ಮಂಕುತಿಮ್ಮನ ಕಗ್ಗ


       "ಕನ್ನಡದ ಭಗವದ್ಗೀತೆ "

'ಜೀವನ ಸೌಂದರ್ಯ'ದ ಸಾಕಾರ ಮೂರ್ತಿ "ಡಿ ವಿ ಗುಂಡಪ್ಪ"ನವರು.

 
(ಕಾವ್ಯಾಸಕ್ತರ ಗಮನಕ್ಕೆ: ಜೀವನ ದಿಗ್ದರ್ಶನಕ್ಕೆ ರಹದಾರಿಯಾದ ಕಗ್ಗದ ಈ ಮಹೋನ್ನತ ಪಂಕ್ತಿಗಳ ಆಂಗ್ಲ ಅನುವಾದದ ಒಂದು ಪ್ರಯತ್ನವನ್ನು ನಾವು http://mankutimma-aphor.blogspot.com ಇಲ್ಲಿ ಕೈಗೊಂಡಿದ್ದೇವೆ.)

001
ಶ್ರೀವಿಷ್ಣು ವಿಶ್ವಾದಿಮೂಲ ಮಾಯಾಲೋಲ |
ದೇವ ಸರ್ವೇಶ ಪರಬೊಮ್ಮನೆಂದು ಜನಂ ||
ಆವುದನು ಕಾಣದೊಡಮಳ್ತಿಯಿಂ ನಂಬಿಹುದೊ |
ಆ ವಿಚಿತ್ರಕೆ ನಮಿಸೊ - ಮಂಕುತಿಮ್ಮ ||

002
ಜೀವ ಜಡರೂಪ ಪ್ರಪಂಚವನದಾವುದೋ |
ಆವರಿಸಿಕೊಂಡುಮೊಳನೆರೆದುಮಿಹುದಂತೆ||
ಭಾವಕೊಳಪಡದಂತೆ ಅಳತೆಗಳವಡದಂತೆ |
ಆ ವಿಶೇಷಕೆ ಮಣಿಯೊ - ಮಂಕುತಿಮ್ಮ ||

003
ಇಹುದೊ ಇಲ್ಲವೊ ತಿಳಿಯಗೊಡದೊಂದು ವಸ್ತು ನಿಜ |
ಮಹಿಮೆಯಿಂ ಜಗವಾಗಿ ಜೀವವೇಷದಲಿ ||
ವಿಹರಿಪುದದೊಳ್ಳಿತೆಂಬುದು ನಿಸದವಾದೊಡಾ |
ಗಹನ ತತ್ತ್ವಕೆ ಶರಣೊ - ಮಂಕುತಿಮ್ಮ ||

004
ಏನು ಜೀವನದರ್ಥ? ಏನು ಪ್ರಪಂಚಾರ್ಥ? |
ಏನು ಜೀವಪ್ರಪಂಚಗಳ ಸಂಬಂಧ? ||
ಕಾಣದಿಲ್ಲಿರ್ಪುದೇನಾನುಮುಂಟೆ? ಅದೇನು? |
ಜ್ಞಾನ ಪ್ರಮಾಣವೇಂ? - ಮಂಕುತಿಮ್ಮ ||

005
ದೇವರೆಂಬುದದೇನು ಕಗ್ಗತ್ತಲೆಯ ಗವಿಯೆ? |
ನಾವರಿಯಲಾರದೆಲ್ಲದರೊಟ್ಟು ಹೆಸರೆ? ||
ಕಾವನೊರ್ವನಿರಲ್ಕೆ ಜಗದ ಕಥೆಯೇಕಿಂತು? |
ಸಾವು ಹುಟ್ಟುಗಳೇನು? - ಮಂಕುತಿಮ್ಮ ||

006
ಒಗಟೆಯೇನೀ ಸೃಷ್ಟಿ? ಬಾಳಿನರ್ಥವದೇನು? |
ಬಗೆದು ಬಿಡಿಸುವರಾರು ಸೋಜಿಗವನಿದನು? ||
ಜಗವ ನಿರವಿಸಿದ ಕೈಯೊಂದಾದೊಡೇಕಿಂತು |
ಬಗೆಬಗೆಯ ಜೀವಗತಿ? - ಮಂಕುತಿಮ್ಮ ||

007
ಬದುಕಿಗಾರ್ ನಾಯಕರು, ಏಕನೊ ಅನೇಕರೋ? |
ವಿಧಿಯೊ ಪೌರುಷವೊ ಧರುಮವೊ ಅಂಧಬಲವೋ? ||
ಕುದುರುವುದದೆಂತು ಈಯವ್ಯವಸ್ಥೆಯ ಪಾಡು? |
ಅದಿಗುದಿಯೆ ಗತಿಯೇನೊ? - ಮಂಕುತಿಮ್ಮ ||

008
ಕ್ರಮವೊಂದು ಲಕ್ಷ್ಯವೊಂದುಂಟೇನು ಸೃಷ್ಟಿಯಲಿ? |
ಭ್ರಮಿಪುದೇನಾಗಾಗ ಕರ್ತೃವಿನ ಮನಸು? ||
ಮಮತೆಯುಳ್ಳವನಾತನಾದೊಡೀ ಜೀವಗಳು |
ಶ್ರಮಪಡುವುವೇಕಿಂತು? - ಮಂಕುತಿಮ್ಮ ||

009
ಏನು ಭೈರವಲೀಲೆಯೀ ವಿಶ್ವವಿಭ್ರಮಣೆ! |
ಏನು ಭೂತಗ್ರಾಮನರ್ತನೋನ್ಮಾದ! ||
ಏನಗ್ನಿ ಗೋಳಗಳು! ಏನಂತರಾಳಗಳು! |
ಏನು ವಿಸ್ಮಯ ಸೃಷ್ಟಿ? - ಮಂಕುತಿಮ್ಮ ||

010
ಏನು ಪ್ರಪಂಚವಿದು! ಏನು ಧಾಳಾಧಾಳಿ! |
ಏನದ್ಭುತಾಪಾರಶಕ್ತಿನಿರ್ಘಾತ! ||
ಮಾನವನ ಗುರಿಯೇನು? ಬೆಲೆಯೇನು? ಮುಗಿವೇನು? |
ಏನರ್ಥವಿದಕೆಲ್ಲ? - ಮಂಕುತಿಮ್ಮ ||

011
ಮುತ್ತಿರುವುದಿಂದು ಭೂಮಿಯನೊಂದು ದುರ್ದೈವ |
ಮೃತ್ಯು ಕುಣಿಯುತಲಿಹನು ಕೇಕೆಹಾಕುತಲಿ ||
ಸುತ್ತಿಪುದು ತಲೆಯನನುದಿನದ ಲೋಕದ ವಾರ್ತೆ |
ಎತ್ತಲಿದಕೆಲ್ಲ ಕಡೆ? - ಮಂಕುತಿಮ್ಮ ||

012
ಮಾನವರೊ ದಾನವರೊ ಭೂಮಾತೆಯನು ತಣಿಸೆ |
ಶೋಣಿತವನೆರೆಯುವರು ಬಾಷ್ಪ ಸಲುವುದಿರೆ? ||
ಏನು ಹಗೆ! ಏನು ಧಗೆ! ಏನು ಹೊಗೆ! ಯೀ ಧರಣಿ |
ಸೌನಿಕನ ಕಟ್ಟೆಯೇಂ? - ಮಂಕುತಿಮ್ಮ ||

013
ಪುರುಷಸ್ವತಂತ್ರತೆಯ ಪರಮಸಿದ್ಧಿಯದೇನು? |
ಧರಣಿಗನುದಿನದ ರಕ್ತಾಭಿಷೇಚನೆಯೆ? ||
ಕರವಾಲವನು ಪುಷ್ಪಸರವೆಂದು ಸೆಳೆದಾಡೆ |
ಪರಿಮಳವ ಸೂಸುವುದೆ? - ಮಂಕುತಿಮ್ಮ ||

014
ಒಂದೆ ಗಗನವ ಕಾಣುತೊಂದೆ ನೆಲವನು ತುಳಿಯು |
ತೊಂದೆ ಧಾನ್ಯವನುಣ್ಣುತೊಂದೆ ನೀರ್ಗುಡಿದು ||
ಒಂದೆ ಗಾಳಿಯನುಸಿರ್ವ ನರಜಾತಿಯೊಳಗೆಂತು |
ಬಂದುದೀ ವೈಷಮ್ಯ? - ಮಂಕುತಿಮ್ಮ ||

015
ಹಳೆಯ ಭಕ್ತಿಶ್ರದ್ಧೆಯಳಿಸಿಹೋಗಿವೆ ಮಾಸಿ |
ಸುಳಿದಿಲ್ಲವಾವ ಹೊಸ ದರ್ಶನದ ಹೊಳಪುಂ ||
ಪಳಗಿದ್ದ ಮನೆ ಬಿದ್ದ ಕುಂಟ ಕುರುಡನ ತೆರದಿ |
ತಳಮಳಿಸುತಿದೆ ಲೋಕ - ಮಂಕುತಿಮ್ಮ ||

016
ಇಳೆಯ ಬಿಟ್ಟಿನ್ನು ಮೆತ್ತಲುಮೈದದ ಪ್ರೇತ |
ವಲೆಯಂತೆ ಲೋಕ ತಲ್ಲಣಿಸುತಿಹುದಿಂದು ||
ಹಳೆಧರ್ಮ ಸತ್ತಿಹುದು ಹೊಸಧರ್ಮ ಹುಟ್ಟಿಲ್ಲ |
ತಳಮಳಕೆ ಕಡೆಯೆಂದೊ? - ಮಂಕುತಿಮ್ಮ ||

017
ತಳಮಳವಿದೇನಿಳೆಗೆ? ದೇವದನುಜರ್ ಮಥಿಸೆ |
ಜಳನಿಧಿಯೊಳಾದಂತೆ ಸುಧೆಗೆ ಪೀಠಿಕೆಯೇಂ? ||
ಹಾಳಾಹಳವ ಕುಡಿವ ಗಿರಿಶನಿದ್ದಿರ್ದೊಡೀ |
ಕಳವಳವದೇತಕೆಲೊ? - ಮಂಕುತಿಮ್ಮ ||

018
ನದಿಯ ತೆರೆಯವೊಲುರುಳಿ ಹೊರಳುತಿರುವುದು ಜೀವ |
ಮೊದಲಿಲ್ಲ ಮುಗಿವಿಲ್ಲ ನಿಲುವಿಲ್ಲವದಕೆ ||
ಬದುಕೇನು ಸಾವೇನು ಸೊದೆಯೇನು ವಿಷವೇನು? |
ಉದಕಬುದ್ಬುದವೆಲ್ಲ! - ಮಂಕುತಿಮ್ಮ ||

019
ಗಾಳಿ ಮಣ್ಣುಂಡೆಯೊಳಹೊಕ್ಕು ಹೊರಹೊರಳಲದು |
ಆಳೆನಿಪುದಂತಾಗದಿರೆ ಬರಿಯ ಹೆಂಟೆ ||
ಬಾಳೇನು ಧೂಳು ಸುಳಿ, ಮರ ತಿಕ್ಕಿದುರಿಯ ಹೊಗೆ |
ಕ್ಷ್ವೇಳವೇನಮೃತವೇಂ? - ಮಂಕುತಿಮ್ಮ ||

020
ಕಂಡ ದೈವಕ್ಕೆಲ್ಲ ಕೈಯ ಮುಗಿದೇನಹುದು? |
ಚಂಡಚತುರೋಪಾಯದಿಂದಲೇನಹುದು? ||
ತಂಡುಲದ ಹಿಡಿಯೊಂದು ತುಂಡುಬಟ್ಟೆಯದೊಂದು |
ಅಂಡಲೆತವಿದಕೇನೊ? - ಮಂಕುತಿಮ್ಮ ||

021
ಹೊನ್ನೆಂದು ಜಗದಿ ನೀಂ ಕೈಗೆ ಕೊಂಡುದನು ವಿಧಿ |
ಮಣ್ಣೆನುವನ್; ಅವನ ವರ ಮಣ್ಣೆನುವೆ ನೀನು ||
ಭಿನ್ನಮಿಂತಿರೆ ವಸ್ತುಮೌಲ್ಯಗಳ ಗಣನೆಯೀ |
ಪಣ್ಯಕ್ಕೆ ಗತಿಯೆಂತೊ? - ಮಂಕುತಿಮ್ಮ ||

022
ಕೃತ್ರಿಮವೊ ಜಗವೆಲ್ಲ | ಸತ್ಯತೆಯದೆಲ್ಲಿಹುದೊ? |
ಕರ್ತೃವೆನಿಸಿದನೆ ತಾಂ ಗುಪ್ತನಾಗಿಹನು ||
ಚತ್ರವೀ ಜಗವಿದರೊಳಾರ ಗುಣವೆಂತಹುದೊ! |
ಯಾತ್ರಿಕನೆ, ಜಾಗರಿರೊ - ಮಂಕುತಿಮ್ಮ ||

023
ತಿರುತಿರುಗಿ ತೊಳಲುವುದು ತಿರಿದನ್ನವುಣ್ಣುವುದು |
ಮೆರೆದು ಮೈಮರೆಯುವುದು ಹಲ್ಲ ಕಿರಿಯುವುದು ||
ಮರಳಿ ಕೊರಗಾಡುವುದು ಕೆರಳುವುದು ನರಳುವುದು |
ಇರವಿದೇನೊಣರಗಳೆ? - ಮಂಕುತಿಮ್ಮ ||

024
ನರರ ಭಯಬಯಕೆಗಳೆ ಸುರರ ತಾಯ್ತಂದೆಗಳೊ? |
ಸುರರಟ್ಟಹಾಸದಿನೆ ನರಭಕ್ತಿಯೊರಲೋ? ||
ಪರಿಕಿಸುವರೇನವರ್ಗಳನ್ಯೋನ್ಯಶಕ್ತಿಗಳ? |
ಧರುಮವೆಲ್ಲಿದರಲ್ಲಿ? - ಮಂಕುತಿಮ್ಮ ||

025
ಜೀವಗತಿಗೊಂದು ರೇಖಾಲೇಖವಿರಬೇಕು |
ನಾವಿಕನಿಗಿರುವಂತೆ ದಿಕ್ಕು ದಿನವೆಣಿಸೆ ||
ಭಾವಿಸುವುದೆಂತದನು ಮೊದಲು ಕೊನೆ ತೋರದಿರೆ? |
ಆವುದೀ ಜಗಕಾದಿ? - ಮಂಕುತಿಮ್ಮ ||

026
ಸೃಷ್ಟಿಯಾಶಯವದೇನಸ್ಪಷ್ಟ ಸಂಶ್ಲಿಷ್ಟ |
ಇಷ್ಟ ಮೋಹಕ ದಿವ್ಯಗುಣಗಳೊಂದು ಕಡೆ ||
ಕಷ್ಟ ಬೀಭತ್ಸ ಘೋರಂಗಳಿನ್ನೊಂದು ಕಡೆ |
ಕ್ಲಿಷ್ಟವೀ ಬ್ರಹ್ಮಕೃತಿ - ಮಂಕುತಿಮ್ಮ ||

027
ಧರೆಯ ಬದುಕೇನದರ ಗುರಿಯೇನು ಫಲವೇನು? |
ಬರಿ ಬಳಸು ಬಡಿದಾಟ ಬರಿ ಪರಿಭ್ರಮಣೆ ||
ತಿರುತಿರುಗಿ ಹೊಟ್ಟೆ ಹೊರಕೊಳುವ ಮೃಗಖಗಕಿಂತ |
ನರನು ಸಾಧಿಪುದೇನು? - ಮಂಕುತಿಮ್ಮ ||

028
ಕಾರುಣ್ಯ ಸರಸ ಸೌಂದರ್ಯ ರುಚಿಗಳೆ ಸೃಷ್ಟಿ- |
ಕಾರಣಮೆನಿಪ್ಪವೊಲು ತೋರ್ಪುದೊಂದು ಚಣ ||
ಕಾರ್ಪಣ್ಯ ಕಟುಕತೆಗಳೆನಿಪುದಿನ್ನೊಂದು ಚಣ |
ತೋರದಾವುದು ದಿಟವೊ - ಮಂಕುತಿಮ್ಮ ||

029
ಎರಡುಮಿರಬಹುದು ದಿಟ; ಶಿವರುದ್ರನಲೆ ಬೊಮ್ಮ! |
ಕರವೊಂದರಲಿ ವೇಣು, ಶಂಖವೊಂದರಲಿ! ||
ಬೆರಳ್ಗಳೆರಡಾನುಮಿರೆ ಕೈ ಚಿಟಿಕೆಯಾಡುವುದು |
ಒರುವನಾಡುವುದೆಂತು? - ಮಂಕುತಿಮ್ಮ ||

030
ಬ್ರಹ್ಮವೇ ಸತ್ಯ, ಸೃಷ್ಟಿಯೆ ಮಿಥ್ಯೆಯೆನ್ನುವೊಡೆ |
ಸಂಬಂಧವಿಲ್ಲವೇನಾ ವಿಷಯಯುಗಕೆ? ||
ನಮ್ಮ ಕಣ್ಮನಸುಗಳೆ ನಮಗೆ ಸಟೆ ಪೇಳುವೊಡೆ |
ನೆಮ್ಮುವುದದಾರನೋ? - ಮಂಕುತಿಮ್ಮ ||

031
ಬಚ್ಚಿಟ್ಟುಕೊಂಡಿಹುದೆ ಸತ್ಯ ಮಿಥ್ಯೆಯ ಹಿಂದೆ? |
ನಚ್ಚುವುದೆ ಮರೆಯೊಳಿಹುದನೆ ಸತ್ಯವೆಂದು? ||
ಅಚ್ಚರಿಯ ತಂತ್ರವಿದು; ಬ್ರಹ್ಮ ಸೃಷ್ಟಿಗಳೇಕೊ |
ಮುಚ್ಚಿಹವು ಸಾಜತೆಯ - ಮಂಕುತಿಮ್ಮ ||

032
ಪರಬೊಮ್ಮನೀ ಜಗವ ರಚಿಸಿದವನಾದೊಡದು |
ಬರಿಯಾಟವೋ ಕನಸೊ ನಿದ್ದೆ ಕಲವರವೋ? ||
ಮರುಳನವನಲ್ಲದೊಡೆ ನಿಯಮವೊಂದಿರಬೇಕು |
ಗುರಿಗೊತ್ತದೇನಿಹುದೊ? - ಮಂಕುತಿಮ್ಮ ||

033
ನರಪರೀಕ್ಷೆಯೆ ಬೊಮ್ಮನಾಶಯವೆ? ನಮ್ಮ ಬಾಳ್ |
ಬರಿ ಸಮಸ್ಯೆಯೆ? ಅದರ ಪೂರಣವದೆಲ್ಲಿ? ||
ಸುರಿದು ಪ್ರಶ್ನೆಗಳನುತ್ತರವ ಕುಡೆ ಬಾರದನ |
ಗುರುವೆಂದು ಕರೆಯುವೆಯ? - ಮಂಕುತಿಮ್ಮ ||

034
ಎಷ್ಟು ಚಿಂತಿಸಿದೊಡಂ ಶಂಕೆಯನೆ ಬೆಳೆಸುವೀ |
ಸೃಷ್ಟಿಯಲಿ ತತ್ತ್ವವೆಲ್ಲಿಯೊ ಬೆದಕಿ ನರನು ||
ಕಷ್ಟಪಡುತಿರಲೆನುವುದೇ ಬ್ರಹ್ಮವಿಧಿಯೇನೊ! |
ಅಷ್ಟೆ ನಮ್ಮಯ ಪಾಡು? - ಮಂಕುತಿಮ್ಮ ||

035
ಇರಬಹುದು; ಚಿರಕಾಲ ಬೊಮ್ಮ ಚಿಂತಿಸಿ ದುಡಿದು |
ನಿರವಿಸಿಹ ವಿಶ್ವಚಿತ್ರವ ಮರ್ತ್ಯನರನು ||
ಅರಿತೆನಾನೆನ್ನುವಂತಾಗೆ ಕೃತಿಕೌಶಲದ |
ಹಿರಿಮೆಗದು ಕುಂದಲ್ತೆ? - ಮಂಕುತಿಮ್ಮ ||


036
ಎಲ್ಲೆಲ್ಲಿಯುಂ ಮೋಹಸಂಭ್ರಾಂತಿಗಳ ಕವಿಸಿ |
ಸಲ್ಲದ ಕುಮಾರ್ಗದೊಳು ನಿನ್ನ ತಾಂ ನಡಸಿ ||
ಗೆಲ್ಲಲಿಲ್ಲಿವನಾ ಪರೀಕ್ಷೆಯೊಳಗೆಂದು ವಿಧಿ |
ಸೊಲ್ಲಿಪುದು ಸರಿಯೇನೊ? - ಮಂಕುತಿಮ್ಮ ||

037
ಅವತರಿಸಿಹನು ಬೊಮ್ಮ ವಿಶ್ವದೇಹದೊಳೆನ್ನೆ |
ಅವನ ವೇಷಗಳೇಕೆ ಮಾರ್ಪಡುತಲಿಹವು? ||
ತವಕಪಡನೇತಕೋ ಕುರುಹ ತೋರಲು ನಮಗೆ |
ಅವಿತುಕೊಂಡಿಹುದೇಕೊ? - ಮಂಕುತಿಮ್ಮ ||

038
ಬೇರಯಿಸಿ ನಿಮಿಷನಿಮಿಷಕಮೊಡಲಬಣ್ಣಗಳ |
ತೋರಿಪೂಸರವಳ್ಳಿಯಂತೇನು ಬೊಮ್ಮಂ? ||
ಪೂರ ಮೈದೋರೆನೆಂಬಾ ಕಪಟಿಯಂಶಾವ |
ತಾರದಿಂದಾರ್ಗೇನು? - ಮಂಕುತಿಮ್ಮ ||

039
ಪುಸಿಯ ನೀಂ ಪುಸಿಗೈದು ದಿಟವ ಕಾಣ್ಬವೊಲೆಸಗೆ |
ಮುಸುಕ ತಳೆದಿಹನು ಪರಬೊಮ್ಮನೆನ್ನುವೊಡೆ ||
ಒಸೆದೇತಕವನೀಯನೆಮಗೊಂದು ನಿಜಕುರುಹ |
ನಿಶೆಯೊಳುಡುಕರದವೊಲು? - ಮಂಕುತಿಮ್ಮ ||

040
ನಿಶಿಯೊಳೇಂ ಕಾಣಬಾರನು ಹಗಲನೊಲ್ಲದೊಡೆ? |
ಶಶಿರವಿಗಳವನ ಮನೆಕಿಟಕಿಯಾಗಿರರೇಂ? ||
ಮಸಕುಬೆಳಕೊಂದಾದ ಸಂಜೆಮಂಜೇನವನು |
ಮಿಸುಕಿ ಸುಳಿಯುವ ಸಮಯ? - ಮಂಕುತಿಮ್ಮ ||

041
ಕದಕಗಳಿಯನು ಬಿಗಿದು ಬೊಮ್ಮ ಗುಡಿಯೊಳಗಿರಲಿ |
ಅದರ ಕೀಲ್ಕುಂಚಿಕೆಯ ಹೊರಕೆಸೆಯೆ ಸಾಕು ||
ಪದವಾಕ್ಯವಿದರಾಗ ವಾದಗಡಣೆಯ ಬಿಟ್ಟು |
ಒದವಿಪರು ದಿಟದರಿವ - ಮಂಕುತಿಮ್ಮ ||

042
ಆಹ! ಈ ಮೋಹಗಳೊ ನೇಹಗಳೊ ದಾಹಗಳೊ |
ಊಹಿಪೆಯ ಸೃಷ್ಟಿಯಲಿ ಹೃದಯವಿಹುದೆಂದು? ||
ಹೋಹೊ ಹಾಹಾ ಎಂದು ನಮ್ಮ ಬಾಯ್ಬಿಡಿಸುವುದೆ |
ಈ ಹರಿಬದೊಳಗುಟ್ಟೊ? - ಮಂಕುತಿಮ್ಮ ||

043
ಮೇಲೆ ಕೆಳಗೊಳಗೆ ಬಳಿ ಸುತ್ತಲೆತ್ತೆತ್ತಲುಂ |
ಮೂಲೆಮುಲೆಯಲಿ ವಿದ್ಯುಲ್ಲಹರಿಯೊಂದು ||
ಧೂಲಿಕಣ ಭೂಗೋಳ ರವಿ ಚಂದ್ರ ತಾರೆಗಳ |
ಚಾಲಿಪುದು ಬಿಡು ಕೊಡದೆ - ಮಂಕುತಿಮ್ಮ ||

044
ಮಂದಾಕ್ಷಿ ನಮಗಿಹುದು ಬಲುದೂರ ಸಾಗದದು |
ಸಂದೆ ಮಸಕಿನೊಳಿಹುದು ಜೀವನದ ಪಥವು ||
ಒಂದುಮೆಟುಕದು ಕೈಗೆ; ಏನೊ ಕಣ್ಕೆಣಕುವುದು |
ಸಂದಿಯವೆ ನಮ್ಮ ಗತಿ! - ಮಂಕುತಿಮ್ಮ ||

045
ಬೆಂಕಿಯುಂಡೆಯ ಬೆಳಕು ಬೆಣ್ಣೆಯುಂಡೆಯ ಬೆಳಕು |
ಮಂಕುವಿಡಿಸಲು ಸಾಕು ಮಣ್ಣುಂಡೆ ಕಣ್ಗೆ ||
ಶಂಕೆಗೆಡೆಯಿರದು ಕತ್ತಲೆಯೆ ಜಗವನು ಕವಿಯೆ |
ಬೊಂಕುದೀವಿಗೆ ತಂಟೆ - ಮಂಕುತಿಮ್ಮ ||

046
ಇರಲಿ ಜೀವರಹಸ್ಯವರೆಪರದೆಯೊಳಗಡಗಿ |
ಅರಸಿ ವರಿಸುವರಾರು ಬೀದಿಬತ್ತಲಿಯ? ||
ಅರಳಿಪುದದಡಗಿರ್ಡೊಡಾಗ ನಮ್ಮೆದೆಗಣ್ಣ |
ಸುರಸತೆಯ ಕುತುಕದಿಂ - ಮಂಕುತಿಮ್ಮ ||

047
ಅರೆಗಣ್ಣು ನಮದೆಂದು ಕೊರಕೊರಗಿ ಫಲವೇನು? |
ಅರೆಬೆಳಕು ಧರೆಯೊಳೆಂದೊರಲಿ ಸುಖವೇನು? ||
ಇರುವ ಕಣ್ಣಿರುವ ಬೆಳಕಿನೊಳಾದನಿತ ನೋಡಿ |
ಪರಿಕಿಸಿದೊಡದು ಲಾಭ - ಮಂಕುತಿಮ್ಮ ||

048
ಒಂದಿಹುದುಪಾಯವೋರೊರ್ವನರೆಗಣ್ಣುಗಳು |
ಮೊಂದೊಂದು ಸತ್ಯಾಂಶಕಿರಣಗಳ ಪಿಡಿದು ||
ಒಂದುಗೂಡಿದೊಡವರ್ಗಳರಿವನೆಲ್ಲವನಾಗ |
ಮುಂದು ಸಾಗುವೆವಿನಿತು - ಮಂಕುತಿಮ್ಮ ||

049
ಪಂಡಿತರೆ ಶಾಸ್ತ್ರಿಗಳೆ ಮಿಥ್ಯೆಯಿಂ ತಥ್ಯಕ್ಕೆ |
ಖಂಡಿತದಿ ಸೇತುವೆಯ ಕಟ್ಟುವೊಡೆ ನೀವು ||
ಕಂಡಿಹಿರ ನರಹೃದಯದಾಳ ಸುಳಿ ಬಿರುಬುಗಳ? |
ದಂಡವದನುಳಿದ ನುಡಿ - ಮಂಕುತಿಮ್ಮ ||

050
ಮನೆಯೆಲ್ಲಿ ಸತ್ಯಕ್ಕೆ? ಶ್ರುತಿ ತರ್ಕಮಾತ್ರದೊಳೆ? |
ಅನುಭವಮುಮದರೊಂದು ನೆಲೆಯಾಗದಿಹುದೇಂ? ||
ಮನು{ಜ}ಹೃದಯಾಂಗಣದೊಳೆನಿತೆನಿತೊ ದನಿಯುದಿಸಿ |
ಅಣಕಿಪುವು ತರ್ಕವನು - ಮಂಕುತಿಮ್ಮ ||

051
ಸೆಳೆಯುತಿರುವುದದೊಂದು ಹೊರಬೆಡಗಿನೆಳೆಗಳೆ |
ನ್ನೊಳಗಿನಸುವೆಲ್ಲವನು ಕಟ್ಟಿನಿಂ ಬಿಗಿದು ||
ಎಳೆದಾಟವೇಂ ಋಣಾಕರ್ಷಣೆಯೊ? ಸೃಷ್ಟಿವಿಧಿ |
ಯೊಳತಂತ್ರವೋ? ನೋಡು - ಮಂಕುತಿಮ್ಮ ||

052
ಗಗನನೀಲಿಮೆಯೆನ್ನ ಕಣ್ಗೆ ಸೊಗವೀವಂತೆ |
ಮುಗಿವ ತರಣಿಯ ರಕ್ತ ಹಿತವೆನಿಸದೇಕೊ! ||
ಸೊಗದ ಮೂಲವದೆಲ್ಲಿ ನೀಲದೊಳೊ ಕೆಂಪಿನೊಳೊ |
ಬಗೆವೆನ್ನ ಮನಸಿನೊಳೊ? - ಮಂಕುತಿಮ್ಮ ||

053
ತೃಣಕೆ ಹಸಿರೆಲ್ಲಿಯದು? ಬೇರಿನದೆ? ಮಣ್ಣಿನದೆ? |
ದಿನಪನದೆ? ಚಂದ್ರನದೆ? ನೀರಿನದೆ? ನಿನದೆ? ||
ತಣಿತಣಿವ ನಿನ್ನ ಕಣ್ಣಿನ ಪುಣ್ಯವೋ? ನೋಡು |
ಗುಣಕೆ ಕಾರಣವೊಂದೆ? - ಮಂಕುತಿಮ್ಮ ||

054
ಫಲವಿಲ್ಲ ಕಾರ್ಯಕಾರಣವಾದದಿಂ ತತ್ತ್ವ |
ಸಿಲುಕದೆಮ್ಮಯ ತರ್ಕಕರ್ಕಶಾಂಕುಶಕೆ ||
ಸುಳಿವುದಾಗೀಗಳದು ಸೂಕ್ಷ್ಮಾನುಭವಗಳಲಿ |
ತಿಳಿಮನದೆ ನೋಳ್ಪರ್ಗೆ - ಮಂಕುತಿಮ್ಮ ||

055
ಕುರುಡನಿನಚಂದ್ರರನು ಕಣ್ಣಿಂದ ಕಾಣುವನೆ? |
ಅರಿಯುವಂ ಸೋಂಕಿಂದೆ ಬಿಸಿಲುತಣಿವುಗಳ ||
ನರನುಮಂತೆಯೆ ಮನಸಿನನುಭವದಿ ಕಾಣುವನು |
ಪರಸತ್ತ್ವಮಹಿಮೆಯನು - ಮಂಕುತಿಮ್ಮ ||

056
ಮೇಲಿಂದ ನಕ್ಷತ್ರಜಯಘೋಷ ಸುತ್ತಣಿಂ |
ಭೂಲೋಕದರಚು ಕೆಳಗಿಂ ಮೂಳೆಯಳುವು ||
ಕೇಳಬರುತೀ ಮೂರುಕೂಗೆನ್ನ ಹೃದಯಲಿ |
ಮೇಳಯಿಸುತಿದೆ ಸಂತೆ - ಮಂಕುತಿಮ್ಮ ||

057
ಆಗುಂಬೆಯಸ್ತಮಯ ದ್ರೋಣಪರ್ವತದುದಯ |
ತ್ಯಾಗರಾಜನ ಗಾನ ವಾಲ್ಮೀಕಿ ಕವನ ||
ಆಗಿಸವೆ ತಾವಿವೆಮ್ಮಂತರಂಗದಿ ಸತ್ಯ |
ಯೋಗಪುಲಕಾಂಕುರವ? - ಮಂಕುತಿಮ್ಮ ||

058
ಮಲೆಕಣಿವೆಗಳ ಬೆರಗು ಪ್ರಕೃತಿಕೋಪದ ಗುಡುಗು |
ಕೆಳೆಯೊಲವು ನಲ್ಲೆಯ ವಿಯೋಗವಿಂತಹವು ||
ನಿಲಿಸಿ ಮನದೋಟವನು ಮೂಕಗೊಳಿಪುವುವೆನ್ನ |
ನೊಳದನಿಯದೊಂದರಿಂ - ಮಂಕುತಿಮ್ಮ ||

059
ಮಣಿಮಂತ್ರತಂತ್ರಸಿದ್ಧಿಗಳ ಸಾಕ್ಷ್ಯಗಳೇಕೆ |
ಮನಗಾಣಿಸಲು ನಿನಗೆ ದೈವದದ್ಭುತವ? ||
ಮನುಜರೊಳಗಾಗಾಗ ತೋರ್ಪ ಮಹನೀಯಗುಣ |
ವನುವಾದ ಬೊಮ್ಮನದು - ಮಂಕುತಿಮ್ಮ ||

060
ಗ್ರೀಸಿನಾ ಕಬ್ಬಗಳನೋದುವರು ದೆಹಲಿಯಲಿ |
ಕಾಶಿಯಾ ಶಾಸ್ತ್ರಗಳನಾಕ್ಸ್ಫರ್ಡಿನವರು ||
ದೇಶಕಾಲವಿಭಾಗ ಮನದ ರಾಜ್ಯದೊಳಿರದು |
ಶ್ವಾಸವದು ಬೊಮ್ಮನದು - ಮಂಕುತಿಮ್ಮ ||

061
ನಕ್ಷತ್ರಮಂಡಲದಿನಾಚೆಯಿಂದೊಂದು ದನಿ |
ವಕ್ಷೋಗುಹಾಂತರದಿನೊಂದು ದನಿಯಿಂತೀ ||
ಸಾಕ್ಷಿದ್ವಯವು ನಿನ್ನೊಳೊಂದುಗೂಡಿದೊಡದೇ |
ಪ್ರೇಕ್ಷ ಪರಬೊಮ್ಮನದು - ಮಂಕುತಿಮ್ಮ ||

062
ಭೌತವಿಜ್ಞಾನಿ ರವಿತಾರೆಧರೆಗಳ ಚಲನ |
ರೀತಿ ವೇಗವನಳೆದು ಶಕ್ತಿಗಳ ಗುಣಿಪನ್ ||
ಪ್ರೀತಿರೋಷಗಳನವನಳೆವನೇನ್? ಅವ್ಯಕ್ತ |
ಚೇತನವನರಿವನೇಂ? - ಮಂಕುತಿಮ್ಮ ||

063
ನರಭಾಷೆ ಬಣ್ಣಿಪುದೆ ಪರಸತ್ತ್ವರೂಪವನು? |
ಅರಿಯದದು ನಮ್ಮೆದೆಯ ಭಾವಗಳನೊರೆಯೆ ||
ಪರಮಾನುಭವಗಳುಲಿಯನುಭವಿಗಳೊಳಕಿವಿಗೆ |
ಒರಟುಯಾನವೊ ಭಾಷೆ - ಮಂಕುತಿಮ್ಮ ||

064
ಚಿತ್ತದನುಭವ ಭಾವ ಸಂಭಾವನೆಗಳೆಲ್ಲ |
ಬತ್ತವದನು ವಿಚಾರಯುಕ್ತಿಗಳು ಕುಟ್ಟೆ ||
ತತ್ತ್ವತಂಡುಲ ದೊರೆಗುಮದು ವಿವೇಚಿತತತ್ತ್ವ |
ನಿತ್ಯ ಭೋಜನ ನಮಗೆ - ಮಂಕುತಿಮ್ಮ ||

065
ಪುಸ್ತಕದಿ ದೊರೆತರಿವು ಮಸ್ತಕದಿ ತಳೆದ ಮಣಿ |
ಚಿತ್ತದೊಳು ಬೆಳೆದರಿವು ತರು ತಳೆದ ಪುಷ್ಪ ||
ವಸ್ತು ಸಾಕ್ಷಾತ್ಕಾರವಂತರೀಕ್ಷಣೆಯಿಂದ |
ಶಾಸ್ತ್ರಿತನದಿಂದಲ್ಲ - ಮಂಕುತಿಮ್ಮ ||

066
ವ್ಯರ್ಥವೆಂದೆನಿಪುದಲ ಸೃಷ್ಟಿಯಲಿ ಬಹುಭಾಗ? |
ಅರ್ಥವೇಂ ಕ್ರಿಮಿಕೀಟಕೋಟಿ ರಚನೆಯಲಿ? ||
ಕರ್ತನಾಲೋಚಿಸದ ದುಂದಿನವನೆಂಬ ನುಡಿ |
ಯರ್ಧದೃಷ್ಟಿಯ ವಿವರ - ಮಂಕುತಿಮ್ಮ ||

067
ಸ್ರಷ್ಟುಸಂಕಲ್ಪಲಿಪಿಯೆಲ್ಲ ನಮ್ಮೆದುರಿಲ್ಲ |
ದೃಷ್ಟಿಗೋಚರವದರೊಳೊಂದು ಗೆರೆ ಮಾತ್ರ ||
ಅಷ್ಟರಿಂದಿದು ನಷ್ಟವದು ಶಿಷ್ಟವೆನ್ನುವುದೆ? |
ಕ್ಲಿಷ್ಟದ ಸಮಸ್ಯೆಯದು - ಮಂಕುತಿಮ್ಮ ||

068
ಎಲ್ಲ ಅರೆಬೆಳಕು ಅರೆಸುಳಿವು ಅರೆತಿಳಿವುಗಳಿಲ್ಲಿ |
ಎಲ್ಲಿ ಪರಿಪೂರಣವೊ ಅದನರಿಯುವನಕ ||
ಸೊಲ್ಲಿಸುವರಾರು ಸೃಷ್ಟಿಯ ಪೇಟಿಯೊಳಗುಟ್ಟ? |
ಎಲ್ಲ ಬಾಳು ರಹಸ್ಯ - ಮಂಕುತಿಮ್ಮ ||

069
ಹೆಸರನರಿಯದ ಸಸಿಯೊಳಿರವೆ ರಸಗಂಧಗಳು? |
ಬಿಸಿಲದನು ಪಕ್ವಗೊಳಿಸುತೆ ಬಿಡಿಸದಿಹುದೆ? ||
ಪಸರಿಸದೆ ಗಾಳಿಯದನೊಯ್ದು ದಿಸೆದಿಸೆಗಳೊಳು? |
ಉಸಿರುತಿಹೆವದ ನಾವು - ಮಂಕುತಿಮ್ಮ ||

070
ಭೂವಿಷಯದಲಿ ಪುದಿದ ರಸವಾಸನೆಗಳೆಲ್ಲ |
ಆವಿಯಾಗೇಳ್ದು ಮುಗಿಲಾಗಿ ಮಳೆಗರೆದು ||
ಬಾವಿಗೂಟೆಯನಿತ್ತು ನರರೊಡಲ ಸೇರುವುದು |
ದೈವ ರಸತಂತ್ರವಿದು - ಮಂಕುತಿಮ್ಮ ||

071
ತರಣಿ ಕಿರಣದ ನಂಟು ಗಗನ ಸಲಿಲದ ನಂಟು |
ಧರಣಿ ಚಲನೆಯ ನಂಟು ಮರುತನೊಳ್ನಂಟು ||
ಪರಿಪರಿಯ ನಂಟುಗಳಿನೊಂದು ಗಂಟೀ ವಿಶ್ವ |
ಕಿರಿದು ಪಿರಿದೊಂದಂಟು - ಮಂಕುತಿಮ್ಮ ||

072
ಈ ವಿಶ್ವದಲಿ ನೋಡಲೆಲ್ಲರೆಲ್ಲರ ನಂಟು |
ಆವನಾ ಬಂಧುತೆಯ ಜಡೆಯ ಬಿಡಿಸುವನು? ||
ಜೀವ ಜೀವಕೆ ನಂಟು ಜಡ ಚೇತನಕೆ ನಂಟು |
ಆವುದದಕಂಟಿರದು? - ಮಂಕುತಿಮ್ಮ ||

073
ನಂಟು ತಂಟೆಗಳ ಗಂಟೀ ಬ್ರಹ್ಮಭಂಡಾರ |
ಅಂಟಿಲ್ಲವೆನಗಿದರೊಳೆನ್ನದಿರದೆಂದುಂ ||
ಒಂಟಿ ನೀನೊಳಜಗಕೆ ಭಂಟ ಹೊರಜಗಕಾಗಿ |
ಒಂಟಿಸಿಕೊ ಜೀವನವ - ಮಂಕುತಿಮ್ಮ ||

074
ಸುಮ್ಮನೊಬ್ಬಂಟಿಯೆಂತಿಹುದು? ಬೇಸರವಹುದು |
ಹೊಮ್ಮುವೆನು ಕೋಟಿರೂಪದಲಿ ನಾನೆಂದು ||
ಬೊಮ್ಮನೆಳಸಿದನಂತೆ. ಆಯೆಳಸಿಕೆಯೆ ಮಾಯೆ |
ನಮ್ಮಿರವು ಮಾಯೆಯಲಿ - ಮಂಕುತಿಮ್ಮ ||

075
ಮರ ತನ್ನ ಹೆತ್ತ ಬೀಜವನಿಲ್ಲವೆನಿಸಿ ವಿ- |
ಸ್ತರಿಸುವಂದದಿ, ಸೃಷ್ಟಿ ತನ್ನ ಮೂಲವನು ||
ಮರೆಮಾಚಿ ತಾನೆ ಮೆರೆಯುತ್ತಿಹುದು ಕಣ್ಗಳಿಗೆ |
ನೊರೆ ಸೃಷ್ಟಿ ಪಾಲ್ ಬ್ರಹ್ಮ - ಮಂಕುತಿಮ್ಮ ||

076
ಬಹುವಾಗಲೆಳಸಿ ತಾನೊಬ್ಬಂಟಿ ಬೊಮ್ಮ ನಿಜ |
ಮಹಿಮೆಯಿಂ ಸೃಜಿಸಿ ವಿಶ್ವವನಲ್ಲಿ ನೆಲಸಿ ||
ವಹಿಸಿ ಜೀವತೆಯ ಮಾಯೆಯ ಸರಸವಿರಸದಲಿ |
ವಿಹರಿಪನು ನಿರ್ಲಿಪ್ತ! - ಮಂಕುತಿಮ್ಮ ||

077
ತನ್ನ ಹೊಳಹೊಳಪುಗಳ ನೆನೆನೆನೆದು ಮೈಮರೆತ |
ರನ್ನವೋ ಬ್ರಹ್ಮ; ನೋಡವನು---ನಿಜಪಿಂಛ ||
ವರ್ಣದೆಣಿಕೆಯಲಿ ತನ್ನನೆ ಮರೆತ ನವಿಲವೊಲು |
ತನ್ಮಯನೊ ಸೃಷ್ಟಿಯಲಿ - ಮಂಕುತಿಮ್ಮ ||

078
ತರುಣಿ ತನ್ನೊಡವೆಗಳ ತಳೆಯುತ್ತ ತೆಗೆಯುತ್ತ |
ಪರಿಕಿಸುತೆ ಮುಕುರದಲಿ ಸೊಗಸುಗಳ ಪರಿಯ ||
ಮರೆತೆಲ್ಲವನು ವಿಲಸಿಪಂತೆ ತಾಂ ವಿಶ್ವದಲಿ |
ಮೆರೆಯುವನು ಪರಬೊಮ್ಮ - ಮಂಕುತಿಮ್ಮ ||

079
ಬರೆವ ಹಲಗೆಯನೊಡೆದು ಬಾಲಕನು ತಾನದನು |
ಮರಳಿ ಜೋಡಿಪೆನೆನ್ನುತಾಯಾಸಗೊಳುತ ||
ಸರಿಚೌಕಗೈವಾಟದಲಿ ಜಗವ ಮರೆವಂತೆ |
ಪರಬೊಮ್ಮ ಸೃಷ್ಟಿಯಲಿ - ಮಂಕುತಿಮ್ಮ ||

080
ಚೀಟಿಯಾಟದ ಬಿನದಿ ತಾನೊರ್ವನಿರ್ವರವೊಲ್ |
ಆಟವಾಡುತಲಿ ತನ್ನೊರ್ತನವ ಮರೆವಾ ||
ಮಾಟದಲಿ ಬೊಮ್ಮನುಂ ತನ್ನೇಕತೆಯ ಜೀವ |
ಪಾಟಿಯಲಿ ಮರೆತಿಹನು - ಮಂಕುತಿಮ್ಮ ||

081
ಮರೆತಿಹನೆ ಬೊಮ್ಮ? ಮರೆತಿಲ್ಲ; ಮರೆತವೊಲಿಹನು |
ಧರಿಸಿ ಜೀವಾಕೃತಿಯ ಜಗದಿ ತನ್ನನೆ ತಾನ್ ||
ಅರಸಿಕೊಳುವವೊಲಿಹುದು; ದೊರೆತವೋಲ್ ತೋರೆ ಸುಖ |
ದೊರೆವವರೆಗಾಯಸವೊ - ಮಂಕುತಿಮ್ಮ ||

082
ಬನ್ನಿರಾಡುವ ಕಣ್ಣಮುಚ್ಚಾಲೆಯಾಟವನು |
ಎನ್ನನರಸಿರಿ ಬನ್ನಿ ಮಕ್ಕಳಿರ ಬೇಗ ||
ಬನ್ನಿರಾಟವ ಬೇಡವೆಂಬರನು ನಾಂ ಬಿಡೆನು |
ಎನ್ನುವಜ್ಜಿಯೊ ಬೊಮ್ಮ - ಮಂಕುತಿಮ್ಮ ||

083
ಮಾನಸವ ಚಿಂತೆವಿಡಿದಂದೊರ್ವನೆರಡಾಗಿ |
ತಾನದಾರೊಳೊ ವಾದಿಸುವನಂತೆ ಬಾಯಿಂ ||
ದೇನನೋ ನುಡಿಯುತ್ತ ಕೈಸನ್ನೆಗೈಯುವನು |
ಭಾನವೊಂದರೊಳೆರಡು - ಮಂಕುತಿಮ್ಮ ||

084
ಅಣು ಭೂತ ಭೂಗೋಲ ತಾರಾಂಬರಾದಿಗಳ |
ನಣಿಮಾಡಿ ಬಿಗಿದು ನಸು ಸಡಿಲವನುಮಿರಿಸಿ ||
ಕುಣಿಸುತಿರುವನು ತನ್ನ ಕೃತಿಕಂತುಕವನದರೊ |
ಳಣಗಿರ್ದು ಪರಬೊಮ್ಮ - ಮಂಕುತಿಮ್ಮ ||

085
ನಭದ ಬಲಯೊಳನಂತ, ಮನದ ಗುಹೆಯೊಳನಂತ |
ವುಭಯದಾ ನಡುವೆ ಸಾದ್ಯಂತ ಜೀವಕಥೆ ||
ವಿಭುವೊಬ್ಬನೀ ಗಾಳಿಬುಡ್ಡೆಗಳನೂದುವನು |
ಹಬೆಗುಳ್ಳೆಯೋ ಸೃಷ್ಟಿ - ಮಂಕುತಿಮ್ಮ ||

086
ಗಗನ ತಲೆನವಿರಾಗೆ ಪೆರೆತಾರೆ ಹೂವಾಗೆ |
ಜಗವೆಲ್ಲ ವಪುವಾಗೆ ಮಾಯೆ ಸತಿಯಾಗೆ ||
ನಗುನಗುವ ಬೊಬ್ಬಿಡುವ ಜೀವತಾಂಡವರಸಿಕ |
ಭಗವಂತ ಶಿವರುದ್ರ - ಮಂಕುತಿಮ್ಮ ||

087
ಬೆಳೆ ಹೊಳಪು ವಿಕಸನ ವಿಕಾರ ಸಂಭ್ರಮಗಳಲಿ |
ಬೆಳಕು ವೇಗಗಳೆನಿಪ ಕಾಲ ದಿಕ್ಕುಗಳ ||
ಚಲನೆಯಲಿ ವಿಶ್ವಸಂಮೋಹನಗಳೆಲ್ಲವಾ |
ವಿಲಸಿತವು ಬೊಮ್ಮನದು - ಮಂಕುತಿಮ್ಮ ||

088
ಚಲನೆ ವಿಶ್ವಾಸ್ತರಣೆಯದುವೆ ಮಾಯಾಭ್ರಮಣೆ |
ಸಲೆ ಬಗೆಯಲದು ಪರಬ್ರಹ್ಮ ವಿಸ್ಫುರಣೆ ||
ಥಳಥಳಿಕೆ ವಜ್ರದಲಿ ನೈಜವಿರುವಂತೆಯು |
ಜ್ಜ್ವಲತೆ ಬೊಮ್ಮಗೆ ನೈಜ - ಮಂಕುತಿಮ್ಮ ||

089
ಆದಿದಿವಸವದಾವುದೆಂದೆಂದುಮಿಹ ಜಗಕೆ? |
ಬೋಧನೆಯ ಸುಲಭತೆಗೆ ಸೃಷ್ಟಿಲಯಕಥನ ||
ಪಾದಶಿರಗಳ ಕೂರ್ಮ ಚಾಚಿಕೊಂಡಿರೆ ಸೃಷ್ಟಿ |
ಸೇದಿಕೊಂಡಿರೆ ಲಯವೊ - ಮಂಕುತಿಮ್ಮ ||

090
ಆವುದಿರುವಿಕೆಗಾದಿ? ಎಂದು ಸೃಷ್ಟಿಯ ಮೊದಲು? |
ಅವುದಬ್ಧಿಯ ತೆರೆಗಳಲಿ ಮೊಟ್ಟಮೊದಲು? ||
ಆವುದೆಲರಿನ ನಿಲ್ಲದಲೇತಕ್ಕೆ ಗಡುಸೀಮೆ? |
ಈ ವಿಶ್ವಕಥೆಯಂತು - ಮಂಕುತಿಮ್ಮ ||

091
ಕಮಲವುದಯದೊಳರಳಿ ಸಂಜೆಯಲಿ ಮುಗುಳಾಗಿ |
ಸುಮವಪ್ಪುದಂತೆ ಮರುವಗಲು ಮಗುಳ್ದಂತು ||
ಅಮಿತ ಪ್ರಪಂಚನಾಕುಂಚನಾವರ್ತನ |
ಕ್ರಮವೆ ವಿಶ್ವಚರಿತ್ರೆ - ಮಂಕುತಿಮ್ಮ ||

092
ಎತ್ತಣಿನೊ ದೃಕ್ಪರಿಧಿಯಾಚೆಯಿಂದಲನಂತ |
ಸತ್ತ್ವ ತೆರೆತೆರೆಯಾಗಿ ಬೀಸಿ ಗೂಢದಲಿ ||
ಬಿತ್ತರಿಸುತಿಹುದು ಹೊಸಹೊಸತನವನೆಡೆಬಿಡದೆ |
ನಿತ್ಯನಿತ್ಯವು ಜಗದಿ - ಮಂಕುತಿಮ್ಮ ||

093
ಜ್ವಾಲಮಾಲಾಕುಲ ಜಗದ್ರೂಪ ತಾಂಡವದಿ |
ಲೀಲೆಯಿಂ ಜೀವತೆಯನಾಂತು ಪರಬೊಮ್ಮಂ ||
ತಾಳಲಯಮೇಳನದಿನೊಮ್ಮೆ ರಭಸದಿನೊಮ್ಮೆ |
ಲೋಲನಾಗಿರ್ಪನೆಲೊ - ಮಂಕುತಿಮ್ಮ ||

094
ಕೇಳಿಯುಂ ಮಾಯೆಯದು; ನೃತ್ಯಗತಿ ಬರಿತೋರ್ಕೆ |
ಮೂಲಮಂ ಕಂಡಂಗೆ ಸಂಭ್ರಾಂತಿಯೇನು? ||
ಆಳದಲಿ ನಿರ್ಲಿಪ್ತ ಮೇಲೆ ನಿಯತಿಕ್ಲುಪ್ತ |
ಲೀಲಾಪ್ರಿಯಂ ಬ್ರಹ್ಮ - ಮಂಕುತಿಮ್ಮ ||

095
ಶ್ಯಾಮಸುಂದರನವನೆ ಚಕ್ರಿ ನರಹರಿಯಂತೆ |
ಸೋಮಶಂಕರನೆ ಭೈರವ ರುದ್ರನಂತೆ ||
ಹೈಮವತಿ ಶಿವೆ ತಾನೆ ಕಾಳಿ ಚಂಡಿಕೆಯಂತೆ |
ಪ್ರೇಮ ಘೋರಗಳೊಂದೆ! - ಮಂಕುತಿಮ್ಮ ||

096
ಸತ್ಯವೆಂಬುದದೇನು ಬ್ರಹ್ಮಾಂಡ ತಾಂಡವದಿ? |
ನೃತ್ಯವೇ ಸತ್ಯವಲ ಕಡಲಲೆಯ ಬಾಳೊಳ್ ||
ಮಿಥ್ಯೆಯೆಂಬುದೆ ಮಿಥ್ಯೆ; ಜೀವನಾಟಕ ಸತ್ಯ |
ಕೃತ್ಯವಿದು ಬೊಮ್ಮನದು - ಮಂಕುತಿಮ್ಮ ||

097
ಧರ್ಮವೆಂಬುದದೇನು? ಕರ್ಮವೆಂಬುದದೇನು? ||
ಬ್ರಹ್ಮಾಂಡಕಥೆಯೇನು? ಜೀವಿತವಿದೇನು? |
ಬ್ರಹ್ಮವೆಲ್ಲಕು ಮೂಲ ಮಾಯೆ ತತ್ಕೃತಿಜಾಲ |
ಬ್ರಹ್ಮವೇ ಜೀವನವೊ - ಮಂಕುತಿಮ್ಮ ||

098
ವಕ್ರಋಜುಮಿಶ್ರ ಜಗವದರ ಶೋಧನೆ ಧರ್ಮ |
ಪ್ರಾಕೃತಧ್ವನಿಮಿಶ್ರವದರಡುಗೆ ರಾಗ ||
ವ್ಯಾಕೃತದಿನವ್ಯಾಕೃತಾದಿಸತ್ತ್ವಕೆ ನಿನ್ನ |
ಜಾಗೃತಿಪ ಮತಿ ಧರ್ಮ - ಮಂಕುತಿಮ್ಮ ||

099
ಜಲಧಿತೀರದಿ ನಿಂತು ವೀಕ್ಷಿಸಿಕ್ಕೆಲಗಳಲಿ |
ಚಲವೊಂದಚಲವೊಂದು ಸಮವದಸಮವಿದು ||
ಕಲೆತಿರ್ಪುವಂತು ಮೇಯಾಮೇಯಗಳು ಜಗದಿ |
ಮಿಲಿತತೆಯಿನೇ ರುಚಿಯೊ - ಮಂಕುತಿಮ್ಮ ||

100
ಅವಿದಿತಾಖಂಡಸತ್ತ್ವದಪಾರ ಜಲಧಿಯಲಿ |
ಭುವನದ ದ್ವೀಪ ಕಿಂಚಿನ್ಮಾತ್ರವಿದಿತ ||
ಪವಿತಾಂತರಕ್ಷಿಗಾಯೆರಡುಮೊಂದೇ ವಸ್ತು |
ವವಗುಂಠಿತ ಬ್ರಹ್ಮ - ಮಂಕುತಿಮ್ಮ ||

101
ಹಾಲಿನೊಳು ಬೆಣ್ಣೆ ಕಡಲೊಳಗೆ ನೀರ್ಗಲ್ಲವೊಲು |
ತೇಲುವುದಮೇಯಸತ್ತ್ವದಲಿ ಮೇಯ ಜಗ ||
ಮೂಲದಶೆಯೊಳಗೊಂದು, ಮಾಪನದ ಬಗೆಗೆರಡು |
ಗಾಳಿಯುಸಿರುಗಳಂತೆ - ಮಂಕುತಿಮ್ಮ ||

102
ಕಾಯ ನಿರ್ಣೇಯವದರೊಳು ಮನವನಿರ್ಣೇಯ ||
ಸ್ನಾಯು ಸಂಖ್ಯೇಯ ಜೀವಳಮಸಂಖ್ಯೇಯ ||
ಮೇಯಾಪ್ರಮೇಯಮಿಶ್ರಣವಿಂತು ನರಜಂತು |
ನೇಯವದು ವಿಶ್ವಕಂ - ಮಂಕುತಿಮ್ಮ ||

103
ಜ್ಞೇಯದ ದ್ವೀಪಕಜ್ಞೇಯಾಬ್ಧಿಯಾವರಣ |
ಕಾಯಕದ ಗಿರಿಗೆ ಮಾನಸದಭ್ರಪಟಲ ||
ಮೇಯವನು ಬಗೆದೇನಮೇಯ ಸುತ್ತಲುಮಿರಲು? |
ಮಾಯೆಯೀ ಮಿಶ್ರಣವೊ - ಮಂಕುತಿಮ್ಮ ||

104
ಕಾಲವಕ್ಷಯದೀಪವದರ ಪಾತ್ರೆಯಪಾರ |
ಬಾಳ್ ಅದರಿನಾದೊಂದು ಕಿರುಹಣತೆ ಮಿಣುಕು ||
ಗಾಳಿಯಾರಿಪುದೊಂದನಿನ್ನೊಂದ ಹೊತ್ತಿಪುದು |
ತೈಲಧಾರೆಯಖಂಡ - ಮಂಕುತಿಮ್ಮ ||

105
ಭಿತ್ತಿಯೊಂದಿಲ್ಲದಿರೆ ಚಿತ್ರವೆಂತಿರಲಹುದು? |
ಚಿತ್ರವಿಲ್ಲದ ಭಿತ್ತಿ ಸೊಗಸಹುದದೆಂತು? ||
ನಿತ್ಯಸತ್ತ್ವವೆ ಭಿತ್ತಿ, ಜೀವಿತ ಕ್ಷಣಚಿತ್ರ |
ತತ್ತ್ವವೀ ಸಂಬಂಧ - ಮಂಕುತಿಮ್ಮ ||

106
ಚೌಕಟ್ಟನಂತವದರೊಳು ಚಿತ್ರಪಟ ಸಾಂತ |
ಸಾಕಾರ ಘನತತಿ ನಿರಾಕಾರ ನಭದಿ ||
ಲೌಕಿಕದ ಮೌಲ್ಯ ನಿರ್ಲೌಕಿಕದ ನಾಣ್ಯದಲಿ |
ಲೆಕ್ಕ ತಾತ್ತ್ವಿಕನಿಗಿದು - ಮಂಕುತಿಮ್ಮ ||

107
ಅಜ್ಞಾತವಾದುದನಭಾವವೆನೆ ನಾಸ್ತಿಕನು |
ಅಜ್ಞೇಯವೆಂದದಕೆ ಕೈಮುಗಿಯೆ ಭಕ್ತ ||
ಜಿಜ್ಞಾಸ್ಯವೆಂದು ಪರಿಕಿಸತೊಡಗೆ ವಿಜ್ಞಾನಿ |
ಸ್ವಜ್ಞಪ್ತಿಶೋಧಿ ಮುನಿ - ಮಂಕುತಿಮ್ಮ ||

108
ಜಡವೇನು? ಜೀವವೇಂ? ಚೈತನ್ಯ ನಿದ್ರಿಸಿರು |
ವೆಡೆಯೆಲ್ಲ ಜಡಲೋಕ ಕಲ್ಲು ಕಡ್ಡಿ ಕಸ ||
ಅಡಗಿರ್ಪ ಚೈತನ್ಯವೆಚ್ಚರಲು ಜಂತು ಜಗ |
ಜಡವೆ ಜೀವದ ವಸತಿ - ಮಂಕುತಿಮ್ಮ ||

109
ಶಿಲೆಯಾಗಿ ನಿದ್ರಿಸುತ್ತಿರ್ದಾಕೆ ರಾಮಪದ |
ತಲದ ಸಂಸ್ಪರ್ಶದಿಂದೆದ್ದು ನಿಂತಂತೆ ||
ಚಲಿಸದೆನಿಸಿದ ಜಡವನಾವ ಗಾಳಿಯೊ ಸೋಕೆ |
ಬಲ ತೀವಿ ಚಲಿಪುದದು - ಮಂಕುತಿಮ್ಮ ||

110
ಹಿಮಗಿರಿಯ ಕಂಡಂಗೆ ಕ್ರಿಮಿಯ ಹಿರಿಮೆಯದೇನು? |
ಕ್ರಿಮಿಗೆ ಹಸಿವುಂಟಿನಿತು ಬೆದಕಾಟಮುಂಟು ||
ಅಮಿತ ಸಂತತಿಯುಂಟು ಹಿಮಗಿರಿಯ ಸಮಯುಗದ |
ಕ್ರಿಮಿಪಂಕ್ತಿ ಕಿರಿದಹುದೆ? - ಮಂಕುತಿಮ್ಮ ||

111
ಜಡವೆಂಬುದೇನು? ಸೃಷ್ಟಿಯಲಿ ಚೇತನ ಸುಪ್ತಿ |
ಅಡಗಿ ನಿದ್ರಿಪುದಲ್ಲಿ ಚೈತನ್ಯದಗ್ನಿ ||
ಮಿಡಿಯೆ ಪರಸತ್ತ್ವ ವಿದ್ಯುದ್ದೀಪ್ತಿಯದನಾಗ |
ನಡೆವುದದು ಜೀವಿವೊಲು - ಮಂಕುತಿಮ್ಮ ||

112
ಹಿಮಗಿರಿಯೊಳವಿತಿಹುದು ಚೈತನ್ಯದಗ್ನಿ ಕಣ |
ಸ್ತಿಮಿತದಿಂ ನಿಂತಿರ್ಪುದದು ಧರೆಯ ಹಿತಕೆ ||
ಶಮದ ಸುಂದರದ ಸಾತ್ತ್ವಿಕದ ಗಾಂಭೀರ್ಯವದು |
ನಮಗೊಂದು ವೇದನಿಧಿ - ಮಂಕುತಿಮ್ಮ ||

113
ಅಣುಸಂಖ್ಯೆಯೆಣಿಸುವನು ವಿಶ್ವದಲಿ ವಿಜ್ಞಾನಿ |
ಗುಣಿಸುವನು ಭೂತಶಕ್ತಿಗಳನದರಿಂದೇಂ? ||
ಗಣಿತಸಾಧ್ಯದ ಹಿಂದಗಣ್ಯದ ಮಹತ್ತತ್ತ್ವ |
ವಣಗಿಹುದು ಮೂಲವದು - ಮಂಕುತಿಮ್ಮ ||

114
ಸೃಷ್ಟಿರೂಪಂಗಳವತಾರದೊಳ್ ಕ್ರಮ ಲಕ್ಷ್ಯ |
ಪುಷ್ಟವಾಗಿರ್ದೊಡೇನಿಲ್ಲದೊಡದೇನು? ||
ಶಿಷ್ಟಮಾದುದು ಸತ್ತ್ವವದನು ಸೋಕದು ರೂಪ |
ದೃಷ್ಟಿ ಸತ್ತ್ವದೊಳಿರಲಿ - ಮಂಕುತಿಮ್ಮ ||

115
ಕ್ರಮದ ನಭವಿಕೃತಿ ವಾಯ್ವಾದಿ ರೂಪಗಳಂತೆ |
ಕೃಮಿ ಬೀಜದಿಂ ಮತ್ಸ್ಯ ಮೃಗ ಮನುಜರಂತೆ ||
ಕ್ರಮ ವಿವರವೇನಿರಲಿ ಸೃಷ್ಟಿಯ ವಿಧಾನದಲಿ |
ಸಮಸದದು ಸತ್ತ್ವವನು - ಮಂಕುತಿಮ್ಮ ||

116
ಪರಮಾಣುವಿಂ ಪ್ರಪಂಚಗಳ ಸಂಯೋಜಿಪುದು |
ಮರೆಯಿಂದ ಸೃಷ್ಟಿಯಂತ್ರವ ಚಾಲಿಸುವುದು ||
ಚರಲೀಲೆಯಲಿ ಜೀವವೆನಿಪ ಚೈತನ್ಯವದು |
ಪರಸತ್ತ್ವಶಕ್ತಿಯೆಲೊ - ಮಂಕುತಿಮ್ಮ ||

117
ಸ್ಥಾಪಿತವೆ ಜೀವ ನಿನ್ನೊಡಲಿನೊಂದಂಗದಲಿ? |
ಆಪಾದಶಿರವುಮದು ತುಂಬಿರುವುದಲ್ತೆ? ||
ವ್ಯಾಪಿಸಿಹುದಂತೊಂದು ಚೈತನ್ಯ ವಿಶ್ವದಲಿ |
ಲೇಪಗೊಳ್ಳದ ಸತ್ತ್ವ - ಮಂಕುತಿಮ್ಮ ||

118
ರವಿಮಾತ್ರದಿಂದಲ್ಲ ಭುವಿಮಾತ್ರದಿಂದಲ್ಲ |
ಭುವನಪೋಷಣೆಯುಭಯ ಸಹಕಾರದಿಂದ ||
ವಿವಿಧ ಶಕ್ತಿರಸಂಗಳೇಕೀಭವಿಸೆ ಜೀವ |
ಅವಿತರ್ಕ್ಯ ಸೂಕ್ಷ್ಮವದು - ಮಂಕುತಿಮ್ಮ ||

119
ನಾವುಣ್ಣುವನ್ನಗಳು ನಾವು ಕುಡಿವುದಕಗಳು |
ನಾವುಸಿರುವೆಲರುಗಳು ನಾವುಡುವ ವಸ್ತ್ರ ||
ಭೂವ್ಯೋಮಗಳ ಯಂತ್ರ ಸಂಘದುತ್ಪನ್ನಗಳು |
ಜೀವವೆರಡರ ಶಿಶುವು - ಮಂಕುತಿಮ್ಮ ||

120
ಪಾಕ ನಿನ್ನೊಳದೊಂದು ಸಾಗುತಿಹುದೆಡೆಬಿಡದೆ |
ಲೋಕದೆಲ್ಲವು ಸೂಕ್ಷ್ಮಗತಿಯಿನೊಳವೊಕ್ಕು ||
ಸಾಕುಬೇಕುಗಳೆಲ್ಲವದರಿನಾ ಯಂತ್ರವನು |
ಏಕೆ ರಚಿಸಿದನೊ ವಿಧಿ! - ಮಂಕುತಿಮ್ಮ ||

121
ತನುವೇನು? ಮನವೇನು? ಪರಮಾಣು ಸಂಧಾನ |
ಕುಣಿಸುತಿಹುದುಭಯವನು ಮೂರನೆಯದೊಂದು ||
ತೃಣದ ಹಸಿರಿನ ಹುಟ್ಟು ತಾರೆಯೆಸಕದ ಗುಟ್ಟು |
ದಣಿಯದದನರಸು ನೀಂ - ಮಂಕುತಿಮ್ಮ ||

122
ಜನಿಸಿದುದು ಮೃತಿಯನೆಳಸದೆ ಕುಲವ ಬೆಳಸುವುದು |
ಒಣಗಿದಂತಿರುವ ತೃಣಮೂಲ ಮೊಳೆಯುವುದು ||
ಮನುಜರಳಿವರು ಮನುಜಸಂತಾನ ನಿಂತಿಹುದು |
ಅಣಗದಾತ್ಮದ ಸತ್ತ್ವ - ಮಂಕುತಿಮ್ಮ ||

123
ಬನ್ನಬವಣೆಗಳ ತಾನೆನಿತೆನಿತು ಪಟ್ಟಿರೆಯು |
ಮಿನ್ನೊಮ್ಮೆ ಮತ್ತೊಮ್ಮೆ ಹೊಸ ಸಾಹಸಗಳಿಂ ||
ಸನ್ನಹಿಸುವಂ ಸುಮ್ಮನಿರಲೊಲದೆ ಮಾನವನು |
ಚಿನ್ಮಯತೆಯಾತ್ಮಗುಣ - ಮಂಕುತಿಮ್ಮ ||

124
ಮೌನದೊಳೊ ಮಾತಿನೊಳೊ ಹಾಸ್ಯದೊಳೊ ಹಾಡಿನೊಳೊ |
ಮಾನವಂ ಪ್ರಣಯದೊಳೊ ವೀರ ವಿಜಯದೊಳೋ ||
ಏನೊ ಎಂತೋ ಸಮಾಧಾನಗಳನರಸುತಿಹ |
ನಾನಂದವಾತ್ಮಗುಣ - ಮಂಕುತಿಮ್ಮ ||

125
ಸಚ್ಚಿದಾನಂದಂಗಳಾತ್ಮ ಸ್ವಭಾವ ರಸ |
ಬಚ್ಚಿಡುವುದದನು ಜೀವಿತೆಯ ಮಾಯಿಕತೆ ||
ಇಕ್ಷುವೊಲ್ ಜೀವ; ಗಾಣದವೊಲ್ ಜಗನ್ಮಾಯೆ |
ನಿಚ್ಚವಿಳೆಯಾಲೆಮನೆ - ಮಂಕುತಿಮ್ಮ ||

126
ಒಳಿತೆಂದು ಸೊಗಸೆಂದು ಜಗವು ಮೆಚ್ಚುವುದೆಲ್ಲ |
ಕಲೆ ಕಣಂಗಳು ಮಾತ್ರ ಪೂರ್ಣಂಗಳಲ್ಲ ||
ನಲಿವು ಚೆಲುವುಗಳ ಪರಿಪೂರ್ಣ ಮೂಲಾಕೃತಿಯೆ |
ಪರಬೊಮ್ಮನೆನ್ನುವರು - ಮಂಕುತಿಮ್ಮ ||

127
ಶಿವಸೌಖ್ಯಸೌಂದರ್ಯಗಳ ಪೂರ್ಣರವಿ ಬೊಮ್ಮ |
ಭುವನಜೀವನಜಲಧಿಯೂರ್ಮಿಕೋಟಿಯಲಿ ||
ಛವಿಕೋಟಿಯೆರಚಲ್ ಪ್ರತಿಚ್ಛಾಯೆ ವಿಲಸಿಪುದು |
ಸವಿ ನಮ್ಮದದರ ಕಣ - ಮಂಕುತಿಮ್ಮ ||

128
ಹೊರಗಾವುದೊಳಗಾವುದೀ ಸೃಷ್ಟಿಚಕ್ರದಲಿ |
ಎರಡನೊಂದಾಗಿಪುದು ಹರಿವ ನಮ್ಮುಸಿರು ||
ಇರುವುದುಳಿದಿನಿತು ಹೊರಗಾಳಿ ಯೋಗಿಗಳೊಳಂ |
ಬರಿ ಸುಷಿರಪಿಂಡ ಜಗ - ಮಂಕುತಿಮ್ಮ ||

129
ಧರೆಯ ನೀರ್ಗಾಗಸದ ನೀರಿಳಿದು ಬೆರೆವಂತೆ |
ನರನ ಪ್ರಾಕ್ತನಕೆ ನೂತನಸತ್ತ್ವ ಬೆರೆತು ||
ಪರಿವುದೀ ವಿಶ್ವಜೀವನಲಹರಿಯನವರತ |
ಚಿರಪ್ರತ್ನನೂತ್ನ ಜಗ - ಮಂಕುತಿಮ್ಮ ||

130
ರಾಮನಡಿಯಿಟ್ಟ ನೆಲ, ಭೀಮನುಸಿರಿದ ಗಾಳಿ |
ವ್ಯೋಮದೆ ಭಗೀರಥಂ ತಂದ ಸುರತಟಿನಿ |
ಸೋಮನಂ ಪೆತ್ತ ಕಡಲೀ ಪುರಾತನಗಳಿರೆ |
ನಾಮೆಂತು ಹೊಸಬರೆಲೊ - ಮಂಕುತಿಮ್ಮ ||

131
ಪುಲಿ ಸಿಂಗದುಚ್ಛ್ವಾಸ, ಹಸು ಹುಲ್ಲೆ ಹಯದುಸಿರು |
ಹುಳು ಹಾವಿಲಿಯ ಸುಯ್ಲು, ಹಕ್ಕಿ ಹದ್ದುಯ್ಲು ||
ಕಲೆತಿರ್ಪುವೀಯೆಲ್ಲ ನಾಮುಸಿರ್ವೆಲರಿನಲಿ |
ಕಲಬೆರಕೆ ಜಗದುಸಿರು - ಮಂಕುತಿಮ್ಮ ||

132
ರಾಮನುಚ್ಛ್ವಾಸವಲೆದಿರದೆ ರಾವಣನೆಡೆಗೆ? |
ರಾಮನುಂ ದಶಕಂಠನೆಲರನುಸಿರಿರನೆ? ||
ರಾಮರಾವಣರುಸಿರ್ಗಳಿಂದು ನಮ್ಮೊಳಗಿರವೆ? |
ಭೂಮಿಯಲಿ ಪೊಸತೇನೊ? - ಮಂಕುತಿಮ್ಮ ||

133
ಬಹಿರಂತರಗಳೊಂದು ಭೂತಭವ್ಯಗಳೊಂದು |
ಇಹಪರಂಗಳುಮೊಂದು ಚೈತನ್ಯವೊಂದು ||
ಬಹುಪಾತ್ರನಾಟಕದಿ ಮಾಯೆ ಶತವೇಷಗಳ |
ವಹಿಸಲೀವಳು ಪತಿಗೆ - ಮಂಕುತಿಮ್ಮ ||

134
ಏಕದಿಂದಲನೇಕ ಮತ್ತನೇಕದಿನೇಕ |
ವೀ ಕ್ರಮವೆ ವಿಶ್ವದಂಗಾಂಗಸಂಬಂಧ ||
ಲೋಕದಲಿ ಜಾತಿಯಲಿ ವ್ಯಕ್ತಿಯಲಿ ಸಂಸ್ಥೆಯಲಿ |
ಸಾಕಲ್ಯದರಿವಿರಲಿ - ಮಂಕುತಿಮ್ಮ ||

135
ಸಂಪೂರ್ಣಗೋಳದಲಿ ನೆನೆದೆಡೆಯೆ ಕೇಂದ್ರವಲ |
ಕಂಪಿಸುವ ಕೇಂದ್ರ ನೀಂ ಬ್ರಹ್ಮಕಂದುಕದಿ ||
ಶಂಪಾತರಂಗವದರೊಳು ತುಂಬಿ ಪರಿಯುತಿದೆ |
ದಂಭೋಳಿ ನೀನಾಗು - ಮಂಕುತಿಮ್ಮ ||

136
ವಿಶ್ವಪರಿಧಿಯದೆಲ್ಲೊ ಸೂರ್ಯಚಂದ್ರರಿನಾಚೆ |
ವಿಶ್ವಕೇಂದ್ರವು ನೀನೆ, ನೀನೆಣಿಸಿದೆಡೆಯೆ ||
ನಿಃಶ್ವಸಿತ ಸಂಬಂಧ ನಿನಗಂ ದಿಗಂತಕಂ |
ಪುಷ್ಪವಾಗಿರು ನೀನು - ಮಂಕುತಿಮ್ಮ ||

137
ನಾನೆನುವವನೆ ವಿಶ್ವಚಕ್ರನಾಭಿಯವಂಗೆ |
ಕಾಣಬಹ ದಿಗ್ವಿವರ ಚಕ್ರನೇಮಿಪಥ ||
ಆನಂತ್ಯವೀ ಜಗಚ್ಚಕ್ರನಾಭಿಕ್ರಮತೆ |
ತಾನೊಂದೆ ಸತ್ತ್ವವದು - ಮಂಕುತಿಮ್ಮ ||

138
ಬಾನಾಚೆಯಿಂ ವಿಶ್ವಸತ್ತ್ವ ತಾನಿಳಿದಿಳೆಗೆ |
ನಾನೆನುವ ಚೇತನದಿ ರೂಪಗೊಂಡಿಹುದೋ? ||
ನಾನೆನುವ ಕೇಂದ್ರದಿನೆ ಹೊರಟ ಸತ್ತ್ವದ ಪರಿಧಿ |
ಬಾನಾಚೆ ಹಬ್ಬಿಹುದೊ? - ಮಂಕುತಿಮ್ಮ ||

139
ಸೃಷ್ಟಿಕಥೆ ಕಟ್ಟುಕಥೆ; ವಿಲಯಕಥೆ ಬರಿಯ ಕಥೆ |
ಹುಟ್ಟುಸಾವುಗಳೊಂದೆ ಪುರುಳಿನೆರಡು ದಶೆ ||
ನಿತ್ಯಪರಿವರ್ತನೆಯೆ ಚೈತನ್ಯನರ್ತನೆಯೆ |
ಸತ್ಯ ಜಗದಲಿ ಕಾಣೊ - ಮಂಕುತಿಮ್ಮ ||

140
ಋತುಚಕ್ರ ತಿರುಗುವುದು, ಕಾಲನೆದೆ ಮರುಗುವುದು |
ಮೃತನ ಮಣ್ಣಿಂದ ಹೊಸ ಹುಲ್ಲು ಮೊಳೆಯುವುದು ||
ಕ್ಷಿತಿ ಗರ್ಭಧರಿಸುವಳು ಮತ್ತುದಿಸುವುದು ಜೀವ |
ಸತತ ಕೃಷಿಯೋ ಪ್ರಕೃತಿ - ಮಂಕುತಿಮ್ಮ ||

141
ಹಳೆ ಸೂರ್ಯ ಹಳೆ ಚಂದ್ರ ಹಳೆ ಭೂಮಿ ಹಳೆ ನೀರು |
ಹಳೆ ಹಿಮಾಚಲ ಗಂಗೆ ಹಳೆ ವಂಶಚರಿತೆ ||
ಹಳೆಯವಿವು ನೀನಿದರೊಳಾವುದನು ಕಳೆದೀಯೊ? |
ಹಳದು ಹೊಸತರೊಳಿರದೆ? - ಮಂಕುತಿಮ್ಮ ||

142
ಮೂಲವಸ್ತುವದೊಂದು ಲೀಲೆಗೋಸುಗ ನೂರು |
ಕಾಲದೃಷ್ಟಿಗೆ ಬಹುಳ ಕೇವಲದೊಳೇಕ ||
ಸ್ಥೂಲವಿವಿಧದಿ ಬಾಳಿ ಸೂಕ್ಷ್ಮ ಸಾಮ್ಯದ ತಾಳಿ |
ಆಳುತಿರು ಜೀವನವ - ಮಂಕುತಿಮ್ಮ ||

143
ಧಾತ್ರಿಯನು ಮದುವೆಮಂಟಪದೊಲು ಸಿಂಗರಿಸಿ |
ಕ್ಷಾತ್ರದಗ್ನಿಗಳ ನರಹೃದಯಗಳೊಳಿರಿಸಿ ||
ಕೃತ್ರಿಮವನೆಡೆಬಿಡದೆ ನಡಸಿ ನಗುವ ವಿಲಾಸಿ |
ಚಿತ್ರಕಾರಿಯೊ ಮಾಯೆ - ಮಂಕುತಿಮ್ಮ ||

144
ವಾಯುವಂ ಕಾಣ್ಬನಾರ್? ತತ್ಕ್ರಿಯೆಯ ಕಾಣನಾರ್? |
ಮಾಯೆಯಂತಪರೀಕ್ಷ್ಯಸತ್ತ್ವದೀಕ್ಷ್ಯಕೃತಿ ||
ರಾಯನಂ ಕಾಣಲಾಗದೆ ಮಂತ್ರಿಯೆಡೆಸಾರ್ವ |
ದೇಯಾರ್ಥಿವೊಲು ನೀನು - ಮಂಕುತಿಮ್ಮ ||

145
ಮಾಯೆಯೇ ಸರಸಿ; ನಿರ್ಗುಣ ಸತ್ತ್ವದಿಂದೇನು? |
ಮಾಯೆ ಬಿಡೆ ಜಗವೆತ್ತ? ಜೀವಕಥೆಯೆತ್ತ? ||
ಮೇಯವಲ್ಲದ ಮಹಿಮೆ ಛಾಯೆಯಾ ಬ್ರಹ್ಮನದು |
ತಾಯವಳು ನೀಂ ಮಗುವು - ಮಂಕುತಿಮ್ಮ ||

146
ರಾಯ ಮುದಿದಶರಥನನಾಡಿಸುತ ಕೈಕೇಯಿ |
ಸ್ವೀಯ ವಶದಲಿ ಕೋಸಲವನಾಳಿದಂತೆ ||
ಮಾಯೆ ಬೊಮ್ಮನ ಬಿನದವಡಿಸಿ ನಮ್ಮೀ ಜಗವ |
ಕಾಯುವಳು ತನ್ನಿಚ್ಛೆ - ಮಂಕುತಿಮ್ಮ ||

147
ಮಾಯೆಯೊಮ್ಮೊಮ್ಮೆ ತೋರುವಳು ಮಿಗಿಲಕ್ಕರೆಯ |
ಮಾಯಿಪಳು ಗಾಯಗಳನೀವಳಿಷ್ಟಗಳ ||
ಮೈಯ ನೀಂ ಮರೆಯೆ ನೂಕುವಳಾಗ ಪಾತಳಕೆ |
ಪ್ರೇಯಪೂತನಿಯವಳು - ಮಂಕುತಿಮ್ಮ ||

148
ಪ್ರಕೃತಿಯಿಂ ಪೊರಗಿರುವ ನರನಾರು ಸೃಷ್ಟಿಯಲಿ? |
ಸ್ವಕೃತಿಯೆಂದವನೆನ್ನುವುದವಳಿರದೊಡಿರದು ||
ಸುಕೃತವೆನಿಸುವುದವಳ ನೀಂ ವಶಕೆ ಕೊಳುವ ನಯ |
ವಿಕೃತಿಗೆಡೆಯಾಗದಿರೊ - ಮಂಕುತಿಮ್ಮ ||

149
ಅರಸನೊಬ್ಬನಲ್ಲ; ಮೂವರು ಬಾಳನಾಳುವರು |
ನರ ಕರುಮ ದೈವಗಳು; ತೊಡಕದಕೆ ಸಾಜ ||
ಗುರಿಯಿಡದ, ಮೊದಲು ಕೊನೆಯಿರದ, ದರಬಾರಿನಲಿ |
ಸರಿಯೇನೊ ತಪ್ಪೇನೊ? - ಮಂಕುತಿಮ್ಮ ||

150
ದೊರೆ ಮೂವರಿರುವಲ್ಲಿ ಸರಿಯಿಹುದೆ ಸೋಜಿಗವು |
ಕೊರತೆ ಹೆಚ್ಚಿಕೆಗಳಿರಲಚ್ಚರಿಯದೇನು? ||
ಬರಲಿ ಬರುವುದು; ಸರಿವುದೆಲ್ಲ ಸರಿಯಲಿ; ನಿನಗೆ |
ಪರಿವೆಯೇನಿಲ್ಲೆಲವೊ - ಮಂಕುತಿಮ್ಮ ||

151
ದೈವವೆನಿಸಿರುತೆ ವಿಶ್ವಪ್ರಕೃತಿಶಕ್ತಿಯಲಿ |
ಜೀವವಾಸನೆಗಳಲಿ ಪೂರ್ವಕೃತವೆನಿಸಿ ||
ಧೀವರ್ತನೆಯಲಿ ಪೌರುಷವೆನಿಸಿ ಪರಸತ್ತ್ವ |
ತ್ರೈವಿಧದೊಳಿರುತಿಹುದು - ಮಂಕುತಿಮ್ಮ ||

152
ಪುಣ್ಯಪಾಪ ಋಣಾನುಬಂಧ ವಾಸನೆಗಳಿವು |
ಜನ್ಮಾಂತರದ ಕರ್ಮಶೇಷದಂಶಗಳು ||
ಎಣ್ಣಿಕೆಗೆ ಸಿಲುಕದಾಕಸ್ಮಿಕ ಯದೃಚ್ಛೆಗಳು |
ಸನ್ನಿಹಿತ ದೈವಿಕದೆ - ಮಂಕುತಿಮ್ಮ ||

153
ಪ್ರಾರಬ್ಧಕರ್ಮಮುಂ ದೈವಿಕದ ಲೀಲೆಯುಂ |
ತೋರುವುವದೃಷ್ಟವಿಧಿಯೆಂಬ ಪೆಸರುಗಳಿಂ ||
ಆರುಮಳೆವವರಿಲ್ಲವವುಗಳಾವೇಗಗಳ |
ಪೌರುಷವು ನವಸತ್ತ್ವ - ಮಂಕುತಿಮ್ಮ ||

154
ಪೊಸರಸಂ ಬೇರಿಗನುದಿನಮೊದವಿ ಧರೆಯಿಂದ |
ಸಸಿಗೆ ಹೊಸತಳಿರ ತಲೆಯಲಿ ಮುಡಿಸುವಂತೆ ||
ಹೊಸ ಸೃಷ್ಟಿಸತ್ತ್ವಮೆತ್ತಣಿನೊ ಬರುತನುದಿನಂ |
ಪೊಸತಾಗಿಪುದು ಜಗವ - ಮಂಕುತಿಮ್ಮ ||

155
ಶ್ವಸನನಾಗಸದಿನಿಳಿದದ್ರಿಗುಹೆಗಳೊಳಲೆಯು |
ತುಸಿರಾಗಿ ನಮ್ಮೊಳಾವಗಮಾಡುವಂತೆ ||
ವಿಸರಸತ್ತ್ವಮದೊಂದದೆತ್ತಣಿನೊ ಬಂದು ನ |
ಮ್ಮಸುಗಳೊಳವೊಗುತಿಹುದು - ಮಂಕುತಿಮ್ಮ ||

156
ತೋಯಿಸುತ ಬೇಯಿಸುತ ಹೆಚ್ಚುತ್ತ ಕೊಚ್ಚುತ್ತ |
ಕಾಯಿಸುತ ಕರಿಯುತ್ತ ಹುರಿಯುತ್ತ ಸುಡುತ ||
ಈಯವನಿಯೊಲೆಯೊಳೆಮ್ಮಯ ಬಾಳನಟ್ಟು ವಿಧಿ |
ಬಾಯ ಚಪ್ಪರಿಸುವನು - ಮಂಕುತಿಮ್ಮ ||

157
ಪರಬೊಮ್ಮನಾ ವಿಧಿಯ ನೇಮಿಸಿಹುದೇತಕೆನೆ |
ನರಜಾತಿ ಸಾನುಭೂತಿಯ ಕಲಿಯಲೆಂದು ||
ಪರರೆಂಬರಿಲ್ಲ ಆತ್ಮಾಂಶರೆಲ್ಲರೆನುತ್ತೆ |
ಬೆರೆ ನೀನು ವಿಶ್ವದಲಿ - ಮಂಕುತಿಮ್ಮ ||

158
ಕರವೆರಡದೃಷ್ಟಕ್ಕೆ : ನರನ ಪೂರ್ವಕವೊಂದು |
ಪೆರತೊಂದು ನವಸೃಷ್ಟಿಸತ್ತ್ವವಾ ಬೊಗಸೆ ||
ಧರಿಸಿಹುದು ಮನುಜಜೀವಿತವನದರೊತ್ತಡದೆ |
ಪರಿದಾಟ ನಮಗೆಲ್ಲ - ಮಂಕುತಿಮ್ಮ ||

159
ತಾಪಿಸುತೆ ತಣಿಯಿಸುತೆ ಕುಲುಕಿಸುತೆ ಋತುವೈದ್ಯ |
ಭೂಪುಟದಿ ಜೀವರಸಗಳ ಪಚಿಸುವಂತೆ ||
ಪಾಪಿಯಂ ಪ್ರೋತ್ಸಹಿಸಿ ಸುಕೃತಿಯ ಪರೀಕ್ಷಿಸುತ |
ವೇಪಿಪನು ವಿಧಿ ನಮ್ಮ - ಮಂಕುತಿಮ್ಮ ||

160
ಆವ ಬೇಳೆಯದಾವ ನೀರಿನಲಿ ಬೇಯುವುದೊ! |
ಆವ ಜೀವದ ಪಾಕವಾವ ತಾಪದಿನೋ! ||
ಆ ವಿವರವನು ಕಾಣದಾಕ್ಷೇಪಣೆಯದೇನು? |
ದೈವಗುಟ್ಟದು ತಿಳಿಯೆ - ಮಂಕುತಿಮ್ಮ ||

161
ವಿಧಿಯ ಹೊರೆಗಳನು ತಪ್ಪಿಸಿಕೊಳುವನೆಲ್ಲಿಹನು? |
ಬೆದರಿಕೆಯನದರಿಂದ ನೀಗಿಪನು ಸಖನು ||
ಎದೆಯನುಕ್ಕಾಗಿಸಾನಿಸು ಬೆನ್ನ, ತುಟಿಯ ಬಿಗಿ |
ವಿಧಿಯಗಸ, ನೀಂ ಕತ್ತೆ - ಮಂಕುತಿಮ್ಮ ||

162
ಟಗರೆರಡ ಬೆಳಸಿ ಕೊಬ್ಬಿಸಿ ಕೆಣಕಿ ಹುರಿಗೊಳಿಸಿ |
ಜಗಳವಾಡಿಸಿ ದೈವಜೀವಗಳ ಪೆಸರಿಂ ||
ನಗುತಲಿರುವನು ನೋಡಿ; ಪರಬೊಮ್ಮನೇಂ ಬಿನದಿ! |
ಬಿಗಿಯದಿರು ನೀಂ ಬೀಗಿ - ಮಂಕುತಿಮ್ಮ ||

163
ಮಾನುಷ್ಯಚರಿತೆಯಚ್ಛಿನ್ನವಾಹಿನಿ ಸಾಗ |
ಲಾನುಪೂರ್ವ್ಯದ ಕರ್ಮಋಣಶೇಷವಿನಿತು ||
ತಾನಿರಲೆಬೇಕಲ್ತೆ ಪೌರುಷಸ್ಪರ್ಧನೆಗೆ |
ಆನೆಗಂಕುಶದಂತೆ - ಮಂಕುತಿಮ್ಮ ||

164
ಹಳೆಯ ಮಲೆ ಹಳೆಯ ನೆಲವಾದೊಡೆಯುಮೊರತೆ ಮಳೆ |
ಹೊಳೆನೀರನಾವಗಂ ಪೊಸದಾಗಿಸುವವೊಲ್ ||
ಹಳೆಯ ಕರ್ಮವ ಹೊಸದು ಕೊಚ್ಚಿ ಪೌರುಷನದಿಯ |
ಬೆಳೆಯಿಪುದು ನವತೆಯಲಿ - ಮಂಕುತಿಮ್ಮ ||

165
ಹೊಸಹೊಸದು ತಾನಾಗುತಿರ್ದೊಡಂ ತನ್ನಯ |
ಪ್ರಸವ ಪ್ರವಾಹ ಭೂಮಿಗಳ ಹಳೆತನದಿಂ ||
ನಸುಸೋಂಕು ವಾಸನೆಯ ಪೊನಲೊಂದಬೇಕಲ್ತೆ? |
ಹೊಸದು ಹಳದಾಗದೇ - ಮಂಕುತಿಮ್ಮ ||

166
ಹುಳು ಹುಟ್ಟಿ ಸಾಯುತಿರೆ, ನೆಲ ಸವೆದು ಕರಗುತಿರೆ |
ಕಡಲೊಳೆತ್ತಲೊ ಹೊಸ ದ್ವೀಪವೇಳುವುದು ||
ಕಳೆಯುತೊಂದಿರಲಿಲ್ಲಿ, ಬೆಳೆವುದಿನ್ನೊಂದೆಲ್ಲೊ |
ಅಳಿವಿಲ್ಲ ವಿಶ್ವಕ್ಕೆ - ಮಂಕುತಿಮ್ಮ ||

167
ಕ್ಷಿತಿಚಕ್ರ ರವಿಚಕ್ರ ಋತುಚಕ್ರಗಳಿಗಿಹುದು |
ಮಿತವೃತ್ತಿ; ನರನಿಗಂತೆಯೆ ಕರ್ಮನಿಯತಿ ||
ಕ್ಷಿತಿಕಂಪ ರಾಹುಕೇತುಭ್ರಮೆ ನರಪ್ರಗತಿ |
ಅತಿಚರಿತೆ ಪ್ರಕೃತಿಯಲಿ - ಮಂಕುತಿಮ್ಮ ||

168
ಅನುಬಂಧ ಜೀವಜೀವಕೆ ಪುರಾಕೃತದಿಂದ |
ಮನದ ರಾಗದ್ವೇಷವಾಸನೆಗಳದರಿಂ ||
ತನುಕಾಂತಿ ಮೋಹ ವಿಕೃತಿಗಳುಮಾ ತೊಡಕಿನವು |
ಕೊನೆಯಿರದ ಬಲೆಯೊ ಅದು - ಮಂಕುತಿಮ್ಮ ||

169
ಋಣದ ಮೂಟೆಯ ಹೊರಿಸಿ, ಪೂರ್ವಾರ್ಜಿತದ ಹುರಿಯ |
ಕುಣಿಕೆಯಲಿ ನಿನ್ನ ಕೊರಳನು ಬಿಗಿದು ವಿಧಿಯು ||
ತೃಣದ ಕಡ್ಡಿಯ ಮುಂದೆ ಹಿಡಿದಾಶೆ ತೋರುತಿರೆ |
ಕುಣಿವ ಗರ್ದಭ ನೀನು - ಮಂಕುತಿಮ್ಮ ||

170
ಉಣುವುದುಡುವುದು ಪಡುವುದಾಡುವುದು ಮಾಡುವುದು |
ಋಣಗಳೆಲ್ಲವು ಪೂರ್ವಸಂಚಿತಾಂಶಗಳು ||
ಹಣೆಯೊಳದು ಲಿಖಿತಮಿರೆಯುಂ ವಾಚಿಸುವನಿಲ್ಲ |
ಗೊಣಗಾಟವಳಿಸುವುದೆ? - ಮಂಕುತಿಮ್ಮ ||

171
ಇಂದು ಮದುವೆಯ ಹಬ್ಬ; ನಾಳೆ ವೈಕುಂಠ ತಿಥಿ |
ಇಂದು ಮೃಷ್ಟಾನ್ನಸುಖ, ನಾಳೆ ಭಿಕ್ಷಾನ್ನ ||
ಇಂದು ಬರಿಯುಪವಾಸ, ನಾಳೆ ಪಾರಣೆ---ಯಿಂತು |
ಸಂದಿರುವುದನ್ನಋಣ - ಮಂಕುತಿಮ್ಮ ||

172
ಅರಿ ಮಿತ್ರ ಸತಿ ಪುತ್ರ ಬಂಧುಬಳಗವದೆಲ್ಲ |
ಕರುಮದವತಾರಗಳೊ, ಋಣಲತೆಯ ಚಿಗುರೋ ||
ಕುರಿಯನಾಗಿಸಿ ನಿನ್ನ ಕಾಪಿಡುವ ಸಂಸಾರ |
ವುರಿಮಾರಿಯಾದೀತೊ - ಮಂಕುತಿಮ್ಮ ||

173
ಬಂಧುಬಳಗವುಮಂತಕನ ಚಮುವೊ, ಛದ್ಮಚಮು |
ದಂದುಗದ ಬಾಗಿನಗಳವರ ನಲುಮೆಗಳು ||
ಕುಂದಿಪ್ಪುವಾತ್ಮನನವರ್ಗಳುಪಕಾರಗಳು |
ಮಂದಿಗಾಗದಿರು ಬಲಿ - ಮಂಕುತಿಮ್ಮ ||

174
ತಂದೆಮಕ್ಕಳಿಗೆ ಹದಗೆಟ್ಟುದನು ಕಾಣೆಯಾ? |
ಹೊಂದಿರುವರವರ್ ಅಹಂತೆಯು ಮೊಳೆಯುವನಕ ||
ತಂದೆಯಾರ್ ಮಕ್ಕಳಾರ್ ನಾನೆಂಬುದೆದ್ದುನಿಲೆ? |
ಬಂಧ ಮುರಿವುದು ಬಳಿಕ - ಮಂಕುತಿಮ್ಮ ||

175
ಕಾಂಕ್ಷೆಗಳ ಬೋಧಿಸುವ ಬಂಧುಸಖರುಪಕಾರ |
ಯಕ್ಷಿಯರು ಮ್ಯಾಕ್ಬೆತನಿಗೆಸಗಿದುಪದೇಶ |
ಉತ್ಸಾಹವಿದ್ದೇನು? ವಾತ್ಸಲ್ಯವಿದ್ದೇನು? |
ಅಕ್ಷಿ ನಿರ್ಮಲವೇನೊ? - ಮಂಕುತಿಮ್ಮ ||

176
ಇಂಗಿತಜ್ಞಾನವಿಲ್ಲದ ಬಂಧುಪರಿವಾರ |
ಹಂಗಿಸುವ ಛಲವುಳ್ಳ ಸತಿಪುತ್ರಸಖರು ||
ಬಂಗಾರದಸಿ ಚುಚ್ಚೆ ಸಿಂಗರದ ಬೊಟ್ಟೆನುವ |
ಮಂಗಬುದ್ಧಿಯ ಜನರು - ಮಂಕುತಿಮ್ಮ ||

177
ಬಂಧುವುಂ ಮಿತ್ರನುಂ ಭೃತ್ಯನುಂ ಶತ್ರುವೊಲೆ |
ದಂಡಧರನೋಲಗಕೆ ನಿನ್ನನೆಳೆವವರೋ ||
ಅಂದದೊಡವೆಯ ಮೊನೆಗಳಿಂದೆದೆಯನೊತ್ತುವಾ |
ಮಂದಹಸಿತದ ಕೊಲೆಯೊ - ಮಂಕುತಿಮ್ಮ ||

178
ದ್ವೇಷರೋಷಗಳವೊಲೆ ನೇಹಮುಂ ಮೋಹಮುಂ |
ಪಾಶವಾಗಲ್ಪಹುದು ನಿನಗೆ ಮೈಮರಸಿ ||
ವಾಸನೆಗಳುರುಬಿ ಚಿತ್ತಜ್ವರಂಗಳ ಬಿತ್ತಿ |
ಮೋಸದಲಿ ಕೊಲ್ಲುವುವೊ - ಮಂಕುತಿಮ್ಮ ||

179
ಕರುಮ ಬಂದಿದಿರಹುದು ಮೋಹನದ ರೂಪಿನಲಿ |
ಕಿರುನಗುವು ಕುಡಿನೋಟ ಕೊಂಕುನುಡಿಗಳಲಿ ||
ಕರೆದು ತಳ್ಳುವ, ತಳ್ಕರಿಸುತೊಳಗೆ ಕಿಚ್ಚಿಡುವ |
ತರಳತೆಯದೇಂ ತಂತ್ರ? - ಮಂಕುತಿಮ್ಮ ||

180
ಮೃತ್ಯು ತಾಂ ಬಂದು ಮೋಹಿನಿಯ ರೂಪದಿ ನಿನ್ನ |
ಚಿತ್ತವನು ಸೆರೆವಿಡಿದು ನೆತ್ತರನು ಬಸಿದು ||
ನಿತ್ಯ ನಿನ್ನಸುವ ಲವ ಲವ ಪೀರುತಲಿ ದೀರ್ಘ |
ಹತ್ಯೆಯಲಿ ಹರುಷಿಪಳೊ - ಮಂಕುತಿಮ್ಮ ||

181
ಕ್ಷಣವೊಂದರೊಳೆ ಪೂರ್ತಿ ಕೊಲ್ಲುವುದು ಯಮಶೂಲ |
ಕ್ಷಣವನುಕ್ಷಣ ಕೊಲ್ಲುವುವು ಮೋಹಮಮತೆ ||
ಕುಣಿಕೆಯನು ನಿನ್ನ ಕೊರಳಿಗೆ ಹೂಡಿ ಚಿರಕಾಲ |
ವಣುವಣುವೆ ಬಿಗಿಯುವುವೊ - ಮಂಕುತಿಮ್ಮ ||

182
ಋಣದ ಜಾಲವನಂತ, ಕರುಮಚಕ್ರವನಂತ |
ಜನುಮಜನುಮದ ಕಥೆಯ ತಂತುಗಳನಂತ ||
ಅನವರತ ನೂತನವಿದೆನಿಪ ವಿಶ್ವದ ತಂತ್ರ |
ಬಿನದ ಪರಬೊಮ್ಮಂಗೆ - ಮಂಕುತಿಮ್ಮ ||

183
ಪುಣ್ಯದಿಂ ಬಂದ ಸಿರಿ ಮದಮೋಹಗಳ ಮೂಲ |
ಖಿನ್ನನಾಗಿಪ ಪಾಪಫಲವಾತ್ಮಶುದ್ಧಿ ||
ಅನ್ಯೋನ್ಯಜನಕಗಳು ಪುಣ್ಯಪಾಪಗಳಿಂತು |
ಧನ್ಯನುಭಯವ ಮೀರೆ - ಮಂಕುತಿಮ್ಮ ||

184
ನೋಡುನೋಡುತ ಲೋಕಸಹವಾಸ ಸಾಕಹುದು |
ಬಾಡುತಿಹ ಹೂಮಾಲೆ, ಗೂಢವಿಹ ಕಜ್ಜಿ ||
ತೋಡದಿರು ಬಾಳ್ವೆಯಾಳವನು; ಮೇಲ್ಮೇಲೆ ನೀ |
ನೋಡಾಡು ಹಗುರದಿಂ - ಮಂಕುತಿಮ್ಮ ||

185
ಹೃದಯಜೀವನಕಿನಿತು ಬೆಲೆಯಿರದೆ? ಫಲವಿರದೆ? |
ಮಧುರಭಾವ ಪ್ರೇಮ ದಯೆಯೆಲ್ಲ ಬರಿದೆ? ||
ವಿಧಿಯಂಗಡಿಯೊಳದನು ಕಸವೆಂದು ತಳ್ಳುವೊಡೆ |
ಬದುಕಿನಲಿ ತಿರುಳೇನು? - ಮಂಕುತಿಮ್ಮ ||

186
ತಡಕಾಟ ಬದುಕೆಲ್ಲವೇಕಾಕಿಜೀವ ತ |
ನ್ನೊಡನಾಡಿ ಜೀವಗಳ ತಡಕಿ ಕೈಚಾಚಿ ||
ಪಿಡಿಯಲಲೆದಾಡುಗುಂ, ಪ್ರೀತಿ ಋಣ ಮಮತೆಗಳ |
ಮಡುವೊಳೋಲಾಡುತ್ತೆ - ಮಂಕುತಿಮ್ಮ ||

187
ನುಡಿಗಟ್ಟಿನಾಟದಕ್ಕರಚೀಟಿಯೊಟ್ಟಿನಲಿ |
ತಡಕಿ ನಾವಾಯ್ದಾಯ್ದು ನುಡಿಜೋಡಿಪಂತೆ ||
ಬಿಡಿಜೀವ ಸಂಗಾತಿಜೀವಗಳನರಸಿ ತಾಂ |
ಪಡೆದಂದು ಪೂರ್ಣವದು - ಮಂಕುತಿಮ್ಮ ||

188
ರಸರುಚಿಗಳನು ಕಲಿಸಿ ಪಕ್ವಾನ್ನಗಳ ಪಚಿಸಿ |
ರಸನೆಯಲಿ ನೀರಿಳಿಸಿ ಬಿಸಿಯುಸಿರ ಬಿಡಿಸಿ ||
ದಶದಿಶೆಗಳಿಂ ಮುತ್ತಿ ಬರುವ ಪ್ರಕೃತಿಗದಾರು |
ವಶನಾಗದಿಹ ನರನು? - ಮಂಕುತಿಮ್ಮ ||

189
ಪರಿಪರಿಯ ರೂಪಕಾಂತಿಗಳ ಕಣ್ಣಾಗಿಸುವ |
ಪರಿಪರಿಯ ಫಲಮಧುರಗಳ ರಸನೆಗುಣಿಪ ||
ಪರಿಪರಿಯ ಕಂಠರವಗಳ ಕಿವಿಗೆ ಸೋಕಿಸುವ |
ಗುರು ಸೃಷ್ಟಿ ರಸಿಕತೆಗೆ - ಮಂಕುತಿಮ್ಮ ||

190
ಅಮೃತಕಣವಂ ಮರ್ತ್ಯಮೃದ್ಘಟದಿ ಬಯ್ತಿರಿಸಿ |
ವಿಮೃಶಬುದ್ಧಿಗೆ ಮೋಹದುಪನೇತ್ರವಿಡಿಸಿ ||
ಸಾಮ್ರಾಜ್ಯಮಧ್ಯದಲಿ ದುರ್ಭಿಕ್ಷವಾಗಿಪುದು |
ಕಮ್ರತೆಯೊ ನಮ್ರತೆಯೊ? - ಮಂಕುತಿಮ್ಮ ||

191
ಪೊಡೆಯುಣಿಸ ಮಿಗಹಕ್ಕಿಹುಳುಗಳಂದದಿ ನರನ |
ತಡಕುವನು; ತನ್ನಾತ್ಮದುಣಿಸ ಮರೆಯುವನು ||
ಒಡಲಿನಬ್ಬರವೇನು? ಆತುಮದ ನಾಣ್ಚೇನು? |
ಪೊಡವಿಗಿದೆ ದುಮ್ಮಾನ - ಮಂಕುತಿಮ್ಮ ||

192
ದೇವದಾನವರ ರಣರಂಗ ಮಾನವಹೃದಯ |
ಭಾವ ರಾಗ ಹಠಂಗಳವರ ಸೇನೆಗಳು ||
ಭೂವಿಭವಜಯಗಳ ಭ್ರಾಂತಿಯಲಿ ಮರೆಯುವರು |
ಜೀವಾಮೃತವನವರು - ಮಂಕುತಿಮ್ಮ ||

193
ಪರಮೇಷ್ಠಿ ನಿಜಚಾತುರಿಯನಳೆಯೆ ನಿರವಿಸಿದ |
ನೆರಡುಕೈಯಿಂದೆರಡು ಜಂತುಗಳ ಬಳಿಕ ||
ಇರದೆ ತಾನವನೊಂದುಗೂಡಿಸಲು ಬೆರಗಾಯ್ತು |
ನರಿಯು ವಾನರವು ನರ - ಮಂಕುತಿಮ್ಮ ||

194
ಅಂತರಂಗವನೆಲ್ಲ ಬಿಚ್ಚಿ ತೋರಿಪನಾರು? |
ಆಂತರಗಭೀರಗಳ ತಾನೆ ಕಂಡವನಾರ್? ||
ಗಂತಿಗಳು ಗಂಟುಗಳು ಮಡಿಪುಮಡಿಪುಗಳಲ್ಲಿ |
ಸ್ವಂತಕೇ ದುರ್ದರ್ಶ - ಮಂಕುತಿಮ್ಮ ||

195
ಮೊಗ ನಾಲ್ಕು ನರನಿಗಂತೆಯೆ ನಾರಿಗಂ ಬಗೆಯೆ |
ಜಗಕೆ ಕಾಣಿಪುದೊಂದು, ಮನೆಯ ಜನಕೊಂದು ||
ಸೊಗಸಿನೆಳಸಿಕೆಗೊಂದು, ತನ್ನಾತ್ಮಕಿನ್ನೊಂದು |
ಬಗೆಯೆಷ್ಟೊ ಮೊಗವಷ್ಟು - ಮಂಕುತಿಮ್ಮ ||

196
ಮನುಜಲೋಕವಿಕಾರಗಳನು ನೀನಳಿಸುವೊಡೆ |
ಮನಕೊಂದು ದರ್ಪಣವ ನಿರವಿಸೆಂತಾನುಂ ||
ಅನುಭವಿಪರವರಂದು ತಮ್ಮಂತರಂಗಗಳ |
ಅನುಪಮಾಸಹ್ಯಗಳ - ಮಂಕುತಿಮ್ಮ ||

197
ಕನಲ್ದ ಹುಲಿ ಕೆರಳ್ದ ಹರಿ ಮುಳ್ಕರಡಿ ಛಲನಾಗ |
ಅಣಕು ಕಪಿ ಸೀಳ್ನಾಯಿ ಮೊದಲಾದ ಮೃಗದ ||
ಸೆಣಸುಮುಸುಡಿಯ ಘೋರದುಷ್ಟಚೇಷ್ಟೆಗಳೆಲ್ಲ |
ವಣಗಿಹುವು ನರಮನದಿ - ಮಂಕುತಿಮ್ಮ ||

198
ಸತ್ಯವಂತನನರಸಲೆನುತ ಪೇಟೆಗಳೊಳಗೆ |
ಹಟ್ಟಹಗಲೊಳೆ ದೀವಿಗೆಯ ಹಿಡಿದು ನಡೆದು ||
ಕೆಟ್ಟುದೀ ಜಗವೆಂದು ತೊಟ್ಟಿಯೊಳೆ ವಸಿಸಿದನು |
ತಾತ್ತ್ವಿಕ ಡಯೋಜೆನಿಸ್ - ಮಂಕುತಿಮ್ಮ ||

199
ಪದರಪದರಗಳಿಹುವು ಗಂಟುಗಂಟುಗಳಿಹುವು |
ಹೃದಯದಲಿ ಬುದ್ಧಿಯಲಿ ವಾಕ್ಚರ್ಯೆಗಳಲಿ ||
ಇದಮಿತ್ಥಮೆಲ್ಲಿಹುದು ಮನುಜಸ್ವಭಾವದಲಿ? |
ವಿಧಿಯ ಕೈಚಿತ್ರವದು - ಮಂಕುತಿಮ್ಮ ||

200
ಹೊಟ್ಟೆಯೊಂದರ ರಗಳೆ ಸಾಲದೆಂದೇನೊ ವಿಧಿ |
ಹೊಟ್ಟೆಕಿಚ್ಚಿನ ಕಿಡಿಯ ನೆಟ್ಟಿಹನು ನರನೊಳ್ ||
ಹೊಟ್ಟೆ ತುಂಬಿದ ತೋಳ ಮಲಗೀತು; ನೀಂ ಪೆರರ |
ದಿಟ್ಟಿಸುತ ಕರುಬುವೆಯೊ - ಮಂಕುತಿಮ್ಮ ||

201
ಉರಿಯುತಿರೆ ಹೊಟ್ಟೆಕಿಚ್ಚಾರಿಸಲು ನೀರೆಲ್ಲಿ? |
ನರಕವೆದೆಯಲಿ ನೆಲಸೆ ನಿದ್ದೆಗೆಡೆಯೆಲ್ಲಿ? ||
ಹರಿಸಲಪ್ಪುದೆ ನರರು ಮತ್ಸರಿಯ ಸಂಕಟವ? |
ಕರುಬಿದನ ಹರಿ ಪೊರೆಗೆ - ಮಂಕುತಿಮ್ಮ ||

202
ರಾವಣನ ದಶಶಿರವದೇಂ? ನರನು ಶತಶಿರನು |
ಸಾವಿರಾಸ್ಯಗಳನೊಂದರೊಳಣಗಿಸಿಹನು ||
ಹಾವಾಗಿ ಹುಲಿಯಾಗಿ ಕಪ್ಪೆ ಹುಲ್ಲೆಯುಮಾಗಿ |
ಭೂವ್ಯೋಮಕತಿಶಯನು - ಮಂಕುತಿಮ್ಮ ||

203
ತಲೆಯೊಳಗೆ ನೆರೆದಿಹುವು ನೂರಾರು ಹಕ್ಕಿಗಳು |
ಗಿಳಿ ಗೂಗೆ ಕಾಗೆ ಕೋಗಿಲೆ ಹದ್ದು ನವಿಲು ||
ಕಿಲಕಿಲನೆ ಗೊರಗೊರನೆ ಕಿರಿಚಿ ಕೂಗುತ್ತಿಹುವು |
ನೆಲೆಯೆಲ್ಲಿ ನಿದ್ದೆಗೆಲೊ? - ಮಂಕುತಿಮ್ಮ ||

204
ದೇವಾಂಶ ಪಶ್ವಂಶಗಳ ಗಂಟು ಮಾನುಷತೆ |
ಧೀವಿಮರ್ಶೆಯಿನೊಂದ ಸತ್ಕರಿಸಿ ಬಲಿಸಿ ||
ಭಾವಪರಿಶೋಧನೆಯಿನಿನ್ನೊಂದ ದಂಡಿಪುದೆ |
ಜೀವಪ್ರಕರ್ಷಗತಿ - ಮಂಕುತಿಮ್ಮ ||

205
ಕಲ್ಲಾಗಿ ನಿಲ್ಲುವನು, ಬಳ್ಳಿವೊಲು ಬಳುಕುವನು |
ಮುಳ್ಳಾಗಿ ಚುಚ್ಚುವನು, ಫುಲ್ಲ ಸುಮವಹನು ||
ಕಲ್ಲೋಲವಾರಿಧಿವೊಲುರವಣಿಸಿ ಮೊರೆಯುವನು |
ಕ್ಷುಲ್ಲಮಾನಿಸನಿವನು - ಮಂಕುತಿಮ್ಮ ||

206
ಸತ್ತವೆನ್ನಾಶೆಗಳು, ಗೆದ್ದೆನಿಂದ್ರಿಯಗಣವ |
ಚಿತ್ತವಿನ್ನಲುಗದೆಂಬಾ ಜಂಬ ಬೇಡ ||
ಎತ್ತಣಿಂದಲೊ ಗಾಳಿ ಮೋಹಬೀಜವ ತಂದು |
ಬಿತ್ತಲಾರದೆ ಮನದಿ? - ಮಂಕುತಿಮ್ಮ ||

207
ಒಣಗಿ ಬೇಸಗೆಯಿಂದ ಮಣ್ಣಾಗಿ ಕಾಣದಿಹ |
ತೃಣ ಮೊಳೆಯುವುದು ಮರಳಿ ಹನಿಯೆರಡು ಬೀಳೆ ||
ಅಣಗಿರ್ದು ನರನಾಶೆಯಂತು ಕಷ್ಟದ ದಿನದಿ |
ಕುಣಿವುದನುಕೂಲ ಬರೆ - ಮಂಕುತಿಮ್ಮ ||

208
ಬೆದಕಾಟ ಬದುಕೆಲ್ಲ; ಚಣಚಣವು ಹೊಸ ಹಸಿವು |
ಅದಕಾಗಿ ಇದಕಾಗಿ ಮತ್ತೊಂದಕಾಗಿ ||
ಅಧಿಕಾರ ಸಿರಿ ಸೊಗಸು ಕೀರ್ತಿಗಳ ನೆನೆದು ಮನ |
ಕುದಿಯುತಿಹುದಾವಗಂ - ಮಂಕುತಿಮ್ಮ ||

209
ದನ ಸಿಂಗ ಹುಲಿ ಹಕ್ಕಿ ಹಾವು ಮೀನ್ಗಳಿಗೆಲ್ಲ |
ಇನಿಸುಣಿಸು, ಬೆದೆ, ಬೆದರು---ಅಷ್ಟೆ ಜೀವಿತವು ||
ಮನುಜನೆಂತನಿತರಿಂ ತೃಪ್ತಿವಡೆವನವಂಗೆ |
ಕ್ಷಣಕ್ಷಣವು ಹೊಸ ಹಸಿವು - ಮಂಕುತಿಮ್ಮ ||

210
ತಂಗಳುಣಿಸಾದೊಡಂ ಸಾಕೆನುವನುಪವಾಸಿ |
ಸಿಂಗಾರ ಸಂಗಾತಿ ಬೇಕುಂಡವನಿಗೆ ||
ಬಂಗಾರ ಪದವಿ ಪ್ರತಿಷ್ಠೆ ಬೇಕಾ ಬಳಿಕ |
ಹಿಂಗದಾಯೆದೆಚಿಲುಮೆ - ಮಂಕುತಿಮ್ಮ ||

211
ಮನಸು ಬೆಳೆದಂತೆಲ್ಲ ಹಸಿವು ಬೆಳೆಯುವುದಯ್ಯ |
ತಣಿಸಲದನೊಗೆಯುವುದು ಬಗೆಬಗೆಯ ಯುಕ್ತಿ ||
ಮನುಜನೇಳಿಗೆಯದರಿನ್; ಆ ಮನಸಿನೇಳಿಗೆಗೆ |
ಕೊನೆಯೆಲ್ಲಿ? ಚಿಂತಿಸೆಲೊ - ಮಂಕುತಿಮ್ಮ ||

212
ದಿನದಿನವು ಹಳಸುವುವು, ದಿನದಿನವು ಕೊಳೆಯುವುವು |
ಮನುಜಕುಲದೆಲ್ಲ ಕೃತಿವಿಜಯವಿಭವಗಳು ||
ಅನುದಿನವು ಮತ್ತವನು ತೊಳೆದು ಹೊಸತೆನಿಸುವುದೆ |
ಜನುಮಸಫಲತೆ ನಿನಗೆ - ಮಂಕುತಿಮ್ಮ ||

213
ಸಾಜಗುಣವೆಂದುಪೇಕ್ಷಿಪೆಯ ನಿನ್ನವಗುಣವ? |
ಸಾಜವನು ಬಿಟ್ಟಲುಗದಿಹುದು ಮೃಗಕೀಟ ||
ಸಾಜವಂ ಶಿಕ್ಷಿಸುತೆ ಲೋಕಸಂಸ್ಥಿತಿಗದನು |
ಯೋಜಿಪುದೆ ನರಮಹಿಮೆ - ಮಂಕುತಿಮ್ಮ ||

214
ಸಹಜ ನಗ್ನತೆ ನಮಗೆ, ಸಹಜ ನಖದಾಡಿಗಳು |
ಬಹುಯುಗದ ಸಂಸ್ಕಾರ ವಸ್ತ್ರ ಸಿಂಗಾರ ||
ಸಹಜತೆ ನಿರಕ್ಷರತೆ, ವಿದ್ಯೆ ತಾಂ ಕೃತಕವಲ |
ಸಹಜದಿನೆ ಕೃತಕಮುಂ - ಮಂಕುತಿಮ್ಮ ||

215
ಇಹುದಕಿಂತೊಳಿತಿಹುದು; ಒಳಿತ ಗಳಿಸಲ್ಬಹುದು |
ಸಹಸಿಸುವೆನದಕೆನುವ ಮತಿಯಿನೇ ಪ್ರಗತಿ ||
ರಹಸಿಯದ ಬುಗ್ಗೆಯದು, ಚಿಮ್ಮುತಿಹುದೆಲ್ಲರೊಳು |
ಸಹಜವಾ ಮತಿಕೃತಕ - ಮಂಕುತಿಮ್ಮ ||

216
ಸಿರಿ ಸೊಬಗುಗಳ ಬೆದಕು, ಕೆಳೆ ಬಲುಮೆಗಳ ಬೆದಕು |
ಪರಬೊಮ್ಮ ನಾಟಕದ ವೇಷಚೇಷ್ಟೆಗಳು ||
ಅರಸುತಿಹ ಜೀವ ನಾಯಕನು, ನಾಯಕಿಯವನ |
ಕೆರಳಿಸುವ ಮೋಹರುಚಿ - ಮಂಕುತಿಮ್ಮ ||

217
ಆಗಸದ ಬಾಗು, ಚಂದ್ರಮನ ಗುಂಡಿನ ನುಣ್ಪು |
ಸಾಗರದ ತೆರೆವಂಕು, ಗಿಡಬಳ್ಳಿ ಬಳುಕು ||
ಮೇಘವರ್ಣಚ್ಛಾಯೆ---ಯೀಸೃಷ್ಟಿಯಿಂ ನಮ್ಮೊ |
ಳಾಗಿಹುದು ರೂಪರುಚಿ - ಮಂಕುತಿಮ್ಮ ||

218
ಪರಿಪರಿಯ ರೂಪಿನಲಿ ಕಾಂತಿಯಲಿ ರಾಗದಲಿ |
ನೆರೆಯಿಸುತ ಪರಿಪರಿಯ ರಸಗಳಂ ಪ್ರಕೃತಿ ||
ಕೆರಳಿಸುತ ಹಸಿವುಗಳ, ಸವಿಗಳನು ಕಲಿಸುವಳು |
ಗುರು ರುಚಿಗೆ ಸೃಷ್ಟಿಯಲ - ಮಂಕುತಿಮ್ಮ ||

219
ಅರೆಯರೆಯೆ ನಮಗೆ ತೋರ್ಪೊಲವು ಚೆಲುವುಗಳೆಲ್ಲ |
ಪರಿಪೂರ್ಣ ಸುಖ ಸತ್ತ್ವ ಸಾಗರದ ತೆರೆಗಳ್ ||
ತರಣಿ ದೂರದೊಳಿಹನು; ಕಿರಣ ನಮಗೆಟಕುವುದು |
ತೆರೆಯು ನೆರೆತದ ಕುರುಹೊ - ಮಂಕುತಿಮ್ಮ ||

220
ಸೌಂದರ್ಯ ಬಾಂಧವ್ಯಗಳು ಸತ್ಯವಲ್ಲದೊಡೆ |
ಕುಂದುವಡೆಯದ ಸತ್ಯವಿಳೆಯೊಳಿನ್ನೆಲ್ಲಿ? ||
ಗಂಧಾನಿಲಂಗಳವು ಪರಸತ್ತ್ವಪುಷ್ಪದವು |
ಸಂದೇಹವೇನೆಲವೊ - ಮಂಕುತಿಮ್ಮ ||

221
ಅರೆಗಳಿಗೆಯನುಭವವೆ ಮಾನಸವ ಕರಗಿಸದೆ? |
ಪರಿಪಕ್ವಗೊಳಿಸದೇನದು ಜೀವರಸವ? ||
ಉರಿ ತಣಿಪುಗಳಿನಾತ್ಮಸಂಸ್ಕಾರಗಳನೆಸಪ |
ಪುರುಳ ಪುಸಿಯೆನ್ನುವೆಯ? - ಮಂಕುತಿಮ್ಮ ||

222
ಆವುದೋ ಒಳಿತೆಂದು ಆವುದೋ ಸೊಗವೆಂದು |
ಆವಾವ ದಿಕ್ಕಿನೊಳಮಾವಗಂ ಬೆದಕಿ ||
ಜೀವ ಪರಿಧಾವಿಪವೊಲ್ ಆಗಿಪಂತರ್ವೃತ್ತಿ |
ಭಾವುಕದ ನೆಲೆಯ ಕರೆ - ಮಂಕುತಿಮ್ಮ ||

223
ಒಡೆಯನಾವೆಡೆ ಸಾರ್ದನೆಂದು ಪದವಾಸನೆಯ |
ತಡಕಿ ಮೂಸುತ ಶುನಕನಲೆದಾಡುವಂತೆ ||
ಬಡಜಗವನೊಳಿತಕೆಂದತ್ತಿತ್ತ ಪುಡುಕಿಸುವ |
ಬೆಡಗು ಶಿವನೊಡವೆಯದೊ - ಮಂಕುತಿಮ್ಮ ||

224
ಅದು ಬೇಕು ಇದು ಬೇಕು ಮತ್ತೊಂದು ಬೇಕೆಂದು |
ಬೆದಕುತಿರುವುದು ಲೋಕ ಸೊಗದಿರವನೆಳಸಿ ||
ಹೃದಯಗುಹೆಯಾ ಸುಖಧ್ಯಾನದೂಟೆಯೆ ಸಾಕ್ಷಿ |
ಮುದಗಳಮಿತದ ನಿಧಿಗೆ - ಮಂಕುತಿಮ್ಮ ||

225
ಶರಧಿಯೊಳಗಣ ವಸ್ತುಗಳನಲಚಿ ಜಾಲಿಸುವ |
ತೆರೆಯಂತೆ ವಿಶ್ವಸತ್ತ್ವದ ಲಹರಿ ನಮ್ಮ ||
ಹೊರಗೊಳಗುಗಳಲಿ ಸಂತತ ನೆರೆದು ಹರಿಯುತ್ತ |
ಭರಿಸುತಿರುವುದು ಬಾಳ - ಮಂಕುತಿಮ್ಮ ||

226
ಉಸಿರವೊಲನುಕ್ಷಣಂ ಪುರುಷನೊಳವೊಗುತವನ |
ಪೊಸಬನಂಗೆಯ್ದು ದೈವಿಕಸತ್ತ್ವಮವನುಂ ||
ಪೊಸತನವನ್ ಉಳಿದ ಲೋಕಕೆ ನೀಡೆ ದುಡಿವಂತೆ |
ಬೆಸಸುತಿಹುದೇಗಳುಂ - ಮಂಕುತಿಮ್ಮ ||

227
ನೂತ್ನತೆಯ ಪೂರ್ಣತೆಯನನ್ಯೂನತೆಯ ಗಳಿಪ |
ಯತ್ನಮೇ ಪೌರುಷಪ್ರಗತಿ; ಅದೆ ಪ್ರಕೃತಿ ||
ವಿಜ್ಞಾನ ಶಾಸ್ತ್ರ ಕಲೆ ಕಾವ್ಯ ವಿದ್ಯೆಗಳೆಲ್ಲ |
ಧನ್ಯತೆಯ ಬೆದಕಾಟ - ಮಂಕುತಿಮ್ಮ ||

228
ಮತಿಯು ತಾಂ ಸತ್ಯಶುಭಗಳ ನವನವಾಂಶಗಳ |
ಗತಿಯನರಸುತ ನಡೆಯೆ ಪೌರುಷಪ್ರಗತಿ ||
ಮತ ನೀತಿ ಶಾಸ್ತ್ರಗಳು ರಾಜ್ಯಸಂಧಾನಗಳು |
ಮತಿಯ ಕಿಂಚಿದ್ವಿಜಯ - ಮಂಕುತಿಮ್ಮ ||

229
ತೊರೆಯ ತೆರೆಸಾಲ್ಗಳೇಳುತ ಬೀಳುತಿರುವಂತೆ |
ಪರಿಯುತಿರ್ಪುದು ಪುರುಷಚೈತನ್ಯಲಹರಿ ||
ಅರಿಯದದು ನಿಲುಗಡೆಯ, ತೊರೆಯದದು ಚಲಗತಿಯ |
ಪರಬೊಮ್ಮನುಯ್ಯಲದು - ಮಂಕುತಿಮ್ಮ ||

230
ತೆರೆಯೇಳುವುದು ದೈವಸತ್ತ್ವ ನರನೊಳು ನೆರೆಯೆ |
ತೆರೆ ಬೀಳುವುದು ಕರ್ಮವಿಧಿಯಿದಿರು ಪರಿಯೆ ||
ತೆರೆಯನಾನುತೆ ತಗ್ಗು, ತಗ್ಗನಾನುತಲಿ ತೆರೆ |
ತೆರೆತಗ್ಗುಗಳಿನೆ ತೊರೆ - ಮಂಕುತಿಮ್ಮ ||

231
ಇಂದೆದ್ದ ತೆರೆ ನಾಳೆ ಬೀಳುವುದು; ಮರುವಗಲು |
ಮುಂದೆ ತಾನೇಳುವುದು ಬೇರೆ ಗಾತ್ರದಲಿ ||
ಇಂದು ನಾಳೆಗಳನೆಲ್ಲವ ಕೂಡಿ ನೋಡಿದೊಡೆ |
ಮುಂದಹುದು ಬೆರಗೊಂದೆ - ಮಂಕುತಿಮ್ಮ ||

232
ಬೀಳುವುದ ನಿಲ್ಲಿಪುದು, ಬಿದ್ದುದನು ಕಟ್ಟುವುದು |
ಹಾಲೊಡೆಯೆ ಕಡೆದದನು ತಕ್ರವಾಗಿಪುದು ||
ಹಾಳ ಹಾಳಾಗಿಪುದು, ಹಳದ ಹೊಸತಾಗಿಪುದು |
ಬಾಳಿಗಿದೆ ಚಿರಧರ್ಮ - ಮಂಕುತಿಮ್ಮ ||

233
ಸೃಷ್ಟಿಯ ವಿಧಾನದಲಿ ಸೊಟ್ಟುಗಳು ನೂರಿಹುವು |
ನೆಟ್ಟಗಿಪೆನ್ ಅವನ್ ಎಂದು ನರರ ಚಿರದೀಕ್ಷೆ ||
ಇಷ್ಟಗಳನನ್ಯೋನ್ಯವವರೇಕೆ ಬಗೆದಿರರು? |
ನಿಷ್ಠುರಪ್ರಿಯರವರು - ಮಂಕುತಿಮ್ಮ ||

234
ಕಣ್ಣೆರಡದೇಕೆರಡುಮೊಂದೆ ಪಕ್ಕದೊಳೇಕೆ? |
ಬೆನ್ನೊಳೊಂದೆದೆಯೊಳೊಂದಿರಲು ಸುಕರವಲ? ||
ಅನ್ಯಾಯ ವಿಕಟಂಗಳೆನಿತೊ ಸೃಷ್ಟಿಕ್ರಮದಿ! |
ಸೊನ್ನೆ ಜನವಾಕ್ಕಲ್ಲಿ - ಮಂಕುತಿಮ್ಮ ||

235
ಧರೆ ಸಸ್ಯಫಲದಿ ಜೀವಿಗೆ ಪುಷ್ಟಿಯಿತ್ತೊಡೇಂ? |
ಮರಳಿ ತಾಂ ಪಡೆಯಳೇನ್ ಅವನಿನರ್ಧವನು? ||
ಧರಣಿಗೀ ನಮ್ಮೊಡಲು ಹುಯ್ಗಡುಬು ತಪ್ಪಲೆಯೊ! |
ಪರಮೇಷ್ಠಿ ಯುಕ್ತಿಯದು - ಮಂಕುತಿಮ್ಮ ||

236
ತರುಜಾತಿ ಖಗಜಾತಿ ಮೃಗಜಾತಿಗಳು ನೂರು |
ನರಜಾತಿ ಮಿಕ್ಕ ಜಾತಿಗಳಿಂದ ಬೇರೆ ||
ನರರೊಳೋರೊರ್ವನುಂ ತಾನೊಂದು ಬೇರೆ ಜಗ |
ಬೆರಕೆ ಸಾಮ್ಯಾಸಾಮ್ಯ - ಮಂಕುತಿಮ್ಮ ||

237
ನೆಲವೊಂದೆ, ಹೊಲ ಗದ್ದೆ ತೋಟ ಮರಳೆರೆ ಬೇರೆ |
ಜಲವೊಂದೆ, ಸಿಹಿಯುಪ್ಪು ಜವುಗೂಟೆ ಬೇರೆ ||
ಕುಲವೊಂದರೊಳೆ ಸೋದರವ್ಯಕ್ತಿಗುಣ ಬೇರೆ |
ಹಲವುಮೊಂದುಂ ಸಾಜ - ಮಂಕುತಿಮ್ಮ ||

238
ಮನುಜಕುಲವೊಂದೊಬ್ಬನಿನ್ನೊಬ್ಬನಂತಿಲ್ಲ |
ತನುವಂಗಗಳೊಳೊಂದು, ರೂಪ ಗುಣ ಬೇರೆ ||
ಮನದೊಳೊಬ್ಬೊಬ್ಬನೊಂದೊಂದು, ಪ್ರಪಂಚವಿಂ |
ತನುವೇಕದೊಳ್ ಬಹುಳ - ಮಂಕುತಿಮ್ಮ ||

239
ಸಮವಿಲ್ಲ ಸೃಷ್ಟಿಯಲಿ, ನರನಂತೆ ನರನಿಲ್ಲ |
ಕ್ಷಮೆಯುಮವಳೊಳಗಿಲ್ಲ, ಕರ್ಮದಂತೆ ಫಲ ||
ಕ್ರಮವೊಂದ ನೀಮಾಗಿಸಿರಿ ನೋಳ್ಪೆನಾನೆನುತೆ |
ನಮಗವಳ್ ಪ್ರಸ್ಪರ್ಧಿ - ಮಂಕುತಿಮ್ಮ ||

240
ಬೆರಳುಗಳ ನೋಡವುಗಳೊಂದರಂತೊಂದಿಲ್ಲ |
ಕರಧರ್ಮಕುಚಿತವಾ ಹೆಚ್ಚು ಕಡಮೆಗಳು ||
ಪುರುಳ ಪಿಡಿವುವೆ ಬೆರಳ್ಗಳೆಲ್ಲಮೊಂದುದ್ದವಿರೆ? |
ಸರಿಯಹುದು ಕಾರ್ಯದಲಿ - ಮಂಕುತಿಮ್ಮ ||

241
ಅಸಮದಲಿ ಸಮತೆಯನು ವಿಷಮದಲಿ ಮೈತ್ರಿಯನು |
ಅಸಮಂಜಸದಿ ಸಮನ್ವಯ ಸೂತ್ರ ನಯವ ||
ವೆಸನಮಯ ಸಂಸಾರದಲಿ ವಿನೋದವ ಕಾಣ್ಬ |
ರಸಿಕತೆಯೆ ಯೋಗವೆಲೊ - ಮಂಕುತಿಮ್ಮ ||

242
ಐಕ್ಯ ನಾನಾತ್ವಗಳು, ನಿಯತಿ ಸ್ವತಂತ್ರಗಳು |
ತರ್ಕ್ಯ ನಿಸ್ತರ್ಕ್ಯಗಳು ಬೆರೆತು ಚಿತ್ರದಲಿ ||
ಶಕ್ಯಮುಂ ಪುರುಷತಂತ್ರಕ್ಕಶಕ್ಯಮುಮಾದ |
ಸಿಕ್ಕುಗಳ ಕಂತೆ ಜಗ - ಮಂಕುತಿಮ್ಮ ||

243
ಸಮವರ್ತಿಗಳು ಜಗದೊಳಿಬ್ಬರೇ ದಿಟವರಿಯೆ |
ಯಮರಾಜನೊಬ್ಬ ಜಾಠರರಾಜನೊಬ್ಬ ||
ಶ್ರಮವನನುದಿನಮುಮಾಗಿಪನೊಬ್ಬನೆಲ್ಲವನು |
ಶಮಿಸಿ ಮುಗಿಸುವನೊಬ್ಬ - ಮಂಕುತಿಮ್ಮ ||

244
ಒಲ್ಲೆನೆನುವರದಾರ್ ಅಹಿಂಸೆತತ್ತ್ವದ ಸೊಬಗ? |
ಸಲ್ಲಿಸುವೆನಾ ವ್ರತವನೆನಲೊಂದು ತೊಡಕು ||
ಹುಲ್ಲೆಯನು ತಿನುವ ಹುಲಿಯೊಣಹುಲ್ಲನುಣಲಹುದೆ? |
ಎಲ್ಲಿ ಸೃಷ್ಟಿಯಲಿ ದಯೆ? - ಮಂಕುತಿಮ್ಮ ||

245
ಕೊಲೆಗಡಿಕನೆನಿಪ ಹುಲಿ ಸಲಹದೇಂ ಮರಿಗಳನು? |
ಒಲುಮೆಕರುಳಡಗಿಹುದು ಪಗೆತನದ ಪೊಡೆಯೊಳ್ ||
ನಲುಮೆಯನು ಹೊರಹೊಮ್ಮಿಸುವುದು ನರನುನ್ನತಿಕೆ |
ಒಲವಾತ್ಮ ವಿಸ್ತರಣ - ಮಂಕುತಿಮ್ಮ ||

246
ಪ್ರೇಮಬೀಜಗಳಿಹುವು ವೈರಬೀಜಗಳವೊಲೆ |
ಸೌಮ್ಯಮುಂ ಸಂಕ್ಷೋಭೆಯಂತೆ ಪ್ರಕೃತಿಯಲಿ ||
ಭ್ರಾಮಕದ ಸೃಷ್ಟಿಯಾ ವಿಷಮಲಕ್ಷಣಗಳಲಿ |
ಸಾಮರಸ್ಯವನರಸೊ - ಮಂಕುತಿಮ್ಮ ||

247
ಮನದಿಂದ ಮನಕೆ ಪಾರ್ವುದು ಬಾಳಿನುರಿಯ ಕಿಡಿ |
ಮನೆಯಿಂದ ಮನೆಗಲೆವ ಗಾಳಿ ಹೊಗೆಯಂತೆ ||
ಮನುಜರ ಪರಸ್ಪರೋದ್ರೇಕ ಜಗದ ವಿಲಾಸ |
ಮನವೆ ಪರಮಾದ್ಭುತವೊ - ಮಂಕುತಿಮ್ಮ ||

248
ತೆರಿಗೆಗಳು ಹಲವುಂಟು ಪ್ರಕೃತಿಗಂ ಸಲ್ಲುವುವು |
ತೆರದೆ ನೀಂ ಮರೆಯೆ ದಂಡಿಪಳಾಕೆ ಮುನಿದು ||
ಕರಣಂಗಳಾಕೆಯವು ಮಿತದೊಳವುಗಳ ಬಳಸಿ |
ತೆರು ಸಲುವ ಬಾಡಿಗೆಯ - ಮಂಕುತಿಮ್ಮ ||

249
ಹಾಳು ಹಾಳೆಲ್ಲ ಬಾಳೆನ್ನುತಿರ್ದೊಡೆಯುಮದ- |
ರೂಳಿಗವ ತಪ್ಪಿಸುವ ಜಾಣನೆಲ್ಲಿಹನು? ||
ಊಳಿಗವೊ ಕಾಳಗವೊ ಕೂಳ್ಕರೆಯೊ ಗೋಳ್ಕರೆಯೊ |
ಬಾಳು ಬಾಳದೆ ಬಿಡದು - ಮಂಕುತಿಮ್ಮ ||

250
ಜೀವನದೊಂದು ಪರಮೈಶ್ವರ್ಯ ಬೊಮ್ಮನದು |
ಸೇವೆಯದನೂರ್ಜಿತಂಗೊಳಿಸುವೆಲ್ಲೆಸಕ ||
ಈವರಾರ್ ಕೊಳುವರಾರೆಲ್ಲರೊಂದಾಗಿರಲು? |
ನೈವೇದ್ಯಭಾಗಿ ನೀಂ - ಮಂಕುತಿಮ್ಮ ||

251
ತಲೆಯ ಮೇಗಡೆ ಬೇರು, ಕೆಳಗೆ ಕೊಂಬೆಲೆ ಚಿಗುರು |
ಬಿಳಲೂರೆಗಳ ಲೆಕ್ಕಕಿಲ್ಲ ಕೊನೆ ಮೊದಲು ||
ಬೆಳೆವುದೀ ಪರಿಯರಳಿಮರದಂತೆ ನರಕೋಟಿ |
ನಲಿವನದರಲಿ ಬೊಮ್ಮ - ಮಂಕುತಿಮ್ಮ ||

252
ಒಂದು ಕೊಂಬೆಯು ಬಾಡಲಿನ್ನೊಂದು ಚಿಗುರುವುದು |
ಸಂದಿಹುದು ಚಿರನವತೆಯಶ್ವತ್ಥಮರಕೆ ||
ಎಂದೆಂದುಮಂತಿರುವುದೀ ವಿಶ್ವವೃಕ್ಷವದ |
ರೊಂದು ರೆಂಬೆಯೊ ನೀನು - ಮಂಕುತಿಮ್ಮ ||

253
ಅಂದಂದಿಗಾದನಿತು ಬುಡ ಕಟ್ಟಿ ಕಳೆ ತೆಗೆದು |
ಚೆಂದಳಿರು ದಿನದಿನಮುಮೊಗೆಯೆ ನೀರೆರೆದು ||
ಸಂದ ಬಲದಿಂದ ಜಗದಶ್ವತ್ಥ ಸೇವೆಯಲಿ |
ನಿಂದಿರುವುದಲೆ ಧರ್ಮ - ಮಂಕುತಿಮ್ಮ ||

254
ನಾಟಕವ ನೋಡು ಬ್ರಹ್ಮಾಂಡರಂಗಸ್ಥಲದಿ |
ಕೋಟಿ ನಟರಾಂತಿಹರು ಚಿತ್ರಪಾತ್ರಗಳ ||
ಆಟಕ್ಕೆ ಕಥೆಯಿಲ್ಲ ಮೊದಲಿಲ್ಲ ಕಡೆಯಿಲ್ಲ |
ನೋಟಕರು ಮಾಟಕರೆ - ಮಂಕುತಿಮ್ಮ ||

255
ನಾಟಕದೊಳನುವಿಂದ ಬೆರೆತದನು ಮೆಚ್ಚೆನಿಸಿ |
ನೋಟಕನುಮಾಗಿ ತಾಂ ನಲಿದು ನಲಿಯಿಸುವಾ ||
ಪಾಠವನು ಕಲಿತವನೆ ಬಾಳನಾಳುವ ಯೋಗಿ |
ಆಟಕಂ ನಯವುಂಟು - ಮಂಕುತಿಮ್ಮ ||

256
ಪರದ ಮೇಲ್ಕಣ್ಣಿಟ್ಟು ಧರೆಯ ತುಚ್ಛವೆನುತ್ತ |
ತೊರೆದಾಯಸಂಗೊಳ್ಳೆ ದೊರೆವ ಫಲವೇನು? ||
ಸುರಧನುವಿಗೇಣಿಯಿಡಹೊರಟು ನಿನ್ನಂಗಳದ |
ಕಿರಿಹೂವ ಮರೆಯುವೆಯ - ಮಂಕುತಿಮ್ಮ ||

257
ಪರಕಿಹವೆ ಸೋಪಾನವೆಂದು ನೀನೊಪ್ಪುವೊಡೆ |
ಪರಕಿಂತಲಿಹವೆಂತು ಜೊಳ್ಳದಾದೀತು? ||
ಹೊರಲೆಬೇಕಂತಾದೊಡಿಹದ ಹೊರೆಗಳನೆಲ್ಲ |
ಜರೆವುದೇಕಿನ್ನದನು? - ಮಂಕುತಿಮ್ಮ ||

258
ಒಲ್ಲೆನೆನದಿರು ಬಾಳನ್, ಒಲವದೇನೆನ್ನದಿರು |
ಉಲ್ಲಾಸಕೆಡೆಮಾಡು ನಿನ್ನಿನಾದನಿತು ||
ನಿಲ್ಲು ಕೆಚ್ಚದೆಯಿಂದಲನ್ಯಾಯಗಳನಳಿಸೆ |
ಎಲ್ಲಕಂ ಸಿದ್ಧನಿರು - ಮಂಕುತಿಮ್ಮ ||

259
ಕಡಲ ಕಡೆದರು ಸುರಾಸುರರು ನಿಜಬಲದಿಂದ |
ಕುಡಿದನದನು ತಪಸ್ಸಿನಿಂದ ಕುಂಭಜನು ||
ಕಡಮೆಜನ ಪಾರಗಾಂಬರೆ ಗಾಸಿಯನು ಪಡದೆ? |
ಪೊಡವಿ ಬಾಳ್ವೆಯುಮಂತು - ಮಂಕುತಿಮ್ಮ ||

260
ದ್ರಾಕ್ಷಿರಸವೇನಲ್ಲ ಜೀವನದ ತಿರುಳಾರ್ಗಮ್ |
ಇಕ್ಷುದಂಡದವೊಲದು ಕಷ್ಟಭೋಜನವೆ ||
ದಕ್ಷತೆಯಿನಿಡಿಯುವಂಗೊಂದೆರಡು ಗುಟುಕು ರಸ |
ಮಾಕ್ಷಿಕರು ಮಿಕ್ಕೆಲ್ಲ - ಮಂಕುತಿಮ್ಮ ||

261
ಆಟವೋ ಮಾಟವೋ ಕಾಟವೋ ಲೋಕವಿದು |
ಊಟ ಉಪಚಾರಗಳ ಬೇಡವೆನ್ನದಿರು ||
ಪಾಟವವು ಮೈಗಿರಲಿ, ನೋಟ ತತ್ತ್ವದೊಳಿರಲಿ |
ಪಾಠಿಸು ಸಮನ್ವಯವ - ಮಂಕುತಿಮ್ಮ ||

262
ಒಂದು ಕಣ್ಣಳುವಂದು ಮತ್ತೊಂದು ತಳ್ಕೈಸಿ |
ಅಂದ ಚೆಂದಗಳ ಜನವರಸುವುದು ಬಾಳೊಳ್ ||
ಬಂಧುಮೋಹವೊ ಯಶವೊ ವೈರವೊ ವೈಭವವೊ |
ಬಂಧಿಪುದು ಜಗಕವರ - ಮಂಕುತಿಮ್ಮ ||

263
ಬಾಳು ಪಾಳೆನ್ನುವರ ಬಿಟ್ಟಿಹುದೆ ಬೆದಕಾಟ? |
ತಾಳಿದರೆ ಬಾಳನಂತಹರುಮ್ ಆಶೆಯಲಿ? ||
ಕಾಲವಿನ್ನಿರದಿಂತು ನಾಳೆ ನೋಡುವಮೆನುತ |
ಮೇಲನೆ ನಿರೀಕ್ಷಿಪರು - ಮಂಕುತಿಮ್ಮ ||

264
ಗೋಳಾಡಲುಂ ಬೇಡ, ಲೋಲಾಪ್ತಿಯುಂ ಬೇಡ |
ಬಾಳು ಪರಚೇತನದ ಕೇಳಿಯೆಂದೆಣಿಸಿ ||
ಪಾಲಿಗನು ನೀನದರೊಳೆನಿಪಂತೆ ಬಾಳುತಿರು |
ಕೇಳಿಯುಂ ಧರ್ಮವೆಲೊ - ಮಂಕುತಿಮ್ಮ ||

265
ಬಾಳ ಸಿರಿ ಸೊಗಸುಗಳ ಪೆರ್ಚಿಪನು ಖೇಲಕನು |
ಕೀಳದೆನಿಪವನೊರಟ, ಮಂಕ, ಕಲ್ಲೆದೆಗ ||
ತೋಳಿಂದೆ ತಿಳಿವಿಂದೆ ನುಡಿಯಿಂದೆ ಜಗದಿರವ |
ಮೇಲೆನಿಪವನೆ ರಸಿಕ - ಮಂಕುತಿಮ್ಮ ||

266
ಬಾಳ ಹಳಿವುದದೇಕೆ? ಗೋಳ ಕರೆವುದದೇಕೆ? |
ಬಾಳಿದಲ್ಲದೆ ತಪ್ಪದೇನ ಮಾಡಿದೊಡಂ ||
ಕೇಳಿಯದು ಬೊಮ್ಮನಾಡಿಪನು ನೀನದರೊಳಗೆ |
ಪಾಲುಗೊಳಲಳಬೇಡ - ಮಂಕುತಿಮ್ಮ ||

267
ಲೀಲೆಯೇಂ ಬಾಳೆಲ್ಲ? ಛೀ ತಳ್ಳು ಹಾಸ್ಯವನು |
ಬಾಲರೇಂ ನಾವಿನ್ನುಮೆನುತ ಪಲ್ಕಡಿದು ||
ಖೇಲನವ ಬೇಡವೆನುವರನು ವಿಧಿರಾಯನವ--- |
ಹೇಳಿಪನು ಸೆರೆವಿಡಿದು - ಮಂಕುತಿಮ್ಮ ||

268
ನಾಚಿಕೆಯದೇಕೆ ನೀಂ ಬದುಕಿನಲಿ ಸೊಗವಡಲು? |
ಚಾಚುತಿಹುದಾತ್ಮ ನಾಲಗೆಯ ದೆಸೆದೆಸೆಗೆ ||
ಬಾಚಿಕೊಳಲಮೃತಕಣಗಳನ್ನೆಲ್ಲ ತನ್ನೆಡೆಗೆ |
ಸಾಜ ಸೊಗವಾತ್ಮಂಗೆ - ಮಂಕುತಿಮ್ಮ ||

269
ಸುಂದರವನೆಸಗು ಜೀವನದ ಸಾಹಸದಿಂದೆ |
ಕುಂದಿಲ್ಲವದಕೆ ಸಾಹಸಭಂಗದಿಂದೆ ||
ಮುಂದಕದು ಸಾಗುವುದು ಮರಳಿ ಸಾಹಸದಿಂದೆ |
ಚೆಂದ ಧೀರೋದ್ಯಮವೆ - ಮಂಕುತಿಮ್ಮ ||

270
ಎಲ್ಲರಿಗಮಾಗಿ ತಾನ್, ಎಲ್ಲರುಂ ತನಗಾಗಿ |
ನಿಲ್ಲುವೇಕಾತ್ಮತೆಯ ಬಾಳ್ವೆಯಿಂ ಕಲಿಯಲ್ ||
ಸಲ್ಲುವುಪಕರಣಗಳು ಮನೆ ರಾಜ್ಯ ಸಂಸಾರ- |
ವಲ್ಲಗಳೆಯದಿರವನು - ಮಂಕುತಿಮ್ಮ ||

271
ವ್ಯರ್ಥವೀ ಜೀವನದ ಬಡಿದಾಟವೆನ್ನದಿರು |
ಅರ್ಥವಹುದದು ನಿನಗೆ ಪೂರ್ಣದರ್ಶನದಿಂ ||
ನರ್ತಿಪನು ಜಡಜೀವರೂಪಂಗಳಲಿ ಬೊಮ್ಮ |
ಪೂರ್ತಿಯಿದನರಿಯೆ ಸೊಗ - ಮಂಕುತಿಮ್ಮ ||

272
ಬೊಮ್ಮನೇ ಸಂಸ್ಕೃತಿಯ ಕಟ್ಟಿಕೊಂಡುತ್ಸಹಿಸೆ |
ಸುಮ್ಮನರೆಚಣವಿರದೆ ಪ್ರಕೃತಿ ತೊಡಗುತಿರೆ ||
ಜನ್ಮ ಸಾಕೆನುವುದೇಂ? ದುಮ್ಮಾನವಡುವುದೇಂ? |
ಚಿಮ್ಮುಲ್ಲಸವ ಧರೆಗೆ - ಮಂಕುತಿಮ್ಮ ||

273
ಕೋಟಿ ದೆಸೆಯುಸಿರುಗಳು, ಕೋಟಿ ರಸದಾವಿಗಳು |
ಕೋಟಿ ಹೃದಯದ ಹೋಹೊ ಹಾಹಕಾರಗಳು ||
ಕೂಟ ಕೂಡಿಹುವಂತರಿಕ್ಷದಲಿ ನೀನದರಿನ್ |
ಓಟವೋಡುವುದೆತ್ತ? - ಮಂಕುತಿಮ್ಮ ||

274
ನಯದಿಂದ ಸೋಕು, ನೀಂ ದಯೆಯಿಂದ ನೋಡದನು |
ಭಯದಿನೋಲಗಿಸು, ನೀಂ ಪೂಜೆಗೈಯದನು ||
ಸ್ವಯಮಂಕುರಿತ ಸಕಲ ವಿಶ್ವಸತ್ತ್ವವೊ; ಜೀವ |
ಪ್ರಿಯತಮವೊ ಸೃಷ್ಟಿಯಲಿ - ಮಂಕುತಿಮ್ಮ ||

275
ಸರ್ವರುಂ ಸಾಧುಗಳೆ ಸರ್ವರುಂ ಬೋಧಕರೆ |
ಜೀವನಪರೀಕ್ಷೆ ಬಂದಿದಿರು ನಿಲುವನಕ ||
ಭಾವಮರ್ಮಂಗಳೇಳುವುವಾಗ ತಳದಿಂದ |
ದೇವರೇ ಗತಿಯಾಗ - ಮಂಕುತಿಮ್ಮ ||

276
ಎಲ್ಲರುಂ ಜಿತಮನಸ್ಕರೆ ದೈವ ವಿಧಿ ಮಾಯೆ |
ಚೆಲ್ವುರೂಪಿಂ ಬಂದು ಕಣ್ಕುಕ್ಕುವನಕ ||
ವಲ್ಗುರೂಪ ಸುಭದ್ರೆ ಕಣ್ಮುಂದೆ ಸುಳಿವನಕ |
ಫಲ್ಗುಣನು ಸಂನ್ಯಾಸಿ - ಮಂಕುತಿಮ್ಮ ||

277
ಧಾರುಣೀಸುತೆಯವೊಲು ದೃಢಮನಸ್ಕರದಾರು? |
ಮಾರೀಚಹರಿಣವಡ್ಡಾಡಲೇನಾಯ್ತು? ||
ವಾರಿಧಿಯೊಳಡಗಿ ನಿದ್ರಿಪ ಬಾಡವವೊ ತೃಷ್ಣೆ |
ಆರದನು ಕೆರಳಿಪರೊ! - ಮಂಕುತಿಮ್ಮ ||

278
ಆನೆಗಾರ್ ಇರುವೆಗಾರ್ ಕಾಗೆಗಾರ್ ಕಪ್ಪೆಗಾರ್ |
ಕಾಣಿಸುವರನ್ನವನು? ಹಸಿವವರ ಗುರುವು ||
ಮಾನವನುಮಂತುದರಶಿಷ್ಯನವನಾ ರಸನೆ |
ನಾನಾವಯವಗಳಲಿ - ಮಂಕುತಿಮ್ಮ ||

279
ಯಮನಿಗೇಕಪಕೀರ್ತಿ? ನರರು ಬಲು ಕರುಣಿಗಳೆ? |
ಮಮತೆಯಿನೊ ರೋಷದಿನೊ ಹಾಸ್ಯದಿನೊ ಹೇಗೋ ||
ನಿಮಿಷನಿಮಿಷಮುಮೊರ್ವನಿನ್ನೊರ್ವನನು ತಿಕ್ಕಿ |
ಸಮೆಯಿಸುವನಾಯುವನು - ಮಂಕುತಿಮ್ಮ ||

280
ದೋಷಿಯವನಿವನು ಪಾಪಿಯೆನುತ್ತ ಗಳಹದಿರು |
ಆಶೆಯೆನಿತವನು ಸಹಿಸಿದನೊ| ದಹಿಸಿದನೊ! ||
ವಾಸನೆಗಳವನನೇನೆಳೆದವೋ ಬಲವೇನೊ! |
ಪಾಶಬದ್ಧನು ನರನು - ಮಂಕುತಿಮ್ಮ ||

281
ಪಾತಕಿಯೊಳಾಗ್ರಹವ ತೋರೆ ನಿರ್ಮಲನಾರು? |
ಆತುಮದ ಪರಿಕಥೆಯನರಿತವರೆ ನಾವು? ||
ಸೋತ ದುರ್ಬಲಿಗೆ ಸಲ್ಲುವುದು ನಮ್ಮನುಕಂಪೆ |
ನೀತಿ ನಿಂದೆಯೊಳಿರದು - ಮಂಕುತಿಮ್ಮ ||

282
ಪಾಪವೆಂಬುದದೇನು ಸುಲಭಸಾಧನೆಯಲ್ಲ |
ತಾಪದಿಂ ಬೇಯದವನ್ ಅದನೆಸಪನಲ್ಲ ||
ವಾಪಿಯಾಳವ ದಡದಿ ನಿಂತಾತನರಿವನೇಂ? |
ಪಾಪಿಯೆದೆಯೊಳಕಿಳಿಯೊ - ಮಂಕುತಿಮ್ಮ ||

283
ರಾವಣನ ಹಳಿವವನೆ, ಜೀವವನೆ ಬಿಸುಡಿಸುವ |
ಲಾವಣ್ಯವೆಂತಹುದೊ? ನೋವದೆಂತಹುದೊ? ||
ಬೇವಸವ ಪಟ್ಟು ತಿಳಿ; ತಿಳಿದು ಹಳಿಯುವೊಡೆ ಹಳಿ |
ಗಾವಿಲನ ಗಳಹೇನು? - ಮಂಕುತಿಮ್ಮ ||

284
ಜೀವಋಣಗಳ ಲೆಕ್ಕದಾದಿಯರಿಯದ ನಾವು |
ಆವುದನು ಸರಿಯೆನುವ? ತಪ್ಪಾವುದೆನುವ? ||
ಓವೊ ಬಿಡು ಕಡುಕಷ್ಟ ನೀತಿನಿರ್ಣಯದ ಹೊರೆ |
ದೈವವದ ಹೊರಲಿ ಬಿಡು - ಮಂಕುತಿಮ್ಮ ||

285
ನಾಚಿಕೆಯನಾಗಿಪುವು ನಮ್ಮ ಸುಖದಾತುರದ |
ಯೋಚನೆಗಳವನು ಮರುವಗಲು ಪರಿಕಿಸಲು ||
ಚಾಚಿದ್ದ ರಸನೆ ತಾನೊಳಸೇದಿಕೊಳ್ಳುವುದು |
ರೇಚನವದಾತ್ಮಕ್ಕೆ - ಮಂಕುತಿಮ್ಮ ||

286
ಸನ್ನಿಹಿತ ಮನುಜನಲಿ ದೈವಪಾಶವವೆರಡು |
ಪುಣ್ಯ ಪಾಪದ ಮಿಶ್ರವವನ ಸ್ವಭಾವ ||
ಕಣ್ಣೊಮ್ಮೆಯಾಗಸದ ಬೆಳಕಿನೊಡನಾಡುವುದು |
ಮಣ್ಣೊಳುರುಳುವುದೊಮ್ಮೆ - ಮಂಕುತಿಮ್ಮ ||

287
ನರರ ಸ್ವಭಾವ ವಕ್ರಗಳನೆಣಿಸುವುದೇಕೆ? |
ಗಿರಿ ಕಣಿವೆಗಳ ಗಣಿಸಿ ರೋಷಗೊಳ್ಳುವೆಯೇಂ? ||
ಸುರೆ ಗರಲ ಸುಧೆಗಳ್ ಅಬ್ಧಿಯಲಿ ಸೋದರರಲ್ತೆ |
ಅರಿತೊಗ್ಗು ಸಾಜಕ್ಕೆ - ಮಂಕುತಿಮ್ಮ ||

288
ರಾಮನಿರ್ದಂದು ರಾವಣನೊಬ್ಬನಿರ್ದನಲ |
ಭೀಮನಿರ್ದಂದು ದುಶ್ಯಾಸನನದೊರ್ವನ್ ||
ಈ ಮಹಿಯೊಳನ್ಯಾಯಕಾರಿಯಿಲ್ಲದುದೆಂದು? |
ರಾಮಭಟನಾಗು ನೀಂ - ಮಂಕುತಿಮ್ಮ ||

289
ಆಳನೀಳಗಳ ಕಾಣಲ್ಕಾಗಿಸದೆ ಮೊರೆವ |
ಬಾಳ ಕಡಲೊಳು ಮುಳುಗಿ ತಳದಿಂದಲೆದ್ದು ||
ಪೇಳುವರದಾರು ನ್ಯಾಯಾನ್ಯಾಯ ವಿವರಗಳ |
ಗಾಳಿಗಾಬರಿಯೆಲ್ಲ - ಮಂಕುತಿಮ್ಮ ||

290
ಸಕ್ಕರೆಯ ಭಕ್ಷ್ಯವನು ಮಕ್ಕಳೆದುರಿಗೆ ಕೈಗೆ |
ಸಿಕ್ಕುವಂತಿರಿಸಿ ಕದ್ದರೆ ಗದ್ದರಿಪುದೇಂ? ||
ತಕ್ಕುದಲ್ಲದಪೇಕ್ಷೆಗೇಕೆ ಮದ್ಯವ ಕುಡಿಸು- |
ತುಕ್ಕಿಸುವನದನು ವಿಧಿ? - ಮಂಕುತಿಮ್ಮ ||

291
ಬೀಸಿದಲ್ಲದೆ ಬೂದಿಕವಿದ ಕಿಡಿಯುರಿದೀತೆ |
ಕೈಸೋಕದಿರೆ ಕೈಯ ಸಪ್ಪುಳಾದೀತೆ? ||
ವಾಸನೆಯೆ ಮಾತೆಯಾಶೆಗೆ ಪಿತನು ಸಂದರ್ಭ |
ದೋಷವೊಳಗೋ ಹೊರಗೊ? - ಮಂಕುತಿಮ್ಮ ||

292
ತಿದ್ದಿಕೊಳೊ ನಿನ್ನ ನೀಂ; ಜಗವ ತಿದ್ದುವುದಿರಲಿ |
ತಿದ್ದಿಕೆಗಮೊಂದು ಮಿತಿಯುಂಟು ಮರೆಯದಿರು ||
ಉದ್ದ ನೀಂ ಬೆರಳನಿತು ಬೆಳೆದೀಯೆ ಸಾಮಿಂದೆ |
ಸ್ಪರ್ಧಿಯೆ ತ್ರಿವಿಕ್ರಮಗೆ? - ಮಂಕುತಿಮ್ಮ ||

293
ದರಿಯಿರದೆ ಗಿರಿಯಿಲ್ಲ, ನೆರಳಿರದೆ ಬೆಳಕಿಲ್ಲ |
ಮರಣವಿಲ್ಲದೆ ಜನನಜೀವನಗಳಿಲ್ಲ ||
ವರಗುಣೋನ್ನತಿಗೆ ನಿಮ್ನಗುಣಂಗಳೊಡವುಟ್ಟು |
ತೆರೆ ಬೀಳದೇಳುವುದೇ - ಮಂಕುತಿಮ್ಮ ||

294
ಉಪ್ಪಿಷ್ಟು ಹುಳಿಯಿಷ್ಟು ಕಾರ ಸಿಹಿಯಷ್ಟಿಷ್ಟು |
ಒಪ್ಪಿರ್ದೊಡದು ಭೋಜ್ಯವಂತು ಜೀವಿತಮುಂ ||
ತಪ್ಪು ಸರಿ ಬೆಪ್ಪು ಜಾಣಂದಕುಂದುಗಳ ಬಗೆ |
ಯಿಪ್ಪತ್ತು ಸೇರೆ ರುಚಿ - ಮಂಕುತಿಮ್ಮ ||

295
ತಪ್ಪನಿನಿತುಂ ಸೈಸದಪ್ಪಟದ ಗುಣಶಾಲಿ |
ಕಪ್ಪು ಕಂಡು ಕನಲ್ವ ಕೆಂಡ ಗುಲಗಂಜಿ ||
ಉಪ್ಪೊ ಸಪ್ಪೆಯೊ ನಿನ್ನ ಮೈಬೆವರು ನೆಕ್ಕಿ ತಿಳಿ |
ಒಪ್ಪಿಹೆಯ ನೀನಜನ? - ಮಂಕುತಿಮ್ಮ ||

296
ಮರುಕದುಂಬಿದ ಕಣ್ಣನೋಟದೊಳಗಿದ್ದೀತು |
ಬಿರುನುಡಿಯೊಳಿರದೊಂದು ಕೂರಲಗು, ಸಖನೆ ||
ಕರವಾಳಕದಿರದಿಹ ದುರಿತಕಾರಿಯ ಹೃದಯ |
ಕರುಣೆಯಿಂ ಕರಗೀತೊ - ಮಂಕುತಿಮ್ಮ ||

297
ಪೆರ್ಮೆಯ ಗುಣಂಗಳಿನ್ನೂರು ಶಾಸ್ತ್ರೋಕ್ತದವು |
ಸರ್ವೋತ್ತಮಗಳೆರಡು ಸರ್ವಕಠಿನಗಳು ||
ನಿರ್ಮತ್ಸರತೆಯೊಂದು ದೋಷಿಯೊಳ್ ಕ್ಷಮೆಯೊಂದು |
ಬಾಹ್ಮಿಕಾಭ್ಯಾಸವದು - ಮಂಕುತಿಮ್ಮ ||

298
ಗಾರೆಗಚ್ಚೇನಲ್ಲ ದಾರು ದೂಲಗಳಲ್ಲ |
ಪಾರದ ದ್ರವದವೊಲು ಮನುಜಸ್ವಭಾವ ||
ವೀರಶಪಥಗಳಿಂದೆ ಘನರೂಪಿಯಾಗದದು |
ಸೈರಿಸದನಿನಿತು ನೀಂ - ಮಂಕುತಿಮ್ಮ ||

299
ಹಟವಾದಕೆಡೆಯೆಲ್ಲಿ ಮನುಜಪ್ರಪಂಚದಲಿ? |
ಸೆಟೆಯೆಷ್ಟೊ ದಿಟವೆಷ್ಟೊ ಬೆರೆತಿರುವುವಿಲ್ಲಿ ||
ಪಟುವಾಗಿ ನಿಲಲಹುದೆ ಮಣಲೊಳೆಸಗಿದ ಗೋಡೆ? |
ಕಟುತೆ ಸಲ್ಲದು ಜಗಕೆ - ಮಂಕುತಿಮ್ಮ ||

300
ಗಿಡದಿ ನಗುತಿರುವ ಹೂ ಪ್ರಕೃತಿಸಖನಿಗೆ ಚೆಂದ |
ಮಡದಿ ಮುಡಿದಿರುವ ಹೂ ಯುವಕಂಗೆ ಚೆಂದ ||
ಗುಡಿಯೊಳಗೆ ಕೊಡುವ ಹೂ ದೈವಭಕ್ತಗೆ ಚೆಂದ |
ಬಿಡಿಗಾಸು ಹೂವಳಗೆ - ಮಂಕುತಿಮ್ಮ ||

301
ಇಲ್ಲಿ ಚೆನ್ನಲ್ಲಿ ಚೆನ್ನೆಲ್ಲೊ ಚೆನ್ನೆನುತೆಣಿಸಿ |
ಹುಲ್ಲುಬಯಲೊಂದೆಡೆಯಿನೊಂದಕ್ಕೆ ನೆಗೆದು ||
ಮೆಲ್ಲದೆಯೆ ಧಾವಿಸುತ ದಣಿವ ಕರುವನು ಪೋಲ್ತೊ- |
ಡೆಲ್ಲಿಯೋ ಸುಖ ನಿನಗೆ? - ಮಂಕುತಿಮ್ಮ ||

302
ಹೊತ್ತು ಕಣಕಣದಿ ಮಣ್ಣನು ಗೆದ್ದಲಿರುವೆಗಳು |
ಮೆತ್ತುತೆಡೆಬಿಡದೆ ದುಡಿದಾಗಿಸಿದ ಗೂಡು ||
ಹುತ್ತವಾಗುವುದು ವಿಷಸರ್ಪಕ್ಕೆ; ಮಾನವನ |
ಯತ್ನಗಳ ಕಥೆಯಿಷ್ಟೆ - ಮಂಕುತಿಮ್ಮ ||

303
ಅಪ್ಪಾಲೆ ತಿಪ್ಪಾಲೆ ತಿರುಗಿಬಿದ್ದವನೊಬ್ಬ |
ಸ್ವಪ್ನಲೋಕದಿ ತಿರೆಯ ಮರೆತಾತನೊಬ್ಬ ||
ತಪ್ಪುಸರಿಗಳ ತೂಕವಳೆಯೆ ಕುಳಿತವನೊಬ್ಬ |
ಬೆಪ್ಪನಾರ್ ಮೂವರಲಿ? - ಮಂಕುತಿಮ್ಮ ||

304
ಗಿರಿಯ ಮೇಲಕೆ ದೊಡ್ಡ ಬಂಡೆಯನು ಸಿಸಿಫಸನು |
ಉರುಳಿಸಿರಲೊಂದೆರಡು ಮಾರು ಘಾಸಿಯಲಿ ||
ಸರಿದು ಕೆಳಕದದೆಂತೊ ಜಾರುವುದು ಮರಮರಳಿ |
ಪುರುಷಪ್ರಗತಿಯಂತು - ಮಂಕುತಿಮ್ಮ ||

305
ಕಾಕತಾಳೀಯ ಕಥೆ ಲೋಕಚರಿತೆಯೊಳೆಷ್ಟೊ! |
ಟೀಕೆಗೆಟುಕವು ನಮಗೆ ಕಾರ್ಯಕಾರಣಗಳ್ ||
ಏಕೊ ಕಣ್ಣಲೆಯುವುದು; ಏನೊ ಅದ ಪಿಡಿಯುವುದು |
ವ್ಯಾಕುಲತೆ ಫಲಿತಾಂಶ - ಮಂಕುತಿಮ್ಮ ||

306
ನಾಸಿಕದ ಮಾಟದಿಂದಾ ಕ್ಲಿಯೋಪ್ಯಾಟ್ರಳಿಗೆ |
ದಾಸರಾದರು ಶೂರ ಸೀಸರ್ ಆಂಟನಿಗಳ್ ||
ದೇಶಚರಿತೆಗಮವರ ಜಸಕಮಂಕುಶವಾಯ್ತು |
ನಾಸಾಪುಟದ ರೇಖೆ - ಮಂಕುತಿಮ್ಮ ||

307
ಸುರಪಸಭೆಯಲಿ ಗಾಧಿಸುತ ವಸಿಷ್ಠ ಸ್ಪರ್ಧೆ |
ಧರೆಯೊಳದರಿಂ ಹರಿಶ್ಚಂದ್ರಂಗೆ ತಪನೆ ||
ಬರುವುದಿಂತೆತ್ತಣಿನೊ ಬೇಡದ ಪ್ರಾರಬ್ಧ |
ಕರುಮಗತಿ ಕೃತ್ರಿಮವೊ - ಮಂಕುತಿಮ್ಮ ||

308
ಸರಕಾರ ಹರಿಗೋಲು, ತೆರೆಸುಳಿಗಳತ್ತಿತ್ತ |
ಸುರೆ ಕುಡಿದವರು ಕೆಲರು ಹುಟ್ಟು ಹಾಕುವರು ||
ಬಿರುಗಾಳಿ ಬೀಸುವುದು, ಜನವೆದ್ದು ಕುಣಿಯುವುದು |
ಉರುಳದಿಹುದಚ್ಚರಿಯೊ! - ಮಂಕುತಿಮ್ಮ ||

309
ವನ್ಯಮೃಗಗಳ ನಡುವೆ ಗೋವು ಬಂದೇನಹುದು? |
ಪಣ್ಯವೀಧಿಯಲಿ ತಾತ್ತ್ವಿಕನಿಗೇನಹುದು? ||
ಅನ್ಯಾಯದುನ್ಮತ್ತ ಕೋಲಾಹಲದ ಲೋಕ |
ಪುಣ್ಯವನು ಚಿಂತಿಪುದೆ? - ಮಂಕುತಿಮ್ಮ ||

310
ಸ್ವಾಭಾವಿಕವ ಮರೆತು ನಭಕೇಣಿ ಹೂಡುವುದುಮ್ |
ಆಭಾಸವನು ಸತ್ಯವೆಂದು ಬೆಮಿಸುವುದುಮ್ ||
ಸೌಭಾಗ್ಯಗಳನರಸಿ ದೌರ್ಭಾಗ್ಯಕೀಡಹುದುಮ್ |
ಅಭಿಶಾಪ ನರಕುಲಕೆ - ಮಂಕುತಿಮ್ಮ ||

311
ಒಟ್ಟಿನಲಿ ತತ್ತ್ವವಿದು : ವಿಕಟರಸಿಕನೊ ಧಾತ |
ತೊಟ್ಟಿಲನು ತೂಗುವನು, ಮಗುವ ಜಿಗಟುವನು ||
ಸಿಟ್ಟನ್ ಒಡವುಟ್ಟುಗಳೊಳಾಗಿಪನು, ಸೋಲಿಪನು |
ತುತ್ತು ವಿಕಟಿಗೆ ನಾವು - ಮಂಕುತಿಮ್ಮ ||

312
ಒಂದು ಜನ್ಮದ ಲೆಕ್ಕವಂದೆ ಮುಗಿವಂತೇಕೆ |
ಸಂಧಿಸವು ಕಾಲ ಕಾರಣ ಕರಣ ಕಾರ್ಯ? ||
ಮುಂದಕೇತಕೆ ಮಿಗಿಸಿ ಕರ್ಮಋಣಶೇಷಗಳ |
ಬಂಧಿಪನು ವಿಧಿ ನಿನ್ನ? - ಮಂಕುತಿಮ್ಮ ||

313
ಒಳ್ಳೆ ಲೆಕ್ಕಿಗನಲ್ಲ ಪರಮೇಷ್ಠಿ; ನಮ್ಮಿಂದ |
ಸಲ್ಲುವುದ ಕೊಳಲು ಜನ್ಮಾಂತರಕೆ ಕಾಯ್ವಂ ||
ಇಲ್ಲಿ ಸಲ್ಲುವುದ ತಾನಿಂದೆ ತೀರಿಸಿಕೊಳ್ಳ- |
ಲೊಲ್ಲನೇನಂತಕನು? - ಮಂಕುತಿಮ್ಮ ||

314
ಕರ್ಮಋಣಶೇಷಂಗಳುಳಿಯದಿರೆ ಬಿತ್ತಾಗಿ |
ಜನ್ಮಜನ್ಮಾಂತರದ ಮರಗಳೇಳದಿರೆ ||
ಬ್ರಹ್ಮನುದ್ಯಾನವನ ಶಾಶ್ವತದೊಳಿಹುದೆಂತು? |
ಮರ್ಮವಿದು ಸೃಷ್ಟಿಯಲಿ - ಮಂಕುತಿಮ್ಮ ||

315
ಸಂಬಳದ ಹಂಬಲವೊ, ಡಾಂಬಿಕತೆಯಬ್ಬರವೊ |
ಇಂಬು ಕೂರ್ಮೆಯ ಕರೆಯೊ, ಕರುಳ ಕರೆಕರೆಯೋ ||
ತುಂಬಿಹುವು ಬಾಳಿನಲಿ ನೂರು ತಕರಾರುಗಳು |
ಬೆಂಬಲವವೆಲೊ ಜಗಕೆ - ಮಂಕುತಿಮ್ಮ ||

316
ತಿರುತಿರುಗಿ ತಿರುಗುತ್ತೆ ಬುಗುರಿ ತಾನೇ ಸೋತು |
ತಿರೆಗುರುಳುವುದು ತನ್ನ ಬಲವ ತಾಂ ಕಳೆದು ||
ನರನುಮಂತೆಯೆ ಸುತ್ತಿ ಸುತ್ತಿ ಕಡೆಗೊಂದು ದಿನ |
ತೆರುವನಸ್ಥಿಯ ಧರೆಗೆ - ಮಂಕುತಿಮ್ಮ ||

317
ಪುಣ್ಯಪಾಪದ ಮಿಶ್ರ ನರಜಂತುವವನ ನೆಲೆ |
ಮಣ್ಣು ಕರುಳುಗಳೆಸಕವವನ ಮೈದೊಡವು ||
ಬಣ್ಣಬಣ್ಣದ ವಸ್ತ್ರ; ಬಿಳ್ಪೊಡನೆ ಕಪ್ಪಿಹುದು |
ಕಣ್ಣ ದುರುಗುಟಿಸದಿರು - ಮಂಕುತಿಮ್ಮ ||

318
ಹಾಸ್ಯಗಾರನೊ ಬೊಮ್ಮ : ವಿಕಟ ಪರಿಹಾಸವದು |
ಆಸ್ಯ ಗಂಭೀರ; ಬೆರಲಿಂದ ಚಕಳಗುಳಿ ||
ವಿಶ್ವಾಸದುಪಚಾರ; ಹುಣಿಸೆಮೆಣಸಾಹಾರ |
ವಿಶ್ವಪಾಲನೆಯಿಂತು - ಮಂಕುತಿಮ್ಮ ||

319
ಪಂಚಭೂತಗಳಂತೆ; ಪಂಚೇಂದ್ರಿಯಗಳಂತೆ |
ಪಂಚವೇಕೆ? ಚತುಷ್ಕ ಷಟ್ಕವೇಕಲ್ಲ? ||
ಹೊಂಚುತಿಹನಂತೆ ವಿಭು; ಸಂಚವನದೇನಿಹುದೊ |
ವಂಚಿತರು ನಾವೆಲ್ಲ - ಮಂಕುತಿಮ್ಮ ||

320
ಪಂಚಕವೊ, ಪಂಚ ಪಂಚಕವೊ ಮಾಭೂತಗಳ |
ಹಂಚಿಕೆಯನರಿತೇನು? ಗುಣವ ತಿಳಿದೇನು? ||
ಕೊಂಚ ಕೊಂಚಗಳರಿವು ಪೂರ್ಣದರಿವಾದೀತೆ? |
ಮಿಂಚಿದುದು ಪರರತತ್ತ್ವ - ಮಂಕುತಿಮ್ಮ ||

321
ಜೀವನದ ಪರಿಪೂರ್ಣದರ್ಶನವದೊಂದಿಹುದು |
ಭೂವ್ಯೋಮ ವಿಸ್ತರದ ಮಿತಿಯ ಮೀರ್ದುದದು ||
ದೇವ ನರ ಪಶು ಸಸಿಗಳೆಲ್ಲ ಕುಣಿಯುವರಲ್ಲಿ |
ಭಾವಿಸಾ ಚಿತ್ರವನು - ಮಂಕುತಿಮ್ಮ ||

322
ಆ ವಿಶ್ವರೂಪ ಸಂದರ್ಶನದಿ ಹೊಂದಿಹುವು |
ಜೀವ ನಿರ್ಜೀವಗಳು, ಕ್ರಮ ಯದೃಚ್ಛೆಗಳು ||
ಆವಶ್ಯ ವಶ್ಯ; ಸ್ವಾಚ್ಛಂದ್ಯ ನಿರ್ಬಂಧಗಳು |
ಕೈವಲ್ಯದೃಷ್ಟಿಯದು - ಮಂಕುತಿಮ್ಮ ||

323
ಸಾರಸುಖರಸನಿಧಿ ಪರಬ್ರಹ್ಮನಿರುತಿರಲ್ |
ಸ್ವಾರಸ್ಯಹೀನವೆನ್ನುವರೆ ಜೀವಿತವ? ||
ಪೌರುಷ ಪ್ರೇಮ ಸೌಂದರ್ಯಗಳುಮಂತೆಯೇ |
ಸ್ವಾರಸ್ಯವೊ ರಹಸ್ಯ - ಮಂಕುತಿಮ್ಮ ||

324
ಏನೆ ನಿಜವಿರಲಿ ಮತ್ತೇನೆ ಸುಳ್ಳಾಗಿರಲಿ |
ನಾನೆನಿಪ್ಪಾತ್ಮವೊಂದಿರುವುದನುಭವಿಕ ||
ಹಾನಿಗಾವಾತನಾತ್ಮವನುಮಂ ಕೆಡಹದಿರು |
ಧ್ಯಾನಿಸಾತ್ಮದ ಗತಿಯ - ಮಂಕುತಿಮ್ಮ ||

325
ಎಷ್ಟು ಬಗೆ ಯಂತ್ರಗಳೊಳೆಷ್ಟು ರಸಮಿಶ್ರದಿಂ |
ದೆಷ್ಟಾದಿಭೂತಗಳು ಪರಿಪಾಕವೊಂದಿ ||
ಒಟ್ಟು ಸೇರಿಹವು ನರನೆಂಬ ಸಿದ್ಧಿಯೊಳವನು |
ಸೃಷ್ಟಿಶೈಲದ ಶಿಖರ - ಮಂಕುತಿಮ್ಮ ||

326
ಸುಮ್ಮನಿರಲೊಲದೆ ತನಗೊಡನಾಡಿಯೊರ್ವಳನು |
ನಿರ್ಮಿಸಿ ನಿಜಾಂಶದಿಂ ಮಾಯೆಯೆಂಬವಳಿಂ ||
ದುಣ್ಮಿದ ಜಗಜ್ಜಾಲಗಳಲಿ ವಿಹರಿಸುತಿರುವ |
ಬೊಮ್ಮನಾಟವ ಮೆರಸೊ - ಮಂಕುತಿಮ್ಮ ||

327
ಜೀವಿಸಂಘವಿದೇನು? ಗಂಜೀಫಿನೆಲೆಕಟ್ಟು |
ದೈವ ಪೌರುಷ ಪೂರ್ವವಾಸನೆಗಳೆಂಬಾ ||
ಮೂವರದನಾಡುವರು, ಚದರಿಸುತೆ, ಬೆರಸಿಡುತೆ |
ನಾವೆಲ್ಲರಾಟದೆಲೆ - ಮಂಕುತಿಮ್ಮ ||

328
ಎಲೆಕಟ್ಟನಾಗಾಗ ಕಲಸಿಕೊಡುವುದೆ ಸೃಷ್ಟಿ |
ಬಳಿಕೆಲೆಯ ಗತಿಯೆಂತೊ ಎಲ್ಲಿ ಸೇರುವುದೋ! ||
ಬಳಸುತಿಹುದೊಂದೊಂದುಮೊಂದೊಂದು ದಿಕ್ಕಿನಲಿ |
ಅಲೆಯುವೆವು ನಾವಂತು - ಮಂಕುತಿಮ್ಮ ||

329
ನಿಲದೆ ನಡೆವುದು ಮೊದಲು ಕೊನೆಯಿಲ್ಲದೀಯಾಟ |
ಕಳೆವುವದರಲಿ ನಮ್ಮ ಜನುಮಜನುಮಗಳು ||
ಗೆಲವಾರ್ಗೊ! ಸೋಲಾರ್ಗೊ! ಲೆಕ್ಕನೋಡುವುದೆಂದೊ |
ಫಲವು ಬರಿಯಾಟವೆಲೊ - ಮಂಕುತಿಮ್ಮ ||

330
ಆಟಕ್ಕೆ ಫಲವೇನು? ಕೌತುಕದ ರುಚಿಯೆ ಫಲ |
ಚೀಟಿ ತಾಂ ಬೀಳೆನೆನಲ್ ಆಟ ಸಾಗುವುದೆ? ||
ಏಟಾಯ್ತೆ ಗೆಲುವಾಯ್ತೆಯೆಂದು ಕೇಳುವುದೇನು? |
ಆಟದೋಟವೆ ಲಾಭ - ಮಂಕುತಿಮ್ಮ ||

331
ಸತ್ಯ ಶಿವ ಸುಂದರದ ಸಚ್ಚಿದಾನಂದನದ |
ಭಿತ್ತಿಯಲಿ ಬಣ್ಣಬಣ್ಣದ ಜೀವಚಿತ್ರ ||
ನಿತ್ಯ ನೀನದ ನೆನೆದು ಚಿತ್ರದಲಿ ಮನವಿರಿಸೆ |
ವೃತ್ತಿ ತನ್ಮಯವಹುದೊ - ಮಂಕುತಿಮ್ಮ ||

332
ಸತ್ಯವೆಂಬುದದೆಲ್ಲಿ? ನಿನ್ನಂತರಂಗದೊಳೊ |
ಸುತ್ತ ನೀನನುಭವಿಪ ಬಾಹ್ಯಚಿತ್ರದೊಳೋ ||
ಯುಕ್ತಿಯಿಂದೊಂದನೊಂದಕೆ ತೊಡಿಸಿ ಸರಿನೋಡೆ |
ತತ್ತ್ವದರ್ಶನವಹುದು - ಮಂಕುತಿಮ್ಮ ||

333
ಸತ್ಯಾನುಭವವೆಲ್ಲರಿಂಗಮೊಂದೆಂತಹುದು? |
ಬೆಟ್ಟದಡಿಯೊಳಗೊಬ್ಬ; ಕೋಡಬಳಿಯೊಬ್ಬ ||
ಎತ್ತರದ ದೃಶ್ಯ ಕಣಿವೆಯೊಳಿಹನಿಗಾದೀತೆ? |
ನೇತ್ರದಂದದೆ ನೋಟ - ಮಂಕುತಿಮ್ಮ ||

334
ಓರೊರ್ವನಿಚ್ಛೆಗುಣವೊಂದೊಂದು ಬಗೆ ಜಗದಿ |
ಭಾರಮೋರೊರ್ವನಿಂಗೊಂದೊಂದು ತೆರದಿ ||
ದಾರಗಳಿನವರ ವಿಧಿ ಪಿಡಿದು ಕುಣಿದಾಡಿಸಲು |
ನೂರುಜಡೆಕೋಲಾಟ - ಮಂಕುತಿಮ್ಮ ||

335
ಆವ ಜನ್ಮದ ಋಣವೊ, ಆವ ಕರ್ಮದ ಕಣವೊ |
ಮಾವಾಗಿ ಬೇವಾಗಿ ಸಂಸಾರ ವನದಿ ||
ಜೀವಕೀಂಟಿಪುವು ಮಾದಕದ ರಸಪಾನಗಳ |
ಭಾವಜ್ವರಂಗಳವು - ಮಂಕುತಿಮ್ಮ ||

336
ನಿನ್ನ ಜೀವಿತವೆಲ್ಲ ನಿನ್ನ ಕೈಮಾಳ್ಕೆಯೇಂ? |
ಅನ್ಯಶಕ್ತಿಗಳೆನಿತೊ ಬೆರೆತಿರುವುವಲ್ಲಿ ||
ಅನ್ನವಿಡುವರು, ತಿಳಿವನೀವರ್, ಒಡನಾಡುವರು |
ನಿನ್ನ ಬಾಳ್ಗಿವರಿರರೆ? - ಮಂಕುತಿಮ್ಮ ||

337
ಅನಿಲಗುಣ ಭೂಗುಣಗಳಿಂ ಸಸ್ಯಧಾನ್ಯಗುಣ |
ತನುಗುಣಗಳನ್ನದಿಂ, ಮನದ ಗುಣ ತನುವಿಂ ||
ಜನಪದವಿಧಂಗಳಿಂತಾಗಿಹುವು ಸೃಷ್ಟಿಯಿನೆ |
ಮನುವೊಬ್ಬ, ಜನತೆ ಶತ - ಮಂಕುತಿಮ್ಮ ||

338
ಒರ್ವ ನಾನೆಂದು ನೀನೆಂತು ತಿಳಿಯುವೆ ಜಗದಿ? |
ನೂರ್ವರಣಗಿಹರು ನಿನ್ನಾತ್ಮಕೋಶದಲಿ ||
ಪೂರ್ವಿಕರು, ಜತೆಯವರು, ಬಂಧುಸಖಶತ್ರುಗಳು |
ಸರ್ವರಿಂ ನಿನ್ನ ಗುಣ - ಮಂಕುತಿಮ್ಮ ||

339
ನಿನ್ನಜ್ಜ ಮುತ್ತಜ್ಜ ಮೂಲಜ್ಜರೆಲ್ಲರುಂ |
ನಿನ್ನೊಳವತರಿಸಿ ಮುಂದಿನ್ನು ಜನಿಸಲಿಹ ||
ನಿನ್ನ ಮಗ ಮೊಮ್ಮ ಮರಿಮೊಮ್ಮರೊಳು ಜೀವಿಪ್ಪರ್ |
ಅನ್ವಯ ಚಿರಂಜೀವಿ - ಮಂಕುತಿಮ್ಮ ||

340
ರೇಖಾರಹಸ್ಯಗಳು ನಿನ್ನ ಹಣೆಯವದಿರಲಿ |
ನೀಂ ಕಾಣ್ಪ ರೂಪಭಾವಂಗಳೊಳಮಿಹುವು ||
ತಾಕಿ ನಿನ್ನಾತುಮವ ನಾಕನರಕಂಗಳಂ |
ಏಕವೆನಿಪುವು ನಿನಗೆ - ಮಂಕುತಿಮ್ಮ ||

341
ಕ್ಷೀರಾನ್ನದಿಂದೆ ನರಪುಷ್ಟಿ; ಹಸುವಿಂ ಪಾಲು |
ಪೈರು ಬೆಳಸಿಂದೆ ಹಸು; ಪೈರುಗಳ್ಗೂರ ||
ಸಾರದಿಂ ಪುಷ್ಟಿ; ಇಂತುಣಿಸುಮುಂಬನುಮೊಂದು |
ಪಾಲೇನು? ಪೇಲೇನು? - ಮಂಕುತಿಮ್ಮ ||

342
ಪೂಸರದಿ ಕಾಂತಿ ಸೌರಭ ಮೊದಲನೆಯ ತಾಸು |
ವಾಸನೆಯ ಹಳಸು ಕೊಳಕೊಳಚೆಯಾ ಬಳಿಕ ||
ಮಾಸಿ ನಲುನಲುಗಿ ಮುಳ್ಳಹುದು ಮೂರನೆ ತಾಸು |
ಸಂಸಾರಕಥೆಯದುವೆ - ಮಂಕುತಿಮ್ಮ ||

343
ಸಾಕುಸಾಕೆನಿಸುವುದು ಲೋಕಸಂಪರ್ಕಸುಖ |
ಸೋಕಿದೆಡೆ ತುರಿಯನೆಬ್ಬಿಸುವ ತುರುಚಿಯದು ||
ಮೂಕನವೆ ತುರಿಸದಿರೆ, ತುರಿಯುತಿರೆ ಹುಣ್ಣುರಿತ |
ಮೂಕನಪಹಾಸ್ಯವದು - ಮಂಕುತಿಮ್ಮ ||

344
ಮಿಡಿಚೇಪೆಕಾಯಿಗಳ ತಡಬಡದೆ ನುಂಗುವುದು |
ಕಡಿಮೆ ಹೊಟ್ಟೆಯಲಿ ಹರಳೆಣ್ಣೆ ಕುಡಿಯುವುದು ||
ಬಿಡುತಿರಲು ನೋವಾಗ ಸುಖವೀಗಳೆನ್ನುವುದು |
ಪೊಡವಿಗಿದೆ ಭೋಗವಿಧಿ - ಮಂಕುತಿಮ್ಮ ||

345
ಅಡಿಜಾರಿ ಬೀಳುವುದು, ತಡವಿಕೊಂಡೇಳುವುದು |
ಕಡುಬ ನುಂಗುವುದು, ಕಹಿಮದ್ದ ಕುಡಿಯುವುದು ||
ದುಡುಕಿ ಮತಿದಪ್ಪುವುದು, ತಪ್ಪನೊಪ್ಪೆನ್ನುವುದು |
ಬದುಕೆಂಬುದಿದು ತಾನೆ? - ಮಂಕುತಿಮ್ಮ ||

346
ಹೇರಾಳು ಮೂಟೆಗೂಲಿಯ ಬೇಡಿ ಹೆಗಲೊಡ್ಡಿ |
ಭಾರವನು ನಾಲ್ಕು ಮಾರೊಯ್ದಷ್ಟರೊಳಗೇ ||
ದೂರವಿನ್ನೆಷ್ಟೆನುತಲಾತುರಿಪನ್ ಅದನಿಳಿಸೆ |
ಕಾರುಬಾರುಗಳಷ್ಟೆ - ಮಂಕುತಿಮ್ಮ ||

347
ರುಚಿಯೊಪ್ಪೆ ರಸನೆಗದು ಶೂಲವಹುದುದರಕ್ಕೆ |
ತ್ವಚೆ ಬೇಳ್ಪ ತಂಗಾಳಿಯಿಂ ಬೇನೆಯೆದೆಗೆ ||
ರಚಿಸಿದವನಿಂತೊಡಲೊಳಿಡೆ ವಿಷಮ ಕುಟಿಲಗಳ |
ಉಚಿತವಾವುದೊ ನಿನಗೆ? - ಮಂಕುತಿಮ್ಮ ||

348
ಬಾಳಿನೊಳಕಿಚ್ಚು ದೆಸೆದೆಸೆಗುರಿಯ ಚಾಚುತಿರೆ |
ಕಾಲನೆನ್ನುವ ಹುಚ್ಚ ಮಣ್ಣನೆರಚುತಿರೆ ||
ಧೂಳು ಹೊಗೆಗಳ ಹೊರತು ಜಗದಿ ಬೇರಿಲ್ಲದಿರೆ |
ಮೇಲೇನು? ಬೀಳೇನು? - ಮಂಕುತಿಮ್ಮ ||

349
ಮಿತ ನಿನ್ನ ಗುಣ ಶಕ್ತಿ, ಮಿತ ನಿನ್ನ ಕರ್ತವ್ಯ |
ಮಿತ ಅತಿಗಳಂತರವ ಕಾಣುವುದೆ ಕಡಿದು ||
ಹಿತವೆನಿಸಿದನಿತೆಸಗು; ದೈವಕುಳಿದುದನು ಬಿಡು |
ಕೃತಿಯಿರಲಿ ದೈವಕಂ - ಮಂಕುತಿಮ್ಮ ||

350
ಹೇಳಲಾಗದ ಹಸಿವು, ತಾಳಲಾಗದ ತಪನೆ |
ಆಳದಲಿ ನಾಚನಾಗಿಪ ಚಿಂತೆಯೂಟೆ ||
ಗಾಳಿಯೆತ್ತೆತ್ತಣಿನೊ ತಂದೀವ ಸೋಂಕು---ಇವೆ |
ಬಾಳ ಸಾಮಗ್ರಿಯಲ - ಮಂಕುತಿಮ್ಮ ||

351
ಹುದುಗಿಹುದದೆಲ್ಲಿ ಪರಮಾತ್ಮನೀ ತನುವಿನಲಿ? |
ಹೃದಯದೊಳೊ ಮೆದುಳಿನೊಳೊ ಹುಬ್ಬಿನಿರುಕಿನೊಳೋ? ||
ಇದನೆನಿತೊ ತರ್ಕಿಸಿಹರ್; ಎನ್ನೆಣಿಕೆಯನು ಕೇಳು |
ಉದರವಾತ್ಮನಿವಾಸ - ಮಂಕುತಿಮ್ಮ ||

352
ಹೊಟ್ಟೆರಾಯನ ನಿತ್ಯದಟ್ಟಹಾಸವೊ ಬಾಳು |
ಧೃಷ್ಟ ಧಣಿಯೂಳಿಗಕೆ ಸೊಟ್ಟು ಮೈಬಾಗು ||
ಹಿಟ್ಟಿಗಗಲಿದ ಬಾಯಿ, ಬಟ್ಟೆಗೊಡ್ಡಿದ ಕೈಯಿ |
ಇಷ್ಟೆ ನಮ್ಮೆಲ್ಲ ಕಥೆ - ಮಂಕುತಿಮ್ಮ ||

353
ಏನಾದೊಡೇನು? ನೀನೆಲ್ಲಿ ಪೋದೊಡಮೇನು? |
ಪ್ರಾಣವೇಂ ಮಾನವೇನಭ್ಯುದಯವೇನು? ||
ಮಾನವಾತೀತವೊಂದೆಲ್ಲವನು ನುಂಗುವುದು |
ಜಾನಿಸದನಾವಗಂ - ಮಂಕುತಿಮ್ಮ ||

354
ಲೋಕವೆಲ್ಲವು ದೈವಲೀಲೆಯೆಂಬರೆ, ಪೇಳಿ |
ಶೋಕ ಸೋಂಕಿರದೊಡಾ ಲೀಲೆ ನೀರಸವೇಂ? ||
ಮೂಕಂಗೆ ಕಳ್ ಕುಡಿಸಿ ಚೇಳ್ ಕುಟಕಿಪಾಟವಿದು |
ಏಕಪಕ್ಷದ ಲೀಲೆ - ಮಂಕುತಿಮ್ಮ ||

355
ಗುಣಿಗುಣಿಸಿ ತಿಣಕುತ್ತ ಹೆಣಗಾಡಿ ಫಲವೇನು |
ಗಣನೆಗೆಟುಕದದೊಂದಚಿಂತ್ಯವೆತ್ತಲೊ ತಾನ್ ||
ಅಣಗಿರ್ದು ನಿನ್ನೆಲ್ಲ ಗಣಿತಗಳನಣಕಿಪುದು |
ದಣಿಯದಾ ವಿಧಿ ವಿಕಟ - ಮಂಕುತಿಮ್ಮ ||

356
ಆಶೆ ಬಲೆಯನು ಬೀಸಿ, ನಿನ್ನ ತನ್ನೆಡೆಗೆಳೆದು |
ಘಾಸಿ ನೀಂ ಬಡುತ ಬಾಯ್ಬಿಡಲೋರೆ ನೋಡಿ ||
ಮೈಸವರಿ ಕಾಲನೆಡವಿಸಿ, ಗುಟ್ಟಿನಲಿ ನಗುವ |
ಮೋಸದಾಟವೊ ದೈವ - ಮಂಕುತಿಮ್ಮ ||

357
ಧಾತನೆಣ್ಣೆಯಗಾಣದೆಳ್ಳುಕಾಳಲೆ ನೀನು? |
ಆತನೆಲ್ಲರನರೆವನ್; ಆರನುಂ ಬಿಡನು ||
ಆತುರಂಗೊಳದೆ ವಿಸ್ಮೃತಿಬಡದುಪೇಕ್ಷಿಸದೆ |
ಘಾತಿಸುವನೆಲ್ಲರನು - ಮಂಕುತಿಮ್ಮ ||

358
ಇದು ನಡೆಯಲಿಲ್ಲವದು ನಿಂತುಹೋಯಿತೆನುತ್ತ |
ಎದೆಯುಬ್ಬೆಗವನೊಂದಿ ಕುದಿಯುತಿಹುದೇಕೋ? ||
ಅಧಿಕಾರಪಟ್ಟವನು ನಿನಗಾರು ಕಟ್ಟಿಹರು? |
ವಿಧಿಯ ಮೇಸ್ತ್ರಿಯೆ ನೀನು? - ಮಂಕುತಿಮ್ಮ ||

359
ಸೊಟ್ಟುಗಳ ನೆಟ್ಟಗಾಗಿಪ ಯತ್ನ ಲೋಕದಲಿ |
ಸೃಷ್ಟಿಯಾದಿಯಿನಾಗುತಿಹುದು; ಫಲವೇನು? ||
ಹೊಟ್ಟೆ ನೋವಿಳಿಯುತಿರೆ ರಟ್ಟೆ ನೋವೆನ್ನುವುದು |
ಮಟ್ಟಸವೆ ತಿರೆಹರವು? - ಮಂಕುತಿಮ್ಮ ||

360
ಇನ್ನೇನು ಮತ್ತೇನು ಗತಿಯೆಂದು ಬೆದರದಿರು |
ನಿನ್ನ ಕೈಯೊಳಗಿಹುದೆ ವಿಧಿಯ ಲೆಕ್ಕಣಿಕೆ? ||
ಕಣ್ಣಿಗೆಟುಕದೆ ಸಾಗುತಿಹುದು ದೈವದ ಸಂಚು |
ತಣ್ಣಗಿರಿಸಾತ್ಮವನು - ಮಂಕುತಿಮ್ಮ ||

361
ಎಲ್ಲಿಯೋ ವಿಧಿಯ ಗೂಢದ ಕರ್ಮಶಾಲೆಯಲಿ |
ನಿಲ್ಲದಾಡುತ್ತಿಹುವು ಯಂತ್ರಕೀಲುಗಳು ||
ಎಲ್ಲಾಗುಹೋಗುಗಳುಮಾ ಚಕ್ರಗತಿಯಂತೆ |
ತಲ್ಲಣವು ನಿನಗೇಕೆ? - ಮಂಕುತಿಮ್ಮ ||

362
ಕಾಲನದಿಯಲಿ ನಮ್ಮ ಬಾಳದೋಣಿಯು ಮೆರೆದು |
ತೇಲುತ್ತೆ ಭಯವ ಕಾಣದೆ ಸಾಗುತಿರಲು ||
ಗಾಳಿಯಾವಗಮೊ ಬಂದೆತ್ತಣಿನೊ ಬೀಸುತ್ತ |
ಮೇಲ ಕೀಳಾಗಿಪುದು - ಮಂಕುತಿಮ್ಮ ||

363
ಆತುರತೆಯೇನಿರದು ವಿಧಿಯಂತ್ರಚಲನೆಯಲಿ |
ಭೀತತೆಯುಮಿರದು, ವಿಸ್ಮೃತಿಯುಮಿರದೆಂದುಂ ||
ಸಾಧಿಪುದದೆಲ್ಲವನು ನಿಲದೆ, ತಪ್ಪದೆ, ಬಿಡದೆ |
ಕಾತರತೆ ನಿನಗೇಕೆ? - ಮಂಕುತಿಮ್ಮ ||

364
ನಟಿಪುದೊಮ್ಮೊಮ್ಮೆ ಮರುಕವ ದೈವ ಮನುಜರಲಿ |
ಕಟುಕನಿನಿಸಕ್ಕಿಯನು ಹಕ್ಕಿಗೆರಚುವವೋಲ್ ||
ತುಟಿ ಸುಟ್ಟು ರಸನೆಗೆಟುಕದ ಕೀರು ದೈವಕೃಪೆ |
ತಟವಟವೊ ಸೃಷ್ಟಿದಯೆ - ಮಂಕುತಿಮ್ಮ ||

365
ಅದು ಒಳಿತು ಇದು ಕೆಟ್ಟುದೆಂಬ ಹಟ ನಿನಗೇಕೆ? |
ಹೊದಿಸಿಹುದು ದೈವವೆಲ್ಲಕಮೊಂದು ತೆರೆಯ ||
ಸೊದೆಯ ಸೌರಭ ನಂಜುಬಟ್ಟಲಲಿ ತೋರೀತು |
ವಿಧಿಯ ಬಗೆಯೆಂತಿಹುದೊ! - ಮಂಕುತಿಮ್ಮ ||

366
ಗ್ರಹಗತಿಯ ತಿದ್ದುವನೆ ಜೋಯಿಸನು ಜಾತಕದಿ? |
ವಿಹಿತವಾಗಿಹುದದರ ಗತಿ ಸೃಷ್ಟಿವಿಧಿಯಿಂ ||
ಸಹಿಸಿದಲ್ಲದೆ ಮುಗಿಯದಾವ ದಶೆ ಬಂದೊಡಂ |
ಸಹನೆ ವಜ್ರದ ಕವಚ - ಮಂಕುತಿಮ್ಮ ||

367
ಧಾರಿಣಿಯ ವಾಸಿಗಳ್ಗಿಹುದೊಂದು ಹಿತವಾರ್ತೆ |
ಆರಯ್ವುದಾರ್ತರ್ ಅತ್ಯಾರ್ತರಾಪದವ ||
ರೌರವಿಗೆ ಹಿತ ಮಹಾರೌರವಿಯ ಗೋಳುದನಿ |
ನಾರಕದೊಳದುಪಾಯ - ಮಂಕುತಿಮ್ಮ ||

368
ಮುಕ್ಕೋಟಿ ದೇವತೆಗಳಾಳುತಿಹ ಲೋಕದಲಿ |
ದಿಕ್ಕುಗಾಣದೆ ಜೀವಿಯಲೆವುದಚ್ಚರಿಯೇಂ? ||
ಒಕ್ಕಟ್ಟನೊಡೆಯರೇ ಕಲಿಯದಿರೆ ನಮ್ಮ ಗತಿ- |
ಗಿಕ್ಕಟ್ಟು ತಪ್ಪುವುದೆ? - ಮಂಕುತಿಮ್ಮ ||

369
ಏಕವಾಗವೆ ದೈವಚಿತ್ತ ನರಚಿತ್ತಗಳು? |
ಏಕೆನ್ನ ಮನವನಾಳನು ಲೋಕದೊಡೆಯಂ? ||
ಬೇಕೆನಿಪುದೊಂದೆನಗೆ, ವಿಧಿ ಗೆಯ್ವುದಿನ್ನೊಂದು |
ಈ ಕುಟಿಲಕೇಂ ಮದ್ದು? - ಮಂಕುತಿಮ್ಮ ||

370
ಸ್ವಾತಿ ಮಳೆಹನಿ ಬೀಳ್ವ, ಶುಕ್ತಿ ಬಾಯ್ದೆರೆದೇಳ್ವ |
ಕೌತುಕದ ಸಮಯಯೋಗದೆ ಮೌಕ್ತಿಕ ಫಲ ||
ಪ್ರೀತಿ ಸುಖ ಸತ್ಯದರ್ಶನ ಶಾಂತಿಗಳ ಹುಟ್ಟುಮ್ |
ಆ ತೆರದ ಯೋಗದಿನೆ - ಮಂಕುತಿಮ್ಮ ||

371
ಬೇಕು ಬೇಕದು ಬೇಕು ಬೇಕಿದೆನಗಿನ್ನೊಂದು |
ಬೇಕೆನುತ ಬೊಬ್ಬಿಡುತಲಿಹ ಘಟವನಿದನು ||
ಏಕೆಂದು ರಚಿಸಿದನೊ ಬೊಮ್ಮನೀ ಬೇಕು ಜಪ |
ಸಾಕೆನಿಪುದೆಂದಿಗೆಲೊ - ಮಂಕುತಿಮ್ಮ ||

372
ವನದಿ ನಿರ್ಜನದಿ ಮೌನದಿ ತಪವನೆಸಗುವನ |
ನೆನಪಿನಲಿ ಪಿಂತಿನನುಭವವುಳಿಯದೇನು? ||
ಇನಿನೋಟ ಸವಿಯೂಟ ಕಿನಿಸು ಕರುಬುಗಳಾಟ |
ಕನಲುತಿಹುವಾಳದಲಿ - ಮಂಕುತಿಮ್ಮ ||

373
ಮನೆಯ ತೊರೆದೋಡಲೇಂ? ವನಗುಹೆಯ ಸಾರಲೇಂ? |
ತನುವನುಗ್ರವ್ರತಗಳಿಂದೆ ದಂಡಿಸಲೇಂ? ||
ಬಿನದಗಲನರಸಿ ನೀನೂರೂರೊಳಲೆದೊಡೇಂ? |
ಮನವ ತೊರೆದಿರಲಹುದೆ - ಮಂಕುತಿಮ್ಮ ||

374
ಈ ಜಗದ ಗಂಧ ಪರಿಪರಿ ಹಸಿವ ಕೆಣಕುತಿರೆ |
ಭೋಜನವ ನೀಡೆನೆನೆ ಮನ ಸುಮ್ಮನಿಹುದೆ? ||
ಸಾಜಗಳ ಕೊಲ್ಲೆನುವ ಹಠಯೋಗಕಿಂತ ಸರಿ |
ರಾಜಯೋಗದುಪಾಯ - ಮಂಕುತಿಮ್ಮ ||

375
ಮನವನಾಳ್ವುದು ಹಟದ ಮಗುವನಾಳುವ ನಯದೆ |
ಇನಿತನಿತು ಸವಿಯುಣಿಸು ಸವಿಕಥೆಗಳಿಂದೆ ||
ಅನುಕೂಲಿಸದು ಬರಿಯ ಕೂಗು ಬಡಿತಗಳಿನದು |
ಇನಿತಿತ್ತು ಮರಸಿನಿತ - ಮಂಕುತಿಮ್ಮ ||

376
ಅಂತಾನುಮಿಂತಾನುಮೆಂತೊ ನಿನಗಾದಂತೆ |
ಶಾಂತಿಯನೆ ನೀನರಸು ಮನ ಕೆರಳಿದಂದು ||
ಸಂತವಿಡುತೊಮ್ಮೆ ಶಿಕ್ಷಿಸುತೊಮ್ಮೆ ಶಿಶುವೆಂದು |
ಸ್ವಾಂತಮಂ ತಿದ್ದುತಿರು - ಮಂಕುತಿಮ್ಮ ||

377
ಉದರದೈವಕೆ ಜಗದೊಳೆದುರು ದೈವವದೆಲ್ಲಿ? |
ಮೊದಲದರ ಪೂಜೆ; ಮಿಕ್ಕೆಲ್ಲದವರಿಂದ ||
ಮದಿಸುವುದದಾದರಿಸೆ, ಕುದಿವುದು ನಿರಾಕರಿಸೆ |
ಹದದೊಳಿರಿಸುವುದೆಂತೊ? - ಮಂಕುತಿಮ್ಮ ||

378
ಕುದಿ ಹೆಚ್ಚೆ ವೆಗಟ ಹುದು; ಕಡಮೆಯಿರೆ ಹಸಿನಾತ |
ಕದಡಲೊಡೆವುದು ಹಾಲು; ಸೂಕ್ಷ್ಮವದರ ಹದ ||
ಅದರವೊಲೆ ಮನದ ಹದ, ಅದನೆಚ್ಚರದಿ ನೋಡು |
ಬದುಕು ಸೊಗ ಹದದಿಂದ - ಮಂಕುತಿಮ್ಮ ||

379
ತೃಪ್ತಿಯರಿಯದ ವಾಂಛೆ, ಜೀರ್ಣಿಸದ ಭುಕ್ತಿವೊಲು |
ಗುಪ್ತದಲಿ ಕೊಳೆಯುತ್ತೆ ವಿಷಬೀಜವಾಗಿ ||
ಪ್ರಾಪ್ತಿಗೊಳಿಪುದು ಜೀವಕುನ್ಮಾದತಾಪಗಳ |
ಸುಪ್ತವಹುದೆಂತಿಚ್ಛೆ? - ಮಂಕುತಿಮ್ಮ ||

380
ಹುಲಿಯ ಕೆಣಕುವುದು ಹುಲಿ; ಕಪಿಯನಣಕಿಪುದು ಕಪಿ |
ಹುಲಿಕಪಿಗಳವಿತಿರದ ನರಜಂತುವೆಲ್ಲಿ? ||
ಮಲಗಿರುವ ಮೃಗವನಂತಿರಲು ಬಿಡುವುದೆ ಜಾಣು |
ಕುಲುಕದಿರು ಬಾಲವನು - ಮಂಕುತಿಮ್ಮ ||

381
ಅತಿಶಯದದೃಷ್ಟ ಹುಟ್ಟಿಂ ಮೃತೇಂದ್ರಿಯನದಲ? |
ಇತರರೊಳು ವಿಷಪರೀಕ್ಷೆಗೆ ನಿಲುವರಾರು? ||
ಮಿತಕುಕ್ಷಿ ಮಿತಭುಕ್ತ; ಮತ್ತಾರ್ ಜಿತೇಂದ್ರಿಯನು? |
ಅತಿಚರ್ಚೆ ಸಲದಲ್ಲಿ - ಮಂಕುತಿಮ್ಮ ||

382
ಇಂದ್ರಿಯವ ಜಯಿಸಿದೆಯೊ? ಮಂದವೋ ನಿನ್ನಕ್ಷಿ? |
ಸೌಂದರ್ಯ ಯಕ್ಷಿಣಿಯೆ ನಿನ್ನ ತೊರೆದಿಹಳೋ? ||
ಅಂಧನೆ ವಿರಕ್ತನ್; ಅಪ್ಸರೆಯ ಕಾಣದನೆ ಯತಿ |
ಕಂಡು ಕೆರಳದನಾರೊ! - ಮಂಕುತಿಮ್ಮ ||

383
ಜನಕಜೆಯ ದರುಶನದಿನಾಯ್ತು ರಾವಣ ಚಪಲ |
ಕನಕಮೃಗದರುಶನದೆ ಜಾನಕಿಯ ಚಪಲ ||
ಜನವವನ ನಿಂದಿಪುದು, ಕನಿಕರಿಪುದಾಕೆಯಲಿ |
ಮನದ ಬಗೆಯರಿಯದದು - ಮಂಕುತಿಮ್ಮ ||

384
ಹೊಟ್ಟೆಯಲಿ ಹಸಿವು, ಮನದಲಿ ಮಮತೆ---ಈ ಯೆರಡು |
ಗುಟ್ಟು ಕೀಲುಗಳಿಹುವು ಸೃಷ್ಟಿಯಂತ್ರದಲಿ ||
ಕಟ್ಟಿಪುವು ಕೋಟೆಗಳ, ಕೀಳಿಪುವು ತಾರೆಗಳ |
ಸೊಟ್ಟಾಗಿಪುವು ನಿನ್ನ - ಮಂಕುತಿಮ್ಮ ||

385
ದಾಸರೋ ನಾವೆಲ್ಲ ಶುನಕನಂದದಿ ಜಗದ |
ವಾಸನೆಗಳೆಳೆತಕ್ಕೆ ದಿಕ್ಕುದಿಕ್ಕಿನಲಿ ||
ಪಾಶಗಳು ಹೊರಗೆ, ಕೊಂಡಿಗಳು ನಮ್ಮೊಳಗಿಹುವು |
ವಾಸನಾಕ್ಷಯ ಮೋಕ್ಷ - ಮಂಕುತಿಮ್ಮ ||

386
ಹೃದಯದಬ್ಬರವೇನು ಹೊಟ್ಟೆಯುಬ್ಬರದಂತೆ |
ಅದರಿಳಿತ ಕೊರಳ ನಾಳದ ಸದ್ದಿನಿಂದ ||
ಅದೆ ನಗುವು ದುಗುಡಗಳು, ಅದೆ ಹೊಗಳು ತೆಗಳುಗಳು |
ಅದನಿಳಿಸೆ ಶಾಂತಿಯೆಲೊ - ಮಂಕುತಿಮ್ಮ ||

387
ರದನೋದಯಜ್ವರಕೆ ಸಿಲುಕದಿಹ ಶಿಶುವಿರದು |
ವಿಧಿಯೊದೆಗೆ ಸಿಕ್ಕದಿಹ ನರಜಂತುವಿರದು ||
ಒದೆಪೆಟ್ಟು ಮುಗಿದಂದು ರಾಹುದಂಷ್ಟ್ರದೆ ಹೊರಟ |
ವಿಧುಬಿಂಬವೋ ನೀನು - ಮಂಕುತಿಮ್ಮ ||

388
ದೇಹಾತುಮಂಗಳೆರಡಂಗಗಳು ಜೀವನಕೆ |
ನೇಹದಿಂದೊಂದನೊಂದಾದರಿಸೆ ಲೇಸು ||
ದಾಹಗೊಂಡಿರಲೊಂದು ಮಿಕ್ಕೊಂದಕೆಲ್ಲಿ ಸುಖ? |
ದ್ರೋಹ ಬೇಡೊಂದಕಂ - ಮಂಕುತಿಮ್ಮ ||

389
ಕಾಯವನು ಮೃದ್ಭಾಂಡ ಮಾಂಸಪಿಂಡವೆನುತ್ತೆ |
ಹೇಯವೆಂದೆಂದೊಡಾತ್ಮಂಗಪ್ಪುದೇನು? ||
ಆಯುಧವನದನು ತೊರೆದಾತ್ಮನೇಂಗೈದಪನು? |
ನ್ಯಾಯ ತನುವಿಗಮಿರಲಿ - ಮಂಕುತಿಮ್ಮ ||

390
ಸುಳ್ಳಲ್ಲ ಕಥೆಯ ತಿರುಕನು ಕಂಡ ಸವಿಗನಸು |
ಚೆಲ್ಲಿತಲ್ಲವೆ ಹಿಟ್ಟು ಘಟವನವನೊದೆಯೆ? ||
ಜಳ್ಳು ಸುಖದುಃಖವಿರಬಹುದಾದೊಡದರ ಮೊನೆ |
ಮುಳ್ಳಹುದು ಜೀವಕ್ಕೆ - ಮಂಕುತಿಮ್ಮ ||

391
ಹುರಿಯುರುಳೆ ಹಾವಲ್ಲವಾದೊಡಂ ಮಬ್ಬಿನಲಿ |
ಹರಿದಾಡಿದಂತಾಗೆ ನೋಳ್ಪವಂ ಬೆದರಿ ||
ಸುರಿಸುವಾ ಬೆವರು ದಿಟ; ಜಗುವುಮಂತುಟೆ ದಿಟವು |
ಜರೆಯದಿರು ತೋರ್ಕೆಗಳ - ಮಂಕುತಿಮ್ಮ ||

392
ಸೌಂದರ್ಯ ಬಾಂಧವ್ಯಗಳನು ಬರಿದೆನಲಹುದೆ? |
ಹೊಂದಿಸವೆ ಕುಂದಿಸವೆ ಜೀವಿಗಳನವುಗಳ್? ||
ಸಿಂಧುಪೂರದಿ ಬಿದ್ದವರೊಳೊಬ್ಬರೊಬ್ಬರನು |
ಅಂದಿಕೊಳಲದು ಬರಿದೆ? - ಮಂಕುತಿಮ್ಮ ||

393
ಎನಿತೆನಿತ್ತು ವಿಕಾರ ಪರಿಣಾಮಗಳ ನಮ್ಮ |
ಮನಕಾಗಿಪುವೊ ಲೋಕರೂಪಶಕ್ತಿಗಳು ||
ಅನಿತನಿತು ಸತ್ಯತೆಯವಕ್ಕುಂಟು ಜೀವಿತದಿ |
ಅನುಭವವೆ ದಿಟದಳತೆ - ಮಂಕುತಿಮ್ಮ ||

394
ಕನಸು ದಿಟ; ನೆನಸು ದಿಟ; ತನುವೊಳಿಹ ಚೇತನವ |
ಕನಲಿಸುವ ಕುಣಿಸುವಾ ಹಬೆಗಳೆಲ್ಲ ದಿಟ ||
ಇನಿತನಿತು ದಿಟಗಳಿವು---ತುಂಬುದಿಟದಂಶಗಳು |
ಗಣನೀಯವವು ಬಾಳ್ಗೆ - ಮಂಕುತಿಮ್ಮ ||

395
ತುಂಬುದಿಟ ಜೀವಿತದ ಗಣನೆಗಳ ಮೀರಿದುದು |
ಇಂಬುಗಳ ಬಿಂಬಗಳ ಸನ್ನಿಧಾನವದು ||
ಅಂಬರದಿನಾಚಿನದು, ತುಂಬಿರುವುದೆತ್ತಲುಂ |
ಶಂಭು ಪರಬೊಮ್ಮನದು - ಮಂಕುತಿಮ್ಮ ||

396
ಕಲ್ಮಷದ ವಲ್ಮೀಕವೆಂದೊಡಲ ಜರೆಯದಿರು |
ಬ್ರಹ್ಮಪುರಿಯೆಂದದನು ಋಷಿಗಳೊರೆದಿಹರು ||
ಹಮ್ಮುಳ್ಳ ಹಯವ ಕಾಪಿಟ್ಟು ಕಡಿವಣ ತೊಡಿಸೆ |
ನಮ್ಮ ಗುರಿಗೈದಿಪುದು - ಮಂಕುತಿಮ್ಮ ||

397
ದೇಹವೆಂಬುದು ಕುದುರೆಯಾತ್ಮನದರಾರೋಹಿ |
ವಾಹನವನುಪವಾಸವಿರಿಸೆ ನಡೆದೀತೆ? ||
ರೋಹಿ ಜಾಗ್ರತೆದಪ್ಪೆ ಯಾತ್ರೆ ಸುಖ ಸಾಗೀತೆ? |
ಸ್ನೇಹವೆರಡಕಮುಚಿತ - ಮಂಕುತಿಮ್ಮ ||

398
ಇರುವನ್ನಮೀ ಬಾಳು ದಿಟವದರ ವಿವರಣೆಯ |
ಹೊರೆ ನಮ್ಮ ಮೇಲಿಲ್ಲ ನಾದವರ ಸಿರಿಯ ||
ಪಿರಿದಾಗಿಸಲು ನಿಂತು ಯುಕ್ತಿಯಿಂ ದುಡಿಯುವುದೆ |
ಪುರುಷಾರ್ಥಸಾಧನೆಯೊ - ಮಂಕುತಿಮ್ಮ ||

399
ಕಾಯಮಾತ್ರದುದಲ್ಲವಾತ್ಮಮಾತ್ರದುದಲ್ಲ- |
ವಾಯೆರಡುಮೊಂದಾಗಲದು ಜೀವಲೀಲೆ ||
ತಾಯಿವೊಲು ನಿನಗಾತ್ಮ, ಮಡದಿವೊಲು ಕಾಯವವ- |
ರಾಯವನು ಸರಿನೋಡು - ಮಂಕುತಿಮ್ಮ ||

400
ದೃಶ್ಯವೆಲ್ಲವು ನಶ್ಯವಾದೊಡೇಂ? ದೃಷ್ಟಿಗದು |
ವಶ್ಯವಿರುವನಕದನು ದೃಷ್ಟಿಪುದೆ ಕಾರ್ಯಂ ||
ವಿಶ್ವಾನುಭವವೆ ವಿಶ್ವಾತ್ಮಾನುಭವಕೆ ಪಥ |
ನಶ್ಯದಿಂದವಿನಶ್ಯ - ಮಂಕುತಿಮ್ಮ ||

401
ಮರಣಶಯ್ಯೆಯದೆಂದು ತಿಳಿದೊಡಂ ರೋಗಿಯನು |
ಹರಣಮಿರುವನ್ನೆಗಂ ಪರಿಚರಿಸುವಂತೆ ||
ಸ್ಥಿರವಲ್ಲವೀ ಲೋಕವಾದೊಡಮದುಳ್ಳನಕ |
ಚರಿಸು ನೀನಾಳಾಗಿ - ಮಂಕುತಿಮ್ಮ ||

402
ಜವನ ನಿಂದಿಪುದೇಕೆ ಸರ್ವಘಾತಕನೆಂದು? |
ಭುವಿಗೆ ವೃದ್ಧಸಮೃದ್ಧಿಯವನು ಸುಮ್ಮನಿರಲ್ ||
ನವಜನಕ್ಕೆಡೆಯೆತ್ತಲಾರುಮೆಡೆಬಿಡದೆ ನಿಲೆ? |
ನವತೆಯವನಿಂ ಜಗಕೆ - ಮಂಕುತಿಮ್ಮ ||

403
ಹೊಳಪು ಹೊಳಪಿನ ನಡುವೆ ಬಿಡುವಿನಿತು ರತ್ನದಲಿ |
ಬೆಳಕು ಬೆಳಕಿನ ನಡುವೆ ಅನಿತಿನಿತು ನೆರಳು ||
ಬೆಳಸು ಬೆಳಸಿನ ಸಾಲು ನಡುವೆ ಬದಿ ಗದ್ದೆಯಲಿ |
ಉಳಿವಿಗಳಿವಿನ ನೆರೆಯೊ - ಮಂಕುತಿಮ್ಮ ||

404
ದೇವರ್ಕಳುದಿಸಿ ಮರೆಯಹರು; ದೇವತ್ವ ಚಿರ |
ಜಾವ ದಿನ ಬಂದು ಪೋಗುವುವು; ಕಾಲ ಚಿರ ||
ಜೀವದ ವ್ಯಕ್ತಿ ಸಾಯ್ವುದು; ಜೀವಸತ್ತ್ವ ಚಿರ |
ಭಾವಿಸಾ ಕೇವಲವ - ಮಂಕುತಿಮ್ಮ ||

405
ಪರಬೊಮ್ಮ ಜೀವಭೇದದಿ ನಿಜೈಕ್ಯವ ಮರೆಯೆ |
ಮರಳಿ ತನ್ನೊಟ್ಟನವನರಸಲೆಚ್ಚರಿಸಲ್ ||
ನರನಾರಿಯರ ಪರಸ್ಪರ ಮೋಹದಲಿ ಮಾಯೆ |
ನಿರವಿಸಿಹಳಂಕುಶವ - ಮಂಕುತಿಮ್ಮ ||

406
ನರನಾರಿಮೋಹದಿಂ ವಂಶವದಕಾಗಿ ಮನೆ |
ನೆರೆ ಹೊರೆಗಳೂರು ರಾಷ್ಟ್ರಗಳು ಸಂಘಗಳು ||
ಕೆರೆಯೊಂದು ಕೇಂದ್ರದಿಂದಲೆಯ ಬಳೆಗಳು ನೂರು |
ಹರಿವಂತೆ ಸಂಸಾರ - ಮಂಕುತಿಮ್ಮ ||

407
ಅದರಿಂದ ನೀತಿ ನಯವದರಿಂದ ಕುಲಗೋತ್ರ |
ವದರಿಂದ ರಾಜ್ಯ ಮಠ ಧರ್ಮ ಸಂಸ್ಥೆಗಳು ||
ಒದವುವದರಿಂದೆ ಮಮತಾನಾಶದವಕಾಶ- |
ವದರಿನಾತ್ಮವಿಕಾಸ - ಮಂಕುತಿಮ್ಮ ||

408
ತಲೆಯಿಂದ ತಲೆಗೆ, ಪೀಳಿಗೆಯಿಂದ ಪೀಳಿಗೆಗೆ |
ಅಲೆಯಿಂದಲಲೆಗೆ ಟಪ್ಪೆಯ ಚಾರನಂತೆ ||
ಇಳಿಯುತಿದೆ ಯುಗದಿಂದ ಯುಗಕೆ ಮಾನವಧರ್ಮ |
ನಿಲದಮೃತಧಾರೆಯದು - ಮಂಕುತಿಮ್ಮ ||

409
ಮಾನುಷದ ಚರಿತೆ ಪರಸತ್ತ್ವಸಾಕ್ಷಾತ್ಕವಿತೆ |
ಕಾಣಿಪುದದಾತ್ಮ ಸ್ವಭಾವದುದ್ಗಮವ ||
ಏನಾಶೆ! ಯೇನು ಸಾಹಸ! ವೇನು ಭಂಗಗಳು! |
ಅನುಭವವೇದವದು - ಮಂಕುತಿಮ್ಮ ||

410
ಜಾನಪದಗಳು ರಾಜ್ಯಸಾಮ್ರಾಜ್ಯಗಳು ಗುರು |
ಸ್ಥಾನಗಳು ಧರ್ಮಗಳು ಭಾಷೆ ವಿದ್ಯೆಗಳು ||
ಕಾಣಿಸದೆ ಸಾಗಿಹವು ಕಾಲಪ್ರವಾಹದಲಿ |
ಮಾನವತೆ ನಿಂತಿಹುದು - ಮಂಕುತಿಮ್ಮ ||

411
ತೆರಪನರಿಯದೆ ಪರಿವ ಕಾಲಪ್ರವಾಹದಲಿ |
ಪುರುಷರಚಿತಗಳೆನಿತೊ ತೇಲಿಹೋಗಿಹವು ||
ಪುರ ರಾಷ್ಟ್ರ ದುರ್ಗಗಳು, ಮತ ನೀತಿ ಯುಕ್ತಿಗಳು |
ಪುರುಷತನ ನಿಂತಿಹುದು - ಮಂಕುತಿಮ್ಮ ||

412
ಜನಿಸಿದೆಡೆಯಿಂ ಕಡಲವರೆಗಮಡಿಯಡಿ ನೆಲದ |
ಗುಣವ ಕೊಳ್ಳುತ ಕೊಡುತ ಪೊನಲು ಮಾರ್ಪಡುಗುಂ ||
ಮನುಜಸಂತಾನದಲಿ ಗುಣದವತರಣವಂತು |
ಗುಣಿಪುದೆಂತಾ ತೆರನ - ಮಂಕುತಿಮ್ಮ ||

413
ಬರಿಯ ಹೆಣ್ ಬರಿಯ ಗಂಡೆಂಬುದಿಳೆಯೊಳಗಿಲ್ಲ |
ಬೆರಕೆಯೆಲ್ಲರುಮರ್ಧನಾರೀಶನಂತೆ ||
ನರತೆಯಣು ನಾರಿಯಲಿ ನಾರೀತ್ವ ನರನೊಳಣು |
ತಿರಿಚುತಿರುವುದು ಮನವ - ಮಂಕುತಿಮ್ಮ ||

414
ಅಳೆವರಾರ್ ಪೆಣ್ಗಂಡುಗಳನೆಳೆವ ನೂಲುಗಳ? |
ಕೆಳೆಪಗೆಗಳೆಲ್ಲವಾಳದಲಿ ಬಲು ತೊಡಕು ||
ಇಳೆಯ ಋಣಗಳ ಲೆಕ್ಕವಿಹುದು ವಿಧಿಯಕ್ಕರದಿ |
ತಿಳಿಯಗೊಡನದ ನಮಗೆ - ಮಂಕುತಿಮ್ಮ ||

415
ಎಲ್ಲಿಯದನೋ ಅದೆಲ್ಲಿಯದಕೋ ಹೆಣೆಯುವನು |
ಒಲ್ಲೆವೆನೆ ನೀವೆ ಕಿತ್ತಾಡಿಕೊಳಿರೆನುವನ್ ||
ಬೆಲ್ಲದಡುಗೆಯಲಿ ಹಿಡಿ ಮರಳನೆರಚಿರಿಸುವನು |
ಒಳ್ಳೆಯುಪಕಾರಿ ವಿಧಿ - ಮಂಕುತಿಮ್ಮ ||

416
ಕುಸುಮಕೋಮಲಗಾತ್ರ ಶೂರ್ಪಣಖಿಗರಿದಾಯ್ತೆ? |
ವಿಷದ ಪೂತನಿ ನಯನಪಕ್ಷ್ಮದೊಳಗಿರಳೆ? ||
ಮುಸಿನಗುವಿನೊಳಗಿರಲಶಕ್ಯವೆ ಪಿಶಾಚಿಕೆಗೆ? |
ಮೃಷೆಯೊ ಮೈಬೆಡಗೆಲ್ಲ - ಮಂಕುತಿಮ್ಮ ||

417
ಹೇಮಕುಂಭದಿ ಕೊಳಚೆರೊಚ್ಚುನೀರ್ಗಳ ತುಂಬಿ |
ರಾಮಣೀಯಕದೊಳಿಟ್ಟಾಮಗಂಧವನು ||
ಪ್ರೇಮಪುಷ್ಪಕೆ ಮೊನಚು ಗರಗಸವನಂಚಿರಿಸಿ |
ಏಂ ಮಾಡಿದನೊ ಬೊಮ್ಮ! - ಮಂಕುತಿಮ್ಮ ||

418
ಕೈಕೇಯಿ ಸತ್ಯಭಾಮೆಯರಂಶವಿರದ ಪೆಣ್ |
ಲೋಕದೊಳಗಿರಳು; ಬೆಳೆವುದು ಲೋಕವವರಿಂ ||
ಸಾಕಿ ಸಲಹುವ ಮತ್ಸರವದು ಸೃಷ್ಟಿಯುಪಾಯ |
ಬೇಕದಕೆ ನಗು ಸಹನೆ - ಮಂಕುತಿಮ್ಮ ||

419
ಎಳೆಯ ತರು ದಿನದಿನವು ಹೊಸತಳಿರ ತಳೆವಂತೆ |
ತಿಳಿನೀರು ಚಿಲುಮೆಯಲಿ ನಿಲದುಕ್ಕುವಂತೆ ||
ಎಳೆ ಮಕ್ಕಳೊಳು ತಿಳಿವು ಮೊಳೆತು ಬೆಳೆವುದು ನೋಡು |
ಇಳೆಯೊಳಗೊಂದು ಸೊಗ - ಮಂಕುತಿಮ್ಮ ||

420
ಮಕ್ಕಳ ಭವಿಷ್ಯಕ್ಕೆ ಕಕ್ಕುಲಿತಗೊಳಬೇಡ |
ಪಕ್ಕಾಗುವುದು ಭಾಗ್ಯವೆಂತೆಂತೊ ಜಗದಿ ||
ದಕ್ಕಿತೇಂ ಕುರುಪಾಂಡುತನಯರ್ಗೆ ರಾಜ್ಯಸುಖ? |
ದಿಕ್ಕವರಿಗವರವರೆ - ಮಂಕುತಿಮ್ಮ ||

421
ತನುಭವವ್ಯಾಮೋಹ ಮುಸುಕಿತಾ ವ್ಯಾಸನಂ |
ಜನಿಪುದದು ಪ್ರಕೃತಿತಂತ್ರದೆ ಹೃದಯತಲದೊಳ್ ||
ಕ್ಷಣಮಾತ್ರ ಮಾನುಮದು ಕಣ್ಣೀರ ಬರಿಸುವುದು |
ಗಣಿಸಬೇಡದನು ನೀಂ - ಮಂಕುತಿಮ್ಮ ||

422
ಅನುರಾಗದುಃಖಂಗಳೊಮ್ಮೊಮ್ಮೆ ಬಿರುಬೀಸಿ |
ಮನದಿ ತೆರೆಗಳ ಕುಲುಕಿ ಕಡೆಯುವುದುಮೊಳಿತು ||
ಘನ ವರ್ಷ ಬಿರುಗಾಳಿ ಬಡಿಯಲಿರುಳೊಳ್ ನೆಲನ |
ದಿನದ ಸೊಗಸಿಮ್ಮಡಿಯೊ - ಮಂಕುತಿಮ್ಮ ||

423
ಭಾವರಾಗೋದ್ರೇಕ ತಾನೆ ತಪ್ಪೇನಲ್ಲ |
ಧೀವಿವೇಕದ ಸಮತೆಯದರಿನದಿರದಿರೆ ||
ಸ್ವಾವಿದ್ಯೆಯಾ ಮೋಹ ಮಮತೆಯದನಂಟದಿರೆ |
ಪಾವನವೊ ಹೃನ್ಮಥನ - ಮಂಕುತಿಮ್ಮ ||

424
ಕಾರಿರುಳೊಳಾಗಸದಿ ತಾರೆ ನೂರಿದ್ದೇನು? |
ದಾರಿಗನ ಕಣ್ಗೆ ಬೇಕೊಂದು ಮನೆಬೆಳಕು ||
ದೂರದಾ ದೈವವಂತಿರಲಿ, ಮಾನುಷಸಖನ |
ಕೋರುವುದು ಬಡಜೀವ - ಮಂಕುತಿಮ್ಮ ||

425
ಹರಿಗೆ ನಿನ್ನನುರಾಗವೆಲ್ಲವನು ಸಲ್ಲಿಸೆನೆ |
ಮರುನುಡಿಯ ನುಡಿವನೇನ್ ಒಡಲ ತೋರದನು? ||
ಪರಿತಪಿಸುವುದು ಜೀವ ಜೀವಸರಸವನೆಳಸಿ |
ನರಧರ್ಮಸೂಕ್ಷ್ಮವಿದು - ಮಂಕುತಿಮ್ಮ ||

426
ಮನುಜರೂಪದಿನಾದರವನು ಪಡೆಯದ ಹೃದಯ- |
ವನುರಾಗವನು ಬಿಡಾಲಕೊ ಶುಕಕೊ ಕಪಿಗೋ ||
ಶುನಕಕೋ ಸುರಿದದರ ಮಾರ್ದನಿಯನಾಲಿಪುದು |
ತಣಿವು ಜೀವಸ್ವರದೆ - ಮಂಕುತಿಮ್ಮ ||

427
ಮಾತೆವೊಲೊ ಪಿತನವೊಲೊ ಪತಿಯವೊಲೊ ಸತಿಯವೊಲೊ |
ಭ್ರಾತಸುತಸಖರವೊಲೊ ಪಾತ್ರವೊಂದಕೆ ತಾಂ ||
ಕಾತರಿಸುತಿಹುದು ತನ್ನೆಲ್ಲವನು ಮುಡುಪುಕುಡೆ |
ಪ್ರೀತಿಯಾ ಹುಚ್ಚು ಚಟ - ಮಂಕುತಿಮ್ಮ ||

428
ಪ್ರೇಮ ಕನಲೆ ಪಿಶಾಚಿ, ತೃಪ್ತಿಯಾಂತಿರೆ ಲಕ್ಷ್ಮಿ |
ಭ್ರಾಮಿಪುದದು ಪ್ರತಿಪ್ರೇಮಯಾಚನೆಯೊಳ್ ||
ಮಾಮಕವಿದೆಂದಾವುದಕೊ ತಾನೆ ಬಲಿವೋಗಿ |
ಶಾಮನವನೊಂದುವುದು - ಮಂಕುತಿಮ್ಮ ||

429
ಬಂಧನವದೇನಲ್ಲ ಜೀವಜೀವಪ್ರೇಮ |
ಒಂದೆ ನಿಲೆ ಜೀವವರೆ, ಬೆರೆತರಳೆ ಪೂರ್ಣ ||
ದಂದುಗವನ್ ಅರೆಗೆಯ್ದು, ಸಂತಸವನಿಮ್ಮಡಿಪ |
ಬಾಂಧವ್ಯ ದೈವಕೃಪೆ - ಮಂಕುತಿಮ್ಮ ||

430
ಒಬ್ಬನುಣುವೂಟದಲಿ ಸವಿಯಿಲ್ಲ ಸೊಗವಿಲ್ಲ |
ಇಬ್ಬರಾಗುವೆನೆಂದನಂತೆ ಪರಬೊಮ್ಮಂ ||
ಹೆಬ್ಬದುಕನೊಂಟಿತನದೊಳದೇನು ಬದುಕುವೆಯೊ? |
ತಬ್ಬಿಕೊಳೊ ವಿಶ್ವವನು - ಮಂಕುತಿಮ್ಮ ||

431
ಕೊಳದಿ ನೀಂ ಮೀವಂದು ತೆರೆಯೆದ್ದು ಹರಡುತ್ತೆ |
ವಲಯವಲಯಗಳಾಗಿ ಸಾರುವುದು ದಡಕೆ ||
ಅಲೆಗಳಾ ತೆರದಿ ನಿನ್ನಾತ್ಮದಿಂ ಪರಿಪರಿದು |
ಕಲೆತುಕೊಳ್ಳಲಿ ಜಗದಿ - ಮಂಕುತಿಮ್ಮ ||

432
ಪ್ರತ್ಯೇಕಸುಖವಲ್ಪದುದು, ಗಳಿಗೆತೋರ್ಕೆಯದು |
ಆತ್ಮವಿಸ್ತಾರವಾಗಿಪುದೆ ನಿತ್ಯಸುಖ ||
ವ್ಯಕ್ತಿಜೀವನದ ಸೊಂಪು ಸಮಷ್ಟಿಜೀವನದಿ |
ಒಟ್ಟು ಬಾಳ್ವುದ ಕಲಿಯೊ - ಮಂಕುತಿಮ್ಮ ||

433
ಅಳುವೇನು? ನಗುವೇನು? ಹೃತ್ಕಪಾಟೋದ್ಘಾಟ |
ಶಿಲೆಯೆ ನೀಂ ಕರಗದಿರಲ್? ಅರಳದಿರೆ ಮರಳೇಂ? ||
ಒಳಜಗವ ಹೊರವಡಿಪ, ಹೊರಜಗವನೊಳಕೊಳುವ |
ಸುಳುದಾರಿಯಳುನಗುವು - ಮಂಕುತಿಮ್ಮ ||

434
ನಗುವೊಂದು ರಸಪಾಕವಳುವೊಂದು ರಸಪಾಕ |
ನಗುವಾತ್ಮ ಪರಿಮಳವ ಪಸರಿಸುವ ಕುಸುಮ ||
ದುಗುಡವಾತ್ಮವ ಕಡೆದು ಸತ್ತ್ವವೆತ್ತುವಮಂತು |
ಬಗೆದೆರಡನುಂ ಭುಜಿಸು - ಮಂಕುತಿಮ್ಮ ||

435
ರಾಮಣೀಯಕದಿ ನಲಿವಕ್ಷಿಯೊಡನಚಲಮನ |
ಪ್ರೇಮಮಯಮನದೊಡನೆ ಮೋಹಬಡದಾತ್ಮ ||
ಭೀಮಬಲದೊಡನೆ ರಾಮನ ಅಭಯ ನಿಯಮವಿರೆ |
ಯಾಮಳ ವರಂಗಳವು - ಮಂಕುತಿಮ್ಮ ||

436
ಎದೆ ಮಾರುವೋಗದೊಡೆ, ಕಣ್ ಸೊಬಗನುಂಡರೇಂ? |
ಹೃದಯ ಮುಯ್ ಕೇಳದೊಡೆ, ನಲವ ಸೂಸಿದರೇಂ? ||
ಕದಡದಿರ್ದೊಡೆ ಮನವ, ತನು ಸೊಗವ ಸವಿದೊಡೇಂ? |
ಮುದ ತಾನೆ ತಪ್ಪಲ್ಲ - ಮಂಕುತಿಮ್ಮ ||

437
ಶಕ್ತಿ ಕರಣಕ್ಕಿರಲಿ, ರಸ ಸಂಗ್ರಹಣ ಶಕ್ತಿ |
ಯುಕ್ತವದರೊಡನಿರಲಿ ಭೋಗದಿ ವಿರಕ್ತಿ ||
ಶಕ್ತಿ ತನ್ನೊಳಗಿದ್ದು ರಕ್ತಮನನಾಗದನೆ |
ಉತ್ತಮೋತ್ತಮ ಸುಕೃತಿ - ಮಂಕುತಿಮ್ಮ ||

438
ತಳಿರ ನಸುಕೆಂಪು, ಬಳುಕೆಲೆಯ ಹಸುರಿನ ಸೊಂಪು |
ತಿಳಿಮನದ ಯುವಜನದ ನಗುಗಣ್ಣ ಹೊಳಪು ||
ಬೆಳೆವರಿವು ಮಗುದುಟಿಯಿನುಣ್ಮಿಸುವ ನುಡಿಚಿಗುರು |
ಇಳೆಯೊಳಿವನೊಲ್ಲನಾರ್? - ಮಂಕುತಿಮ್ಮ ||

439
ಏಳಿಸುವುದೊಂದು ಹೊರಸುಳಿವೆನ್ನ ಹೃದಯದಲಿ |
ಗಾಳಿಸುಂಟರೆಯನದು ಹರಣಗಳ ಕುಲುಕಿ ||
ಬಾಳನಲ್ಲಾಡಿಪುದು ಬೇರಿಂದ ತುದಿವರೆಗೆ |
ಧೂಳದರೊಳೀ ಜನ್ಮ - ಮಂಕುತಿಮ್ಮ ||

440
ಹೊರಗೆ ಹೊಳೆವೊಂದು ಹೊಳಪಿನ ಕಿರಣವೆನ್ನೆದೆಯೊ- |
ಳುರಿಯನೆಬ್ಬಿಸಿ ಹೊಗೆಯನೆರಚಿ ಕಣ್ಗಳಿಗೆ ||
ಕೆರಳಿಪುದು ಕರಣಗಳ, ಮರಳಿಪುದು ಹರಣಗಳ |
ಹೊರಮೋಹವೊಳದಾಹ - ಮಂಕುತಿಮ್ಮ ||

441
ಇಂತು ಹೊರಗೊಳಗುಗಳು ಬೇರೆಲೋಕಗಳಲ್ಲ |
ಅಂತರಂಗದೊಳೂರಸಂತೆ ಸದ್ದಿಹುದು ||
ಸಂತೆಯೊಳಮಂತರಂಗದ ಸದ್ದು ಕೇಳಿಪುದು |
ಸ್ವಾಂತದಿಕ್ಕೆಲಗಳವು - ಮಂಕುತಿಮ್ಮ ||

442
ಸೊಗಸು ಬೇಡದ ನರಪ್ರಾಣಿಯೆಲ್ಲಿಹುದಯ್ಯ? |
ಮಗುವೆ, ಮುದುಕನೆ, ಪುರಾಣಿಕ ಪುರೋಹಿತರೆ? ||
ಜಗದ ಕಣ್ಣಿಣಿಕದೆಡೆ ಮುಕುರದೆದುರೊಳು ನಿಂತು |
ಮೊಗವ ತಿದ್ದುವರೆಲ್ಲ - ಮಂಕುತಿಮ್ಮ ||

443
ತಿಂಗಳಾರರ ದುಡಿತ ಚೆಂಗುಲಾಬಿಯ ಬೆಳೆತ |
ಕಂಗೊಳಿಪುದದರ ಸಿರಿಯರೆಗಳಿಗೆಯಲರೊಳ್ ||
ಪೊಂಗುವಾನಂದವದನನುಭವಿಸಿದವನ್ ಅಜನ |
ಹಂಗಿಪನೆ ಕೃಪಣತೆಗೆ? - ಮಂಕುತಿಮ್ಮ ||

444
ಬಾಂದಳದ ಬಾಗು, ರವಿಕಿರಣಗಳ ನೀಳ್ಕೋಲು |
ಇಂದುಮಣಿನುಣ್ಪು, ತಾರೆಗಳ ಕಣ್ಮಿನುಗು ||
ಚೆಂದದಂಗಾಂಗಭಾವದಿ ಮೊದಲ ಪಾಠವಿವು |
ಸೌಂದರ್ಯಗುರು ಪ್ರಕೃತಿ - ಮಂಕುತಿಮ್ಮ ||

445
ಕ್ಷಣವದೊಂದೆ ಅನಂತಕಾಲ ತಾನಾಗುವುದು |
ಅನುಭವಕೆ ಸತ್ತ್ವ ಶಿವ ಸುಂದರಗಳಮರೆ ||
ಮನ ತುಂಬುಶಶಿಯಾಗಿ, ನೆನಪಮೃತವಾಗುವುದು |
ಕ್ಷಣದೊಳಕ್ಷಯ ಕಾಣೊ - ಮಂಕುತಿಮ್ಮ ||

446
ಸುಂದರತೆಯೆನುವುದೇಂ? ಜನಕೆ ಮೈಮರೆಯಿಪಾ- |
ನಂದದೊಳಮರುಮವೇಂ? ವಿಶ್ವಚೇತನದಾ ||
ಸ್ಪಂದನವೆ ಸೌಂದರ್ಯಮದುವೆ ಜೀವನಮೂಲ |
ಬಂಧುರತೆ ಬೊಮ್ಮನದು - ಮಂಕುತಿಮ್ಮ ||

447
ದೃಷ್ಟಿಚುಕ್ಕೆಯದೊಂದನೆಲ್ಲ ಚೆಂದಂಗಳ್ಗ- |
ಮಿಟ್ಟಿಹನು ಪರಮೇಷ್ಠಿ, ಶಶಿಗೆ ಮಶಿಯವೊಲು ||
ಗುಟ್ಟೇನೊ? ರಕ್ಷೆಯೋ? ಸಿಂಗರವೊ? ಹೇಳನವೊ? |
ಮಷ್ಟು ಸೃಷ್ಟಿಗೆ ಬೊಟ್ಟು - ಮಂಕುತಿಮ್ಮ ||

448
ಬಿಂದು ವಿಸರಗಳನುವು, ವಂಕು ಸರಲಗಳನುವು |
ಚೆಂದ ಕಣ್ಣಿಗೆ ವರ್ಣವಿವಿಧಂಗಳನುವು ||
ಚೆಂದ ವೇಗ ಸ್ತಿಮಿತದನುವು, ಹುಳಿಯುಪ್ಪನುವು |
ದ್ವಂದ್ವದನುವುಗಳಂದ - ಮಂಕುತಿಮ್ಮ ||

449
ಸೌಂದರ್ಯದಾಲಯ ಬರಿ ದ್ವಂದ್ವವೇನಲ್ಲ |
ದ್ವಂದ್ವದೊಳಗನುವು; ಅದು ಪರಿಮಾಣದುಚಿತ ||
ಸಂಧಾನರೀತಿಯದು, ಸಹಕಾರ ನೀತಿಯದು |
ಸಂದರ್ಭಸಹಜತೆಯೊ - ಮಂಕುತಿಮ್ಮ ||

450
ಸೌಂದರ್ಯದೊಳ್ ದ್ವಂದ್ವ, ಬಾಂಧವ್ಯದೊಳ್ ದ್ವಂದ್ವ |
ದ್ವಂದ್ವವೀ ಲೋಕ ಸಹವಾಸಗಳೊಳೆಲ್ಲ ||
ಮುಂದೆ ನೀನಾವುಭಯಗಳ ದಾಟಿ ಸಾಗುತಿರೆ |
ಬಂಧಮೋಚನ ನಿನಗೆ - ಮಂಕುತಿಮ್ಮ ||

451
ನೀಲ ವಿಸ್ತರವಿರಲು ನಕ್ಷತ್ರ ಬಿಂದು ಸೊಗ |
ಶೈಲದಚಲತೆಯಿರಲು ಝರಿಯ ವೇಗ ಸೊಗ ||
ಬಾಳು ಬಯಲಂತಿರಲು ಮನೆಯಚ್ಚುಕಟ್ಟಿಂಬು |
ವೈಲಕ್ಷಣದ ಚೆಂದ - ಮಂಕುತಿಮ್ಮ ||

452
ನೀಳುಗರೆ ಬಳುಬಳುಕೆ ಕಡಲತೆರೆಯೊಯ್ಯಾರ |
ತಾಳಲಯ ಸೇರೆ ರಾಗದ ನಾಟ್ಯ ಧಾಟಿ ||
ಗೋಳದ ಜ್ವಾಲೆಯಿಂ ಗಗನಪಟ ಸಿಂಗಾರ |
ವೈಲಕ್ಷಣದೊಳಿಂಬು - ಮಂಕುತಿಮ್ಮ ||

453
ತಾಯೊ ತಂಗಿಯೊ ಎನಿಪ ಶುಚಿಯ ಸೌಮ್ಯದ ಸೊಬಗು |
ಪ್ರೇಯಸಿಯ ಕರೆವೊಲಾತುರವಡಿಪ ಬೆಡಗು ||
ಈಯೆರಡು ಸಮದ ರುಚಿ ನಿನ್ನನಿಬ್ಬಗೆಗೊಳಿಸೆ |
ಧ್ಯೇಯ ನಿನಗಾವುದೆಲೊ? - ಮಂಕುತಿಮ್ಮ ||

454
ಪರಿಪರಿಯ ವಿಶ್ವಪ್ರಕೃತಿಶಕ್ತಿತೇಜಗಳು |
ಕೆರಳಿಸಲು ನರಹೃದಯರಭಸಗಳನದರಿಂ ||
ಪೊರಮಡುವ ಸಂಮೋಹಧೀರಗಂಭೀರಗಳ |
ಸರಸತೆಯೆ ಸುಂದರವೊ - ಮಂಕುತಿಮ್ಮ ||

455
ಸುಂದರದ ರಸ ನೂರು; ಸಾರವದರೊಳು ಮೂರು |
ಹೊಂದಿಪ್ಪುವವು ಮೋಹ ಕರುಣೆ ಶಾಂತಿಗಳ ||
ಒಂದರಿಂದೊಂದು ಬೆಳೆಯಾದಂದು ಜೀವನವು |
ಚೆಂದಗೊಂಡುಜ್ಜುಗವೊ - ಮಂಕುತಿಮ್ಮ ||

456
ಪಿಡಿ ಗಳಿಸು ಭುಜಿಸೊಡೆಯನಾಗೆನ್ನುವುದು ಮೋಹ |
ಕೊಡು ಸಲಿಸು ಸೇವೆಗೈಯೆನ್ನುವುದು ಕರುಣೆ ||
ಬಿಡು ನೀನು ನಾನುಗಳ, ವಿಶ್ವಾತ್ಮಪದವನೀ- |
ನಡರೆನ್ನುವುದು ಶಾಂತಿ - ಮಂಕುತಿಮ್ಮ ||

457
ಚಾರುದೃಶ್ಯಂಗಳಿಂ ಪ್ರೀತಿ ಹೃದಯವಿಕಾಸ |
ಕ್ರೂರದೌಷ್ಟ್ಯಂಗಳಿಂ ವೀರಾನುಕಂಪ ||
ಭೈರವಾದ್ಭುತಗಳಿಂ ಮೌನದಂತರ್ಮನನ |
ದಾರಿಯುದ್ಧಾರಕಿವು - ಮಂಕುತಿಮ್ಮ ||

458
ಹಿಂದಣದರುಳಿವಿರದು, ಮುಂದಣದರುಸಿರಿರದು |
ಒಂದರೆಕ್ಷಣ ತುಂಬಿ ತೋರುವುದನಂತ ||
ಒಂದೆ ಕಣ್ಣೊಂದೆ ಗುರಿಯೊಂದೆ ಮೈಮನಮರೆತ |
ಸುಂದರದ ಲೋಕವದು - ಮಂಕುತಿಮ್ಮ ||

459
ಹೃದಯಪುಷ್ಪಮರಂದವಾತ್ಮಕೆ ನಿಜಾನಂದ |
ಉದಿಪುದಾ ರಸ ಸುಂದರದ ಕಿರಣ ಸೋಕೆ ||
ಬದುಕಿನೊಳ್ ಕವಿತೆಯೊಳ್ ಕಲೆಗಳೊಳ್ ಪ್ರಕೃತಿಯೊಳ್ |
ಪುದಿದಿರ್ಪ ಕಾಂತಿಯದು - ಮಂಕುತಿಮ್ಮ ||

460
ಜಗದ ಬಂದೀಗೃಹದಿ ಬಿಗಿಯುತಿರೆ ವಿಧಿ ನಿನ್ನ |
ನಿಗಮ ಸತ್ಕಲೆ ಕಾವ್ಯಗಳ ಗವಾಕ್ಷಗಳಿಂ ||
ಗಗನದೊಳನಂತದರ್ಶನದೆ ಮುಕ್ತಿಯನೊಂದು |
ನಗುನಗಿಸಿ ಲೋಕವನು - ಮಂಕುತಿಮ್ಮ ||

461
ರಾಮನುಂ ಭರತನುಂ ತಬ್ಬಿಕೊಂಡತ್ತಂದು |
ಪ್ರೇಮಾಶ್ರುವುಕ್ಕಿ ನದಿಯಾಗಿ ಪರಿದಂದು ||
ಸೀಮೆಯಂ ಮುಟ್ಟಿತಲ ಬಾಂಧವ್ಯಸೌಂದರ್ಯ |
ಕ್ಷೇಮವದು ಜೀವಕ್ಕೆ - ಮಂಕುತಿಮ್ಮ ||

462
ಪ್ರೀತಿಮಹಿಮೆಯ ಚಿತ್ರರೀತಿಯಂ ವಾಲ್ಮೀಕಿ |
ನೀತಿಸೂಕ್ಷ್ಮದ ಗಹನಮಾರ್ಗಮಂ ವ್ಯಾಸರ್ ||
ಗೀತೆಯಲಿ ವಿಶ್ವಜೀವನರಹಸ್ಯವನವರ್ |
ಖ್ಯಾತಿಸಿಹರದು ಕಾವ್ಯ - ಮಂಕುತಿಮ್ಮ ||

463
ಹೃದಯಕೊಪ್ಪುವ ಭಾಷೆ ರಾಗಲಯ ವಿಸ್ತಾರ |
ಪದ ಚರ್ಚೆ ಮತಿವಿಚಾರಕೆ ತಕ್ಕ ಭಾಷೆ ||
ಹೃದಯ ಮತಿ ಸತಿಪತಿಗಳಂತಿರಲು ಯುಕ್ತವದು |
ಬದುಕು ರಸತರ್ಕೈಕ್ಯ - ಮಂಕುತಿಮ್ಮ ||

464
ಸ್ರವಿಸುವುದು ಜೀವರಸ ಹೃದಯಗರ್ತದ ತಳದಿ |
ಕಿವಿಗಾ ರಹಸ್ಯದುಲಿ ಕಾವ್ಯಗಾನಗಳಿಂ ||
ಭುವನದಾಚಿನ ರಹಸ್ಯದ ಕೀರ್ತಿ ವೇದಗಳ |
ರವದಿನೆಂದಾರ್ಷಮತ - ಮಂಕುತಿಮ್ಮ ||

465
ಸ್ವರರಾಗಗೀತಿಗಳು ನಾಟ್ಯಾಭಿನೀತಿಗಳು |
ಕರೆದೇಳಿಸುವುವು ಮನಸಿನಲಿ ನಿದ್ರಿಸುವಾ ||
ಪರಿಪರಿಯ ಭಾವಗಳ ಗೂಢಸ್ವಭಾವಗಳ |
ಪರಮೇಷ್ಠಿ ಟೀಕು ಕಲೆ - ಮಂಕುತಿಮ್ಮ ||

466
ವ್ಯಸನಕಾರಣವೊಂದು ಹಸನಕಾರಣವೊಂದು |
ರಸಗಳೀಯೆರಡಕಿಂತಾಳವಿನ್ನೊಂದು ||
ಭೃಶವಿಶ್ವಜೀವಿತಗಭೀರತೆಯ ದರ್ಶನದ |
ರಸವದದ್ಭುತಮೌನ - ಮಂಕುತಿಮ್ಮ ||

467
ಗಣನೆಗೆಟುಕದ ಗುಣಗಳಾತ್ಮದವವರ್ಣ್ಯಗಳು |
ಮನದ ದೇಹದ ಜೀವದೆಲ್ಲ ಕರಣಗಳಾ ||
ಅನುಭವದ ಮುಕುರದೊಳ್ ಪ್ರತಿಫಲಿಸೆ ತನ್ನದೊಂ- |
ದಣುವದುವೆ ಸುಂದರವೊ - ಮಂಕುತಿಮ್ಮ ||

468
ಲಾವಣ್ಯವಾತ್ಮಗುಣವದರಿಂದೆ ಲೋಕಜನ |
ದೇವವನು ಕಮನೀಯ ವಿಗ್ರಹಂಗಳಲಿ ||
ಭಾವಿಸುತ ತಮ್ಮಿಷ್ಟಭೋಗಗಳನರ್ಪಿಸುವ |
ಸೇವೆಯಿಂ ನಲಿಯುವರು - ಮಂಕುತಿಮ್ಮ ||

469
ಸೌಂದರ್ಯವೊಂದು ದೈವರಹಸ್ಯ, ಸೃಷ್ಟಿವೊಲು |
ನಿಂದಿರ್ಪುದದರಾಶೆಯಿನೆ ಜೀವಿತಾಶೆ ||
ಅಂದುವುದು ಕಣ್ಣಿಗದು ಸಂಸ್ಕೃತಿಗೆ ತಕ್ಕಂತೆ |
ಚೆಂದದರಿವೆ ತಪಸ್ಸೊ - ಮಂಕುತಿಮ್ಮ ||

470
ವಿವಿಧರಸಗಳ ಭಟ್ಟಿ, ಸೌಂದರ್ಯಕಾಮೇಷ್ಟಿ |
ಕವಿಜಗತ್ಸೃಷ್ಟಿಯದು, ಕಲೆಗನಾಕೃಷ್ಟಿ ||
ಗವಿಯೊಳಗಣ ಪ್ರಕೃತಿಯಂತ್ರ ವೈಚಿತ್ರ್ಯವದು |
ತಪಸೊಂದೆ ಪಥವದಕೆ - ಮಂಕುತಿಮ್ಮ ||

471
ಮಂದಿರದ ಶಿಲ್ಪಿ ಯಂತ್ರಗಳ ಯೋಜಕ ರಾಜ್ಯ- |
ಸಂಧಾನಿ ವಿಜ್ಞಾನಿಯುದ್ಯೋಗದಾನಿ ||
ಮಂದಿಮುಂದಾಳು ಜನಬಾಂಧವ್ಯಪೋಷಕನು |
ಸೌಂದರ್ಯಕರರಿವರು - ಮಂಕುತಿಮ್ಮ ||

472
ಕವಿ ಚಿತ್ರಕೋವಿದನು ಪರತತ್ತ್ವಶೋಧಕನು |
ವಿವಿಧ ವಾದನ ಗೀತ ನೃತ್ಯ ಕುಶಲಿಗಳು ||
ನವನವತೆಯಂ ಮನಸಿಗೀವೆಲ್ಲ ಕಲೆಗಾರ- |
ರವರಿಂದ ಸುಂದರತೆ - ಮಂಕುತಿಮ್ಮ ||

473
ಪಾರಿಜಾತವ ಕಂಡು ನಿಡುಸುಯ್ದು, ಪದಗಳಿಂ |
ಶೌರಿಕಥೆಯನು ಹೆಣೆದು ತೃಪ್ತನಹನು ಕವಿ ||
ಊರಿನುದ್ಯಾನಕದ ತರಿಸಿ ಬೆಳಸುವ ಕಾರ್ಯ- |
ಧೀರನಲ ರಾಜ್ಯಕನು - ಮಂಕುತಿಮ್ಮ ||

474
ಬಿದ್ದುದನು ನಿಲ್ಲಿಪುದೆ ನರನ ಮೃತ್ಯುಂಜಯತೆ |
ಶುದ್ಧಿಸದೆ ನಭ ಧರೆಯ ಮರಮರಳಿ ಮಳೆಯಿಂ? ||
ಗದ್ದೆ ಕೊಯ್ಲಾಗೆ ಮಗುಳ್ದದು ಬೆಳೆಯ ಕುಡದಿಹುದೆ? |
ಬಿದ್ದ ಮನೆಯನು ಕಟ್ಟೊ - ಮಂಕುತಿಮ್ಮ ||

475
ಗೌರವಿಸು ಜೀವನವ, ಗೌರವಿಸು ಚೇತನವ |
ಆರದೋ ಜಗವೆಂದು ಭೇದವೆಣಿಸದಿರು ||
ಹೋರುವುದೆ ಜೀವನಸಮೃದ್ಧಿಗೋಸುಗ ನಿನಗೆ |
ದಾರಿಯಾತ್ಮೋನ್ನತಿಗೆ - ಮಂಕುತಿಮ್ಮ ||

476
ಜೀವನೋದ್ಯಮವೆಲ್ಲ ತೋಟದುದ್ಯೋಗವೆನು |
ಭಾವಬುದ್ಧಿಗಳ ಕೃಷಿಯಿಂದೊಗೆದ ಫಲದಿಂ ||
ತೀವುತಿರೆ ನಗೆ ಹೊಳಪು ಮೊಗಮೊಗದೊಳಂ ಜಗದಿ |
ಸೇವೆಯದು ಬೊಮ್ಮಂಗೆ - ಮಂಕುತಿಮ್ಮ ||

477
ಹೂವ ತಳೆದ ಗುಲಾಬಿಯಿಂದ ಮನಕಹುದೇನು? |
ನೋವೊ? ಸಂತಸವೊ? ನೋಡಾಮುಳ್ಳು ಬಾಳ್ಗೆ ||
ಹೂವೆ ದಿವ್ಯಕಿರೀಟವದುವೆ ಕಾಲಕಟಾಕ್ಷ |
ಜೀವನದ ತಿರುಳಷ್ಟೆ - ಮಂಕುತಿಮ್ಮ ||

478
ಅಗೆದು ಗೊಬ್ಬರವಿಕ್ಕಿ ನೀರೆರೆದು ತೋಟಿಗನು |
ಜಗಿವ ಮುಳ್ಳಿರಿತಗಳ ಸೈರಿಸೆ ಗುಲಾಬಿ ||
ನಗುವುದೊಂದರೆನಿಮಿಷ; ನಗಲು ಬಾಳ್ಮುಗಿಯುವುದು |
ಮುಗುಳು ದುಡಿತಕೆ ತಣಿಸು - ಮಂಕುತಿಮ್ಮ ||

479
ಸತ್ಯವೆಂಬುದದೇನು ಸೈನಿಕನ ಜೀವನದಿ? |
ಕತ್ತಿಯವನಿಗೆ ಸತ್ಯವದರಿಂದ ಧರ್ಮ ||
ಭುಕ್ತಿಸುಪ್ತಿಗಳ ವಿಭವಂಗಳವನಿಗೆ ಮಿಥ್ಯೆ |
ಸಾರ್ಥಕತೆಯಿಂ ಸತ್ಯ - ಮಂಕುತಿಮ್ಮ ||

480
ಕ್ಲೇಶ ನೂರಾಗಿರೆಯುಮಾಶೆಗಳ ಪುನರುದಯ |
ಬೇಸರದ ನುಡಿಯೊಳಂ ಲೇಸುಗಳ ನೆನಪು ||
ಆಶೆ ಸಾಯ್ತೆಂದೊಡಂ ಚೆಲುವೆನಲು ಕಣ್ಣಲೆತ |
ಮಾಸವೀ ಜೀವಗುಣ - ಮಂಕುತಿಮ್ಮ ||

481
ನಿಶಿ ಹಿಂದೆ, ನಿಶಿ ಮುಂದೆ, ನಡುವೆ ಮಿಸುಕಾಟ ಬಾಳ್ |
ನಿಶಿ ಕೆಲವರಿಗೆ ಸೊನ್ನೆ, ಕೆಲವರಿಗೆ ಗುಟ್ಟು ||
ಮಸಕಿನಲಿ ಭೂತವೊಂದಿಹುದು ದಿಟವಾದೊಡದ- |
ರುಸಿರು ಸೋಕದೆ ನಿನ್ನ? - ಮಂಕುತಿಮ್ಮ ||

482
ಗುಹೆಯೆಡಕೆ, ಗುಹೆ ಬಲಕೆ, ನಡುವೆ ಮಲೆ; ಕಣಿವೆಯಲಿ |
ವಿಹರಿಪೆಯ ಹುಲಿ ಬಾರದೆಂದು ನೀಂ ನಚ್ಚಿ? ||
ರಹಸಿಯದ ಭೂತ ಪಿಡಿಯದ ತೆರದಿ ಬದುಕ ನಿ- |
ರ್ವಹಿಸುವುದೆ ಜಾಣ್ಮೆಯಲ - ಮಂಕುತಿಮ್ಮ ||

483
ಗಾಳಿಯನು ಗುದ್ದಿದರೆ ಮೈ ನೊಯ್ವುದೊಂದೆ ಫಲ |
ಮೂಲಸತ್ತ್ವವ ಮರೆತ ಸಾಹಸಗಳಂತು ||
ಮೇಳವಿಸೆ ಪೌರುಷಕೆ ದೈವಕೃಪೆಯಂದು ಫಲ |
ತಾಳಿ ಬಾಳಾವರೆಗೆ - ಮಂಕುತಿಮ್ಮ ||

484
ಕತ್ತಲೆಯೊಳೇನನೋ ಕಂಡು ಬೆದರಿದ ನಾಯಿ |
ಎತ್ತಲೋ ಸಖನೊರ್ವನಿಹನೆಂದು ನಂಬಿ ||
ಕತ್ತೆತ್ತಿ ಮೋಳಿಡುತ ಬೊಗಳಿ ಹಾರಾಡುವುದು |
ಭಕ್ತಿಯಂತೆಯೆ ನಮದು - ಮಂಕುತಿಮ್ಮ ||

485
ನಂಬದಿರ್ದನು ತಂದೆ, ನಂಬಿದನು ಪ್ರಹ್ಲಾದ |
ನಂಬಿಯುಂ ನಂಬದಿರುವಿಬ್ಬಂದಿ ನೀನು ||
ಕಂಬದಿನೊ ಬಿಂಬದಿನೊ ಮೋಕ್ಷವವರಿಂಗಾಯ್ತು |
ಸಿಂಬಳದಿ ನೊಣ ನೀನು - ಮಂಕುತಿಮ್ಮ ||

486
ತನಗಿಂತ ಹಿರಿದ, ಭುವನಕ್ಕಿಂತ ಹಿರಿದೊಂದ- |
ನನುಭವದ ಹಿಂದೆ, ಸೃಷ್ಟಿಯ ನೆರಳ ಹಿಂದೆ ||
ಅನುಮಿತಿಸಿ ಮನುಜನಾ ಹಿರಿದನೆಳಸುವನೆಯ್ದೆ |
ಮನುಜನೊಳಹಿರಿಮೆಯದು - ಮಂಕುತಿಮ್ಮ ||

487
ನರರವೊಲೆ ಸುರರುಮಲೆದಲೆದು ಮರೆಯಾಗಿಹರು |
ಭರತದೇಶದೊಳಮೈಗುಪ್ತಯವನರೊಳಂ ||
ಸುರ ನಾಮ ರೂಪಗಳಸಂಖ್ಯಾತ, ನಿಜವೊಂದು |
ತೆರೆ ಕೋಟಿ ಕಡಲೊಂದು - ಮಂಕುತಿಮ್ಮ ||

488
ಜೀವಿ ಬೇಡದಿರೆ ದೈವವನು ಕೇಳುವರಾರು? |
ದೈವ ಗುಟ್ಟಿರಿಸದಿರೆ ಜೀವಿಯರಸುವುದೇಂ? ||
ಜೀವ ದೈವಂಗಳ ಪರಸ್ಪರಾನ್ವೇಷಣೆಯೆ |
ಲಾವಣ್ಯ ಸೃಷ್ಟಿಯಲಿ - ಮಂಕುತಿಮ್ಮ ||

489
ಕಣ್ಣಿರದೆ ರವಿಯೇನು? ರವಿಯಿರದೆ ಕಣ್ಣೇನು? |
ಅನ್ಯೋನ್ಯ ಸಹಕೃತಿಯಿನುಭಯ ಸಾರ್ಥಕತೆ ||
ನಿನ್ನಾತ್ಮ ಜಗದಾತ್ಮಕಂತು ಸಂಬಂಧವವು |
ವಹ್ನಿಸ್ಫುಲಿಂಗಗಳೊ - ಮಂಕುತಿಮ್ಮ ||

490
ಬಹಿರದ್ಭುತವ ಮನುಜನಂತರದ್ಭುತವರಿತು |
ಗ್ರಹಿಸುವಂತಾಗಿಸಲು ಪೂರ್ವಾನುಭವಿಗಳ್ ||
ಬಹುಪರಿಯುಪಾಯಗಳ ನಿರವಿಸಿಹರದಕೇಕೆ |
ಗಹಗಹಿಸುವೆಯೊ, ಮರುಳೆ? - ಮಂಕುತಿಮ್ಮ ||

491
ಅಂಬುಧಿಯ ಮಡಕೆಯಲಿ, ಹೊಂಬಿಸಿಲ ಕಿಟಿಕಿಯಲಿ |
ತುಂಬಿಕೊಳ್ಳುವ ಬಡವನೈಶ್ವರ್ಯದಂತೆ ||
ಬಿಂಬದೊಳಗಮಿತ ಸತ್ತ್ವವ ಪಿಡಿದಿಡುವ ಭಕ್ತಿ- |
ಯಿಂಬು ಕಿಂಚಿನ್ಮತಿಗೆ - ಮಂಕುತಿಮ್ಮ ||

492
ಬಹಿರಂತರೈಕ್ಯವನು ನೆನಪಿಗಾಗಿಸಲೆಂದು |
ವಿಹಿತಮ್ ಆಚಮನಾರ್ಘ್ಯ ಪೂಜೆ ನೈವೇದ್ಯ ||
ಗುಹೆಯೊಳಗಣದ ಹೊರಗಣದ ಕೂಡಿಸುವುಪಾಯ |
ಸಹಭಾವವದಕೆ ಸರಿ - ಮಂಕುತಿಮ್ಮ ||

493
ಬಹುಜನಂ ಕೈಮುಗಿದ ತೀರ್ಥದೊಳ್ ಕ್ಷೇತ್ರದೊಳ್ |
ಮಹಿಮೆಯಲ್ಲೇನೆಂದು ಸಂಶಯಿಸಬೇಡ ||
ವಿಹಿತಗೈದವರಾರು ವಸತಿಯಂ ದೈವಕ್ಕೆ? |
ಮಹಿಮೆ ಮನಸೋತೆಡೆಯೊ - ಮಂಕುತಿಮ್ಮ ||

494
ಹರಿಭಜಕರೊಳು ಭಯದಿನೊಗೆದುದೆನಿಬರ ಭಕುತಿ |
ಮರದ ಮೇಲಣ ಭಕ್ತಿಯೆನಿಬರದು ನೋಡೆ? ||
ಬರಿಯ ಸಂತೋಷದನುರಾಗರಸ ನಿಜಭಕ್ತಿ- |
ಪರಮದಾಕರ್ಷೆಯದು - ಮಂಕುತಿಮ್ಮ ||

495
ಅರುಣೋದಯಪ್ರಭೆಯ, ಗಿರಿಶೃಂಗದುನ್ನತಿಯ |
ವರುಣಾಲಯಾಯತಿಯ ನಿರುಕಿಸಿದೊಡಹುದೇಂ? ||
ಬೆರಗು, ಬರಿಬೆರಗು, ನುಡಿಗರಿದೆನಿಪ್ಪಾನಂದ |
ಪರಮಪೂಜೆಯುಮಂತು - ಮಂಕುತಿಮ್ಮ ||

496
ಬೆರಗಾಗಿಪುವುವೆಲ್ಲ ಪಿರಿತನದ ನೋಟಗಳು |
ಬೆರಗೆ, ಮೈಮರೆವೆ, ಸೊಲ್ಲಣಗುವುದೆ ಸೊಗಸು ||
ಬೆರಗು ಚಿತ್ತವ ನುಂಗಲೊಗೆವ ಶಾಂತಿಯ ಕಾಂತಿ |
ಪರಮನರ್ಚನೆಗೆ ವರ - ಮಂಕುತಿಮ್ಮ ||

497
ಸುತೆಯ ಪೋಷಿಸಿ ಬೆಳಸಿ, ಧನಕನಕದೊಡನವಳನ್- |
ಇತರಗೃಹಕಿತ್ತು ನೀಂ ಕೇಳ್ವ ಮುಯ್ಯೇನು? ||
ಪ್ರತಿಫಲವು ಬೇರೇಕೆ? ಸುಕೃತಕದು ತಾನೆ ಫಲ |
ಹಿತ ಮನದ ಪಾಕಕದು - ಮಂಕುತಿಮ್ಮ ||

498
ಸಂಗೀತ ತಲೆದೂಗಿಪುದು, ಹೊಟ್ಟೆ ತುಂಬೀತೆ? |
ತಂಗದಿರನೆಸಕ ಕಣ್ಗಮೃತ, ಕಣಜಕದೇಂ? ||
ಅಂಗಡಿಯ ಮಾಡದಿರು ಸುಕೃತಪ್ರಸಕ್ತಿಯಲಿ |
ಪೊಂಗುವಾತ್ಮವೆ ಲಾಭ - ಮಂಕುತಿಮ್ಮ ||

499
ದೇವಮಂದಿರ ಭಜನೆ ಪೂಜೆ ಪ್ರಸಾದಗಳು |
ಜೀವನದಲಂಕಾರ, ಮನಸಿನುದ್ಧಾರ ||
ಭಾವವಂ ಕ್ಷುಲ್ಲಜಗದಿಂ ಬಿಡಿಸಿ ಮೇಲೊಯ್ವು- |
ದಾವುದಾದೊಡಮೊಳಿತು - ಮಂಕುತಿಮ್ಮ ||

500
ದೇವನೇನತಿಶಯಿತಮಾನಿಸನೆ ಭೋಗಕ್ಕೆ? |
ಹೂವುಣಿಸು ಮುಡುಪೊಡವೆಯವನಿಗಂ ಬೇಕೆ? ||
ಆವುದೊಳ್ಳಿತೊ ತನಗೆ ನರನದನು ಪರಮಂಗೆ |
ನೈವೇದಿಪುದು ಸಾಜ - ಮಂಕುತಿಮ್ಮ ||

501
ಯುಕ್ತಿಸಾಮ್ರಾಜ್ಯದಲಿ ಭಕ್ತಿ ಬಡ ಪರದೇಶಿ |
ಶಕ್ತಿ ಚತುರತೆಯುಡುಗಿ ನೀನು ಸೋತಂದು ||
ಉತ್ಕ್ರಮಣದರೆಮನದಿ ದೈವವನು ಪಿಡಿದೇನು? |
ಭಕ್ತಿ ರಕ್ತದಿ ಪರಿಗೆ - ಮಂಕುತಿಮ್ಮ ||

502
ಸೃಷ್ಟಿಯದ್ಭುತಶಕ್ತಿಯುಳ್ಳೊರ್ವನಿರಲು ನ- |
ಮ್ಮಿಷ್ಟಗಳನರಿತು ನೀಡುವುದವನಿಗರಿದೇಂ? ||
ಇಷ್ಟವಾತನೊಳುದಿಸುವಂತೆ, ಚೋದಿಪುದೆಂತು? |
ಕಷ್ಟ ನಮಗಿಹುದಷ್ಟೆ - ಮಂಕುತಿಮ್ಮ ||

503
ಜೀವಸತ್ತ್ವದಪಾರಭಂಡಾರವೊಂದಿಹುದು |
ಸಾವಕಾರನದೃಷ್ಟನ್ ಅದನಾಳುತಿಹನು ||
ಆವಶ್ಯಕದ ಕಡವನವನೀವುದುಂಟಂತೆ! |
ನಾವೊಲಿಪುದೆಂತವನ? - ಮಂಕುತಿಮ್ಮ ||

504
ಗಗನ ಬಿಸಿಗವಸಾಗಿ, ಕೆರೆಗಳಾವಿಗೆಯಾಗಿ |
ಜಗದುಸಿರೆ ಹೊಗೆಯಾಗಿ ಧಗಧಗಿಸುವಂದು ||
ಒಗೆದೆತ್ತಣಿನೊ ರಾತ್ರಿಯಲಿ ಧರೆಗೆ ತಂಪೆರೆವ |
ಮುಗಿಲವೊಲು ದೈವಕೃಪೆ - ಮಂಕುತಿಮ್ಮ ||

505
ದೈವಕೃಪೆಯೆನುವುದೇಂ? ಪರಸತ್ತ್ವನವವೃಷ್ಟಿ |
ಜೀವಗುಣ ಪಕ್ವಪಟ್ಟಂತದರ ವೇಗ ||
ಭಾವಚೋದನೆಗಳಲಿ ಬಾಹ್ಯಸಾಧನೆಗಳಲಿ |
ತೀವಿ ದೊರೆಕೊಳುವುದದು - ಮಂಕುತಿಮ್ಮ ||

506
ದೊರೆಗೆ ನೀಂ ಬಿನ್ನಯಿಸೆ ನೂರೆಂಟು ಬಯಕೆಗಳ |
ಸರಿ ತನಗೆ ತೋರ್ದನಿತನ್ ಅದರೊಳವನೀವಂ ||
ಅರಿಕೆಯೆಲ್ಲವ ನಡಸದಿರೆ ದೊರೆಯೆ ಸುಳ್ಳಹನೆ? |
ಕರುಣೆ ನಿರ್ಬಂಧವೇಂ? - ಮಂಕುತಿಮ್ಮ ||

507
ದಂಡನಿರ್ಣಯದಿ ನೀಂ ಕ್ಷಮಿಸೆನಲ್ ನ್ಯಾಯಪತಿ |
ಹಿಂದಿನಾ ನಿನ್ನೊಳ್ತನವನ್ ಅಂದಿನಳಲನ್ ||
ತಂದೆಬಗೆಯಿಂ ಬಗೆದು ಶಾಸನೋಗ್ರವನಿನಿತು |
ಕುಂದಿಸಲಿಕಾಗದೇಂ? - ಮಂಕುತಿಮ್ಮ ||

508
ತಕ್ಕಡಿಯ ದೈವ ಪಿಡಿದದರೊಂದು ತಟ್ಟೆಯಲಿ |
ಒಕ್ಕುವುದು ಬಿಡದೆ ಜೀವಿಯ ಪಾಪಚಯವ ||
ಇಕ್ಕುವುದು ಸುಕೃತಗಳನಿನ್ನೊಂದರೊಳಗಲ್ಲಿ |
ಭಕ್ತಿ ಪಶ್ಚಾತ್ತಾಪ - ಮಂಕುತಿಮ್ಮ ||

509
ಪ್ರಾರಬ್ಧದಲಿ ನಿನ್ನ ಪುಣ್ಯವಿನಿತಾನುಮಿರೆ |
ಸೇರೆ ಪಶ್ಚಾತ್ತಾಪ ಭಾರವದರೊಡನೆ ||
ದಾರುಣದ ಕರ್ಮನಿಯತಿಯನಿನಿತು ಶಿಥಿಲಿಪುದು |
ಕಾರುಣ್ಯದಿಂ ದೈವ - ಮಂಕುತಿಮ್ಮ ||

510
ನಿನ್ನೇಳುಬೀಳುಗಳು ನಿನ್ನ ಸೊಗ ಗೋಳುಗಳು |
ನಿನ್ನೊಬ್ಬನೋಸುಗವೆ ನಡೆವ ಯೋಜನೆಯೇಂ? ||
ಇನ್ನದೆನಿಬರ ಜೀವಪಾಕವದರಿಂದಹುದೊ! |
ಛನ್ನವಾ ಋಣಮಾರ್ಗ - ಮಂಕುತಿಮ್ಮ ||

511
ನರಕ ತಪ್ಪಿತು ಧರ್ಮಜಂಗೆ, ದಿಟ, ಆದೊಡೇಂ? |
ನರಕದರ್ಶನದುಃಖ ತಪ್ಪದಾಯಿತಲ? ||
ದುರಿತತರುವಾರು ನೆಟ್ಟುದೊ, ನಿನಗಮುಂಟು ಫಲ |
ಚಿರಋಣದ ಲೆಕ್ಕವದು - ಮಂಕುತಿಮ್ಮ ||

512
ಆವ ಋಣಕೋಸುಗವೊ, ಆರ ಹಿತಕೋಸುಗವೊ |
ಆವಾವ ಕಾರಣಕೊ, ಆವ ಯೋಜನೆಗೋ ||
ನೋವ ನೀಂ ಪಡುವುದೇ ದೈವೇಚ್ಛೆಯಾಗಿರದೆ? |
ದೈವ ಕುರುಡೆನ್ನದಿರು - ಮಂಕುತಿಮ್ಮ ||

513
ಆವುದರಿನಾವಾಗ ದೈವ ತಾನೊಲಿದೀತೊ? |
ಪೂರ್ವಿಕದ ನಿಯತಿಯನದೆಂದು ಸಡಲಿಪುದೋ? ||
ಭಾವಿಸುಕೃತವದೆಂದು ಪೂರ್ವದುರಿತಕೆ ಮಿಗಿಲೊ? |
ದೈವಿಕರಹಸ್ಯವದು - ಮಂಕುತಿಮ್ಮ ||

514
ಎನಗೆ ಸುಖವಿಲ್ಲವದರಿಂ ದೇವರಿರನೆನ್ನು- |
ವನುಮಿತಿಯ ನೀಂ ಗೆಯ್ಯೆ, ಸುಖಿಯದೇನೆನುವಂ? ||
ತನುಬಾಹ್ಯಕರಣದನುಭವಕಿಂತ ಸೂಕ್ಷ್ಮತರ- |
ದನುಭವವ ನೀನರಸೊ - ಮಂಕುತಿಮ್ಮ ||

515
ಎನ್ನ ಬೇಡಿಕೆ ನಷ್ಟವಹುದೆಂತು ದೇವನಿರೆ? |
ಅನ್ಯಾಯ ಜಗವೆಲ್ಲ; ದೇವನಿರನೆನುತ ||
ತನ್ನ ತನ್ನನುಭವವ ನಂಬಲೋರೊರ್ವನುಂ |
ಭಿನ್ನವಾಗದೆ ಸತ್ಯ? - ಮಂಕುತಿಮ್ಮ ||

516
ಅನುಭವದ ಪರಿ ನೂರ್ವರಿಗೆ ನೂರು ನೂರು ಪರಿ |
ದಿನವೊಂದರೊಳೆ ಅದೊಬ್ಬಂಗೆ ನೂರು ಪರಿ ||
ಎಣಿಪುದಾರನುಭವವನ್, ಆವ ಪ್ರಮಾಣದಲಿ? |
ಮಣಲ ಗೋಪುರವೊ ಅದು - ಮಂಕುತಿಮ್ಮ ||

517
ಮನುಜಸಾಕಲ್ಯದನುಭವಕೆ ಮಿತಿಗೊತ್ತುಂಟೆ? |
ದಿನದಿನವು ಕಡಲಲೆಗಳಂತೆ ಪರಿವುದದು ||
ಅನುಮಿತಿಯ ನಿರ್ಧಾರವದರಿಂ ನಿರಾಧಾರ |
ದನಿ ನೂರು ನರನೆದೆಗೆ - ಮಂಕುತಿಮ್ಮ ||

518
ಅರ್ಥವುಂಟನುಭವಕ್ಕಾದೊಡದು ಮಿತದರ್ಥ |
ಸ್ವಾರ್ಥ ಮಿತವಾದಂತೆ ವಿಸ್ತರಿಪುದರ್ಥ ||
ಸಾರ್ಥಕವದಪ್ಪುದಾರ್ಷೇಯಾರ್ಥದೊಡವೆರೆಯೆ |
ಪಾರ್ಥನನುಭವದಂತೆ - ಮಂಕುತಿಮ್ಮ ||

519
ಪ್ರಾಲೇಯಗಿರಿಗುಹೆಯ ಗಂಗೆ ವೇದ ಪುರಾಣ |
ಕಾಳಿಂದಿ ಶೋಣೆ ಪೌರುಷ ಬುದ್ಧಿಯುಕ್ತಿ ||
ಮೂಲ ಸ್ವತಸ್ಸಿದ್ಧ ಸಂವಿದಾಪಗೆಗಿಂತು |
ಕಾಲದುಪನದಿ ನೆರವು - ಮಂಕುತಿಮ್ಮ ||

520
ತಿಳಿವಾವುದಿಳೆಗೆ ಯುಗಯುಗದ ಬೆಳಕಾಗಿತ್ತೊ |
ಹಳದೆಂದು ನೀನದನು ಕಳೆಯುವೆಯ, ಮರುಳೆ? ||
ತಳಹದಿಯದಲ್ತೆ ನಮ್ಮೆಲ್ಲ ಹೊಸ ತಿಳಿವಿಂಗೆ? |
ಹಳೆ ಬೇರು ಹೊಸ ತಳಿರು - ಮಂಕುತಿಮ್ಮ ||

521
ವೇದ ಲೋಕಾಚಾರ ನಿನ್ನನುಭವದ ಯುಕ್ತಿ |
ಶೋಧಿಸೀ ಮೂರನುಂ ಸಂವಾದಗೊಳಿಸು ||
ಸಾಧಿತಜ್ಞಾನ ನರಸಾಧ್ಯ ಪ್ರಮಾಣವದು |
ಹಾದಿ ಬೆಳಕದು ನಿನಗೆ - ಮಂಕುತಿಮ್ಮ ||

522
ಹೊಸ ಚಿಗುರು ಹಳೆ ಬೇರು ಕೂಡಿರಲು ಮರಸೊಬಗು |
ಹೊಸಯುಕ್ತಿ ಹಳೆತತ್ತ್ವದೊಡಗೂಡೆ ಧರ್ಮ ||
ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ |
ಜಸವು ಜನಜೀವನಕೆ - ಮಂಕುತಿಮ್ಮ ||

523
ವೇದಗಳು ಶಾಸ್ತ್ರಗಳು ಲೋಕನೀತಿಗಳೆಲ್ಲ |
ಹಾದಿತೋರಲು ನಿಶಿಯೊಳುರಿವ ಪಂಜುಗಳು ||
ಸೌಧವೇರಿದವಂಗೆ, ನಭವ ಸೇರಿದವಂಗೆ |
ಬೀದಿಬೆಳಕಿಂದೇನೊ? - ಮಂಕುತಿಮ್ಮ ||

524
ಪಿರಿದೆಲ್ಲ ಮತನೀತಿಗಳಿಗಿಂತ ಜೀವಿತವು |
ನೆರೆಬಂದ ನದಿ ದಡಕೆ ಬಾಗಿ ಪರಿಯುವುದೇಂ? ||
ಧರುಮಸೂಕ್ಷ್ಮದ ತಿಳಿವೆ ಲೋಕಸೂತ್ರದ ಸುಳುವು |
ಅರಸು ಜೀವಿತ ಹಿತವ - ಮಂಕುತಿಮ್ಮ ||

525
ಜಗ ಬೆಳೆದು ಚಿಗುರುತಿರೆ ಶಾಸ್ತ್ರ ಕರಟಿರಲಹುದೆ? |
ನಿಗಮಸಂತತಿಗೆ ಸಂತತಿಯಾಗದಿಹುದೆ? ||
ಬಗೆಬಗೆಯ ಜೀವಸತ್ತ್ವವಿಕಾಸವಾಗುತಿರ- |
ಲೊಗೆವುದೈ ವಿಜ್ಞಾನ - ಮಂಕುತಿಮ್ಮ ||

526
ಸೆರೆಬಿದ್ದು ಧರ್ಮಪಾದಪ ನಿಲದು ಮತಗಳಲಿ |
ಜರೆಯಿಂದ ಬರಡಹುದು ಮಠದ ನೆರಳಿನಲಿ ||
ಪರಸತ್ತ್ವರಸ ವಿಶ್ವಜೀವನದ ಬೇರ್ಗಳಿಂ |
ನೆರೆಯಲಾ ತರು ಸೊಂಪು - ಮಂಕುತಿಮ್ಮ ||

527
ಜೀವಕಾರಣಮೂಲ ಗೂಢವಾಗಿರ್ದೊಡಂ |
ಧೀವಿಕಾಸದ ಬೆಳಕನಾದನಿತು ಗಳಿಸಿ ||
ಕೈವಲ್ಯಪಥವನರಸುತ ಯಾತ್ರಿಸಲೆಬೇಕು |
ದೀವಿಗೆಯು ಮತಿಯೊಂದೆ - ಮಂಕುತಿಮ್ಮ ||

528
ಭಕ್ತಿ ನಂಬುಗೆ ಸುಲಭ; ಭಜನೆ ವಂದನೆ ಸುಲಭ |
ತತ್ತ್ವಶೋಧನೆ ಕಷ್ಟ; ಮತಿಕಾರ್ಯ ಕಷ್ಟ ||
ಸುತ್ತುವುದು ಗಿರಿಸುತ್ತ ಸುಳುವೆಂದು ಲೋಕಜನ |
ಹತ್ತುವನು ತಾಪಸಿಯೊ - ಮಂಕುತಿಮ್ಮ ||

529
ಪರದೈವವನು ತೊರೆಯೆ ಗತಿ ನರನಿಗಿಲ್ಲ ದಿಟ |
ನರನಿಲ್ಲದಿರೆ ದೇವನನು ಕೇಳ್ವರಾರು? ||
ಪುರುಷತೆಯೆ ಸೇತುವೆ ಮೃಗತ್ವದಿಂ ದಿವ್ಯತೆಗೆ |
ಮುರಿಯದಿರು ಸೇತುವೆಯ - ಮಂಕುತಿಮ್ಮ ||

530
ನಿನ್ನ ಕಣ್ ಕಿವಿ ಮನಗಳರಿವಷ್ಟು ನಿನ್ನ ಜಗ |
ನಿನ್ನನಳಿಸುವ ನಗಿಸುವೆಲ್ಲ ನಿನ್ನಂಶ ||
ಉನ್ನತಿಗೆ ನೀನೇರಿದಂತೆ ಜಗ ವಿಸ್ತರಿಸಿ |
ಸಣ್ಣತನ ಸವೆಯುವುದು - ಮಂಕುತಿಮ್ಮ ||

531
ಶಶ್ವದ್ವಿಕಾಸನ ಹ್ರಾಸನ ಕ್ರಮಗಳಿಂ |
ವಿಶ್ವದಲಿ ನರ್ತಿಸುತೆ ಪೌರುಷೋನ್ನತಿಯೊಳ್ ||
ಸ್ವಸ್ವರೂಪವನರಸುವಾಟ ಪರಚೇತನದ |
ಹೃಷ್ಯದ್ವಿಲಾಸವೆಲೊ - ಮಂಕುತಿಮ್ಮ ||

532
ಕಟ್ಟಡದ ಪರಿಯನಿಟ್ಟಿಗೆಯೆಂತು ಕಂಡೀತು? |
ಗಟ್ಟಿ ನಿಲದದು ಬೀಳೆ ಗೋಡೆ ಬಿರಿಯುವುದು ||
ಸೃಷ್ಟಿಕೋಟೆಯಲಿ ನೀನೊಂದಿಟಿಕೆ; ಸೊಟ್ಟಾಗೆ |
ಪೆಟ್ಟು ತಿನ್ನುವೆ ಜೋಕೆ - ಮಂಕುತಿಮ್ಮ ||

533
ಪುರುಷಂ ಸ್ವತಂತ್ರನೋ? ದೈವವಿಧಿ ಪರವಶನೊ? |
ಎರಡುಮನಿತಿನಿತುಳ್ಳ ತೋಳಿನಂತಿಹನೋ? ||
ತಿರುಗುವುದು ಮಡಿಸುವುದು ತೋಳ್ ಮೈಯಕಟ್ಟಿನಲಿ |
ನರನಂತು ಮಿತಶಕ್ತ - ಮಂಕುತಿಮ್ಮ ||

534
ಹರಡುವುದು ಸಾಜ ವಾಯುಗೆ ಸೈಸದದು ತಡೆಯನ್ |
ಉರುಳಿಪುದದೆಲ್ಲವನು ತಡೆಗಳಿಲ್ಲದಿರೆ ||
ನರನ ಸ್ವತಂತ್ರಗತಿಯಂತು ಹಿತಮಿತವಿರಲು |
ಅರಸೊ ಮಿತಿಯಾಯತಿಯ - ಮಂಕುತಿಮ್ಮ ||

535
ನೀರ ನೆರೆ ತನ್ನೆದುರಿನಣೆಕಟ್ಟನೊದೆಯುವುದು |
ಊರನದು ಕೊಚ್ಚುವುದು ಬದಿಯ ಕಟ್ಟದಿರೆ ||
ಏರಿಗಳನಿಕ್ಕೆಲದಿ ನಿಲಿಸೆ ಹರಿವುದು ಸಮನೆ |
ಪೌರುಷದ ನದಿಯಂತು - ಮಂಕುತಿಮ್ಮ ||

536
ಎಸಳಿನಡಿ ಗಿಡದ ಬಿಗಿ; ಮೇಲೆ ಗಾಳಿಯ ಸರಸ |
ಕುಸುಮದ ಕ್ಷೇಮವಾ ಬಿಗಿತ ಬಿಡುತೆಗಳಿಂ ||
ಕುಶಲ ಸೌರಭವ ನಿರ್ಯತ್ನ ಸ್ವತಂತ್ರದಿಂ |
ಪಸರಿಪಾ ನಯ ಸುಖವೊ - ಮಂಕುತಿಮ್ಮ ||

537
ತರಣಿಶಶಿಪಥಗಳನು, ಧರೆವರುಣಗತಿಗಳನು |
ಮರುದಗ್ನಿವೇಗಗಳ ನಿಯಮಿಸಿಹ ದಕ್ಷನ್ ||
ನರನರಸಿಕೊಳಲಿ ದಾರಿಯ ತನಗೆ ತಾನೆಂದು |
ತೊರೆದನೇತಕೆ ನಮ್ಮ? - ಮಂಕುತಿಮ್ಮ ||

538
ತನ್ನ ಬೆವರಿನ ಕೊಳದಿ ತಾಂ ಮುಳುಗಿ ತೇಲುತ್ತೆ |
ಧನ್ಯನಾನೆನ್ನುವನದೊರ್ವ ಸ್ವತಂತ್ರನ್ ||
ಪುಣ್ಯತೀರ್ಥದೊಳಿಳಿದು ಕರಗಲ್ ಸ್ವತಂತ್ರ ತಾನ್ |
ಎನ್ನುವವನಿನ್ನೊರ್ವ - ಮಂಕುತಿಮ್ಮ ||

539
ಬರಿಯ ಬುದ್ಧಿವಿಮರ್ಶೆಗರಿದು ಜೀವನತತ್ತ್ವ |
ಪರಿಶೋಧಿಸುವರಾರು ಬುದ್ಧಿಋಜುತೆಯನು? ||
ಸ್ಫುರಿಸುವುದದೆಂದೊ ತಾನೇ ಮಿಂಚುಬಳ್ಳಿವೊಲು |
ಪರತತ್ತ್ವ ಮನದೊಳಗೆ - ಮಂಕುತಿಮ್ಮ ||

540
ನರವಿವೇಕವದೇನು ಬರಿಯ ಮಳೆನೀರಲ್ಲ |
ಕೆರೆಯ ನೀರ್ ಊರ ಮೈಸೋಂಕುಗಳ ಬೆರಕೆ ||
ಧರೆಯ ರಸವಾಸನೆಗಳಾಗಸದ ನಿರ್ಮಲದ |
ವರವ ಕದಡಾಗಿಪುವು - ಮಂಕುತಿಮ್ಮ ||

541
ಪ್ರಾಕ್ತನದ ವಾಸನೆಯೆ ಮನಕೆ ಮೊದಲಿನ ಮಂತ್ರಿ |
ಯುಕ್ತಿಗಳ ತನಗೊಪ್ಪುವಂತೆ ತಿರುಗಿಪುದು ||
ಸೂಕ್ತವೆನಿಪುದು ಸಹಜರುಚಿ ತನ್ನ ತರ್ಕವನೆ |
ಗುಪ್ತದೊಳು ಕುಟಿಲವಿದು - ಮಂಕುತಿಮ್ಮ ||

542
ಆಶೆ ಮಂಥರೆ, ನರವಿವೇಚನೆಯೆ ಕೈಕೇಯಿ |
ಬೀಸೆ ಮನದುಸಿರು ಮತಿದೀಪವಲೆಯುವುದು ||
ವಾಸನೆಗಳನುಕೂಲ ಸತ್ಯತರ್ಕತೆ ಶೂಲ |
ಶೋಷಿಸಾ ವಾಸನೆಯ - ಮಂಕುತಿಮ್ಮ ||

543
ಭಾವದಾವೇಶದಿಂ ಮನವಶ್ವದಂತಿರಲಿ |
ಧೀವಿವೇಚನೆಯದಕೆ ದಕ್ಷರಾಹುತನು ||
ತೀವಿದೊಲವಿನ ದಂಪತಿಗಳಾಗೆ ಮನಬುದ್ಧಿ |
ಜೀವಿತವು ಜೈತ್ರಕಥೆ - ಮಂಕುತಿಮ್ಮ ||

544
ಅನುಭವದ ಪಾಲೊಳು ವಿಚಾರ ಮಂಥನವಾಗೆ |
ಜನಿಯಿಕುಂ ಜ್ಞಾನನವನೀತವದೆ ಸುಖದಂ ||
ಗಿಣಿಯೋದು ಪುಸ್ತಕಜ್ಞಾನ; ನಿನ್ನನುಭವವೆ |
ನಿನಗೆ ಧರುಮದ ದೀಪ - ಮಂಕುತಿಮ್ಮ ||

545
ಬುದ್ಧಿಪ್ರಕಾಶದಿಂದಂತರನುಭವಶೋಧೆ |
ಸಿದ್ಧವಾ ಶೋಧೆಯಿಂ ಸತ್ಯಸಂವೀಕ್ಷೆ ||
ಶುದ್ಧಸತ್ಯವ ಜೀವಿತಪ್ರಶ್ನೆಗನ್ವಯಿಪ |
ಪದ್ಧತಿಯೆ ಧರ್ಮವೆಲೊ - ಮಂಕುತಿಮ್ಮ ||

546
ಶ್ರೀಯನಾಯುವ ಬಲವ ಜಯವ ಬೇಡಿರ್ದೊಡಂ |
ಗಾಯತ್ರಿಯನೆ ಪರಮಮಂತ್ರವೆಂದಾರ್ಯರ್ |
ಧೀಯಂ ಪ್ರಚೋದಿಸೆಂದನುದಿನದಿ ಬೇಡಿದರು |
ಶ್ರೇಯಸ್ಸು ಧೀಮಹಿಮೆ - ಮಂಕುತಿಮ್ಮ ||

547
ಮತಿ ನಯನದಂತೆ ಮುಂದಿರ್ಪುದನು ನೋಡುವುದು |
ಮಿತವದರ ಕೆಲಸ, ಹೆಳವನ ಚಲನೆಯಂತೆ ||
ಗತಿಶಕ್ತಿಯದಕೆ ಮನವೆಂಬ ಚರಣದ ಬಲದೆ |
ಮತಿಬಿಟ್ಟ ಮನ ಕುರುಡು - ಮಂಕುತಿಮ್ಮ ||

548
ಪುರುಷಬುದ್ಧಿಯೆ ಸಾಕು ವರಸಿದ್ಧಿಗೆಂದಲ್ಲ |
ಪರಮೇಶಕರುಣೆಯನವಶ್ಯವೆಂದಲ್ಲ ||
ಚರಣ ನಡೆವನಿತು ಕಣ್ಣರಿವನಿತು ದೂರ ನೀಂ |
ಚರಿಸದಿರೆ ಲೋಪವಲ? - ಮಂಕುತಿಮ್ಮ ||

549
ವಿಧಿಗೆ ನೀಂ ಕಾರ್ಯನಕ್ಷೆಯ ವಿಧಿಸ ಹೊರಡದಿರು |
ಅಧಿಕಾರಿ ನೀನಲ್ಲ; ವಿಧಿ ಬೆಪ್ಪನಲ್ಲ ||
ಹದವರಿತು ವಿಧಿ ತಾನೆ ಕುದುರಿಸುವನೆಲ್ಲವನು |
ಅದಟದಿರು ನೀನವನ - ಮಂಕುತಿಮ್ಮ ||

550
ತಾಳಿ ಮೆಲುಮೆಲನೊಮ್ಮೆ ಧಾಳಿ ರಭಸದಿನೊಮ್ಮೆ |
ಹೇಳದೆಯೆ ಕೇಳದೆಯೆ ಬಹನು ವಿಧಿರಾಯ ||
ಕೀಳ ಮೇಲಾಗಿಪನು ಮೇಲ ಕೀಳಾಗಿಪನು |
ತಾಳುಮೆಯಿನಿರು ನೀನು - ಮಂಕುತಿಮ್ಮ ||

551
ನಿನ್ನ ಹೆಗಲಿನ ಹೊರೆಯ ದೈವಭುಜಕೇರಿಸುವ |
ಸನ್ನಾಹ ಸಾಗೀತೆ? ದೈವವೊಪ್ಪೀತೆ? ||
ಮನ್ನಿಸಲಿ ವಿಧಿ ನಿನ್ನ ಬೇಡಿಕೆಯ, ಭಿನ್ನಿಸಲಿ, |
ನಿನ್ನ ಬಲವನು ಮೆರಸೊ - ಮಂಕುತಿಮ್ಮ ||

552
ಶ್ರುತಿಯರ್ಥ ವಿಶದವಪ್ಪುದು ಪುರುಷಭಾಷ್ಯದಿಂ |
ಶ್ರುತಿಮತಿಗಳನ್ಯೋನ್ಯಪರಿಪೂರಕಂಗಳ್ ||
ಯುತಿಯೊಳವು ಸೇರಿರಲು ಸತ್ಯದರ್ಶನ ನಿನಗೆ |
ಕೃತಸಮನ್ವಯನಾಗು - ಮಂಕುತಿಮ್ಮ ||

553
ಚೂರುಗಳು ಹದಿನಾರು ಚಂದ್ರಮಂಡಲಕಂತೆ |
ನೂರಾರು ಚೂರುಗಳು ಸತ್ಯಚಂದ್ರನವು ||
ಸೇರಿಸುತಲವುಗಳನು ಬಗೆಯರಿತು ಬೆಳಸುತಿರೆ |
ಸಾರ ಋತಪೂರ್ಣಿಮೆಯೊ - ಮಂಕುತಿಮ್ಮ ||

554
ತಿಳಿವಿಗೊಳಿತೆನಿಸಿದುದು ನಡೆಯೊಳೇತಕ್ಕರಿದು? |
ಕುಳಿ ಮೇಡು ದೂರ ಮತಿಮನಸುಗಳ ನಡುವೆ ||
ಒಳಗಿನಾಯೆಣ್ಣೆಬತ್ತಿಗಳೆರಡುಮೊಡವೆರೆಯೆ |
ಬೆಳಕು ಜೀವೋನ್ನತಿಗೆ - ಮಂಕುತಿಮ್ಮ ||

555
ಧರ್ಮಸಂಕಟದಿ ಮನ ತಲ್ಲಣಿಸುತಿರುವಂದು |
ನಿರ್ಮಥಿಸು ನಿನ್ನಾತ್ಮವನೆ ಮಮತೆ ಬಿಟ್ಟು ||
ನಿರ್ಮಮದ ಸದ್ವಿವೇಕದ ದೀಪಕಿಂತ ನೀಂ |
ನೆಮ್ಮಲಿನ್ನೇನಿಹುದೊ? - ಮಂಕುತಿಮ್ಮ ||

556
ಶಕ್ತಿಮೀರ್ದ ಪರೀಕ್ಷೆಗಳನು ವಿಧಿ ನಿಯಮಿಸಿರೆ |
ಯುಕ್ತಿಮೀರ್ದ ಪ್ರಶ್ನೆಗಳನು ಕೇಳುತಿರೆ ||
ಚಿತ್ತವನು ತಿರುಗಿಸೊಳಗಡೆ; ನೋಡು, ನೋಡಲ್ಲಿ |
ಸತ್ತ್ವದಚ್ಛಿನ್ನ ಝರಿ - ಮಂಕುತಿಮ್ಮ ||

557
ಅಂತರಂಗದ ಗವಾಕ್ಷಗಳ ತೆರೆದಿಡಲಲ್ಲಿ |
ಚಿಂತೆ ಕುಮುಲದು, ಹೊಗೆಗಳೊತ್ತವಾತ್ಮವನು ||
ಶಾಂತಿ ಬೇಳ್ಪೊಡೆ ಮನೆಗೆ ಗೋಡೆವೊಲೆ ಕಿಟಿಕಿಯುಂ |
ಸಂತತದಪೇಕ್ಷಿತವೊ - ಮಂಕುತಿಮ್ಮ ||

558
ಆಳವನು ನೋಡಿ ಬಗೆದಾಡುವಾ ಮಾತಿಂಗೆ |
ರೂಢಿಯರ್ಥವದೊಂದು ಗೂಢಾರ್ಥವೊಂದು ||
ವಾರಿಧಿಯ ದಾಂಟುವುಡುಪಕೆ ಗಾಳಿಪಟವೊಂದು |
ಕೋಲು ಹುಟ್ಟೊಂದು ಬಲ - ಮಂಕುತಿಮ್ಮ ||

559
ಪರಮಪದದಲಿ ನೋಡು : ಬೇರುಗಳ್ ವ್ಯೋಮದಲಿ |
ಧರೆಗಿಳಿದ ಕೊಂಬುರಂಬೆಗಳು, ಬಿಳಲುಗಳು ||
ಚಿರಂಜೀವಿವೃಕ್ಷವಿದು ವಿಶ್ವಜೀವಾಶ್ವತ್ಥ |
ಪರಿಕಿಸಿದರರ್ಥವನು - ಮಂಕುತಿಮ್ಮ ||

560
ಜೀವನದ ಮೂಲ ಮೇಲಿಹುದು ಪರಮೋರ್ಧ್ವದಲಿ |
ತೀವಿರ್ಪುದದು ಕೆಳಗೆ ನಮ್ಮ ಲೋಕದಲಿ ||
ನಾವದರ ಕಡ್ಡಿಯೆಲೆ, ಚಿಗುರುವೆವು, ಬಾಡುವೆವು |
ಸಾವು ಮರಕೇನಿಲ್ಲ - ಮಂಕುತಿಮ್ಮ ||

561
ಒಂದು ಕಡೆ ಚಿಗುರುತಲಿ, ಒಂದು ಕಡೆ ಬಾಡುತಲಿ |
ಕಂದುತಿರೆ ಕೊಂಬೆ, ಮುಂಡದಲಿ ಹಬ್ಬುತಲಿ ||
ಎಂದೆಂದುಮಶ್ವತ್ಥ ಹಳೆಹೊಸದು; ತಾನದಾ |
ಸ್ಪಂದನವೊ ಬ್ರಹ್ಮನದು - ಮಂಕುತಿಮ್ಮ ||

562
ಎಲೆಗಳನು ಕಡ್ಡಿ, ಕಡ್ಡಿಯ ರಂಬೆಕೊಂಬೆಗಳು |
ತಳೆದು ಪೆರ್ಚಿಸುತಿಹುವು ಮರದ ಬಾಳ್ಸಿರಿಯ ||
ಸ್ಥಲವೊಂದು ನಿನಗಿಹುದು ವಿಶ್ವವೃಕ್ಷದೊಳಂತು |
ಹಳಿಯದಿರು ನಿನ್ನಿರವ - ಮಂಕುತಿಮ್ಮ ||

563
ಬಿಳಲಲ್ಲಿ, ಬೇರಲ್ಲ, ಮುಂಡಕಾಂಡಗಳಲ್ಲ |
ತಳಿರಲ್ಲ, ಮಲರಲ್ಲ, ಕಾಯಿಹಣ್ಣಲ್ಲ ||
ಎಲೆ ನೀನು; ವಿಶ್ವವೃಕ್ಷದೊಳ್ ಎಲೆಯೊಳೊಂದು ನೀಂ |
ತಿಳಿದದನು ನೆರವಾಗು - ಮಂಕುತಿಮ್ಮ ||

564
ಎತ್ತಲೋ ಕಾಡುಮಬ್ಬಿನ ಬಳ್ಳಿ ಮೊಗ್ಗಿನಲಿ |
ಚಿತ್ರರಚನೆಗದೇಕೆ ತೊಡಗುವಳ್ ಪ್ರಕೃತಿ? ||
ಕೃತ್ಯಕ್ಕೆ ತಾಂ ತರುವ ಶಕ್ತಿಗುಣಪೂರ್ಣತೆಯೆ |
ಸಾರ್ಥಕವೊ ಜೀವಿತಕೆ - ಮಂಕುತಿಮ್ಮ ||

565
ಕಾಡುಹಕ್ಕಿ ಹುಳಕ್ಕೆ ವರ್ಣಚಿತ್ರಗಳೇಕೆ? |
ನೋಡುವರ ಕಣ್ಣೊಲವ ಬೇಡುವಳೆ ಸೃಷ್ಟಿ? ||
ಮಾಡುವಾ ಮಾಟಗಳನಾದನಿತು ಬೆಳಗಿಪುದು |
ರೂಢಿಯಾ ಪ್ರಕೃತಿಯದು - ಮಂಕುತಿಮ್ಮ ||

566
ಆರಣ್ಯಕದ ಪುಷ್ಪಗಳ ಮೂಸುವವರಾರು? |
ಆರಿಹರು ಪತಗದುಡುಪನು ಹುಡುಕಿ ಮೆಚ್ಚಲ್? ||
ಬೇರೊಬ್ಬರೆಣಿಕೆಯಿಲ್ಲದೆ ಪ್ರಕೃತಿ ತನಗೆಂದೆ |
ಸ್ವಾರಸ್ಯವೆಸಗುವಳೊ! - ಮಂಕುತಿಮ್ಮ ||

567
ಮನದ ಭಾವಗಳ ಪೂರ್ಣದಿನೊರೆಯಲರಿತ ಕವಿ |
ಇನಿತನುಂ ಬಿಡದೆ ರೂಪಿಸಲರಿತ ಶಿಲ್ಪಿ ||
ಅನುರೂಪದಿಂದ ವಾಸ್ತವಗೊಳಿಪ ಕೃತಿಚತುರ |
ಧನಿಯರಿವರೆಲ್ಲಿಹರೊ? - ಮಂಕುತಿಮ್ಮ ||

568
ಮನದ ಭಾವಿತಕೊಪ್ಪುವುಪಕರಣ ನಮಗಿಲ್ಲ |
ಎಣಿಕೆಗಳ ಪೂರಯಿಪ ಸಾಧನಗಳಿಲ್ಲ ||
ಜನುಮಜನುಮಗಳಿಂತು ಪೇಚಾಟ, ತಿಣಕಾಟ |
ಮುನಿವುದಾರಲಿ, ಪೇಳು? - ಮಂಕುತಿಮ್ಮ ||

569
ಕ್ಷಿತಿರುಹಕೆ ಸುಮಫಲಮುಹೂರ್ತ ನಿಶ್ಚಿತವೇನು? |
ಮತಿಮನಂಗಳ ಕೃಷಿತಪಃಫಲವುಮಂತು ||
ಸತತಕೃಷಿ, ಬೀಜಗುಣ, ಕಾಲವರ್ಷಗಳೊದವೆ |
ಪ್ರತಿಭೆ ವಿಕಸಿತವಹುದೊ - ಮಂಕುತಿಮ್ಮ ||

570
ವಕ್ತ್ರವುಂಟೆಲ್ಲರಿಗೆ, ವರ್ಚಸೋರೊರ್ವರಿಗೆ |
ಕತ್ತಿ ಪಣ್ಯದೊಳುಂಟು, ಶಕ್ತಿ ಸಹಜದಲಿ ||
ವ್ಯಕ್ತಿಪ್ರಭಾವವೀ ಲೋಕಚರಿತೆಯ ಕೀಲು |
ಹಸ್ತವದು ದೈವಕೆಲೊ - ಮಂಕುತಿಮ್ಮ ||

571
ನಿನಗಿರದ ಕಣ್ ಬಾಯಿ ವಾಲ್ಮೀಕಿಗೆಂತಾಯ್ತು? |
ಮುನಿಕವಿತೆಗೆಂತು ನಿನ್ನೆದೆಯೊಳೆಡೆಯಾಯ್ತು? ||
ಘನಮಹಿಮನೊಳ್ ಜ್ವಲಿಸುತಿತರರೊಳು ನಿದ್ರಿಸುತೆ |
ಅನಲನೆಲ್ಲರೊಳಿಹನು - ಮಂಕುತಿಮ್ಮ ||

572
ಪುರುಷಯೋಚನೆಯಿಲ್ಲ ಮುರಿದು ಮಣ್ಣಹುದೆಂದು |
ಕೊರಗದಿರು; ಕೆಟ್ಟೆನೆಂದೆಂದುಮೆನ್ನದಿರು ||
ಶರಧಿಯೊಳು ಮೀನೊಂದು ಪುಟ್ಟಲೇಂ ಸಾಯಲೇಂ? |
ಪರವೆಯೇನಿಲ್ಲವೆಲೊ - ಮಂಕುತಿಮ್ಮ ||

573
ಹೋರಾಡು ಬೀಳ್ವನ್ನಮೊಬ್ಬೊಂಟಿಯಾದೊಡಂ |
ಧೀರಪಥವನೆ ಬೆದಕು ಸಕಲಸಮಯದೊಳಂ ||
ದೂರದಲಿ ಗೊಣಗುತ್ತ ಬಾಳ್ವ ಬಾಳ್ಗೇನು ಬೆಲೆ? |
ಹೋರಿ ಸತ್ತ್ವವ ಮೆರಸು - ಮಂಕುತಿಮ್ಮ ||

574
ಹೋರು ಧೀರತೆಯಿಂದ, ಮೊಂಡುತನದಿಂ ಬೇಡ |
ವೈರ ಹಗೆತನ ಬೇಡ, ಹಿರಿ ನಿಯಮವಿರಲಿ ||
ವೈರಾಗ್ಯ ಕಾರುಣ್ಯ ಮೇಳನವೆ ಧೀರತನ |
ಹೋರುದಾತ್ತತೆಯಿಂದ - ಮಂಕುತಿಮ್ಮ ||

575
ಕಕ್ಷಿಗಾರನವೊಲೇ ಪೋರುತ್ತೆ ನ್ಯಾಯಕ್ಕೆ |
ಸಾಕ್ಷಿಯವೊಲಿರು ಕಡೆಗೆ ತೀರ್ಪಾಗುವಂದು ||
ಭಿಕ್ಷುವೊಲು ಕಾಲ ಸವೆಯಿಸಿ ಲೋಕಯಾತ್ರೆಯಲಿ |
ಪಕ್ಷಿವೊಲು ಮನದೊಳಿರು - ಮಂಕುತಿಮ್ಮ ||

576
ತನ್ನ ಶಕ್ತಿಯನಳೆದು, ತನ್ನ ಗುಣಗಳ ಬಗೆದು |
ಸನ್ನಿವೇಶದ ಸೂಕ್ಷ್ಮವರಿತು, ಧೃತಿದಳೆದು ||
ತನ್ನ ಕರ್ತವ್ಯಪರಿಧಿಯ ಮೀರದುಜ್ಜುಗಿಸೆ |
ಪುಣ್ಯಶಾಲಿಯ ಪಾಡು - ಮಂಕುತಿಮ್ಮ ||

577
ಕಿಡಿ ಸಣ್ಣದನು ಮೇಲೆ ಬಿದ್ದ ಕೊರಡಾರಿಪುದು |
ಸುಡುವುದಾ ಕಿಡಿಯುರಿಯೆ ನೂರು ಕೊರಡುಗಳ ||
ಉಡುಗಿ ನಿನ್ನಾತ್ಮವಿರೆ ಬಿಡು ಹೆಗ್ಗೆಲಸಗಳನು |
ತೊಡಗಾತ್ಮ ಬಲಿತಂದು - ಮಂಕುತಿಮ್ಮ ||

578
ಬೆಟ್ಟಕ್ಕೆ ಸನ್ನೆಹಾಕಿರುವ ಮಹದಾಶಿಗನೆ |
ಗಟ್ಟಿಯೇ? ಸೊಟ್ಟಾಗದೇ ಸನ್ನೆಗೋಲು? ||
ರಟ್ಟೆಯೇ ಮುರಿದೀತು ಮೈಮರೆತ ಸಾಹಸದಿ |
ಎಷ್ಟುಚಿತವೋ ನೋಡು - ಮಂಕುತಿಮ್ಮ ||

579
ಬೆನ್ನಿನಗಲವನಳೆದು ಹೊರೆಗೆ ನೀನದನೊಡ್ಡು |
ತನ್ನದೆನುವುದನು ವಿಧಿ ತಾನೆ ಕೊಳಲಿ ಬಿಡು ||
ಬನ್ನ ನಿನಗೊದಗಲದನಾತ್ಮಶಿಕ್ಷಣವೆನ್ನು |
ಮಾನ್ಯದೊಪ್ಪಂದವಿದು - ಮಂಕುತಿಮ್ಮ ||

580
ದೊರೆಯ ವೇಷವ ಧರಿಸಿ ಮರೆಯುವೆಯ ಮೀಸೆಯನು? |
ತಿರುಕಹಾರುವನಾಗಿ ಮೀಸೆ ತಿರಿಚುವೆಯ? ||
ಇರುವುದವನವನಿಗವನವನ ತಾಣದ ಧರ್ಮ |
ಅರಿವೆ ಋತುಗತಿಯಂತೆ - ಮಂಕುತಿಮ್ಮ ||

581
ದೇವರದಿದೆಲ್ಲ ದೇವರಿಗೆಲ್ಲವೆಂದೊರಲು- |
ತಾವುದನುಮವನ ನಿರ್ಣಯಕೆ ಬಿಡದೆಯೆ ತಾಂ ||
ದಾವನ್ತಬಡುತ ತನ್ನಿಚ್ಛೆಯನೆ ಘೋಷಿಸುವ |
ಭಾವವೆಂತಹ ಭಕುತಿ? - ಮಂಕುತಿಮ್ಮ ||

582
ಸರಿಯಾಗಲಿಲ್ಲವದು ಸರಿಯಿದಲ್ಲವೆನುತ್ತ |
ಹರಡಿಕೊಳಬೇಡ ಮುಳ್ಳನು ಹಾಸಿಗೆಯಲಿ ||
ಕೊರೆಯಾದೊಡೇನೊಂದು? ನೆರೆದೊಡೇನಿನ್ನೊಂದು? |
ಒರಟು ಕೆಲಸವೊ ಬದುಕು - ಮಂಕುತಿಮ್ಮ ||

583
ಅಷ್ಟದಿಗ್ಗಜವೆ ನೀನ್? ಆದಿಶೇಷನೆ ನೀನು? |
ಕಷ್ಟಭಾರವಿದೆಂದು ನಿಟ್ಟುಸಿರ ಬಿಡುವೆ! ||
ನಿಷ್ಠುರದ ನಿನ್ನ ಕನಿಕರ ಜಗಕೆ ಬೇಕಿಲ್ಲ |
ಎಷ್ಟಾದರಷ್ಟೆ ಸರಿ - ಮಂಕುತಿಮ್ಮ ||

584
ಎಲ್ಲಕಂ ನಿನಗಿಲ್ಲ ಕರ್ತವ್ಯದಧಿಕಾರ |
ಇಲ್ಲದೆಯುಮಿಲ್ಲ ನಿನಗಾ ಹೊರೆಯ ಪಾಲು ||
ಸಲ್ಲಿಸಾದನಿತ, ಮಿಕ್ಕುದು ಪಾಲಿಗನ ಪಾಡು |
ಒಲ್ಲನವನ್ ಅರೆನಚ್ಚ - ಮಂಕುತಿಮ್ಮ ||

585
ಫಲವೇನು ಹೆಣಗಾಡಿ ಹೋರಾಡಿ ಧರೆಯೊಳಗೆ? |
ಸಲಿಸದೊಂದನುಮೊಂದನುಂ ದೈವ ಬಿಡದು ||
ಹೊಲಸೆಲ್ಲವೆಲ್ಲಪಾಳ್, ಬಾಳ್ಗೆ ತಳಹದಿಯಿಲ್ಲ |
ಗಲಿಬಿಲಿಯಿದೆನಬೇಡ - ಮಂಕುತಿಮ್ಮ ||

586
ಕೆಂಡಮುಸುಡಿಯ ದೈವವೆಲ್ಲವನು ದಹಿಸುತಿರೆ |
ದಂಡಧರನತ್ತಲೆಲ್ಲವನು ಕೆಡಹುತಿರೆ ||
ಮೊಂಡುಘಾಸಿಯ ಲಾಭ ಪಿಂಡಮಾತ್ರವು ತಾನೆ?
ಭಂಡಬಾಳಲೆ ನಮದು? - ಮಂಕುತಿಮ್ಮ ||

587
ಅಹುದು ಬಾಳ್ ಭಂಡತನವಿಹದಿ ಬಾಳ್ ಮುಗಿಯುವೊಡೆ |
ಕಹಿಯೊಗರು ಕಾಯಿ, ಮಿಡಿತನದೊಳದು ಮುಗಿಯೆ ||
ಸಿಹಿಯಹುದು ಕಾಯಿ ಹಣ್ಣಾಗೆ, ಜೀವಿತವಂತು |
ಮಹಿಮೆಗೊಳುವುದು ಮಾಗೆ - ಮಂಕುತಿಮ್ಮ ||

588
ಜಟ್ಟಿ ಕಾಳಗದಿ ಗೆಲ್ಲದೊಡೆ ಗರಡಿಯ ಸಾಮು |
ಪಟ್ಟುವರಸೆಗಳೆಲ್ಲ ವಿಫಲವೆನ್ನುವೆಯೇಂ? ||
ಮುಟ್ಟಿ ನೋಡವನ ಮೈಕಟ್ಟು ಕಬ್ಬಿಣ ಗಟ್ಟಿ |
ಗಟ್ಟಿತನ ಗರಡಿ ಫಲ - ಮಂಕುತಿಮ್ಮ ||

589
ಪರಿಪರಿ ಪರೀಕ್ಷೆಗಳು, ಪರಿಭವದ ಶಿಕ್ಷೆಗಳು |
ಗರಡಿಯ ವ್ಯಾಯಾಮ ಮನಬುದ್ಧಿಗಳಿಗೆ ||
ಪುರುಷತೆಗೆ ಪೆಟ್ಟುಗಳಿನಾದ ಗಂತಿಯೆ ವಿಜಯ |
ಬಿರಿದ ನನೆ ಫಲಕೆ ಮನೆ - ಮಂಕುತಿಮ್ಮ ||

590
ಪುರುಷನ ಸ್ವಾತಂತ್ರ್ಯವವನ ತೋಳ್ಗಿರುವಷ್ಟು |
ಪರಿಧಿಯೊಂದರೊಳದರ ಯತ್ನಕೆಡೆಯುಂಟು ||
ತಿರುಗುವುದು ಮಡಿಸುವುದು ನಿಗುರುವುದು ನೀಳುವುದು |
ತೊರೆದು ಹಾರದು ತೋಳು - ಮಂಕುತಿಮ್ಮ ||

591
ಬದುಕು ಕದನದ ತೆರನೆ; ನೋಡೆ ಲೀಲೆಯ ಕದನ |
ಮೊದಲುಮುಗಿವುಗಳಿರದ ಚಿತ್ರಲೀಲೆಯದು ||
ಇದರೊಳೆಂದಿಗುಮಿರದು ಸೋಲ್ಗೆಲವು ಕಡೆಯೆಣಿಕೆ |
ಸದರದಾಟವೆ ಮುಖ್ಯ - ಮಂಕುತಿಮ್ಮ ||

592
ನರಜೀವನದ ರಣದಿ ವಿಧಿಯ ಬಲವೊಂದು ಕಡೆ |
ಚಿರವಿವೇಕದಿ ಬೆಳೆದ ನಲುಮೆಯೊಂದು ಕಡೆ ||
ಉರುಬುತಿರೆ ಪುರುಷಂಗೆ ನಲುಮೆಯುಳಿತವೆ ಗೆಲವು |
ಪುರುಷತನವೇ ವಿಜಯ - ಮಂಕುತಿಮ್ಮ ||

593
ಸತ್ತೆನೆಂದೆನಬೇಡ; ಸೋತೆನೆಂದೆನಬೇಡ |
ಬತ್ತಿತೆನ್ನೊಳು ಸತ್ತ್ವದೂಟೆಯೆನಬೇಡ ||
ಮೃತ್ಯುವೆನ್ನುವುದೊಂದು ತೆರೆಯಿಳಿತ; ತೆರೆಯೇರು |
ಮತ್ತೆ ತೋರ್ಪುದು ನಾಳೆ - ಮಂಕುತಿಮ್ಮ ||

594
ಬಿಡುವಿಲ್ಲದೀ ಜೀವಿತಾಪಣದ ಸರಕೆಣಿಸೆ |
ಕಡೆಯೆಂದು? ಮುಗಿಯದಿಹ ಲಾಭನಷ್ಟಗಳ ||
ಕಡತದೊಳ್ ಅದೆಂದಿನಾ ಲೆಕ್ಕವೇ ತೀರ್ಮಾನ? |
ಬಿಡು ಲಾಭದಾತುರವ - ಮಂಕುತಿಮ್ಮ ||

595
ಎನಿತು ನೀಂ ಗೆಲಿದೆಯೆಂದೆನರು ಬಲ್ಲವರೆಂದು- |
ಮೆನಿತು ನೀಂ ಪೋರ್ದೆಯೆನಿತನು ಪೊತ್ತೆಯೆನುವರ್ ||
ಗಣನೆ ಸಲುವುದು ತೋರ್ದ ಪೌರುಷಕೆ, ಜಯಕಲ್ಲ |
ದಿನದಿನದ ಗರಡಿಯಿದು - ಮಂಕುತಿಮ್ಮ ||

596
ಗರಡಿ ಸಾಮಿಂದೆ ನೀನೆದುರಾಳ ಗೆಲದೊಡೇಂ? |
ಬರದಿಹುದೆ ನಿನಗನಿತು ಕಾಯಾಂಗಪಟುತೆ? ||
ವರ ಸದ್ಯಕ್ಕಿಲ್ಲದೊಡೆ ಬರಿದಾಗುವುದೆ ಪೂಜೆ? |
ಪರಿಶುದ್ಧ ಮನವೆ ವರ - ಮಂಕುತಿಮ್ಮ ||

597
ಬಿತ್ತ ಮಳೆಗಲವೋಲು ಯತ್ನ ದೈವಿಕ ನಮಗೆ |
ಯುಕ್ತದೊಳಗೆರಡುಮನುವಾಗೆ ಬೆಳೆ ಹುಲುಸು ||
ಯತ್ನ ಬಿಟ್ಟರೆ ಲೋಪ, ದೈವ ತಾಂ ಬಿಡೆ ತಾಪ |
ಗೊತ್ತಿಲ್ಲ ಫಲದ ಬಗೆ - ಮಂಕುತಿಮ್ಮ ||

598
ಬದುಕೊಂದು ಕದನವೆಂದಂಜಿ ಬಿಟ್ಟೋಡುವನು |
ಬಿದಿಯ ಬಾಯಿಗೆ ಕವಳವಾಗದುಳಿಯುವನೆ? ||
ಎದೆಯನುಕ್ಕಾಗಿಸುತ, ಮತಿಗದೆಯ ಪಿಡಿದು ನೀ- |
ನೆದುರು ನಿಲೆ ಬಿದಿಯೊಲಿವ - ಮಂಕುತಿಮ್ಮ ||

599
ತಿರುಗಿಸಲಿ ವಿಧಿರಾಯನಿಚ್ಛೆಯಿಂ ಯಂತ್ರವನು |
ಚರಿಕೆ ತಾರಾಗ್ರಹಗಳಿಷ್ಟವೋದಂತೆ ||
ಪರಿಹಾಸದಿಂ ಕರ್ಮ ದೈವ ಕೇಕೆಗಳಿಡಲಿ |
ಸ್ಥಿರಚಿತ್ತ ನಿನಗಿರಲಿ - ಮಂಕುತಿಮ್ಮ ||

600
ಬದುಕು ಜಟಕಾಬಂಡಿ, ವಿಧಿಯದರ ಸಾಹೇಬ |
ಕುದುರೆ ನೀನ್, ಅವನು ಪೇಳ್ದಂತೆ ಪಯಣಿಗರು ||
ಮದುವೆಗೋ ಮಸಣಕೋ ಹೋಗೆಂದ ಕಡೆಗೋಡು |
ಪದ ಕುಸಿಯೆ ನೆಲವಿಹುದು - ಮಂಕುತಿಮ್ಮ ||

601
ಇರುವ ಕೆಲಸವ ಮಾಡು ಕಿರಿದೆನದೆ ಮನವಿಟ್ಟು |
ದೊರೆತುದ ಹಸಾದವೆಂದುಣ್ಣು ಗೊಣಗಿಡದೆ ||
ಧರಿಸು ಲೋಕದ ಭರವ ಪರಮಾರ್ಥವನು ಬಿಡದೆ |
ಹೊರಡು ಕರೆ ಬರಲ್ ಅಳದೆ - ಮಂಕುತಿಮ್ಮ ||

602
ಮಾಯೆಯೆಂಬಳ ಸೃಜಿಸಿ, ತಾಯನಾಗಿಸಿ ಜಗಕೆ |
ಆಯಸಂಗೊಳುತ ಸಂಸಾರಿಯಾಗಿರುವಾ ||
ನಾಯಕ ಬ್ರಹ್ಮನ್ ಅನುಯಾಯಿಗಳು ನಾವೆಲ್ಲ |
ಹೇಯವದರೊಳಗೇನೊ - ಮಂಕುತಿಮ್ಮ ||

603
ಧರಣಿಗೋಳವು ಮೂಸೆ; ಜೀವಗಳನದರೊಳಗೆ |
ಪರಿಶುದ್ಧಿಗೊಳಿಸುವುದು ಸಂಸಾರತಾಪ ||
ಪರಿಪರಿಯ ಬಂಧುಧರ್ಮದಿನ್ ಅಹಂಮತಿ ಕರಗೆ |
ಹರಡಿ ಹಬ್ಬುವುದಾತ್ಮ - ಮಂಕುತಿಮ್ಮ ||

604
ಹೊಸಹೊಸಬನಾಗುವನನುಕ್ಷಣಂ ಮಾನವನು |
ವಸುಧೆಯಾ ಮೂಸೆಯಲಿ ಪುಟಪಾಕವಾಂತು ||
ರಸಮೂರ್ತಿಯಾಗುವನು ಜಗದಾತ್ಮಮತಿ ಬೆಳೆಯೆ |
ಕಸವೆಲ್ಲ ಕಳೆದವನು - ಮಂಕುತಿಮ್ಮ ||

605
ಉದರಶಿಖಿಯೊಂದುಕಡೆ, ಹೃದಯಶಿಖಿಯೊಂದುಕಡೆ |
ಕುದಿಸದಿರೆ ಜೀವಶಿಲೆ ಮೃದುವಪ್ಪುದೆಂತು? ||
ಬದುಕಿನುರಿಯಲಿ ಕರಗಿ ತಿಳಿಯಾಗದಿಹ ಜೀವ |
ಪುದಿಯದಾತ್ಮಾರ್ಣವದಿ - ಮಂಕುತಿಮ್ಮ ||

606
ತ್ರಾಸಿನಲಿ ಕಪ್ಪೆಗಳ ಸರಿಕೂಡಿಸುವ ಚತುರಿ |
ಸಂಸೃತಿ ದ್ವಂದ್ವಗಳ ಸಮತೂಗಲರಿವಂ ||
ಬೀಸುಕತ್ತಿಗಳ ಮಧ್ಯದಿ ನೂಲಮೇಲ್ ನಡೆವ |
ಸಾಸವೀ ಗೃಹಧರ್ಮ - ಮಂಕುತಿಮ್ಮ ||

607
ಪ್ರೇಮಾತಿಶಯವಿರದ ದಾಂಪತ್ಯ ವರ್ಧಿಸದು |
ವ್ಯಾಮೋಹಕೆಡೆಗೊಟ್ಟೊಡದು ನಿಗಳವಹುದು ||
ಸಾಮರಸ್ಯವನೆಂತು ಕಾಣ್ಬುದೀ ವಿಷಯದಲಿ? |
ಆಮಿಷದ ತಂಟೆಯಿದು - ಮಂಕುತಿಮ್ಮ ||

608
ಕೈಕಯಿಯವೊಲು ಮಾತೆ, ಸತ್ಯಭಾಮೆವೊಲು ಸತಿ |
ಸಾಕಿ ಸಂತಸವೆರೆಯೆ ಸಂಸಾರ ಲೀಲೆ ||
ಬೇಕು ಮತ್ಸರ ಮಮತೆ ಮೋಹಂಗಳಾವೇಶ |
ಲೋಕನಾಟಕಕಾಗಿ - ಮಂಕುತಿಮ್ಮ ||

609
ಆವ ಜೀವದ ಪಾಕವಾವನುಭವದಿನಹುದೊ! |
ಆವ ಪಾಪಕ್ಷಯವದಾವ ಪುಣ್ಯದಿನೋ! ||
ಕಾವಿರದೆ ಪಕ್ವವಹ ಜೀವವಿಳೆಯೊಳಗಿರದು |
ನೋವೆಲ್ಲ ಪಾವಕವೊ - ಮಂಕುತಿಮ್ಮ ||

610
ಕ್ಷುತ್ತುಮಮತೆಗಳು ಜೀವಕೆ ಕುಲಿಮೆಸುತ್ತಿಗೆಗಳ್ |
ಉತ್ತಮವದೆನಿಪುವುವು ಕಿಟ್ಟಗಳ ಕಳೆದು ||
ಚಿತ್ತಸಂಸ್ಕಾರಸಾಧನವಯ್ಯ ಸಂಸಾರ |
ತತ್ತ್ವಪ್ರವೃತ್ತಂಗೆ - ಮಂಕುತಿಮ್ಮ ||

611
ಮನೆಯೆ ಮಠವೆಂದು ತಿಳಿ, ಬಂಧು ಬಳಗವೆ ಗುರುವು |
ಅನವರತಪರಿಚರ್ಯೆಯವರೊರೆವ ಪಾಠ ||
ನಿನಗುಳಿದ ಜಗವ ಮುಟ್ಟಿಪ ಸೇತು ಸಂಸಾರ |
ಮನಕೆ ಪುಟಸಂಸ್ಕಾರ - ಮಂಕುತಿಮ್ಮ ||

612
ಕಾಷಾಯವೇಂ ತಪಸು? ಗೃಹಲೋಕನಿರ್ವಾಹ |
ವೇಷತಾಳದ ತಪಸು, ಕಠಿನತರ ತಪಸು ||
ಲೇಸಿನಿಂದದು ಸಾಗೆ ಬೇಕು ಶಮ ದಮ ಸಮತೆ |
ಆಸಿಧಾರವ್ರತವೊ - ಮಂಕುತಿಮ್ಮ ||

613
ನಯನಯುಗದಿಂ ಜಗವ ಪೊರೆದು, ನಿಟಿಲಾಕ್ಷಿಯಿಂ |
ಲಯವಡಿಸುವುದದೇನು ಶಿವಯೋಗಲೀಲೆ? ||
ಜಯಿಸಿ ಮದನನ ಬಳಿಕ ತನ್ನೊಡಲೊಳ್ ಉಮೆಯನ- |
ನ್ವಯಿಸಿಕೊಂಡಿಹುದೇನು? - ಮಂಕುತಿಮ್ಮ ||

614
ಮಾರನಂ ದಂಡಿಸಿರೆ ಗೌರಿಯಿಂ ಭಯವೇನು? |
ಚಾರುಸಹಕಾರಿಯವಳೆಂದು ಶಿವನೊಲಿದನ್ ||
ಮೀರೆ ಮೋಹವನು ಸಂಸಾರದಿಂ ಭಯವೇನು? |
ದಾರಿ ಕೆಳೆಯದು ನಿನಗೆ - ಮಂಕುತಿಮ್ಮ ||

615
ಹಾಲ ಕಾಯಿಸಿ ಹೆಪ್ಪನಿಕ್ಕಿ ಕಡೆದೊಡೆ, ಮೊದಲು |
ಮೇಲೆ ಕಾಣದ ಬೆಣ್ಣೆ ತೇಲಿ ಬರುವಂತೆ ||
ಬಾಳನೀ ಜಗದ ಮಂತುವು ಕಡೆಯಲೇಳುವುದು |
ಆಳದಿಂದಾತ್ಮಮತಿ - ಮಂಕುತಿಮ್ಮ ||

616
ಭುಕ್ತಿಪಥ ಮುಕ್ತಿಪಥ ಬೇರೆಬೇರೆಯವಲ್ಲ |
ಯುಕ್ತದಿಂದೆರಡುಮಂಚುಗಳೊಂದೆ ಪಥಕೆ ||
ಸತ್ತ್ವಶೋಧನೆ ಲೋಕಸಂಸ್ಕಾರದಿಂ ನಿನಗೆ |
ಶಕ್ತಿಯಧ್ಯಾತ್ಮಕದು - ಮಂಕುತಿಮ್ಮ ||

617
ಧ್ವನಿತ ಪ್ರತಿಧ್ವನಿತ ಮನುಜಜೀವಿತವೆಲ್ಲ |
ಕುಣಿವುದವನೆದೆ ಜಗತ್ಪ್ರಕೃತಿ ಪಾಡುವವೊಲ್ ||
ಇನಿದಕೊಲವಳಲಿಗನುತಾಪ; ಸೆಣಸಿಗೆ ಬೀರ |
ಘನಗರ್ಜಿತಕೆ ದೈನ್ಯ - ಮಂಕುತಿಮ್ಮ ||

618
ಜಗದ ಸಂತಾಪ ಸಂತಸ ಸಂಭ್ರಮಂಗಳುಲಿ |
ಬಗಿದು ನರನೆದೆಯ, ಜೀವವ ಪಿಡಿದು ಕುಲುಕೆ ||
ಸೊಗಯಿಪುದು ಮನಸಿಗದು ಕವಿಕಲಾರಸಿಕರ್ಗೆ |
ಜಗ ಸೂರ್ಯಂ ನೀಂ ಕಮಲ - ಮಂಕುತಿಮ್ಮ ||

619
ಪ್ರತ್ಯೇಕ ಸುಖವ, ನೀಂ ಪ್ರತ್ಯೇಕ ಸಂಪದವ- |
ನತ್ಯಾಶೆಯಿಂದರಸಿ ಮಿಕ್ಕೆಲ್ಲ ಜಗವ- ||
ನೊತ್ತಟ್ಟಿಗಿಡುವೆನೆನೆ, ನಷ್ಟವಾರಿಗೊ ಮರುಳೆ? |
ಬತ್ತುವುದು ನಿನ್ನಾತ್ಮ - ಮಂಕುತಿಮ್ಮ ||

620
ಲೋಕಜೀವನದೆ ಮಾನಸದ ಪರಿಪಾಕವಾ |
ಪಾಕದಿಂ ಮತಿಶುದ್ಧಿಯದರಿನೊಳದೃಷ್ಟಿ ||
ಸಾಕಲ್ಯದಾತ್ಮ ಸಂದರ್ಶನಕೆ ಕರಣವದು |
ಲೋಕದಿಂ ನಿರ್ಲೋಕ - ಮಂಕುತಿಮ್ಮ ||

621
ಧರಿಸಿರ್ಪುದಲ ಧರ್ಮ? ಧರಿಸು ಜೀವನಧುರವ |
ಚರಿಸು ಲೋಕದ ಮಾರ್ಗಗಳಲಿ ಹಿತವರಿತು ||
ಸರಿಪಡಿಸಿ ದಾರಿಗಳ ಕೆರೆ ತೋಪು ಸತ್ರಗಳ |
ನೆರವಾಗು ಪಯಣಕ್ಕೆ - ಮಂಕುತಿಮ್ಮ ||

622
ಧರ್ಮನಿರ್ಣಯ ನಿನಗೆ ಜನ್ಮಜನ್ಮಾಂತರದ |
ಕರ್ಮಸಂದರ್ಭದಿಂದೊಗೆವುದದನರಿತು ||
ನಿರ್ಮಮದ ನಿರ್ಮಲೋತ್ಸಹದ ನೀನಾಚರಿಸೆ |
ಬ್ರಹ್ಮ ಸಾಮೀಪ್ಯವೆಲೊ - ಮಂಕುತಿಮ್ಮ ||

623
ಗೃಹದಿ ರಾಷ್ಟ್ರದಿ ಸಮಾಜದಿ ಲೋಕಸಂಗತದಿ |
ವಿಹಿತದ ಸ್ಥಾನದಿಂ ಸಹಜಗುಣಬಲದಿಂ- ||
ದಿಹಪರಸಮನ್ವಯದೆ ಸರ್ವಹಿತಸಂಸ್ಥಿತಿಗೆ |
ಸಹಕರಿಪುದಲೆ ಧರ್ಮ - ಮಂಕುತಿಮ್ಮ ||

624
ಹತ್ಯೆಯೋ ಹನ್ಯತೆಯೊ ವಿಜಯವೋ ಪರಿಭವವೊ |
ಕ್ಷತ್ರಿಯಂ ಸ್ವಾರ್ಥಮಂ ಗಣಿಸುವನೆ ರಣದೊಳ್? ||
ಕೃತ್ಯನಿರ್ಣಯ ಬಾಹ್ಯಲಾಭನಷ್ಟದಿನಲ್ಲ |
ಆತ್ಮಋಣವದು ಜಗಕೆ - ಮಂಕುತಿಮ್ಮ ||

625
ಕೆಟ್ಟ ಪ್ರಪಂಚವಿದು, ಸುಟ್ಟ ಕರಿ ನರಮನಸು |
ಬಿಟ್ಟುಬಿಡಲರಿದದನು, ಕಟ್ಟಿಕೊಳೆ ಮಷ್ಟು ||
ಮುಟ್ಟಿ ಮುಟ್ಟದವೋಲುಪಾಯದಿಂ ನೋಡದನು |
ಗಟ್ಟಿ ಪುರುಳೇನಲ್ಲ - ಮಂಕುತಿಮ್ಮ ||

626
ಕುಸುಮಸಖನೇಂ ನೀನು? ಹಿಸುಕದೆಯೆ ಮೂಸದನು |
ಹಿಸುಕೆ ಕಟುಕಂಪು; ನರಲೋಕವದರವೊಲೇ ||
ಗಸಿಯ ಕಲಕದೆ ಕೊಳದ ಮೇಲ್ತಿಳಿಯ ಕುಡಿದು ನಡೆ |
ಹಸನು ಹಗುರದ ಬಾಳು - ಮಂಕುತಿಮ್ಮ ||

627
ವಿಷಯಸನ್ನಿಧಿಗಿಂತ ಮಸಣಸನ್ನಿಧಿ ಲೇಸು |
ವಿಷದೂಟಕಿಂತುಪೋಷಿತವೆ ಲೇಸಲ್ತೆ? ||
ತೃಷೆ ಕನಲೆ, ಜೀವ ಬಿಸಿಬಾಣಲಿಗೆ ಬಿದ್ದ ಹುಳು |
ಶಿಶು ಪಿಶಾಚಿಯ ಕೈಗೆ - ಮಂಕುತಿಮ್ಮ ||

628
ಋಣವ ತೀರಿಸಬೇಕು, ಋಣವ ತೀರಿಸಬೇಕು |
ಋಣವ ತೀರಿಸುತ ಜಗದಾದಿಸತ್ತ್ವವನು ||
ಜನದಿ ಕಾಣುತ್ತದರೊಳ್ ಒಂದುಗೂಡಲುಬೇಕು |
ಮನೆಯೊಳಗೆ ಮಠ ನಿನಗೆ - ಮಂಕುತಿಮ್ಮ ||

629
ವೈವಿಧ್ಯವೊಂದು ಕೃಪೆ ನಮಗಿರುವ ಕಷ್ಟದಲಿ |
ಆವರಿಸದಳಲ್ ಎಲ್ಲರನುಮೊಂದೆ ಸಮಯ ||
ನೋವಿಲ್ಲದರು ನೊಂದವರನು ಸಂತಯಿಸುತಿರೆ |
ಜೀವನವು ಕಡಿದಹುದೆ? - ಮಂಕುತಿಮ್ಮ ||

630
ಸ್ಥೂಲ ಸೂಕ್ಷ್ಮವಿವೇಕರಹಿತೇಷ್ಟ ಬಂಧುಜನ |
ಕಾಲದಂಷ್ಟ್ರಕೆ ನಿನ್ನ ಮೃದುಗೊಳಿಪ ಭಟರು ||
ಸಾಲವನು ನಿನ್ನಿಂದ ಸಲಿಸಿಕೊಳಬಂದವರು |
ತಾಳುಮೆಯಿನವರೊಳಿರು - ಮಂಕುತಿಮ್ಮ ||

631
ಸರಿಗೆಪಂಚೆಯೊ ಹೊದಕೆ, ಹರಕುಚಿಂದಿಯೊ ಮೈಗೆ |
ಪರಮಾನ್ನಭೋಜನವೊ, ತಿರುಪೆಯಂಬಲಿಯೋ ||
ಪರಿಣಾಮದಲಿ ಧನಿಕ ಬಡವರಿರ್ವರುಮೊಂದೆ |
ಕರುಬು ಕೊರಗೇತಕೆಲೊ? - ಮಂಕುತಿಮ್ಮ ||

632
ಕಿವುಡುತನ ತಪ್ಪೀತೆ ರನ್ನಕುಂಡಲದಿಂದ? |
ತೊವಲು ಜಬ್ಬಲು ಬಿಳದೆ ಮೃಷ್ಟಾನ್ನದಿಂದ? ||
ಭುವಿಯ ಪರಿಣಾಮದಲಿ ಸಿರಿಬಡತನಗಳೊಂದೆ |
ಜವರಾಯ ಸಮವರ್ತಿ - ಮಂಕುತಿಮ್ಮ ||

633
ಸಾಧ್ಯಪಡದಾರಿಗಂ ನರಭಾಲಪಟ್ಟವನು |
ಶುದ್ಧಪಡಿಸಲು ತೊಡೆದು ಪೂರ್ವದೆಲ್ಲವನು ||
ಹೊದ್ದೆ ಹರಿಯಲಿ ಬೇಕು ಕರ್ಮಶೇಷದ ಪಟವ |
ಬುದ್ಧಿನುಡಿ ಸೈರಣೆಯೆ - ಮಂಕುತಿಮ್ಮ ||

634
ಯುದ್ಧವಾಗಲಿ ರಾಜ್ಯವಿದ್ಯೆಯಾಗಲಿ ಶಾಸ್ತ್ರ- |
ವೃದ್ಧಿಯಾಗಲಿ ನರನ ಹಣೆಯಿನಳಿಯಿಸದಾ ||
ಕ್ಷುದ್ರಕಾರ್ಪಣ್ಯದನ್ಯಾಯದನಿತಿನಿತುಳಿಕೆ- |
ಯಿದ್ದೆಯಿರುವುದು ನಮಗೆ - ಮಂಕುತಿಮ್ಮ ||

635
ಗುದ್ದಲಿಯಿನಾದೀತೆ ಮಲೆ ಕಣಿವೆ ಸಮದ ನೆಲ? |
ಮದ್ದು ತಡೆವುದೆ ಮುಪ್ಪು ಕಳ್ಳನವೊಲಮರೆ? ||
ಯುದ್ಧತಾಪದೆ ಶಾಂತಿಶೀತಲತೆಯುದಿಸೀತೆ? |
ಸಿದ್ಧವಿರು ಸೈರಣೆಗೆ - ಮಂಕುತಿಮ್ಮ ||

636
ಸಾಸಿರದ ಯುಕ್ತಿ ಸಾಹಸದ ನೀನೆಸಗುತಿರು |
ಲೇಸು ಫಲ ದೊರೆಗೆ ನಿನ್ನೆಲ್ಲ ಪೌರುಷಕಂ ||
ಶೇಷ ನಿನಗುಳಿವುದೆಂತಾದೊಡಂ ನೋವಿನಿತು |
ಸೈಸದನು ನೀನಳದೆ - ಮಂಕುತಿಮ್ಮ ||

637
ಸಿರಿದರಿದ್ರತೆಗಳ್ಗೆ ಫಲದೊಳಂತರ ಕಿರಿದು |
ಸರಿತಪ್ಪುಗಳಿಗಂತು, ಜಾಣ್ ಬೆಪ್ಪುಗಳ್ಗಂ ||
ಮರಣವೆಲ್ಲವನೊಂದೆ ತೆರದಿ ಮುಸುಕುವುದೆಂದೊ |
ಪರವೆಯೆಂತಾದೊಡೇಂ? - ಮಂಕುತಿಮ್ಮ ||

638
ನಂಬು ದೇವರ, ನಂಬು, ನಂಬೆನ್ನುವುದು ಲೋಕ |
ಕಂಬನಿಯನಿಡುವ ಜನ ನಂಬಲೊಲ್ಲದರೇಂ? ||
ಹಂಬಲನೆ ತೊರೆದಂಗೆ ನಂಬಿಕೆಯ ಹಂಗೇಕೆ? |
ತುಂಬು ವಿರತಿಯ ಮನದಿ - ಮಂಕುತಿಮ್ಮ ||

639
ಮುಗ್ಧನಾಗದೆ ಭುಜಿಸು ಭುಜಿಸಲಿಹುದನು ಜಗದಿ |
ಮಾಧ್ವೀಕ ಭಯವಿರದು ಜಾಗರೂಕನಿಗೆ ||
ದೃಗ್ದೃಶ್ಯಚಿತ್ರಪ್ರಪಂಚದಲಿ ಸೇರಿ ನೀಂ |
ಮುಗ್ಧನಾಗದೆ ಸುಖಿಸು - ಮಂಕುತಿಮ್ಮ ||

640
ತಿರುಕ ನೀನೀ ಬ್ರಹ್ಮಪುರಿಯೊಳದ ಮರೆಯದಿರು |
ಸಿರಿಯಿರ್ದೊಡೇನು? ಪರಿಜನವಿರ್ದೊಡೇನು? ||
ತೊರೆದೆಲ್ಲ ಡಂಭಗಳ ನೀನೆ ನಿನ್ನಾಳಾಗು |
ಪರದೇಶಿವೊಲು ಬಾಳು - ಮಂಕುತಿಮ್ಮ ||

641
ಬಾನೊಳಿರುವುದೆ ಪಕ್ಷಿ ಪಾರ್ವ ದಾರಿಯ ನಕ್ಷೆ? |
ಮೀನು ನೀರೊಳು ನುಸುಳೆ ಪಥನಿಯಮವಿಹುದೆ? ||
ಏನೊ ಜೀವವನೆಳೆವುದೇನೊ ನೂಕುವುದದನು |
ನೀನೊಂದು ಗಾಳಿಪಟ - ಮಂಕುತಿಮ್ಮ ||

642
ದಾರಿಗುರಿಗಳ ಗೊತ್ತು ಕಗೆಗುಂಟೇನಯ್ಯಾ? |
ಆರ ಮನೆ ಸಂಡಿಗೆಯೊ, ಚುಂಡಿಲಿಯೊ, ಹುಳುವೋ ||
ಆರ ಪಿಂಡವೊ, ಏನೊ, ಎಂತೊ, ಆ ಬಾಳ ಗತಿ! |
ಮೀರಿದವನೇಂ ನೀನು? - ಮಂಕುತಿಮ್ಮ ||

643
ಬಾಳ್ಕೆಯಲಿ ನೂರೆಂಟು ತೊಡಕು ತಿಣಕುಗಳುಂಟು |
ಕೇಳ್ಕೆಮಾಣ್ಕೆಗಳಿಗವು ಜಗ್ಗವೊಂದಿನಿಸುಂ ||
ಗೋಳ್ಕರೆದರೇನು ಫಲ ಗುದ್ದಾಡಲೇನು ಫಲ |
ಪಲ್ಕಿರಿದು ತಾಳಿಕೊಳೊ - ಮಂಕುತಿಮ್ಮ ||

644
ತರಚುಗಾಯವ ಕೆರೆದು ಹುಣ್ಣನಾಗಿಪುದು ಕಪಿ |
ಕೊರತೆಯೊಂದನು ನೀನು ನೆನೆನೆನೆದು ಕೆರಳಿ ||
ಧರೆಯೆಲ್ಲವನು ಶಪಿಸಿ, ಮನದಿ ನರಕವ ನಿಲಿಸಿ |
ನರಳುವುದು ಬದುಕೇನೊ? - ಮಂಕುತಿಮ್ಮ ||

645
ಚಿಂತೆಸಂತಾಪಗಳು ಮನಸಿಗೆ ವಿರೇಚಕವೊ |
ಸಂತಸೋತ್ಸಾಹಗಳೆ ಪಥ್ಯದುಪಚಾರ ||
ಇಂತುಮಂತುಂ ನಡೆಯುತಿರುವುದಾತ್ಮ ಚಿಕಿತ್ಸೆ |
ಎಂತಾದೊಡಂತೆ ಸರಿ - ಮಂಕುತಿಮ್ಮ ||

646
ಶೀತವಾತಗಳಾಗೆ ದೇಹಕೌಷಧ ಪಥ್ಯ |
ಚೇತ ಕೆರಳಿರೆ ಕಣ್ಣುಕಿವಿಗಳಾತುರದಿಂ ||
ಪ್ರೀತಿಯಿಂದದನೊಲಿಸಿ ನೀತಿಯಲಿ ಶಿಕ್ಷಿಸುವು- |
ದಾತುಮದ ನೆಮ್ಮದಿಗೆ - ಮಂಕುತಿಮ್ಮ ||

647
ಮುಕ್ತಿಯೆಂಬುದು ಮನದ ಸಂಸ್ಥಿತಿಯೆ, ಬೇರಲ್ಲ |
ರಕ್ತಿ ವಿಪರೀತವದಕಾಗದಿರೆ ಮುಕ್ತಿ ||
ಯುಕ್ತಿಯಿಂ ಕರಣಚೇಷ್ಟಿತವ ತಿದ್ದುತೆ ಶಮಿಪ |
ಶಕ್ತಿವಂತನೆ ಮುಕ್ತ - ಮಂಕುತಿಮ್ಮ ||

648
ತರಿದುಬಿಡು, ತೊರೆದುಬಿಡು, ತೊಡೆದುಬಿಡು ನೆನಹಿಂದ |
ಕರೆಕರೆಯ ಬೇರುಗಳ, ಮನದ ಗಂಟುಗಳ ||
ಉರಕೆ ಸೊಗಸೆನಿಸಿದಾ ಪ್ರೀತಿಹಾರಮುಮೊರ್ಮೆ |
ಉರುಳಪ್ಪುದಾತ್ಮಕ್ಕೆ - ಮಂಕುತಿಮ್ಮ ||

649
ಜಗವೆನ್ನ ಮುದ್ದಿಸದದೇಕೆಂದು ಕೊರಗದಿರು |
ಮಗುವು ಪೆತ್ತರ್ಗೆ ನೀಂ, ಲೋಕಕೆ ಸ್ಪರ್ಧಿ ||
ಹೆಗಲಹೊರೆ ಹುಟ್ಟಿದರ್ಗೆಲ್ಲಮಿರುತಿರೆ, ನಿನ್ನ |
ರಗಳೆಗಾರಿಗೆ ಬಿಡುವೊ? - ಮಂಕುತಿಮ್ಮ ||

650
ರಾಗಿಮುದ್ದೆಯ ನುಂಗಿ ನಲಿದು ಬಾಳ್ವಾತಂಗೆ |
ಕಾಗೆ ಕದ್ದುಣುವ ಭಕ್ಷ್ಯವ ಕಂಡು ಕರುಬೆ? ||
ನೀಗುವುದು ಹಸಿವನ್ ಉಣಿಸೆಂತಪ್ಪುದಾದೊಡಂ |
ಬಾಗಿಸದಿರಾತ್ಮವನು - ಮಂಕುತಿಮ್ಮ ||

651
ಮೌನದಿಂದಂಬಲಿಯನುಂಡು ತಣಿಯುವ ಮಾನಿ |
ಶ್ವಾನನುಣುವೆಂಜಲೋಗರಕೆ ಕರುಬುವನೆ? ||
ಜ್ಞಾನಿ ನಡೆವಂ ವಿಷಯ ತರತಮವಿವೇಕದಲಿ |
ಮಾಣು ನೀಂ ತಲ್ಲಣವ - ಮಂಕುತಿಮ್ಮ ||

652
ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ |
ಚಿನ್ನದಾತುರಕಿಂತ ಹೆಣ್ನುಗಂಡೊಲವು ||
ಮನ್ನಣೆಯ ದಾಹವೀಯೆಲ್ಲಕಂ ತೀಕ್ಷ್ಣತಮ |
ತಿನ್ನುವುದದಾತ್ಮವನೆ - ಮಂಕುತಿಮ್ಮ ||

653
ಮನೆಯೊಳೋ ಮಠದೊಳೋ ಸಭೆಯೊಳೋ ಸಂತೆಯೊಳೊ |
ಕೊನೆಗೆ ಕಾಡೊಳೊ ಮಸಾಣದೊಳೊ ಮತ್ತೆಲ್ಲೋ ||
ಗಣನೆಗೇರಲಿಕೆಂದು ಜನ ತಪಿಸಿ ತೊಳಲುವುದು |
ನೆನೆಯದಾತ್ಮದ ಸುಖವ - ಮಂಕುತಿಮ್ಮ ||

654
ಹೆಸರು ಹೆಸರೆಂದು ನೀಂ ಬಸವಳಿವುದೇಕಯ್ಯ? |
ಕಸದೊಳಗೆ ಕಸವಾಗಿ ಹೋಹನಲೆ ನೀನು? ||
ಮುಸುಕಲೀ ಧರೆಯ ಮರೆವೆನ್ನನ್, ಎನ್ನುತ ಬೇಡು |
ಮಿಸುಕದಿರು ಮಣ್ಣಿನಲಿ - ಮಂಕುತಿಮ್ಮ ||

655
ಅಕ್ಕಿಯೊಳಗನ್ನವನು ಮೊದಲಾರು ಕಂಡವನು? |
ಅಕ್ಕರದ ಬರಹಕ್ಕೆ ಮೊದಲಿಗನದಾರು? ||
ಲೆಕ್ಕವಿರಿಸಿಲ್ಲ ಜಗ ತನ್ನಾದಿಬಂಧುಗಳ |
ದಕ್ಕುವುದೆ ನಿನಗೆ ಜಸ? - ಮಂಕುತಿಮ್ಮ ||

656
ಹೆಸರು ಹೆಸರೆಂಬುದೇಂ? ಕಸುರು ಬೀಸುವ ಗಾಳಿ |
ಹಸೆಯೊಂದು ನಿನಗೇಕೆ ಬ್ರಹ್ಮಪುರಿಯೊಳಗೆ? ||
ಶಿಶುವಾಗು ನೀಂ ಮನದಿ, ಹಸುವಾಗು, ಸಸಿಯಾಗು |
ಕಸಬೊರಕೆಯಾಗಿಳೆಗೆ - ಮಂಕುತಿಮ್ಮ ||

657
ಸಿರಿಮಾತ್ರಕೇನಲ್ಲ, ಪೆಣ್ಮಾತ್ರಕೇನಲ್ಲ |
ಕರುಬಿ ಜನ ಕೆಸರುದಾರಿಯಲಿ ಸಾಗುವುದು ||
ಬಿರುದ ಗಳಿಸಲಿಕೆಸಪ, ಹೆಸರ ಪಸರಿಸಲೆಸಪ |
ದುರಿತಗಳ್ಗೆಣೆಯುಂಟೆ? - ಮಂಕುತಿಮ್ಮ ||

658
ಎದ್ದೆದ್ದು ಬೀಳುತಿಹೆ, ಗುದ್ದಾಡಿ ಸೋಲುತಿಹೆ |
ಗದ್ದಲವ ತುಂಬಿ ಪ್ರಸಿದ್ಧನಾಗುತಿಹೆ ||
ಉದ್ಧರಿಸುವೆನು ಜಗವನೆನ್ನುತಿಹ ಸಖನೆ, ನಿ- |
ನ್ನುದ್ಧಾರವೆಷ್ಟಾಯ್ತೊ? - ಮಂಕುತಿಮ್ಮ ||

659
ಎಂದೊ ನಿನಗೊಂದುದಿನ ಮೂಗು ಮುರಿಯುವುದು ದಿಟ |
ವೃಂದಾರಕರು ಮತ್ಸರಿಸರೆ ಗರ್ವಿತರ? ||
ಸಂದರ್ಭಗಳನದಕೆ ಜೋಡಿಪನು ವಿಧಿರಾಯ |
ಅಂದಿಕೊಳ್ಳನೆ ನಿನ್ನ? - ಮಂಕುತಿಮ್ಮ ||

660
ಗರುವಭಂಗವನಾಗಿಸಿದನು ಗರುಡಂಗೆ ಹರಿ |
ಮುರಿಯಿಸಿದನಂತೆ ಫಲುಗುಣನ ಹೆಮ್ಮೆಯನು ||
ಕರುಬುವಂ ವಿಧಿ ಸೈಸನಾರೊಳಂ ದರ್ಪವನು |
ಶಿರವ ಬಾಗಿಹುದೆ ಸರಿ - ಮಂಕುತಿಮ್ಮ ||

661
ಇಳೆಯಿಂದ ಮೊಳಕೆಯೊಗೆವಂದು ತಮಟೆಗಳಿಲ್ಲ |
ಫಲ ಮಾಗುವಂದು ತುತ್ತೂರಿ ದನಿಯಿಲ್ಲ ||
ಬೆಳಕೀವ ಸೂರ್ಯಚಂದ್ರರದೊಂದು ಸದ್ದಿಲ್ಲ |
ಹೊಲಿ ನಿನ್ನ ತುಟಿಗಳನು - ಮಂಕುತಿಮ್ಮ ||

662
ಖದ್ಯೋತನಂತೆ ಬಿಡುಗೊಳದೆ ಧರ್ಮವ ಚರಿಸು |
ವಿದ್ಯುಲ್ಲತೆಯ ತೆರದಿ ತೇಜಗಳ ಸೂಸು ||
ಗೆದ್ದುದೇನೆಂದು ಕೇಳದೆ, ನಿನ್ನ ಕೈಮೀರೆ |
ಸದ್ದುಮಾಡದೆ ಮುಡುಗು - ಮಂಕುತಿಮ್ಮ ||

663
ಎರಡುತೆರ ಮೌಲ್ಯಂಗಳೆಲ್ಲಕಂ ಲೋಕದಲಿ |
ಪರಮಾರ್ಥಕೊಂದು, ಸಾಂಪ್ರತದರ್ಥಕೊಂದು ||
ಪರಿಕಿಸೆರಡಂ ನೀನು; ಹೊರಬೆಲೆಯ ಗುಣಿಪಂದು |
ಮರೆಯಬೇಡೊಳಬೆಲೆಯ - ಮಂಕುತಿಮ್ಮ ||

664
ನರನೊಂದುವೆವಹಾರಕೆರಡಾಯವೆಯ ಲೆಕ್ಕ |
ಹೊರಗಣನುಭೋಗಕೊಂದೊಳನೀತಿಗೊಂದು ||
ವರಮಾನ ದೇಹಕಾದೊಡೆ ಮಾನಸಕದೇನು? |
ಪರಿಕಿಸಾ ಲೆಕ್ಕವನು - ಮಂಕುತಿಮ್ಮ ||

665
ತನುವ ತಣಿಸುವ ತುತ್ತು ಮನಕೆ ನಂಜಾದೀತು |
ಮನಮೋಹ ಜೀವಕ್ಕೆ ಗಾಳವಾದೀತು ||
ಅನುಭವದ ಪರಿಣಾಮವೊಂದರಿಂದೊಂದಕ್ಕೆ |
ಗಣಿಸಾತ್ಮಲಾಭವನು - ಮಂಕುತಿಮ್ಮ ||

666
ನೂರಾರು ಸರಕುಗಳು ಜೀವಿತದ ಸಂತೆಯಲಿ |
ಊರಿನವು, ಕೇರಿಯವು, ಮನೆಯಾತ್ಮವದವು ||
ಬೇರೆ ಬೇರೆ ಪುರುಳ್ಗೆ ಬೇರೆ ನೆಲೆ, ಬೇರೆ ಬೆಲೆ |
ತಾರತಮ್ಯವೆ ತತ್ತ್ವ - ಮಂಕುತಿಮ್ಮ ||

667
ಮನೆಯ ಸುಡುತಿಹ ಬೆಂಕಿಯುರಿಯನಾರಿಸೆ ನುಗ್ಗು |
ಮನವ ಸುಡುವುರಿಯಿಂದ ದೂರ ನೀಂ ನಿಲ್ಲು ||
ತನುವಿಗುಪಕೃತಿಗೆಯ್ವ ಭರದಿ ನೀನಾತುಮದ |
ಅನುನಯವ ಕೆಡಿಸದಿರು - ಮಂಕುತಿಮ್ಮ ||

668
ಬಡಗಿ ಬೇಸಾಯಿ ಕರ್ಮಿಗರೇನು ಯೋಗಿಗಳೊ! |
ಮುಡುಪವರ ಮನಸೆಲ್ಲ ಕೈಯ ದುಡಿತಕ್ಕೆ ||
ಬಿಡುವಿರದು ಬಣಗು ಚಿಂತೆಗೆ, ಬುತ್ತಿ ಹಂಗಿರದು |
ಕಡಿದಲ್ಲವರ್ಗೆ ಬಾಳ್ - ಮಂಕುತಿಮ್ಮ ||

669
ಹಾಗೆಯೋ ಹೀಗೆಯೋ ಹೇಗೆ ಹೇಗೆಯೊ ಜನುಮ |
ಸಾಗಿ ಮುಗಿವುದು; ಮುಗಿದು ಮರೆವುದದೆ ಸುಕೃತ ||
ಈಗಲೋ ಆಗಲೋ ಎಂದೊ ಮುಗಿವುಂಟೆಂಬ |
ಭಾಗ್ಯವನು ನೆನೆದು ನಲಿ - ಮಂಕುತಿಮ್ಮ ||

670
ಬರುವೆಲ್ಲ ಬೇನೆಗಂ ಮದ್ದನಾರಿರಿಸಿಹರು? |
ನರರ ಕೀಳ್ತನಕೆಲ್ಲ ಪರಿಹಾರವೆಂತು? ||
ಕಿರಿದು ಪಲ್ಲನು ತಾಳಿಕೊಳಲೆಬೇಕಷ್ಟಿಷ್ಟು |
ಧರೆಯಂತರುಷ್ಣವನು - ಮಂಕುತಿಮ್ಮ ||

671
ತಿರಿದನ್ನವುಂಬಂಗೆ ಹುರುಡೇನು, ಹಟವೇನು |
ತಿರುಪೆಯಿಡುವರು ಕುಪಿಸಿ ಬಿರುನುಡಿಯ ನುಡಿಯೆ ||
ದುರದುರನೆ ನೋಡಿ ನೀನೆದುರುನುಡಿ ನುಡಿಯುವುದೆ? |
ಗರುವವೇತಕೆ ನಿನಗೆ? - ಮಂಕುತಿಮ್ಮ ||

672
ಯಾತ್ರಿಕರು ನಾವು, ದಿವ್ಯಕ್ಷೇತ್ರವೀ ಲೋಕ |
ಸತ್ರದಲಿ ನೇಮದಿಂದಿರಲಿಕೆಡೆಯುಂಟು ||
ರಾತ್ರಿ ಮೂರಾಯ್ತು ಹೊರಡೆನೆ ತೆರಳಿದೊಡೆ, ಪಾರು- |
ಪತ್ಯದವ ಮೆಚ್ಚುವನು - ಮಂಕುತಿಮ್ಮ ||

673
ಒಂದಗಳು ಹೆಚ್ಚಿರದು, ಒಂದಗಳು ಕೊರೆಯಿರದು |
ತಿಂದು ನಿನ್ನನ್ನಋಣ ತೀರುತಲೆ ಪಯಣ ||
ಹಿಂದಾಗದೊಂದು ಚಣ, ಮುಂದಕುಂ ಕಾದಿರದು |
ಸಂದ ಲೆಕ್ಕವದೆಲ್ಲ - ಮಂಕುತಿಮ್ಮ ||

674
ತೊಟ್ಟಿಲುಗಳೆಷ್ಟೊ ಮಸಣಗಳಷ್ಟು ಧರೆಯೊಳಗೆ |
ತೊಟ್ಟಿಲಿಗೆ ಹಬ್ಬ ಮಸಣವು ತೇಗುತಿರಲು ||
ಹುಟ್ಟಿದವರೆಲ್ಲ ಸಾಯದೆ ನಿಲ್ಲೆ, ಹೊಸತಾಗಿ |
ಹುಟ್ಟುವರ್ಗೆಡೆಯೆಲ್ಲಿ? - ಮಂಕುತಿಮ್ಮ ||

675
ಅಪರಿಮಿತವೇನಲ್ಲ ಜೀವನಕೆ ಲಭ್ಯ ಸುಖ |
ಚಪಲದಿಂ ಕಣ್ಣನತ್ತಿತ್ತಲಲಸುತಿರೆ ||
ಸ್ವಪರಿಸ್ಥಿತಿಯ ಧರ್ಮ ನಷ್ಟವಹುದೊಂದೆ ಫಲ |
ವಿಫಲ ವಿಪರೀತಾಶೆ - ಮಂಕುತಿಮ್ಮ ||

676
ಸ್ವಾರಸ್ಯವಮಿತಮಾರಿಗುಮಿರದು ಜೀವನದಿ |
ಪಾರದಿರ್ಕೆಯ ನೆನೆದು ನಡೆಯಲದು ಸಫಲ ||
ಸಾರಂಗಳ್ ಎಲ್ಲ ಪಣ್ಗಳವುಮ್ ಒಂದರೊಳಿರವು |
ಆರೋಗಿಸಿರುವುದನು - ಮಂಕುತಿಮ್ಮ ||

677
ಎಷ್ಟು ನೀನುಂಡರೇಂ? ಪುಷ್ಟಿ ಮೈಗಾಗುವುದು |
ಹೊಟ್ಟೆ ಜೀರ್ಣಿಸುವಷ್ಟೆ; ಮಿಕ್ಕುದೆಲ್ಲ ಕಸ ||
ಎಷ್ಟು ಗಳಿಸಿಟ್ಟೊಡಂ ನಿನಗೆ ದಕ್ಕುವುದೆಷ್ಟು? |
ಮುಷ್ಟಿ ಪಿಷ್ಟವು ತಾನೆ? - ಮಂಕುತಿಮ್ಮ ||

678
ಧನ್ಯತಮವಾ ಘಳಿಗೆ, ಪುಣ್ಯತಮವಾ ಘಳಿಗೆ |
ನಿನ್ನ ಮಮತೆಯ ನೂಲ ವಿಧಿಯೆ ಪರಿದಂದು ||
ಉನ್ನತಿಯಿನಾತ್ಮವನು ತಡೆದಿಡುವ ಪಾಶಗಳು |
ಛಿನ್ನವಾದಂದೆ ಸೊಗ - ಮಂಕುತಿಮ್ಮ ||

679
ಶಿಶುಗಳವಲಕ್ಕಿಬೆಲ್ಲದ ಸಂಭ್ರಮವ ನೋಡಿ |
ಹಸಿವನೊಂದುವನೆ ಹಿರಿಯನು? ನಲಿಯದಿಹನೆ? ||
ವಿಷಯಸಂಸಕ್ತಲೋಕವನ್ ಅನಾಸಕ್ತಿಯಿಂ- |
ದೊಸೆದುನೋಳ್ಪನು ಜಾಣ - ಮಂಕುತಿಮ್ಮ ||

680
ಉಂಡಾತನುಣುತಿರುವರನು ಕಾಣ್ಬ ನಲವಿಂದ |
ಪಂಡಿತನು ವಿದ್ಯಾರ್ಥಿಗಳಿಗೊರೆವ ನಯದಿಂ ||
ಕಂಡು ಲೋಕವನು ಸಂತೈಸುತಿರುವಂ ಜ್ಞಾನಿ |
ಕಂಡೆಲ್ಲರೊಳು ತನ್ನ - ಮಂಕುತಿಮ್ಮ ||

681
ಮುಂದೇನೊ, ಮತ್ತೇನೊ, ಇಂದಿಗಾ ಮಾತೇಕೆ? |
ಸಂದರ್ಭ ಬರಲಿ, ಬಂದಾಗಳಾ ಚಿಂತೆ ||
ಹೊಂದಿಸುವನಾರೊ, ನಿನ್ನಾಳಲ್ಲ, ಬೇರಿಹನು |
ಇಂದಿಗಿಂದಿನ ಬದುಕು - ಮಂಕುತಿಮ್ಮ ||

682
ದಿವಸದಿಂ ದಿವಸಕ್ಕೆ, ನಿಮಿಷದಿಂ ನಿಮಿಷಕ್ಕೆ |
ಭವಿಷಿಯವ ಚಿಂತಿಸದೆ ಬದುಕ ನೂಕುತಿರು ||
ವಿವರಗಳ ಜೋಡಿಸುವ ಯಜಮಾನ ಬೇರಿಹನು |
ಸವೆಸು ನೀಂ ಜನುಮವನು - ಮಂಕುತಿಮ್ಮ ||

683
ರವಿ ನಿಲದೆ ಸುತ್ತುತಿರೆ ಕೊರಗು ಕಳವಳವೇಕೊ? |
ಸವೆಯಿಸುತಲೆಲ್ಲವನು ಕಡೆಗೊಯ್ವನವನು ||
ಕವಳಿಸುವುದೆಲ್ಲವನು ಮರೆವು; ಬಾಳೊಳ್ ಅದೊಂದು |
ಶಿವಕೃಪೆಯ ಲಕ್ಷಣವೊ - ಮಂಕುತಿಮ್ಮ ||

684
ದಿವಸಕೊಳಗದಿನ್ ಆಯುರಾಶಿಯನು ರವಿಯಳೆಯಲ್ |
ಅವನ ಮಗ ಜವನ್ ಅದರ ಲೆಕ್ಕವಿರಿಸುವನು ||
ದಿವಿಜರೊಳಗಿವರಿರ್ವರುಪಕಾರಿಗಳು ನಮಗೆ |
ಸವೆಸುವರು ತನುಘಟವ - ಮಂಕುತಿಮ್ಮ ||

685
ಅಂತೊ ಇಂತೋ ಎಂತೊ ಜೀವಕಥೆ ಮುಗಿಯುವುದು |
ಅಂದೊ ಇಂದೋ ಎಂದೊ ಜನುಮ ಕಳೆಯುವುದು ||
ಒಂದೆ ಮರೆವಿನ ಮುಸುಕು ಮುಸುಕಲಿಹುದೆಲ್ಲವನು |
ಸಂತಸದ ಮಾತಿಷ್ಟೆ - ಮಂಕುತಿಮ್ಮ ||

686
ಎಲ್ಲ ಬರಿ ಗೊಣಗಾಟ, ತಿಣಕಾಟ, ತಡಕಾಟ |
ಇಲ್ಲ ನಮಗೂರೆಕೋಲ್, ತಿಳಿಬೆಳಕುಮಿಲ್ಲ ||
ಬಲ್ಲತನ ಮಬ್ಬಿನಲಿ ನಿದ್ರಿಸದೆ ತೆವಳುವುದು |
ಸಲ್ಲದುಬ್ಬಟೆ ನಮಗೆ - ಮಂಕುತಿಮ್ಮ ||

687
ಅತ್ಯಂತದುತ್ಕಟದ ಸನ್ನಿವೇಶಗಳ ಭರ |
ಪ್ರತ್ಯಕ್ಷದರ್ಶನದಿನಲ್ಲದೆಂತಹುದು? ||
ಪುಸ್ತಕದ ಚಿತ್ರದಿಂದೂಹಿಪೆಯ ಹಿಮಗಿರಿಯ |
ವಿಸ್ತಾರದದ್ಭುತವ? - ಮಂಕುತಿಮ್ಮ ||

688
ಅರ್ಣವವ ಕಣ್ಣಿಂದೆ ಕಂಡ ಬೆರಗಾದೀತೆ |
ವರ್ಣನೆಯನೋದಿದೊಡೆ, ತೆರೆಯನೆಣಿಸಿದೊಡೆ? ||
ಪೂರ್ಣವಸ್ತುಗ್ರಹಣವಪರೋಕ್ಷದಿಂದಹುದು |
ನಿರ್ಣಯ ಪ್ರತ್ಯಕ್ಷ - ಮಂಕುತಿಮ್ಮ ||

689
ಒರ್ವನೆ ನಿಲುವೆ ನೀನುತ್ಕಟಕ್ಷನಗಳಲಿ |
ಧರ್ಮಸಂಕಟಗಳಲಿ, ಜೀವಸಮರದಲಿ ||
ನಿರ್ವಾಣದೀಕ್ಷೆಯಲಿ, ನಿರ್ಯಾಣಘಟ್ಟದಲಿ |
ನಿರ್ಮಿತ್ರನಿರಲು ಕಲಿ - ಮಂಕುತಿಮ್ಮ ||

690
ಶುನಕ ಬೆಂಬತ್ತಿತಲ ಧರ್ಮಜನ ಕಡೆವರಂ |
ನಿನಗಂತು ಸಂಗಡಿಗನೊರ್ವನೆಡೆಬಿಡದನ್ ||
ಇಣಿಕಿ ನೋಡರದಾರುಮೆನ್ನುವೆಡೆ ಕಾದಿಹನು |
ಅಣಕಿಗ ಮನಸ್ಸಾಕ್ಷಿ - ಮಂಕುತಿಮ್ಮ ||

691
ಸುತ್ತಿ ಸುತ್ತುವ ಖಗವ ಗೂಡ ನೆನಪೆಳೆಯುವುದು |
ಗೊತ್ತುನೂಲ್ ಪಿಡಿದಿಹುದು ದನವ ಬಯಲಿನಲಿ ||
ತತ್ತ್ವವೊಂದರ ಹಿಡಿತಕೊಗ್ಗದಿಹ ಬಾಳೇನು? |
ಕಿತ್ತ ಗಾಳಿಯ ಪಟವೊ - ಮಂಕುತಿಮ್ಮ ||

692
ಬರಿಯೋದು ಬರಿವಾದ ಬರಿಬುದ್ಧಿ ದೊರಕಿಸದು |
ಪರತತ್ತ್ವವನು; ಬೇಕು ಬೇರೆ ಕಣ್ಣದಕೆ ||
ಚಿರದ ಮಮತಾವೇಷ್ಟಿತದ ಪೊರೆಯ ಪರಿದಂದು |
ಅರಳ್ವುದರಿವಿನ ಕಣ್ಣು - ಮಂಕುತಿಮ್ಮ ||

693
ಇಂದ್ರಿಯಾತೀತವನು ಪಿಡಿಯಲಿಂದ್ರಿಯಕಳವೆ? |
ಇಂದ್ರಧನು ಕೈದೋಟಿ ಕೊಂಕಿಗೆಟಕುವುದೆ? ||
ಸಂದೃಶ್ಯವಾತ್ಮವಾತ್ಮಕೆ ಬೇರೆ ಕರಣದಿಂ |
ತಂದ್ರಿ ಬಿಡೆ ದೊರೆವುದದು - ಮಂಕುತಿಮ್ಮ ||

694
ಬಂಧನಗಳೆಲ್ಲವನು ದಾಟಿ, ಹೊಳೆ ನೆರೆ ನೀರು |
ಸಂಧಿಪುದು ಕಡಲ ನೀರ್ಗಳನ್; ಅಂತು ಜೀವನ್ ||
ಇಂದ್ರಿಯದ ಕಟ್ಟುಗಳ ಮೀರ್ದೀಕ್ಷೆಯೋಟದಿಂ |
ಸಂದರುಶಿಪನು ಪರನ - ಮಂಕುತಿಮ್ಮ ||

695
ದ್ವಂದ್ವಲೋಕವನಕ್ಷಿಯುಗದೆ ಪೊರೆದು ತ್ರ್ಯಕ್ಷ- |
ನೊಂದರಿಂ ಮಾಯೆಯಾಟವ ಮೀರುವಂತೆ ||
ಇಂದ್ರಿಯಾತೀತದರ್ಶನಕೆ ಬೇರೊಂದಕ್ಷಿ |
ಸಂಧಾನವನು ಗಳಿಸೊ - ಮಂಕುತಿಮ್ಮ ||

696
ಶರನಿಧಿಯನೀಜುವನು, ಸಮರದಲಿ ಕಾದುವನು |
ಗುರಿಯೊಂದನುಳಿದು ಪೆರತೊಂದ ನೋಡುವನೆ? ||
ಮರೆಯುವನು ತಾನೆಂಬುದನೆ ಮಹಾವೇಶದಲಿ |
ನಿರಹಂತೆಯದು ಮೋಕ್ಷ - ಮಂಕುತಿಮ್ಮ ||

697
ಉತ್ತಮತೆಯಿಂತೆಂದು ಮತಿಗೆ ತೋರ್ದೊಡದೇನು? |
ವೃತ್ತಿಯೊಳ್ ಅದೂರಿ ಸ್ವಭಾವಾಂಶವಾಗಲ್ ||
ಮತ್ತು ಮತ್ತನುವರ್ತಿಸುತ, ಭಂಗವಾದಂದು |
ಯತ್ನಿಸಿನ್ನುಂ ಮರಳಿ - ಮಂಕುತಿಮ್ಮ ||

698
ಎಡವದೆಯೆ, ಮೈಗಾಯವಡೆಯದೆಯೆ, ಮಗುವಾರು |
ನಡೆಯ ಕಲಿತವನು? ಮತಿನೀತಿಗತಿಯಂತು ||
ತಡವರಿಸಿ ಮುಗ್ಗರಿಸಿ ಬಿದ್ದು ಮತ್ತೆದ್ದು ಮೈ- |
ದಡವಿಕೊಳುವವರೆಲ್ಲ - ಮಂಕುತಿಮ್ಮ ||

699
ಏಸು ಸಲ ತಪವಗೈದೇಸು ಬನ್ನವನಾಂತು |
ಕೌಶಿಕಂ ಬ್ರಹ್ಮರ್ಷಿಪದಕರ್ಹನಾದನ್? ||
ಘಾಸಿಪಡುತಿನ್ನೊಮ್ಮೆ ಮತ್ತೊಮ್ಮೆ ಮರಮರಳಿ |
ಲೇಸಾಗಿಸಾತ್ಮವನು - ಮಂಕುತಿಮ್ಮ ||

700
ವಾಸನೆ ವಿವೇಚನೆಗಳೆರಡಕಂ ಸಂಘರ್ಷೆ |
ಪ್ರಾಚೀನಕಂ ಪೌರುಷಕ್ಕಮಿರುವಂತೆ ||
ಆಶಾವಿನಾಶಮುಂ ಧೀಶಕ್ತಿಯುದ್ಭವಮುಮ್ |
ಈಶಪ್ರಸಾದದಿಂ - ಮಂಕುತಿಮ್ಮ ||

701
ಎರಡು ಕೋಣೆಗಳ ನೀಂ ಮಾಡು ಮನದಾಲಯದಿ |
ಹೊರಕೋಣೆಯಲಿ ಲೋಗರಾಟಗಳನಾಡು ||
ವಿರಮಿಸೊಬ್ಬನೆ ಮೌನದೊಳಮನೆಯ ಶಾಂತಿಯಲಿ |
ವರಯೋಗಸೂತ್ರವಿದು - ಮಂಕುತಿಮ್ಮ ||

702
ಮನೆಯ ಸಂಸಾರದಲಿ ವಾಸವಿರುತಾಗಾಗ |
ನೆನೆದು ನೀಂ ದೇಗುಲಕೆ ಪೋಗಿಬರುವಂತೆ ||
ದಿನವೆಲ್ಲ ದೇವಸನ್ನಿಧಿಯೊಳಿರುತಾಗಾಗ |
ಮನೆಗೆ ಬರುವನವೊಲಿರು - ಮಂಕುತಿಮ್ಮ ||

703
ಬೇಕು ಜೀವನಯೋಗಕೊಂದು ಬಹುಸೂಕ್ಷ್ಮ ನಯ |
ಬೇಕೊಂದು ಜಾಗರೂಕತೆ, ಬುದ್ಧಿಸಮತೆ ||
ತಾಕನೊಂದನು ಯೋಗಿ, ನೂಕನೊಂದನು ಜಗದಿ |
ಏಕಾಕಿ ಸಹವಾಸಿ - ಮಂಕುತಿಮ್ಮ ||

704
ಸಮತೆಸಂಯಮಶಮಗಳಿಂ ಭವವನೋಲಗಿಸೆ |
ಸಮನಿಪುದು ಮತಿಯ ಹದವಾತ್ಮಾನುಭವಕೆ ||
ಮಮತೆಯಳಿವಿಂ ಜ್ಞಾನ; ಪಾಂಡಿತ್ಯದಿಂದಲ್ಲ |
ಶ್ರಮಿಸಿಳೆಯ ಗಾಣದಲಿ - ಮಂಕುತಿಮ್ಮ ||

705
ಸಂತತದ ಶಿಕ್ಷೆಯಿಂ ದೀರ್ಘದಭ್ಯಾಸದಿಂ- |
ದಂತರಂಗದ ಕಡಲು ಶಾಂತಿಗೊಳಲಹುದು ||
ಸಂತೃಪ್ತವೃತ್ತಿಯಿಂದೇಕಾಂತಸೇವೆಯಿಂ |
ಸಂತಯಿಸು ಚಿತ್ತವನು - ಮಂಕುತಿಮ್ಮ ||

706
ಅರಸಡವಿಗೈದಿದೊಡಮ್, ಅವನಿತ್ತ ಪಾದುಕೆಗ- |
ಳೊರೆಯದೊಡಮೆನನಂ, ತಾಂ ವರದಿಯೊರೆದು ||
ದೊರೆತನದ ಭಾರವನು ಹೊತ್ತು ದೊರೆಯಾಗದಾ |
ಭರತನವೊಲಿರು ನೀನು - ಮಂಕುತಿಮ್ಮ ||

707
ಒಡೆಯನೆಂದೋ ಬಂದು ಕೇಳ್ವನದಕುತ್ತರವ |
ಕೊಡಬೇಕು ತಾನೆನುವವೊಲು ಋಜುತೆಯಿಂದ ||
ಒಡಲ, ಜಾಣಿನ, ಜೀವಶಕ್ತಿಗಳನೆಲ್ಲವನು |
ಮುಡುಪುಕೊಟ್ಟನು ಭರತ - ಮಂಕುತಿಮ್ಮ ||

708
ಒಡರಿಸುವನೆಲ್ಲವನ್, ಅದಾವುದುಂ ತನದಲ್ಲ |
ಬಿಡನೊಂದನುಂ ರಾಜ್ಯ ತನದಲ್ಲವೆಂದು ||
ನಡೆವಂ ಸ್ವತಂತ್ರದಲಿ ಸಲಿಸುತೆ ವಿಧೇಯತೆಯ |
ಕಡುಯೋಗಿ ಭರತನಲ? - ಮಂಕುತಿಮ್ಮ ||

709
ದೊರೆತನದ ಜಟಿಲಗಳ, ಕುಟಿಲಗಳ, ಕಠಿನಗಳ |
ಭರತನುಳಿಸಿದನೆ ರಾಮನ ತೀರ್ಪಿಗೆಂದು? ||
ಅರಿವಿಗಿಹ ಕರ್ತವ್ಯಭಾರವನು ತಾನರಿತು |
ಧುರವ ಧರಿಸಿದನವನು - ಮಂಕುತಿಮ್ಮ ||

710
ಪ್ರತ್ಯಕ್ಷವಿಲ್ಲದಾ ಸ್ವಾಮಿಯಂ ನೆನೆನೆನೆದು |
ಸತ್ಯಭಕ್ತಿಯ ಸೇವೆಗೆಯ್ದವಂ ಭರತಂ ||
ನಿತ್ಯಜೀವನದಿ ನೀನಾ ನಯವನನುಸರಿಸೊ |
ಸ್ವತ್ವದಾಶೆಯ ನೀಗಿ - ಮಂಕುತಿಮ್ಮ ||

711
ಧರೆಯೆ ಕೋಸಲ, ಪರಬ್ರಹ್ಮನೇ ರಘುವರನು |
ಭರತನವೊಲನುಪಾಲನಕ್ರಿಯರು ನಾವು ||
ಅರಸನೂಳಿಗ ನಮ್ಮ ಸಂಸಾರದಾಡಳಿತ |
ಹರುಷದಿ ಸೇವಿಸೆಲೊ - ಮಂಕುತಿಮ್ಮ ||

712
ನಾಸಿಕದೊಳುಚ್ಛ್ವಾಸ ನಿಶ್ವಾಸ ನಡೆವಂತೆ |
ಸೂಸುತ್ತಲಿರಲಿ ನಿನ್ನಿರವು ಮಂಗಳವ ||
ಆಶಿಸೆದೆ ಸಂಕಲ್ಪಯತ್ನಗಳನಿನಿತುಮಂ |
ಸಾಜವಾಗಲಿ ಸಯ್ಪು - ಮಂಕುತಿಮ್ಮ ||

713
ಕಾಯಕವ ಚರಿಪುದಾತ್ಮ ಜುಗುಪ್ಸೆಗೆಡೆಗುಡದೆ |
ಆಯತದ ಲೋಕಧರ್ಮಗಳ ಪಾಲಿಪುದು ||
ಆಯತಿಗೆ ಬಾಯ್ಬಿಡದೆ ಗತವ ಚಿಂತಿಸದಿಹುದು |
ಧ್ಯೇಯವೀ ಸೂತ್ರಗಳು - ಮಂಕುತಿಮ್ಮ ||

714
ಪರಿಮಿತಿಯನರಿತಾಶೆ, ಪರವಶತೆಯಳಿದ ಸುಖ |
ವಿರತಿಯೊಡವೆರೆದ ಲೋಕೋದ್ಯೋಗಯುಕ್ತಿ ||
ಪರಿಕಿಸುತ ಜೀವಿತವ ಸತ್ಯವನೆ ಪಿಡಿವ ಮತಿ |
ವರಗಳೀ ನಾಲ್ಕೆ ವರ - ಮಂಕುತಿಮ್ಮ ||

715
ಕ್ಷಮೆ ದೋಷಿಗಳಲಿ, ಕೆಚ್ಚೆದೆ ವಿಧಿಯ ಬಿರುಬಿನಲಿ |
ಸಮತೆ ನಿರ್ಮತ್ಸರತೆ ಸೋಲ್ಗೆಲವುಗಳಲಿ ||
ಶಮವ ನೀಂ ಗಳಿಸಲೀ ನಾಲ್ಕು ತಪಗಳೆ ಸಾಕು |
ಭ್ರಮೆಯೊ ಮಿಕ್ಕೆಲ್ಲ ತಪ - ಮಂಕುತಿಮ್ಮ ||

716
ಮೃತನ ಸಂಸಾರಕಥೆ ಶವವಾಹಕರಿಗೇಕೆ? |
ಸತಿಯು ಗೋಳಿಡಲಿ, ಸಾಲಿಗನು ಬೊಬ್ಬಿಡಲಿ ||
ಜಿತಮನದಿ ಚಿತಿಗಟ್ಟಿ ಕೊಂಡೊಯ್ಯುತಿಹರವರು |
ಧೃತಿಯ ತಳೆ ನೀನಂತು - ಮಂಕುತಿಮ್ಮ ||

717
ನಿನ್ನ ಹೆಣವನು ನೀನೆ ಹೊತ್ತು ಸಾಗಿಸಬೇಕೊ! |
ಅಣ್ಣ ಬಾ ತಮ್ಮ ಬಾ ಎಂದಳುವುದೇಕೋ? ||
ನಿನ್ನೊಡಲೆ ಚಿತೆ, ಜಗದ ತಂಟೆಗಳೆ ಸವುದೆಯುರಿ |
ಮಣ್ಣೆ ತರ್ಪಣ ನಿನಗೆ - ಮಂಕುತಿಮ್ಮ ||

718
ತನ್ನ ಶಿಲುಬೆಯ ತಾನೆ ಹೊತ್ತನಲ ಗುರು ಯೇಸು? |
ನಿನ್ನ ಕರ್ಮದ ಹೊರೆಯ ಬಿಡದೆ ನೀನೆ ಹೊರು ||
ಖಿನ್ನನಾಗದೆ ತುಟಿಯ ಬಿಗಿದು ಶವಭಾರವನು |
ಬೆನ್ನಿನಲಿ ಹೊತ್ತು ನಡೆ - ಮಂಕುತಿಮ್ಮ ||

719
ತಲೆಪಾಗಿನೊಳಕೊಳಕ, ಪಂಚೆನಿರಿಯೊಳಹರಕ |
ತಿಳಿಸುವೆಯ ರಜಕಗಲ್ಲದೆ ಲೋಗರಿಂಗೆ? ||
ಅಳಲುದುಗುಡಗಳ ನಿನ್ನೊಳಗೆ ಬಯ್ತಿಡದೆ ನೀ- |
ನಿಳೆಗೆ ಹರಡುವುದೇಕೊ? - ಮಂಕುತಿಮ್ಮ ||

720
ಹೊಸತನವೆ ಬಾಳು; ಹಳಸಿಕೆಯೆಲ್ಲ ಸಾವು ಬಿಡು |
ರಸವು ನವನವತೆಯಿಂದನುದಿನವು ಹೊಮ್ಮಿ ||
ಹಸನೊಂದು ನುಡಿಯಲ್ಲಿ ನಡೆಯಲ್ಲಿ ನೋಟದಲಿ |
ಪಸರುತಿರೆ ಬಾಳ್ ಚೆಲುವು - ಮಂಕುತಿಮ್ಮ ||

721
ಮೆರೆಯುವುವು ನೂರಾರು ಮೈಮೆಗಳು ಸೃಷ್ಟಿಯಲಿ |
ಧರಣಿಯವು, ಗಗನದವು, ಮನುಜಯತ್ನದವು ||
ಪಿರಿದೆಂಬೆನವುಗಳೊಳು ಧರುಮವರಿತವನೊಲುಮೆ |
ಅರಿವುಳ್ಳೊಲುಮೆ ಪಿರಿದು - ಮಂಕುತಿಮ್ಮ ||

722
ಚೆಲುವುನಗುವುಗಳ ಕಂಡವನ ಕಣ್ಣರಳುವುದು |
ಅಳುವುನೋವುಗಳ ಕಂಡೊದ್ದೆಯಾಗುವುದು ||
ಇಳೆಯ ದನಿಗವನೆದೆಯೊಳೊಪ್ಪು ಮರುದನಿಯಹುದು |
ಶಿಲೆಯಲ್ಲ ಯೋಗಿಯೆದೆ - ಮಂಕುತಿಮ್ಮ ||

723
ಸ್ವಸ್ಥತೆಯ ಕದಲಿಸದ ಜಗದಾಸ್ಥೆಯೊಂದು ಗುಣ |
ಆಸ್ಥೆಯನು ಕುಂದಿಸದ ತಾಟಸ್ಥ್ಯವೊಂದು ||
ನಷ್ಟಲಾಭಂಗಳಲಿ ಲಘುಹಾಸ್ಯನಯವೊಂದು |
ಸ್ವಸ್ತಿಗಾವಶ್ಯಕವೊ - ಮಂಕುತಿಮ್ಮ ||

724
ಸ್ಮಿತವಿರಲಿ ವದನದಲಿ, ಕಿವಿಗೆ ಕೇಳಿಸದಿರಲಿ |
ಹಿತವಿರಲಿ ವಚನದಲಿ, ಋತವ ಬಿಡದಿರಲಿ ||
ಮಿತವಿರಲಿ ಮನಸಿನುದ್ವೇಗದಲಿ, ಭೋಗದಲಿ |
ಅತಿ ಬೇಡವೆಲ್ಲಿಯುಂ - ಮಂಕುತಿಮ್ಮ ||

725
ಕಡಲ್ಗಳೊಂದಾದೊಡಂ, ಪೊಡವಿ ಹಬೆಯಾದೊಡಂ |
ಬಿಡದಿರೊಳನೆಮ್ಮದಿಯ, ಬಿಡು ಗಾಬರಿಕೆಯ ||
ಕಡಲ ನೆರೆ ತಗ್ಗುವುದು, ಪೊಡವಿ ಧೂಳಿಳಿಯುವುದು |
ಗಡುವಿರುವುದೆಲ್ಲಕಂ - ಮಂಕುತಿಮ್ಮ ||

726
ನಲಿಸುವೊಲಿಸುವ, ಕೆಣಕಿ ಕಾಡಿಸುವ, ಮುಳಿಯಿಸುವ |
ಕೆಳೆ ನಂಟು ಹಗೆ ಕಲಹ ಕುಹಕದೋಲೆಗಳಂ ||
ಹಲಬರಿಗೆ ಹಂಚಿ ಬಾರೆಂದು ವಿಧಿ ನೇಮಿಸಿಹ |
ಇಳೆಯಂಚೆಯಾಳು ನೀಂ - ಮಂಕುತಿಮ್ಮ ||

727
ಓಲೆಕಾರನಿಗೇಕೆ ಬರೆದ ಸುದ್ದಿಯ ಚಿಂತೆ? |
ಓಲೆಗಳನವರವರಿಗೈದಿಸಿರೆ ಸಾಕು ||
ಸಾಲಗಳೊ, ಶೂಲಗಳೊ, ನೋವುಗಳೊ, ನಗುವುಗಳೊ! |
ಕಾಲೋಟವವನೂಟ - ಮಂಕುತಿಮ್ಮ ||

728
ನಗು, ಮನದಿ ಲೋಗರ ವಿಕಾರಂಗಳನು ನೋಡಿ |
ಬಿಗಿ ತುಟಿಯ, ದುಡಿವಂದು ನೋವಪಡುವಂದು ||
ಪೊಗು, ವಿಶ್ವಜೀವನದ ಜೀವಾಂತರಂಗದಲಿ |
ನಗುನಗುತ ಬಾಳ್, ತೆರಳು - ಮಂಕುತಿಮ್ಮ ||

729
ಎಡರು ತೊಡರೆನಲೇಕೆ? ಬಿಡಿಸು ಮತಿಗಾದನಿತ |
ದುಡಿ ಕೈಯಿನಾದನಿತು; ಪಡು ಬಂದ ಪಾಡು ||
ಬಿಡು ಮಿಕ್ಕುದನು ವಿಧಿಗೆ; ಬಿಡದಿರುಪಶಾಂತಿಯನು |
ಬಿಡುಗಡೆಗೆ ದಾರಿಯದು - ಮಂಕುತಿಮ್ಮ ||

730
ಹಕ್ಕಿ ಮುನ್ನರಿಯುವುದೆ ತನ್ನ ಪಯಣದ ತೆರನ? |
ಇಕ್ಕುವರದಾರದನು ಕರೆದು ತಿರುಪೆಯನು? |
ರೆಕ್ಕೆ ಪೋದಂತಲೆದು, ಸಿಕ್ಕಿದುದನುಣ್ಣುವುದು |
ತಕ್ಕುದಾ ವ್ರತ ನಿನಗೆ - ಮಂಕುತಿಮ್ಮ ||

731
ಏನೊ ಕಣ್ಣನು ಪಿಡಿವುದೇನೊ ದಿಗಿಲಾಗಿಪುದು |
ಏನನೋ ನೆನೆದು ಸರ್ರೆಂದು ಹಾರುವುದು ||
ಬಾನೊಳಾಡುವ ಹಕ್ಕಿಗಿದುವೆ ನಿತ್ಯಾನುಭವ |
ನೀನದನು ಮೀರಿಹೆಯ? - ಮಂಕುತಿಮ್ಮ ||

732
ಆವ ಕಡೆ ಹಾರುವುದೊ! ಆವ ಕಡೆ ತಿರುಗುವುದೊ! |
ಆವಾಗಳಾವಕಡೆಗೆರಗುವುದೊ ಹಕ್ಕಿ! ||
ನಾವುಮಂತೆಯೆ ಸೃಷ್ಟಿಕೃತ್ರಿಮದ ಕೈಗೊಂಬೆ |
ಜೀವಮಾರ್ಗವನೂಹ್ಯ - ಮಂಕುತಿಮ್ಮ ||

733
ಮಾವುಸಸಿಯನು ನೆಟ್ಟು ಬೇವುಣಲು ಸಿದ್ಧನಿರು |
ಭೂವಿಷಯದಿಂದ ರಸ ಮಾರ್ಪಡುವುದುಂಟು ||
ಆ ವಿವರ ನಿನಗೇಕೆ? ತೋಟದೊಡೆಯನಿಗಿರಲಿ |
ಸೇವಕನು ನೀನಲ್ತೆ? - ಮಂಕುತಿಮ್ಮ ||

734
ಸೈನಿಕನು ನೀನು, ಸೇನಾಧಿಪತಿಯೆಲ್ಲಿಹನೊ! |
ಆಣತಿಯ ಕಳುಹುತಿಹನದನು ನೀನರಿತು ||
ಜಾಣಿನಧಟಿಂ ಪೋರು; ಸೋಲುಗೆಲವವನೆಣಿಕೆ |
ಕಾಣಿಸದನಾಳ್ಕೆಯದು - ಮಂಕುತಿಮ್ಮ ||

735
ನಾಯಕನಿಗಿರಲಿ ರಣವಿಜಯ ಪರಿಭವ ಗಣನೆ |
ಆಯವದರಿಂ ಭಟನ ಸತ್ತ್ವಶಿಕ್ಷಣಕೆ ||
ಸ್ವೀಯ ಸತ್ತ್ವವಿಕಾಸ ನಿಜಶಕ್ತಿಯಭ್ಯಾಸ |
ಶ್ರೇಯಸಿಗೆ ಸೋಪಾನ - ಮಂಕುತಿಮ್ಮ ||

736
ಕಾಯಕವ ಚರಿಸುತ್ತ, ಮಾನಸವ ಸಯ್ತಿಡುತ |
ಆಯಸಂಬಡಿಸದವೊಲಂತರಾತ್ಮನನು ||
ಮಾಯೆಯೊಡನಾಡುತ್ತ, ಬೊಮ್ಮನನು ಭಜಿಸುತ್ತ |
ಆಯುವನು ಸಾಗಿಸೆಲೊ - ಮಂಕುತಿಮ್ಮ ||

737
ಎಂದಿಗಾನುಂ ನಿನ್ನ ಪೂರ್ವಋಣಗಳ ಲೆಕ್ಕ |
ನೊಂದಬೇಕೆಂದಿರ್ದೊಡಿಂದೆ ಮೊದಲನಿಡು ||
ಅಂದಿಸಿಕೊ ಹೆರರೆನಿಪರನು ಹೃದಯವಿಸ್ತರದೆ |
ಹೊಂದು ವಿಶ್ವಾತ್ಮತೆಯ - ಮಂಕುತಿಮ್ಮ ||

738
ತನಗೆ ಬಾರದ ಲಾಭ ತನಯಂಗೆ ಬಂದಾಗ |
ಜನಕನ್ ಅದು ತನದೆಂದು ಸಂತಸಿಪ ತೆರದಿ ||
ಜನದೊಳಾರ್ಗಾವ ಸೊಗವಾದೊಡಂ ತನದೆನ್ನು- |
ತನುಭವಿಪನೋ ಜ್ಞಾನಿ - ಮಂಕುತಿಮ್ಮ ||

739
ತನ್ನ ಮನದಾಟಗಳ ತಾನೆ ನೋಡುತ ನಗುವ |
ತನ್ನೊಳಗೆ ತಾನಿರ್ವರಾದವೊಲು ಬಾಳ್ವ ||
ಚಿನ್ಮಾತ್ರವನು ಬೇರೆ ಬಗೆದು ಜಾನಿಪ ಚತುರ |
ಧನ್ಯತೆಯ ಕಂಡವನು - ಮಂಕುತಿಮ್ಮ ||

740
ಜೀವನವದೊಂದು ಕಲೆ; ಕಲೆಯ ಕಲಿಸುವುದೆಂತು? |
ಸಾವಿರದ ನಿಯಮ ಯುಕ್ತಿಗಳನೊರೆದೊಡೆಯುಂ ||
ಆವುದೋ ಕುಶಲತೆಯದೊಂದಿರದೆ ಜಯವಿರದು |
ಆ ವಿವರ ನಿನ್ನೊಳಗೆ - ಮಂಕುತಿಮ್ಮ ||

741
ತಲೆ ಕೊಡವ ತಳೆದಿರಲು, ಕೈ ಕತ್ತಿ ಪಿಡಿದಿರಲು |
ಬಳುಕು ಹಗ್ಗದ ಮೇಲೆ ತಾನಡಿಯನಿಡುತ ||
ಕೆಲ ಬಲಕೆ ಬೀಳದೆ ಮುನ್ನಡೆವ ಡೊಂಬನುಪಾಯ |
ಕಲೆಯೆ ಜೀವನಯೋಗ - ಮಂಕುತಿಮ್ಮ ||

742
ಬಹುವಿದ್ಯೆ ಬಹುತರ್ಕ ಬಹುನೇಮ ಬೇಕಿಲ್ಲ |
ವಹಿಸೆ ಜೀವನಭರವನದು ಹಗುರೆನಿಪವೊಲ್ ||
ಸಹನೆ ಸಮರಸಭಾವವಂತಃಪರೀಕ್ಷೆಗಳು |
ವಿಹಿತವಾತ್ಮದ ಹಿತಕೆ - ಮಂಕುತಿಮ್ಮ ||

743
ಎಲ್ಲ ನಾಶನವೆಲ್ಲಕಾಲವಶವಾದೊಡಂ |
ಕ್ಷುಲ್ಲಕನು ನರನಾದೊಡಂ ಕಾಲನಿದಿರೊಳ್ ||
ಉಲ್ಲಾಸವೇ ಧರ್ಮ; ಕೊಲ್ಲಿಪನೆ ಬೆಳೆಯಿಪನು |
ಹುಲ್ಲೊಣಗಿ ಬೆಳೆವುದಲ? - ಮಂಕುತಿಮ್ಮ ||

744
ಅಣಗಿದ್ದು ಬೇಸಗೆಯೊಳ್, ಎದ್ದು ಮಳೆ ಕರೆದಂದು |
ಗುಣಿಯೆನದೆ ತಿಟ್ಟೆನದೆ ಸಿಕ್ಕಿದೆಡೆ ಬೆಳೆದು ||
ಉಣಿಸನೀವನು ದನಕೆ, ತಣಿವನೀವನು ಜಗಕೆ |
ಗುಣಶಾಲಿ ತೃಣಸಾಧು - ಮಂಕುತಿಮ್ಮ ||

745
ಪರಹಿತದ ಮಾತಿರಲಿ; ಪರರಿನೇ ಜೀವಿಪನು |
ನರಜಂತು, ಪಶು ಪಕ್ಷಿ ಕೀಟ ಮೀನ್ಗಳವೋಲ್ ||
ಪರರಿನೆಳಸದದೇನನುಂ ಪರರಿಗುಪಕರಿಪ |
ತರುಜನ್ಮವಲ ಪುಣ್ಯ! - ಮಂಕುತಿಮ್ಮ ||

746
ನೆರಳನಿನಿತನು ಕೊಡುವ, ದಣಿವನಿನಿತನು ಕಳೆವ |
ತಿರೆಯ ಪಯಣದ ಹೊರೆಯನಿನಿತು ಸುಳುವೆನಿಪಾ ||
ತರುವಾಗಿ ಮನೆಯೊಳಗೊ ಹೊರಗೊ ನೀಂ ಬೆಳೆಯುತಿರೆ |
ಪರಮಧರ್ಮವದೆಲವೊ - ಮಂಕುತಿಮ್ಮ ||

747
ಅವರೆಷ್ಟು ಧನವಂತರ್, ಇವರೆಷ್ಟು ಬಲವಂತರ್ |
ಅವರೆಷ್ಟು ಯಶವಂತರ್ ಎನುವ ಕರುಬಿನಲಿ ||
ಭವಿಕ ನಿನಗೆಷ್ಟಿಹುದೊ ಮರೆತು ನೀಂ ಕೊರಗುವುದು |
ಶಿವನಿಗೆ ಕೃತಜ್ಞತೆಯೆ? - ಮಂಕುತಿಮ್ಮ ||

748
ಅನ್ನವುಣುವಂದು ಕೇಳ್; ಅದನು ಬೇಯಿಸಿದ ನೀರ್ |
ನಿನ್ನ ದುಡಿತದ ಬೆಮರೊ, ಪೆರರ ಕಣ್ಣೀರೋ? ||
ತಿನ್ನು ನೀಂ ಜಗಕೆ ತಿನಲಿತ್ತನಿತ; ಮಿಕ್ಕೂಟ |
ಜೀರ್ಣಿಸದ ಋಣಶೇಷ - ಮಂಕುತಿಮ್ಮ ||

749
ಪರಮಲಾಭವ ಗಳಿಸೆ ಜೀವಿತವ್ಯಾಪಾರ- |
ಕಿರಬೇಕು ಮೂಲಧನವದು ತತ್ತ್ವದೃಷ್ಟಿ ||
ಚಿರಲಾಭ ಜಗದಾತ್ಮಲೀಲಾವಿಹಾರಸುಖ |
ಧರೆಯ ಸುಖ ಮೇಲ್ಬಡ್ಡಿ - ಮಂಕುತಿಮ್ಮ ||

750
ಮುಳುಗದಿರು; ಜೀವನದ ತೆರೆಯ ಮೇಲೀಜುತಿರು |
ಒಳಿತನಾಗಿಸು, ಕೊಡುತ ಕೊಳುತ ಸಂತಸವ ||
ಕಳವಳಂಬಡದೆ ನಡೆ ಕಡೆಯ ಕರೆ ಬಂದಂದು |
ಮಿಳಿತನಿರು ವಿಶ್ವದಲಿ - ಮಂಕುತಿಮ್ಮ ||

751
ಲೋಕವೆಲ್ಲವು ಚಿತ್ರವಿಂದ್ರಜಾಲದ ಕೃತ್ಯ |
ಸಾಕೆನದೆ ಬೇಕೆನದೆ ನೋಡು ನೀನದನು ||
ತಾಕಿಸದಿರಂತರಾತ್ಮಂಗಾವಿಚಿತ್ರವನು |
ಹಾಕು ವೇಷವ ನೀನು - ಮಂಕುತಿಮ್ಮ ||

752
ಭೋಜನದಿ ಪರಮಭೋಜನ ಪರಬ್ರಹ್ಮರಸ |
ಯಾಚಿಸಲ್ಕೇನಿರ್ಪುದದನುಂಡ ಬಳಿಕ? ||
ತ್ಯಾಜಕ ತ್ಯಾಗ ಸಂತ್ಯಾಜ್ಯ ಭೇದಗಳಿರದೆ |
ರಾಜ ನೀಂ ಜಗಕೆಲ್ಲ - ಮಂಕುತಿಮ್ಮ ||

753
ಬ್ರಹ್ಮಾನುಸಂಧಾನ ಲೋಕಸಂಧಾನದಲಿ |
ಬ್ರಹ್ಮದರ್ಶನವೆಲ್ಲ ಜೀವರೂಪದಲಿ ||
ಬ್ರಹ್ಮಾನುಭವ ದೇಹಕರಣಾನುಭವಗಳಲಿ! |
ಮರ್ಮವಿದು ಮುಕ್ತಿಗೆಲೊ - ಮಂಕುತಿಮ್ಮ ||

754
ಒಮ್ಮೆ ಹೂದೋಟದಲಿ, ಒಮ್ಮೆ ಕೆಳೆಕೂಟದಲಿ |
ಒಮ್ಮೆ ಸಂಗೀತದಲಿ, ಒಮ್ಮೆ ಶಾಸ್ತ್ರದಲಿ ||
ಒಮ್ಮೆ ಸಂಸಾರದಲಿ, ಮತ್ತೊಮ್ಮೆ ಮೌನದಲಿ |
ಬ್ರಹ್ಮಾನುಭವಿಯಾಗೊ - ಮಂಕುತಿಮ್ಮ ||

755
ಮತಿಗರ್ಥವಾದೊಡೇಂ? ಸ್ಮೃತಿಯೊಳದು ನೆಲಸಿರಲಿ |
ಸತತ ಸಂಧಾನದಲಿ ಪರಮಾರ್ಥವಿರಲಿ ||
ಶತಲಕ್ಷಧನದ ಲೆಕ್ಕವ ಬಾಯಿ ನುಡಿದೊಡೇಂ? |
ಭೃತಿಯೆಷ್ಟು ವೆಚ್ಚಕ್ಕೆ? - ಮಂಕುತಿಮ್ಮ ||

756
ಸಾರ್ವಭೌಮತೆ ನಾಲ್ಕು ಗುಣಕೆ ಗುಣರಾಜ್ಯದಲಿ |
ಧೈರ್ಯ ಮೊದಲಿನದೆರಡನೆಯದು ಮತಿಯೋಜೆ ||
ಸರ್ವದಯೆ ಮೂರನೆಯದದುವೆ ನೀತಿಯ ಮೂಲ |
ನಿರ್ಮಮತ್ವವೆ ಮುಕುಟ - ಮಂಕುತಿಮ್ಮ ||

757
ವ್ಯಾಮೋಹವಿಲ್ಲದ ಪ್ರೇಮ ನಿರ್ಭರವಿರಲಿ |
ಭೀಮಸಾಹಸವಿರಲಿ ಹಗೆತನವನುಳಿದು ||
ನೇಮನಿಷ್ಠೆಗಳಿರಲಿ ಡಂಭಕಠಿಣತೆ ಬಿಟ್ಟು |
ಸೌಮ್ಯವೆಲ್ಲೆಡೆಯಿರಲಿ - ಮಂಕುತಿಮ್ಮ ||

758
ಔದಾರ್ಯ ತಾಯಿ ನೀತಿಗೆ, ಧೈರ್ಯವೇ ತಂದೆ |
ಸ್ವಾಧಿಪತ್ಯದೆ ನೀನು ಬಾಳನಾಳುವೊಡೆ ||
ಹೋದುದನು ನೆನೆಯದಿರು, ಬರುವುದಕೆ ಸಿದ್ಧನಿರು |
ಆದನಿತು ಸಂತೋಷ - ಮಂಕುತಿಮ್ಮ ||

759
ಬರದಿಹುದರೆಣಿಕೆಯಲಿ ಬಂದಿಹುದ ಮರೆಯದಿರು |
ಗುರುತಿಸೊಳಿತಿರುವುದನು ಕೇಡುಗಳ ನಡುವೆ ||
ಇರುವ ಭಾಗ್ಯವ ನೆನೆದು ಬಾರೆನೆಂಬುದನು ಬಿಡು |
ಹರುಷಕದೆ ದಾರಿಯೆಲೊ - ಮಂಕುತಿಮ್ಮ ||

760
ಮುನ್ನಾದ ಜನುಮಗಳ ನೆನಸಿನಿಂ ನಿನಗೇನು? |
ಇನ್ನುಮಿಹುದಕೆ ನೀಡು ಮನವನ್; ಎನ್ನುವವೋಲ್ ||
ಬೆನ್ನ ಪಿಂತಿನದು ಕಾಣಿಸದಂತೆ ಪರಮೇಷ್ಠಿ |
ಕಣ್ಣನಿಟ್ಟನು ಮುಖದಿ - ಮಂಕುತಿಮ್ಮ ||

761
ಲೋಚನದ ಸಂಚಾರ ಮುಖದ ಮುಂದಕಪಾರ |
ಗೋಚರಿಪುದೇನದಕೆ ತಲೆಯ ಹಿಂದಣದು? ||
ಪ್ರಾಚೀನ ಹೊರತು ಸ್ವತಂತ್ರ ನೀಂ, ಸಾಂತವದು |
ಚಾಚು ಮುಂದಕೆ ಮನವ - ಮಂಕುತಿಮ್ಮ ||

762
ಧಾರುಣಿಯ ನಡಿಗೆಯಲಿ ಮೇರುವಿನ ಗುರಿಯಿರಲಿ |
ಮೇರುವನು ಮರೆತಂದೆ ನಾರಕಕೆ ದಾರಿ ||
ದೂರವಾದೊಡದೇನು? ಕಾಲು ಕುಂಟಿರಲೇನು? |
ಊರ ನೆನಪೇ ಬಲವೊ - ಮಂಕುತಿಮ್ಮ ||

763
ಮೇರುಪರ್ವತಕಿಹುವು ನೂರೆಂಟು ಶಿಖರಗಳು |
ದಾರಿ ನೂರಿರಬಹುದು, ನಿಲುವ ಕಡೆ ನೂರು ||
ಸಾರು ನೀಂ ಯಾತ್ರಿಕರಿಗೆಲ್ಲ ಕೆಳೆಯಾಗಿರುತೆ |
ಮೇರುಸಂಸ್ಕೃತಿಯೆ ಬಲ - ಮಂಕುತಿಮ್ಮ ||

764
ಧನ್ಯ ಹೊಲೆಯರ ನಂದ; ಹಿಡಿದುದವನನು ಕನಸು |
ಸ್ವರ್ಣಸಭೆಯಾ ಶೈವತಾಂಡವದ ಕನಸು ||
ಅನ್ಯಚಿಂತೆಗಳನದು ಬಿಡಿಸುತವನಾತ್ಮವನು |
ಚಿನ್ಮಯಕೆ ಸೇರಿಸಿತು - ಮಂಕುತಿಮ್ಮ ||

765
ತನ್ನ ರುಚಿ ರಾಮರುಚಿ; ತನ್ನ ಸಂತುಷ್ಟಿ ಪರಿ- |
ಪೂರ್ಣವಪ್ಪುದು ರಾಮಸಂತುಷ್ಟಿಯಿಂದೆ ||
ಎನ್ನುವಾ ಸಾಜದಾ ದೈವಾತ್ಮಭಾವದಲಿ |
ಧನ್ಯಳಾದಳು ಶಬರಿ - ಮಂಕುತಿಮ್ಮ ||

766
ಘನತತ್ತ್ವವೊಂದಕ್ಕೆ ದಿನರಾತ್ರಿ ಮನಸೋತು |
ನೆನೆಯದಿನ್ನೊಂದನೆಲ್ಲವ ನೀಡುತದರಾ ||
ಅನುಸಂಧಿಯಲಿ ಜೀವಭಾರವನು ಮರೆಯುವುದು |
ಹನುಮಂತನುಪದೇಶ - ಮಂಕುತಿಮ್ಮ ||

767
ಕ್ಷಣದಿಂದನುಕ್ಷಣಕೆ, ದಿನದಿಂದ ಮರುದಿನಕೆ |
ಅನಿತನಿತರೊಳೆ ಬದುಕುತಾಯುವನು ಕಳೆವಾ ||
ಮನದ ಲಘುಸಂಚಾರವೊಂದು ಯೋಗದುಪಾಯ |
ಶುನಕೋಪದೇಶವದು - ಮಂಕುತಿಮ್ಮ ||

768
ಗತಿಯೇನು ಎನಗೆನುತ ಕೇಳ್ವವರೆ ಎಲ್ಲರುಂ |
ಹಿತವೆಂತು ಜಗಕೆಂದು ಕೇಳುವವರಾರು? ||
ಮತಿಯ ವಿಶ್ವದಿ ಬೆರಸಿ ಜೀವಿತವ ವಿಸ್ತರಿಸೆ |
ಪಥ ಮುಕ್ತಿಗಾಗಳೇ - ಮಂಕುತಿಮ್ಮ ||

769
ಒಂದುದಿನವೌತಣಕೆ, ಉಪವಾಸಕಿನ್ನೊಂದು |
ಸಂದಣಿಯ ದಿನವೊಂದು, ಬಿಡುವು ದಿನವೊಂದು ||
ಹೊಂದಿರ್ದೊಡುಭಯಮುಂ ಜೀವಕದು ಸುಖ ಚಲನ |
ಒಂದುಕಾಲ್ನಡೆ ಸುಖವೆ? - ಮಂಕುತಿಮ್ಮ ||

770
ನೇತ್ರಯುಗಳಂ ಪಿಡಿಗುಮೊಂದು ಲಕ್ಷ್ಯವ ಕೂಡಿ |
ಹಸ್ತಯುಗ ಸಾಧಿಪುದು ಮನದರ್ಥವೊಂದನ್ ||
ದ್ವೈತದಿಂದದ್ವೈತವದ್ವೈತದೊಳ್ ದ್ವೈತ |
ಚೈತನ್ಯಲೀಲೆಯಿದು - ಮಂಕುತಿಮ್ಮ ||

771
ನೀರಧಿ ಬ್ರಹ್ಮ, ನೀರ್ಗಲ್ ಜೀವವೆನುತೊಂದು |
ಕ್ಷೀರವದು, ಘೃತವಿದದರೊಳಗೆನ್ನುತೊಂದು ||
ಕೀರು ಪರಮಾನ್ನವದು, ದ್ರಾಕ್ಷಿಯಿದೆನುತ್ತೊಂದು |
ಮೂರಿಂತು ಮತವಿವರ - ಮಂಕುತಿಮ್ಮ ||

772
ಮೂರಿರಲಿ ವಾದ, ಮುನ್ನೂರಿರಲಿ; ಸಕಲರುಂ |
ಸಾರವಸ್ತುವನೊಂದನೊಪ್ಪಿಕೊಳುವವರೇ ||
ಪಾರಮಾರ್ಥಿಕವನಂತೆಣಿಸಿದ ವ್ಯವಹಾರ |
ಭಾರವಾಗದು ಜಗಕೆ - ಮಂಕುತಿಮ್ಮ ||

773
ಹೊರಗೆ ಲೋಕಾಸಕ್ತಿಯೊಳಗೆ ಸಕಲ ವಿರಕ್ತಿ |
ಹೊರಗೆ ಕಾರ್ಯಧ್ಯಾನವೊಳಗುದಾಸೀನ ||
ಹೊರಗೆ ಸಂಸೃತಿಭಾರವೊಳಗದರ ತಾತ್ಸಾರ |
ವರಯೋಗಮಾರ್ಗವಿದು - ಮಂಕುತಿಮ್ಮ ||

774
ತರಣಿದರ್ಶನಕಿಂತ ಕಿರಣಾನುಭವ ಸುಲಭ |
ಪರಮಶಾಸ್ತ್ರಕ್ಕಿಂತ ಸರಿಯುದಾಹರಣೆ ||
ಪರಮತತ್ತ್ವವ ಕಂಡ ಗುರುವನರಸುವುದೆಲ್ಲಿ? |
ದೊರೆತಂದು ನೀಂ ಧನ್ಯ - ಮಂಕುತಿಮ್ಮ ||

775
ಕಾಗೆಯುಂ ಕೋಗಿಲೆಯುಮೊಂದೆ ಮೇಲ್ನೋಟಕ್ಕೆ |
ಯೋಗಿಯುಂ ಸಂಸಾರಭೋಗಿಯೇ ಹೊರಕೆ ||
ಲೋಗರವೊಲಿರುತೆ ಸುಖದುಃಖಸಂಭ್ರಮಗಳಲಿ |
ತ್ಯಾಗಿಯವನಂತರದಿ - ಮಂಕುತಿಮ್ಮ ||

776
ಪರಿಪರಿಯ ರೂಪದಲಿ ಪರದೈವ ಕಣ್ಮುಂದೆ |
ಚರಿಸುತಿರೆ ನರನದರ ಗುರುತನರಿಯದೆಯೆ ||
ಧರೆಯದದು ತನ್ನಂದದ ಪ್ರಾಣಿಯೆಂದೆಣಿಸಿ |
ತೊರೆಯುವನು ದೊರೆತುದನು - ಮಂಕುತಿಮ್ಮ ||

777
ಸಾಮಾನ್ಯರೂಪದಲಿ, ಸಂಸಾರಿವೇಷದಲಿ |
ಸ್ವಾಮಿ ನಿನ್ನೆಡೆಗೆ ಬರಬಹುದು ವರ ನೀಡಿ ||
ಮೈಮೆ ಕಾಂಬೊಡೆ ನಿನಗೆ ಸಂಸ್ಕಾರವಿರಬೇಕು |
ತಾಮಸಿಗೆ ವರವೆಲ್ಲಿ? - ಮಂಕುತಿಮ್ಮ ||

778
ವಿಷಯಭೋಗವಿರಕ್ತಿ, ವಿಶ್ವಲೀಲಾಸಕ್ತಿ |
ಕೃಷಿಗೆ ಸಂತತ ದೀಕ್ಷೆ, ವಿಫಲಕೆ ತಿತಿಕ್ಷೆ ||
ವಿಷಮದಲಿ ಸಮದೃಷ್ಟಿ, ವಿವಿಧಾತ್ಮ ಸಂಸೃಷ್ಟಿ |
ಕುಶಲಸಾಧನಗಳಿವು - ಮಂಕುತಿಮ್ಮ ||

779
ದೊರೆವ ಜೀತಕೆ ದುಡಿತ, ಮರುದಿನದ ಚಿಂತೆ ಮಿತ |
ಹೊರೆಯ ಹಗುರಾಗಿಸುವ ಕೆಳೆಯರೊಡನಾಟ ||
ಸರಳತೆಯ ಪರಿತುಷ್ಟಿ, ಪರಮಾರ್ಥ ದೃಷ್ಟಿಯಿವು |
ಸರಿಗೂಡೆ ಸುಕೃತವದು - ಮಂಕುತಿಮ್ಮ ||

780
ಮಳೆಗೊಂದು ಬೆಳೆಗೊಂದು ಫಲಕೊಂದು ಋತುವಂತೆ |
ಬೆಳೆಯಿಪುದು ಜೀವವೃಕ್ಷವ ಕಾಲನಿಯತಿ ||
ತಿಳಿವುಮೊಳ್ತನಮುಂ ವಿರಕ್ತಿಯುಂ ಮುಕ್ತಿಯುಂ |
ಗಳಿಗೆ ಸರಿಸೇರ್ದಂದು - ಮಂಕುತಿಮ್ಮ ||

781
ಕಾಳನುದಯದಿ ಬಿತ್ತೆ ಸಂಜೆಗದು ಪೈರಹುದೆ? |
ಪಾಲುಂಟು ಕಾಲಂಗೆ ನಮ್ಮ ಕೃಷಿಗಳಲಿ ||
ವೇಳೆ ಗಡು ಮರೆತಾತುರದಿನ್ ಅಡುಗೆ ಪಕ್ಕಹುದೆ? |
ತಾಳುಮೆಯೆ ಪರಿಪಾಕ - ಮಂಕುತಿಮ್ಮ ||

782
ಅಂದಿಗಂದಿನ ಕೆಲಸ, ಸಂದನಿತರಲಿ ತೃಪ್ತಿ |
ಕುಂದದುಬ್ಬದ ಮನಸು ಬಂದುದೇನಿರಲಿ ||
ಬಂಧು ಮತಿ ಲೋಕದಲಿ, ಮುನ್ದೃಷ್ಟಿ ಪರಮದಲಿ |
ಹೊಂದಿರಲಿವದು ಪುಣ್ಯ - ಮಂಕುತಿಮ್ಮ ||

783
ಬುದ್ಧಿಮಾತಿದು ನಿನಗೆ : ಸಿದ್ಧನಿರು ಸಕಲಕ್ಕಮ್ |
ಎದ್ದು ಕುಣಿಯಲಿ ಕರ್ಮ, ದೈವ ನಿದ್ರಿಸಲಿ ||
ಅದ್ಭುತಗಳರಿದಲ್ಲ; ಭವ್ಯಕ್ಕೆ ಹದ್ದಿಲ್ಲ |
ಸಿದ್ಧನಾಗೆಲ್ಲಕಂ - ಮಂಕುತಿಮ್ಮ ||

784
ಏನಾದೊಡೆಯುಮಪ್ಪುದುಂಟು, ಸಿದ್ಧನಿರದಕೆ |
ಭಾನು ತಣುವಾದನು; ಸೋಮ ಸುಟ್ಟಾನು ||
ಕ್ಷೋಣಿಯೇ ಕರಗೀತು; ಜಗ ಶೂನ್ಯವಾದೀತು |
ಮೌನದಲಿ ಸಿದ್ಧನಿರು - ಮಂಕುತಿಮ್ಮ ||

785
ಕುಂದದೆಂದಿಗುಮೆನ್ನಿಸುವ ಮನದ ಕಾತರತೆ |
ಯೆಂದೊ ತಾನೇ ಬಳಲಿ ತಣ್ಣಗಾಗುವುದು ||
ಮಂದದಾ ಕಾರ್ಮೋಡ ಬಿರಿದು ರವಿ ಬೆಳಗುವನು |
ಅಂದಿನಾ ಸುಖವೆ ಸುಖ - ಮಂಕುತಿಮ್ಮ ||

786
ಅಂತವೆಲ್ಲಕುಮಿರುವುದಿರಲಿ; ವಿಷಯೇಂದ್ರಿಯದ |
ಸಂತಾಪವುಂ ಮುಗಿವುದೆಂಬುದಲ ಪುಣ್ಯ? ||
ಎಂತೊ, ನಿನ್ನಾಜ್ಞೆಯಿನೂ, ತಾಂ ಸೋತೊ, ಬೇಸತ್ತೊ |
ಶಾಂತಿವಡೆಯಲಿ ಕರಣ - ಮಂಕುತಿಮ್ಮ ||

787
ಶೀತಾಳೆ ಸಿಡುಬು ಶಿಶುಗಳ ಕುಲುಕಿ ತೆರಳುವುದು |
ಪ್ರೀತಿ ಕಾಮನೆಗಳಷ್ಟಿಷ್ಟು ಬೆಳೆದವರ ||
ಯಾತನೆಗಳಿಂ ಕುದಿಸಿ ಕುಲುಕಿ ಬಳಿಕಾರುವುವು |
ಕಾತರತೆ ಕಳೆಯೆ ಸುಖ - ಮಂಕುತಿಮ್ಮ ||

788
ಜ್ವರ ಬಂದು ತನು ಬೆಂದ ಯಾತನೆಯ ಮಾತೇನು? |
ಉರಿಬೇಗೆಯಿಳಿಯೆ ಹೊಸ ಹೊಸಬನಾ ನರನು ||
ಕರಣತಪನೆಗಳಿಳಿಯೆ, ಕಾರಣವದೇನಿರಲಿ |
ಮರುಜನ್ಮವಾತ್ಮಂಗೆ - ಮಂಕುತಿಮ್ಮ ||

789
ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು |
ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ ||
ಬೆಲ್ಲ ಸಕ್ಕರೆಯಾಗು ದೀನದುರ್ಬಲರಿಂಗೆ |
ಎಲ್ಲರೊಳಗೊಂದಾಗು - ಮಂಕುತಿಮ್ಮ ||

790
ಏನಾನುಮಂ ಮಾಡು ಕೈಗೆ ದೊರತುಜ್ಜುಗವ |
ನಾನೇನು ಹುಲುಕಡ್ಡಿಯೆಂಬ ನುಡಿ ಬೇಡ ||
ಹೀನಮಾವುದುಮಿಲ್ಲ ಜಗದ ಗುಡಿಯೂಳಿಗದಿ |
ತಾಣ ನಿನಗಿಹುದಲ್ಲಿ - ಮಂಕುತಿಮ್ಮ ||

791
ದಿನದಿನವು ಕುಸಿದು ಕಟ್ಟಿಸಿಕೊಳುವ ಗುಡಿ ವಿಶ್ವ |
ಜನರೆಲ್ಲರಾಗುಡಿಯ ಕೆಲಸದಾಳುಗಳು ||
ಮನೆಯೇನು? ನಾಡೇನು? ಕುಲವೇನು? ಮಠವೇನು? |
ಎಣಿಸೆಲ್ಲವದೆಯೆಂದು - ಮಂಕುತಿಮ್ಮ ||

792
ಆಶೆಗಳ ಕೆಣಕದಿರು, ಪಾಶಗಳ ಬಿಗಿಯದಿರು |
ಕ್ಲೇಶದ ಪರೀಕ್ಷೆಗಳಿಗೆನ್ನ ಕರೆಯದಿರು ||
ಬೇಸರದ ಪಾತಕಸ್ಮೃತಿಯ ಚುಚ್ಚದಿರ್; ಎನ್ನು- |
ತೀಶನನು ಬೇಡುತಿರೊ - ಮಂಕುತಿಮ್ಮ ||

793
ನಾನೆಂಬುದೊಂದಂಶವಿತರ ಜಗವೊಂದಂಶ |
ನಾನು ನೀನುಗಳಳಿದ ಸರ್ವೈಕ್ಯವೊಂದು ||
ಧ್ಯಾನಿಸುತ್ತೈಕ್ಯವನು ಪಾಲಿಸುವುದುಭಯವನು |
ಜಾಣಿನಾ ನಾಟಕವೊ - ಮಂಕುತಿಮ್ಮ ||

794
ಮನಸು ಬೆಳೆಯಲಿ ಭುಜಿಸಿ ನೂರು ನೂರನುಭವವ |
ಹೊನಲು ನೂರೀ ಬಾಳ ಕಡಲನುಬ್ಬಿಸಲಿ ||
ತನುಬಂಧ ಕಳಚಿ, ಜೀವವಖಂಡಚೇತನದ |
ಕುಣಿತದಲಿ ಕೂಡಿರಲಿ - ಮಂಕುತಿಮ್ಮ ||

795
ಮೊಳೆವ ಸಸಿಯೊಳು ನಾನು, ತೊಳಗುವಿನನೊಳು ನಾನು |
ಬೆಳೆವ ಶಿಶುವೊಳು ನಾನು, ಕೆಳೆನೋಟ ನಾನು ||
ಕಳಕಳಿಸುವೆಲ್ಲಮುಂ ನಾನೆಂದು ಭಾವಿಸುತೆ |
ಒಳಗೂಡು ವಿಶ್ವದಲಿ - ಮಂಕುತಿಮ್ಮ ||

796
ಸರಿ ಹದದ ಕಾಳು ತಿರೆಯಪ್ಪಿದೊಡೆ ಮೊಳೆಯುವುದು |
ಹುರಿದೊಡದು ಮೊಳೆಯದರಳಹುದು ಬಾಯ್ಸವಿಗೆ ||
ಪರಮತತ್ತ್ವಜ್ಞಾನಿಯೊಡರಿಸುವ ಕರುಮಗಳು |
ಮರುಬೆಳೆಗೆ ಬಿತ್ತಲ್ಲ - ಮಂಕುತಿಮ್ಮ ||

797
ಸುಟ್ಟಿ ಹಗ್ಗದ ಬೂದಿ ರೂಪಮಾತ್ರದಿ ಹಗ್ಗ |
ಗಟ್ಟಿ ಜಗವಂತು ತತ್ತ್ವಜ್ಞಾನ ಸೋಕೆ ||
ತೊಟ್ಟಿಹುದು ಲೋಕರೂಪವ, ತಾತ್ತ್ವಿಕನ ವೃತ್ತಿ |
ಕಟ್ಟಿದವನಾತ್ಮವನು - ಮಂಕುತಿಮ್ಮ ||

798
ನೈರಾಶ್ಯನಿರತಂಗೆ ದೇವತೆಗಳಿಂದೇನು? |
ವೈರಾಗ್ಯಪಥಿಕಂಗೆ ನಷ್ಟಭಯವೇನು? ||
ಪಾರಂಗತಂಗಂತರಾಳ ದೂರಗಳೇನು? |
ಸ್ವೈರಪಥವಾತನದು - ಮಂಕುತಿಮ್ಮ ||

799
ಘೋರವನು ಮೋಹವನು ದೇವತೆಗಳಾಗಿಪರು |
ಭೀರು ಯಾಚಕರಾಸ್ಥೆ ತಪ್ಪದಿರಲೆಂದು ||
ಆರಿಂದಲೇಂ ಭೀತಿ, ಏಂ ಬಂದೊಡದ ಕೊಳುವ |
ಪಾರಮಾರ್ಥಿಕನಿಗೆಲೊ? - ಮಂಕುತಿಮ್ಮ ||

800
ಹಣ್ಣೇನು ಕಾಯೇನು ಹೊಟ್ಟೆ ತುಂಬಿರುವಂಗೆ? |
ಪುಣ್ಯವೇಂ ಪಾಪವೇಂ ಪೂರ್ಣದರ್ಶನಿಗೆ? ||
ಉನ್ನತದ ಶಿಖರದಿಂ ತಿಟ್ಟೇನು ಕುಳಿಯೇನು? |
ಪೂರ್ಣತೆಗೆ ಸೊಟ್ಟೇನು? - ಮಂಕುತಿಮ್ಮ ||

801
ಕೋಡುಗಲ್ಲನು ಹತ್ತಿ ದೂರವನು ನೋಳ್ಪಂಗೆ |
ಗೋಡೆಗೊತ್ತುಗಳೇನು? ಮೇಡು ಕುಳಿಯೇನು? ||
ನೋಡು ನೀನುನ್ನತದಿ ನಿಂತು ಜನಜೀವಿತವ |
ಮಾಡುದಾರದ ಮನವ - ಮಂಕುತಿಮ್ಮ ||

802
ಹರ್ಮ್ಯಾಗ್ರಕೇರಿ ಸೋಪಾನದಿನತೀತನಹೆ |
ನಿರ್ಮಮತೆಗೇರಿ ಕರ್ಮಾತೀತನಪ್ಪೆ ||
ಬ್ರಹ್ಮಪದದಿಂದ ಧರ್ಮಾಧರ್ಮಗಳ ನಿಯಮ |
ನಿರ್ಮಾಲ್ಯವಾಗುವುದು - ಮಂಕುತಿಮ್ಮ ||

803
ಎಲ್ಲರೊಳು ತಾನು ತನ್ನೊಳಗೆಲ್ಲರಿರುವವೋ- |
ಲೆಲ್ಲೆಲ್ಲಿಯುಂ ನೋಡಿ ನಡೆದು ನಗುತಳುತ ||
ಬೆಲ್ಲ ಲೋಕಕ್ಕಾಗಿ ತನಗೆ ತಾಂ ಕಲ್ಲಾಗ |
ಬಲ್ಲವನೆ ಮುಕ್ತನಲ - ಮಂಕುತಿಮ್ಮ ||

804
ಶುಭವಾವುದಶುಭವಾವುದು ಲೋಕದಲಿ ನೋಡೆ? |
ವಿಭಜಿಸಲ್ಕಾಗದನ್ಯೋನ್ಯಸಂಬಂಧ ||
ಉಭಯವನು ಮೀರ್ದ ಸಾಮ್ಯದ ನೀತಿಯೊಂದಿಹುದು |
ಅಭಯಪಥವದು ನಿನಗೆ - ಮಂಕುತಿಮ್ಮ ||

805
ಸಾರ್ವಭೌಮನು ಸೃಷ್ಟಿಯೊಳಗದೊರ್ವನೆ ಕಾಣೊ |
ಸರ್ವವನು ತನ್ನಾತ್ಮವೆಂದು ಬದುಕುವನು ||
ನಿರ್ವಿಕಾರಾಂತರಂಗದಿ ಜಗವ ಧರಿಸುವನು |
ಸರ್ವಮಂಗಳನವನು - ಮಂಕುತಿಮ್ಮ ||

806
ಗರ್ವಪಡದುಪಕಾರಿ, ದರ್ಪ ಬಿಟ್ಟಧಿಕಾರಿ |
ನಿರ್ವಿಕಾರದ ನಯನದಿಂ ನೋಳ್ಪುದಾರಿ ||
ಸರ್ವಧರ್ಮಾಧಾರಿ, ನಿರ್ವಾಣಸಂಚಾರಿ |
ಉರ್ವರೆಗೆ ಗುರುವವನು - ಮಂಕುತಿಮ್ಮ ||

807
ಜಗದ ಕಲ್ಯಾಣದೊಳಗಾತ್ಮ ಕಲ್ಯಾಣವನು |
ಜಗದ ಬೀದಿಗಳೊಳು ನಿಜಾತ್ಮಯಾತ್ರೆಯನು ||
ಜಗದ ಜೀವಿತದಿ ನಿಜಜೀವಿತದ ಪೂರ್ತಿಯನು |
ಬಗೆಯಲರಿತವನೆ ಸುಖಿ - ಮಂಕುತಿಮ್ಮ ||

808
ಚಿರಶಿಕ್ಷೆಯಿಂ ನಿನಗೆ ಸರ್ವಾತ್ಮತಾಭ್ಯಾಸ |
ಸರಳ ಸಹಜವದಹುದು ಮೂಗಿನುಸಿರವೊಲು ||
ಪರನಿಯತಿಯಿರದು ಸ್ವತಸ್ಸಿದ್ಧ ನಿಯತಿಯಿರೆ |
ಹೊರಸಡಿಲಕೊಳಹಿಡಿತ - ಮಂಕುತಿಮ್ಮ ||

809
ದ್ವೈತವೇನದ್ವೈತವೇನಾತ್ಮದರ್ಶನಿಗೆ? |
ಶ್ರೌತಾದಿವಿಧಿಯೇನು? ತಪನಿಯಮವೇನು? ||
ನೀತಿ ಸರ್ವಾತ್ಮಮತಿಯದರಿನಮಿತಪ್ರೀತಿ |
ಭೀತಿಯಿಲ್ಲದನವನು - ಮಂಕುತಿಮ್ಮ ||

810
ಬರಿಭಕ್ತಿ ಬರಿಕರ್ಮ ಬರಿತರ್ಕ ದೊರಕಿಸದು |
ಪರಮಾತ್ಮದರ್ಶನವ; ಬೇಕದಕೆ ತಪಸು ||
ಪರಿಪೂರ್ಣ ಜೀವನಾನುಭವತಾಪದಿ ಮತಿಯು |
ಪರಿಪಕ್ವವಾಗಲದು - ಮಂಕುತಿಮ್ಮ ||

811
ಹೊರಗು ಹೊರೆಯಾಗದವೊಲ್ ಒಳಗನನುಗೊಳಿಸಿ, ನೀ- |
ನೊಳಗು ಶೆಕೆಯಾಗದವೊಲ್ ಅಳವಡಿಸೆ ಹೊರಗ ||
ಸರಿಸಮದೊಳೆರಡನುಂ ಬಾಳಿನಲಿ ಜೋಡಿಪುದೆ |
ಪರಮಜೀವನಯೋಗ - ಮಂಕುತಿಮ್ಮ ||

812
ಅಳಬೇಕು, ನಗಬೇಕು, ಸಮತೆ ಶಮವಿರಬೇಕು |
ಹೊಳೆಯ ನೆರೆವೂಲು ಹೃದಯರಸ ಹರಿಯಬೇಕು ||
ಅಲೆಯಿನರಲು ಗದ ಬಂಡೆಯವೊಲಾತ್ಮವಿರಬೇಕು |
ತಿಳಿದವರ ಚರಿತವದು - ಮಂಕುತಿಮ್ಮ ||

813
ಬಿಟ್ಟೆನೆಲ್ಲವನೆಂಬ ಹೃದಯಶೋಷಣೆ ಬೇಡ |
ಕಟ್ಟಿಕೊಳ್ಳುವ ಶಿರಃಪೀಡೆಯುಂ ಬೇಡ ||
ತೊಟ್ಟು ನಿರಹಂಕೃತಿಯ ಕವಚವನು ನೀಂ ಪೋರು |
ಮುಟ್ಟದಿಳೆಯಸಿ ನಿನ್ನ - ಮಂಕುತಿಮ್ಮ ||

814
ನ್ಯಾಯಾಧಿಪತಿ ತನ್ನ ಮತಿ ಮನಸುಗಳನೆಲ್ಲ |
ಸ್ವೀಯಲಾಭಸ್ಮರಣೆಯುಳಿದು ವಿವದಿಗಳಾ ||
ದಾಯನಿರ್ಣಯಕೆ ಯೋಜಿಸುವಂತೆ, ನೀಂ ಜಗದ |
ಶ್ರೇಯಸ್ಸಿಗುಜ್ಜುಗಿಸು - ಮಂಕುತಿಮ್ಮ ||

815
ಪೌರುಷಾಶ್ವಕ್ಕಾಶೆ ಛಾಟಿ, ಭಯ ಕಡಿವಾಣ |
ಹಾರಾಟವದರದಾ ವೇಧೆಗಳ ನಡುವೆ ||
ಧೀರನೇರಿರೆ, ಹೊಡೆತ ಕಡಿತವಿಲ್ಲದೆ ಗುರಿಗೆ |
ಸಾರುವುದು ನೈಜದಿಂ - ಮಂಕುತಿಮ್ಮ ||

816
ಆರೋಗ್ಯಭಾಗ್ಯವನು ಮನಕೆ ತನುಗೆಂತಂತೆ |
ಹಾರಯಿಸುವೊಡೆ ಹಲವು ಸರಳನೀತಿಗಳ ||
ಧಾರಯಿಸು ನೆನಸಿನಲಿ ನುಡಿಯಲ್ಲಿ ನಡತೆಯಲಿ |
ಪಾರಾಗು ಸುಳಿಯಿಂದ - ಮಂಕುತಿಮ್ಮ ||

817
ಮರವ ನೀನರಿಯುವೊಡೆ ಬುಡವ ಕೀಳಲುಬೇಡ |
ತರಿಯಬೇಡೆಲೆಕಡ್ಡಿಗಳ ಪರೀಕ್ಷಣಕೆ ||
ಎರೆ ನೀರ, ಸುರಿ ಗೊಬ್ಬರವ, ಕೆದಕು ಪಾತಿಯನು |
ನಿರುಕಿಸುತ ತಳಿರಲರ - ಮಂಕುತಿಮ್ಮ ||

818
ವನಜಂತುಗಳ ಸಸ್ಯಮೂಲಿಕಾಹಾರದಿಂ |
ಗುಣವನರಿತವರಾದಿವೈದ್ಯರೌಷಧದೊಳ್ ||
ಒಣತರ್ಕಗಳಿನೇನು? ಜೀವನದ ವಿವಿಧರಸ- |
ದನುಭವದಿ ತತ್ತ್ವವೆಲೊ - ಮಂಕುತಿಮ್ಮ ||

819
ಕಡಿದೊಡೆ ಪರೀಕ್ಷೆಗುಳಿವುವು ಸತ್ತನಾರುಗಳು |
ಕಡಿಯದಿರೆ ಮರದಿ ಪರಿಯುವುದು ಜೀವರಸ ||
ಬಿಡುವಮ್ ಈ ಬಾಳ್ ಅದೇಕೆಂಬ ಚರ್ಚೆಯ; ನಾವು |
ದುಡಿವಮ್ ಅದು ಪೆಂಪುಗೊಳೆ - ಮಂಕುತಿಮ್ಮ ||

820
ಜೀವನವ್ಯಾಪಾರ ಮೂವರೊಟ್ಟುವಿಚಾರ |
ಭಾವಿಪೊಡೆ ನೀನು, ಜಗ, ಇನ್ನೊಂದದೃಷ್ಟ ||
ಆವಗಂ ಮೂರನೆಯ ಭಾಗಸ್ಥನಿಚ್ಛೆ ಬಲ |
ಈ ವಿವರವರಿಯೆ ಸುಖ - ಮಂಕುತಿಮ್ಮ ||

821
ಏನೇನು ಹಾರಾಟ ಸುಖಕೆಂದು ಲೋಕದಲಿ |
ತಾನಾಗಿ ಗಾಳಿವೊಲ್ ಬಂದ ಸುಖವೆ ಸುಖ ||
ನೀನೆ ಕೈ ಬೀಸಿಕೊಳೆ ನೋವು ಬೆವರುಗಳೆ ಫಲ |
ಮಾಣು ಮನದುಬ್ಬಸವ - ಮಂಕುತಿಮ್ಮ ||

822
ಆತುರತೆಯಿರದ ಸತತೋದ್ಯೋಗ ಸರ್ವಹಿತ |
ಭೂತದಾವೇಶವಾತುರತೆಯಾತ್ಮಕ್ಕೆ ||
ಕಾತರನು ನೀನಾಗೆ ಮೂರನೆಯ ಸಹಭಾಗಿ |
ಪ್ರೀತನಾಗುವನೇನೊ? - ಮಂಕುತಿಮ್ಮ ||

823
ಎಣಿಕೆಯೊಳಿತಾದೊಡೆಯುಮೊಳಿತನಾಗಿಸದು ಹಟ |
ಮಣಿಕನಕ ಸಂಕೋಲೆ ತನುವ ಬಂಧಿಸದೇಂ? ||
ತನಯನಿರಿದಸಿ ನಿನ್ನ ಮೈಯ ಹುಣ್ಣಾಗಿಸದೆ? |
ಮನ ಸರ್ವಸಮವಿರಲಿ - ಮಂಕುತಿಮ್ಮ ||

824
ಗುರಿಯನೈದದೊಡೊಮ್ಮೆ ಮರಳಿ ನೀನುಜ್ಜುಗಿಸು |
ಕರಯುಕ್ತಿ ಪೆರ್ಚಿಯೋ, ದೈವ ಕರುಣಿಸಿಯೋ ||
ಕರುಮಋಣ ಸಂಧಿಸಿಯೊ ಕೈಗೂಡಬಹುದು ಗುರಿ |
ಪರವೆಯಿಡದುಜ್ಜುಗಿಸು - ಮಂಕುತಿಮ್ಮ ||

825
ಕಲೆಗಳಲಿ ಪರಮಕಲೆ ಜೀವನದ ಲಲಿತಕಲೆ |
ಕಲಿಸಲದನಳವಲ್ಲ ಬಾಹ್ಯಬೋಧನೆಯಿಂ ||
ಒಲಿದೊಲಿಸಿಕೊಳುವ ಲೌಕಿಕನಯದ ಸೊಗಸ ನೀಂ |
ತಿಳಿವುದೊಳಹದದಿಂದ - ಮಂಕುತಿಮ್ಮ ||

826
ಸಂಗೀತಕಲೆಯೊಂದು, ಸಾಹಿತ್ಯಕಲೆಯೊಂದು |
ಅಂಗಾಂಗ ಭಾವ ರೂಪಣದ ಕಲೆಯೊಂದು ||
ಸಂಗಳಿಸಲೀ ಕಲೆಗಳನುನಯವು ಚರ್ಯೆಯಲಿ |
ಮಂಗಳೋನ್ನತ ಕಲೆಯೊ - ಮಂಕುತಿಮ್ಮ ||

827
ಲೋಕದಲಿ ಭಯವಿರಲಿ, ನಯವಿರಲಿ, ದಯೆಯಿರಲಿ |
ನೂಕುನುಗ್ಗುಗಳತ್ತ, ಸೋಂಕುರೋಗಗಳು ||
ಸಾಕಿ ಸಲಹುವರುಮ್ ಅತ್ತಲೆ ನಿನಗೆ; ನಿನ್ನೆಲ್ಲ |
ಲೋಕ ಮೂಲವು ನೋಡೊ - ಮಂಕುತಿಮ್ಮ ||

828
ಕಳವಳವ ನೀಗಿಬಿಡು, ತಳಮಳವ ದೂರವಿಡು |
ಕಳೆ, ತಳ್ಳು ಗಲಭೆ ಗಾಬರಿಯ ಮನದಿಂದ ||
ಅಲೆದಾಡುತಿರೆ ದೀಪ ಕಣ್ಗೆ ಗುರಿ ತಪ್ಪುವುದು |
ತಿಳಿತಿಳಿವು ಶಾಂತಿಯಲಿ - ಮಂಕುತಿಮ್ಮ ||

829
ಕೊಳದ ಜಲ ನಿನ್ನ ಮನ; ಲೋಗರದರೊಳಗಿಳಿಯೆ |
ತಳದ ಕಸ ತೇಲುತ್ತ ಬಗ್ಗಡವದಹುದು ||
ಕಲಕದದ್ದದೆ ಕೊಂಚ ಬಿಟ್ಟಿದ್ದೊಡದು ಮರಳಿ |
ತಿಳಿಯಹುದು ಶಾಂತಿಯಲಿ - ಮಂಕುತಿಮ್ಮ ||

830
ಕೊಳಕೆಂದು, ಹುಳುಕೆಂದು, ಹೇಸಿಗೆಯ ಹುಳುವೆಂದು |
ಇಳೆಯೊಳಾವುದರೊಳಮಸಹ್ಯಪಡಬೇಡ ||
ಬೆಲೆಯುಂಟು ಕೊಳೆಗಮೀ ಜೀವಸಾಮಗ್ರಿಯಲಿ |
ಕೊಳೆ ಶುಚಿಖ್ಯಾಪಕವೊ - ಮಂಕುತಿಮ್ಮ ||

831
ತಳೆಯಲಾರನೆ ಬೊಮ್ಮ ಬೀಭತ್ಸರೂಪಗಳ? |
ನಲಿಯಲಾರನೆ ತಿಪ್ಪೆರೊಚ್ಚು ನಾತದಲಿ? ||
ಮಲವೇನೊ! ಹೊಲೆಯೇನೊ! ಜೀವಸಂಬಂಧವಲ |
ಮಲಿನದಲಿ ನೆನೆ ಶುಚಿಯ - ಮಂಕುತಿಮ್ಮ ||

832
ಗುಡಿಯ ಪೂಜೆಯೊ, ಕಥೆಯೊ, ಸೊಗಸುನೋಟವೊ, ಹಾಡೊ |
ಬಡವರಿಂಗುಪಕೃತಿಯೊ, ಆವುದೋ ಮನದ ||
ಬಡಿದಾಟವನು ನಿಲಿಸಿ ನೆಮ್ಮದಿಯನೀವೊಡದೆ |
ಬಿಡುಗಡೆಯೊ ಜೀವಕ್ಕೆ - ಮಂಕುತಿಮ್ಮ ||

833
ನಗುನಗುವ ಕಣ್ಗಳಿಗೆ ಹೊಗೆಯನೂದಲುಬೇಡ |
ಜಗವ ಸುಡುಗಾಡೆನುವ ಕಟುತಪಸು ಬೇಡ ||
ಮಗುವು ತಾಯ್ತಂದೆಕಣ್ಮುಂದೆ ನಡೆವಂತೆ ನಡೆ |
ಮಿಗೆಚಿಂತೆ ತಲೆಹರಟೆ - ಮಂಕುತಿಮ್ಮ ||

834
ಹೀಗೊ ಹಾಗೋ ಹೇಗೊ ಜನುಮಕಥೆ ಮುಗಿಯುವುದು |
ಈಗಲೋ ಆಗಲೋ ಎಂದೊ ಮುಗಿಯುವುದು ||
ಸಾಗಿಮುಗಿವುದು; ಮುಗಿದು ಮರೆವುದದೆ ನರಸುಕೃತ |
ಭೂಗತಸ್ಥಿತಿ ಮುಕುತಿ - ಮಂಕುತಿಮ್ಮ ||

835
ಮೃತ್ಯುವಿಂ ಭಯವೇಕೆ? ದೇಶಾಂತರಕ್ಕೊಯ್ವ |
ಮಿತ್ರನಾತಂ; ಚಿತ್ರ ಹೊಸದಿರ್ಪುದಲ್ಲಿ ||
ಸಾತ್ತ್ವಿಕದಿ ಬಾಳ್ದವಂಗೆತ್ತಲೇಂ ಭಯವಿಹುದು? |
ಸತ್ರ ಹೊಸದಿಹುದು ನಡೆ - ಮಂಕುತಿಮ್ಮ ||

836
ಬಹುರಹಸ್ಯವೊ ಸೃಷ್ಟಿ, ಬಹುರಹಸ್ಯವೊ ಜೀವ |
ಅಹುದದಲ್ಲವಿದೆಂಬ ವಾದ ಬರಿ ಹರಟೆ ||
ಗುಹೆಯೊಳಿಹುದೆಲ್ಲ ತತ್ತ್ವಗಳ ತತ್ತ್ವದ ಮೂಲ |
ಬಹಿರಂತರ ರಹಸ್ಯ - ಮಂಕುತಿಮ್ಮ ||

837
ಎತ್ತೆತ್ತ ನೋಡಲುಂ ಗುಪ್ತಭೂತಗಳಯ್ಯ! |
ಕತ್ತಲೆಯೊಳಾಡುತಿಹ ದೆವ್ವಗಳ ಸುಳಿವು ||
ಮುತ್ತಿ ಮುಸುಕಿಹುದು ಜೀವವ ರಹಸ್ಯವದೊಂದು |
ಬೆತ್ತಲೆಯದಹುದೆಂತು? - ಮಂಕುತಿಮ್ಮ ||

838
ಮುಸುಕಿಹುದು ಹುಟ್ಟಳಿವುಗಳ ಕಾರಣವ ಮಬ್ಬು |
ಮಸಕಿನಲಿ ಹುದುಗಿಹವು ಮೋಹಮೂಲಗಳು ||
ನಿಶಿ ಮುಚ್ಚಿಹುದು ದಿನಪಚಂದಿರರ ಹುಟ್ಟೆಡೆಯ |
ಮಿಸುಕುವ ರಹಸ್ಯ ನೀಂ - ಮಂಕುತಿಮ್ಮ ||

839
ಆವ ಗಾಳಿಯದಾವ ಧೂಳ್ಕಣವ ಪೊತ್ತಿಹುದೊ! |
ಆವ ಧೂಳಿನೊಳಾವ ಚೈತನ್ಯಕಣವೋ! ||
ಜೀವವಿಂತಜ್ಞಾನ ಸೂತ್ರದಾಟದ ಬೊಂಬೆ |
ಭಾವಿಸಾ ಸೂತ್ರಗಳ - ಮಂಕುತಿಮ್ಮ ||

840
ಭುಕ್ತಿ ನಿನಗೆಲ್ಲಿಯದು? ಭತ್ತ ತಾನೆಲ್ಲಿಯದೊ! |
ಎತ್ತಲಿನ ಗೊಬ್ಬರವೊ! ಎತ್ತಲಿನ ನೀರೋ! ||
ಭಾಕ್ತವಾರಾರ ದುಡಿತದಿನೊ ನಿನಗಾಗಿಹುದು! |
ಗುಪ್ತಗಾಮಿನಿಯೊ ಋಣ - ಮಂಕುತಿಮ್ಮ ||

841
ನಿನ್ನೆಂಜಲಗುಳಾವ ಕಾಲುವೆಯ ಸೇರುವುದೊ! |
ಮಣ್ಣಾವುದದರಿಂದೆ ಗರ್ಭವತಿಯಹುದೋ! ||
ಅನ್ನವದರಿಂದಾರ್ಗೊ! ಲೋಕಕವರಿಂದೇನೊ! |
ಬಣ್ನಿಸುವರಾರದನು? - ಮಂಕುತಿಮ್ಮ ||

842
ಆವ ನೆಲದಲಿ ಮೇದೊ, ಆವ ನೀರನು ಕುಡಿದೊ |
ಆವು ಹಾಲ್ಗರೆವುದದನಾರು ಕುಡಿಯುವನೋ! ||
ಆವ ಬಲವದರಿನೊಗೆದೇಂಗೆಯ್ಸುವುದೊ ಜಗಕೆ! |
ಭಾವಿಸಾ ಋಣಗತಿಯ - ಮಂಕುತಿಮ್ಮ ||

843
ಸೇರಿರ್ಪುವುಸಿರುಸಿರುಗಳೂಳೆಷ್ಟೊ ಜೀವಾಣು |
ಹಾರುತಿಹುವೆಷ್ಟೊ ಚೇತನ ಧೂಳುಕಣದೊಳ್ ||
ಪ್ರಾರಬ್ಧಗತಿಯ ನಿಶ್ಚಯದಿ ತಿಳಿವವರಿಲ್ಲ |
ಆ ರಹಸ್ಯಕ್ಕೆರಗೊ! - ಮಂಕುತಿಮ್ಮ ||

844
ಬೀಳಿಸದಿರೆಲೊ ನಿನ್ನ ನೆರಳನಿತರರ ಮೇಲೆ |
ಬಾಳಿಕೊಳುಗವರು ತಂತಮ್ಮ ಬೆಳಕಿನಲಿ ||
ಮೇಲುಬೀಳುಗಳಾರ್ಗದೆಂತೊ ನೀನೇನರಿವೆ? |
ತಾಳದಿರು ಗುರುತನವ - ಮಂಕುತಿಮ್ಮ ||

845
ಪೆರತೊಂದು ಬಾಳ ನೀನಾಳ್ವ ಸಾಹಸವೇಕೆ? |
ಹೊರೆ ಸಾಲದೇ ನಿನಗೆ, ಪೆರರ್ಗೆ ಹೊಣೆವೋಗೆ? ||
ಮರದಿ ನನೆ ನೈಜದಿಂದರಳೆ ಸೊಗವೆಲ್ಲರ್ಗೆ |
ಸೆರೆಮನೆಯ ಸೇಮವೇಂ? - ಮಂಕುತಿಮ್ಮ ||

846
ಮರಣದಿಂ ಮುಂದೇನು? ಪ್ರೇತವೋ? ಭೂತವೋ? |
ಪರಲೋಕವೋ? ಪುನರ್ಜನ್ಮವೊ? ಅದೇನೋ! ||
ತಿರುಗಿ ಬಂದವರಿಲ್ಲ, ವರದಿ ತಂದವರಿಲ್ಲ |
ಧರೆಯ ಬಾಳ್ಗದರಿನೇಂ? - ಮಂಕುತಿಮ್ಮ ||

847
ನೆಲದ ಬೇಸಾಯ ತಾನೊಳ್ಳಿತಾಗಿರೆ ನಿನಗೆ |
ಫಲವದೆಂತಹುದೆಂಬ ಶಂಕೆಗೆಡೆಯುಂಟೆ? ||
ಒಳಿತರೊಳೆ ನೀಂ ಬಾಳು; ಪರವದೆಂತಿರ್ಡೊಡೇಂ? |
ಇಳೆಯೆ ಬಾಗಿಲು ಪರಕೆ - ಮಂಕುತಿಮ್ಮ ||

848
ಸ್ಥಿರ ಹಿಮಾಚಲ ಬೊಮ್ಮ, ಚರ ಜಾಹ್ನವಿಯೆ ಮಾಯೆ |
ಪರಸತ್ತ್ವಘನದ ವಿದ್ರವರೂಪ ವಿಶ್ವ ||
ಪರಮಾರ್ಥಕೊಂದಕ್ಷಿ ವೆವಹಾರಕಿನ್ನೊಂದು |
ಎರಡುಮೊಂದಾಂತರ್ಯ - ಮಂಕುತಿಮ್ಮ ||

849
ಒಮ್ಮನಸಿನಿಂದ ನೀನೀ ತತ್ತ್ವವಂ ಗ್ರಹಿಸು |
ಬ್ರಹ್ಮಲೀಲೆಗೆ ಗೊತ್ತುಗುರಿ ಲೆಕ್ಕವಿಲ್ಲ ||
ಸುಮ್ಮನಿರು ನಿನ್ನ ಪಾಡನು ಪಡುತ ತುಟಿ ಬಿಗಿದು |
ನೆಮ್ಮದಿಗೆ ದಾರಿಯದು - ಮಂಕುತಿಮ್ಮ ||

850
ನೃತ್ಯವೋ ಬ್ರಹ್ಮನಟರಾಜನದು ಜಗವೆಲ್ಲ |
ಪ್ರತ್ಯೇಕ ಜೀವದಶೆಯವನಂಗಭಂಗಿ ||
ಸತ್ಯ ಸತ್ತ್ವಜ್ವಾಲೆ ವಿಶ್ವಮಾಯಾಲೀಲೆ |
ಪ್ರತ್ಯಗಾತ್ಮನು ನೀನು - ಮಂಕುತಿಮ್ಮ ||

851
ಕಣ್ಣೆರೆದು ನೋಡು, ಚಿತ್ಸತ್ತ್ವಮೂರ್ತಿಯ ನೃತ್ಯ |
ಕಣ್ಮುಚ್ಚಿನೋಡು, ನಿಶ್ಚಲ ಶುದ್ಧಸತ್ತ್ವ ||
ಉನ್ಮುಖನು ನೀನೆರಡು ಜಗಕಮಿರುತಿರಲಾಗ |
ಹೃನ್ಮಧ್ಯದಲಿ ಶಾಂತಿ - ಮಂಕುತಿಮ್ಮ ||

852
ನವನವ ಪ್ರಶ್ನೆಗಳು, ನವನವ ಪರೀಕ್ಷೆಗಳು |
ದಿವಸಾಬ್ದಯುಗ ಚಕ್ರ ತಿರುತಿರುಗಿದಂತೆ ||
ಪ್ರವಹಿಪ್ಪುವದರಂತೆ ಪೌರುಷ ಹಿತಪ್ರಜ್ಞೆ |
ಅವಿರತದ ಚೈತನ್ಯ - ಮಂಕುತಿಮ್ಮ ||

853
ಸಾರ್ವಲೌಕಿಕಸೌಖ್ಯ ನೆಲಸುವನ್ನೆಗಮಿಳೆಯೊ- |
ಳೊರ್ವನುಂ ಸುಖಿಯಲ್ತು, ದಿಟದಿ, ಪೂರ್ಣದಲಿ ||
ಒರ್ವನುಬ್ಬಸದ ಬಿಸಿ ವಿಷವಾಯುವಾಗಿ ತಾ |
ನುರ್ವರೆಯ ಮುಸುಕೀತು - ಮಂಕುತಿಮ್ಮ ||

854
ಸರ್ವಹಿತವೊಂದುಂಟೆ? ಅದಕೆ ಪಥ ನಮಗುಂಟೆ? |
ನಿರ್ವಾಹಸಾಧನಗಳೆತ್ತ? ಗುರುವೆತ್ತ? ||
ಪೂರ್ವವನು ನೆಟ್ಟಗಿಪ ನರಕೃತಿಯಿನಾಗದೇನ್ |
ಅರ್ವಾಚಿಯಲಿ ಸೊಟ್ಟು? - ಮಂಕುತಿಮ್ಮ ||

855
ಸುಲಭವೇನಲ್ಲ ನರಲೋಕಹಿತನಿರ್ಧಾರ |
ಬಲಕೆ ನೋಳ್ವರ್ ಕೆಲರು, ಕೆಲರೆಡಕೆ ನೋಳ್ವರ್ ||
ವಿಲವಿಲನೆ ಚಪಲಿಸುವ ಮನುಜಸ್ವಭಾವದಲಿ |
ನೆಲೆಗೊತ್ತು ಹಿತಕೆಲ್ಲಿ? - ಮಂಕುತಿಮ್ಮ ||

856
ರಾಮಕಾರ್ಮುಕ, ಕೃಷ್ಣಯುಕ್ತಿ, ಗೌತಮಕರುಣೆ |
ಭೂಮಿಭಾರವನಿಳುಹೆ ಸಾಲದಾಗಿರಲು ||
ಸಾಮಾನ್ಯರೆನಿತು ತಾಂ ಪೆಣಗಿದೊಡಮೇನಹುದು? |
ಕ್ಷೇಮವೆಂದುಂ ಮೃಗ್ಯ - ಮಂಕುತಿಮ್ಮ ||

857
ಸತತಮಾರ್ಗಣೆ, ಸಿದ್ಧಿಯಂತಿರಲಿ, ಮಾರ್ಗಣೆಯೆ |
ಗತಿ ಮನುಜಲೋಕಕ್ಕೆ; ಜಗದ ಜೀವವದು ||
ಕೃತಕಾಮರೆಲ್ಲರಾದೊಡೆ ಕೃತ್ಯವುಳಿಯದೊಡೆ |
ಕಥೆ ಮುಗಿವುದಲ ಜಗಕೆ? - ಮಂಕುತಿಮ್ಮ ||

858
ಪ್ರಿಯಹಿತಗಳನ್ವೇಷೆಯಿಂ ಕರ್ಮಪರಿಪೋಷೆ |
ಕ್ರಿಯೆಯ ಪಾರಂಪರ್ಯ ಜನ್ಮಾಂತರೀಯ ||
ನಿಯತವಿಂತು ಜಗತ್ಪ್ರವರ್ಧನೆಗೆ ನರತೃಷ್ಣೆ |
ಜಯ ಪೂರ್ಣವೆಂದದಕೆ? - ಮಂಕುತಿಮ್ಮ ||

859
ಪ್ರಕೃತಿಯನವರತ ಮನುಜನ ತಿದ್ದುತಿರುವಂತೆ |
ವಿಕೃತಿಗೊಳಿಸುವನವನುಮ್ ಆಕೆಯಂಗಗಳ ||
ಭೂಕೃಷಿಕ ರಸತಂತ್ರಿ ಶಿಲ್ಪಿ ವಾಹನಯಂತ್ರಿ |
ವ್ಯಾಕೃತಿಸರೇನವಳ? - ಮಂಕುತಿಮ್ಮ ||

860
ಸೃಷ್ಟಿಚೋದನೆಗಳಿಂ ನರನೊಳಿಷ್ಟಗಳುದಯ- |
ವಿಷ್ಟಸಿದ್ಧಿಗೆ ಯಂತ್ರತಂತ್ರಗಳ ಯುಕ್ತಿ ||
ತ್ವಷ್ಟೃಕುಶಲದೆ ಸೃಷ್ಟಿವಿಕೃತಿ; ಇಂತನ್ಯೋನ್ಯ- |
ಸ್ಪೃಷ್ಟರ್ ಪ್ರಕೃತಿ ನರರು - ಮಂಕುತಿಮ್ಮ ||

861
ದಿವ್ಯಚರಿತಂಗಳ ಪ್ರತ್ಯುಕ್ತಿ ನರಚರಿತೆ |
ಕಾವ್ಯವಿಜ್ಞಾನಗಳ್ ನಿಗಮಾನುಸರಗಳ್ ||
ನವ್ಯಸಂಪದವಾರ್ಷಸಂಪದುದ್ಧೃತವಿಂತು |
ಸವ್ಯಪೇಕ್ಷಗಳುಭಯ - ಮಂಕುತಿಮ್ಮ ||

862
ಇರುವುದರೊಳಾದನಿತು ಸೊಗವ ಪಡೆವೊಡೆ ಲೋಗರ್ |
ಅರಿಗೆ ಮೊದಲ್ ಇಹಕೆ ಪರದಾವರಣವಿಹುದನ್ ||
ಪರಮಾರ್ಥಗಣಿತದಿಂದಿಹದರ್ಥಗಳನೆಣಿಸೆ |
ಸರಿ ಲೋಕಬಾಂಧವ್ಯ - ಮಂಕುತಿಮ್ಮ ||

863
ಮುದಿಕುರುಡಿ ಹೊಂಗೆಯನು ``ಬಾದಾಮಿ, ಕೋ'ಯೆನುತ |
ಪದುಳದಿಂ ಮೊಮ್ಮಂಗೆ ಕೊಡಲು ಸಿಹಿಯಹುದೆ? ||
ಹೃದಯವೊಳಿತಾದೊಡೇಂ? ತಿಳಿವಿಹುದೆ? ಜಾಣಿಹುದೆ? |
ಸುಧೆ ಬಂತೆ ಸುಲಭದಲಿ? - ಮಂಕುತಿಮ್ಮ ||

864
ಜಗದ ಸೊಗದರಸಿಕೆಯ ಫಲ, ನೋಡು, ಬರಿಕಲಹ |
ಮೃಗಗಳಾವೇಶಗೊಳಲಪ್ಪುದಿನ್ನೇನು? ||
ಮುಗಿಯುವುದು ಕಾಳ್ಗಿಚ್ಚು ವನ ಬೂದಿಯಾದಂದು |
ಹಗೆತನವುಮಂತು ಬಿಡು - ಮಂಕುತಿಮ್ಮ ||

865
ಉರಿಯಾರಿ ಮಳೆಗರೆಯೆ ಮರಳಿ ಸಸಿಯೇಳುವುದು |
ಮೆರುಗನೊಂದುವುದು ಪೊನ್ ಪುಟ ಕಾದ ಬಳಿಕ ||
ನರಜೀವವಂತು ಶುಚಿಯಹುದು ದುಃಖಾಶ್ರುವಿಂ |
ತರುವಾಯ ಪುನರುದಯ - ಮಂಕುತಿಮ್ಮ ||

866
ಆತುಮದ ಸಂಸ್ಥಿತಿಗೆ ದೈಹಿಕಸಮಾಧಾನ; |
ಭೌತವಿಜ್ಞಾನದಾ ರಾಷ್ಟ್ರಸಂಸ್ಥೆಗಳಾ ||
ನೂತನ ವಿವೇಕಪ್ರಯೋಗಗಳಿನಾದೀತು |
ಭೂತಿಸಂಪದ ಜಗಕೆ - ಮಂಕುತಿಮ್ಮ ||

867
ಯತನ ಕರ್ತವ್ಯವದು, ನಮಗೆ ವಿದ್ಯಾಭ್ಯಾಸ |
ಹಿತಪರಿಜ್ಞಾನ ಯತ್ನಾನುಭವ ಫಲಿತ ||
ಸತತಯತ್ನದಿನಾತ್ಮಶಕ್ತಿ ಪರಿವರ್ಧಿಪುದು |
ಯತನ ಜೀವನಶಿಕ್ಷೆ - ಮಂಕುತಿಮ್ಮ ||

868
ಅರೆದಿನದ ನಮ್ಮ ಯತ್ನದಿನದೇನೆನ್ನದಿರು |
ಕಿರಿದುಮೊಡಗೂಡಿರಲು ಸಿರಿಯಹುದು ಬಾಳ್ಗೆ ||
ಪರಿಪೋಷಿಸದೆ ನಿನ್ನೊಡಲ ದಾರಿಮರದ ಫಲ? |
ಕಿರುಜಾಜಿ ಸೊಗಕುಡದೆ? - ಮಂಕುತಿಮ್ಮ ||

869
ಮಾರ್ಗಣೆಯೆ ಮುಖ್ಯ; ಲಭ್ಯದ ಮಾತದಂತಿರಲಿ |
ಸ್ವರ್ಗವನು ಭುವಿಗಿಳಿಸಬಲ್ಲವನದಾರು? ||
ಅರ್ಗಲ ವಿಹೀನ ಸರ್ವಾರ್ಥ ಸಹಭಾಗಿತೆಯೆ |
ಅರ್ಘಾರ್ಹತತ್ತ್ವವೆಲೊ - ಮಂಕುತಿಮ್ಮ ||

870
ದಿವಿಜಸುಧೆ ಬರಿಮಧುವೊ; ಹುಳಿಯುಪ್ಪುಮಿಶ್ರಿತವೊ? |
ಅವನಿಯುಣಿಸಿನಲಿ ಷಡ್ರಸ ತಪ್ಪದಿಹುದು ||
ಲವಲೇಶಮಾನುಮಿರದಿರೆ ಕಯ್ಪು ಜೀವನದಿ |
ಪವಳಿಸಿರನೇ ನರನು? - ಮಂಕುತಿಮ್ಮ ||

871
ಆರಿಗಾವುದು ತಕ್ಕುದಾರಿಗಾವುದು ದಕ್ಕ- |
ದೀ ರಹಸ್ಯದಿನಾದ ಸಾಹ್ಯವುಪಕಾರ ||
ತಾರತಮ್ಯವಿವೇಕವರಿಯದಾ ಸಂಸ್ಕಾರ |
ಪ್ರೇರಕವೊ ಚೌರ್ಯಕ್ಕೆ - ಮಂಕುತಿಮ್ಮ ||

872
ಗುಡಿಸಿಲೇನೊಣಹುಲ್ಲು ಕಡ್ಡಿ ಮಣ್ಣೆನ್ನುತಲಿ |
ಬಡವನಲಿ ಕೊರತೆಗಳ ನೆಡುವುದರಿದಲ್ಲ ||
ಕೆಡಿಸಿದಾ ಗುಡಿಸಿಲಿನ ನೆಮ್ಮದಿಯ ಮತ್ತೆಂತು |
ಕೊಡಲಹುದವಂಗೆ ನೀಂ? - ಮಂಕುತಿಮ್ಮ ||

873
ಬಳಲಿ ನೆಲದಲಿ ಮಲಗಿ ಮೈಮರೆತು ನಿದ್ರಿಪನ |
ಕುಲುಕಿ ಹಾಸಿಗೆಯನರಸೆನುವುದುಪಕೃತಿಯೆ? ||
ಒಳಿತನೆಸಗುವೆನೆಂದು ನೆಮ್ಮದಿಯ ನುಂಗದಿರು |
ಸುಲಭವಲ್ಲೊಳಿತೆಸಗೆ - ಮಂಕುತಿಮ್ಮ ||

874
ಮಡಕೆಯನು ಬಡಿದು ಹೊನ್ಕೊಡವ ತೋರುವ ಸಖನೆ |
ಪಡೆದಿಹೆಯ ರಹದಾರಿಯನು ಹೊನ್ನ ಗಣಿಗೆ? ||
ಒಡಲಿಗೊಗ್ಗಿದ ನೀರ ಚೆಲ್ಲಿದೊಡದೇಂ ಪಾಲ |
ಕುಡಿವ ಸಂತಸಕೆಣೆಯೆ? - ಮಂಕುತಿಮ್ಮ ||

875
ಬಲುಹಳೆಯ ಲೋಕವಿದು, ಬಲುಪುರಾತನಲೋಕ |
ಬೆಳೆದಿರ್ಪುದಿದು ಕೋಟಿರಸಗಳನು ಪೀರ್ದು ||
ಸುಲಭವಲ್ಲಿದರ ಸ್ವಭಾವವನು ಮಾರ್ಪಡಿಸೆ |
ಸಲದಾತುರತೆಯದಕೆ - ಮಂಕುತಿಮ್ಮ ||

876
ಸಿಂಧುವನು ಹಿಮಗಿರಿಗೆ ಹಿಂದಿರುಗಿ ಬೇರೊಂದು |
ಚೆಂದದಲಿ ಪರಿದು ಬಾರೆಂದಾಣತಿಪೆಯಾ? ||
ಸಂದರ್ಭವಿಡಿದು ಜನಚೈತನ್ಯ ಪರಿದಿಹುದು |
ಅಂಧಗತಿಯಲ್ಲವದು - ಮಂಕುತಿಮ್ಮ ||

877
ಮತಿವಂತರಿದ್ದರಲ ನಮ್ಮ ಹಿಂದೆಯುಮಿಲ್ಲಿ |
ಹಿತಚಿಂತಕರು ಜನಕೆ, ಕೃತಪರಿಶ್ರಮರು? ||
ಅತಿವೈದ್ಯದಿಂದ ಹೊಸರುಜಿನಕೆಡೆಯಾದೀತೊ |
ಮಿತಿಯಿಂ ನವೀಕರಣ - ಮಂಕುತಿಮ್ಮ ||

878
ಒಡೆಯದಿರು ತಳಹದಿಯ ಸರಿವಡಿಪೆನದನೆಂದು |
ಸಡಲಿಸುವ ನೀಂ ಮರಳಿ ಕಟ್ಟಲರಿತವನೇಂ? ||
ಗಿಡವ ಸರಿ ಬೆಳೆಯಿಸಲು ಬುಡವ ಕೀಳ್ವುದು ಸರಿಯೆ? |
ದುಡುಕದಿರು ತಿದ್ದಿಕೆಗೆ - ಮಂಕುತಿಮ್ಮ ||

879
ಮೃಗಶೇಷವಿರುವನಕ ಜಗಳ ತಪ್ಪದು ಜಗದಿ |
ಹಗೆಗೆ ಕೊಲದವರು ಹಸಿವಿನಿಂದ ಕೊಂದಾರು ||
ಟಗರುಜೂಜೋ ಸಭೆಯ ರಗಳೆಯೋ ಕುಸ್ತಿಯೋ |
ಸೊಗ ಜನಕೆ ರಣರಂಗ - ಮಂಕುತಿಮ್ಮ ||

880
ತನ್ನಯ ಮನೋರಥಂಗಳ ಚಕ್ರವೇಗದಿನೆ |
ತನ್ನ ಮಣಿಹಾರಗಳ ಸಿಕ್ಕು ಬಿಗಿತದಿನೇ ||
ತನ್ನ ಸಂಕಲ್ಪ ವಿಪರೀತದಿನೆ ಮಾನವನ |
ಬೆನ್ನು ಮುರಿದೀತೇನೊ! - ಮಂಕುತಿಮ್ಮ ||

881
ಮಿತಿಯನರಿತಾಶೆ, ಸಮುಚಿತವ ಮರೆಯದ ಯತ್ನ |
ತೈತಿಕ್ಷೆ ಕಷ್ಟಾಂಶದಪರಿಹಾರ್ಯತೆಗೆ ||
ಮೃತಿಯೆ ಜೀವನಕಥೆಯ ಕೊನೆಯಲ್ಲವೆಂಬರಿವು |
ಹಿತಗಳಿವು ನರಕುಲಕೆ - ಮಂಕುತಿಮ್ಮ ||

882
ಸರ್ವಾರ್ಥ ಸಹಭಾಗಿತೆಗೆ ರಾಷ್ಟ್ರ ಕುಲ ವರ್ಗ |
ಸರ್ವದಣು ತಾನೆನುತ್ತೋರೊರ್ವ ಮನುಜನ್ ||
ಸರ್ವಜೀವ ಸಮೃದ್ಧಿಗನುಗೂಡಿ ದುಡಿಯುತಿರೆ |
ಪರ್ವವಂದಿಳೆಗೆಲವೊ - ಮಂಕುತಿಮ್ಮ ||

883
ಕಾಯಂಕಿಂತಾತ್ಮ ಪಿರಿದೆಂದು ಜನವರಿತಂದು |
ಸ್ವೀಯೇಚ್ಛೆಯಿಂ ಸಮಾಧಾನ ಕೆಡದಂದು ||
ದಾಯ ಸಮ ಸಂಸೃಷ್ಟಿ ಭೂಭಾಗ್ಯವಾದಂದು |
ಶ್ರೇಯ ನೆರೆವುದು ಜಗಕೆ - ಮಂಕುತಿಮ್ಮ ||

884
ವಸ್ತುವಿಜ್ಞಾನದಿಂ ಜೀವನಸಮೃದ್ಧಿ ಮಿಗೆ |
ವಿಸ್ತರಿಸೆ ವಿಶ್ವೈಕ್ಯಭಾವ ಜನಮನದೊಳ್ ||
ದೃಷ್ಟಲೋಕದ ಬೆಡಗದೃಷ್ಟವನು ಮರಸದಿರೆ |
ಸ್ವಸ್ತಿ ಲೋಕಕೆಲ್ಲ - ಮಂಕುತಿಮ್ಮ ||

885
ಜಾನಪದ ಶಿಷ್ಟಿಯಲಿ, ಸಂಪತ್ಸಮಷ್ಟಿಯಲಿ |
ಜ್ಞಾನಸಂಧಾನದಲಿ, ಮೌಲ್ಯ ಗಣನೆಯಲಿ ||
ಮಾನವತೆ ಮಾನುಷ್ಯ ಧಾರ್ಮಿಕತೆಯೆದ್ದುನಿಲೆ |
ಆನಂದ ಧರೆಗಂದು - ಮಂಕುತಿಮ್ಮ ||

886
ಅಶ್ವತ್ಥವಿಲ್ಲಿ ಬಾಡಿದೊಡೇನು? ಚಿಗುರಲ್ಲಿ; |
ನಶ್ವರತೆ ವಿಟಪ ಪರ್ಣಂಗಳಲಿ ಮಾತ್ರ; ||
ಶಾಶ್ವತತೆ ರುಂಡಮೂಲದಲಿ; ಪರಿಚರಿಸದನು |
ವಿಶ್ವಪ್ರಗತಿಯಂತು - ಮಂಕುತಿಮ್ಮ ||

887
ಪರಿಪೂರ್ಣಸುಖವನೆಳಸುವನು ತನ್ನೊಳಗಡೆಗೆ |
ತಿರುಗಿಸಲು ತನ್ನ ದೃಷ್ಟಿಯನು ನಿರ್ಮಲದಿಂ ||
ನಿರತಿಶಯ ಸುಖವಲ್ಲಿ, ವಿಶ್ವಾತ್ಮವೀಕ್ಷೆಯಲಿ |
ಪರಸತ್ತ್ವಶಾಂತಿಯಲಿ - ಮಂಕುತಿಮ್ಮ ||

888
ವ್ಯಕ್ತಿಮಾತ್ರದ ವಿಭವ ವಿಶ್ವಾತ್ಮತಾನುಭವ |
ಮುಕ್ತಿ ಸುಖವಾಂತರಿಕವದು ನಿರವಧಿಸುಖ ||
ಭಾಕ್ತ ಪ್ರಪಂಚಸುಖವೆಂತಪರಿಮಿತವಹುದು? |
ರಿಕ್ತಸುಖ ಬಾಹ್ಯಸುಖ - ಮಂಕುತಿಮ್ಮ ||

889
ಭ್ರಾಂತಿಯೋ ಸಂಪೂರ್ಣಸುಖದಾಶೆ ಬಾಹ್ಯದಲಿ |
ಸಾಂತ ಲೋಕದ ಸೌಖ್ಯ, ಖಂಡಖಂಡವದು ||
ಸ್ವಾಂತಕೃಷಿಯಿಂ ಬ್ರಹ್ಮವೀಕ್ಷೆ ಲಭಿಸಿರ್ದೊಡೇ- |
ಕಾಂತ ಪೂರ್ಣಾನಂದ - ಮಂಕುತಿಮ್ಮ ||

890
ನಶ್ವರಾಕೃತಿ ನಾಮಮಯ ವಿಶ್ವವಾರ್ಧಿಯಿದು |
ಶಾಶ್ವತಬ್ರಹ್ಮದುಚ್ಛ್ವಾಸ ಘನ ಬಿಂದು ||
ನಿಶ್ವಸಿತದಲೆಗಳನೆ ಪಿಡಿದು ಗುರಿಯರಿತೀಜೆ |
ವಿಶ್ವಮೂಲಾಪ್ತಿಯಲ - ಮಂಕುತಿಮ್ಮ ||

891
ನಿನ್ನ ಕಹಿಸಿಹಿಯೆಲ್ಲ ಕಡಲೊಳುಪ್ಪಾಗುವುದು |
ನಿನ್ನೆಲ್ಲ ಗುಣಗಳುಂ ಬ್ರಹ್ಮದೊಳಗಂತು ||
ಪುಣ್ಯವೋ, ಪಾಪವೋ, ಅಹಿತವೋ, ಹಿತವೊ ಅದು |
ಚೆನ್ನಹುದು ಬೊಮ್ಮನಲಿ - ಮಂಕುತಿಮ್ಮ ||

892
ಹೊರಗೆ, ವಿಶ್ವದಿನಾಚೆ, ದೂರದಲಿ, ನೀಲದಲಿ |
ಒಳಗೆ, ಹೃತ್ಕೂಪದಾಳದಲಿ, ಮಸಕಿನಲಿ ||
ನೆಲೆಗಳಿಂತೆರಡು ಮೂಲ ರಹಸ್ಯಕವುಗಳುಲಿ |
ಕಲೆತಂದು ನೀಂ ಜ್ಞಾನಿ - ಮಂಕುತಿಮ್ಮ ||

893
ಸ್ವಪ್ನಲೋಕವ ಜಾಗೃತಂ ಸುಳ್ಳೆನುದನಲ್ತೆ? |
ಸುಪ್ತಂಗೆ ಜಾಗೃತನ ಲೋಕಮುಂ ಸುಳ್ಳೇ ||
ಸ್ವಪ್ನ ಜಾಗ್ರತ್ಸುಪ್ತಿಗಳ ಹಿಂದೆ ನಿರ್ಲಿಪ್ತ- |
ಗುಪ್ತಾತ್ಮನಿಹುದು ದಿಟ - ಮಂಕುತಿಮ್ಮ ||

894
ಭಾನೂದಯಾಸ್ತಗಳಿನಲ್ತೆ ದಿಕ್ಕಾಲಗಳ |
ಮಾನಗಣಿತವು ನಮಗೆ? ಭಾನುವಿರದೊಡದೇಂ? ||
ಆನಂತ್ಯ, ಶುದ್ಧಸತ್ತಾಮಾತ್ರ, ಬೊಮ್ಮನದು |
ಲೀನನಾಗದರೊಳಗೆ - ಮಂಕುತಿಮ್ಮ ||

895
ಸಂಕೇತಭಾವಮಯ ಲೋಕಜೀವನದ ನಯ |
ಸಂಖ್ಯೆ ಗುಣ ಹೇತು ಕಾರ್ಯಗಳ ಲಕ್ಷಣದಿಂ- ||
ದಂಕಿತಂಗಳು ಪದ ಪದಾರ್ಥ ಸಂಬಂಧಗಳು |
ಅಂಕೆ ಮೀರ್ದುದು ಸತ್ತ್ವ - ಮಂಕುತಿಮ್ಮ ||

896
ಭೌತವಿಜ್ಞಾನ ವಿವರಗಳಿನೇನಾತ್ಮಂಗೆ? |
ಪ್ರೇತಪ್ರಯಾಣಕಥೆಯೆಂತಿರ್ದೊಡೇನು? ||
ಜಾತಿ ನೀತಿ ಸಮಾಜ ವರ್ಗಭೇದದಿನೇನು? |
ಘಾತಿಯಿಲ್ಲಾತ್ಮಂಗೆ - ಮಂಕುತಿಮ್ಮ ||

897
ಶೂನ್ಯವೆಲ್ಲವುಮೆಂಬೊಡಂತೆನಿಸುವುದದೇನು? |
ಅನ್ಯವಿಲ್ಲೆನುವರಿವದೊಂದಿರ್ಪುದಲ್ತೆ? ||
ಚಿನ್ಮಯವನದನೆ ನೀಂ ಸತ್ಯವೆಂದಾಶ್ರಯಿಸು |
ಶೂನ್ಯವಾದವೆ ಶೂನ್ಯ - ಮಂಕುತಿಮ್ಮ ||

898
ನರನರೀ ಚಿತ್ರಗಳು, ನಾಟಕದ ಪಾತ್ರಗಳು |
ಪರಿಪರಿಯ ವೇಷಗಳು, ವಿವಿಧ ಭಾಷೆಗಳು ||
ಬರುತಿಹುವು, ಬೆರಗೆನಿಸಿ, ಮೆರೆಯುವುವು, ತೆರಳುವುವು |
ಮೆರೆವಣಿಗೆಯೋ ಲೋಕ - ಮಂಕುತಿಮ್ಮ ||

899
ಜಗದೀ ಜಗತ್ತ್ವವನು, ಮಾಯಾವಿಚಿತ್ರವನು |
ಒಗೆದಾಚೆ ಬಿಸುಡೆಲ್ಲ ಕರಣವೇದ್ಯವನು ||
ಮಿಗುವುದೇಂ? ರೂಪಾಖ್ಯೆಯೊಂದುಮಿಲ್ಲದ ವಸ್ತು |
ಹೊಗಿಸಾ ಕಡೆಗೆ ಮತಿಯ - ಮಂಕುತಿಮ್ಮ ||

900
ಸುತ್ತಮುತ್ತಣ ಗಾಳಿಯಾವಗಂ ನಮ್ಮೊಡಲ |
ನೊತ್ತಿದೊಡಮಾ ಹೊರೆಯ ಮನಸು ಕಾಣದವೋಲ್ ||
ಬಿತ್ತರದ ಲೋಕಭಾರವನಾತ್ಮನರಿಯದಿರೆ |
ಮುಕ್ತಲಕ್ಷಣವದುವೆ - ಮಂಕುತಿಮ್ಮ ||

901
ನಾನು ನಾನೇ ನಾನೆನುತ್ತೆ ಕಿರಿಕೊಡದ ನೀರ್ |
ಗಾನಗೆಯ್ವುದು ಹೆಮ್ಮೆಯಿಂ ಕಡಲ ಮರೆತು ||
ನೂನದಿಂದೆಲ್ಲವೆನುವಬ್ಧಿಯೊಳಗದನಿರಿಸೆ |
ಮೌನವದು ಮಣ್ಕರಗಿ - ಮಂಕುತಿಮ್ಮ ||

902
ಮಲಗಿದೋದುಗನ ಕೈಹೊತ್ತಗೆಯು ನಿದ್ದೆಯಲಿ |
ಕಳಚಿ ಬೀಳ್ವುದು; ಪಕ್ವಫಲವಂತು ತರುವಿಂ ||
ಇಳೆಯ ಸಂಬಂಧಗಳು ಸಂಕಲ್ಪನಿಯಮಗಳು |
ಸಡಿಲುವುವು ಬಾಳ್ ಮಾಗೆ - ಮಂಕುತಿಮ್ಮ ||

903
ಮೋಕ್ಷದಾಶೆಯೊಳಮತ್ಯಾತುರತೆಯೊಳಿತಲ್ಲ |
ಶಿಕ್ಷೆ ಬಹುಕಾಲ ನಡೆಯದೆ ಮೋಕ್ಷವಿಲ್ಲ ||
ಲಕ್ಷ್ಯ ತಪ್ಪದೆ ಚರಿಸು ಸಾಮಾನ್ಯಧರ್ಮಗಳ |
ಮೋಕ್ಷ ಸ್ವತಸ್ಸಿದ್ಧ - ಮಂಕುತಿಮ್ಮ ||

904
ವಹಿಸು ಕೆಲ ಭಾರಗಳ; ಸಹಿಸು ಕೆಲ ನೋವುಗಳ |
ಪ್ರಹರಿಸರಿಗಳನನಿತು ಯುಕ್ತಗಳನರಿತು ||
ಮಹಿಯ ನಾಟಕದಿ ನೀಂ ಮನಸಿಟ್ಟು ಕುಣಿಕುಣಿದು |
ವಿಹರಿಸಾತ್ಮಾಲಯದಿ - ಮಂಕುತಿಮ್ಮ ||

905
ಶ್ವಾನ ತಿಪ್ಪೆಯ ಮೇಲೆ ಮಲಗಿರಲು ಪೂರ್ವಿಕ- |
ಜ್ಞಾನ ಪಶ್ಚಾತ್ತಾಪ ಶುಭಚಿಂತೆಯಂತೆ ||
ಏನೊ ವಾಸನೆ ಬೀಸಲದು ಹಾರಿ ದುಮುಕುವುದು |
ಮಾನವನ ಮನಸಂತು - ಮಂಕುತಿಮ್ಮ ||

906
ತತ್ತ್ವಸಾಕ್ಷಾತ್ಕಾರ ಚಿತ್ತಶುದ್ಧಿಯಿನಹುದು |
ಚಿತ್ತಶೋಧನೆ ಮತಿಚಮತ್ಕಾರವಲ್ಲ ||
ಬಿತ್ತರದ ಲೋಕಪರಿಪಾಕದಿಂ, ಸತ್ಕರ್ಮ |
ಸಕ್ತಿಯಿಂ ಶುದ್ಧತೆಯೊ - ಮಂಕುತಿಮ್ಮ ||

907
ತನುರುಜೆಗೆ ಪಥ್ಯಾನ್ನ, ಬಾಯ ಚಪಲಕ್ಕಲ್ಲ |
ಮನದ ಶಿಕ್ಷೆಗೆ ಲೋಕ, ಮಮಕಾರಕಲ್ಲ ||
ಗುಣಚರ್ಯೆ ವಿಶ್ವಸಮರಸಕೆ, ಕಾಮಿತಕಲ್ಲ |
ಮುನಿವೃತ್ತಿ ಸೂತ್ರವಿದು - ಮಂಕುತಿಮ್ಮ ||

908
ತ್ಯಜಿಸಿ ಭುಜಿಸಲ್ಕಲಿತವನೆ ಜಗಕೆ ಯಜಮಾನ |
ನಿಜಕುಕ್ಷಿಚಿಂತೆಯೇಂ ಮೊದಲು ಮನೆತಾಯ್ಗೆ? ||
ಭುಜಿಪ ಪತಿಸುತರೊಪ್ಪು ತುಪ್ಪವವಳೂಟಕ್ಕೆ |
ಭಜಿಸು ನೀನಾ ವ್ರತವ - ಮಂಕುತಿಮ್ಮ ||

909
ಮಗುವಾಗಿ ಬೊಂಬೆಗೆಂದತ್ತು ಪಿರಿಯರ ಕಾಡಿ |
ಜಗದುಣಿಸುಗಳನುಂಡು ಬೆಳೆದವಂ ತಾನೆ ||
ಮಗುಗಳನು ಬೆಳಸುತ್ತ ಮನೆಯನಾಳುವವೋಲು |
ಜಗವನಾಳ್ವನು ಜಾಣ - ಮಂಕುತಿಮ್ಮ ||

910
ಸಾಮಾನ್ಯರೊಳ್ ಪುಟ್ಟಿ, ಸಾಮಾನ್ಯರೊಳ್ ಬೆಳೆದು |
ಭೂಮಿಪತಿಪಟ್ಟವನು ಜನ ತನಗೆ ಕಟ್ಟಲ್ ||
ಸಾಮರ್ಥ್ಯದಿಂದವರನಾಳ್ದ ಲಿಂಕನನಂತೆ |
ಸ್ವಾಮಿ ಲೋಕಕೆ ಯೋಗಿ - ಮಂಕುತಿಮ್ಮ ||

911
ರಣದಿ ಬಿದ್ದಾ ಸೈನ್ಯಪತಿ ಸಿಡ್ನಿಯುತ್ಕ್ರಮಣ- |
ದೊಣಗುಬಾಯಿಗೆ ನೀರನೊಡ್ಡಲ್ ಅದನವನು ||
ತನಗಿಂತ ಕೆಲದ ಭಟಗದು ಸಲ್ವುದೆಂದಿತ್ತು |
ತಣಿವನಾಂತುದ ನೆನೆಯೊ - ಮಂಕುತಿಮ್ಮ ||

912
ಇಂದ್ರಿಯಗಳೊಳು ಬಾಳಿ ಜೀವ ಪಕ್ವಂಗೊಳ್ಳ- |
ಲಿಂದ್ರಿಯಂಗಳ ಮೀರಿ ಮೇಲೇರಿ ಜಾಣಿಂ- ||
ದಿಂದ್ರಿಯಂಗಳನಾಳಿ ಲೋಕವಂ ಸಂತಯಿಪ |
ಬಂಧು ಜೀವನ್ಮುಕ್ತ - ಮಂಕುತಿಮ್ಮ ||

913
ವಿಸ್ತಾರದಲಿ ಬಾಳು, ವೈಶಾಲ್ಯದಿಂ ಬಾಳು |
ಕತ್ತಲೆಯ ಮೊಡಕು ಮೂಲೆಗಳ ಸೇರದಿರು ||
ಭಾಸ್ಕರನನುಗ್ರಹವೆ ನೂತ್ನ ಜೀವನಸತ್ತ್ವ |
ಮೃತ್ಯು ನಿನಗಲ್ಪತೆಯೊ - ಮಂಕುತಿಮ್ಮ ||

914
ತೆರೆಯಾಗು ವಿಶ್ವಜೀವನದ ದಿವ್ಯಾಬ್ಧಿಯಲಿ |
ಕರಗಿಸದರಲಿ ನಿನ್ನ ಬೇರೆತನದರಿವ ||
ಮರುತನುರುಬನು ತಾಳುತೇಳುತೋಲಾಡುತ್ತ |
ವಿರಮಿಸಾ ಲೀಲೆಯಲಿ - ಮಂಕುತಿಮ್ಮ ||

915
ಬರಿಯ ಪೊಳ್ಳುವಿಚಾರ ಮಾನುಷವ್ಯಾಪಾರ |
ಪರಿಕಿಸಲು ಪುಣ್ಯವೆಂಬುದುಮಹಂಕಾರ ||
ಅರಳಿ ಮೊಗವನಿತಿನಿತು, ನಕ್ಕು ನಗಿಸಿರೆ ಸಾರ |
ಹೊರೆ ಮಿಕ್ಕ ಸಂಸಾರ - ಮಂಕುತಿಮ್ಮ ||

916
ಜನ್ಮ ಸಾವಿರ ಬರಲಿ, ನಷ್ಟವದರಿಂದೇನು? |
ಕರ್ಮ ಸಾವಿರವಿರಲಿ, ಕಷ್ಟ ನಿನಗೇನು? ||
ಬ್ರಹ್ಮ ಹೃದಯದಿ ನಿಲ್ಲೆ ಮಾಯೆಯೇಂಗೈದೊಡೇಂ? |
ಇಮ್ಮಿದಳ ಸರಸವದು - ಮಂಕುತಿಮ್ಮ ||

917
ನಗುವು ಸಹಜದ ಧರ್ಮ; ನಗಿಸುವುದು ಪರಧರ್ಮ |
ನಗುವ ಕೇಳುತ ನಗುವುದತಿಶಯದ ಧರ್ಮ ||
ನಗುವ ನಗಿಸುವ ನಗಿಸಿ ನಗುತ ಬಾಳುವ ವರವ |
ಮಿಗೆ ನೀನು ಬೇಡಿಕೊಳೊ - ಮಂಕುತಿಮ್ಮ ||

918
ನೆನೆನೆನೆದು ಗಹನವನು, ಜೀವನರಹಸ್ಯವನು |
ಮನವ ಬಳಲಿಸಿ ಸೋಲಿಸಿರುವ ತತ್ತ್ವವನು ||
ಮನನದೇಕಾಂತದಲಿ ಮೌನದ ಧ್ಯಾನದಲಿ |
ಮಣಿಮಣಿದು ಕೈಮುಗಿಯೊ - ಮಂಕುತಿಮ್ಮ ||

919
ಜೀವದುದಯ ರಹಸ್ಯ, ಜೀವವಿಲಯ ರಹಸ್ಯ |
ಜೀವನದ ದೃಶ್ಯ ಮರುವಿನ ಬಿಸಿಲ್ಗುದುರೆ ||
ಭಾವಿಸಲಿದೇ ತತ್ತ್ವ : ಬ್ರಹ್ಮಮಾಯೆಯೆ ವಿಶ್ವ |
ಕೇವಲಾತ್ಮ ಬ್ರಹ್ಮ - ಮಂಕುತಿಮ್ಮ ||

920
ಆರಲೆನ್ನಯ ಹೃದಯ ಕರಣಗಳ ಕಾವುಗಳು |
ಸೇರಲೆನ್ನಯ ಜೀವ ವಿಶ್ವಜೀವನದಲಿ ||
ಧಾರುಣಿಯ ಮಡಿಲೆನ್ನ ಕೊಳಲಿ; ಜಗ ಮರೆತಿರಲಿ |
ಹಾರಯಿಸು ನೀನಿಂತು - ಮಂಕುತಿಮ್ಮ ||

921
ಇಳಿಯುವೆನು ಮುಳುಗುವೆನು ವಿಶ್ವಾತ್ಮಸಾಗರದಿ |
ಮುಳುಮುಳುಗಿ ಕಳೆಯುವೆನು ಬೇರೆತನದರಿವ ||
ಇಳೆಬಾನ್ಗಳಾಟದಲಿ ಕುಣಿಯುವೆನು ಮೈಮರೆತು |
ಗಳಿಸೀ ಮನಃಸ್ಥಿತಿಯ - ಮಂಕುತಿಮ್ಮ ||

922
ಎಲ್ಲರಿಗಮೀಗ ನಮೊ---ಬಂಧುಗಳೆ, ಭಾಗಿಗಳೆ |
ಉಲ್ಲಾಸವಿತ್ತವರೆ, ಮನವ ತೊಳೆದವರೆ ||
ಟೊಳ್ಳು ಜಗ, ಸಾಕು ಬಾಳ್---ಎನಿಸಿ ಗುರುವಾದವರೆ |
ಕೊಳ್ಳಿರೀ ನಮವನೆನು - ಮಂಕುತಿಮ್ಮ ||

923
ನಿನಗಾರು ಗುರುವಹರು? ನೀನೊಬ್ಬ ತಬ್ಬಲಿಗ |
ಉಣುತ ದಾರಿಯ ಕೆಲದಿ ಸಿಕ್ಕಿದೆಂಜಲನು ||
ದಿನವ ಕಳೆ; ಗುರುಶಿಷ್ಯಪಟ್ಟಗಳು ನಿನಗೇಕೆ? |
ನಿನಗೆ ನೀನೇ ಗುರುವೊ - ಮಂಕುತಿಮ್ಮ ||

924
ಮನೆಯ ಮಾಳಿಗೆಗಲ್ಲ, ಮುಡಿಯ ಕೊಪ್ಪಿಗೆಗಲ್ಲ |
ಇನಿವಣ್ಣು ತನಿಯ ಕಾಳೆಂಬುದೇನಿಲ್ಲ ||
ಬಣಗು ಕುರಿಚಲು ಗಿಡದ ಬಾಳೇನು? ನೀನಂತು |
ಒಣಗಿದೊಡೆ ಸವುದೆ ಸರಿ - ಮಂಕುತಿಮ್ಮ ||

925
ಜೋಳಿಗೆಯ ಪಿಡಿದು ನೀನೂರಿನೂರಿಗೆ ನಡೆದು |
ಹೇಳುತ್ತ ಹಾಡುಗಳ, ಭಾರಗಳ ಮರೆತು ||
ಬೀಳು ಮೇಲುಗಳೆಣಿಕೆಯಿಂ ಮನವನಲುಗಿಸದೆ |
ಬಾಳ ನಡಸುವುದೆಂದೊ? - ಮಂಕುತಿಮ್ಮ ||

926
ತೊಲಗೆಲವೊ ಮನೆಯಿಂದ ಮನವು ಬರಡಾದಂದೆ |
ಹೊಲಸ ತೊಳೆಯಲು ತೋಳ್ಗೆ ಬಲ ಕುಗ್ಗಿದಂದೆ ||
ತೊಲಗು ಜಗದಿಂ ದೂರ, ಇಳೆಗಾಗದಿರು ಭಾರ |
ತೊಲಗಿ ನೀಂ ಮರೆಯಾಗು - ಮಂಕುತಿಮ್ಮ ||

927
ತೊಲಗು ನಿರ್ಜನದೆಡೆಗೆ; ತೊಲಗು ಮಸಣದ ಕಡೆಗೆ |
ಒಲವ ಬೇಡಿಸದೆಡೆಗೆ; ಅಳುವು ಬರದೆಡೆಗೆ ||
ವಿಲಯವಾಗಿಸಿ ಮನವನ್, ಅಲುಗಾಡಿಸದೆ ತುಟಿಯ |
ತೊಲಗಿ ಮಲಗಲ್ಲಿ ನೀಂ - ಮಂಕುತಿಮ್ಮ ||

928
ಕಡೆಗಾಲವನು ತಾನೆ ಮುನ್ನರಿತು ಕಾಡಾನೆ- |
ಯಡವಿಯೊಳದೊಂದು ದೂರದ ಗವಿಯನೈದಿ ||
ಬಿಡುವುದಾಯೆಡೆ ಮೌನದಿಂದಸುವನೆನ್ನುವರು |
ಕಡೆಯ ಸಾರಂತು ನೀಂ - ಮಂಕುತಿಮ್ಮ ||

929
ಸದ್ದು ಮಾಡದೆ ನೀನು ಜಗಕೆ ಬಂದವನಲ್ಲ |
ಒದ್ದಾಟ ಗುದ್ದಾಟ ಬಾಳೆಲ್ಲವಾಯ್ತು ||
ಗದ್ದಲವ ಬಿಡಲು ಕಡೆದಿನವಾನುಮಾದೀತೆ? |
ನಿದ್ದೆವೊಲು ಸಾವ ಪಡೆ - ಮಂಕುತಿಮ್ಮ ||

930
ಆರ ಕೈತುತ್ತಿಗಂ ನಿನ್ನ ಕಾಯಿಸದೆ ವಿಧಿ |
ಯಾರ ಭುಜಕಂ ನಿನ್ನ ಭಾರವಾಗಿಸದೆ ||
ಆರ ಸೆಲೆ ಸುಳಿವುಮಂಟದವೊಲಾಗಿಸಿ ನಿನ್ನ |
ಪಾರಗಾಣಿಸ ಬೇಡು - ಮಂಕುತಿಮ್ಮ ||

931
ವೇದಾಂತವಾಕ್ಯಗಳ ನಮಕಾನುವಾಕಗಳ |
ಕೇದಾರಗೌಳ ಮಣಿರಂಗಾರಭಿಗಳ ||
ನಾದಂಗಳಲಿ ಮನವ ಬೆರಸಿ ನೀನುತ್ಕ್ರಮಿಸೆ |
ಸಾಧನವೊ ಮುಕ್ತಿಗದು - ಮಂಕುತಿಮ್ಮ ||

932
ಮೋಹನಾನಂದಭೈರವಿ ಶಂಕರಾಭರಣ |
ಶಾಹನ ಕುರಂಜಿ ಕೇದಾರ ಕಾಪಿಗಳ ||
ಮೋಹ ಸರ್ವಸ್ವಗಳ ರಾಗಾಬ್ಧಿಯೋ ಬ್ರಹ್ಮ |
ಗಾಹಿಸದರೊಳಗೆ ನೀಂ - ಮಂಕುತಿಮ್ಮ ||

933
ಕಷ್ಟ ಜೀವದ ಪಾಕ; ಕಷ್ಟ ಧರ್ಮವಿವೇಕ |
ಎಷ್ಟೆಷ್ಟು ನೀತಿಯುಕ್ತಿಗಳ ಬಗೆದಡೆಯುಂ ||
ಇಷ್ಟಷ್ಟು ನಿನ್ನೊಳ್ ಒಳತಿಳಿವಿಲ್ಲದಿರೆ ನಷ್ಟ |
ದೃಷ್ಟಿಸೂಕ್ಷ್ಮವೆ ಗತಿಯೊ - ಮಂಕುತಿಮ್ಮ ||

934
ನೂರಾರು ಮತವಿಹುದು ಲೋಕದುಗ್ರಾಣದಲಿ |
ಆರಿಸಿಕೊ ನಿನ್ನ ರುಚಿಗೊಪ್ಪುವುದನದರೊಳ್ ||
ಸಾರದಡುಗೆಯನೊಳವಿಚಾರದೊಲೆಯಲಿ ಮಾಡು |
ಬೇರೆ ಮತಿ ಬೇರೆ ಮತ - ಮಂಕುತಿಮ್ಮ ||

935
ಮೆಣಸು ಹಿಪ್ಪಲಿ ಶುಂಠಿ ಜೀರಿಗೆಗಳೆಲ್ಲ ಸರಿ |
ಅನುವಪ್ಪುದೊಂದೊಂದು ರೋಗಕೊಂದೊಂದು ||
ನಿನಗಮಂತೆಯೆ ನೂರು ನೀತಿಸೂತ್ರಗಳಿರಲು |
ಅನುವನರಿವುದೆ ಜಾಣು - ಮಂಕುತಿಮ್ಮ ||

936
ವಿಶದಮಾದೊಂದು ಜೀವನಧರ್ಮದರ್ಶನವ- |
ನುಸುರಿಕೊಳೆ ತನ್ನ ಮನಸಿಗೆ ತಾನೆ ಬಗೆದು ||
ನಿಸದವಂ ಗ್ರಂಥಾನುಭವಗಳಿಂದಾರಿಸುತ |
ಹೊಸೆದನೀ ಕಗ್ಗವನ - ಮಂಕುತಿಮ್ಮ ||

937
ಹೃದ್ಯ ಹೃದಯೇಂಗಿತಕೆ ರಾಗ ತಾಳದ ಕಟ್ಟು |
ಗದ್ಯ ಲೌಕಿಕ ತಾತ್ತ್ವಿಕಕ್ಕಚ್ಚುಕಟ್ಟು ||
ಮಧ್ಯದಲಿ ಮಿಸುಕಿ, ನೆಲಬಿಟ್ಟು ಬಾನ್ ಮುಟ್ಟದಿಹ |
ಪದ್ಯವಧಿಕಪ್ರಸಂಗಿ - ಮಂಕುತಿಮ್ಮ ||

938
ಕವಿಯಲ್ಲ, ವಿಜ್ಞಾನಿಯಲ್ಲ, ಬರಿ ತಾರಾಡಿ |
ಅವನಿರಿವಿಗೆಟುಕುವವೊಲೊಂದಾತ್ಮನಯವ ||
ಹವಣಿಸಿದನಿದನು ಪಾಮರಜನದ ಮಾತಿನಲಿ |
ಕವನ ನೆನಪಿಗೆ ಸುಲಭ - ಮಂಕುತಿಮ್ಮ ||

939
ಸಂದೇಹವೀ ಕೃತಿಯೊಳಿನ್ನಿಲ್ಲವೆಂದಲ್ಲ |
ಇಂದು ನಂಬಿಹುದೆ ಮುಂದೆಂದುಮೆಂದಲ್ಲ ||
ಕುಂದು ತೋರ್ದಂದದನು ತಿದ್ದಿಕೊಳೆ ಮನಸುಂಟು |
ಇಂದಿಗೀ ಮತವುಚಿತ - ಮಂಕುತಿಮ್ಮ ||

940
ವ್ಯಾಕರಣ ಕಾವ್ಯಲಕ್ಷಣಗಳನು ಗಣಿಸದೆಯೆ |
ಲೋಕತಾಪದಿ ಬೆಂದು ತಣಿಪನೆಳಸಿದವಂ ||
ಈ ಕಂತೆಯಲಿ ತನ್ನ ನಂಬಿಕೆಯ ನೆಯ್ದಿಹನು |
ಸ್ವೀಕರಿಕೆ ಬೇಳ್ವವರು - ಮಂಕುತಿಮ್ಮ ||

941
ಮಂಕುತಿಮ್ಮನ ಹೆಸರು ಬಿಂಕಕ್ಕೆ ಸಾಲದೆನೆ |
ವೆಂಕನಿಗೊ ಕಂಕನಿಗೊ ಶಂಕರಾರ್ಯನಿಗೋ ||
ಅಂಕಿತವ ಮಾಳ್ಕೆ ಜನರವರೋದಿದರೆ ಸಾಕು |
ಶಂಕೆ ನಿನಗೇನಿಹುದೊ - ಮಂಕುತಿಮ್ಮ ||

942
ಹರಸುವುದದೇನ ನೀಂ? ವರವದೇನೆಂದರಿವೆ? |
ಸರಿಯಿಂದು ತೋರುವುದು ನಾಳೆ ಸರಿಯಿಹುದೆ? ||
ನಿರುಕಿಸುವುದೆಂತು ಚಿರಕಾಲದೊಳ್ಳಿತನಿಂದು? |
ಅರಿವ ದೈವವೆ ಪೊರೆಗೆ - ಮಂಕುತಿಮ್ಮ ||

943
ಬೇಡಿದುದನೀವನೀಶ್ವರನೆಂಬ ನಚ್ಚಿಲ್ಲ |
ಬೇಡಲೊಳಿತಾವುದೆಂಬುದರರಿವುಮಿಲ್ಲ ||
ಕೂಡಿಬಂದುದನೆ ನೀನ್ ಅವನಿಚ್ಛೆಯೆಂದು ಕೊಳೆ |
ನೀಡುಗೆದೆಗಟ್ಟಿಯನು - ಮಂಕುತಿಮ್ಮ ||

944
ತಮ್ಮೆಲ್ಲ ಹಸಿವುಗಳ ತಣಿಯಿಪನಿತನ್ಯೋನ್ಯ |
ಹೊಮ್ಮುಗೌದಾರ್ಯ ಜನಜನಪದಂಗಳಲಿ ||
ಬೊಮ್ಮನೆಲ್ಲರನಾಳ್ವನಿಹನೆನುವ ನೆನಪಿನಲಿ |
ನೆಮ್ಮದಿಯ ಪಡೆಗೆ ಜಗ - ಮಂಕುತಿಮ್ಮ ||

945
ಶರಣುವೊಗು ಜೀವನರಹಸ್ಯದಲಿ ಸತ್ತ್ವದಲಿ |
ಶರಣು ಜೀವನವ ಸುಮವೆನಿಪ ಯತ್ನದಲಿ ||
ಶರಣಂತರಾತ್ಮಗಂಭೀರಪ್ರಶಾಂತಿಯಲಿ |
ಶರಣು ವಿಶ್ವಾತ್ಮದಲಿ - ಮಂಕುತಿಮ್ಮ ||

4 ಕಾಮೆಂಟ್‌ಗಳು:

  1. ಕನ್ನಡದ ಸಂಜೀವಿನಿ ಮಂತ್ರ ವೆನಿಸಿರುವ ಡಿ..ವಿ. ಗುಂಡಪ್ಪನವರ ಕಗ್ಗಗಳನ್ನು ವಿಸ್ಥಾರವಾಗಿ ಪಸರಿಸುವ ಪ್ರಯತ್ನ ನಡೆಸಿರುವ ನಿಮಗೆ ಧನ್ಯವಾದ.

    ಪ್ರತ್ಯುತ್ತರಅಳಿಸಿ
  2. ಹುಲ್ಲಾಗು ಬೆಟ್ಟದಡಿ. ಮನೆಗೆ ಮಲ್ಲಿಗೆಯಾಗು. ಹಾ... ಹಾ.. ಎಂಥಾ ಅದ್ಬುತವಾದ ಸಾಲುಗಳು .
    ಇದೋ ನನ್ನ ನಮನಗಳು

    .

    ಪ್ರತ್ಯುತ್ತರಅಳಿಸಿ
  3. ಶ್ರೀನಿವಾಸ ಚನ್ನಪಟ್ಟಣ
    ಕನ್ನಡದ ‌ಭಗವದ್ಗೀತೆ. ಶ್ರೀ ಡಿ. ವಿ. ಜಿ ಯವರ ಮಂಕುತಿಮ್ಮನ ಖಗ್ಗ
    ಸೊಗಸಾದ ನಿರೂಪಣೆ, ನಿಮ್ಮ ಪ್ರಯತ್ನ ಮೆಚ್ಚುವಂಥಾದ್ದು



    ಪ್ರತ್ಯುತ್ತರಅಳಿಸಿ

ನಿಮ್ಮ ಉನ್ಮಾದದ ನಶೆ ನಮ್ಮೊಂದಿಗಿಷ್ಟು ಹಂಚಿಕೊಳ್ರಿ....