುದು+ಏಕಾತ್ಮ)
043
ಎರಡು ಪಕ್ಕಗಳು ನಿನ್ನ ಜೀವನದ ಪಾಂಥಕ್ಕೆ |
ಪರತತ್ತ್ವವೊಂದು ಲೋಕದ ಮಾಯೆಯೊಂದು ||
ತೊರೆಯಲಾಗದು ನೀನದಾವುದನು ನಿಚ್ಚಮುಂ |
ಮರೆಯ ಬೇಡೊಂದನುಂ - ಮರುಳ ಮುನಿಯ ||
(ತೊರೆಯಲು+ಆಗದು)(ನೀನು+ಅದು+ಆವುದನು)(ಬೇರೆ+ಒಂದನುಂ)
044
ಲೋಕ ಜೀವನದೊಳೇಕೀಭವಿಸುತಂ ಪ್ರ-|
ತ್ಯೇಕ ತಾನೆಂಬೆಣಿಕೆಗೆಡೆಗೊಡದೆ ಮನದಿ ||
ಸಾಕಲ್ಯ ಲೋಕದಲಿ ತನ್ನತಾಂ ಮರೆತಿರ‍್ಪ |
ನಾಕಾಶದಿಂ ಮೇಲೆ -ಮರುಳ ಮುನಿಯ ||
(ಜೀವನದ+ಒಳು+ಏಕೀಭವಿಸುತಂ)(ತಾನ್+ಎಂಬ+ಎಣಿಕೆಗೆ+ಎಡೆಗೊಡದೆ)
(ಮರೆತಿರ‍್ಪನ್+ಆಕಾಶದಿಂ)
045
ಕ್ಷಣವಮೂರ್ತಾನಂತ ಕಾಲದುಪಕೃತಿ ಮೂರ್ತಿ |
ಕಣವಮೇಯಾದಿ ವಸ್ತುವಿನಮೇಯಮುಖ ||
ಕ್ಷಣಿಕವನುಪೇಕ್ಷಿಪೆಯ? ಗಮಕವದನಂತಕ್ಕೆ |
ಅಣು ಮಹತ್ಪ್ರತಿನಿಧಿಯೊ - ಮರುಳ ಮುನಿಯ ||
(ಕ್ಷಣವು+ಅಮೂರ್ತ+ಅನಂತ)(ಕಾಲದ+ಉಪಕೃತಿ)(ಕಣವು+ಅಮೇಯ+ಆದಿ)
(ಕ್ಷಣಿಕವನು+ಉಪೇಕ್ಷಿಪೆಯ)(ಗಮಕವದು+ಅನಂತಕ್ಕೆ)(ಮಹತ್+ಪ್ರತಿನಿಧಿಯೊ)
046
ಈಶನಿಚ್ಛೆ ಸಮುದ್ರ ನೀನದರೊಳೊಂದು ಕಣ |
ಲೇಶದೊಳಗರಸುವೆಯ ರಾಶಿಯಮಿತವನು ? ||
ರಾಶಿಯೆಲ್ಲವ ಕಾಣ್ಬೊಡದರೊಳಗೆ ಕರಗಿ ಬೆರೆ |
ನಾಶವಕ್ಕೆ ಪೃಥಕ್ತ್ವ - ಮರುಳ ಮುನಿಯ ||
(ಈಶನ+ಇಚ್ಛೆ)(ನೀನು+ಅದರ+ಒಳು+ಒಂದು)(ಲೇಶದ+ಒಳಗೆ+ಅರಸುವೆಯ)
(ರಾಶಿಯ+ಅಮಿತವನು)(ಕಾಣ್ಬೊಡೆ+ಅದರ+ಒಳಗೆ)
047
ಏಕದಿನನೇಕಗಳು ಸಾಕಾರನಾಮಗಳು |
ಲೋಕವಿದು ನೋಡೆ ನೀಂ (ಕೃತ್ಸ್ನ ದರ್ಶನದಿಂ) ||
ಏಕದೊಳ್ ನೀನು ಸಾಕಲ್ಯವನ್ನನುಭವಿಸೆ |
ಸಾಕಲ್ಯಯೋಗವದು - ಮರುಳ ಮುನಿಯ ||
(ಏಕದಿಂ+ಅನೇಕಗಳು) (ಸಾಕಲ್ಯವನ್+ಅನುಭವಿಸೆ)
048
ಸರ್ವೋಽಹಮಿಂದೆ ನಿರ್ಮೂಲಮಪ್ಪುದಹಂತೆ|
ನಿರ್ವಿಕಾರದ ಶಾಂತಿ ನಿರಹಂತೆಯಿಂದೆ ||
ನಿರ್ವಾಂಛೆ ಶಾಂತಿಯಿಂದದು ಸರ್ವಸಮದೃಷ್ಟಿ|
ಸರ್ವಾತ್ಮ್ಯವಾನಂದ - ಮರುಳ ಮುನಿಯ ||
(ಸರ್ವೋಽಹಂ+ಇಂದೆ)(ನಿರ್ಮೂಲಂ+ಅಪ್ಪುದು+ಅಹಂತೆ)(ಶಾಂತಿಯಿಂದ+ಅದು)
049
ಸಂತಾನ ಸಾವಿರಗಳೊಂದೆ ಬೀಜದೊಳಡಕ |
ಸ್ವಾಂತವೊಂದರೊಳೆ ಭಾವ ಸಹಸ್ರವಡಕ ||
ಸಾಂತ ನರದೇಹದೊಳನಂತ ಚೇತನವಡಕ |
ಚಿಂತಿಸೀ ಸೂಕ್ಷವನು - ಮರುಳ ಮುನಿಯ ||
(ಸಾವಿರಗಳು+ಒಂದೆ)(ಬೀಜದ+ಒಳು+ಅಡಕ)(ಸ್ವಾಂತ+ಒಂದರ+ಒಳೆ)(ಸಹಸ್ರವು+ಅಡಕ)
(ನರದೇಹದ+ಒಳು+ಅನಂತ)(ಚೇತನವು+ಅಡಕ)(ಚಿಂತಿಸು+ಈ)
050
ಪುರುಷ ಪ್ರಕೃತಿಯರ ಪರಸ್ಪರಾನ್ವೇಷಣೆಯೆ
ನಿರವಧಿಕ ವಿಶ್ವ ಜೀವ ವಿಲಾಸ ಜಲಧಿ ||
ತೆರೆಯೊಂದು ನಾನಾಸಮುದ್ರದೊಳಗೆಂದಿರ‍್ಪ |
ಸರಸತೆಯೆ ಸದ್ಗತಿಯೊ - ಮರುಳ ಮುನಿಯ ||
(ಪರಸ್ಪರ+ಅನ್ವೇಷಣೆಯೆ)(ತೆರೆ+ಒಂದು)(ನಾನಾ ಸಮುದ್ರದ+ಒಳಗೆ+ಎಂದಿರ‍್ಪ)
051
ಆವಾವ ಜನ್ಮಂಗಳಜ್ಜಮುತ್ತಜ್ಜದಿರೊ
ಆವಿರ‍್ಭವಿಪರಿಂದು ಮಗ ಮೊಮ್ಮೊಗರೆನಿಸಿ ||
ಆವಗಂ ಸಾವಿರೂಟೆಯೆ ನೀರ‍್ಗಳಿಂ ನಮ್ಮ |
ಜೀವನದಿ ಬೆಳೆಯುವುದೊ - ಮರುಳ ಮುನಿಯ ||
(ಜನ್ಮಂಗಳ+ಅಜ್ಜ)(ಆವಿರ‍್ಭವಿಪರ್+ಇಂದು)(ಸಾವಿರ+ಊಟೆಯೆ)
052
ತನುವೇನು ಮನವೇನು ಘನವೇನು ರಸವೇನು |
ಗುಣವೇನು ಜಡವೇನು ಜೀವಬಲವೇನು ||
ಅನವಧಿಕ ಮೂಲ ಸ್ವಯಂಭೂತ ಚೈತನ್ಯ |
ಧುನಿಯ ಶೀಕರವೆಲ್ಲ - ಮರುಳ ಮುನಿಯ ||
053
ಮೂಲಚೇತನದ ಮೂಟೆಗಳೆಲ್ಲ ವಸ್ತುಗಳು |
ಸ್ಥೂಲದಿಂ ಸೂಕ್ಷ್ಮಗಳು ಸೂಕ್ಷ್ಮದಿಂ ಸ್ಥೂಲ ||
ಕಾಲ ದೇಶಾಸಂಗ ಪರಿವರ್ತ್ಯ ಜಡಜೀವ |
ಮಾಲಾಪ್ರವಾಹವದು -ಮರುಳ ಮುನಿಯ ||
054
ತೃಣ ಸಸ್ಯ ತರುಗಳಲಿ ಕನಕ ಕಬ್ಬಿಣಗಳಲಿ |
ಮಣಿ ಮರಳು ಶಿಲೆಗಳಲಿ ಶುನಕ ಹರಿಣದಲಿ ||
ಗುಣ ಶಕ್ತಿ ವಿವಿಧತೆಯನನುವಂಶವಿರಿಸಿರ್ಪು - |
ದನ್ಯೋನ್ಯತೆಯ ಕಲಿಸೆ - ಮರುಳ ಮುನಿಯ ||
(ವಿವಿಧತೆಯನು+ಅನುವಂಶ+ಇರಿಸಿ+ಇರ್ಪುದು+ಅನ್ಯೋನ್ಯತೆಯ)
055
ಬತ್ತ ಗೊಬ್ಬರವಾಗಿ ನೆಲಕಿಳಿದು ಮಣ್ಣಾಗಿ |
ಮತ್ತೆ ತಾಂ ತೆನೆಯೊಳೇಳ್ವಂತೆ ನರಕುಲದ ||
ಸತ್ತ್ವ ಕಣವಿಲ್ಲಲ್ಲಿ ತಮಕಿಳಿದೊಡಂ ತಾನೆ |
ಮತ್ತೆದ್ದು ಮೆರೆಯುವುದು - ಮರುಳ ಮುನಿಯ ||
(ಗೊಬ್ಬರ+ಆಗಿ)(ನೆಲಕೆ+ಇಳಿದು)(ಮಣ್+ಆಗಿ)(ತೆನೆಯ+ಒಳು+ಏಳ್ವಂತೆ)
(ಕಣವು+ಇಲ್ಲಿ+ಅಲ್ಲಿ)(ತಮಕೆ+ಇಳಿದೊಡಂ)(ಮತ್ತೆ+ಎದ್ದು)
056
ಎಂತು ನಾಂ ಕಾಡಿದೊಡಮಿವನಳಿಯದುಳಿದಿರ‍್ಪನ್ |
ಎಂತಪ್ಪ ಧೀರನಿವನೇನಮೃತಸಾರನ್ ! ||
ಇಂತೆನುತೆ ಮರ್ತ್ಯರೊಳೆ ಪಂಥ ಹೂಡಿಪನು ವಿಧಿ |
ಸಂತತ ಸ್ಪರ್ಧೆಯದು - ಮರುಳ ಮುನಿಯ ||
(ಕಾಡಿದೊಡಂ+ಇವನ್+ಅಳಿಯದೆ+ಉಳಿದಿರ‍್ಪನ್)(ಧೀರನ್+ಇವನು+ಏನ್+ಅಮೃತ+ಸಾರನ್)(ಇಂತು+ಎನುತೆ)
057
ನಮ್ಮ ರವಿ ಭೂಗೋಲಗಳಿನಾಚೆ ನೂರಾರು |
ನೂರ‍್ಮಡಿಯ ಬಲದ ರವಿ ಭೂಗ್ರಹಗಳಿಹುವು ||
ಹೊಮ್ಮಿಸುವಳಿನ್ನೆಷ್ಟನೋ ಪ್ರಕೃತಿ ಮರಮರಳಿ |
ಬ್ರಹ್ಮಶಕ್ತಿಯಪಾರ - ಮರುಳ ಮುನಿಯ ||
(ಭೂಗೋಲಗಳಿನ್+ಆಚೆ)(ಭೂಗ್ರಹಗಳ್+ಇಹುವು)(ಹೊಮ್ಮಿಸುವಳ್+ಇನ್ನೆಷ್ಟನೋ)(ಬ್ರಹ್ಮಶಕ್ತಿಯು+ಅಪಾರ)
058
ಜಗವಿಹುದನಾದಿಯದು ಮೊದಲಿಲ್ಲ ಕೊನೆಯಿಲ್ಲ |
ಯುಗದಿಂದ ಯುಗಕೆ ಹರಿವುದು ಜೀವ ನದಿವೊಲ್ ||
ಅಘಪುಣ್ಯಗಳ ಬೇರ್ಗಳೆಂದಿನಿಂ ಬಂದಿಹವೊ |
ಬಗೆ ಮುಂದೆ ಗತಿಯೆಂತೊ - ಮರುಳ ಮುನಿಯ ||
(ಜಗ+ಇಹುದು+ಅನಾದಿ+ಅದು)(ಬೇರ್ಗಳ್+ಎಂದಿನಿಂ)
059
ಸಾವಿರ ಕುಲಗಳಿಂ ತಾಯ್ತಂದೆ ತಾಯ್‍ತಂದೆ |
ಮಾವ ಮಾವಂದಿರಿಂದಗಣಿತಾದಿಗಳಿಂ ||
ಜೀವವೊಂದುದಿಸಿಹುದು ಹೀರಿ ಸಾರಗಳನಿತ-|
ನಾವನೆಣಿಸುವನದನು - ಮರುಳ ಮುನಿಯ ||
(ಮಾವಂದಿರಿಂದ+ಅಗಣಿತಾದಿಗಳಿಂ) (ಜೀವವೊಂದು+ಉದಿಸಿಹುದು) (ಸಾರಗಳನ್+ಅನಿತನ್+ಅವನ್+ಎಣಿಸುವನ್+ಅದನು)
060
ಏಕಮೋ ಅನೇಕಮೋ ಸದ್ವಸ್ತುವೆಣಿಸಲಿಕೆ |
ಲೋಕದೊಳನೇಕವದು ಮೂಲದೊಳಗೇಕ ||
ಸಾಕಲ್ಯದಿಂ ಭಜಿಸು ನೀನುಭಯಗಳನೆಂದುಂ |
ಏಕದಿನನೇಕ ನೀಂ - ಮರುಳ ಮುನಿಯ ||
(ಸತ್+ವಸ್ತು+ಎಣಿಸಲಿಕೆ) (ಲೋಕದೊಳ್+ಅನೇಕವದು) (ಮೂಲದೊಳಗೆ+ಏಕ) (ನೀನ್+ಉಭಯಗಳನ್+ಎಂದುಂ) (ಏಕದಿಂ+ಅನೇಕ)
061
ಇರುವುದೊಂದೋ ಎರಡೊ ಎರಡಂತೆ ಎಸೆವೊಂದೊ |
ಮರಳು ಗಂಧಗಳೆರಡೊ, ಗಂಧವಿರದರಲು ಕಸ ||
ಮೆರಗು ಮಣಿ ಬೇರೆಯೇಂ ಮೆರುಗಿರದ ಮಣಿಯೆ ಶಿಲೆ |
ಎರಡುಮಿರೆ ಪುರುಳೊಂದು - ಮರುಳ ಮುನಿಯ ||
(ಇರುವುದು+ಒಂದೋ)(ಎಸೆವ+ಒಂದೊ)(ಗಂಧಗಳು+ಎರಡೊ)(ಗಂಧ+ಇರದ+ಅರಲು)
(ಮೆರಗು+ಇರದ)(ಎರಡುಂ+ಇರೆ)(ಪೊರುಳ್+ಒಂದು)
062
ಕಿಡಿಯನುರಿಯಿಂದ ಬೇರೆಂದು ತೋರಿಸುತಿರ್ಪ |
ಬೆಡಗು ಮಾಯೆಯದು ಗಾಳಿಯು ಬೀಸುತಿರಲು ||
ನಡುಗಿಪ್ಪುದೆಲ್ಲವನು ಒಂದೆಡೆಯೊಳೆರಡೆಂದು |
ಹುಡುಗಾಟವಾಗುವುದು - ಮರುಳ ಮುನಿಯ ||
(ಕಿಡಿಯಂ+ಉರಿಯಿಂದ) (ಬೇರೆ+ಎಂದು) (ತೋರಿಸುತ+ಇರ್ಪ) (ನಡುಗಿಪ್ಪುದು+ಎಲ್ಲವನು) (ಒಂದು+ಎಡೆಯೊಳ್+ಎರಡು+ಎಂದು) (ಹುಡುಗಾಟ+ಆಗುವುದು)
063
ಗಂಗೆ (ತಾನೊಂದು) ನದಿ ಯಮುನೆ ಬೇರೊಂದು (ನದಿ) |
ಸಂಗಮದ(ವರೆಗೆ) ಬೇರ‍್ತನ ಪ್ರಯಾಗವರಂ ||
ವಂಗದಾ ಅಬ್ಧಿಯಲಿ ಗಂಗೆಯಾರ್ ತುಂಗೆಯಾರ್ ? |
ವಿಂಗಡಿಸಲಹುದೇನೊ ? - ಮರುಳ ಮುನಿಯ ||
(ವಿಂಗಡಿಸಲ್+ಅಹುದೇನೊ)
064
ಏಕದೊಳನೇಕವನನೇಕದೊಳಗೇಕವವ- |
ಲೋಕಿಪಂ ಪರಮ ತತ್ತ್ವಂ ಕಂಡನಾತಂ ||
ಶೋಕಮವನಂ ಸೋಕದವನಿಗಿಲ್ಲಂ ಮೋಹ |
ಸಾಕಲ್ಯ ದೃಷ್ಟಿಯದು - ಮರುಳ ಮುನಿಯ ||
(ಏಕದೊಳ್+ಅನೇಕವನ್+ಅನೇಕದೊಳಗೆ+ಏಕ+ಆವಲೋಕಿಪಂ)(ಶೋಕಂ+ಅವನಂ)
(ಸೋಕದು+ಅವನಿಗೆ+ಇಲ್ಲಂ)
065
ತನುವಿಕಾರಗಳ ನಡುವಣ ಜೀವದೇಕತೆಯ |
ಹೊನಲಿನೇಕತೆಯನಲೆಸಾಲುಗಳ ನಡುವೆ ||
ಇನಚಂದ್ರ ಪರಿವರ್ತನೆಗಳೊಳವರೇಕತೆಯ |
ಮನಗಾಣಿಪುದು ಚಿತ್ತು - ಮರುಳ ಮುನಿಯ ||
(ಜೀವದ+ಏಕತೆಯ)(ಹೊನಲಿನ್+ಏಕತೆಯನ್+ಅಲೆಸಾಲುಗಳ)(ಪರಿವರ್ತನೆಗಳೊಳ್+ಅವರ+ಏಕತೆಯ)
066
ನರಗಣ್ಯ ಭೇದಗಳ ಕಾಲ ದಿಗ್ದೇಶಗಳ |
ಜರೆರುಜೆಗಳೆಲ್ಲ ವಿಕೃತಿಗಳ ಪಾರಿಸುತೆ ||
ದೊರಕಿಪುದು ಜಗದ ನಾನಾತ್ವದೊಳಗೈಕ್ಯವಂ |
ಸ್ಮರಣೆ ಚಿನ್ಮಹಿಮೆಯದು - ಮರುಳ ಮುನಿಯ ||
(ದಿಕ್+ದೇಶಗಳ)(ನಾನಾತ್ವದೊಳಗೆ+ಐಕ್ಯವಂ)(ಚಿತ್+ಮಹಿಮೆ+ಅದು)
067
ಜಗವಖಿಲವಿದನಾದಿ ಜೀವ ಜೀವವನಾದಿ |
ಯುಗ-ಯುಗಕೆ ಭೇದವಂ ನಾಮರೂಪಗಳು ||
ಬಗೆಬಗೆಯ ಗುಣ ನೀತಿ ನಯ ಸಂಪ್ರದಾಯಗಳ್ |
ಮಿಗುವ ವಸ್ತುವದೊಂದೆ -ಮರುಳ ಮುನಿಯ ||
(ಜಗವು+ಅಖಿಲ+ಇದು+ಅನಾದಿ)(ಜೀವವು+ಅನಾದಿ)(ವಸ್ತುವೌ+ಅದು+ಒಂದೆ)
068
ನಾನಾ ಸುಮ ಸ್ತೋಮದೊಳಡಂಗಿ ಮಲ್ಲಿಗೆಯು |
ಕಾಣಬಾರದೆ ಕಣ್ಗೆ ಸೂಕ್ಷ್ಮ ನೋಡುವನಾ-||
ಘ್ರಾಣನಕ್ಕಪ್ಪಂತೆ ಲೀನನುಂ ವಿಶದನುಂ |
ನೀನಿರಿಳೆಬಾಳಿನೊಳು - ಮರುಳ ಮುನಿಯ ||
(ಸ್ತೋಮದೊಳು+ಅಡಂಗಿ)(ನೋಡುವನ+ಆಘ್ರಾಣನಕ್ಕೆ+ಅಪ್ಪಂತೆ)(ನೀನ್+ಇರು+ಇಳೆ+ಬಾಳಿನೊಳು)
069
ವಸ್ತುವಿರುವದದೊಂದು ಕಣ್ಗೆರಡೆನಿಪ್ಪುದದು |
ವ್ಯಕ್ತ ಪ್ರಪಂಚವೊಂದವ್ಯಕ್ತಮೊಂದು ||
ನಿತ್ಯಮಾಯೆರಡು ವೊಂದೆಂಬಂತೆ ಬಾಳ್ವವನು |
ತತ್ತ್ವ ಪರಿಪೂರ್ಣನೆಲೊ- ಮರುಳ ಮುನಿಯ ||
(ವಸ್ತು+ಇರುವದು+ಅದು+ಒಂದು)(ಕಣ್ಗೆ+ಎರಡು+ಎನಿಪ್ಪುದು+ಅದು)(ಪ್ರಪಂಚ+ಒಂದು+ಅವ್ಯಕ್ತಂ+ಒಂದು) (ನಿತ್ಯಂ+ಆ+ಎರಡು)(ಒಂದು+ಎಂಬಂತೆ)(ಪರಿಪೂರ್ಣನ್+ಎಲೊ)
070
ಏಕ ತಾಂ ದ್ವಿಕವಾಗಿ ದ್ವಿಕವೆ ದಶ ಶತವಾಗಿ |
ಸೋಕಲೊಂದಿನ್ನೊಂದ ನವರಚನೆಯಾಗಿ ||
ಸ್ತೋಕಾಣುವೊಂದರಂಶ ಪರಂಪರೆಯ ಘರ್ಷ |
ವೈಕೃತಂಗಳೆ ಸೃಷ್ಟಿ - ಮರುಳ ಮುನಿಯ ||
(ದ್ವಿಕ+ಆಗಿ) (ಶತ+ಆಗಿ) (ಸೋಕಲ್+ಒಂದು+ಇನ್ನೊಂದ) (ನವರಚನೆ+ಆಗಿ) (ಸ್ತೋಕ+ಅಣು+ಒಂದರ+ಅಂಶ)
071
ತರುಣಿಯಾ ಕೊರಳ ಮಣಿಯೆರಡು ಕಾಣ್ಬುದು ಕಣ್ಗೆ |
ಸೆರಗು ಮುಚ್ಚಿರುವ ಸರ ದೊರೆವುದೂಹನೆಗೆ ||
ಪರವಸ್ತು ಮಹಿಮೆಯಂತರೆ ತೋರುವುದು ಕಣ್ಗೆ |
ಪರಿಪೂರ್ಣವದು ಮನಕೆ - ಮರುಳ ಮುನಿಯ ||
(ಮಣಿ+ಎರಡು)(ದೊರೆವುದು+ಊಹನೆಗೆ)(ಮಹಿಮೆ+ಅಂತು+ಅರೆ)(ಪರಿಪೂರ್ಣ+ಅದು)
072
ಕರಣ ಕಾರಕ ಮಿಶ್ರವೆಲ್ಲ ವಿಶ್ವಪದಾರ್ಥ |
ಕ್ಷರದೇಹವೊಂದು ಅಕ್ಷರಸತ್ತ್ವವೊಂದು ||
ಪರಿಮೇಯ ಯಂತ್ರಾಂಶ ಚೇತನಾಂಶವಮೇಯ |
ಹರವೆರಡಕೆರಡು ತೆರ - ಮರುಳ ಮುನಿಯ ||
(ಯಂತ್ರ+ಅಂಶ)(ಚೇತನ+ಅಂಶವು+ಅಮೇಯ)(ಹರವು+ಎರಡಕೆ+ಎರಡು)
073
ಹಿಂದಿನ ವಿವೇಕಾಚಾರವಿಂದಿಗಪ್ರಕೃತವೆನ- |
ಲಿಂದಿನ ವಿವೇಕಾಚಾರ ಮುಂದಿಗೆಂತಹುವು ? ||
ಎಂದೆಂದಿಗುಂ (ಸಂದ) ತತ್ತ್ವವೊಂದಲ್ತೆ ಅದ-|
ರಿಂದೆಲ್ಲವನು ನೋಡು - ಮರುಳ ಮುನಿಯ ||
(ವಿವೇಕ+ಆಚಾರ+ಇಂದಿಗೆ+ಅಪ್ರಕೃತ+ಎನಲ್+ಇಂದಿನ)(ಮುಂದಿಗೆ+ಎಂತು+ಅಹುವು)
(ತತ್ತ್ವ+ಒಂದಲ್ತೆ)(ಅದರಿಂದ+ಎಲ್ಲವನು)
074
ನಿತ್ಯ ಮಂಗಳವಿರಲಿ ನಿತ್ಯ ಸಂರಸವಿರಲಿ |
ನಿತ್ಯವೆದೆಯಿರಲಿ ತಾಳಲಿಕೆ - ತಳ್ಳಲಿಕೆ ||
ಸತ್ಯ ನಿನಗಂತರಾತ್ಮಜ್ಯೋತಿ ಬೆಳಗಿರಲಿ |
ಸತ್ಯ ಜಯ ಧರ್ಮ ಜಯ - ಮರುಳ ಮುನಿಯ ||
(ಮಂಗಳ+ಇರಲಿ)(ಸಂತಸ+ಇರಲಿ)(ಸತ್ಯ+ಎದೆ+ಇರಲಿ)(ನಿನಗೆ+ಅಂತರಾತ್ಮ)
075
ಜಯದ ಫಲ ನಿಜದಿ ನಿನ್ನೊಳಗೆ ಹೊರಗೇನಲ್ಲ |
ನಿಯಮದಿಂ ಪಾಲಿಸಿದ ಸತ್ಯ ಧರ್ಮಗಳಿಂ ||
ಲಯವಾಗೆ ಮಮತೆಯಾತ್ಮಂ ಬಲಿಯೆ ಸರ್ವತ-|
ನ್ಮಯತೆಯನುಭವವೆ - ಮರುಳ ಮುನಿಯ ||
(ಮಮತೆ+ಆತ್ಮಂ)(ಸರ್ವ+ತನ್ಮಯತೆಯ+ಅನುಭವವೆ)
076
ಬರಗಾಲದವಸರದಿ ದೊರೆತನ್ನವುಂಡೊಡೆಯು-|
ಮರಸುತಿಹೆಯಲ್ತೆ ನೀ ಮೇಲುಣಿಸ ನೆನೆದು ||
ಅರಿವಿಗೆಟುಗಿದ ಮತವನೇಣಿಯಾಗಿಸುತೇರಿ |
ಪರಮ ಸತ್ಯವನಡರೊ - ಮರುಳ ಮುನಿಯ ||
(ಬರಗಾಲದ+ಅವಸರದಿ) (ದೊರೆತ+ಅನ್ನವ+ಉಂಡೊಡೆಯುಂ+ಅರಸುತಿಹೆ+ಅಲ್ತೆ) (ಅರಿವಿಗೆ+ಎಟುಗಿದ) (ಮತವನ್+ಏಣಿಯಾಗಿಸುತ+ಏರಿ) (ಸತ್ಯವನ್+ಅಡರೊ)
077
ನೃತ್ಯ ಲೀಲೆಯ ತೋರ‍್ಪ ಸತ್ತ್ವವದು ಸೌಂದರ್ಯ |
ನಿತ್ಯ ನಿಶ್ಚಲಮಿರ‍್ಪ ಸತ್ತ್ವವದು ಸತ್ಯ ||
ಸತ್ಯ ಸೌಂದರ್ಯಗಳ್ ಬ್ರಹ್ಮಮಾಯೆಗಳೊಡಲು |
ಪ್ರತ್ಯೇಕಮವರಿರರೊ - ಮರುಳ ಮುನಿಯ ||
(ಸತ್ತ್ವ+ಅದು)(ನಿಶ್ಚಲಂ+ಇರ‍್ಪ)(ಬ್ರಹ್ಮಮಾಯೆಗಳ್+ಒಡಲು)(ಪ್ರತ್ಯೇಕಂ+ಅವರ್+ಇರರೊ)
078
ಸತ್ ಎನ್ನಲ್ ಇರುವಿಕೆಯದಸ್ತಿತ್ವ ಬರಿ ಇರ‍್ಕೆ |
ಎತ್ತೆತ್ತಲ್ ಎಂದೆಂದುಂ ಇರುವುದದು ಸತ್ಯ ||
ಗೊತ್ತಿಲ್ಲ ಗುರಿಯಿಲ್ಲ ಗುರುತು ಗೆಯ್ಮೆಗಳಿಲ್ಲ |
ಸತ್ ಒಳ್ಮೆಯೊಳ್ಳಿತದು - ಮರುಳ ಮುನಿಯ ||
(ಇರುವಿಕೆಯದ+ಅಸ್ತಿತ್ವ)(ಇರುವುದು+ಅದು)(ಒಳ್ಮೆಯ+ಒಳ್ಳಿತು+ಅದು)
079
ಬಾನೊಳೆಲರಾಟಕ್ಕೆ ಸಿಕ್ಕಿರ್ಪ ಧೂಳುಕಣ |
ಭಾನುವಿಂಗೆಷ್ಟು ಸನಿಹವದೆಷ್ಟು ದೂರ ||
ಅನುಭಾವದ ಮಾತು ಊಹೆ ತರ್ಕಗಳಲ್ಲ |
ಸ್ವಾನುಭೂತಿಯೆ ಸತ್ಯ - ಮರುಳ ಮುನಿಯ ||
(ಬಾನೊಳ್+ಎಲರ್+ಆಟಕ್ಕೆ)(ಭಾನುವಿಂಗೆ+ಎಷ್ಟು)(ಸನಿಹ+ಅದು+ಎಷ್ಟು)
080
ಅನುಭವವದೇನು ? ನಿನ್ನುದ್ದಿಷ್ಟವಸ್ತುವನು |
ಮನವಪ್ಪಿಕೊಂಡಿಹುದು ಹೊರಗೊಳಗೆ ಸರ್ವಂ ||
ತನುವೊಳಿಹ ರಕ್ತಮಾಂಸಗಳ ತೊಗಲಿನವೋಲು |
ಮನ ಪಿಡಿಯಲನುಭವವೊ - ಮರುಳ ಮುನಿಯ ||
(ಅನುಭವವು+ಅದು+ಏನು) (ನಿನ್ನ+ಉದ್ದಿಷ್ಟ+ವಸ್ತುವನು) (ಮನವು+ಅಪ್ಪಿಕೊಂಡು+ಇಹುದು) (ಹೊರಗೆ+ಒಳಗೆ) (ತನುವೊಳು+ಇಹ) (ಪಿಡಿಯಲ್+ಅನುಭವವೊ)
081
ಒಮ್ಮೊಮ್ಮೆ ಸತಿಪತಿಯರಿರ‍್ವರಾಚರಿತದಲಿ |
ಒಮ್ಮೊಮ್ಮೆಯವರೇಕಮಿರ‍್ತನವನುಳಿದು ||
ಬ್ರಹ್ಮ ಜೀವರ‍್ಕಳಂತಿರರೆ ವೈಕಲ್ಯದಲಿ |
ಮರ್ಮವನುಭವವೇದ್ಯ - ಮರುಳ ಮುನಿಯ ||
(ಸತಿಪತಿಯರ್+ಇರ‍್ವರ್+ಆಚರಿತದಲಿ) (ಒಮ್ಮೊಮ್ಮೆ+ಅವರ್+ಏಕಂ+ಇರ‍್ತನವನ್+ಉಳಿದು) (ಜೀವರ‍್ಕಳ್+ಅಂತು+ಇರರೆ)
082
ಹೃದಯವೊಂದರಿನಲ್ತು ಮೇಧೆಯೊಂದರಿನಲ್ತು |
ವಿದಿತವಪ್ಪುದು ನಿನಗೆ ತಾರಕದ ತತ್ತ್ವಂ ||
ಹದದಿನಾ ಸಾಧನೆಗಳೆರಡುಮೊಂದಾಗೆ ಬೆಳ-|
ಕುದಿಸುವುದು ನಿನ್ನೊಳಗೆ - ಮರುಳ ಮುನಿಯ ||
(ಹೃದಯ+ಒಂದರಿನ್+ಅಲ್ತು) (ಮೇಧೆ+ಒಂದರಿನ್+ಅಲ್ತು) (ವಿದಿತ+ಅಪ್ಪುದು) (ಹದದಿನ್+ಆ) (ಸಾಧನೆಗಳು+ಎರಡುಂ+ಒಂದಾಗೆ) (ಬೆಳಕು+ಉದಿಸುವುದು) (ನಿನ್ನ+ಒಳಗೆ)
083
ಇನ್ನೊಂದನೆಳಸಗೊಡದನ್ಯವನು ಮರೆಯಿಪುದು |
ತನ್ನನೇ ತಾಂ ನೆನೆಯದಂತೆ ಕರಗಿಪುದು ||
ಪೂರ್ಣದೊಳ್ ಪ್ರೇಮಿಯಂ ಪ್ರಿಯದೊಳೊಂದಾಗಿಪುದು |
ಚೆನ್ನೆನುವುದದ್ವೈತ - ಮರುಳ ಮುನಿಯ ||
(ಇನ್ನೊಂದನ್+ಎಳಸಗೊಡದೆ+ಅನ್ಯವನು) (ಪ್ರಿಯದೊಳ್+ಒಂದಾಗಿಪುದು) (ಚೆನ್ನ್+ಎನುವುದು+ಅದ್ವೈತ)
084
ಸೋಹಮನುಭವಿಯಾಗು ದುರ್ಲಭವದೆನ್ನೆ ದಾ-|
ಸೋಹಮನುಭವಿಯಾಗು ವಿಭು ವಿಶ್ವಗಳೊಳು ||
ಮೋಹ ಪರಿಯುವುದಂತೊ ಇಂತೊ ಎಂತಾದೊಡೇಂ |
ರಾಹು ಬಿಡೆ ರವಿ ಪೂರ್ಣ - ಮರುಳ ಮುನಿಯ ||
(ಸೋಹ+ಅನುಭವಿ+ಆಗು)(ದುರ್ಲಭವು+ಅದು+ಎನ್ನೆ)(ದಾಸೋಹಂ+ಅನುಭವಿ+ಆಗು)
(ವಿಶ್ವಗಳ+ಒಳು)(ಪರಿಯುವುದು+ಅಂತೊ)
085
ಮರಗಟ್ಟಿ ಕಾಂಡ ಬುಡದಲಿ ಮೇಲೆ ಕೊಂಬೆಯಲಿ |
ಮರಲ ತಳೆವುದು ಚಿಗುರಿ ಕಾಷ್ಠತೆಯ ದಾಟಿ ||
ನರನಂತು ದೇಹಿತೆಯ ಮೃಚ್ಛಿಲಾಂಶವ ಮೀರೆ |
ಪರಮಾರ್ಥಸುಮದೆ ಕೃತಿ - ಮರುಳ ಮುನಿಯ ||
(ನರನ್+ಅಂತು)(ಮೃತ್+ಶಿಲಾ+ಅಂಶ)
086
ಸಾಧಕಪದಂ ದ್ವೈತ ಸಿದ್ಧಪದಮದ್ವೈತ |
ರೋಧಗಳ ನಡುವೆ ನದಿ ಮುಂಬರಿಯಲುದಧಿ ||
ದ್ವೈಧವಿರೆ ವಿರಹ ಪ್ರಿಯೈಕ್ಯತಾನದ್ವೈಧ |
ಭೇದ ಬರಿ ಭಾವ ದಶೆ - ಮರುಳ ಮುನಿಯ ||
(ಸಿದ್ಧಪದಂ+ಅದ್ವೈತ)(ಮುಂಬರಿಯಲ್+ಉದಧಿ)(ದ್ವೈಧ+ಇರೆ)
(ಪ್ರಿಯ+ಐಕ್ಯ+ತಾನ್+ಅದ್ವೈಧ)
087
ಶ್ರೊತಾರ್ಥಮೇ ಹೃದನುಭೂತಾರ್ಥಮಾದಂದು |
ಮಾತಿಗೆಟುಕದ ಸತ್ಯದರ್ಶನಂ ನಿನಗೆ ||
ಜ್ಯೋತಿ ನಿನ್ನೊಳಗೆ ಹೃದಯಾಂತರಾಳದೊಳಿಹುದು |
ಆತುಮದ ತೇಜವದು - ಮರುಳ ಮುನಿಯ ||
(ಹೃತ್+ಅನುಭೂತ+ಅರ್ಥಂ+ಆದ+ಅಂದು) (ಮಾತಿಗೆ+ಎಟುಕದ) (ಹೃದಯಾಂತರಾಳದ+ಒಳ್+ಇಹುದು)
088
ಇರುವುದೇ ಸತ್ಯವದು ವಿವಿಧವಪ್ಪುದೆ ಲೋಕ-|
ವದನರಿವುದೇ ಆತ್ಮನೆಲ್ಲವನು ಧರಿಪ ||
ಪರವಸ್ತುವೇ ಬ್ರಹ್ಮವದ ಸ್ಮರಿಸಿ ಬದುಕಲಾ |
ಪರಮಪದವಿರುವಿಕೆಯೆ - ಮರುಳ ಮುನಿಯ ||
(ವಿವಿಧ+ಅಪ್ಪುದೆ)(ಲೋಕ+ಅದನ್+ಅರಿವುದೇ) (ಆತ್ಮನ್+ಎಲ್ಲವನು) (ಬದುಕಲ್+ಆ+ಪರಮಪದ+ಇರುವಿಕೆಯೆ)
089
ಎವೆಯಿಡದೆ ನೋಡು, ಮರ ಮರವು ಕರೆವುದು ನಿನ್ನ |
ಕಿವಿಯನಾನಿಸು, ಕಲ್ಲು ಕಲ್ಲೊಳಂ ಸೊಲ್ಲು ||
ಅವಧರಿಸು ಜೀವ ಜೀವವುಮುಲಿವುದೊಂದುಲಿಯ |
ಭುವನವೇ ಶಿವವಾರ್ತೆ - ಮರುಳ ಮುನಿಯ ||
(ಕಿವಿಯನ್+ಆನಿಸು)(ಜೀವವು+ಉಲಿವುದು+ಒಂದು+ಉಲಿಯ)
090
ಸಿಕ್ಕಿಲ್ಲವವನೆಮ್ಮ ಕೈ ಕಣ್ಣಿಗೆಂಬವರು |
ಸಿಕ್ಕಿರ‍್ಪುದರೊಳವನ ಕಾಣದಿಹರೇಕೆ ? ||
ಲೆಕ್ಕಿಲ್ಲದ ವೊಡಲ ಪೊತ್ತನನು ಕಂಡುದರೊಳ್ |
ಪೊಕ್ಕು ನೋಡದರೇಕೆ? - ಮರುಳ ಮುನಿಯ ||
(ಸಿಕ್ಕಿಲ್ಲ+ಅವನ್+ಎಮ್ಮ)(ಕಣ್ಣಿಗೆ+ಎಂಬವರು)(ಸಿಕ್ಕಿ+ಇರ‍್ಪುದರೊಳ್+ಅವನ) (ಕಾಣದಿಹರ್+ಏಕೆ)(ಲೆಕ್ಕ+ಇಲ್ಲದ)(ಕಂಡು+ಅದರೊಳ್)(ನೋಡದರ್+ಅದೇಕೆ)
091
ಶಿಲೆಯೊ ಮೃತ್ತಿಕೆಯೊ ಸೌಧವೊ ಕಾಲುಕಸ ಧೂಳೊ |
ಬಳುಕು ಲತೆಯೋ ಮರನೊ ಒಣ ಸೌದೆ ತುಂಡೋ ||
ಲಲಿತ ಸುಂದರಿಯೊ ಸಾಧುವೋ ವೀರಸಾಹಸಿಯೊ |
ಚಲವೊ ಜಡವೋ (ಶಿವನೆ)- ಮರುಳ ಮುನಿಯ ||
092
ನಾನೆನುವುದೊಂದೊ ಅಥವಾ ನೀನೆನುವುದೊಂದೊ |
ನಾನು ನೀನುಗಳಿರದ ಅದು ಎನುವುದೊಂದೋ ||
ಏನೊ ಎಂತಾನುಮೊಂದೇ ಎಲ್ಲ; ಆ ಒಂದನ್ |
ಆನು ನೀನೇಗಳುಂ - ಮರುಳ ಮುನಿಯ ||
(ನಾನ್+ಎನುವುದು+ಒಂದೊ)(ನೀನ್+ಎನುವುದು+ಒಂದೊ)(ಎಂತಾನುಂ+ಒಂದೇ) (ನೀನ್+ಏಗಳುಂ)
093
ಪ್ರಾಪಂಚಿಕದ ಚಕ್ರ ಪರಿವರ್ತನ ಕ್ರಮಗ-|
ಳಾಪಾತ ನಿಯತಂಗಳಾಳವರಿತವರಾರ್ ||
ಮಾಪನಾತೀತನಿತ್ಯಸ್ವೈರಸೂತ್ರದಿಂ |
ವ್ಯಾಪಿತಂ ಜಗವೆಲ್ಲ - ಮರುಳ ಮುನಿಯ ||
(ಕ್ರಮಗಳ್+ಅಪಾತ)(ನಿಯತಂಗಳ+ಆಳವ+ಅರಿತವರಾರ್)(ಮಾಪನ+ಅತೀತನಿತ್ಯ+ಸ್ವೈರಸೂತ್ರದಿಂ)
094
ವನದ ಮಧ್ಯದಿ ನಿಂತು ನೋಡು ದೆಸೆದೆಸೆಯೊಳಂ |
ದಿನದಿನದಿ ಗಿಡಗಿಡದಿ ಹೊಸಹೊಸತು ಚಿಗುರು ||
ಕ್ಷಣವಿಕ್ಷಣಮುಮಂತು ಪರಸತ್ತ್ವಮೆತ್ತಲುಂ |
ಜನುಮ ತಾಳುತ್ತಿಹುದು - ಮರುಳ ಮುನಿಯ ||
(ಕ್ಷಣ+ವಿಕ್ಷಣಮುಂ+ಅಂತು)(ಪರಸತ್ತ್ವಂ+ಎತ್ತಲುಂ)
095
ಇರುವುದೊಂದೆರೆಡೆನಿಸಿ ತೋರುವುದು ಲೋಗರ‍್ಗೆ |
ಇರದೆ ತೋರುವುದೆಂತು ತೋರದಿರವೆಂತು ? ||
ಪರತತ್ತ್ವ ಲೋಕಂಗಳೆರಡುಮೊಂದೇ ವಸ್ತು |
ಮರದ ಬೇರೆಲೆಯವೊಲು - ಮರುಳ ಮುನಿಯ ||
(ಇರುವುದು+ಒಂದು+ಎರೆಡು+ಎನಿಸಿ)(ತೋರುವುದು+ಎಂತು)(ತೋರದೆ+ಇರವು+ಎಂತು)(ಲೋಕಂಗಳ್+ಎರಡುಂ+ಒಂದೇ)(ಬೇರ್+ಎಲೆಯ+ವೊಲು)
096
ಮೂಲಸತ್ತ್ವ ಬ್ರಹ್ಮವೇಕ ಬಹುವಾ ವೇಷ |
ಕಾಲದೇಶಂಗಳಿಂ ಬ್ರಹ್ಮವಾತ್ಮವಹ ವೇಷ ||
ತಾಳಿ ದೇಹವನಾತ್ಮ ಜೀವನೆನಿಪುದು ವೇಷ |
ಲೀಲೆ ವೇಷವೋ ವಿಶ್ವ - ಮರುಳ ಮುನಿಯ ||
(ಬ್ರಹ್ಮ+ಏಕ)(ಬಹು+ಆ)(ಬ್ರಹ್ಮ+ಆತ್ಮವಹ)(ದೇಹವನ್+ಆತ್ಮ)(ಜೀವನ್+ಎನಿಪುದು)
097
ಖೇಲನ ವ್ಯಾಪಾರವೀ ಜಗದ್ವಿಸ್ತಾರ |
ಮೂಲಕಾರಣನಿದಕೆ ಪೂರ್ಣಸ್ವತಂತ್ರಂ ||
ಲೀಲೆಗೆಂದೀ ಚಿತ್ರಮೋಹವೈರಾದಿಗಳ |
ಚಾಲವಂ ರಚಿಸಿಹಂ - ಮರುಳ ಮುನಿಯ ||
(ಜಗತ್+ವಿಸ್ತಾರ)(ಮೂಲಕಾರಣನ್+ಇದಕೆ)(ಲೀಲೆಗೆ+ಎಂದು+ಈ)
098
ಜಗವೆಲ್ಲ ಶಿವಲೀಲೆ ಭಗವದರ್ಥದ ಲೀಲೆ |
ಖಗಲೀಲೆ ಮೃಗಲೀಲೆ ಕ್ರಿಮಿಕೀಟಲೀಲೆ ||
ನಗ ನದೀ ನದ ಲೀಲೆ ಮೇಲೆ ಮನುಜರಲೀಲೆ |
ಅಗಣಿತದ ಲೀಲೆಯದು - ಮರುಳ ಮುನಿಯ ||
(ಭಗವತ್+ಅರ್ಥದ)
099
ಅವನಿವನ ನೀನವನ ನಾನಿವನ ನೀನೆನ್ನ |
ಸವರಿ ಮೈಮರೆಸುತಿರೆ ತಿವಿದುರುಬಿಸುತಿರೆ ||
ಅವಗುಂಠಿತನದೊರ‍್ವನೀಕ್ಷಿಸುತೆ ನಗುತಿಹನು |
ಶಿವಲೀಲೆ ನಮ್ಮ ಬಾಳ್ - ಮರುಳ ಮುನಿಯ ||
(ಅವನ್+ಇವನ)(ನೀನ್+ಅವನ)(ನಾನ್+ಇವನ)(ನೀನ್+ಎನ್ನ)(ಮೈಮರೆಸುತ+ಇರೆ) (ತಿವಿದು+ಉರುಬಿಸುತ+ಇರೆ)(ಅವಗುಂಠಿತನ್+ಅದು+ಒರ‍್ವನ್+ಈಕ್ಷಿಸುತೆ)
100
ಲೀಲೆಯದು ಬರಿಲೀಲೆ ಬರಿಬನದ ಬರಿಯಾಟ |
ಸೋಲಿಲ್ಲ ಗೆಲವಿಲ್ಲ ಚಿಂತೆಯೇನಿಲ್ಲ ||
ಮೂಲಕರ್ತನ ನೈಜ ವೈಭವದ ವಿಸ್ತಾರ |
ಜಾಲಶಕ್ತಿವಿಲಾಸ - ಮರುಳ ಮುನಿಯ ||
(ಲೀಲೆ+ಅದು)(ಬರಿ+ಆಟ)(ಸೋಲ್+ಇಲ್ಲ)(ಗೆಲವು+ಇಲ್ಲ)(ಚಿಂತೆ+ಏನ್+ಇಲ್ಲ)
101
ಜೀವಕಂ ಜೀವಕಂ ಸ್ನೇಹದಿನೊ ವೈರದಿನೊ |
ಭಾವರಜ್ಜುವ ಕಟ್ಟಿ ಜಾಲಗಳ ನೆಯ್ದು ||
ನೋವಿಂದೆ ಸಂತಸದಿ ಬಾಯ್ಬಿಡಿಸಿ ನೋಡುವಾ |
ದೈವದ ಮಹಾಲೀಲೆ - ಮರುಳ ಮುನಿಯ ||
102
ತಳಮಳಿಸಿ ತ್ರಿಗುಣಮಿರೆ ಲೋಕಜೀವನ ಲೀಲೆ |
ಅಲುಗುತ್ತಲಲೆಯಿರಲ್ ಕಡಲಿನ ಮಹತ್ತ್ವ ||
ಜಲಧಿ (ವೀತತ) ರಂಗಮಿರೆ ನೋಳ್ಪರಾರ್ (ಅದನು) |
ಚಲನೆಯೇ ಲೀಲೆಯೆಲೊ - ಮರುಳ ಮುನಿಯ ||
(ತ್ರಿಗುಣಂ+ಇರೆ)(ಅಲುಗುತ್ತಲ್+ಅಲೆಯಿರಲ್)
103
ಲೀಲೆಯೋ ಜಗವೆಲ್ಲ ಲೋಕನಾಟಕ ಲೀಲೆ |
ಕಾಲವಶವೆಲ್ಲಮುಂ ಕಾಲಮಾರುತನ ||
ಏಳಿಸುತ ಬೀಳಿಸುತ ಮನುಜಮಾನಸಗಳಲಿ |
ಚಾಲಿಪಂ ತ್ರಿಗುಣಗಳ - ಮರುಳ ಮುನಿಯ ||
(ಕಾಲವಶ+ಎಲ್ಲಮುಂ)
104
ಶಾಶ್ವತಾಕಾಶದಲಿ ನಶ್ವರದ ನಕ್ಷತ್ರ |
ವಿಶ್ವಮೂಲಂ ಸತ್ಯ ಬಾಹ್ಯದೊಳು ಮಿಥ್ಯೆ ||
ಈಶ್ವರನ ನಿಜಸಾಮ್ಯ ಮಾನುಷ್ಯ ವೈಷಮ್ಯ |
ವಿಶ್ವಸಿತ ಲೀಲೆಯಿದು - ಮರುಳ ಮುನಿಯ ||
(ಶಾಶ್ವತ+ಆಕಾಶದಲಿ)
105
ಭುವನ ಜೀವನವೆಲ್ಲ ಶಿವನ ಲೀಲಾರಂಗ |
ಅವನು ಶಿವನಿವನು ಶಿವ ಶಿವ ನೀನು ನಾನು ||
ತವಕಪಡಿಸುವ ನಮ್ಮ ಕೆರಳಿಸುವ ಕುಣಿಯಿಸುವ |
ಭವವೆಲ್ಲ ಶಿವಲೀಲೆ - ಮರುಳ ಮುನಿಯ ||
(ಜೀವನ+ಎಲ್ಲ)(ಶಿವನ್+ಇವನು)(ಭವ+ಎಲ್ಲ)
106
ಸುವಿಲಾಸ ಮೋಹಗಳ ಕುವಿಕಾರ ಭಾವಗಳ |
ಕವಿತೆ ಸಂಗೀತಗಳ ಕೋಪತಾಪಗಳ ||
ಅವಿವೇಕ ಘೋಷಗಳ ಸುವಿಚಾರ ಮೌನಗಳ |
ಹವಣೆಲ್ಲ ಶಿವಲೀಲೆ - ಮರುಳ ಮುನಿಯ ||
107
ನಿತ್ಯದ ಸ್ಪರ್ಧೆಯದು ಪರಮೇಷ್ಠಿಮನುಜರದು |
ವ್ಯತ್ಯಸಿತ ಲೋಕ ಗತಿಯವರವರ ನಡುವೆ ||
ಉತ್ತಮತೆಯನು (ಸೊಟ್ಟ) ಸೃಷ್ಟಿಯೊಳಗರಸಿಸುವ |
ಕೃತ್ರಿಮವೆ ಶಿವಲೀಲೆ - ಮರುಳ ಮುನಿಯ ||
(ಗತಿ+ಅವರವರ)(ಸೃಷ್ಟಿಯೊಳಗೆ+ಅರಸಿಸುವ)
108
ತೊರೆಯೊಂದು ಪರಬೊಮ್ಮ ತೆರೆಸಾಲು ಲೋಕಗಳು |
ಪರಿದೇಳ್ದು ಬಿದ್ದೇಳ್ವುದೋ ತೆರೆಯ ಬಾಳು ||
ಉರುಳಿದಲೆ ಮತ್ತೇಳುವುದು ತೊರೆಯ ಜೀವಾಳ |
ಹೊರಳಾಟವೇ ಲೀಲೆ - ಮರುಳ ಮುನಿಯ ||
(ಪರಿದು+ಏಳ್ದು)(ಬಿದ್ದು+ಏಳ್ವುದೋ)(ಉರುಳಿದ+ಅಲೆ)(ಮತ್ತೆ+ಏಳುವುದು)
109
ಜಗವೆಲ್ಲ ಲೀಲೆ ಶಿವಲೀಲೆ ಶಾಶ್ವತ ಲೀಲೆ |
ನಗುವಳುವು ಸೆಣಸು ಹುಚ್ಚಾಟವದು ಲೀಲೆ ||
ಹಗುರವನು ಹೊರೆಮಾಡಿ ತಿಣುಕಾಡುವುದು ಲೀಲೆ |
ರಗಳೆಯೇ ಲೀಲೆಯೆಲೊ - ಮರುಳ ಮುನಿಯ ||
(ಜಗ+ಎಲ್ಲ)(ನಗು+ಅಳುವು)
110
ಲೀಲೆಯೋ ಬರಿಲೀಲೆ ಸರ್ವತೋ ಲೀಲೆಯಿದು |
ಮೂಲಕರ್ತನ ಲೀಲೆ ಜೀವಿಗಳ ಲೀಲೆ ||
ಗೋಳುಗುದ್ದಾಟಗಳ ಬೆರೆತಪ್ಪ ವಿಧಿಲೀಲೆ |
ಕೋಲಾಹಲದ ಲೀಲೆ - ಮರುಳ ಮುನಿಯ ||
111
ಚೈತನ್ಯ ಲೀಲೆಯೊಳಗೇನುಂಟದೇನಿಲ್ಲ |
ಜ್ಞಾತಮಜ್ಞಾತಂಗಳೂಹ್ಯಮದನೂಹ್ಯಂ ||
ದ್ವೈತಮದ್ವೈತಂ ವಿಶಿಷ್ಟಾದ್ವೈತ ಭೇದಂಗ-|
ಳಾತನೊಳಗೈಕ್ಯವೆಲೊ - ಮರುಳ ಮುನಿಯ ||
(ಲೀಲೆಯೊಳಗೆ+ಏನುಂಟು+ಅದೇನಿಲ್ಲ)(ಜ್ಞಾತಂ+ಅಜ್ಞಾತಂಗಳ್+ಊಹ್ಯಂ+ಅದು+ಅನೂಹ್ಯಂ)(ದ್ವೈತಂ+ಅದ್ವೈತಂ)(ಭೇದಂಗಳ್+ಆತನೊಳಗೆ+ಐಕ್ಯವೆಲೊ)
112
ಲೀಲೆಯಿಂ ಪಾರಾಗು ಲೀಲೆಯಿಂ ಮೇಲಾಗು |
ಲೀಲೆಯೊಳಗೋಲಾಡು ಲೀಲೆಯಂ ನೋಡು ||
ಲೀಲೆಯೊಳಚಾಲಕನು ಪಾಲಕನು ನೀನಾಗಿ |
ಮೂಲೋಕದಾನಂದಿ - ಮರುಳ ಮುನಿಯ ||
(ಪಾರ್+ಆಗು)(ಮೇಲ್+ಆಗು)(ಲೀಲೆಯೊಳಗೆ+ಓಲಾಡು)(ಲೀಲೆಯ+ಒಳಚಾಲಕನು)(ನೀನ್+ಆಗಿ)(ಮೂಲೋಕದ+ಆನಂದಿ)
113
ತೇಲಾಡುತಿಹುದು ಗಾಳಿಯ ಪಟದವೊಲು ಲೋಕ |
ಕಾಲವದಕಾಕಾಶ ನೋಳ್ಪಮತಿಯೆ ಧರೆ ||
ನೂಲು ಕಾಯಕ, ನಿಯತಿ ಗಾಳಿ, ಮಾನಸ ವಿಕೃತಿ |
ಲೀಲೆ, ಶಿವಸಂತೋಷ - ಮರುಳ ಮುನಿಯ ||
(ತೇಲಾಡುತ+ಇಹುದು) (ಕಾಲ+ಅದಕೆ+ಆಕಾಶ)
114
ಅವನ ಕಣ್ಗಿವನ ಬಾಳ್ಕುಣಿದಾಟಗಳು ತಪ್ಪು |
ಇವನ ಕಣ್ಗವನಿರವುನೋಟಗಳು ಬೆಪ್ಪು ||
ಅವನವನಿಗವನವನ ಹುಚ್ಚಾಟದಲಿ ನಚ್ಚು |
ಶಿವನಿಗೆಲ್ಲವು ಮೆಚ್ಚು - ಮರುಳ ಮುನಿಯ ||
(ಕಣ್ಗೆ+ಇವನ)(ಬಾಳ್+ಕುಣಿದಾಟಗಳು)(ಕಣ್ಗೆ+ಅವನ+ಇರವು+ನೋಟಗಳು)(ಅವನವನಿಗೆ+ಅವನವನ)
115
ಅವನ ಕಣ್ಗಿವನ ಬಾಳ್ಕುಣಿದಾಟಗಳು ತಪ್ಪು |
ಇವನ ಕಣ್ಗವನಿರವುನೋಟಗಳು ಬೆಪ್ಪು ||
ಅವನವನಿಗವನವನ ಹುಚ್ಚಾಟದಲಿ ನಚ್ಚು |
ಶಿವನಿಗೆಲ್ಲವು ಮೆಚ್ಚು - ಮರುಳ ಮುನಿಯ ||
(ಕಣ್ಗೆ+ಇವನ)(ಬಾಳ್+ಕುಣಿದಾಟಗಳು)(ಕಣ್ಗೆ+ಅವನ+ಇರವು+ನೋಟಗಳು)(ಅವನವನಿಗೆ+ಅವನವನ)
116
ರಸನೆಯನು ಕೆರಳಿಪನಿತುಂಟು ರುಚಿ ನಿನ್ನಯಾ |
ಹಸಿವ ತೀರಿಪ್ಪುದಾರತೆಯಿಲ್ಲ ಜಗದಿ ||
ವಿಷಮವಿರದೊಡೆ ಧಾತುಗಳ್ ಜಗದಿ ಸೃಷ್ಟಿಯಾ |
ಕಸಬು ಸಾಗುವುದೆಂತೊ - ಮರುಳ ಮುನಿಯ ||
(ಕೆರಳಿಪ+ಅನಿತು+ಉಂಟು)(ತೀರಿಪ್ಪ+ಉದಾರತೆಯಿಲ್ಲ)(ವಿಷಮ+ಇರದೊಡೆ)
117
ಮೆಣಸು ಹುಣಿಸೆಗಳ ಸವಿಗಳು ಬೇರೆಯಿಹುದಿರಲಿ |
ಹುಣಿಸೆಯಿಂ ನಿಂಬೆ ಮಾವುಗಳ ಹುಳಿ ಬೇರೆ ||
ಮನುಜನುಳಿದ ಪ್ರಾಣಿಯಿಂ ಬೇರೆ ತಾಂ ಬೇರೆ |
ಗುಣದೊಳೋರೊರ‍್ವನುಂ - ಮರುಳ ಮುನಿಯ ||
(ಬೇರೆ+ಇಹುದು+ಇರಲಿ)(ಮನುಜನ್+ಉಳಿದ)(ಗುಣದ+ಒಳ್+ಓರೊರ‍್ವನುಂ)
118
ನರಕುಲದಿ, ಕಿಂಪುರುಷರರ್ಧ ಕಿನ್ನರರರ್ಧ |
ಪರಿರಂಭವಶ್ವತನುಗೆಂತು ನರಮುಖದಿ? ||
ತುರಗ ಮುಖಕೆಂತು ಚುಂಬನ ಪುರುಷತನುವಿರಲ್ |
ಕರುಬೆ ಪಾಡಿರ‍್ವರಿಗೆ - ಮರುಳ ಮುನಿಯ ||
(ಕಿಂಪುರುಷರ್+ಅರ್ಧ)(ಕಿನ್ನರರ್+ಅರ್ಧ)(ಪರಿರಂಭವು+ಅಶ್ವತನುಗೆ+ಎಂತು) (ಮುಖಕೆ+ಎಂತು)(ಪುರುಷತನು+ಇರಲ್)(ಪಾಡು+ಇರ‍್ವರಿಗೆ)
119
ತಾರಂಗ ನೃತ್ಯಗತಿ ವಿಶ್ವಜೀವನ ವಿತಿ |
ಆರೋಹವವರೋಹವೊಂದಾಗಲೊಂದು ||
ಸಾರೂಪ್ಯಸಮ ಜವತೆಯೆರಡು ತೆರೆಗಳ್ಗಿರದು |
ಬೇರೆತನದಿನೆ ಸೊಗಸು - ಮರುಳ ಮುನಿಯ ||
(ಆರೋಹವು+ಅವರೋಹವು+ಒಂದಾಗಲೊಂದು)(ತೆರೆಗಳ್ಗೆ+ಇರದು)
120
ಪುನರುಕ್ತಿ ಬಾರದೆಂದುಂ ಪ್ರಕೃತಿ ಕಂಠದಿಂ |
ದಿನದಂತೆ ದಿನವಿರದದೊರ‍್ವನಿನನಿರೆಯುಂ ||
ಇನನೆ ತಾಂ ಕ್ಷಣದಿಂ ಮರುಕ್ಷಣಕೆ ಸವೆಯುವನು |
ಅನಿತರತೆ ಮೇಲ್ತೋರ‍್ಕೆ - ಮರುಳ ಮುನಿಯ ||
(ದಿನ+ಇರದು+ಅದು+ಒರ‍್ವನ್+ಇನನ್+ಇರೆಯುಂ)
121
ಭೇದ್ಯವಲ್ಲದ ನಾಭಿ ನೇಮಿಗಳು ಚಕ್ರಕ್ಕೆ |
ಮಧ್ಯದರಗಳು ಮಾತ್ರ ತಾಂ ಬೇರೆ ಬೇರೆ ||
ಎದ್ದು ಕಾಣುವುವಂತು ಜೀವಿಗಳು ಜಗದಿ ತ-|
ಮ್ಮಾದ್ಯಂತಗಳ ಮರೆತು- ಮರುಳ ಮುನಿಯ ||
(ಭೇದ್ಯ+ಅಲ್ಲದ)(ಮಧ್ಯದ+ಅರಗಳು)(ಕಾಣುವುವು+ಅಂತು)(ತಮ್ಮ+ಆದಿ+ಅಂತಗಳ)
122
ಧಗೆಯಿಂದ ದೆಹಲಿ ಸೊರಗಿರೆ ಬೇಸಿಗೆಯೊಳಂದು |
ಮುಗಿಲು ಶೃಂಗೇರಿಗಭಿಷೇಕವನೆ ಮಾಳ್ಕುಂ ||
ದುಗುಡ ಸೊಗಗಳಿಗೊಂದು ನಂಟುಂಟು ನಯವುಂಟು |
ಮುಗಿಲಹುದೆ ಧಗೆಯಿರದೆ - ಮರುಳ ಮುನಿಯ ||
(ಬೇಸಿಗೆಯೊಳು+ಅಂದು)(ಶೃಂಗೇರಿಗೆ+ಅಭಿಷೇಕವನೆ)(ಸೊಗಗಳಿಗೆ+ಒಂದು)(ಮುಗಿಲು+ಅಹುದೆ)
123
ಏನೇನೊ ನಡೆದಿಹುದು ವಿಜ್ಞಾನ ಸಂಧಾನ |
ಮಾನುಷ್ಯ ಬಾಂಧವ್ಯವೊಂದು ಮುರಿದಿಹುದು ||
ತಾನೊಡರ‍್ಚಿದ ಹೊನ್ನರಸವೆ ಕೊರಳ್ಗೆ |
ನೇಣಾಗಿಹುದು ನೋಡು - ಮರುಳ ಮುನಿಯ ||
(ನಡೆದು+ಇಹುದು)(ಮುರಿದು+ಇಹುದು)(ತಾನ್+ಒಡರ‍್ಚಿದ)(ನೇಣ್+ಆಗಿಹುದು)
124
ಏನೇನೊ ನಡೆದಿಹುವು ಮಾನುಷ್ಯ ಸಿದ್ಧಿಯಲಿ |
ಯಾನಗಳು ಯಂತ್ರಗಳು ರಸ ನಿರ್ಮಿತಿಗಳು ||
ಭಾನುಗೋಲಕ್ಕೇಣಿಕಟ್ಟಲೆಳಸುವ ನರನು |
ತಾನಿಳಿಯುತಿಹನೇಕೊ - ಮರುಳ ಮುನಿಯ ||
(ನಡೆದು+ಇಹುವು)(ಭಾನುಗೋಲಕ್ಕೆ+ಏಣಿಕಟ್ಟಲ್+ಎಳಸುವ)(ತಾನ್+ಇಳಿಯುತ+ಇಹನು+ಏಕೊ)
125
ನರ್ತನಾವೇಶನದ ವಿಶ್ವಮೂರ್ತಿಯ ದೇಹ |
ವರ್ತನೆಯ ಪರಿಕಿಪ್ಪೆನೆನುತೆ ನಿಜ ನಯನ ||
ವರ್ತ್ಮವನು ವಿಜ್ಞಾನಿ ತೆರೆವನಿತ್ತರೊಳು ಪರಾ |
ವರ್ತಿತವೊ ನಟ ಭಂಗಿ - ಮರುಳ ಮುನಿಯ ||
(ನರ್ತನ+ಆವೇಶನದ)(ಪರಿಕಿಪ್ಪೆನ್+ಎನುತೆ)(ತೆರೆವ+ಅನಿತ್ತರೊಳು)
126
ಸರಸತಿಯ ಸತ್ರ ಬಳಿಯಿರೆ ತೊರೆದು ದೂರದಾ |
ಸಿರಿದೇವಿಯಂಗಡಿಯನರಸಿ ತಟವಟಿಸಿ ||
ಹೊರ ಹೊಳಪಿನಾಸೆಯಿಂದೊಳಮಬ್ಬನಪ್ಪುವನು |
ಕುರುಡನೇ ಕಂಡವನೊ - ಮರುಳ ಮುನಿಯ ||
(ಸಿರಿದೇವಿಯ+ಅಂಗಡಿಯನ್+ಅರಸಿ)(ಹೊಳಪಿನ+ಆಸೆಯಿಂದ+ಒಳಮಬ್ಬನ್+ಅಪ್ಪುವನು)
127
ಭೇದದ ಭ್ರಾಂತಿಯಿರೆ ಜೀವಕ್ಕೆ ಜಗತ್ಸಂಗ |
ವೇದನೆಗಳಂತುದಿಸಿ ಮಾಯೆ ತೂಂಕಿಡುವಾ ||
ಖೇದ ಮೋದಾಂದೋಲನಗಳಿನಾತ್ಮೋದ್ಬೋಧ |
ಬೋಧೆಯಿಂ ಭ್ರಾಂತಿಲಯ - ಮರುಳ ಮುನಿಯ ||
(ವೇದನೆಗಳ+ಅಂತು+ಉದಿಸಿ)(ಮೋದ+ಆಂದೋಲನಗಳಿನ್+ಆತ್ಮ+ಉದ್+ಬೋಧ)
128
ಮನಸು ಮತಿಗಳುಮಂತೆ ಬೆಳೆವುವೊಂದು ಕ್ರಮದೆ |
ಮನುಜರನುದಿನದ ಸಂಸರ್ಗ ಸಂಸ್ಕೃತಿಯಿಂ ||
ಜನಿಸುವುವು ನೂತನ ಜ್ಞಾನ ನವಭಾವಗಳು |
ಅನುಪೂರ್ವರೀತಿಯಲಿ - ಮರುಳ ಮುನಿಯ ||
(ಮತಿಗಳುಂ+ಅಂತೆ)(ಬೆಳೆವುವು+ಒಂದು)(ಮನುಜರ+ಅನುದಿನದ)
129
ಸಂಶಯವೆ ಸಾಜವಲ ಕಣ್ಭೋಗದೆಡೆಗಳಲಿ |
ಅಂಶವನೆ ಪೂರ್ಣವೆಂದೆಣಿಸೆವೇನಲ್ಲಿ ||
ಭ್ರಂಶವಿಲ್ಲದ ನಿಶ್ಚಯಕೆ ಶೋಧನೆಯೆ ದಾರಿ |
ಸಂಶೋಧಕವೊ ಶಂಕೆ - ಮರುಳ ಮುನಿಯ ||
(ಕಣ್+ಭೋಗದ+ಎಡೆಗಳಲಿ)(ಪೂರ್ಣ+ಎಂದು+ಎಣಿಸೆವೇಂ+ಅಲ್ಲಿ)(ಭ್ರಂಶ+ಇಲ್ಲದ)
130
ಸಂದೇಹಶಿಖಿಯಿರದೆ ಮತಿ ಪಕ್ವವೆಂತಹುದು ? |
ಆಂದೋಳನವೆ ವಾಸ್ತುಶುದ್ಧಿ ನಿಶ್ಚಿತಕೆ ||
ಅಂಧವಿಶ್ವಾಸಕಾತನುಭವಿಪ್ರಶ್ನೆ ಬಳಿ |
ಸಂದಿಹುದು ಸತ್ಯಕ್ಕೆ - ಮರುಳ ಮುನಿಯ ||
(ಪಕ್ವ+ಎಂತು+ಅಹುದು)(ಅಂಧವಿಶ್ವಾಸಕೆ+ಆತ+ಅನುಭವಿಪ್ರಶ್ನೆ)
131
ಬರಿಯ ಕಣ್ಣಿಂದಣುವ ಪರಿಕಿಪನೆ ವಿಜ್ಞಾನಿ |
ಕರಣವಾತಂಗೆ ಸೂಕ್ಷ್ಮದ ಕಾಚಯಂತ್ರ ||
ವಿರಚಿಸಿಕೊ ನೀನಂತರಂಗಯಂತ್ರವನಂತು |
ಪರತತ್ತ್ವ ದರ್ಶನಕೆ - ಮರುಳ ಮುನಿಯ ||
(ಕಣ್ಣಿಂದ+ಅಣುವ)(ಕರಣವು+ಆತಂಗೆ)(ನೀನ್+ಅಂತರಂಗಯಂತ್ರವಂ+ಅಂತು)
132
ಅನಿಲಗತಿ ಜಲಧಾರೆ ದಿನಪರಶ್ಮಿಗಳಿಂದೆ |
ಜನಕಾರ್ಯ ಯಂತ್ರಗಳ ನಿರವಿಸುವ ಚತುರರ್ ||
ಮನುಜಹೃದಯೋದ್ವೇಗ ಶಕ್ತಿಯನು ಯಂತ್ರಕ್ಕೆ |
ವಿನಿಯೋಜಿಸರೇಕೆ - ಮರುಳ ಮುನಿಯ ||
(ಹೃದಯ+ಉದ್ವೇಗ)(ವಿನಿಯೋಜಿಸರ್+ಏಕೆ)
133
ಜ್ಞಾನಿಯುಂ ಹೊರುವನ ಜ್ಞಾನಿ ವೊಲೆ ಸೃಷ್ಟಿಸಂ-|
ತಾನಪಾಲನೆಯ ಕರ್ತವ್ಯ ಭಾರವನು ||
ಬೋನಕಾಶಿಸಿ ದಾನಿಭಯದೆ ಹೊರುವವನೊರ‍್ವ |
ಸಾನುಕಂಪೆಯಿನೊರ‍್ವ - ಮರುಳ ಮುನಿಯ ||
(ಬೋನಕೆ+ಆಶಿಸಿ)(ಹೊರುವವನ್+ಒರ‍್ವ)
134
ಮೋಹಪಾಶಗಳೆಳೆಯೆ ಮಮತೆಯಂಕುಶವಿರಿಯೆ |
ಆಹುತಂ ತಾನಹಂ ಭವಶಿಖೆಗೆ ಮೂಢಂ ||
ಸೋಽಹಮಭಿಮತದ ಸರ್ವಾತ್ಮತ್ವದಿಂ ಜಗಕೆ |
ಸಾಹ್ಯವೀವಂ ಜ್ಞಾನಿ - ಮರುಳ ಮುನಿಯ ||
(ಮೋಹಪಾಶಗಳ್+ಎಳೆಯೆ)(ಮಮತೆ+ಅಂಕುಶ+ಇರಿಯೆ)(ತಾನ್+ಅಹಂ)(ಸೋಽಹಂ+ಅಭಿಮತದ)(ಸಾಹ್ಯ+ಈವಂ)
135
ಸೃಷ್ಟಿಚರಿತೆಯನಾದಿ ಜೀವಯಾತ್ರೆಯನಾದಿ |
ಶಿಷ್ಟಕರ್ಮದ ಜಟಿಲ ಸೂತ್ರಗಳನಾದಿ ||
ನಷ್ಟವಹುವೀಯನಾದಿಭ್ರಾಂತಿ ಮೂಲಗಳು |
ದೃಷ್ಟಾತ್ಮತತ್ತ್ವಂಗೆ - ಮರುಳ ಮುನಿಯ ||
(ಸೃಷ್ಟಿಚರಿತೆ+ಅನಾದಿ) (ಜೀವಯಾತ್ರೆ+ಅನಾದಿ) (ಸೂತ್ರಗಳ್+ಅನಾದಿ) (ನಷ್ಟ+ಅಹುವು+ಈ+ಅನಾದಿಭ್ರಾಂತಿ) (ದೃಷ್ಟ+ಆತ್ಮ+ತತ್ತ್ವಂಗೆ)
136
ಸಂಸಾರಿ ಬಾಹ್ಯದೊಳಗಾಂತರ್ಯದಿ ವಿರಾಗಿ |
ಹಂಸೆ ಜೀವನದ ಪಾಲ್ನೀರ ಭೇದದಲಿ ||
ಪಾಂಸು ಮಾತ್ರದಿ ಸಕಲ ವಿಶ್ವಸಂದರ್ಶಿ(ಸುವ) |
ಅಂಶದಲಿ ಪೂರ್ಣದೃಶಿ - ಮರುಳ ಮುನಿಯ ||
(ಬಾಹ್ಯದೊಳಗೆ+ಆಂತರ್ಯದಿ)
137
ಪ್ರೇಮ ಪರಿಚರ್ಯೆಗಳನುಳಿದ ಪಶುಕಾಮುಕತೆ |
ಕಾಮನೀಯಕ ತಾರತಮ್ಯ ಮರೆತಾಶೆ ||
ಭ್ರಾಮಗತಿಯೆ ಪ್ರಗತಿಯೆಂಬ ಮೂರ್ಖಶ್ರದ್ಧೆ |
ಪಾಮರ ವಿಜೃಂಭವಿವು - ಮರುಳ ಮುನಿಯ ||
(ಪರಿಚರ್ಯೆಗಳನ್+ಉಳಿದ)(ವಿಜೃಂಭ+ಇವು)
138
ಇರುವುದೆಲ್ಲಕು ಮೊದಲು ಬೀಜವದು ಮೂಲವದು |
ಬರುವುದದರಿಂದೆಲ್ಲ ಜಗ ಜೀವ ಗಾಳಿ ||
ನೆರೆದು ಧರಿಸಿರುವುದದು ಪೊರೆವುದದು ಕರಗಿಪುದು |
ಮೆರೆವುದದು ನಿನ್ನೊಳಗೆ - ಮರುಳ ಮುನಿಯ ||
(ಇರುವುದು+ಎಲ್ಲಕು)(ಬರುವುದು+ಅದರಿಂದ+ಎಲ್ಲ)(ಧರಿಸಿ+ಇರುವುದು+ಅದು)(ಮೆರೆವುದು+ಅದು)
139
ಹುಟ್ಟದಿರುವನು ನೀನು ಸಾಯದಿರುವನು ನೀನು |
ಹುಟ್ಟುಸಾವುಗಳಾಟವಾಡುವನು ನೀನು ||
ಕೆಟ್ಟುದೊಳಿತುಗಳೆರಡುಮಂಟದಿರ‍್ಪನು ನೀನು |
ಒಟ್ಟು ವಿಶ್ವವೆ ನೀನು - ಮರುಳ ಮುನಿಯ ||
(ಹುಟ್ಟುಸಾವುಗಳ+ಆಟ+ಆಡುವನು)(ಕೆಟ್ಟುದು+ಒಳಿತುಗಳ್+ಎರಡುಂ+ಅಂಟದೆ+ಇರ‍್ಪನು)
140
ನಾನು ನೀನವನು ತಾನೆನುತ ಗುರುತಿಸಿಕೊಳುವ |
ಭಾನಶಕ್ತಿ ಸಮಾನವೆಲ್ಲ ಜೀವರಿಗಂ ||
ನಾನಾ ಪ್ರಪಂಚಗಳನಂತೊಂದುಗೂಡಿಪಾ |
ಜ್ಞಾನಸೂತ್ರವೆ ಬೊಮ್ಮ - ಮರುಳ ಮುನಿಯ ||
(ನೀನ್+ಅವನು)(ತಾನ್+ಎನುತ)(ಸಮಾನ+ಎಲ್ಲ)(ಪ್ರಪಂಚಗಳನ್+ಅಂತು+ಒಂದುಗೂಡಿಪ+ಆ)
141
ದೇವರೇಂ ಜೀವಕೋಟಿ ಸಮಷ್ಟಿಯನು ಬಿಟ್ಟು? |
ಜೀವವೊಂದಿನ್ನೊಂದನರಿತು ಗುರುತಿಸುವಾ ||
ಭಾವನಾ ಸಂಬಂಧ ಶಕ್ತಿ ಸೂತ್ರದ ಮುಂದೆ |
ಆವಸಾಕ್ಷ್ಯವದೇಕೆ ? - ಮರುಳ ಮುನಿಯ ||
(ಜೀವವು+ಒಂದು+ಇನ್ನೊಂದನು+ಅರಿತು)(ಆವಸಾಕ್ಷ್ಯ+ಅದು+ಏಕೆ)
142
ಪರವಸ್ತುವೊಂದು ತಾನೆರಡಾಗಿ ಲೀಲೆಯಲಿ |
ಪುರುಷನೆಂದುಂ ಪ್ರಕೃತಿಯೆಂದುಮನ್ಯೋನ್ಯಂ ||
ಅರಸುತ್ತೆ ಮರಸುತ್ತೆ ಸೇರುತಗಲುತಮಂತು |
ಸರಸವಾಡುತ್ತಿಹುದೊ - ಮರುಳ ಮುನಿಯ ||
(ತಾನ್+ಎರಡು+ಆಗಿ)(ಪ್ರಕೃತಿಯೆಂದುಂ+ಅನ್ಯೋನ್ಯಂ)(ಸೇರುತ+ಅಗಲುತಂ+ಅಂತು)(ಸರಸ+ಆಡುತ್ತಿಹುದೊ)
143
ಸ್ವಚ್ಛಚೈತನ್ಯಸಾಗರದ ವೀಚಿಯೊ ನೀನು |
ಸಚ್ಚಿದಾನಂದಸರಿದೂರ್ಮಿ ಕಣ ನೀನು ||
ಅಚ್ಛೇದ್ಯ ದಿವ್ಯತರು ಸುಮಪರಾಗವೊ ನೀನು |
ಅಚ್ಯುತಾಮೃತಬಿಂದು - ಮರುಳ ಮುನಿಯ ||
(ಸತ್+ಚಿತ್+ಆನಂದಸರಿತ್+ಊರ್ಮಿ)(ಅಚ್ಯುತ+ಅಮೃತಬಿಂದು)
144
ಇಹನೊ ಇಲ್ಲವೊ ದೇವರಿರ‍್ದೊಡೇನಿರದೊಡೇಂ |
ಅಹಮೆಂಬುದೊಂದು ನಿನ್ನೊಳೆ ನುಡಿವುದಲ್ತೆ ||
ಇಹದಿ ನಾನಾನೆನ್ನುವೆಲ್ಲ ಚೈತನ್ಯ ತಾಂ |
ಮಹದಾದಿ ದೈವವೆಲೊ - ಮರುಳ ಮುನಿಯ ||
(ದೇವರು+ಇರ‍್ದೊಡೆ+ಏಂ+ಇರದೊಡೆ+ಏಂ)(ಅಹಂ+ಎಂಬುದು+ಒಂದು)(ನಿನ್ನ+ಒಳೆ)(ನುಡಿವುದು+ಅಲ್ತೆ)(ನಾನ್+ನಾನ್+ಎನ್ನುವ+ಎಲ್ಲ)(ಮಹತ್+ಆದಿ)(ದೈವ+ಎಲೊ)
145
ಕೋಡೆರಡು ಚಂದ್ರಮಗೆ ನಡುವೆ ಕಪ್ಪಿನ ಕಣಿವೆ |
ನೋಡು ಹುಣ್ಣಿಮೆಯಂದು ತುಂಬಿಹುದು ಬಿಂಬ ||
ಮೋಡವನು ತನಗೆ ತಾಂ ಮುಸುಕಿಕೊಂಡಾತ್ಮ ತಾ|
ನಾಡುತಿಹುದೆರಡೆನಿಸಿ - ಮರುಳ ಮುನಿಯ ||
(ಕೋಡು+ಎರಡು)(ಮುಸುಕಿಕೊಂಡು+ಆತ್ಮ)(ತಾನ್+ಆಡುತ+ಇಹುದು+ಎರಡು+ಎನಿಸಿ)
146
ಸಾಸಿರ ಮೊಗಂಗಳಿಂ ಸಿಹಿಯುಣುತ ಕಹಿಯುಣುತ |
ಸಾಸಿರ ಮೊಗಂಗಳಿಂದಳುತ ನಗುನಗುತ ||
ಸಾಸಿರದೊಡಲುಗಳಿಂ ಪಡುತ ಪಡಿಸುತ್ತಲಿಹ |
ಸಾಸಿರದೊಳೊರ್ವನಾರ್ ? - ಮರುಳ ಮುನಿಯ ||
(ಮೊಗಂಗಳಿಂದ+ಅಳುತ)(ಸಾಸಿರದ+ಒಡಲುಗಳಿಂ)(ಪಡಿಸುತ್ತಲ್+ಇಹ)(ಸಾಸಿರದೊಳ್+ಒರ್ವನ್+ಆರ್)
147
ಇಹುದೆಸೆವು(ದಪ್ಪು)ದಾಕೃತಿಯ ತಳೆವುದು ಪೆಸರ |
ವಹಿಪುದೆಂಬೈದು ಗುಣ ಜೀವಲಕ್ಷಣಗಳ್ ||
ಗ್ರಹಿಸು ಮೊದಲಿನ ಮೂರು ಬೊಮ್ಮನವು ಮಿಕ್ಕೆರಡು |
ಕುಹುಕ ಮಾಯೆಯವೆಂದು - ಮರುಳ ಮುನಿಯ ||
(ಇಹುದು+ಎಸೆವುದು+ಅಪ್ಪುದು+ಆಕೃತಿಯ)(ವಹಿಪುದು+ಎಂಬ+ಐದು)(ಮಾಯೆ+ಅವು+ಎಂದು)
148
ನರತೆಯೇಂ ದೈವಾಂಶ ಜೀವಾಂಶ ಮಿಶ್ರಣಂ |
ಇರುವೆಲ್ಲದರ ಸಮಷ್ಟಿ ಜ್ವಾಲೆ ದೈವಂ ||
ಉರಿಯಿಂದ ಹೊರಬಿದ್ದು ಕರಿಯಪ್ಪ ಕಿಡಿ ಜೀವ |
ಮರಳಿ ಕರಿಯುರಿಯಕ್ಕೆ - ಮರುಳ ಮುನಿಯ ||
(ದೈವ+ಅಂಶ)(ಜೀವ+ಆಂಶ)(ಇರುವ+ಎಲ್ಲದರ)(ಕರಿ+ಅಪ್ಪ)(ಕರಿ+ಉರಿ+ಅಕ್ಕೆ)
149
ಇರುವುದೆಂದೆಂದುಮದು ದಿಟದೊಳೊಂದೇ ಒಂದು |
ಮೆರೆವುದದು ಎತ್ತೆತ್ತಲುಂ ಲಕ್ಷ ಲಕ್ಷ ||
ಸ್ಥಿರ ಸತ್ಯ ಚರ ಮಾಯೆ ಎರಡಿರುವವೊಲು ತೋರಿ |
ಇರುವುದು ಸ್ಥಿರವೊಂದು - ಮರುಳ ಮುನಿಯ ||
(ಇರುವುದು+ಎಂದೆಂದುಂ+ಅದು)(ದಿಟದೊಳ್+ಒಂದೇ)(ಎರಡು+ಇರುವ+ವೊಲು)
150
ಇರುವಿಕೆಯೆ ಸತ್ ಅದಾಸ್ತಿಕತೆ ಸತ್ತತ್ತ್ವ-|
ವಿರಬೇಕದಿರ್ದು ನಮ್ಮರಿವೆಟುಕಬೇಕು ||
ಮರೆಯೊಳೇನಿಹುದೊ ಇಲ್ಲವೋ ಅರಿವರಾರ್ |
ಸ್ಛುರಿತತತ್ತ್ವವೊ ಜೀವ - ಮರುಳ ಮುನಿಯ ||
(ಅದು+ಆಸ್ತಿಕತೆ)(ಸತ್+ತತ್ತ್ವ+ಇರಬೇಕು+ಅದು+ಇರ್ದು)(ನಮ್ಮ+ಅರಿವು+ಎಟುಕಬೇಕು)(ಮರೆಯೊಳ್+ಏನ್+ಇಹುದೊ)(ಅರಿವರ್+ಆರ್)
151
ವ್ಯವಹಾರಲೋಕದೊಡಗೂಡಿರುತ್ತದರೊಳಗೆ |
ಅವಿಕಾರ ತತ್ತ್ವ ಸಂಸ್ಮೃತಿಯ ನೀಂ ಬೆರಸೆ ||
ಭವ ನಿನಗೆ ಬೊಂಬೆ ಶಿಶುಗಪ್ಪಂತೆ ಬರಿಲೀಲೆ |
ಶಿವನೆ ಸಂಸಾರಿಯಲ - ಮರುಳ ಮುನಿಯ ||
(ವ್ಯವಹಾರಲೋಕದ+ಒಡಗೂಡಿ+ಇರುತ್ತ+ಅದರ+ಒಳಗೆ)
152
ನೀರು ಹೊಳೆಯಲಿ ಹರಿದು ಹೊಸಹೊಸದಹುದು |
ಸೇರುವುವುಪನದಿಗಳು ನದಿಯು ಹರಿಯುತಿರೆ ||
ಊರುವುದು ಹೊಸ ನೀರು ತಳದ ಒಳಗಿಹುದೂಟೆ |
ತೀರದೂಟೆಯೊ ಆತ್ಮ - ಮರುಳ ಮುನಿಯ ||
(ಹೊಸಹೊಸದು+ಅಹುದು)(ಸೇರುವುವು+ಉಪನದಿಗಳು)(ಹರಿಯುತ+ಇರೆ)(ಒಳಗೆ+ಇಹುದು+ಊಟೆ)(ತೀರದ+ಊಟೆಯೊ)
153
ನಾನಾ ವಿಕಾರ ಲೀಲೆಗಳ ತಾಳುತ್ತ |
ತಾನೊಬ್ಬನೇ ನಿಶ್ಚಲಂ ಮೆರೆಯುತತ್ತ ||
ಜ್ಞಾನಿಗೇ ತಾನೇಕ ಯೋಗತತ್ತ್ವವನೀವ |
ದಾನಿಯಾ ಬ್ರಹ್ಮನೆಲೊ - ಮರುಳ ಮುನಿಯ ||
(ಮೆರೆಯುತ+ಅತ್ತ)(ಯೋಗತತ್ತ್ವವನ್+ಈವ)(ಬ್ರಹ್ಮನ್+ಎಲೊ)
154
ಸಾಕಾರನಾಗದಿಹ ದೈವದಿಂದಾರ‍್ಗೇನು? |
ಬೇಕು ಬಡಜೀವಕ್ಕೆ ಸಂಗಡಿಗನೋರ‍್ವಂ ||
ಶೋಕಾರ್ತನೆದೆಯುಲಿವ ಗೂಢ ಚಿಂತೆಗಳ ನೊಲಿ- |
ದಾಕರ್ಣಿಪನೆ ದೈವ - ಮರುಳ ಮುನಿಯ ||
(ಸಾಕಾರನ್+ಆಗದಿಹ)(ದೈವದಿಂದ+ಆರ‍್ಗೇನು)(ಶೋಕ+ಆರ್ತನ್+ಎದೆ+ಉಲಿವ)(ಚಿಂತೆಗಳನ್+ಒಲಿದು+ಆಕರ್ಣಿಪನೆ)
155
ಬಗೆದು ನೀಂ ಬಾಳುವೊಡೆ ಜಗದ ರಚನೆಯ ನೋಡು |
ಸಗಣಿ ಹಾಲುಗಳೆರಡು, ಕೊಡುವ ಗೋವೊಂದೆ ||
ಅಗಣಿತದಿ ಗಣ್ಯ(ಮ)ಗಣ್ಯಗಣಿತದಿಂದ |
ಜಗವೊಂದೆ ಬಹುರೂಪ - ಮರುಳ ಮುನಿಯ ||
(ಹಾಲುಗಳು+ಎರಡು)(ಗೋವು+ಒಂದೆ)(ಗಣ್ಯಂ+ಅಗಣ್ಯಂ+ಗಣಿತದಿಂದ)(ಜಗ+ಒಂದೆ)
156
ಜಗಬೇಕು ಬ್ರಹ್ಮಕ್ಕೆ ಬೇಡದಿರೆ ಸೃಜಿಸುವುದೆ ? |
ಬಗೆಬಗೆಯ ಜೀವಲೀಲೆಗಳದರ ಸರಸ ||
ಜಗವ ತೊರೆಯೆಂಬವರೆ ನೀಂ ಬೆದಕುತಿಹುದೇನು ? |
ಸಿಗದೆ ಕಣ್ಗದು ಜಗದಿ ? - ಮರುಳ ಮುನಿಯ ||
(ಬೇಡದೆ+ಇರೆ)(ಜೀವಲೀಲೆಗಳು+ಅದರ)(ಬೆದಕುತಿಹುದು+ಏನು)(ಕಣ್ಗೆ+ಅದು)
157
ಇರುವುದದು ನೆರೆವುದದು ಭರಿಪುದದು ಪೊರೆವುದದು |
ಅರಿವೆಲ್ಲವಲುಗೆಲ್ಲವಾರ‍್ಪೆಲ್ಲವದರಿಂ ||
ತರಣಿ ಶಶಿ ತಾರೆಗಳು ಜಲವಗ್ನಿವಾಯುಗಳು |
ಸ್ಫುರಿಪುವದರಿಂದೆಲ್ಲ - ಮರುಳ ಮುನಿಯ ||
(ಅರಿವೆಲ್ಲ+ಅಲುಗೆಲ್ಲ+ಆರ‍್ಪೆಲ್ಲ+ಅದರಿಂ)(ಸ್ಫುರಿಪುವು+ಅದರಿಂದ+ಎಲ್ಲ)
158
ಜನುಮ ಜನುಮಾಂತರಂಗಳ ಲೆಕ್ಕಗಳನಿಟ್ಟು |
ಋಣವ ನಿನ್ನಿಂ ತೆರಿಸಿಕೊಳಲು ಕಾದಿರುವಾ ||
ಗಣಿತಸೂತ್ರದ ಶೂರನೇಂ ಬೊಮ್ಮ ಬೇರೆ ಹಿರಿ-|
(ತನ ನಯ)ವವನದಿಲ್ಲ? - ಮರುಳ ಮುನಿಯ ||
(ಲೆಕ್ಕಗಳನ್+ಇಟ್ಟು)(ಕಾದಿರುವ+ಆ)(ನಯವು+ಅವನದಿಲ್ಲ)
159
ಮೇಯಗರ್ಭದೊಳೊಂದಮೇಯವಾವುದೊ ನಿಂತು |
ಕಾಯಕವ ನಡಸುತಿರ‍್ಪುದು ವಿಶ್ವವಾಗಿ ||
ಮಾಯೆಯುಡಿಗೆಯನುಟ್ಟು ತನ್ನ ತಾನೇ ಮರೆತು |
ಆಯಸಂಗೊಳುತಿಹುದು - ಮರುಳ ಮುನಿಯ ||
(ಮೇಯಗರ್ಭದೊಳ್+ಒಂದು+ಅಮೇಯವು+ಆವುದೊ)(ನಡಸುತ+ಇರ‍್ಪುದು)(ಮಾಯೆಯ+ಉಡಿಗೆಯನ್+ಉಟ್ಟು)(ಆಯಸಂಗೊಳುತ+ಇಹುದು)
160
ವೈಣಿಕಂ ಶೇಷಣ್ಣ ತಾನೆಳೆದ ನಾದದಲಿ |
ಲೀನನಾಗುತೆ ತಾನೆ ಮೈಯ ಮರೆತಂತೆ ||
ತಾನೆ ಗೈದೀಜಗದ ನಗುವಳುಗಳೊಳು ತಾನೆ |
ಆನಂದಿಪನು ಬೊಮ್ಮ - ಮರುಳ ಮುನಿಯ ||
(ತಾನ್+ಎಳೆದ)(ಲೀನನ್+ಆಗುತೆ)(ಗೈದ+ಈ+ಜಗದ)(ನಗು+ಅಳುಗಳೊಳು)
161
ಒಂದೆ ನಾಲಗೆ ನೂರು ಸವಿಗಳನು ಸವಿಯುವುದು |
ಒಂದೆ ಮನ ನೂರೆಂಟು ಕನಸ ಕಾಣುವುದು ||
ಒಂದೆ ಬೊಮ್ಮದಿನುಣ್ಮಿದೊಂದೆ ಮಾಯೆಯಿನೆ ನಿ-|
ನ್ನಂದ ಕುಂದುಗಳೆಲ್ಲ - ಮರುಳ ಮುನಿಯ ||
(ಬೊಮ್ಮದಿನ್+ಉಣ್ಮಿದ+ಒಂದೆ)(ನಿನ್ನ+ಅಂದ)(ಕುಂದುಗಳ್+ಎಲ್ಲ)
162
ಮರುಳು ಬಿಸಿಲಕ್ಷಿಯೀತ್ರಯದೊಂದು ಸಂಸರ್ಗ |
ಮರುವೊಳ್ ಮರೀಚೆಕೆಯನಾಗಿಪುದು ಮೃಗಕೆ ||
ಸ್ಥಿರಬೊಮ್ಮ ಚರಮಾಯೆ ನಿನ್ನ ದೃಕ್ಕೋಣವಿವು |
ನೆರೆಯೆ ವಿಶ್ವದ ಚಿತ್ರ - ಮರುಳ ಮುನಿಯ ||
(ಬಿಸಿಲ್+ಅಕ್ಷಿ+ಈ+ತ್ರಯದ+ಒಂದು)(ಮರೀಚೆಕೆಯನ್+ಆಗಿಪುದು)(ದೃಕ್ಕೋಣ+ಇವು)
163
ಅಲುಗದದಿರದ ಗಿರಿಯ ಮುಖ ಧೀರ ಗಂಭೀರ |
ಕುಲುಕಿ ಬಳುಕುವ ಬಳ್ಳಿ ಸರಸದೊಯ್ಯಾರ ||
ಬಲ ಘನತೆ ಸೇವ್ಯವೋ ಚೆಲುವೊಲವು ಸೇವ್ಯವೋ ? |
ಬೆಲೆಯಾವುದಾತ್ಮಕೆಲೊ - ಮರುಳ ಮುನಿಯ ||
(ಅಲುಗದೆ+ಅದಿರದ)(ಸರಸದ+ಒಯ್ಯಾರ)(ಚೆಲುವು+ಒಲವು)(ಬೆಲೆ+ಯಾವುದ್+ಆತ್ಮಕೆ+ಎಲೊ)
164
ಸಂಕ್ಷೋಭಿತವನುಳಿದು ಲೋಕ ಜೀವಿತವೇನು |
ಕಾಂಕ್ಷಿತವನುಳಿದು ಮಾನವ ಶಕ್ತಿಯೇನು ? ||
ಧ್ವಾಂಕ್ಷ ಪ್ರಸಂಗವದು ನಡೆಗೆ ಸೃಷ್ಟಿಯ ಪಥದಿ |
ಶಿಕ್ಷಿಸಿಕೊ ನಿನ್ನ ನೀಂ - ಮರುಳ ಮುನಿಯ ||
(ಸಂಕ್ಷೋಭಿತವನ್+ಉಳಿದು)(ಕಾಂಕ್ಷಿತವನ್+ಉಳಿದು)
165
ಸತ್ಯವೊಂದನೆ ಕೇಳ್ವ ಹಟದ ನೆವದಿಂ ಹೆರರ |
ಕುತ್ಸಿತವ ಹೇಳಿಸು(ತೊಳಗೆ) ನಗುವರಿರರೆ ||
ಪ್ರತ್ಯಕ್ಷಕಳುಕುವಾಶೆಗಳು ಮನಸಿನ ಕುಳಿಯ |
ಗುಪ್ತದಿಂ ಚೇಷ್ಟಿಸವೆ? - ಮರುಳ ಮುನಿಯ ||
(ಹೇಳಿಸುತ+ಒಳಗೆ)(ನಗುವರ್+ಇರರೆ)(ಪ್ರತ್ಯಕ್ಷಕೆ+ಅಳುಕುವ+ಅಶೆಗಳು)
166
ಅರೆದೈವವರೆದೈತ್ಯ ನರನೆನಿಪ್ಪ ವಿಚಿತ್ರ |
ಧುರರಂಗಮವರೀರ‍್ವರಿಗೆ (ಮರ್ತ್ಯ) ಹೃದಯ ||
ತೆರೆಮರೆಯೊಳಿರುತವರು ಸಭ್ಯವೇಷದ ಭಟರ |
ಹರಿಬ ತಿಳಿಸುವುದುಂಟು - ಮರುಳ ಮುನಿಯ ||
(ಅರೆದೈವ+ಅರೆದೈತ್ಯ)(ನರನ್+ಎನಿಪ್ಪ)(ಧುರರಂಗಂ+ಅವರೀರ‍್ವರಿಗೆ)(ತೆರೆಮರೆಯೊಳ್+ಇರುತ+ಅವರು)(ತಿಳಿಸುವುದು+ಉಂಟು)
167
ಗುಣ ಬೇರೆ ಬಲ ಬೇರೆ ಗುರಿ ಬೇರೆ ರುಚಿ ಬೇರೆ |
ಋಣ ಸೂತ್ರ ಗತಿ ಬೇರೆ ಪೂರ್ವಕಥೆ ಬೇರೆ ||
ಮನುಜ ಮನುಜಂಗಮಿಂತಾತ್ಮ ಯೋಗ್ಯತೆ ಬೇರೆ |
ಅನುವರಿಯೆ ಸಾರ್ಥಕ್ಯ - ಮರುಳ ಮುನಿಯ ||
(ಮನುಜಂಗೆ+ಇಂತು+ಆತ್ಮ)(ಅನು+ಅರಿಯೆ)
168
ದ್ವೈತಂ ವಿಶಿಷ್ಟದದ್ವೈತಮದ್ವೈತಮಿವು |
ಮಾತೊ ಬರಿದಹ ಮಾತೊ ನಿನಗೆ ಹೃದಯಾನು-||
ಭೂತಮಿಹವಾರ್ತೆಯೋ ಜೀವನೀತಿಯ ತೋರ್ಪ |
ಜ್ಯೋತಿಯೋ ಜೀವನದಿ - ಮರುಳ ಮುನಿಯ ||
(ವಿಶಿಷ್ಟದದ್ವೈತಂ+ಅದ್ವೈತಂ+ಇವು)(ಬರಿದು+ಅಹ)(ಹೃದಯ+ಅನುಭೂತಂ+ಇಹವಾರ್ತೆಯೋ)
169
ದ್ವೈತಮದ್ವೈತಂ ವಿಶಿಷ್ಟದದ್ವೈತಮಿವು |
ಮಾತೊ ಅನುಭೂತಿಯೋ ? ಒಳಗರಸಿ ನೋಡು ||
ಖ್ಯಾತಿಗಾಯಿತು ತರ್ಕವಾಕ್ಯಾರ್ಥಗಳ ಗಡಕೆ |
ನೀತಿ ಜೀವಿತಕಿರಲಿ - ಮರುಳ ಮುನಿಯ ||
(ದ್ವೈತಂ+ಅದ್ವೈತಂ)(ವಿಶಿಷ್ಟದದ್ವೈತಂ+ಇವು)(ಖ್ಯಾತಿಗೆ+ಆಯಿತು)(ಜೀವಿತಕೆ+ಇರಲಿ)
170
ಕಾಯ ಭೋಗೈಶ್ವರ್ಯ ಯಶಗೊಳನಾಸಕ್ತಿ |
ನ್ಯಾಯ ಧರ್ಮೋದ್ಧಾರದಲ್ಲಿ ಸಮಶಕ್ತಿ ||
ಸ್ವೀಯಾತ್ಮ ಸರ್ವಾತ್ಮವೆನ್ನುವದ್ವಯ ವೃತ್ತಿ |
ನೇಯಂಗಳಿವು ನಿನಗೆ - ಮರುಳ ಮುನಿಯ ||
(ಭೋಗ+ಐಶ್ವರ್ಯ)(ಯಶಗೊಳ್+ಅನಾಸಕ್ತಿ)(ಧರ್ಮ+ಉದ್ಧಾರದಲ್ಲಿ)(ಸರ್ವಾತ್ಮ+ಎನ್ನುವ+ಅದ್ವಯ)
171
ಭಯದಿ ನಿರ್ಭಯವೀವ ದೈವಚಿಹ್ನೆಯದೊಂದು |
ದಯಿತೆಯೊರ್ವಳು ಭವದ ಹೊರೆಯ ಪಾಲ್ಗೊಳಲು ||
ನಿಯತವೃತ್ತಿಯದೊಂದು ದಿನದಿನದ ಭತ್ಯಕ್ಕೆ |
ತ್ರಯದೆ ಭಾಗ್ಯವೊ ಬಾಳು - ಮರುಳ ಮುನಿಯ ||
(ನಿರ್ಭಯ+ಈವ)(ದೈವಚಿಹ್ನೆ+ಅದು+ಒಂದು)(ಪಾಲ್+ಕೊಳಲು)(ನಿಯತವೃತ್ತಿ+ಅದು+ಒಂದು)
172
ಧೀಯುಕ್ತಿಯೊಂದಲ್ಲ, ಹೃದ್ಭಕ್ತಿಯೊಂದಲ್ಲ |
ಮಾಯೆಯುಂ ಪರಿದು ತತ್ತ್ವವ ತೋರ‍್ಪ ಬೆಳಕು ||
ಆಯೆರಡು ಕಣ್ಗಯೊಂದಾಗೆ ಮೂರನೆಯ ಕಣ್ |
ಧ್ಯೇಯವನು ಕಂಡೀತೊ - ಮರುಳ ಮುನಿಯ ||
(ಧೀಯುಕ್ತಿ+ಒಂದಲ್ಲ)(ಹೃದ್ಭಕ್ತಿ+ಒಂದಲ್ಲ)(ಕಣ್ಗಳ್+ಒಂದಾಗಿ)
173
ಆದಿಕವಿಗಳ ವಿಶ್ವಸತ್ಯದೃಷ್ಟಿಯಿನೊಗೆದ |
ವೇದನದಿ ಮೂರುಕವಲಾಯ್ತು ಟೀಕೆಗಳಿಂ ||
ರೋದಿಸುವ ವೈರಾಗ್ಯ, ಭೋಧೆಯಗಲಿದ ಕರ್ಮ- |
ವಾದದೊಣ ರಗಳೆಯವು - ಮರುಳ ಮುನಿಯ ||
(ವಿಶ್ವಸತ್ಯದೃಷ್ಟಿಯಿನ್+ಒಗೆದ)
174
ನಿಗಮರ್ಷಿಗಳ ಜೀವನೋತ್ಸಾಹಭರವೆಲ್ಲಿ ? |
ಜಗ ಮಣ್ಣು ಬಾಳ್ಗಾಳಿಯೆನುವ ನಾವೆಲ್ಲಿ ? ||
ಭಗವದ್ವಿಲಾಸದಲಿ ಭಾಗಕನುಗೂಡದನು ||
ಮಗುವೆಂತು ಮನುಕುಲಕೆ - ಮರುಳ ಮುನಿಯ ||
(ನಿಗಮ+ಋಷಿಗಳ)(ಜೀವನ+ಉತ್ಸಾಹಭರ+ಎಲ್ಲಿ)(ಬಾಳ್+ಗಾಳಿಯೆನುವ) (ಭಗವತ್+ವಿಲಾಸದಲಿ)(ಭಾಗಕೆ+ಅನುಕೂಡದನು)(ಮಗು+ಎಂತು)
175
ಪರಿಪರಿಯ ಮೃಷ್ಟಾನ್ನ ಭಕ್ಷ್ಯಭೋಜ್ಯಗಳು ತಾ-|
ವರಗಿ ರಕ್ತದಿ ಬೆರೆಯದಿರೆ ಪೀಡೆ ಪೊಡೆಗೆ ||
ಬರಿಯೋದು ಬರಿತರ್ಕ ಬರಿಭಕ್ತಿಗಳುಮಂತು |
ಹೊರೆಯೆ ಅರಿವಾಗದೊಡೆ - ಮರುಳ ಮುನಿಯ ||
(ತಾವ್+ಅರಗಿ)(ಬೆರೆಯದೆ+ಇರೆ)(ಬರಿಭಕ್ತಿಗಳುಂ+ಅಂತು)(ಅರಿವು+ಆಗದೊಡೆ)
176
ಕತ್ತೆ ಮೈ ಹೊರೆತಕ್ಕೆ ನವಿಲ ಮೈ ಮೆರೆತಕ್ಕೆ |
ಹೊತ್ತು ತರಲಾದೀತೆ ನವಿಲು ಭಾರಗಳ ||
ನೃತ್ಯಕ್ಕೆ ಗೆಜ್ಜೆ ತೊಡುವುದೆ ಕತ್ತೆ ? ಧರ್ಮಗಳ |
ಗೊತ್ತು ಗುಣಯುಕ್ತಿಯಿನೊ - ಮರುಳ ಮುನಿಯ ||
(ತರಲ್+ಆದೀತೆ)
177
ಹೃದಯಾನುಭವ ಪಿರಿದೊ? ಬುದ್ಧಿಸಾಹಸ ಪಿರಿದೊ? ||
ಅಧಿಕನೇಂ ಶಿವನೊ? ವಿಷ್ಣುವೊ? ಮೂರ್ಖತರ್ಕ ||
ಹದದಿನವು ಕಣ್ಣೆರಡರಂತೊಂದುಗೂಡಿದಂ- |
ದುದಿಸುವುದು ಪರಮಾರ್ಥ - ಮರುಳ ಮುನಿಯ ||
(ಹೃದಯ+ಅನುಭವ)(ಹದದಿನ್+ಅವು)(ಕಣ್ಣು+ಎರಡರಂತೆ+ಒಂದುಗೂಡಿದಂದು+ಉದಿಸುವುದು)
178
ಒಂದೊಡಲು ನಿಂದಿರ್ಪುದೆರಡು ಕಾಲ್ಗಳ ಮೇಲೆ |
ಸಂದೇಹವುತ್ತರಗಳೆರಡರಿಂ ಮತವು ||
ದ್ವಂದ್ವಕಿಂತೊದಗದಿಹ ತರ್ಕವೇಂ ಸಿದ್ಧಾಂತ ? |
ಗೊಂದಲವೊ ಬರಿವಾದ - ಮರುಳ ಮುನಿಯ ||
(ಒಂದು+ಒಡಲು)(ನಿಂದಿರ್ಪುದು+ಎರಡು)(ಸಂದೇಹ+ಉತ್ತರಗಳ್+ಎರಡರಿಂ)(ದ್ವಂದ್ವಕೆ+ಇಂತು+ಒದಗದೆ+ಇಹ)
179
ನೂರು ನೂರ‍್ಬೇರೆ ಬೇರ್ ಬೇರು ನಾರ್ ಮತ ಲತೆಗೆ |
ಪೂರ‍್ವಿಕೋಕ್ತ್ಯಾಚಾರ ಸಂಪ್ರದಾಯಗಳು ||
ಶಾರೀರ ಮಾನಸಿಕ ಬುದ್ಧಿಯುಕ್ತ್ಯನುಭವವು |
ಪೂರ ಸಾಗದು ತರ್ಕ - ಮರುಳ ಮುನಿಯ ||
(ನೂರು+ಬೇರೆ)(ಪೂರ‍್ವಿಕ+ಉಕ್ತಿ+ಆಚಾರ)(ಬುದ್ಧಿ+ಯುಕ್ತಿ+ಅನುಭವವು)
180
ದೃಶ್ಯವೆಲ್ಲಂ ನಶ್ಯವೆಂಬರಂತಿರೆಯುಮೀ - |
ದೃಶ್ಯಮಿರ‍್ವನ್ನಮದು ದ್ರಷ್ಟವ್ಯಮಲ್ತೆ ||
ಸಸ್ಯವಳಿದೊಡಮದರ ಫಲ ನಿನ್ನ ಜೀವಿತಕೆ |
ರಸ್ಯಾನ್ನವಾಯಿತಲ! - ಮರುಳ ಮುನಿಯ ||
(ದೃಶ್ಯ+ಎಲ್ಲಂ)(ನಶ್ಯ+ಎಂಬರಂತು+ಇರೆಯುಂ+ಈ)(ದೃಶ್ಯಂ+ಇರ‍್ವನ್ನಂ+ಅದು)(ದ್ರಷ್ಟವ್ಯಂ+ಅಲ್ತೆ)(ಸಸ್ಯ+ಅಳಿದೊಡಂ+ಅದರ)(ರಸ್ಯಾನ್ನ+ಆಯಿತು+ಅಲ)
181
ತಡೆಯಿರದೊಡತ್ತಿತ್ತ ಪರಿದಾಡುವುದು ನೀರು |
ಎಡೆಯ ಗೊತ್ತೊಂದಿರದ ನರಮನವುಮಂತು ||
ಗುಡಿಯೆಂಬುದಿನ್ನೇನು ? ನಿನ್ನಾತ್ಮಕದು ಕೇಂದ್ರ |
ನೆಡು ಮನವನದರೊಳಗೆ - ಮರುಳ ಮುನಿಯ ||
(ತಡೆಯಿರದೊಡೆ+ಅತ್ತಿತ್ತ)(ಪರಿದು+ಆಡುವುದು)(ಗೊತ್ತು+ಒಂದು+ಇರದ)(ನರಮನವುಂ+ಅಂತು)(ಗುಡಿ+ಎಂಬುದು+ಇನ್ನೇನು)(ನಿನ್ನ+ಆತ್ಮಕೆ+ಅದು)(ಮನವನ್+ಅದರ+ಒಳಗೆ)
182
ನಾನು ನಾನೆಂದು ನಿನ್ನೊಳುಸಿರ‍್ವ ಚೇತನವ |
ಭಾನು ಶಶಿಗಳ ಮೀರ‍್ದ ವಿಶ್ವಚೇತನಕೆ ||
ಧ್ಯಾನಸೂತ್ರದೆ ಗಂಟನಿಡುವ ಪ್ರತೀಕ ಸಂ-|
ಧಾನವೇ ಪೂಜೆಯೆಲೊ - ಮರುಳ ಮುನಿಯ ||
(ನಾನ್+ಎಂದು)(ನಿನ್ನೊಳ್+ಉಸಿರ‍್ವ)(ಗಂಟನ್+ಇಡುವ)
183
ನಾನು ನಾನೆನುವ ನಿನ್ನಂತರಾತ್ಮದ ಗಂಗೆ |
ನಾನಾ ಪ್ರಪಂಚಾಂತರಾತ್ಮ ಸಾಗರದಿ ||
ಲೀನವಹ ಸಂಗಮ ಸ್ಥಾನ ದೈವ ಪ್ರತಿಮೆ |
ಧ್ಯಾನಸಂಧಾನವದು - ಮರುಳ ಮುನಿಯ ||
(ನಾನ್+ಎನುವ)(ನಿನ್ನ+ಅಂತರಾತ್ಮದ)(ಪ್ರಪಂಚ+ಅಂತರಾತ್ಮ)(ಲೀನ+ಅಹ)
184
ತನುವೊಳುಸಿರಾಡಿಯುಂ ಮನಸು ಸತ್ತವೊಲಿರಲಿ |
ಮನಸು ಬಾಳ್ದುಂ ತನುವು ಸತ್ತವೊಲಿರಲಿ ||
ತನುಮನಗಳೊಂದಾಗಿ ಬೇರೆ ಜಗವಿರದಾಗಿ |
ಮಿನುಗುಗಾತ್ಮವದೊಂದೆ - ಮರುಳ ಮುನಿಯ ||
(ತನುವೊಳ್+ಉಸಿರಾಡಿಯುಂ)(ಸತ್ತವೊಲ್+ಇರಲಿ)(ತನುಮನಗಳ್+ಒಂದಾಗಿ)(ಜಗ+ಇರದಾಗಿ)(ಮಿನುಗುಗು+ಆತ್ಮ+ಅದು+ಒಂದೆ)
185
ನಾನಾತ್ವದಿಂ ನಿನ್ನೇಕತೆಗೆ ಮರಳಿಸಲು |
ನ್ಯೂನತೆಗಳಿಂ ಪೂರ್ಣದಶೆಗೆ ಸಾಗಿಸಲು ||
ಮಾನವತೆಯಿಂ ಬ್ರಹ್ಮತೆಗೆ ನಿನ್ನ ಸೇರಿಸಲು |
ಮೌನ ಮಾನನವೆ ಮಾರ್ಗ - ಮರುಳ ಮುನಿಯ ||
186
ನೀನೊರೆವ ತತ್ತ್ವಗಳ ನಿನ್ನುನ್ನತೋಕ್ತಿಗಳ |
ನೀನಾನುಮನ್ಯೂನದಿಂ ಚರಿಸಲಾಯ್ತೇಂ ? ||
ಊನವಲ್ಲಿರ‍್ದೊಡೇಂ ಕಾಲಾನುಕಾಲದ |
ಧ್ಯಾನದಿಂ ಸಿದ್ಧಿಯೆಲೊ - ಮರುಳ ಮುನಿಯ ||
(ನೀನ್+ಒರೆವ)(ನಿನ್ನ+ಉನ್ನತ+ಉಕ್ತಿಗಳ)(ನೀನಾನುಂ+ಅನ್ಯೂನದಿಂ)(ಚರಿಸಲ್+ಆಯ್ತೇಂ)(ಊನ+ಅಲ್ಲಿ+ಇರ‍್ದೊಡೇಂ)
187
ಸೌಂದರ್ಯ ಮಾಧುರ್ಯ ಬ್ರಾಹ್ಮಿಕಾನಂದ |
ಸಿಂಧು ಶೀಕರ ಸುಕೃತ ಪವನನುಪಕಾರ ||
ಬಂದಿಯದರಿಂ ಭೋಗಿ ಯೋಗಿಗದು ತತ್ತ್ವಾನು- |
ಸಂಧಾನ ಸಾಧನವೊ - ಮರುಳ ಮುನಿಯ ||
(ಬ್ರಾಹ್ಮಿಕ+ಆನಂದ)(ಪವನನ+ಉಪಕಾರ)(ಬಂದಿ+ಅದರಿಂ)(ಯೋಗಿಗೆ+ಅದು)(ತತ್ತ್ವ+ಅನುಸಂಧಾನ)
188
ಗುರಿಯೇನು ಜೀವನಕೆ ಗುರಿಯರಿತು ಜೀವಿಪುದು |
ಧರೆಯಿಂದ ಶಿಖರಕೇರುವುದು ಪುರುಷತನ ||
ಕಿರಿದರಿಂ ಹಿರಿದಾಗುವುದು ದಿನದಿನದೊಳಿನಿತನಿತು |
ಪರಮಾರ್ಥ ಸಾಧನೆಯೊ - ಮರುಳ ಮುನಿಯ ||
(ಗುರಿ+ಅರಿತು)(ಶಿಖರಕೆ+ಏರುವುದು)(ಹಿರಿದು+ಆಗುವುದು)(ದಿನದಿನದೊಳ್+ಅನಿತು+ಅನಿತು)
189
ತುಪ್ಪದಿಂ ಬೆಂಕಿಯಾರಿಪನು ವಾಮಾಚಾರಿ |
ಕಪ್ಪು ಮೈಸುಡೆ ಬಿಳ್ಪೆನುವನು ಹಟಯೋಗಿ ||
ಉಪ್ಪುನೀರನು ಸಪ್ಪೆಗೈದು ಭಟ್ಟಿಯುಪಾಯ-
ಕೊಪ್ಪದಾತುರ ದುಡುಕು - ಮರುಳ ಮುನಿಯ ||
(ಬೆಂಕಿ+ಆರಿಪನು)(ಬಿಳ್ಪು+ಎನುವನು)(ಭಟ್ಟಿ+ಉಪಾಯಕೆ+ಒಪ್ಪದು+ಆತುರ)
190
ನೈಸರ್ಗ ಪೌರುಷಗಳುಭಯ ಸಮರಸಯುಕ್ತಿ |
ಕೌಶಲದೆ ಜೀವಿತಂ ಸಾರ್ಥಕಂ ನೀಂ ಶು- ||
ಶ್ರೂಷಿಸುತ್ತಿನಿತು ನಿಗ್ರಹಿಸಿನಿತು ಪ್ರಕೃತಿಯಂ |
ದಾಸಿಯಾಗಿಸಿ ಗೆಲ್ಲೊ - ಮರುಳ ಮುನಿಯ ||
(ಪೌರುಷಗಳ+ಉಭಯ)(ಶುಶ್ರೂಷಿಸುತ್ತ+ಇನಿತು)(ನಿಗ್ರಹಿಸಿ+ಇನಿತು)
191
ವಾಸನಾಕ್ಷಯಪದಕೆ ಯೋಗಗತಿ ಮೂರಂತೆ |
ಆಶೆಗಳನತಿಭೋಗ ಮುಗಿಪುದೆನೆ ವಾಮ ||
ಶೋಷಿಪ್ಪುದದನುಗ್ರತಪಗಳಿಂದೆನಲು ಹಟ |
ಶಾಸನದ ನಯ ರಾಜ - ಮರುಳ ಮುನಿಯ ||
(ವಾಸನಾ+ಕ್ಷಯಪದಕೆ)(ಆಶೆಗಳನ್+ಅತಿಭೋಗ)(ಶೋಷಿಪ್ಪುದದನ್+ಉಗ್ರತಪಗಳಿಂದ+ಎನಲು)
192
ಏಕದಿನನೇಕಗಳನಾಗಿಪುದು ನೈಸರ್ಗ |
ಏಕತೆಗನೇಕಗಳ ಮರಳಿಪನು ಪುರುಷಂ ||
ಲೋಕ ಸಂಸೃತಿಗೆ ನಾನಾತ್ವ ಮುಕ್ತಿಗಭೇದ |
ಸಾಕಲ್ಯ ಮತಿಯೆ ಪಥ - ಮರುಳ ಮುನಿಯ ||
(ಏಕದಿನ್+ಅನೇಕಗಳನ್+ಆಗಿಪುದು)(ಏಕತೆಗೆ+ಅನೇಕಗಳ)(ಮುಕ್ತಿಗೆ+ಅಭೇದ)
193
ಚರಮಧ್ಯದೊಳ್ ಸ್ಥಿರವ ಜಗದಿ ಬ್ರಹ್ಮವ ನೆನೆವ |
ನೆರಳೊಳರ್ಕಪ್ರಭೆಯ ಕಾಣುವಂ ಜಾಣಂ ||
ಎರಡುಮನದೊಂದೆಂಬವೊಲ್ (ಸಮದ) ಬದುಕಿನಲಿ |
ಚರಿಸುವಂ ಪರಮಾರ್ಥಿ - ಮರುಳ ಮುನಿಯ ||
(ನೆರಳೊಳ್+ಅರ್ಕಪ್ರಭೆಯ)(ಎರಡುಮನ+ಅದು+ಒಂದು+ಎಂಬವೊಲ್)
194
ಆವ ಬಚ್ಚಲ ನೀರದಾವ ಹೊಳೆಯನೊ ಸೇರಿ |
ಆವ ನದಿಯೊಳು ಪರಿದು ಕಡಲ ಪಾಲಕ್ಕುಂ ||
ಜೀವಿಗಳ ಗತಿಯಂತು ದಾರಿ ಗೊತ್ತಿರುವರಾರ್ |
ಆವುದೆನಲದೆ ದಾರಿ - ಮರುಳ ಮುನಿಯ ||
(ನೀರ್+ಅದು+ಆವ)(ಪಾಲ್+ಅಕ್ಕುಂ)(ಗತಿ+ಅಂತು)(ಗೊತ್ತು+ಇರುವರು+ಆರ್)(ಆವುದು+ಎನಲ್+ಅದೆ)
195
ನೀರು ನೆಲವೆರಡನು ಸೋಕದೆಯೆ ಬಾನಿನಲಿ |
ಪಾರುವುದು ಪಕ್ಕಿ ನೋಡದರವೊಲು ಜಾಣಂ ||
ಧಾರುಣಿಯ ಗೊಂದಲ ದ್ವಂದ್ವಂಗಳಂ ಬಿಟ್ಟು |
ಮೀರುವಂ ನಿರ್ಲಿಪ್ತ - ಮರುಳ ಮುನಿಯ ||
(ನೆಲ+ಎರಡನು)(ನೋಡು+ಅದರವೊಲು)
196
ವೇದಾಂತಮುಂ ಲೋಕ ವಿಜ್ಞಾನಮುಂ ನಿನ್ನ |
ಹಾದಿಗೆರಡಂಕೆ ನಡುಪಟ್ಟಿಯಲಿ ನಡೆ ನೀಂ ||
ಆಧ್ಯಾತ್ಮವೊಂದು ಬದಿಯಧಿಭೌತವಿನ್ನೊಂದು |
ಸಾಧಿಸೆರಡನುಮೊಮ್ಮೆ - ಮರುಳ ಮುನಿಯ ||
(ಹಾದಿಗೆ+ಎರಡು+ಅಂಕೆ)(ಬದಿಯ+ಅಧಿಭೌತ+ಇನ್ನೊಂದು)(ಸಾಧಿಸು+ಎರಡನುಂ+ಒಮ್ಮೆ)
197
ಅಂದಂದು ನಿನ್ನಂತರಂಗ ಬಹಿರಾವರಣ |
ಸಂದರ್ಭದಿನೆ ನಿನಗೆ ಧರ್ಮವಿಧಿ ಜಗದಿ ||
ದ್ವಂದ್ವಗಳ ಮೀರಿ ನೀನದನರಿತು ನಡೆಯುತಿರೆ |
ಮುಂದೆ ಸತ್ಯದ ಪೂರ್ಣ - ಮರುಳ ಮುನಿಯ ||
(ನಿನ್ನ+ಅಂತರಂಗ)(ಬಹಿರ್+ಆವರಣ)(ನೀನ್+ಅದನ್+ಅರಿತು)(ನಡೆಯುತ+ಇರೆ)
198
ಸದ್ಯಸ್ಕಲೌಕಿಕಕೆ ಸರಿ ಭೌತವಿಜ್ಞಾನ |
ಭೇದ್ಯವದರಿಂದೆಂತು ಪರತತ್ತ್ವಸೀಮೆ ? ||
ಖಾದ್ಯರಸಗಳನರಿವ ನಾಲಗೆಗೆ ಗಾನರಸ |
ವೇದ್ಯವಹುದೆಂತಯ್ಯ - ಮರುಳ ಮುನಿಯ ||
(ಭೇದ್ಯ+ಅದರಿಂದ+ಎಂತು)(ಖಾದ್ಯರಸಗಳನ್+ಅರಿವ)(ವೇದ್ಯ+ಅಹುದು+ಎಂತಯ್ಯ)
199
ಕಾಚದೃಗ್ಯಂತ್ರದಿಂ ಗಣಿತ ಸಂಕೇತದಿಂ |
ಲೋಚನಗ್ರಾಹ್ಯ ಪ್ರಪಂಚದುಪಮಿತಿಯಿಂ ||
ವಾಚಾಮಗೋಚರವನರಸುವಂ ನಭಪಟವ |
ಸೂಚಿಯಿಂ ಹೊಲಿವವನು - ಮರುಳ ಮುನಿಯ ||
(ಪ್ರಪಂಚದ+ಉಪಮಿತಿಯಿಂ)(ವಾಚಾಮಗೋಚರವನ್+ಅರಸುವಂ)
200
ರಾತ್ರಿ ದಿವಸ ಕ್ರಮಾವೃತ್ತಿಗಾರ್ ಕಾರಣನೊ |
ಭೌತ ಪ್ರಪಂಚ ನಿಯಮಕದಾರೊ ಅವನೇ ||
ವಾತಾವರಣ ವೈಪರೀತ್ಯಕಂ ಕಾರಣನು |
ಕೇತು ರಾಹುವುಮವನೆ - ಮರುಳ ಮುನಿಯ ||
(ಕ್ರಮ+ಆವೃತ್ತಿಗೆ+ಆರ್)(ನಿಯಮಕೆ+ಅದು+ಆರೊ)(ರಾಹುವುಂ+ಅವನೆ)
201
ಜಗವ ಬಿಡಲೇಕೆ ? ಕಣ್ಣನು ತಿದ್ದುಕೊಳೆ ಸಾಕು |
ಮುಗಿಲ ಕಂಡಾಗಿನನ ಮರೆಯದಿರೆ ಸಾಕು ||
ಮಘವಂತನೆಸೆದ ಬಿಲ್ ಬಣ್ಣಗಳ ಹಿಂಬದಿಗೆ |
ಗಗನವಿಹುದೆನೆ ಸಾಕು - ಮರುಳ ಮುನಿಯ ||
(ಬಿಡಲು+ಏಕೆ)(ಕಂಡಾಗ+ಇನನ)(ಮರೆಯದೆ+ಇರೆ)(ಮಘವಂತನ್+ಎಸೆದ)(ಗಗನ+ಇಹುದು+ಎನೆ)
202
ಮೂಲ ಚೇತನದಿಷ್ಟ ಲೀಲೆಯೇ ವಿಶ್ವಮಿರೆ |
ಕಾಲದಾಲೋಚನೆಯ ಮುನ್‍ತಿಳಿಯಲಳವೇ ||
ವೇಳೆ ದೆಸೆ ಗತಿ ನಿಯಮವಿರೆ ಲೀಲೆಯೆಲ್ಲಿಹುದು |
ಕೋಲಾಹಲವಚಿಂತ್ಯ - ಮರುಳ ಮುನಿಯ ||
(ಚೇತನದ+ಇಷ್ಟ)(ವಿಶ್ವಂ+ಇರೆ)(ಕಾಲದ+ಆಲೋಚನೆಯ)(ತಿಳಿಯಲ್+ಅಳವೇ)(ನಿಯಮ+ಇರೆ)(ಕೋಲಾಹಲ+ಅಚಿಂತ್ಯ)
203
ಥಳಥಳಿಕೆ ವಜ್ರಗುಣ, ವಜ್ರವೇ ಹೊಳಪಲ್ಲ |
ಹೊಳಪಿರದ ವಜ್ರವನು ಗುರುತಿಸುವುದೆಂತು ? ||
ಬೆಳೆಯುತಳಿಯುತ ಬಾಳ್ವ ಜಗವೆಲ್ಲ ಹೊಳಹೊಳಪು |
ಅಲುಗದಾ ಮಣಿ ಬೊಮ್ಮ - ಮರುಳ ಮುನಿಯ ||
(ಗುರುತಿಸುವುದು+ಎಂತು)(ಬೆಳೆಯುತ+ಅಳಿಯುತ)
204
ಸೃಷ್ಟಿ ಬೀಜವನಾದಿ ಸೃಷ್ಟಿಸತ್ತ್ವವನಂತ |
ಚೇಷ್ಟೆ ಸುಪ್ತಿಗಳ ಪರ್ಯಾಯವದರ ಕಥೆ ||
ಪುಷ್ಟವದರಿಂ ಕಂಪು ವಿಶ್ವ ಮಾಯಾವೃಕ್ಷ |
ಶಿಷ್ಟಮಿಹುದು ಪರಾತ್ಮ - ಮರುಳ ಮುನಿಯ ||
(ಬೀಜ+ಅನಾದಿ)(ಸತ್ತ್ವ+ಅನಂತ)(ಪರ್ಯಾಯ+ಅದರ)(ಪುಷ್ಟ+ಅದರಿಂ)(ಶಿಷ್ಟಂ+ಇಹುದು)
205
ದೃಶ್ಯ ತನು ಘಟದೊಳಗದೃಶ್ಯ ಮಾನಸಶಕ್ತಿ |
ಸ್ಪೃಶ್ಯ ಹೃನ್ನಾಡಿಯೊಳಗಸ್ಪೃಶ್ಯಸತ್ತ್ವ ||
ವಿಶ್ವ ಜೀವಂಗಳೊಳಗಂತು ಗೂಢದ ಚಿತ್ತು |
ಶಾಶ್ವತ ರಹಸ್ಯವದು - ಮರುಳ ಮುನಿಯ ||
(ಘಟದೊಳಗೆ+ಅದೃಶ್ಯ)(ಹೃನ್ನಾಡಿಯೊಳಗೆ+ಅಸ್ಪೃಶ್ಯ)(ಜೀವಂಗಳೊಳಗೆ+ಅಂತು)(ರಹಸ್ಯ+ಅದು)
206
ಭೂಜದಂಗ ವಿಕಾಸ ಪಾರಂಪರಿಯ ನೋಡು |
ಬೀಜದಿಂದಗೆ ಕಡ್ಡಿ ಚಿಗುರು ತರುವಾಯಿಂ ||
ರಾಜಿಪುದು ನೆನೆ ಹೂವು ಮರಳಿ ಕಾಯೊಳು ಬೀಜ |
ಸಾಜವೀಕ್ರಮ ವಿವೃತಿ - ಮರುಳ ಮುನಿಯ ||
(ಭೂಜದ+ಅಂಗ)(ಬೀಜದಿಂದ+ಅಗೆ)(ಸಾಜ+ಈ+ಕ್ರಮ)
207
ಎರಡರೆಕ್ಷಣಮಾನುಮೊಂದೆ ದಶೆಯೊಳಗಿರದು |
ತೊರೆಯ ನೀರಂತೆ ಪೊಸ ಪೊಸದಾಗುತೆ ಜಗಂ ||
ಪರಿಯುತಿಹುದೆಡೆ ಬಿಡದೆ ಧಾರೆಯಿಂದೊಂದೆನಿಸಿ |
ಸ್ಥಿರಚರವೊ ಸೃಷ್ಟಿನದಿ - ಮರುಳ ಮುನಿಯ ||
(ಎರಡು+ಅರೆಕ್ಷಣಮಾನುಂ+ಒಂದೆ)(ದಶೆಯೊಳಗೆ+ಇರದು)(ಪೊಸದು+ಆಗುತೆ)(ಪರಿಯುತಿಹುದು+ಎಡೆ)(ಧಾರೆಯಿಂದ+ಒಂದು+ಎನಿಸಿ)
208
ಮೃತಿಯೆನ್ನೆ ರೂಪಾಂತರಾಪ್ತಿಯೆನುವುದು ತತ್ತ್ವ |
ಮತಿ ಕಂಡುಮದಕೆ ಮನಸೋಲದಿರೆ ನೈಜ ||
ಹಿತ ಮನಕೆ ಪೂರ್ವಪರಿಚಿತ ವಸ್ತುವದು ಲಯಿಸ- |
ಲಿತರರೂಪಿಂದೇನು ? - ಮರುಳ ಮುನಿಯ ||
(ಕಂಡು+ಅದಕೆ)(ಮನಸೋಲದೆ+ಇರೆ)(ವಸ್ತು+ಅದು)(ಲಯಿಸಲ್+ಇತರರೂಪಿಂದ+ಏನು )
209
ಶ್ವಾಸಕೋಶದಲಿ ನೀಂ ತಂದುಸಿರು ಪೂರ್ವಕೃತ |
ಬೀಸಿ ಬರ‍್ಪಾಕಾಶದೆಲರು ನವ ಸತ್ತ್ವ ||
ಈಶಪದ ಸುರಭಿವಾತದೆ ನಿನ್ನ ಹಳೆಯ ದು- |
ರ್ವಾಸನೆಗಳೋಡವೇಂ? - ಮರುಳ ಮುನಿಯ ||
(ತಂದ+ಉಸಿರು)(ಬರ‍್ಪ+ಆಕಾಶದ+ಎಲರು)(ದುರ್ವಾಸನೆಗಳ್+ಓಡವೇಂ)
210
ದೈವವನುವಹುದೆಂತು ಕರ್ಮವೊಳಿತಹುದೆಂತು |
ಜೀವದಿ ವಿವೇಕ ವಿಜ್ಞಾನಮಿಲ್ಲದಿರೆ? ||
ದೈವ ನೆರವಾದೀತು ಕರ್ಮಋಣ ಕರಗೀತು |
ಜೀವಿಯೆಚ್ಚರದಿನಿರೆ - ಮರುಳ ಮುನಿಯ ||
(ದೈವ+ಅನು+ಅಹುದು+ಎಂತು)(ಕರ್ಮ+ಒಳಿತು+ಅಹುದು+ಎಂತು)(ವಿಜ್ಞಾನಂ+ಇಲ್ಲದೆ+ಇರೆ)(ನೆರವು+ಆದೀತು)(ಎಚ್ಚರದಿನ್+ಇರೆ)
211
ಮನುಜ ಗಾತ್ರ ವ್ಯಕ್ತಿಯೊಳಮಿರ‍್ಪುದನುಪೂರ್ವಿ |
ಕಣವೊಂದರಿಂ ಭ್ರೂಣ ಪಿಂಡಾಂಗ ವಿವೃತಿ ||
ಜನಿಪುವದರಿಂ ಲೋಮ ನಖ ದಂತ ಶುಕ್ರಗಳು |
ತನುವೃದ್ಧಿಯುಂ ಕ್ರಮದೆ - ಮರುಳ ಮುನಿಯ ||
(ವ್ಯಕ್ತಿಯೊಳಂ+ಇರ‍್ಪುದ+ಅನುಪೂರ್ವಿ)(ಪಿಂಡ+ಅಂಗ)(ಜನಿಪುವು+ಅದರಿಂ)
212
ಕಾಯ ಯಂತ್ರದ ರಚನೆ ರೀತಿಗಳ ಪರಿಕಿಸಲು |
ಧೀಯುಕ್ತಿ ಸಂಧಾನವದುವೆ ವಿಜ್ಞಾನ ||
ಮೇಯಗಳ ಮೀರ‍್ದ ಸತ್ತ್ವಕ್ಕಾತ್ಮ ಸಂಸ್ಕೃತಿಯೆ |
ನೇಯವದುವೆ ತಪಸ್ಸು - ಮರುಳ ಮುನಿಯ ||
(ಸಂಧಾನ+ಅದುವೆ)(ಸತ್ತ್ವಕ್ಕೆ+ಆತ್ಮ)(ನೇಯ+ಅದುವೆ)
213
ಗಾಳಿ ಸಚ್ಚಿತ್ಪರಬ್ರಹ್ಮವುಸಿರುವ ಲೀಲೆ |
ಮೂಲೋಕದೊಳಗೆ ಹೊರಗೆಲ್ಲೆಡೆಯುಮಲೆತ ||
ಚಾಲಿಪ್ಪುದೆಲ್ಲವನು ಕೇಳ್ವರಾರಾರದನು ? |
ಮೂಲದ ರಹಸ್ಯವದು - ಮರುಳ ಮುನಿಯ ||
(ಸತ್+ಚಿತ್+ಪರಬ್ರಹ್ಮ+ಉಸಿರುವ)(ಹೊರಗೆ+ಎಲ್ಲೆಡೆಯುಂ+ಅಲೆತ)(ಚಾಲಿಪ್ಪುದು+ಎಲ್ಲವನು)(ಕೇಳ್ವರ್+ಆರಾರು+ಅದನು)(ರಹಸ್ಯ+ಅದು)
214
ನಿರಹಂತೆ ನಿಜಕರ್ಮ ನಿತ್ಯ ಸಂತೋಷಮಿವು |
ವರಲಕ್ಷಣಂ ಸಹಜ ಸರ್ವ ಧರ್ಮಕ್ಕಂ ||
ಚರಿಸು ನೀನದನು ಬಿಡದನುದಿನದ ಜೀವನದಿ |
ಪರಮಗತಿಯದರಿಂದೆ - ಮರುಳ ಮುನಿಯ ||
(ಸಂತೋಷಂ+ಇವು)(ನೀನ್+ಅದನು)(ಬಿಡದೆ+ಅನುದಿನದ)(ಪರಮಗತಿ+ಅದರಿಂದೆ)
215
ಅತ್ತತ್ತು ಸಗ್ಗಕ್ಕೆ ಹತ್ತುವಾಶೆಯನು ಬಿಡು |
ತುತ್ತು ಸುರಹಾಸ್ಯಕ್ಕೆ ನಿರ್ವೀರ್ಯ ಭಕ್ತಿ ||
ಉತ್ಥಾನದಿಂ ಬಾಳು ತತ್ತ್ವದಲಿ ಮನವಿರಿಸೆ |
ಸತ್ತ್ವೋನ್ನತಿಯೆ ಸಗ್ಗ - ಮರುಳ ಮುನಿಯ ||
(ಅತ್ತು+ಅತ್ತು)(ಹತ್ತುವ+ಆಶೆಯನು)(ಸತ್ತ್ವ+ಉನ್ನತಿಯೆ)
216
ಮಗುವ ನೋಯಿಪ ರುಜೆಗೆ ತಾಯ ಕಂಬನಿ ಮದ್ದೆ ? |
ದುಗುಡವಿಳಿವುದಜೀರ್ಣ ಪೊಡೆಯಿನಿಳಿದಂತೆ ||
ಜಗವ ನೋಯಿಪ ರುಜೆಗೆ ನಿನ್ನ ಮರುಕದಿನೇನು ? |
ಅಘಮಲವ ಕಳೆಯೆ ಹಿತ - ಮರುಳ ಮುನಿಯ ||
(ದುಗುಡ+ಇಳಿವುದು+ಅಜೀರ್ಣ)(ಪೊಡೆಯಿನ್+ಇಳಿದಂತೆ)(ಮರುಕದಿನ್+ಏನು)
217
ಮುನಿ ವಸಿಷ್ಠನ ಪತ್ನಿಯುಡುಪಥದೊಳಿರುವಂತೆ |
ಮನದ ಗವಿಯಾಳದೊಳಗಾತುಮದ ಸೊಡರು ||
ಮಿನುಗುತಿರ‍್ಪುದು ನೋಡು ದರ್ಶನೈಕಾಗ್ರ್ಯದಿಂ |
ನೆನೆದದನು ಬಲವ ಪಡೆ - ಮರುಳ ಮುನಿಯ ||
(ಪತ್ನಿ+ಉಡುಪಥದೊಳ್+ಇರುವಂತೆ)(ಗವಿ+ಆಳದ+ಒಳಗೆ+ಆತುಮದ)(ಮಿನುಗುತ+ಇರ‍್ಪುದು)(ದರ್ಶನ+ಏಕಾಗ್ರ್ಯದಿಂ)(ನೆನೆದು+ಅದನು)
218
ಧರ್ಮಮುಮಧರ್ಮದವೊಲಿಹುದು ನರಸಾಜದಲಿ |
ನಿರ್ಮಮದೆ ಧರ್ಮಂ ಮಮತ್ವದಿನಧರ್ಮಂ ||
ಮರ್ಮಿ ವಿಶ್ವಪ್ರಕೃತಿ ಕೆಣಕುವಳಧರ್ಮವನು |
ಧರ್ಮ ನಿನ್ನಯ ಪಾಡು - ಮರುಳ ಮುನಿಯ ||
(ಧರ್ಮಮುಂ+ಅಧರ್ಮದವೊಲ್+ಇಹುದು)(ಮಮತ್ವದಿನ್+ಅಧರ್ಮಂ)(ಕೆಣಕುವಳ್+ಅಧರ್ಮವನು)
219
ಕಾಲ ಬೇರಾಯ್ತೆಂದು ಗೋಳಾಡುವುದದೇಕೆ? |
ಲೀಲೆ ಜಗವೆನ್ನಲದು ಪರಿ ಪರಿ ಪರೀಕ್ಷೆ ||
ತಾಳೆಲ್ಲವನು ನಿನ್ನ ಸಂಯಮದ ಸತ್ತ್ವದಿಂ |
ಬಾಳುವುದೆ ಗೆಲವೆಲವೊ - ಮರುಳ ಮುನಿಯ ||
(ಬೇರೆ+ಆಯ್ತು+ಎಂದು)(ಗೋಳಾಡುವುದು+ಅದು+ಏಕೆ)(ಜಗ+ಎನ್ನಲ್+ಅದು)(ತಾಳ್+ಎಲ್ಲವನು)(ಗೆಲವು+ಎಲವೊ)
220
ಸುಂದರ ಕುರೂಪಗಳ ಮೈತ್ರಿಮಾತ್ಸರ್ಯಗಳ |
ಬಂಧು ಪರಕೀಯಗಳ ಲಾಭ ಲೋಭಗಳ ||
ದಂದುಗಗಳುಬ್ಬೆಗದಿ ಬೆಮರಿಸದಿರಾತ್ಮವಂ |
ದ್ವಂದ್ವಹಾನಿಯೆ ಮುಕ್ತಿ - ಮರುಳ ಮುನಿಯ ||
(ದಂದುಗಗಳ+ಉಬ್ಬೆಗದಿ)(ಬೆಮರಿಸದೆ+ಇರೆ+ಆತ್ಮವಂ)
221
ತನುವೆಚ್ಚರಿರಲು ಮನನಿದ್ರಿಸೆ ಸಮಾಧಿಯದು |
ಮನವೆಚ್ಚರಿರಲು ತನು ನಿದ್ರಿಸಿರೆ ಯೋಗ ||
ತನುಮನಸುಗಳು ಲೋಕಭಾರವೆನದಿರೆ ಶಾಂತಿ |
ಅನಿತರಜ್ಞತೆ ಮುಕ್ತಿ - ಮರುಳ ಮುನಿಯ ||
(ತನು+ಎಚ್ಚರ+ಇರಲು)(ಸಮಾಧಿ+ಅದು)(ಮನ+ಎಚ್ಚರ+ಇರಲು)(ಲೋಕಭಾರ+ಎನದೆ+ಇರೆ)(ಅನಿತರ+ಅಜ್ಞತೆ)
222
ವಿಜ್ಞಾನವೊಂದಿಹುದು ಪರತತ್ತ್ವ ದರ್ಶನಕೆ |
ಚಿದ್ಗ್ರಂಥಿತಯಂತ್ರವದಕಿಹುದು ಶುಚಿಸದನು ||
ದೃಗ್ದೃಶ್ಯ ದರ್ಶನತ್ರಯವೈಕ್ಯವಾದಂದು |
ಹೃದ್ಗುಹೆಯೊಳಾನಂದ - ಮರುಳ ಮುನಿಯ ||
(ವಿಜ್ಞಾನ+ಒಂದು+ಇಹುದು)(ಚಿತ್+ದ್ಗ್ರಂಥಿತಯಂತ್ರ+ಅದಕೆ+ಇಹುದು)(ಶುಚಿಸೆ+ಅದನು)(ದೃಕ್+ದೃಶ್ಯ)(ದರ್ಶನತ್ರಯ+ಐಕ್ಯ+ಆದಂದು)(ಹೃತ್+ಗುಹೆಯೊಳ್+ಆನಂದ)
223
ಜೀವದೊಡಗೂಡಿ ಬಂದಿರ‍್ಪ ವಾಸನೆಗಳಿಂ - |
ದಾವಿರ್ಭವಿಪ್ಪುದೀ ಸಂಸಾರ ವೃಕ್ಷ ||
ಸಾವುದಾತರು ವಾಸನೆಯ ಬೇರ ಸುಟ್ಟಂದು |
ಭಾವನಾಶವೆ ಮೋಕ್ಷ - ಮರುಳ ಮುನಿಯ ||
(ಜೀವದ+ಒಡಗೂಡಿ)(ಬಂದು+ಇರ‍್ಪ)(ವಾಸನೆಗಳಿಂದ+ಆವಿರ್ಭವಿಪ್ಪುದು+ಈ)(ಸಾವುದು+ಆ+ತರು)
224
ಹೃದಯವೊಂದಕ್ಷಿ ಜೀವಕೆ ಧಿಷಣೆಯೊಂದಕ್ಷಿ |
ಉದಿಪುದೆರಡೊಂದೆ ಮೂರನೆ ಸಂವಿದಕ್ಷಿ ||
ಅದರಿಂದತೀಂದ್ರಿಯಾಖಂಡ ಸತ್ಯಾನುಭವ- |
ವದೆ ಶಾಶ್ವತಾನಂದ - ಮರುಳ ಮುನಿಯ ||
(ಹೃದಯ+ಒಂದು+ಅಕ್ಷಿ)(ಧಿಷಣೆ+ಒಂದು+ಅಕ್ಷಿ)(ಉದಿಪುದು+ಎರಡು+ಒಂದೆ)(ಸಂವಿತ್+ಅಕ್ಷಿ)(ಅದರಿಂದ+ಅತೀಂದ್ರಿಯ+ಅಖಂಡ)(ಸತ್ಯಾನುಭವ+ಅದೆ)(ಶಾಶ್ವತ+ಆನಂದ)
225
ಕರ್ಮವೋ ದೈವಸಂಪ್ರೀತಿಯೋ ಸುಕೃತವೋ |
ಧರ್ಮಮಪ್ಪುದು ಜೀವ ಬಂಧ ಶೈಥಿಲ್ಯಂ ||
ನಿರ್ಮಮತೆಯಿಂದಲದು ಬಂಧಮೋಚಕಮಹುದು |
ನಿರ್ಮಮತೆ ಮುಕ್ತಿಯಲೆ - ಮರುಳ ಮುನಿಯ ||
(ಧರ್ಮಂ+ಅಪ್ಪುದು)(ನಿರ್ಮಮತೆ+ಇಂದಲ್+ಅದು)(ಬಂಧಮೋಚಕಂ+ಅಹುದು)(ಮುಕ್ತಿ+ಅಲೆ)
226
ನರನುಮಂತಲೆಯವೋಲ್ ಪರಿಪರಿದು ಬಸವಳಿದು |
ಬೆರೆತು ಜನಜೀವನದಿ ತನ್ನತನವಳಿಯೆ ||
ಚರ ಜಗನ್ಮೂಲದ ಸ್ಥಿರತತ್ತ್ವವನು ಬಯಸಿ |
ಕರಗುವುದೆ ಮುಕ್ತಿಪದ - ಮರುಳ ಮುನಿಯ ||
(ನರನುಮಂತು+ಎಲೆಯವೋಲ್)(ತನ್ನತನವ+ಅಳಿಯೆ)(ಜಗತ್+ಮೂಲದ)
227
ಅಲೆಯಿರದ ಕಡಲುಂಟೆ ಅಲೆಯದೇಂ ಚಲಚಲನ |
ಚಲನೆಯೇಂ ಪ್ರಕೃತಿಕೃತಸಲಿಲಸ್ವಭಾವ ||
ಅಲೆದಲೆದು ಕಡೆಗೆ ತಾಂ ಜಲಧಿಯಲಿ ವಿಲಯಿಪುದು |
ಅಲೆಗೆ ಜಲಧಿಯೆ ಮುಕ್ತಿ - ಮರುಳ ಮುನಿಯ ||
(ಕಡಲ್+ಉಂಟೆ)(ಅಲೆ+ಅದೇಂ)(ಅಲೆದು+ಅಲೆದು)
228
ಕೆರೆಗೆ ಸಾಧನ ಕಡಲು ಸಿದ್ಧಿ ನೀರಿನೊಳೈಕ್ಯ |
ನರನ ಸಾಧನೆ ಲೋಕ ಸಿದ್ಧಿಯಾತ್ಮೈಕ್ಯ ||
ಪರದಿಂದ ಬಂದವಂ ಪರಕೆ ಮರಳುವುದೆ ಗುರಿ |
ಸ್ಮರಿಸುವುದು ನೀನಿದನು - ಮರುಳ ಮುನಿಯ ||
(ನೀರಿನೊಳ್+ಐಕ್ಯ)(ಸಿದ್ಧಿಯಾತ್ಮ+ಐಕ್ಯ)(ನೀನ್+ಇದನು)
229
ಅಂತರಾತ್ಮದಿನಿಂದ್ರಿಯದ ಲೋಕ ಮಿಗಿಲೆಂಬ |
ಸಂತೃಪ್ತಿಗಿಂತ ಸಂಪತ್ತು ಪಿರಿದೆಂಬ ||
ಸ್ವಾಂತ ಶೋಧನೆಗಿಂತ ಭೋಗಾಪ್ತಿ ವರವೆಂಬ |
ಭ್ರಾಂತಿಯಳಿದೊಡೆ ಶಾಂತಿ - ಮರುಳ ಮುನಿಯ ||
(ಅಂತರಾತ್ಮದಿನ್+ಇಂದ್ರಿಯದ)(ಭೋಗ+ಆಪ್ತಿ)(ಭ್ರಾಂತಿ+ಅಳಿದೊಡೆ)
230
ಭೋಗೇಚ್ಛೆಯಿಂ ಗೃಹಾರಾಮಧನಲೋಭಗಳು |
ತ್ಯಾಗದಿಂ ಲೋಕಕಾರುಣ್ಯ ಪುಣ್ಯಗಳು ||
ರಾಗದುದ್ವೇಗವಿರದುಭಯಪ್ರವೃತ್ತಿಗಳ |
ಯೋಗದಿಂ ಶಾಂತಿಸುಖ - ಮರುಳ ಮುನಿಯ ||
(ಭೋಗ+ಇಚ್ಛೆಯಿಂ)(ಗೃಹ+ಆರಾಮ)(ರಾಗದ+ಉದ್ವೇಗ+ಇರದ+ಉಭಯ)
231
ಶಾಂತಿ ಜಗಕಿಲ್ಲದ ಅಶಾಂತಿಯದು ನಿನಗೇಕೆ? |
ಸಂತಾಪದಿಂದೆ ಸಂತಸವನೊಗೆಯಿಪೆಯಾ ? ||
ಅಂತರಂಗದೊಳೊ ಬಾಹ್ಯದೊಳೊ ಶಾಂತಿಯ ಮೂಲ |
ಸ್ವಾಂತಸುಸ್ಥಿತಿ ಶಾಂತಿ - ಮರುಳ ಮುನಿಯ ||
(ಸಂತಸವನ್+ಒಗೆಯಿಪೆಯಾ)
232
ಉಡುರಾಜನುಬ್ಬಿಳಿತ ಬಿಟ್ಟು ದೃಢನಾದಂದು |
ಕಡಲಲೆಗಳುರುಳಿಡದೆ ನಿದ್ದೆವೋದಂದು ||
ಗುಡುಗು ಸಿಡಿಲುಗಳುಳಿದು ಬಾನ್ ಮಳೆಯ ಕರೆದಂದು |
ಪೊಡವಿಗಪ್ಪುದು ಶಾಂತಿ - ಮರುಳ ಮುನಿಯ ||
(ಉಡುರಾಜನ+ಉಬ್ಬು+ಇಳಿತ)(ದೃಢನ್+ಆದಂದು)(ಕಡಲ್+ಅಲೆಗಳ್+ಉರುಳಿಡದೆ)(ಸಿಡಿಲುಗಳ್+ಉಳಿದು)(ಪೊಡವಿಗೆ+ಅಪ್ಪುದು)
233
ತರಣಿಯುರಿಯದೆ ಜಗಕೆ ತಂಬೆಳಕನೆರೆವಂದು |
ಕೊರೆ ಬಿರುಸುಗಳ ತೊರೆದು ಗಾಳಿ ಸುಳಿವಂದು ||
ಪುರುಷ ಹೃದಯಂ ಸತ್ತ್ವಪರಿಪೂರ್ಣವಿರುವಂದು |
ಧರಣಿಗಪ್ಪುದು ಶಾಂತಿ - ಮರುಳ ಮುನಿಯ ||
(ತರಣಿ+ಉರಿಯದೆ)(ತಂಪು+ಬೆಳಕನು+ಎರೆವಂದು)(ಸತ್ತ್ವಪರಿಪೂರ್ಣ+ಇರುವಂದು)(ಧರಣಿಗೆ+ಅಪ್ಪುದು)
234
ಅಂತರ್ಧನಂ ಬಾಹ್ಯಧನಕಿಂತ ಮಿಗಿಲೆಂದು |
ಸ್ವಾಂತಶಿಕ್ಷಣೆ ರಾಜ್ಯವಿಧಿಗೆ ಮೇಲೆಂದು ||
ಅಂತಶ್ಯಮಂ ಪ್ರಕೃತಿ ವಿಷಮಗಳ ಹಾಯ್ದಂದು |
ಶಾಂತಿ ನರಮಂಡಲಕೆ - ಮರುಳ ಮುನಿಯ ||
(ಅಂತರ್+ಧನಂ)(ಮಿಗಿಲ್+ಎಂದು)(ಮೇಲ್+ಎಂದು)(ಅಂತಃ+ಶ್ಯಮಂ)(ಹಾಯ್ದ+ಅಂದು)
235
ಸಾಮಾಜಿಕಾಧಿಕೃತಿ ಸಂಪತ್ತುಗಳ ಬಾಹ್ಯ |
ಸಾಮ್ಯವಿಧಿ ಶೃಂಖಲೆಯ ಜನಕೆ ತೊಡಿಸಿದೊಡೇಂ? ||
ಧೀಮನಗಳಂತರ್ಧನದೊಳವರ್ ಸಮರಾಗೆ |
ಭೂಮಿತಾಯಿಗೆ ಶಾಂತಿ - ಮರುಳ ಮುನಿಯ ||
(ಸಾಮಾಜಿಕ+ಅಧಿಕೃತಿ)(ತೊಡಿಸಿದೊಡೆ+ಏಂ)(ಧೀಮನಗಳ+ಅಂತರ್+ಧನದೊಳ್+ಅವರ್)(ಸಮರ್+ಆಗೆ)
236
ನೈಸರ್ಗಿಕದಿನಂತರಂಗವಸಮದೊಳಿರಲು |
ವೈಷ್ಯಮ್ಯವೆಂತಿರದು ನರಬಹಿರ್ನಯದೊಳ್ ? ||
ಆಶೆಯಾವೇಗವನವರ್ ಸಮದಿ ತಡೆದಂದು |
ಭೂಶಾಂತಿಗೆಡೆಯಹುದೊ - ಮರುಳ ಮುನಿಯ ||
(ನೈಸರ್ಗಿಕದಿಂ+ಅಂತರಂಗವು+ಅಸಮದೊಳ್+ಇರಲು) (ವೈಷ್ಯಮ್ಯ+ಎಂತು+ಇರದು) (ಆಶೆಯ+ಆವೇಗವನ್+ಅವರ್) (ಭೂಶಾಂತಿಗೆ+ಎಡೆ+ಅಹುದೊ)
237
ಪೂರುಷಂ ಸೃಷ್ಟಿಶಿಶು ಮಾತೆಯೊಳೆ ಕೃತ್ರಿಮದ |
ಬೇರಿರಲ್ ಸಂತಾನ ಋಜುವಪ್ಪುದೆಂತು ? ||
ನಾರುತೊಗಟಿರದೆ ಮರೆವೆಲ್ಲ ಹೂವಾದಂದು |
ಧಾರುಣಿಗೆ ಶಾಂತಿಯಿಲೊ - ಮರುಳ ಮುನಿಯ ||
(ಮಾತೆಯ+ಒಳೆ) (ಬೇರ್+ಇರಲ್) (ಋಜು+ಅಪ್ಪುದು+ಎಂತು) (ನಾರುತೊಗಟು+ಇರದೆ) (ಹೂ+ಆದಂದು)
238
ವರ್ಗಸೋಪಾನ ನೈಸರ್ಗಿಕ ಸಮಾಜದಲಿ |
ದುರ್ಗತಿಯದೇನಲ್ಲ ತಗ್ಗಿರಲಹಂತೆ ||
ಭರ್ಗನಿತ್ತೆಡೆಯಿಂದಲಾದನಿತು ಸೇವೆಯ ಸ - |
ಮರ್ಪಿಸುತ ಧನ್ಯನಾಗು - ಮರುಳ ಮುನಿಯ ||
(ದುರ್ಗತಿ+ಅದು+ಏನ್+ಅಲ್ಲ)(ತಗ್ಗಿ+ಇರಲ್+ಅಹಂತೆ)(ಭರ್ಗನು+ಇತ್ತ+ಎಡೆಯಿಂದಲ್+ಆದನಿತು)
239
ಹೊರಗೆ ಘನಲೋಕ ನಿನ್ನೊಳಗೆ ಸುಯ್ವ ರಹಸ್ಯ |
ಎರಡಕಂ ನಡುವೆ ಸುಳಿಸುಳಿವ ಮುಗಿಲ ಪೊರೆ ||
ಅರಿತು ನೀಂ ಮೂರನದಕದಕೆ ಸಲುವುದ ಸಲಿಸೆ |
ಇರುವೆಡೆಯೆ ಪರ ನಿನಗೆ - ಮರುಳ ಮುನಿಯ ||
(ಮೂರನ್+ಅದಕೆ+ಅದಕೆ)(ಇರುವ+ಎಡೆಯೆ)
240
ಅಹಮನಹಮುಗಳ್ ಜೀವರಥಕೆರಡು ಕೀಲುಗಳು |
ಬಹುವೇಗಮಹಮಿಂದೆ ವೇಗಮಿತಿಗನಹಂ ||
ವಿಹಿತಮಿದ್ದೊಡಹಂತೆ ನಿರಹಂತೆಯಾಜ್ಞೆಯಲಿ |
ಸುಹಿತ ರಥಸಂಚಾರ - ಮರುಳ ಮುನಿಯ ||
(ಅಹಮ್+ಅನಹಮುಗಳ್) (ಜೀವರಥಕೆ+ಎರಡು) (ಬಹುವೇಗಮ್+ಅಹಂ+ಇಂದೆ) (ವೇಗಮಿತಿಗೆ+ಅನಹಂ) (ವಿಹಿತಂ+ಇದ್ದೊಡೆ+ಅಹಂತೆ)(ನಿಃ+ಅಹಂತೆ+ಆಜ್ಞೆಯಲಿ)
241
ಕರ್ಮವಶದಿಂ ಸ್ಥಾನ ನಿಯತ ಲೋಕದಿ ನಿನಗೆ |
ಧರ್ಮನಿಶ್ಚಯವಪ್ಪುದಾ ಸ್ಥಾನದಂತೆ ||
ಭರ್ಮ ಸಂದಾಯ ನಿನಗಾಧರ್ಮಸಾಧನಕೆ |
ಮರ್ಮವಿದು ಧನ ನಯದಿ - ಮರುಳ ಮುನಿಯ ||
(ಧರ್ಮನಿಶ್ಚಯ+ಅಪ್ಪುದು+ಆ)(ನಿನಗೆ+ಆ+ಧರ್ಮಸಾಧನಕೆ)(ಮರ್ಮ+ಇದು)
242
ಅರ್ಚನೆ ಜಪ ಧ್ಯಾನ ಯಾತ್ರೆ ಮನದ ಸ್ಥಿತಿಗೆ |
ಚರ್ಚೆ ತರ್ಕ ವಿಚಾರ ಮತಿಯ ವಿಶದತೆಗೆ ||
ಪೆರ‍್ಚಿದ ತಪೋಯೋಗಯಜ್ಞಾದಿಯಾತುಮದ |
ವರ್ಚಸ್ಸಿಗಪ್ಪುದೆಲೊ - ಮರುಳ ಮುನಿಯ ||
(ತಪೋಯೋಗ+ಯಜ್ಞ+ಆದಿ+ಆತುಮದ)(ವರ್ಚಸ್ಸಿಗೆ+ಅಪ್ಪುದು+ಎಲೊ)
243
ದೇವನಲಿ ಭಕ್ತಿ ದೈಹಿಕ ಭೋಗದಿ ವಿರಕ್ತಿ |
ಜೀವಲೋಕದಿ ಮೈತ್ರಿಯೀ ತ್ರಿದಳಬಿಲ್ವಂ ||
ಭಾವುಕನೊಳಧ್ಯಾತ್ಮದಲ್ಲಿ ಪಲ್ಲವಿಸಿರಲು |
ಪಾವನವೊ ಜನ್ಮಕ್ಕೆ - ಮರುಳ ಮುನಿಯ ||
(ಭಾವುಕನೊಳು+ಅಧ್ಯಾತ್ಮದಲ್ಲಿ)(ಪಲ್ಲವಿಸಿ+ಇರಲು)
244
ಆಕಾರವೆನೆ ರೂಪನಿಯತಿಯದು ಗಾತ್ರಮಿತಿ |
ರೇಖೆಯೊಳು ಮಿತಬಡಿಸುವೆಯ ಅಪರಿಮಿತವ ? ||
ಬೇಕು ಮಿತಮತಿಯ ಹಿಡಿತಕೆ ಹಿರಿಯ ಗುರುತೊಂದು |
ಸಾಕಾರಮಂತುಚಿತ - ಮರುಳ ಮುನಿಯ ||
(ಗುರುತು+ಒಂದು)(ಸಾಕಾರಮಂತು+ಉಚಿತ)
245
ಮೆಚ್ಚಿದರು ಮೂರ‍್ಮಂದಿ ಪೆಚ್ಚೆಂದರಾರ‍್ಮಂದಿ |
ಸ್ವಚ್ಚಮತಿಗಿದು ಹುಚ್ಚು ಹುಚ್ಚು ಕೃತಿ ತಾನೇ? ||
ನೆಚ್ಚಿ ಬಾಳ್ವಜ್ಞಂಗೆ ಕಗ್ಗ ಮರುಕಗ್ಗ ರುಚಿ |
ಅಚ್ಯುತ ಹಸಾದ ರುಚಿ - ಮರುಳ ಮುನಿಯ ||
(ಮೂರ್+ಮಂದಿ)(ಪೆಚ್ಚು+ಎಂದರು+ಆರ‍್+ಮಂದಿ)(ಸ್ವಚ್ಚಮತಿಗೆ+ಇದು)(ಬಾಳ್ವ+ಅಜ್ಞಂಗೆ)
246
ಕಣ್ಣ ತುಂಬಲು ಕೇಶವಾಕಾರವಿರದೆ ಜ- |
ಕ್ಕಣ್ಣನಾ ಬೇಲೂರ ದೇಗುಲದೊಳೆಂತಾ- ||
ಚನ್ನೆಯರ ಮನ್ನೆಯರ ರಸಿಕ ಪ್ರಸನ್ನೆಯರ |
ಸನ್ನೆಗಳ ತರಲಾಯ್ತು? - ಮರುಳ ಮುನಿಯ ||
(ಕೇಶವ+ಆಕಾರ+ಇರದೆ)(ಜಕ್ಕಣ್ಣನು+ಆ)(ದೇಗುಲದೊಳು+ಎಂತು+ಆ)(ತರಲು+ಆಯ್ತು)
247
ರಾಘವಾಕೃತಿಯ ತಾಂ ಕಣ್ಣಾರೆ ಕಾಣದಿರೆ |
ತ್ಯಾಗರಾಜನ ಮುಖದೆ ಲಲಿತ ಭಾವಗಳು ||
ರಾಗರಾಗಗಳಾಗಿ ಪರಿದು ಬರುತಿರ‍್ದಪುವೆ ? |
ವಾಗ್ಗೇಯ ಸತ್ಯವದು - ಮರುಳ ಮುನಿಯ ||
(ರಾಘವ+ಆಕೃತಿಯ)(ಕಾಣದೆ+ಇರೆ)
248
ಕಡಲ ಪನಿಯೊಂದು ಕಡಲನು ತಣಿಪ ಮರ್ಯಾದೆ |
ಗಿಡದ ಹೂವೊಂದು ಗಿಡವನರ್ಚಿಸುವ ರೀತಿ ||
ಪೊಡವಿಯನ್ನು ಮಣ್ಣ ಹಿಡಿಯೊಂದು ಪೂಜಿಪ ಸೊಗಸು |
ಬಡಜೀವ ದೇವನನು - ಮರುಳ ಮುನಿಯ ||
(ಗಿಡವನು+ಅರ್ಚಿಸುವ)
249
ಬೇಸಿಗೆಯೊಳೆಂದೊ ಸಂಜೆಯೊಳಾವಗಮೊ ಮೆಲನೆ |
ಬೀಸಿ ತಂಗಾಳಿ ತಾನಾಗಿ ಬರುವಂತೆ ||
ಈಶಕೃಪೆ ಬೀಸೀತು ಮನದಳಲ ನೀಗೀತು |
ಸೈಸು ನೀನದುವರಂ - ಮರುಳ ಮುನಿಯ ||
(ಬೇಸಿಗೆಯೊಳ್+ಎಂದೊ)(ಸಂಜೆಯೊಳ್+ಆವಗಮೊ)(ಮನದ+ಅಳಲ)(ನೀನ್+ಅದುವರಂ)
250
ಉದ್ಯಾನದುಜ್ಜುಗೆಯ ದುಡಿತಕ್ಕೆ ಫಲವೇನು ? |
ನಿತ್ಯ ಕಿಸಲಯ ಕುಸುಮ ನವಸೃಷ್ಟಿ ವೀಕ್ಷೆ ||
ಉದ್ಯತನ್ ಬ್ರಹ್ಮನಂತನವರತ ಸೃಷ್ಟಿಯಲಿ |
ಸದ್ಯಸ್ಕತಾ ತೋಷಿ - ಮರುಳ ಮುನಿಯ ||
(ಉದ್ಯಾನದ+ಉಜ್ಜುಗೆಯ)(ಬ್ರಹ್ಮನಂತೆ+ಅನವರತ)
251
ಜೀವನದ ಕಷ್ಟದಲಿ ದೈವವನೆ ನಂಬಿ ನೀಂ |
ದೈವ ಮಾಡಿಪುದೆಲ್ಲವನು ತಡೆವುದೆಲ್ಲ ||
ದೈವದಧಿಕಾರದಿಂ ಪೆರತೊಂದುಮಿರದಲ್ಲಿ |
ದೈವವೇ ಪರಮಗತಿ - ಮರುಳ ಮುನಿಯ ||
(ಮಾಡಿಪುದು+ಎಲ್ಲವನು)(ದೈವದ+ಅಧಿಕಾರದಿಂ)(ಪೆರತು+ಒಂದುಂ+ಇರದು+ಅಲ್ಲಿ)
252
ಉದ್ಯಮದಿ ಸಂಯಮಂ ಪೌರುಷನಯದ್ವಯಂ |
ಸದ್ಯೋಚಿತಪ್ರಕಾರವನರಿತ ಸಾಸಂ ||
ಆದ್ಯಕರ್ತನನುಗ್ರಹಿಸಲಹುದು ಪುರುಷಂಗೆ |
ಸದ್ವಿಜಯಮೈ ದಿಟದಿ - ಮರುಳ ಮುನಿಯ ||
(ಸದ್ಯ+ಉಚಿತ+ಪ್ರಕಾರವನ್+ಅರಿತ)(ಆದ್ಯಕರ್ತನ್+ಅನುಗ್ರಹಿಸಲ್+ಅಹುದು)(ಸತ್+ವಿಜಯಮೈ)
253
ಜೀವ ಜೀವಂ ಬೇರೆ ಜೀವಚರಿತಂ ಬೇರೆ |
ಜೀವಿಸೈ ನಿನ್ನಂತೆ ನೀನು ನೈಜದಲಿ ||
ಪಾವನಂಬರೆಸು ಜೀವವ ದಿವಸದಿಂ ದಿನಕೆ |
ದೈವಕ್ಕೆ ತಲೆಬಾಗು - ಮರುಳ ಮುನಿಯ ||
254
ಕಂಗಳಿಗೆ ಮೆಯ್ದೋರಿ ಕರೆಗೆ ಮಾರುಲಿಯುಲಿದು |
ಸಂಕಟದಿ ಬಂದು ಬಳಿಯಿರುವೆ ನಾನೆಂದು ||
ಸಂಗಡಿಗನಾಗಲೊಲ್ಲದ ದೈವವಾರ‍್ಗೇನು ? |
ತಿಂಗಳಿಲ್ಲದೆ ಶಶಿಯೆ - ಮರುಳ ಮುನಿಯ ||
(ಮೆಯ್+ತೋರಿ) (ಮಾರುಲಿ+ಉಲಿದು) (ನಾನ್+ಎಂದು) (ಸಂಗಡಿಗನ್+ಆಗಲು+ಒಲ್ಲದ) (ದೈವವು+ಆರ‍್ಗೇನು) (ತಿಂಗಳು+ಇಲ್ಲದೆ)
255
ಮನುಜನಾಗದ ಮಾನುಷಸ್ನೇಹಕಿರದ ನಿ- |
ರ್ಗುಣಿ ದೈವವಾಗಿರಲು ಭಕ್ತಿ ಬರಿದಲ್ತೆ? ||
ದನಿಗೆ ಮಾರ‍್ದನಿಗುಡದ ಕೈಗೆ ಕೈಪಿಡಿ ಕುಡದ |
ಅನುದಾರಿ ದೈವವೇಂ? - ಮರುಳ ಮುನಿಯ ||
(ಮನುಜನ್+ಆಗದ)(ಮಾನುಷಸ್ನೇಹಕೆ+ಇರದ)(ದೈವ+ಆಗಿರಲು)(ಬರಿದು+ಅಲ್ತೆ)(ಮಾರ‍್ದನಿ+ಕುಡದ)
256
ಪಾತಿಗಳನಗೆದು ಗೊಬ್ಬರವಿಕ್ಕಿ ನೀರೆರೆದು |
ಪ್ರೀತಿಯಿಂ ತರುಲತೆಯ ಕಳೆತೆಗೆದು ನಿಚ್ಚಂ ||
ನೂತನದ ಪುಷ್ಪಪಲ್ಲವಲಕ್ಷ್ಮಿಯಿಂ ನಲಿವ |
ತೋಟಗಾರನೊ ಬೊಮ್ಮ - ಮರುಳ ಮುನಿಯ ||
(ಪಾತಿಗಳನು+ಅಗೆದು)(ಗೊಬ್ಬರ+ಇಕ್ಕಿ)(ನೀರ್+ಎರೆದು)
257
ಮಿತವಿರಲಿ ನಿನ್ನೆಲ್ಲ ಜಗದ ವರ್ತನೆಗಳಲ್ಲಿ |
ಅತಿರೇಕದಿಂದೊಳಿತೆ ವಿಷಮವಾದೀತು |
ಸತತ ನರಯತ್ನ ಮಿತಮಿರ‍್ದೊಡಂ ವ್ಯಾಪ್ತಿ ನಿ- |
ಶ್ಚಿತವಯ್ಯ ಜಯಸಿದ್ಧಿ - ಮರುಳ ಮುನಿಯ ||
(ಅತಿರೇಕದಿಂದ+ಒಳಿತೆ)(ಮಿತ+ಇರ‍್ದೊಡಂ)
258
ಉರದೊಳದ ನೀನರಸು ಶಿರವ ದೀವಿಗೆ ಮಾಡು |
ಕರ ಚರಣ ಮೊದಲಾದುವೊರೆವುದನು ಕೇಳು ||
ಅರಿವುಗಣ್ ನಿನ್ನೊಳಗೆ ಪೊರೆಯು ಮುಸುಕಿಹುದದನು |
ಪರಿಶುದ್ಧಗೊಳಿಸದನು - ಮರುಳ ಮುನಿಯ ||
(ಉರದೊಳ್+ಅದ) (ನೀನ್+ಅರಸು) (ಮೊದಲಾದುವು+ಒರೆವುದನು) (ನಿನ್ನ+ಒಳಗೆ) (ಮುಸುಕಿಹುದು+ಅದನು) (ಪರಿಶುದ್ಧಗೊಳಿಸು+ಅದನು)
259
ಶುದ್ಧಮೊದಲಿದ್ದು ಕೆಸರಿನ ಮಡುವಿನಲಿ ಬಿದ್ದು |
ಒದ್ದೆಯಲಿ ಸಂಸಾರವೆಂದು ತಾರಾಡಿ ||
ಒದ್ದಾಡಿ ಮೈಕೊಡವಿ ಮತ್ತೆ ಪೂರ್ವದಲಿದ್ದ |
ಶುದ್ಧತೆಯಡರ‍್ವುದದು - ಮರುಳ ಮುನಿಯ ||
(ಮೊದಲ್+ಇದ್ದು)(ಸಂಸಾರ+ಎಂದು)(ಪೂರ್ವದಲ್+ಇದ್ದ)(ಶುದ್ಧತೆಯ+ಅಡರ‍್ವುದು+ಅದು)
260
ನೆಲನ ಬಿಡದಡಿ ರೆಕ್ಕೆ ತೊಡದ ಮೈಯಾದೊಡಂ |
ಕೆಳಕೆ ಮೇಲಕೆ ನರನು ಮೊಗವ ತಿರುಗಿಸನೇಂ ? ||
ತಲೆಯ ತಾನೆತ್ತಿ ಗಗನಕೆ ಕಣ್ಣ ಸಾರ‍್ಚಿದಾ |
ಗಳಿಗೆಯೇ ವಿಷ್ಣು ಪದ - ಮರುಳ ಮುನಿಯ ||
(ಬಿಡದ+ಅಡಿ)(ಮೈ+ಆದೊಡಂ)(ತಾನ್+ಎತ್ತಿ)
261
ಕೂಡುವುದು ಚೆದರುವುದು ಮತ್ತೊಟ್ಟು ಕೂಡುವುದು |
ಓಡಾಡಿ ಗುಡುಗಿ ಮಿಂಚೆಸೆದು ಕರಗುವುದು ||
ಕಾಡಿ ಭೂಮಿಯನುಬ್ಬೆಗಂಬಡಿಸಿ ಕಡೆಗೆಂದೊ |
ಮೋಡ ಮರೆಗರೆಯುವುದು - ಮರುಳ ಮುನಿಯ ||
(ಮತ್ತೆ+ಒಟ್ಟು)(ಮಿಂಚ್+ಎಸೆದು)(ಭೂಮಿಯನ್+ಉಬ್ಬೆಗಂಬಡಿಸಿ)(ಕಡೆಗೆ+ಎಂದೊ)
262
ಇಂದ್ರಿಯ ಸಮಸ್ತದಖಿಲಾನುಭವಗಳ ನೀನು |
ಕೇಂದ್ರೀಕೃತಂಗೆಯ್ದು ಮನನದಿಂ ಮಥಿಸಿ ||
ತಂದ್ರಿಯಿರದಾತ್ಮ ಚಿಚ್ಛಕ್ತಿಯಿಂದುಜ್ಜುಗಿಸೆ |
ಸಾಂದ್ರತತ್ತ್ವಪ್ರಾಪ್ತಿ - ಮರುಳ ಮುನಿಯ ||
(ಸಮಸ್ತದ+ಅಖಿಲ+ಅನುಭವಗಳ)(ತಂದ್ರಿಯಿರದ+ಆತ್ಮ)(ಚಿಚ್ಛಕ್ತಿಯಿಂದ+ಉಜ್ಜುಗಿಸೆ)
263
ಗುರಿಯೊಂದು ಬೇಕು ಜಗದಡವಿಯಲಿ ಪಥ ಕಾಣೆ |
ತಿರುತಿರುಗಿ ಬಳಬಳಲಿ ಪಾಳಾಗದಿರೆ ಬಾಳ್ ||
ಸ್ಥಿರಸತ್ಯವಿರಬೇಕು ಬಾಳ್ ಪ್ರದಕ್ಷಿಣವದಕೆ |
ಅರಸು ನೀನದನುರದಿ - ಮರುಳ ಮುನಿಯ ||
(ಗುರಿ+ಒಂದು)(ಜಗದ+ಅಡವಿಯಲಿ)(ಪಾಳಾಗದೆ+ಇರೆ)(ಸ್ಥಿರಸತ್ಯ+ಇರಬೇಕು)(ಪ್ರದಕ್ಷಿಣೆ+ಅವದಕೆ)(ನೀನ್+ಅದನು+ಉರದಿ)
264
ಬಾಹ್ಯದಿಂದಂತರಕಮಂತರದೆ ಬಾಹ್ಯಕಂ |
ಗ್ರಾಹ್ಯಮಾಗಿಹುದೊಂದಖಂಡೈಕ ರಸವು ||
ಗುಹ್ಯವದು ನಿತ್ಯಾನುಸಂಧಾನದಿಂದ ಲವ- |
ಗಾಹ್ಯವಾ ರಸತತ್ತ್ವ - ಮರುಳ ಮುನಿಯ ||
(ಬಾಹ್ಯದಿಂದ+ಅಂತರಕಂ+ಅಂತರದೆ) (ಗ್ರಾಹ್ಯಂ+ಆಗಿ+ಇಹುದು+ಒಂದು+ಅಖಂಡ+ಏಕ) (ಗುಹ್ಯ+ಅದು) (ನಿತ್ಯಾ+ಅನುಸಂಧಾನದಿಂದ) (ಲವಗಾಹ್ಯವು+ಆ)
265
ಗಿರಿಶಿಖರದಲಿ ತತ್ತ್ವ, ಧರೆಯ ಹಳ್ಳದಿ ನೀನು |
ಗರುಡರಕ್ಕೆಯನು ನೀಂ ಪಡೆಯದಿರ‍್ದೊಡೆಯುಂ ||
ಸ್ಪುರಿಸಲಿನಿತಾಗಾಗ ಶಿಖರ ನಿನ್ನಯ ಕಣ್ಗೆ |
ಪುರುಳಹುದೊ ಕಾಲಿಗದು - ಮರುಳ ಮುನಿಯ ||
(ಪಡೆಯದೆ+ಇರ‍್ದೊಡೆಯುಂ)(ಸ್ಪುರಿಸಲು+ಇನಿತು+ಆಗಾಗ)(ಪುರುಳ್+ಅಹುದೊ)(ಕಾಲಿಗೆ+ಅದು)
266
ಜಯವೆಲ್ಲಿ ಧರ್ಮಕಮಧರ್ಮಕಂ ಜಯವೆಲ್ಲಿ ? |
ಜಯವೇನಜಯವೇನನಂತಕೇಳಿಯಲಿ ? ||
ಜಯದ ಹಾದಿಗಳೆಲ್ಲ ಧರ್ಮದೀಪ್ತಗಳಲ್ಲ |
ಸ್ವಯಮಲಿಪ್ತನಿಗೆ ಜಯ- ಮರುಳ ಮುನಿಯ ||
(ಧರ್ಮಕಂ+ಅಧರ್ಮಕಂ) (ಜಯವೇನು+ಅಜಯವೇನು+ಅನಂತಕೇಳಿಯಲಿ) (ಹಾದಿಗಳು+ಎಲ್ಲ) (ಧರ್ಮದೀಪ್ತಗಳ್+ಅಲ್ಲ) (ಸ್ವಯಂ+ಅಲಿಪ್ತನಿಗೆ)
267
ನ್ಯಾಯಕೇ ಜಯವಂತೆ , ಧರ್ಮಜನೆ ಸಾಕ್ಷಿಯಲ |
ದಾಯಿಗರ ಸದೆದು ದೊರೆತನವ ಗೆದ್ದನಲ ||
ಆಯಸಂಬಟ್ಟುಂಡುದೇನೆನ್ನದಿರ್ ಪೈತ್ರ |
ವಾಯಸಗಳುಂಡುವಲ , - ಮರುಳ ಮುನಿಯ ||
(ಆಯಸಂಬಟ್ಟು+ಉಂಡುದು+ಏನು+ಎನ್ನದಿರ್)(ವಾಯಸಗಳ್+ಉಂಡು+ಅಲ)
268
ಜಯವಂತೆ ಧರ್ಮಕ್ಕೆ, ಧರ್ಮ ಜಯಿಸುವತನಕ |
ವ್ಯಯವೆಷ್ಟು ? ಲೋಗರಾತ್ಮಕ್ಕೆ ಗಾಯವೆಷ್ಟು ? ||
ಭಯಪಡಿಸಿ ದಯೆಬಿಡಿಸಿ ನಯಗೆಡಿಸಿ ಬಂದ ಜಯ |
ಜಯವೊ? ಅಪಜಯಸಮವೊ? - ಮರುಳ ಮುನಿಯ ||
(ವ್ಯಯ+ಎಷ್ಟು)(ಲೋಗರ್+ಆತ್ಮಕ್ಕೆ)(ಗಾಯ+ಎಷ್ಟು)
269
ಕಡೆಗೆ ಜಗ ಸತ್ಯಕ್ಕೆ, ಜಯವೇನೊ ದಿಟವಂತೆ |
ತಡವೇಕೊ ! ಶೀಘ್ರದಿನೆ ಜಯ ಬಾರದೇಕೋ ! ||
ಪೊಡವಿ ಸತಿಸುತರು ಮತ್ತೈತರೆ ಹರಿಶ್ಚಂದ್ರ |
ನುಡುಗಿದ್ದ ಮುದಕನಲಿ - ಮರುಳ ಮುನಿಯ ||
(ತಡ+ಏಕೊ)(ಬಾರದು+ಏಕೋ)(ಮತ್ತೆ+ಐತರೆ)(ಹರಿಶ್ಚಂದ್ರನು+ಉಡುಗಿದ್ದ)
270
ಸತ್ಯಕೇ ಜಯವಂತೆ ! ಜಯವೆ ಸತ್ಯಕ್ಕಿರಲು |
ಮುತ್ತುವುವದೇಕದನು ಕಲಹ ಕಷ್ಟಗಳು ? ||
ಬತ್ತಿ ಸೊರಗದ ತುಟಿಗೆ ರುಚಿಸದೇ ಜಯದ ಫಲ ? |
ಪಟ್ಟೆತಲೆಗೇಹೂವು ? - ಮರುಳ ಮುನಿಯ ||
(ಸತ್ಯಕ್ಕೆ+ಇರಲು)(ಮುತ್ತುವುವು+ಅದು+ಏಕೆ+ಅದನು)
271
ಇರುವುದೆನಲೆಂದೆಂದುಮೆತ್ತೆತ್ತಲುಂ ನೆರೆದು |
ಕೊರೆವಡದೆ ಮಾರ‍್ಪಡದೆ ತಿರುಗದಲುಗದೆಯೆ ||
ಭರಿಪುದು ಚರಾಚರೋಭಯನವನದು ಧರಿಸಿಹುದು |
ಸ್ಥಿರತೆಯದು ಸತ್ಯವೆಲೊ - ಮರುಳ ಮುನಿಯ ||
(ಇರುವುದು+ಎನಲು+ಎಂದೆಂದುಂ+ಎತ್ತೆತ್ತಲುಂ) (ತಿರುಗದು+ಅಲುಗದೆಯೆ) (ಚರ+ಅಚರ+ಉಭಯನವನು+ಅದು) (ಸ್ಥಿರತೆ+ಅದು) (ಸತ್ಯ+ಎಲೊ)
272
ಶುಭ ಅಶುಭಗಳಿಗಂಜೆ ಸುಖದುಃಖಗಳಿಗಂಜೆ |
ಅಭಯ ಭಯಗಳಿಗಂಜೆ ಲೋಗರಿಂಗಂಜೆ ||
ಉಭಯಗಳ ಮೀರ್ದ ಶಾಂತಿಯ ಸತ್ಯವೊಂದಿಹುದು |
ಲಭಿಸಲದು ಶಾಶ್ವತವೊ - ಮರುಳ ಮುನಿಯ ||
(ಅಶುಭಗಳಿಗೆ+ಅಂಜೆ)(ಸುಖದುಃಖಗಳಿಗೆ+ಅಂಜೆ)(ಭಯಗಳಿಗೆ+ಅಂಜೆ)(ಲೋಗರಿಂಗೆ+ಅಂಜೆ) (ಸತ್ಯವೊಂದು+ಇಹುದು) (ಲಭಿಸಲ್+ಅದು)
273
ಹೃದಯಾಂಗಣದ ಗರ್ಭದೊಳಗಿಹುದು ತಿಳಿಚಿಲುಮೆ |
ವಿಧವಿಧದ ಲೋಕಾನುಭವದ ಹಾರೆಗಳು ||
ಬೆದಕಿ ಬಾವಿಯನಗೆಯೆ ಸತ್ಕಲೆಯ ಘಟಗಳಲಿ |
ಬದುಕಿಗೊದಗುವುದಮೃತ - ಮರುಳ ಮುನಿಯ ||
(ಹೃದಯ+ಅಂಗಣದ)(ಗರ್ಭದೊಳಗೆ+ಇಹುದು)(ಲೋಕ+ಅನುಭವದ) (ಬಾವಿಯನ್+ಅಗೆಯೆ) (ಸತ್+ಕಲೆಯ) (ಬದುಕಿಗೆ+ಒದಗುವುದು+ಅಮೃತ)
274
ಮೊದಲು ನಾನೆನಗೆ ಮೊದಲೂಟ ಮೊದಲಿನ ಪೀಠ |
ಮೊದಲು ನಾನೆನ್ನವರು ಬಳಿಕ ಉಳಿದವರು ||
ಇದು ಲೋಕದೆಲ್ಲ ಕಲಹಗಳ ದುಃಖದ ಮೂಲ |
ಅದುಮಿಕೊ ಅಹಂತೆಯನು - ಮರುಳ ಮುನಿಯ ||
(ನಾನ್+ಎನಗೆ)(ಮೊದಲ್+ಊಟ)(ನಾನ್+ಎನ್ನವರು)(ಲೋಕದ+ಎಲ್ಲ)
275
ನಾನು ನಾನೆಂದುರುಬಿ ನೋಡು ನಿನ್ನಿಕ್ಕೆಲದಿ |
ನಾನು ನಾನುಗಳ ಮರು ಬೊಬ್ಬೆ ಕೆರಳಿಹುದು ||
ನಾನು ನೀನುಗಳ ಬೊಬ್ಬೆಯೆ ಲೋಕದಲಿ ಹಬ್ಬ |
ಕ್ಷೀಣವಾಗಲಿ ನಾನು - ಮರುಳ ಮುನಿಯ ||
(ನಾನ್+ಎಂದು+ಉರುಬಿ)(ನಿನ್ನ+ಇಕ್ಕೆಲದಿ)(ಕ್ಷೀಣ+ಆಗಲಿ)
276
ಬೆನ್ನಲುಬನುಪಕೃತನೊಳುಡುಗಿಪುಪಕೃತಿಯೇನು ? |
ಅನ್ಯಾಶ್ರಯವ ಕಲಿತ ಲತೆ ನೆಟ್ಟಗಿಹುದೇ ? ||
ತನ್ನಿಂದ ತಾನೆ ಅಬಲಂ ಬಲಿಯಲನುವಾಗಿ |
ನಿನ್ನ ನೀಂ ಮರೆಯಿಸಿಕೊ - ಮರುಳ ಮುನಿಯ ||
(ಬೆನ್ನಲುಬನು+ಉಪಕೃತನೊಳು+ಉಡುಗಿಪ+ಉಪಕೃತಿಯೇನು)(ಅನ್ಯ+ಆಶ್ರಯವ) (ನೆಟ್ಟಗೆ+ಇಹುದೇ) (ಬಲಿಯಲು+ಅನುವಾಗಿ)
277
ಲೋಕೋಪಕಾರ ಶಿವನೊರ‍್ವನೆತ್ತುವ ಭಾರ |
ಏಕೆ ನಿನಗದನು ಹೊರುವಧಿಕಾರವವನು ||
ಬೇಕಾದವೊಲು ಗೆಯ್ಗೆ, ನಿನ್ನ ಮಮತಾಕ್ಷಯಕೆ |
ಲೋಕದಿಂದುಪಕಾರ - ಮರುಳ ಮುನಿಯ ||
(ಶಿವನ್+ಒರ‍್ವನ್+ಎತ್ತುವ)(ಹೊರುವ+ಅಧಿಕಾರವು+ಅವನು)(ಲೋಕದಿಂದ+ಉಪಕಾರ)
278
ತ್ಯಜಿಸಿ ನೀಂ ಭುಜಿಸುವುದು ಮನೆ ಸತ್ರವೆಂಬವೊಲು |
ಯಜಮಾನನಲ್ಲ ನೀನತಿಥಿಯೆಂಬವೊಲು ||
ಭುಜವ ಭಾರಕೆ ನೀಡು ರುಚಿಗೆ ರಸನೆಯ ನೀಡು |
ಭುಜಿಸು ಮಮತೆಯ ಮರೆತು - ಮರುಳ ಮುನಿಯ ||
(ಸತ್ರ+ಎಂಬವೊಲು)(ನೀನ್+ಅತಿಥಿ+ಎಂಬವೊಲು)
279
ರಾಮಾನುಜರ್ ಮನೆಯ ಹೊರನಿಂತ ಶಿಷ್ಯನನು |
ನಾಮವೇನೆನ್ನಲಾನಾನೆಂದನಾತಂ ||
ಬಾ ಮಗುವೆ ನಾಂ ಸತ್ತಮೇಲೆ ನೀಂ ಬರ‍್ಪುದೆಂ- |
ದಾ ಮುನಿಯ ಮಾತ ನೆನೆ - ಮರುಳ ಮುನಿಯ ||
(ನಾಮ+ಏನ್+ಎನ್ನಲ್+ಆ+ನಾನ್+ಎಂದನ್+ಆತಂ)(ಬರ‍್ಪುದು+ಎಂದ+ಆ)
280
ಅಹಿತನಾರ್ ನಿನಗಿಹದಿ ಪರದೊಳೆಲ್ಲಾದೊಡಂ |
ಇಹನವಂ ನಿನ್ನೊಳಿಲ್ಲಿಯೆ ಮನದ ಗವಿಯೊಳ್ ||
ಅಹಮೆಂಬ ರಾಕ್ಷಸಂ ಬಹುರೂಪಿ ಬಹುಮಾಯಿ |
ದಹಿಸು ನೀಂ ಮೊದಲವನ - ಮರುಳ ಮುನಿಯ ||
(ಅಹಿತನ್+ಆರ್)(ನಿನಗೆ+ಇಹದಿ)(ಪರದೊಳ್+ಎಲ್ಲಾದೊಡಂ)(ಇಹನ್+ಅವಂ) (ನಿನ್ನೊಳ್+ಇಲ್ಲಿಯೆ) (ಅಹಂ+ಎಂಬ)(ಮೊದಲ್+ಅವನ)
281
ನಿರ್ಮಮತೆಯಭ್ಯಾಸಕೆಂದು ಲೋಕದೊಳೆಲ್ಲ |
ಕರ್ಮಗಳ ಗೆಯ್ವನೆ ಮುಮುಕ್ಷು ಮಿಕ್ಕ ಜನ ||
ಧರ್ಮ ಧರ್ಮವೆನುತ್ತೆ ಪೋಷಿಪರಹಂಮತಿಯ |
ನಿರ್ಮಮತೆಯೇ ಮೋಕ್ಷ - ಮರುಳ ಮುನಿಯ ||
(ನಿರ್ಮಮತೆ+ಅಭ್ಯಾಸಕೆ+ಎಂದು)(ಲೋಕದೊಳು+ಎಲ್ಲ)(ಧರ್ಮ+ಎನುತ್ತೆ) (ಪೋಷಿಪರ್+ಅಹಂಮತಿಯ)
282
ನಿನ್ನ ಪಾಪವ ತೊಳೆಯೆ ನಿನ್ನ ಸತ್ಕರ್ಮಗಳು |
ಅನ್ಯರ‍್ಗದುಪಕಾರವೆನ್ನುವುದಹಂತೆ ||
ಪುಣ್ಯಂ ಕುಟುಂಬಪೋಷಣೆಯೆಂಬ ನೆವದಿನಿಳೆ- |
ಗನ್ಯಾಯವಾಗಿಪುದೆ? - ಮರುಳ ಮುನಿಯ ||
(ಸತ್+ಕರ್ಮಗಳು)(ಅನ್ಯರ‍್ಗೆ+ಅದು+ಉಪಕಾರ+ಎನ್ನುವುದು+ಅಹಂತೆ) (ನೆವದಿನ್+ಇಳೆಗೆ+ಅನ್ಯಾಯವಾಗಿಪುದೆ)
283
ನಿನ್ನನಾರ್ ನಿಯಮಿಸಿದರನ್ನವಸ್ತ್ರದನೆಂದು |
ಶೂನ್ಯವಪ್ಪುದೆ ಲೋಕ ನಿನ್ನ ಹಂಗಿರದೆ ? ||
ಸ್ವರ್ಣಗರ್ಭನ ಪಟ್ಟವನು ಧರಿಸಿ ನೀಂ ಜಗಕೆ |
ಕನ್ನವಿಡೆ ಬಂದಿಹೆಯ? - ಮರುಳ ಮುನಿಯ ||
(ನಿನ್ನನ್+ಆರ್)(ನಿಯಮಿಸಿದರ್+ಅನ್ನವಸ್ತ್ರದನ್+ಎಂದು)
284
ಹರಿಭಜನೆಯಾನಂದ ಕಿರಿಮಕ್ಕಳಾನಂದ |
ಸರಸಗೀತಾನಂದ ಕರುಣೆಯಾನಂದ ||
ಪರಕಾರ್ಯದಾನಂದ ನಿಃಸ್ವಾರ್ಥದಾನಂದ |
ಪುರುಷಹರುಷಂಗಳಿವು - ಮರುಳ ಮುನಿಯ ||
(ಹರಿಭಜನೆ+ಆನಂದ)(ಕಿರಿಮಕ್ಕಳ+ಆನಂದ)(ಸರಸಗೀತ+ಆನಂದ)(ಕರುಣೆಯ+ಆನಂದ) (ಪರಕಾರ್ಯದ+ಆನಂದ)(ನಿಃಸ್ವಾರ್ಥದ+ಆನಂದ)(ಹರುಷಂಗಳು+ಇವು)
285
ಅರುಣೋದಯದಾನಂದ ಗಿರಿಶೃಂಗದಾನಂದ |
ತೊರೆಯ ತೆರೆಯಾನಂದ ಹಸುರಿನಾನಂದ ||
ಮಲರು ತಳಿರಾನಂದವಿವು ಸೃಷ್ಟಿಯಾನಂದ |
ನಿರಹಂತೆಯಾನಂದ - ಮರುಳ ಮುನಿಯ ||
(ಅರುಣೋದಯದ+ಆನಂದ)(ಗಿರಿಶೃಂಗದ+ಆನಂದ)(ತೆರೆಯ+ಆನಂದ)(ತಳಿರ+ಆನಂದವು+ಇವು) (ಸೃಷ್ಟಿಯ+ಆನಂದ)(ನಿರಹಂತೆಯ+ಆನಂದ)
286
ಮಲರ ಕಂಪಂದಿನೆಲರಿನಲೆಗಳ ಪಿಡಿದು |
ಕಲೆತು ಕರಗುವುದಲ್ತೆ ಕಾಲ ಜಲಧಿಯಲಿ ||
ಒಳಿತು ಕೆಡಕುಗಳಂತು ನಿನ್ನ ಬಾಳರಲುಗಳು |
ಉಳಿಯುವುವನಂತದಲಿ - ಮರುಳ ಮುನಿಯ ||
(ಕಂಪು+ಅಂದಿನ+ಎಲರಿನ+ಅಲೆಗಳ)(ಕರಗುವುದು+ಅಲ್ತೆ)(ಕೆಡಕುಗಳು+ಅಂತು)(ಬಾಳ್+ಅರಲುಗಳು) (ಉಳಿಯುವುವು+ಅನಂತದಲಿ)
287
ಬಿಡಿಸು ಜೀವವನೆಲ್ಲ ಜಗದ ತೊಡಕುಗಳಿಂದ |
ಬಿಡು ಮಮತೆಯನುಮೆಲ್ಲ ಪುಣ್ಯದಾಶೆಯನುಂ ||
ದುಡಿದು ಲೋಕಕ್ಕದರ ಕಡಿತಕ್ಕೆ ಜಡನಾಗಿ |
ಕಡಿಯೆಲ್ಲ ಪಾಶಗಳ - ಮರುಳ ಮುನಿಯ ||
(ಜೀವವನ್+ಎಲ್ಲ)(ಮಮತೆಯನುಂ+ಎಲ್ಲ)(ಲೋಕಕ್ಕೆ+ಅದರ)
288
ಮಡುವಿಹುದು ನಿನಗಮಾ ಪರತತ್ವಕಂ ನಡುವೆ |
ಗುಡಿಯನೋ ಸೊಡರನೋ ಮತಿಗೊದಗಿದುದನು ||
ಪಿಡಿದು ನೀನಾಪಾರುಗಣೆಯೂರಿ ಹಾರಿದೊಡೆ |
ದಡವ ಸೇರುವೆ ದೃಢದಿ - ಮರುಳ ಮುನಿಯ ||
(ಮಡು + ಇಹುದು) (ನಿನಗಂ + ಆ) (ಮತಿಗೆ+ಒದಗಿದುದನು) (ನೀನ್+ಆ+ಪಾರುಗಣೆ+ಊರಿ)
289
ತುರಿಕಜ್ಜಿ ನಿನಗೆಂದು ಜಗಕದನು ಸೋಕಿಪುದೆ |
ಹೆರರ ಕಿವಿಗೇಕೆರೆವೆ ನಿನ್ನ ಕರೆಕರೆಯ? ||
ಕೊರಗು ಕಾರ್ಪಣ್ಯಗಳು ಮನಕಂಟುಜಾಡ್ಯಗಳು |
ನೆರೆಗದನು ಹಂಚದಿರು - ಮರುಳ ಮುನಿಯ ||
(ನಿನಗೆ + ಎಂದು) (ಜಗಕೆ + ಅದನು) (ಕಿವಿಗೆ + ಏಕೆ + ಎರೆವೆ) ( ಮನಕೆ + ಅಂಟುಜಾಡ್ಯಗಳು) (ನೆರೆಗೆ+ಅದನು) (ಹಂಚದೆ + ಇರು)
290
ಮಲವಿರದ ಮೈಯಿರದು ಕೊಳೆಯಿರದ ಮನವಿರದು |
ಗಳಿಗೆ ಗಳಿಗೆಯ ಬೆವರೆ ಬಾಳಿಕೆಯ ಕುರುಹು ||
ಕೊಳೆವುದಚ್ಚರಿಯಲ್ಲ, ಕೊಳೆಯದಿಹುದಚ್ಚರಿಯೊ |
ಜಳಕವಾಗಿಸು ಬಾಳ್ಗೆ - ಮರುಳ ಮುನಿಯ ||
(ಕೊಳೆವುದು+ಅಚ್ಚರಿಯಲ್ಲ)(ಕೊಳೆಯದೆ+ಇಹುದು+ಅಚ್ಚರಿಯೊ)(ಜಳಕ+ಆಗಿಸು)
291
ರಾಮಚಂದ್ರನ ಚರಿತೆ ಲೋಕಧರ್ಮಾದರ್ಶ |
ಶ್ಯಾಮಸುಂದರ ಚರಿತೆ ವಿಷಮ ಸಮಯನಮ ||
ಸೋಮೇಶ್ವರನ ರೂಪ ನಿರ್ದ್ವಂದ್ವ ಶಾಂತಿಮಯ |
ಈ ಮೂವರನು ಭಜಿಸೊ - ಮರುಳ ಮುನಿಯ ||
(ಲೋಕಧರ್ಮ+ಆದರ್ಶ)
292
ಮುಗಿಲಿಗೇರೆನುತಿಹರು ತತ್ತ್ವೋಪದೇಶಕರು |
ಬಿಗಿವುದಿಳೆಗೆಲ್ಲರನು ರೂಢಿಸಂಕೋಲೆ ||
ಗಗನ ಧರೆಯಿಂತು ದಡವಾಗೆ ಪರಿವುದು ನಡುವೆ |
ಜಗದ ಜೀವಿತದ ನದಿ - ಮರುಳ ಮುನಿಯ ||
(ಮುಗಿಲಿಗೆ+ಏರ್+ಎನುತ+ಇಹರು)(ತತ್ತ್ವ+ಉಪದೇಶಕರು)(ಬಿಗಿವುದು+ಇಳೆಗೆ+ಎಲ್ಲರನು)(ದಡ+ಆಗೆ)
293
ಪ್ರೀತಿಸಲು ಬಿಡುವಿಲ್ಲ ನೀತಿಕಥೆ ಬೇಕಿಲ್ಲ |
ಮಾತಂಗಡಿಯ ಕೊಳ್ಳು ಕೊಡುಬಿಡುಗಳಂತೆ ||
ಯಾತ ನಿರ್ಯಾತಂಗಳೇ ದೊಡ್ಡ ಬದುಕಂತೆ |
ಆತುರತೆ ಜಗಕಿಂದು - ಮರುಳ ಮುನಿಯ ||
(ಬಿಡುವು+ಇಲ್ಲ) (ಮಾತು+ಅಂಗಡಿಯ) (ಕೊಡುಬಿಡುಗಳು+ಅಂತೆ) (ಬದುಕು+ಅಂತೆ) (ಜಗಕೆ+ಇಂದು)
294
ಶ್ರಯಿಸು ನೀಂ ಸತ್ಯವನೆ ಭಾಗ್ಯವೆಂತಾದೊಡಂ |
ಬಯಸು ಧರ್ಮವ ಲಾಭವೆಂತು ಪೋದೊಡೆಯುಂ ||
ನಿಯಮಪಾಲನೆಯಿಂದ ಜಯ ಲೋಕಸಂಸ್ಥಿತಿಗೆ |
ಜಯವದು ನಿಜಾತ್ಮಕ್ಕೆ - ಮರುಳ ಮುನಿಯ ||
(ಭಾಗ್ಯ+ಎಂತಾದೊಡಂ)
295
ಅಲುಗಾಡುವೆಲೆ ಮೇಲೆ ನೆಲೆ ನೆಲಸಿ ಬೇರ್ ಕೆಳಗೆ |
ಚೆಲುವರ್ಧ ಬಲವರ್ಧ ಸೇರಿ ಮರವೊಂದು ||
ತಿಲಿವುದೀ ಪ್ರಕೃತಿ ಸಂಯೋಜನೆಯ ಸೂತ್ರವನು |
ಸುಳುವಹುದು ಬಾಳ - ಮರುಳ ಮುನಿಯ ||
(ಅಲುಗಾಡುವ + ಎಲೆ) (ಚೆಲುವ + ಅರ್ಧ) (ಬಲವು + ಅರ್ಧ) (ತಿಳಿವುದು + ಈ) (ಸುಳು + ಅಹುದು)
296
ಸಜ್ಜೀವನಕೆ ಸೂತ್ರವೆರಡು ಮೂರದು ಸರಳ |
ಹೊಟ್ಟೆ ಪಾಡಿಗೆ ವೃತ್ತಿ ಸತ್ಯಬಿಡದಿಹುದು ||
ಚಿತ್ತವೀಶನೊಳದುವೆ ಚಿಂತೆಗಳ ಬಿಟ್ಟಿಹುದು |
ಮೈತ್ರಿ ಲೋಕಕ್ಕೆಲ್ಲ - ಮರುಳ ಮುನಿಯ ||
(ಸತ್ + ಜೀವನಕೆ) (ಸೂತ್ರ + ಎರಡು) (ಮೂರ್ + ಅದು) (ಸತ್ಯಬಿಡದೆ + ಇಹುದು) (ಚಿತ್ತ + ಈಶನೊಳು + ಅದುವೆ)
(ಬಿಟ್ಟು + ಇಹುದು) (ಲೋಕಕ್ಕೆ + ಎಲ್ಲ)
297
ಏಕಾಕಿಯಿರ್ದು ಸಾಕಲ್ಯಕಾರ್ಜಿಸು ಬಲವ |
ಸಾಕಲ್ಯವೃತ್ತಿಯಿಂದೇಕತೆಗೆ ಬಲವ ||
ಕಾಕಾಕ್ಷಿಯುಗದೇಕಗೋಲದವೊಲಿರೆ ಜಯವು |
ಲೋಕ ನಿರ್ಲೋಕಗಳ - ಮರುಳ ಮುನಿಯ ||
(ಸಾಕಲ್ಯಕೆ + ಅರ್ಜಿಸಿ) (ವೃತ್ತಿಯಿಂದ + ಏಕತೆಗೆ) (ಕಾಕಾಕ್ಷಿಯುಗದೆ + ಏಕಗೋಲದವೊಲ್ + ಇದೆ)
ಕಾಗೆಗೆ ಎರಡು ಕಣ್ಣುಗಳಿದ್ದರು ನೋಡುವ ಶಕ್ತಿಯಿರುವುದು ಒಂದು ಕಣ್ಣುಗುಡ್ಡೆಗೆ ಮಾತ್ರ. ಕಾಗೆ ಎಡಬಳಗಳಿಗೆ ನೋಡುವಾಗ ಈ ಕಣ್ಣುಗುಡ್ಡೆ ಎಡಬಳಗಳಿಗೆ ಸರಿದಾಡುವುದೆಂಬ ನಂಬಿಕೆ ಇದೆ. ಇದಕ್ಕೆ ಕಾಕಾಕ್ಷಿಗೋಳಕ ನ್ಯಾಯ ಎಂದು ಹೆಸರು
298
ಸತ್ತವರ ಯಶವೊಂದು ಶವ ಭಾರ ಲೋಕಕ್ಕೆ |
ಒತ್ತುತೀರಲದು ಮೇಲೆ ಯುವಕಗತಿಯೆಂತು ? ||
ಉತ್ತು ನೆಲದಲಿ ಬೆರಸು ಹಳೆ ಜಸವನದು ಬೆಳೆದು |
ಮತ್ತೆ ಹೊಸ ಪೈರಕ್ಕೆ - ಮರುಳ ಮುನಿಯ ||
(ಒತ್ತುತ + ಇರಲ್ + ಅದು) (ಜಸವನ್ + ಅದು)
ಇರು ತಾಳ್ಮೆಯಿಂ ನಿಂತು
299
ಮರಣವನು ಬೇಡದಿರು ಜೀವಿತವ ಬೇಡದಿರು |
ತರುವುದೆಲ್ಲವ ಸಕಾಲಕೆ ಕರ್ಮಚಕ್ರಂ ||
ಪರಿಚಾರನೊಡೆಯನಾಜ್ಞೆಯನಿದಿರು ನೋಳ್ಪವೋ - |
ಲಿರು ತಾಳ್ಮೆಯಿಂ ನಿಂತು - ಮರುಳ ಮುನಿಯ ||
(ಬೇಡದೆ + ಇರು) (ತರುವುದು + ಎಲ್ಲವ) (ಪರಿಚಾರನ್ + ಒಡೆಯನ್ + ಆಜ್ಞೆಯನ್ + ಇದಿರು)
(ನೋಳ್ಪವೋಲ್ + ಇರು)
300
ಬಾಳುವೆಯ ಬಯಸದಿರು ಸಾವನುಂ ಬಯಸದಿರು |
ವೇಳೆ ವೇಳೆಯು ತೋರ್ಪ ಧರ್ಮವೆಸಗುತಿರು ||
ಕಾಲನಾತುರಿಸದನು ಪಾಲುಮಾರದನವನು |
ಆಳು ಕರ್ಮಋಣಕ್ಕೆ - ಮರುಳ ಮುನಿಯ ||
(ಬಯಸದೆ + ಇರು) (ಧರ್ಮವ + ಎಸಗುತ + ಇರು) (ಕಾಲನ್ + ಆತುರಿಸದನು) (ಪಾಲುಮಾರದನ್ + ಅವನು)
301
ಸೃಷ್ಟಿ ಶಿಶುವಾದೊಡಂ ಪೂರುಷಂ ತನ್ನಾತ್ಮ |
ಶಿಷ್ಟಿಯಿಂದವಳ ಮಾಯಾಪಟವ ಪರಿದು ||
ನಿಷ್ಠುರ ಜಗದ್ದ್ವಂದ್ವಗಳ ದಾಟಿ ಬಾಳ್ವುದೆ ವಿ - |
ಶಿಷ್ಟ ಧರ್ಮಮವಂಗೆ - ಮರುಳ ಮುನಿಯ ||
(ಶಿಶು + ಆದೊಡಂ) (ತನ್ನ + ಆತ್ಮ) (ಶಿಷ್ಟಿಯಿಂದ + ಅವಳ) (ಧರ್ಮಂ + ಅವಂಗೆ)
302
ಒಳಿತೊಂದು ಶಾಶ್ವತವೊ ಉಳಿದೆಲ್ಲವಳಿಯುವುದೊ |
ಅಳುವ ನೀನೊರಸಿದುದು ನಗುವ ನಗಿಸಿದುದು ||
ಒಲಿದು ನೀಂ ನೀಡಿದುದು ನಲವ ನೀನೆಸಗಿದುದು |
ನೆಲಸುವವು ಬೊಮ್ಮನಲಿ - ಮರುಳ ಮುನಿಯ ||
(ಒಳಿತು + ಒಂದು) (ಉಳಿದೆಲ್ಲ + ಅಳಿಯುವುದೊ) (ನೀನ್ + ಒರೆಸಿದುದು) (ನೀನ್ + ಎಸಗಿದುದು)
303
ತನಯ ಮಡದಿಯರಿಂಗೆ ಪರಮಗತಿ ತಾನೆಂದು |
ಧನಕನಕ ದಾಯನಿಧಿ ದೈವ ಸಮವೆಂದು ||
ಋಣಜಾಲವನು ಬೆಳಸಿ ವಿಪರೀತಗೈವಂಗೆ |
ಮನೆಯೆ ಸೇರಮನೆಯಹುದೊ - ಮರುಳ ಮುನಿಯ ||
(ತಾನ್ + ಎಂದು) (ಸಮ + ಎಂದು) (ಸೆರೆಮನೆ + ಅಹುದೊ)
304
ಸುಡು ಕಾಮಮೂಲವನು ಸುಡದಾಗದೊಡೆ ಬೇಗ |
ಕೊಡು ಕಾಮಿತವನೆಂದು ಬೇಡು ದೈವವನು ||
ಕೆಡುವುದೀ ಜೀವ ಕೊರಗಿ ಕಾಯುತ ಕರಟಿ |
ನಡೆವುದಿಹ ತೋರ್ಕೆಯಿಂ - ಮರುಳ ಮುನಿಯ ||
(ಸುಡಲ್ + ಆಗದ + ಒಡೆ) (ಕಾಮಿತವನ್ + ಎಂದು) (ಕೆಡುವುದು + ಈ) (ನಡೆವುದು + ಇಹ)
305
ಶಾರೀರವೆಂತೊ ಮಾನಸಬಲವುಮಂತು ಮಿತ |
ಆರಯ್ದು ನೋಡದಕೆ ತಕ್ಕ ಪಥ್ಯಗಳ ||
ವೀರೋಪವಾಸಗಳ ಪೂರ ಜಾಗರಣೆಗಳ |
ಭಾರಕದು ಕುಸಿದೀತು - ಮರುಳ ಮುನಿಯ ||
(ಶಾರೀರವು + ಎಂತೋ) (ಮಾನಸಬಲವುಂ + ಅಂತು) (ಆರ್ + ಅಯ್ದು) (ನೋಡು + ಅದಕೆ) (ವೀರ + ಉಪವಾಸಗಳ)
306
ಮಾನ್ಯವಲ್ತೆನಗೆ ವಧೆಯಿಂ ಬರ್ಪ ಜಯವೆಂದು |
ಸನ್ಯಾಸದಾಭಾಸಿ ಪಾರ್ಥನಾದೊಂದು ||
ಅನ್ಯಾಯ ಸಹನೆ ವೈರಾಗ್ಯವೆಂತಹುದೆಂದು - |
ಪನ್ಯಸಿಸಿದಂ ಕೃಷ್ಣ - ಮರುಳ ಮುನಿಯ ||
(ಮಾನ್ಯವಲ್ತು + ಎನಗೆ) (ಜಯ + ಎಂದು) (ಸನ್ಯಾಸದ + ಆಭಾಸಿ) (ಪಾರ್ಥನಾದ + ಅಂದು)
(ವೈರಾಗ್ಯ + ಎಂತು + ಅಹುದು + ಎಂದು + ಉಪನ್ಯಸಿಸಿದಂ)
307
ತರುವಲ್ಕದಂತೆ ನರಮಮತೆ ಜೀವಕೆ ಕವಚ |
ಬಿರುಸಾಗಲದು ತಾನೇ ಬಾಳ್ಗೆ ಸಂಕೋಲೆ ||
ಪರುಷತೆಯ ಮೇಲೇಳ್ದ ಪುರುಷತೆಯೆ ಕಲ್ಪಲತೆ |
ಸರಸತೆಯೆ ಮಕರಂದ - ಮರುಳ ಮುನಿಯ ||
(ಬಿರುಸು + ಆಗಲ್ + ಅದು) (ಮೇಲೆ + ಏಳ್ದ)
ಮಾನವ ಬ್ರಹ್ಮ
308
ಸೃಷ್ಟಿಚಿತ್ರದ ನಡುವೆ ನರನದೊಂದುಪಸೃಷ್ಟಿ |
ಚೆಷ್ಟಿಪ್ಪುದವನ ಕೈ ಪ್ರಕೃತಿಕೃತಿಗಳಲಿ ||
ಸೊಟ್ಟಗಿರೆ ನೆಟ್ಟಗಿಸಿ ನೆಟ್ಟಗಿರೆ ಸೊಟ್ಟಿಪುದು |
ಪುಟ್ಟು ಬೊಮ್ಮನೊ ನರನು - ಮರುಳ ಮುನಿಯ ||
(ನರನದೊಂದು + ಉಪಸೃಷ್ಟಿ) (ಚೇಷ್ಟಿಪ್ಪುದು + ಅವನ)
309
ಅಪರಿಪಕ್ವದ ರಚನೆ ಜಗವಿದು ವಿಧಾತನದು |
ನಿಪುಣ ನಾನಿದನು ಪಕ್ವಿಪೆನೆಂದು ಮನುಜಂ ||
ಚಪಲದಿಂ ಪೆಣಗಾಡಿ ವಿಪರೀತವಾಗಿಪನು |
ಉಪವಿಧಾತನೊ ನರನು - ಮರುಳ ಮುನಿಯ ||
(ಜಗ + ಇದು) (ನಾನ್ + ಇದನು) (ಪಕ್ವಿಪೆನ್ + ಎಂದು) (ವಿಪರೀತ + ಆಗಿಪನು)
310
ಪುರುಷಮತಿಯೊಳ್ ಧರ್ಮ ಪ್ರಕೃತಿಯೊಳ್ ಧರ್ಮಮೇಂ ? |
ಸರಿಯೆ ಜೀವಿಗೆ ಜೀವನಂ ಜೀವಿಯಹುದು ? ||
ಪಿರಿದು ಧರ್ಮಂ ಪ್ರಕೃತಿತಂತ್ರದಿಂದದರಿಂದೆ |
ಶಿರವೊ ಸೃಷ್ಟಿಗೆ ನರನು - ಮರುಳ ಮುನಿಯ ||
(ಜೀವಿ + ಅಹುದು) (ಪ್ರಕೃತಿತಂತ್ರದಿಂದ + ಅದರಿಂದೆ)
311
ಭಾವದ ವಿಕಾರಂಗಳಳಿದ ಜೀವವೆ ದೈವ |
ಭಾವವೇಂ ದೈವದೊಂದುಚ್ಛ್ವಸನ ಹಸನ ||
ಜೀವಿತಂ ದ್ವಂದ್ವ ದೈವತ್ವದೊಳದ್ವಂದ್ವ |
ಜೀವರೂಪಿಯೊ ದೈವ - ಮರುಳ ಮುನಿಯ ||
(ವಿಕಾರಂಗಳ್ + ಅಳಿದ) (ದೈವದ + ಒಂದು + ಉಚ್ಛ್ವಸನ) (ದೈವತ್ವದೊಳು + ಅದು + ಅದ್ವಂದ್ವ)
312
ಜೀವಕೆ ನಮೋಯೆನ್ನು ದೈವ ತಾಂ ಜೀವವಲ |
ಜೀವಿತವನಂತ ಚಿತ್ಸತ್ತ್ವ ಲೀಲೆಯಲ ||
ಜೀವಹೊರತೇಂ ದೈವ, ದೈವಹೊರತೇಂ ಜೀವ |
ಜೀವಕ್ಕೆ ಜಯವೆನ್ನು - ಮರುಳ ಮುನಿಯ ||
(ಜೀವಿತವು + ಅನಂತ) (ಚಿತ್ + ಸತ್ತ್ವ + ಲೀಲೆ + ಅಲ) (ಜಯ + ಎನ್ನು)
313
ಸೀಮೆ ಜಗಕೆಲ್ಲಿಹುದು ವ್ಯೋಮದೊಳಗೇನಿಲ್ಲ |
ನೆಮಿಯಿರದಾಚಕ್ರದಲಿ ನಾಭಿ ನೀನು ||
ನಾಮರೂಪಾಭಾಸ ನಭದ ಮೇಘವಿಲಾಸ |
ಸ್ಥೇಮಿ ಚಿನ್ಮಯ ನೀನು - ಮರುಳ ಮುನಿಯ ||
(ಜಗಕೆ + ಎಲ್ಲಿ + ಇಹುದು) (ವ್ಯೋಮದೊಳಗೆ + ಏನಿಲ್ಲ) (ನೇಮಿ + ಇರದ + ಆ + ಚಕ್ರದಲಿ) (ನಾಮರೂಪ + ಆಭಾಸ)
ಆಧಿಪುರುಷಪದಕೇರು
314
ಶಿರವ ಬಾಗದೆ ನಿಂದು ನಿನ್ನ ವಿಧಿ ಬಡಿವಂದು |
ಸರಸಿಯಾಗಿಯೆ ಜಗದ್ವಂದ್ವಗಳ ಹಾಯ್ದು ||
ಪುರುಷಪದದಿಂದೆ ನೀನಧಿಪುರುಷ ಪದಕೇರು |
ಗುರಿಯದುವೆ ಜಾಣಂಗೆ - ಮರುಳ ಮುನಿಯ ||
(ಬಡಿವ + ಅಂದು)
315
ವಿಧಿಯನೆದುರಿಸಿ ಹೋರಿ ಪುರುಷತೆಯ ತುದಿಗೇರಿ |
ಬದುಕಿನೆಲ್ಲನುಭವಗಳಿಂ ಪಕ್ವನಾಗಿ ||
ಹೃದಯದಲಿ ಜಗದಾತ್ಮನಂ ಭಜಿಪ ನಿರ್ದ್ವಂದ್ವ - |
ನಧಿಪುರುಷನೆನಿಸುವನೊ - ಮರುಳ ಮುನಿಯ ||
(ವಿಧಿಯನ್ + ಎದುರಿಸಿ) (ತುದಿಗೆ + ಏರಿ) (ಬದುಕಿನ + ಎಲ್ಲ + ಅನುಭವಗಳಿಂ)
(ನಿರ್ದ್ವಂದ್ವನ್ + ಅಧಿಪುರುಷನ್ + ಎನಿಸುವನೊ)
316
ಪೌರುಷ ಪ್ರಗತಿಮಾರ್ಗಗಳ ನೋಡೇಸುಜನ |
ದೂರದಿಂ ಕಂಡು ಶುಭ ಮೇರುಶಿಖರವನು ||
ಧೀರ ಸಾಹಸದಿಂದೆ ಪಾರಮಾರ್ಥಿಕದಿಂದೆ |
ದಾರಿಪಂಜುವೊಲಿಹರು - ಮರುಳ ಮುನಿಯ ||
(ನೋಡೆ + ಎಸುಜನ) (ದಾರಿಪಂಜುವೊಲ್ + ಇಹರು)
317
ಗೈದ ಪಾಪದ ನೆನಪಿನಿರಿತವಾತ್ಮಕೆ ಮದ್ದು |
ಆದೊಡಳುವೇಂ ಪಾಲೆ ಜೀವ ಪೋಷಣೆಗೆ ? ||
ರೋದನೆಯನುಳಿದಾತ್ಮ ಶೋಧನೆಯನಾಗಿಪುದು |
ಸಾಧು ನಿಷ್ಕೃತಿಮಾರ್ಗ - ಮರುಳ ಮುನಿಯ ||
(ನೆನಪಿನ + ಇರಿತ + ಆತ್ಮಕೆ) (ಆದೊಡು + ಅಳುವೇಂ) (ರೋದನೆಯಂ + ಉಳಿದ + ಆತ್ಮಶೋಧನೆಯಂ + ಆಗಿಪುದು)
318
ಕಾರ್ಮುಗಿಲು ನಿನ್ನ ಕುರುಡಾಗಿಪ್ಪುದರಗಳಿಗೆ |
ಕರ್ಮಪಟವುಮಂತು ಸುಳಿದು ಪಾರುವುದು ||
ನಿರ್ಮಲಂ ಗಗನಮಪ್ಪಂದು ತೂಂಕಡಿಸದಿರು |
ಪೆರ್ಮೆಯದು ಪುರುಷತೆಗೆ - ಮರುಳ ಮುನಿಯ ||
(ಕುರುಡು + ಆಗಿಪ್ಪುದು + ಅರಗಳಿಗೆ) (ಕರ್ಮಪಟಲವುಂ + ಅಂತು) (ಗಗನಂ + ಅಪ್ಪಂದು)
(ತೂಂಕಡಿಸಿದೆ + ಇರು) (ಪೆರ್ಮೆ + ಅದು)
319
ತನ್ನ ತಾ ಗೆಲದೆ ಲೋಕದೊಳೆಲ್ಲ ಗೆಲುವವನು |
ಮುನ್ನ ರಾವಣನಹನು ನರರು ನಗುತಿಹರು ||
ತಿನ್ನುವನು ಜಗವ ತಾಂ ತನಗೆ ತುತ್ತಾಗುವನು |
ಪುಣ್ಯವೇನಿದರಲ್ಲಿ ? - ಮರುಳ ಮುನಿಯ ||
(ಲೋಕದೊಳ್ + ಎಲ್ಲ) (ಗೆಲುವ + ಅವನು) (ರಾವಣನ್ + ಅಹನು) (ನಗುತ + ಇಹರು)
(ತುತ್ತು + ಆಗುವನು) (ಪುಣ್ಯ + ಏನು + ಇದರಲ್ಲಿ)
ಇದು ದೈವಗತಿ
320
ಕೃತಕರ್ಮಫಲ ಶೇಷವಂ ಜೀವಿಗುಣಿಸುವುದು |
ಇತರ ಜೀವಿಗತಿಗದನಿಮಿತ್ತವೆನಿಸುವುದು ||
ಸತತ ಧರ್ಮದಿ ಜಗವನೆಲ್ಲ ತಾಂ ಪೊರೆಯುವುದು |
ತ್ರಿತಯವಿದು ದೈವಗತಿ - ಮರುಳ ಮುನಿಯ ||
(ಜೀವಿಗೆ + ಉಣಿಸುವುದು) (ಜೀವಿಗತಿಗೆ + ಅದು + ಅನಿಮಿತ್ತ + ಎನಿಸುವುದು)
321
ಈ ದಿನದ ಸುಖಕ್ಕೆ ನೀನಿಂದಿನಾ ಲಾಭಕ್ಕೆ |
ಗೈದ ಕರ್ಮದ ಭೂತವಿಂದೆ ಮಲಗುವುದೇಂ ? ||
ಕಾದು ಹೊಂಚಿಟ್ಟೆಂದೊ ನಿನ್ನನೆತ್ತಲೋ ಪಿಡಿದು |
ವೇಧಿಸದೆ ತೆರಳದದು - ಮರುಳ ಮುನಿಯ ||
(ನೀನ್ + ಇಂದಿನಾ) (ಭೂತ + ಇಂದೆ) (ಹೊಂಚಿಟ್ಟೆ + ಎಂದೊ) (ನಿನ್ನನ್ +ಎತ್ತಲೊ) (ತೆರಳದು + ಅದು)
322
ಹಿತಬೋಧಕರು ಸಾಲದುದರಿಂದಲಲ್ಲ ವೀ - |
ಕ್ಷಿತಿಗೆ ದುರ್ದಶೆ ಬಂದುದವಿಧೇಯರಿಂದ ||
ದ್ಯುತಿ ಕಣ್ಣೋಳಿರ್ದೊಡೇಂ ಶಿರದಿ ಮದ್ಯರಸಂಗ - |
ಳತಿಶಯಂ ಸೇರಿರಲು - ಮರುಳ ಮುನಿಯ ||
(ಸಾಲದು + ಅದರಿಂದಲ್ + ಅಲ್ಲ) (ಬಂದುದು + ಅವಿಧೇಯರಿಂ) (ಕಣ್ಣೊಳ್ + ಇರ್ದೊಡೇಂ) (ಮದ್ಯರಸಂಗಳ್ + ಅತಿಶಯಂ) (ಸೇರಿ + ಇರಲು)
323
ತ್ರಿಭುವನಗಳ್ಗೇಕೈಕನೀಶಂ ನಿರಂಕುಶಂ |
ಸಭೆಯುಮಿಲ್ಲವನ ತಿದ್ದಿಸೆ ಜನದ ಕೂಗಿಂ ||
ಅಭಯನಾಳುವ ರಾಜ್ಯವನುದಿನಮುಮಿಂತು ಸಂ - |
ಕ್ಷುಭಿತಮಿಹುದಚ್ಚರಿಯೆ - ಮರುಳ ಮುನಿಯ ||
(ತ್ರಿಭುವನಗಳ್ಗೆ + ಎಕೈಕನ್ + ಈಶಂ) (ಸಭೆಯುಂ + ಇಲ್ಲ + ಅವನ) (ಅಭಯನ್ + ಅಳುವ) (ರಾಜ್ಯವನ್ + ಅನುದಿನಮುಂ + ಇಂತು) (ಸಂಕ್ಷುಭಿತಂ + ಇಹುದು + ಅಚ್ಚರಿಯೆ)
324
ಸ್ರಷ್ಟನಾವನೊ ಆತನಾರಾದೊಡೇಂ ನಿನಗೆ |
ಶಿಷ್ಟನಾಗಿಪೆಯ ಏನವನ ನೀನು ? ||
ಶಿಷ್ಟರನು ಮಾಡು ಒಡಹುಟ್ಟುಗಳ ಮೊದಲು ನೀನ್ |
ಸೃಷ್ಟಿಯಂಶವೆ ಕಾಣೊ - ಮರುಳ ಮುನಿಯ ||
(ಸ್ರಷ್ಟನ್ + ಆವನೊ) (ಆತನಾರ್ + ಆದೊಡೇಂ) (ಶಿಷ್ಟನ್ + ಆಗಿಪೆಯ) (ಏನ್ + ಅವನ) (ಸೃಷ್ಟಿ + ಅಂಶವೆ)
325
ಸಾಧಿಪ್ಪೆವೇನ ನಾಂ? ನಮಗಿರ್ಪ ಶಕ್ತಿಯೇಂ |
ಸಾಜವಂ ಮುರಿವೆವೇಂ ಕಿಂಕರರು ನಾವು ||
ಬೋಧಮುಂ ಪ್ರಕೃತಿಮಿತಮಾಶೆಯುಂ ಮಿತ ನಮಗೆ |
ಪಾದ ಬಿಡುವಕ್ಷಿ ಬಿಗಿ - ಮರುಲ ಮುನಿಯ ||
(ಸಾಧಿಪ್ಪೆವು + ಏನ) (ನಮಗೆ + ಇರ್ಪ) (ಮುರಿವೆವು + ಏಂ) (ಪ್ರಕ್ರುತಿಮಿತಂ + ಆಶೆಯುಂ)
326
ನಾನು ನಾನಾನೆನ್ನುತಿರುವೊಂದುಸಿರೆ ನಿನ್ನ |
ಮಾನಸದ ಚೀಲದಲಿ ತುಂಬಿ ಬೀಗುತಿರೆ ||
ತಾಣವದರೊಳಗೆಲ್ಲಿ ಬೇರೊಂದುಸಿರು ಹೊಗಲು |
ಕಾಣದದು ತತ್ತ್ವವನು - ಮರುಳ ಮುನಿಯ ||
(ನಾನು + ಆನು + ಎನ್ನುತ + ಇರುವ + ಒಂದು + ಉಸಿರೆ) (ಬೀಗುತ + ಇರೆ) (ತಾಣ + ಅದರ + ಒಳಗೆ + ಎಲ್ಲಿ) ( ಬೇರೆ + ಒಂದು + ಉಸಿರು) (ಕಾಣದು + ಅದು)
ಮಾನವಶಕ್ತಿ ಪರಿಮಿತ
327
ಸತ್ಯ ಸೂರ್ಯನವೊಲಪಾರವಸದಳ ನಿನಗೆ |
ನಿತ್ಯ ಲಭ್ಯವು ನಿನಗೆ ಖಂಡ ಮಾತ್ರವದು ||
ಶ್ರುತಿ ಯುಕ್ತಿಗಳು ಕಣ್ಣಳವು ಸಮ್ಮತಿಯೊಳು ಸೇರೆ |
ಮಿತ ದೃಶ್ಯ ನಿನಗೆಲವೊ - ಮರುಳ ಮುನಿಯ ||
(ಸೂರ್ಯನವೊಲು + ಅಪಾರ + ಅಸದಳ) (ಮಾತ್ರ + ಅದು) (ಕಣ್ + ಅಳವು) (ನಿನಗೆ + ಎಲವೊ)
328
ಸ್ವಸ್ವರೂಪವನರಿತುಕೊಳುವ ಮುನ್ನಮೆ ನರಂ |
ವಿಶ್ವಪ್ರಕೃತಿ ಕಾರ್ಯಶಾಲೆಯೊಳಗುಟ್ಟನ್ ||
ವಶ್ಯವಾಗಿಸಿಕೊಳ್ಳಲುಜ್ಜುಗಿಸಿ ತನಗೆ ತಾ - |
ನಸ್ವಸ್ಥನಾಗಿಹನೊ - ಮರುಳ ಮುನಿಯ ||
(ಸ್ವಸ್ವರೂಪವನ್ + ಅರಿತುಕೊಳುವ) (ಕಾರ್ಯಶಾಲೆಯ + ಒಳಗುಟ್ಟನ್) (ವಶ್ಯವಾಗಿಸಿಕೊಳ್ಳಲ್ + ಉಜ್ಜುಗಿಸಿ)
(ತಾನ್ + ಅಸ್ವಸ್ಥನಾಗಿ + ಇಹನೊ)
329
ಸುರಪ ಚಾಪದ ಗಾತ್ರ ವಿಸ್ತಾರ ಭಾರಗಳ |
ಧರೆಯಿಂದಲಳೆಯುವೆಯ ಕೈ ಬೋಳಗಲಿಂದೆ ? ||
ಪರಮಾನುಭಾವದೊಳದ್ವೈತವೋ ದ್ವೈತವೋ |
ಅರಿಯುವನೆ ಬರಿ ತರ್ಕಿ ? - ಮರುಳ ಮುನಿಯ ||
(ಧರೆಯಿಂದಲ್ + ಅಳೆಯುವೆಯ) (ಪರಮಾನುಭಾವದೊಳು + ಅದ್ವೈತವೊ)
330
ಧರಣಿ ತರಣಿಗಳ ಗತಿಕ್ಲ್ ಪ್ತವೆನುವವೊಲಿಹುದು |
ಚರಿಸುತಿರಲವರ ಬಲ ವೆಯವಾಗದಿಹುದೇಂ ? ||
ಕರಗುವುದವರ್ಗಳೊಡಳವರದಿಗಳದುರುವುವು |
ಕೊರೆಯಾರಿಗದರಿಂದೆ ? - ಮರುಳ ಮುನಿಯ ||
(ಕ್ಲ್ ಪ್ತ + ಎನುವವೊಲ್ + ಇಹುದು) (ಚರಿಸುತಿರಲ್ + ಅವರ) (ವೆಯ + ಆಗದೆ + ಇಹುದೇಂ)
(ಕರಗುವುದು + ಅವರ್ಗಳ + ಒಡಲ + ಅವರ + ಅಡಿಗಳು + ಅದುರುವುವು) (ಕೊರೆ + ಅರಿಗೆ + ಅದರಿಂದೆ)
331
ಸೃಜಿಸಿ ಯಂತ್ರಾಯುಧಗಳಂ ಪ್ರಗತಿಸಾಧನೆಗೆ |
ನಿಜಲಕ್ಷಣೋನ್ನತಿಯನೇ ಮರೆತು ಮನುಜಂ ||
ರುಜಿತಾತ್ಮನಪ್ಪನಾ ಯಂತ್ರಾಪಘಾತದಿನೆ |
ವಿಜಯ ವಿಭ್ರಾಂತಿಯದು - ಮರುಳ ಮುನಿಯ ||
(ಯಂತ್ರ + ಆಯುಧಗಳಂ) (ಲಕ್ಷಣ + ಉನ್ನತಿಯನೇ) (ರುಜಿತಾತ್ಮನ್ + ಅಪ್ಪನ್ + ಆ)
(ಯಂತ್ರ + ಅಪಘಾತದಿನೆ)
332
ನಾನು ನೀನಾದಂದು ನೀನೆಲ್ಲರಾದಂದು |
ಲೀನನೆಲ್ಲರೊಳಾಗಿ ನಾನು ಸತ್ತಂದು ||
ಯೆನೊಂದುಮೆನ್ನ ಹೊರಗೆನ್ನ ಕಣ್ಗಿರದಂದು |
ಜ್ಞಾನ ಪರಿಪೂರ್ಣವೆಲೊ - ಮರುಳ ಮುನಿಯ ||
(ನೀನ್ +ಆದಂದು) (ನೀನ್ + ಎಲ್ಲರ್ + ಆದಂದು) (ಲೀನನ್ + ಎಲ್ಲರೊಳಗೆ + ಆಗಿ) (ಎನೊಂದುಂ + ಎನ್ನ)
(ಹೊರಗೆ + ಎನ್ನ) (ಕಣ್ಗೆ + ಎರದಂದು) (ಪರಿಪೂರ್ಣ + ಎಲೊ)
333
ಹ್ರಸ್ವದಲಿ ದೀರ್ಘದಲಿ ಕುಟಿಲದಲಿ ಸರಳದಲಿ |
ವಿಶ್ವಕಾಯಂ ಕಂಗಳಂಗವಿಭ್ರಮೆಯಿಂ - ||
ದೀಶ್ವರಂ ನಟಿಸುತಿರೆ ರಭಸವಳೆಯುವರಾರು ? |
ಶಾಶ್ವತಂ ಮಿತಿಗಳವೆ ? - ಮರುಳ ಮುನಿಯ ||
(ಕಂಗಳ್ + ಅಂಗ + ವಿಭ್ರಮೆಯಿಂದ + ಈಶ್ವರಂ) (ನಟಿಸುತ + ಇರೆ) (ರಭಸವ + ಅಲೆವವರ್ + ಆರು)
(ಮಿತಿಗೆ + ಅಳುವೆ)
ಪ್ರಕೃತಿ ವಿಲಾಸ
334
ನಿರಪೇಕ್ಷೆ ನಿರುಪೇಕ್ಷೆ ಸೃಷ್ಟಿ ಕರ್ಮದ ರೀತಿ |
ಬೆರಲದಿರದಾ ಕನ್ನುದಾಸೀನಮಿರದು ||
ಕಿರಿದವಳಿಗೊಂದಿರದು ಪರಿಪೂರ್ಣವೊಂದಿರದು |
ಪರಿವರ್ತ್ಯಮೆಲ್ಲಮುಂ - ಮರುಳ ಮುನಿಯ ||
(ನಿಃ + ಅಪೇಕ್ಷೆ) (ನಿಃ + ಉಪೇಕ್ಷೆ) (ಬೆರಲ್ + ಅದಿರದು + ಆ) (ಕಣ್ + ಉದಾಸೀನಂ + ಇರದು)
(ಕಿರಿದು + ಅವಳಿಗೆ + ಒಂದು + ಇರದು) (ಪರಿಪೂರ್ಣವೊಂದು + ಇರದು) (ಪರಿವರ್ತ್ಯಂ + ಎಲ್ಲಮುಂ)
335
ಚಿಂತಿಸಲ್ಕಾಗದದ್ಭುತಶಕ್ತಿ ಸೃಷ್ಟಿಯದು |
ಜಂತು ಜಂತುವಿಗಮೊಂದೊಂದು ಬೇರೆ ನಯ ||
ಅಂತರದ ತಂತ್ರವನು ಗೆಯ್ಸಿಹಳು ಜಗವಂತು |
ಸಂತತವು ನನವವೊ - ಮರುಳ ಮುನಿಯ ||
(ಚಿಂತಿಸಲ್ಕೆ + ಆಗದ + ಅದ್ಭುತಶಕ್ತಿ) (ಜಂತುವಿಗಂ + ಒಂದೊಂದು) (ಗೆಯ್ಸಿ + ಇಹಳು) (ಜಗವು + ಅಂತು)
336
ದಾರದುಂಡೆಯೊ ಲೋಕ ನೂರುಮಾರೆಳೆಯೊಂದೆ |
ನೂರು ಬಣ್ಣಗಳಲ್ಲಿ ನೂರು ಸಿಕ್ಕದರೊಳ್ ||
ಹಾರದಂತದಖಂಡ ಮೊದಲು ಕೊನೆಗಳನಲ್ಲಿ |
ಬೇರೆ ತೋರುವುದೆಂತೊ - ಮರುಳ ಮುನಿಯ ||
(ದಾರದ + ಉಂಡೆಯೊ) (ನೂರುಮಾರ್ + ಎಳೆ + ಒಂದೆ) (ಸಿಕ್ಕು + ಅದರೊಳ್)
(ಹಾರದಂತೆ + ಅದು + ಅಖಂಡ) (ಕೊನೆಗಳನ್ + ಅಲ್ಲಿ) (ತೋರುವುದು + ಎಂತೊ)
337
ಅರ್ಧರ್ಧರುಚಿಗಳಿಂ ಕಣ್ಮನಂಗಳ ಕೆಣಕು - |
ತುದ್ಯಮಂಗಳ ಗೆಯ್ಸಿ ಮನುಜನಿಂ ಪ್ರಕೃತಿ ||
ಬದ್ಧನಂಗೆಯ್ವಳುಳಿದಧರ್ಮಮಂ ಕೆಣಕಿಪಳು |
ವೃದ್ಧಿಯಿಂತವಳ ಸಿರಿ - ಮರುಳ ಮುನಿಯ ||
(ಅರ್ಧ + ಅರ್ಧ + ರುಚಿಗಳಿಂ) (ಕಣ್ + ಮನಂಗಳ) (ಕೆಣಕುತ + ಉದ್ಯಮಂಗಳ)
(ಬದ್ಧನಂ + ಗೆಯ್ವಳು + ಉಳಿದ + ಅರ್ಧಮುಂ) (ವೃದ್ಧಿಯಿಂತು + ಅವಳ)
338
ಸಾದೃಶ್ಯ ಭಸ್ಮವನು ಕಣ್ಣಿಗೆರಚುತೆ ಪ್ರಕೃತಿ |
ಪ್ರತ್ಯೇಕತೆಯನದರೊಳಿಡುತೆ ಕಚಗುಳಿಯ ||
ಶತ್ರುಮಿತ್ರಪ್ರಮಾದದ ಗುಳಿಗೆಯುಣಿಸುತ್ತೆ |
ನೃತ್ಯಕೆಳೆವಳು ಜನನ - ಮರುಳ ಮುನಿಯ ||
(ಕಣ್ಣಿಗೆ + ಎರಚುತೆ) (ಪ್ರತ್ಯೇಕತೆಯನ್ + ಅದರೊಳ್ + ಇಡುತೆ) (ಗುಳಿಗೆ + ಉಣಿಸುತ್ತೆ) (ನೃತ್ಯಕೆ + ಎಳೆವಳು)
339
ಬಳಿಗೆ ಬಾರೆನ್ನುವಳು ಕರೆ ಕರೆದು ಮುದ್ದಿಪಳು |
ಫಲಪುಷ್ಪ ಮಣಿಕನಕವಿತ್ತು ನಲಿಸುವಳು ||
ನಲಿದು ನೀಂ ಮೈಮರೆಯೆ ಮರ್ಮದಲಿ ಚಿವಟುವಳು |
ಛಲಗಾತಿಯೋ ಪ್ರಕೃತಿ - ಮರುಳ ಮುನಿಯ ||
(ಬಾ + ಎನ್ನುವಳು) (ಮಣಿಕನಕ + ಇತ್ತು)
340
ಒಲಿದೊಲಿದು ಸಾರುವಳು ಕಣ್ಹೊಳಪ ಬೀರುವಳು |
ಕಿಲಕಿಲನೆ ನಗಿಸುವಳು ಕಚಗುಳಿಗಳಿಕ್ಕಿ ||
ಮಲಗಿ ನೀಂ ನಿದ್ರಿಸಿರೆ ಕುಳಿಯೊಳಕ್ಕುರುಳಿಪಳು |
ಛಲಗಾತಿಯೋ ಪ್ರಕೃತಿ - ಮರುಳ ಮುನಿಯ ||
(ಒಲಿದು + ಒಲಿದು) (ಕಣ್ + ಹೊಳಪ) (ಕಚಗುಳಿಗಳ್ + ಇಕ್ಕಿ) (ನಿದ್ರಿಸಿ + ಇರೆ) (ಕುಳಿಯೊಳ್ + ಒಕ್ಕು + ಉರುಳಿಪಳು)
341
ಹಾಸ್ಯಬೀಜವೊ ಜೀವ ಸಸ್ಯವದರಿಂದೆಲ್ಲ |
ವಿಶ್ವಮಾಯಾವಿಜೃಂಭಣೆಯಿಂದ ಲೋಕ ||
ಹಾಸ್ಯ ವಿಪರೀತವೇ ಬಿನದವೀಶ್ವರನಿಂಗೆ |
ನಿಶ್ಚಿತದ ತತ್ವವಿದು - ಮರುಳ ಮುನಿಯ ||
(ಸಸ್ಯ + ಅದರಿಂದ + ಎಲ್ಲ) (ಬಿನದ + ಈಶ್ವರನಿಂಗೆ) (ತತ್ತ್ವ + ಇದು)
342
ಪ್ರಕೃತಿ ಮನುಜನ ಮಾತೆಯವಳುದರ ಹುಳಿಯಾಗೆ |
ವಿಕ್ರುತನಾಗನೆ ಹಸುಳೆಯಂತರಂಗದಲಿ? ||
ಸ್ವಕೃತ ಧರ್ಮದಿನವಂ ಪ್ರಕೃತಿಯುಂ ಮೀರ್ದಂದು |
ನಿಕೃತಿ ತಪ್ಪುವುದಿಳೆಗೆ - ಮರುಳ ಮುನಿಯ ||
(ಮಾತೆ + ಅವಳ್ + ಉದರ) (ಹುಳಿ + ಆಗೆ) (ವಿಕೃತನ್ + ಆಗನೆ) (ಹಸುಳೆ + ಅಂತರಂಗದಲಿ)
(ಧರ್ಮದಿನ್ + ಅವಂ) (ಮೀರ್ದ + ಅಂದು) (ತಪ್ಪುವುದು + ಇಳೆಗೆ)
ಜಗದ ಮಂತ್ರ
343
ಜಗದ ಯಂತ್ರದ ಚಕ್ರಕೀಲ್ಗಳದಿರುವುದುಂಟು |
ಪ್ರಗತಿಫಲಿತದಿ ವಿಗತಿ ಬೀಜವಿಹುದುಂಟು ||
ತ್ರಿಗುಣ ಕೃತ್ರಿಮ ಮನುಜರಚನೆಯೊಳಗಿರಲಾಗಿ |
ವೆಗಡು ತಪ್ಪದೊ ನಮಗೆ - ಮರುಳ ಮುನಿಯ ||
(ಕೀಲ್ಗಳ್ + ಅದಿರುವುದು + ಉಂಟು) (ಬೀಜ + ಇಹುದು + ಉಂಟು) (ಮನುಜರಚನೆಯೊಳಗೆ + ಇರಲಾಗಿ)
344
ಚಪ್ಪರವ ಪಿಡಿಯದಿಹ ಬಳ್ಳಿಕರಡಾಗಿ ನೆಲ - |
ವಪ್ಪಿ ಹೂಕಾಯ್ಬಿಡದವೊಲ್ ನರಂ ತನ್ನ ||
ದುರ್ಬಲದಿ ಸಾಕಾರದೈವಬಲವರಸದಿರೆ |
ತಬ್ಬಲಿವೊಲಳುತಿಹನೊ - ಮರುಳ ಮುನಿಯ ||
(ಪಿದಿಯದೆ + ಇಹ) (ನೆಲ + ಅಪ್ಪಿ) (ಹೂಕಾಯಿ + ಬಿಡದ + ವೊಲ್) (ದೈವಬಲವ + ಅರಸದೆ + ಇರೆ)
(ತಬ್ಬಲಿವೊಲ್ + ಅಳುತಿಹನೊ)
345
ತರಣಿ ಶಶಿಯದಿರುತಿರೆ ತಿರೆಯದಿರಲಿರಲಹುದೆ |
ನರದೇಹ ಚಿತ್ತಂಗಳಂದದಿರದಿಹುವೆ ? ||
ಸುರಲೋಕ ನರಲೋಕವನ್ಯೋನ್ಯ ಕೀಲುಗಳು |
ಚರವಿಚರ ಸಮಗಳವು - ಮರುಳ ಮುನಿಯ ||
(ಶಶಿ + ಅದಿರುತಿರೆ) (ತಿರೆ + ಅದಿರಲ್ +ಇರಲ್ + ಅಹುದೆ) (ಚಿತ್ತಂಗಳ್ + ಅಂದು + ಅದಿರದೆ + ಇಹುವೆ)
(ನರಲೋಕ + ಅನ್ಯೋನ್ಯ) (ಸಮಗಳು + ಅವು)
346
ಪ್ರಾಕರ್ಮತಂತು ನಿನ್ನಡಿಯ ಬಿಗಿದಿರೆ ಮರಕೆ |
ಹಕ್ಕಿ ನೀಂ ನೆಗೆನೆಗೆದು ಕಿತ್ತಾಡದಿಹೆಯ ? ||
ರೆಕ್ಕೆ ಬಲವಿದ್ದಂತೆ ಜಗ್ಗುತಿರೆ ಪರಿಯದೇ |
ನುಕ್ಕಾದೊಡಂ ತಂತು - ಮರುಳ ಮುನಿಯ ||
(ಪ್ರಾಕ್ + ಕರ್ಮತಂತು) (ನಿನ್ನ + ಅಡಿಯ) (ಬಿಗಿದು + ಇರೆ) (ಕಿತ್ತಾಡದೆ + ಇಹೆಯ) (ಬಲ + ಇದ್ದಂತೆ)
(ಜಗ್ಗುತ + ಇರೆ) (ನುಕ್ಕು + ಅದೊಡಂ)
347
ತೆರಪೆಲ್ಲಿ ಕಾಲದಲಿ? ಬಿಡುವೆಲ್ಲಿ ಸೃಷ್ಟಿಯಲಿ |
ಮರಣ ಜನನಗಳು ಸುಖದುಃಖಗಳು ಸುಕೃತ ||
ದುರಿತಗಳು ವಾಂಛೆ ಪ್ರಯತ್ನಗಳೀಯೆಂಟು - |
ಮಿರದರೆ ಕ್ಷಣವುಂಟೆ ? - ಮರುಳ ಮುನಿಯ ||
(ತೆರಪು + ಎಲ್ಲಿ) (ಬಿಡುವು + ಎಲ್ಲಿ) (ಪ್ರಯತ್ನಗಳು + ಈ + ಯೆಂಟುಂ + ಇರದೆ + ಅರೆ)
348
ಕಾಲವೆಂಬುದನಂತನದಿಯದರ ಅಲೆ ಸಾಂತ |
ವೇಳೆಯದು ಯುಗ ವರ್ಷ ಮಾಸ ದಿನ ಗಳಿಗೆ ||
ಪೀಳಿಗೆಗಳವರೊಡನೆ (ಸಕಲ) ಜನಪದ ಜನರು |
ಲೀಲೆಯದು ಲೆಕ್ಕವಿದು - ಮರುಳ ಮುನಿಯ ||
(ಕಾಲ + ಎಂಬುದು + ಅನಂತ + ನದಿ + ಅದರ) (ವೇಳೆ + ಅದು) (ಪೀಳಿಗೆಗಳು + ಅದರ + ಒಡನೆ)
(ಲೀಲೆ + ಅದು) (ಲೆಕ್ಕ + ಇದು)
349
ಯಂತ್ರದೊಳಗಣ ಯಂತ್ರ ತಂತ್ರದೊಳಗಣ ತಂತ್ರ |
ಜಂತುವಿದು ಸೃಷ್ಟಿಯಾ ರಸಕಲಾಗ್ರಂಥ ||
ತಂತುಕಾರಳೆ ಸೃಷ್ಟಿ ರಾಟೆಯಂತ್ರವ ತಿರುಹೆ ? |
ಮಂತ್ರಯೋಗಿನಿಯವಳು - ಮರುಳ ಮುನಿಯ ||
(ಯಂತ್ರದ + ಒಳಗಣ) (ತಂತ್ರದ + ಒಳಗಣ) (ಜಂತು + ಇದು) (ಸೃಷ್ಟಿಯ + ಆ)
350
ಜಂತುದೇಹದ ಯಂತ್ರ ಸಾಮಾನ್ಯ ರಚನೆಯೊಳು |
ಸ್ವಾಂತ ತಂತ್ರದ ಚೋದ್ಯವಿರಿಸಿಹಳ್ ಪ್ರಕೃತಿ ||
ಹಂತವೇರಲ್ ಜನ್ಮನಿಶ್ರೇಣಿಯೊಳ್ ಜೀವ |
ತಂತ್ರ ಪಟುತರವಹುದು - ಮರುಳ ಮುನಿಯ ||
(ಚೋದ್ಯ + ಇರಿಸಿ + ಇಹಳ್) (ಹಂತ + ಏರಲ್) (ಪಟುತರ + ಅಹುದು)
ಜಗನ್ನಾಟಕ
351
ಸನ್ನಿಭತೆ ನರನರರ್ಗುಂಟು ಕೆಲವಂಶದಲಿ |
ಬಿನ್ನತೆಯುಮದರೊಡನೆ ಕೆಲವಂಶಗಳಲಿ ||
ಚಿಹ್ನಮಿಶ್ರಣದೆ ದೃಷ್ಟಿಭ್ರಾಂತಿಯಾಗೆ ಜಗ |
ದನ್ಯೂನ ನಾಟಕವೊ - ಮರುಳ ಮುನಿಯ ||
(ಕೆಲ + ಅಂಶದಲಿ) (ಭಿನ್ನತೆಯುಂ + ಅದರೊಡನೆ) (ಭ್ರಾಂತಿ + ಆಗೆ) (ಜಗದ + ಅನ್ಯೂನ)
352
ಪದನೃತ್ತಗತಿಗುಂಟು ಕಾಲಯತಿಲಯ ನಿಯತಿ |
ವದನರುಚಿಗುಂಟೆ ನಿಯಮಕ್ರಮ ನಿಬಂಧಂ ? ||
ವಿಧಿಯುಂ ವಿಪರ್ಯಯಮುವೊಂದಿರ್ಪನಟನದಲಿ |
ವಿದಿತವಾರ್ಗದರಾಳ ? - ಮರುಳ ಮುನಿಯ ||
(ಗತಿಗೆ + ಉಂಟು) (ಕಾಲ + ಯತಿ + ಲಯ) (ರುಚಿಗೆ + ಉಂಟೆ) (ವಿಪರ್ಯಯಮುಂ + ಒಂದಿರ್ಪ)
(ವಿದಿತ + ಆರ್ಗೆ + ಅದರ + ಆಳ)
353
ಹಾಸ್ಯದಿನೊ ಕರುಣೆಯಿನೊ ರಾಗದಿನೊ ರೌದ್ರದಿನೊ |
ಲಾಸ್ಯ ವಿಪರೀತ ಶತವೆಸಗುತಿರೆ ನಟನಂ ||
ದೃಶ್ಯವ ದಿದ್ರುಕ್ಷು ಪಿಡಿಯುವ ಮುನ್ನ ತನುವಿಪ - |
ರ್ಯಸ್ಯಮಿರಲರಿವೆಂತು ? - ಮರುಳ ಮುನಿಯ ||
(ಶತ + ಎಸಗುತ + ಇರೆ) (ವಿಪರ್ಯಸ್ಯಂ + ಇರಲ್ + ಅರಿವು + ಎಂತು)
ಅರ್ಥ:
ದಿದ್ರುಕ್ಷು = ವೀಕ್ಷಕನು
ವಿಪರ್ಯಸ್ಯ = ಬದಲಾವಣೆ
354
ನವನವೋನ್ಮೇಷದಲಿ ಭುವನನಟನಾಡುತಿರೆ |
ನವಭಾವ ನವರೂಪ ನವನಾಮವಮರೆ ||
ವಿವೃತಿಗೆಂದದನು ನೀಂ ಪಿಡಿವ ಮುನ್ನಮೆ ವಸ್ತು |
ನವವಿವರ್ತಿತಮಿಹುದೊ - ಮರುಳ ಮುನಿಯ ||
(ಭುವನನಟನ + ಆಡುತ + ಇರೆ) (ನಾಮವಂ + ಅಮರೆ) (ವಿವೃತಿಗೆ + ಎಂದ್ + ಅದನು)
(ನವವಿವರ್ತಿತಂ + ಅಹುದೊ)
ಅರ್ಥ:
ವಿವೃತಿ = ವಿವರಣೆ
ವಿವರ್ತಿತ = ಬದಲಾಯಿಸಲ್ಪಡುವ
355
ನಾಟಕವ ನೋಡುವಂಗಾಟದಲಿ ರುಚಿ ಬೇಕು |
ಬೇಟವೋ ಕಾಟವೋ ಕಳೆಯೋ ಪಗೆಯೋ ಅದು ||
ಆಟವೀ ಜಗವೊಂದು ವೇಷ ನೀನದರೊಳಗೆ |
ನೋಟನೋಡುವನು ಶಿವ - ಮರುಳ ಮುನಿಯ ||
(ನೋಡುವಂಗೆ + ಆಟದಲಿ) (ನೀನ್ + ಅದರೊಳಗೆ)
ಅರ್ಥ:
ಬೇಟ = ಕಾಮಲಾಲಸೆ
356
ಆಟಕೆಂದಳ್ತಿಯಿಂ ಮರಳಿನಲಿ ಮನೆಕಟ್ಟಿ |
ಊಟ ಪಾಟಗಳೆಂದು ನಲಿದಣುಗನೇಕೋ ||
ನಾಟಕವು ಸಾಕೆಂದು ಮನೆಯನೊದೆದೊಡೆವುದಕೆ |
ಸಾಟಿಯೋ ಶಿವನೃತ್ಯ - ಮರುಳ ಮುನಿಯ ||
(ಆಟಕೆ + ಎಂದು + ಆಳ್ತಿಯಿಂ) (ಪಾಟಗಳ್ + ಎಂದು) (ನಲಿದ + ಅಣುಗನ್ + ಏಕೊ) (ಸಾಕು + ಎಂದು)
( ಮನೆಯನ್ + ಒದೆದು + ಒಡೆವುದಕೆ)
ಅರ್ಥ:
ಅಳ್ತಿಯಿಂ = ಪ್ರೀತಿಯಿಂದ
ಅಣುಗ = ಬಾಲಕ
357
ಸರಸಹೃದಯವ ಸೂರೆಗೊಳುವ ನರ್ತಕಿಯವೊಲ್ |
ಸ್ವರತಾಳಲಯ ಕ್ಲ್ ಪ್ತಗತಿಯಿನುರುಕಾಲಂ ||
ಮರುಳನವೊಲೊದೆದೆಲ್ಲವನು ಮುರಿಯುತೊಮ್ಮೊಮ್ಮೆ |
ಪರಶಿವಂ ನರ್ತಿಪನೊ - ಮರುಳ ಮುನಿಯ ||
(ಕ್ಲ್ ಪ್ತಗತಿಯಿನ್ + ಉರುಕಾಲಂ ) (ಮರುಳನವೊಲ್ + ಒದೆದು + ಎಲ್ಲವನು) (ಮುರಿಯುತ + ಒಮ್ಮೊಮ್ಮೆ)
ಅರ್ಥ:
ಉರುಕಾಲಂ = ಬಹಳ ಹೊತ್ತು
358
ಪ್ರಕಟರಂಗಸ್ಥಳದಿ ಗೂಢದಲಿ ಚಲಿಸುತ್ತ |
ವಿಕಲ ವೇಷಂಗಳನು ನಲಿದು ಬೆರೆಯುತ್ತೆ ||
ಸಕಲನಾಗಿಯೆ ಮಿಕ್ಕು ತಾನಲ್ಲಿ ರಹಸಿಯದ |
ವಿಕಟ ರಸಿಕನ ನೆನೆಯೋ - ಮರುಳ ಮುನಿಯ ||
ಅರ್ಥ:
ವಿಕಲ = ಅಪೂರ್ಣ
359
ಜೀವಿತವೆ ನಾಟಕವೊ ಜೀವವೇ ಸೂತ್ರಧರ |
ನಾವು ನೀವವರೆಲ್ಲ ಪಾತ್ರಗಳು ವಿವಿಧ ||
ಭುವಿಲಾಸವೆ ರಂಗ ಮನುಜ ಕಥೆಯೇ ದೃಶ್ಯ |
ದೇವನಾ ಲೀಲೆಯಿದು - ಮರುಳ ಮುನಿಯ ||
(ನೀವು + ಅವರ್ + ಎಲ್ಲ)
360
ನಾಟಕವನಾಡಿದೆಯ ವೇಷವನು ಕಟ್ಟಿದೆಯ |
ಪಾಟವವ ತೋರಿದೆಯೇನಭಿನಯದ ಕಲೆಯೊಳ್ ? ||
ನೋಟಕರ್ ಪಟ್ಟರೇಂ ಚಾಕ್ಷುಷಭ್ರಾಂತಿಯನು |
ಆಟಕಾಟವೆ ವಿಹಿತ - ಮರುಳ ಮುನಿಯ ||
(ನಾಟಕವನ್ + ಆಡಿದೆಯ) (ತೋರಿದೆಯೇನ್ + ಅಭಿನಯದ) (ಆಟಕೆ + ಆಟವೆ)
ಅರ್ಥ:
ಪಾಟವ = ಸಾಮರ್ಥ್ಯ
ಚಾಕ್ಷುಷ = ಕಣ್ಣಿಗೆ ಸಂಬಂಧಪಟ್ಟ
ವೇಷವೋ ಜಗವೆಲ್ಲ
361
ವೇಷವೋ ಜಗವೆಲ್ಲ ಜೀವ ನಾಟಕ ವೇಷ |
ರೋಷ ಮೋಹಗಳ ಮತ್ಸರದಹಂಕೃತಿಯಾ ||
ಭಾಷೆ ಭೂಷಣದಿಂದ ನೂರಾರು ವೇಷಗಳ |
ತೋಷಣಂ ದೇವಂಗೆ - ಮರುಳ ಮುನಿಯ ||
(ಮತ್ಸರದ + ಅಹಂಕೃತಿಯಾ)
ಅರ್ಥ:
ತೋಷಣ = ಸಂತೋಷ
362
ಮಾರನ ಬೆರಲ್ ನಿನಗೆ ಕಚಕುಳಿಯನಿಕ್ಕದಿರೆ |
ವೈರ ನಿನ್ನೆದೆಯೊಳಕೆ ಹುಳಿಯ ಹಿಂಡದಿರೆ ||
ಸ್ವಾರಸ್ಯವೇನಿನ್ನು ಜಗದ ನಾಟಕದಲ್ಲಿ |
ಬೇರು ಸೃಷ್ಟಿಗೆ ಕಾಮ - ಮರುಳ ಮುನಿಯ ||
(ಕಚಕುಳಿಯನ್ + ಇಕ್ಕದೆ + ಇರೆ) (ನಿನ್ನ + ಎದೆಯ + ಒಳಕೆ) (ಹಿಂಡದೆ + ಇರೆ) (ಸ್ವಾರಸ್ಯವೇನ್ + ಇನ್ನು)
ಅರ್ಥ:
ಮಾರ = ಮನ್ಮಥ
363
ಮೂಲ ಸದ್ಬ್ರಹ್ಮದೇಕದ ಬಹುತೆಯೇ ವೇಷ |
ಕಾಲ ದೇಶದೊಳಾತ್ಮ ಸಿಕ್ಕಿಹುದು ವೇಷ ||
ತಾಳಿ ದೇಹವನಾತ್ಮ ಜೀವವಾದುದೆ ವೇಷ |
ಲೀಲೆ ವೇಷದ ಸರಣಿ - ಮರುಳ ಮುನಿಯ ||
(ಸತ್ + ಬ್ರಹ್ಮದ + ಏಕದ) (ದೇಶದೊಳ್ + ಆತ್ಮ) (ಜೀವ + ಆದುದೆ)
364
ನಟರಾಜನಂಗಾಂಗವಿಕ್ಷೇಪದಲಿ ಮೇಯ - |
ಘಟನೆಗಂ ಮಾಪಕವ ನಯನ ಚಾಲನೆಗಂ ||
ತ್ರುಟಿಮಾತ್ರದನಿವಾರ್ಯ ಭೇದವಿರೆ ವಿಜ್ಞಾನ |
ಪಟುತೆ ನಿಷ್ಫಲವಲ್ಲಿ - ಮರುಳ ಮುನಿಯ ||
(ನಟರಾಜನ + ಅಂಗಾಂಗ) (ತ್ರುಟಿಮಾತ್ರದ್ + ಅನಿವಾರ್ಯ) (ಭೇದ + ಇರೆ) (ನಿಷ್ಫಲ + ಅಲ್ಲಿ)
ಅರ್ಥ:
ವಿಕ್ಷೇಪ = ಕ್ಷೋಭೆ
ತ್ರುಟಿ = ಸ್ವಲ್ಪ
ಪಟುತೆ = ಸಾಮರ್ಥ್ಯ
365
ನರಶತಕ ಶತಲೋಕ ಶವಶತಕವೇಕಶವ |
ಪರಿಪರಿಯಭಿವ್ಯಕ್ತಿ ಜೀವ ಸತ್ತ್ವವಿರೆ ||
ಸ್ವಾರಸ್ಯಚಿತ್ರದಿಂ ಚಿತ್ರವೈವಿಧ್ಯದಿಂ |
ಶಿರವೊ ಸೃಷ್ಟಿಗೆ ವ್ಯಕ್ತಿ - ಮರುಳ ಮುನಿಯ ||
(ಶತಕವು + ಏಕ) (ಪರಿಯ + ಅಭಿವ್ಯಕ್ತಿ)
ಲಲಿತರೌದ್ರಗಳೆ ಜಗ
366
ಒಲವು ನಲುಮೆಯೆ ಸೃಷ್ಟಿ ಮುಳಿಸು ಮಂಕೇ ಪ್ರಲಯ - |
ಜಲಧಿಯಲೆ ಸಂಸಾರ ಶಿಲೆಯ ನೆಲೆ ಶಾಂತಿ ||
ಚಲನವಲನವೆ ಮಾಯೆಯಚಲಸಂಸ್ಥಿತಿ ಬೊಮ್ಮ |
ಲಲಿತರೌದ್ರಗಳೆ ಜಗ - ಮರುಳ ಮುನಿಯ ||
(ಮಾಯೆ + ಅಚಲ)
ಅರ್ಥ:
ಮುಳಿಸು = ಕೋಪ
ಪ್ರಲಯ = ನಾಶ
367
ಜೀವ ಜಡಗಳು ನದೀಕೂಲಗಳವೊಲು ಬೇರೆ |
ಜೀವ ಜೀವಗಳು ನದಿನದಿಯಂತೆ ಬೇರೆ ||
ಜೀವಾತ್ಮಗಳ್ ಪ್ರವಾಹೋರ್ಮಿಗಳವೊಲು ಬೇರೆ |
ತ್ರೈವಿಧ್ಯವೀಭೇದ - ಮರುಳ ಮುನಿಯ ||
(ಜೀವ + ಆತ್ಮಗಳ್) (ಪ್ರವಾಹ + ಊರ್ಮಿ) (ತ್ರೈವಿದ್ಯ + ಈ + ಭೇದ)
ಅರ್ಥ:
ಕೂಲ = ದಡ
ಊರ್ಮಿ = ಅಲೆ
368
ಏನ ತಾಂ ತಂದುಕೊಂಡಿಹನು ತನ್ನಯ ಬಾಳ್ಗೆ |
ಮಾನವಂ ಪ್ರಗತಿಯ ಸಾಧಿಪುಜ್ಜುಗದೊಳ್ ? ||
ಆನೆಯಡಿಗದು ಕೀಳ್ತ ಲತೆ ನಿಗಳವಾದಂತೆ |
ಜಾಣ್ತನದೆ ತನುಗುರಳು - ಮರುಳ ಮುನಿಯ ||
(ತಂದುಕೊಂಡು + ಇಹನು) (ಸಾಧಿಪ + ಉಜ್ಜುಗದ + ಒಳ್) (ಆನೆ + ಅಡಿಗೆ + ಅದು) (ತನುಗೆ + ಉರಳ್)
ಅರ್ಥ:
ಉರುಳು = ಪಾಶ
369
ಅಜವಸ್ತುವೊಂದದರ ಛಾಯೆಯೊಂದೀಯೆರಡೆ |
ನಿಜಗಳೀ ವಿಶ್ವಜೀವನದ ಲೀಲೆಯಲಿ ||
ಭಜಿಸಿ ನೀಂ ವಸ್ತುವನು ಛಾಯೆಯಾಟವನಾಡೆ |
ಮೃಜಿತಮದುಮಪ್ಪುದೆಲೊ - ಮರುಳ ಮುನಿಯ ||
(ಒಂದು + ಅದರ) (ಛಾಯೆ + ಒಂದು + ಈ + ಎರಡೇ) (ನಿಜಗಳು + ಈ) (ಛಾಯೆ + ಆಟವನ್ + ಆಡೆ)
(ಮೃಜಿತಂ + ಅದು + ಅಪ್ಪುದು + ಎಲೊ)
ಅರ್ಥ:
ಅಜ = ಬ್ರಹ್ಮ
ಮೃಜಿತ = ಪರಿಶುದ್ಧ
370
ಸುಳ್ಳೇನೊ ದಿಟವೇನೊ ಜಗದ ನಂಬಿಕೆಗಳಲಿ |
ಕಲ್ಲೋಲವಹುದು ಮನವಾದೊಡಂಜಿಕೆಯೇಂ ? ||
ನೆಲ್ಲು ಬಾಣಲಿಯ ಬಿಸಿಯೊಳು ಹೊರಳುತರಳಾಗೆ |
ಸಲ್ಲುವುದು ಹಿತರುಚಿಗೆ - ಮರುಳ ಮುನಿಯ ||
(ಕೊಲ್ಲೊಲ + ಅಹುದು) (ಮನ + ಆದೊಡಂ + ಅಂಜಿಕೆ + ಏಂ) (ಬಿಸಿಯ + ಒಳು) (ಹೊರಳುತೆ + ಅರಳು + ಆಗೆ)
ಅರ್ಥ:
ನೆಲ್ಲು = ಬತ್ತ
371
ಜೀವನವೆ ಸಂಪತ್ತು, ಬೇರೆ ಸಂಪತ್ತೇನು ? ||
ಭೂವಿಯಚ್ಚಿತ್ರಗಳಿನಗಲ್ದ ತಿಳಿಗಣ್ಣು ||
ಜೀವಲೋಕದ ದನಿಗೆ ಮರುದನಿಯ ಮಿಡಿಯುವುದೆ |
ದೈವ ಪ್ರಸಾದವವು - ಮರುಳ ಮುನಿಯ ||
(ಭೂಮಿಯತ್ + ಚಿತ್ರಗಳಿನ್ + ಅಗಲ್ದ)
ಅರ್ಥ:
ವಿಯತ್ = ಆಕಾಶ
419
ಭೋಗ ರೋಗ ವಿಯೋಗ ದಾರಿದ್ರ್ಯ ಚಿಂತೆಗಳ|
ಬೇಗೆಯಲಿ ಮಾನಸದ ಹಸಿರು ಮಾಗಾಯಿ||
ಮಾಗಿ ಹಣ್ಣಾಗುವುದು ಹುಳಿಯೆ ಜೇನಾಗುವುದು|
ಭೂಗೋಲದಮೃತವದು - ಮರುಳ ಮುನಿಯ||
420
ಕಹಿಕಷಾಯವದೆಂದು, ಕಾರಚೂರ್ಣಮಾದೆಂದು|
ಸಿಹಿಯ ಲೇಹ್ಯಮದೆಂದು ನಿನಗೆ ಹಿತವಹುದೋ||
ವಿಹಿತ ಗೈವನು ವೈದ್ಯ ನೀನಲ್ಲ, ರೋಗಿ ನೀಂ|
ಗ್ರಹಿಸು ವಿಧಿಯೌಷದವ - ಮರುಳ ಮುನಿಯ||
422
ಕುದಿ-ಕುದಿದು ಬಿಸಿಯಾರಿ ಮನ ತಣ್ಣಗಾದಂದು|
ಬೆದಬೆದಕಿ ಕೈಸೋತು ಹುರುಡಡಗಿದಂದು||
ಸೊದೆಗೆಂದು ಕಾದ ತುಟಿ ಸೊರಗಿ ತರಗಾದಂದು|
ಉದಯ ನವಯುಗ ನಿನಗೆ - ಮರುಳ ಮುನಿಯ||
543
ಎದೆಗಟ್ಟಿ ಯೆದೆಗಟ್ಟಿ ಯೆದೆಗಟ್ಟಿ ಯೆನ್ನುತಿರು |
ಪದ ಜಾರಿ ಬಿದ್ದಂದು ತಲೆ ತಿರುಗಿದಂದು ||
ಬದುಕೇನು ಜಗವೇನು ದೈವವೇನೆನಿಪಂದು|
ಅದಿರದೆದೆಯೇ ಸಿರಿಯೊ - ಮರುಳ ಮುನಿಯ ||
549
ಕುಸಿದು ಬೀಳಲಿ ಧರಣೆ ಕಳಚಿ ಬೀಳಲಿ ಗಗನ |
ನಶಿಸಲೀ ನಿನ್ನೆಲ್ಲವೇನಾದೊಡೇನು? ||
ಬಸವಳಿಯದಿರು ಜೀವ ವಶಿಸು ಶಿವಸತ್ತ್ವದಲಿ |
ಕುಶಲವೆದೆಗಟ್ಟಿಯಿರೆ - ಮರುಳ ಮುನಿಯ ||
553
ಸಿರಿಯೇಕೋ ಸೌಖ್ಯಕ್ಕೆ? ಅರುಣ೦ಗೆ ಬಾಡಿಗೆಯೆ? |
ಧರೆಯ ದಿನದಿನದ ಬಣ್ಣಗಳಿಗೇ೦ ಬೆಲೆಯೆ? ||
ಹರುಷವ೦ಗಡಿ ಸರಕೆ? ಹೃದಯದೊಳಚಿಲುಮೆಯದು |
ಸರಸತೆಯೇ ಸಿರಿತನವೊ— ಮರುಳ ಮುನಿಯ ||
554
ಬಡವನಾರ್? ಮಡದಿಯೊಲವಿನ ಸವಿಯನರಿಯದನು|
ಹುಡುಗರಾಟದಿ ಬೆರೆತು ನಗಲರಿಯದವನು||
ಉಡುರಾಜನೋಲಗದಿ ಕುಳಿತು ಮೈಮರೆಯದನು|
ಬಡಮನಸೆ ಬಡತನವೊ - ಮರುಳ ಮುನಿಯ||
631
ಪ್ರಕೃತಿಯನು ತಿಳಿ; ತಿಳಿವಿನಿಂ ಪ್ರಕೃತಿಯನು ದಾಟು |
ವಿಕೃತಿಗೆಯ್ಸುವ ಜಗದಿ ಸಂಸ್ಕೃತಿಯ ಗಳಿಸು ||
ಸುಕೃತ ಧರ್ಮಂ ಪ್ರಾಕೃತ ದ್ವಂದ್ವಗಳನು ಮೀರೆ |
ಸ್ವಕೃತವೋ ಸ್ವಾತ್ಮಗತಿ - ಮರುಳ ಮುನಿಯ ||
ಮುಂದುವರೆಯುವುದು...
ಇದೊಂದು ಅದ್ಭುತ ಪ್ರಯತ್ನ. ಕಗ್ಗಕ್ಕೆ ಸರಳ ಗದ್ಯಾನುವಾದ ಇದ್ದಿದ್ದರೆ ಚೆನ್ನಾಗಿರುತ್ತಿತ್ತು.
ಪ್ರತ್ಯುತ್ತರಅಳಿಸಿ