ನಿನ್ನ ಹರಿದ ಸೀರೆಗಳಿಂದ ಹೊಲೆದ ಮೆತ್ತಗಿನ ಕೌದಿಯಲ್ಲಿ ಅಡಗಿ
ಹೂಂಗುಡುತ್ತ ಆಲಿಸಿದ
ಆಗದ ಹೋಗದ ಅದ್ಭುತ ಕತೆಗಳನ್ನು
ಮೊಲೆ ಬಿಡದ ಈ ಚೊಚ್ಚಲುಮಗನ ಚಪಲಕ್ಕೆ ಬೀಗುತ್ತ
ನಿನ್ನ ಪಿಸುಗುಡುವ ಗುಟ್ಟುಗಳ ಸಖಿಯರ ಜೊತೆ
ಸೆರಗು ಮುಚ್ಚಿದ ಬಾಯಲ್ಲಿ ಜಂಬ ಕೊಚ್ಚುವ
ನಿನ್ನ ಸೇಳೆ ಸಡಗರವನ್ನು
ಬುಗುರಿಯಾಡುವ ವಯಸ್ಸಿನಲ್ಲು ಸೆರಗಿಗಂಟಿದ ನಾನು
ಸಖಿಯರ ಜೊತೆಗಿನ ನಿನ್ನ ಪಿತೂರಿಗಳಿಂದ ರೇಗಿದ್ದನ್ನು
ನಿನ್ನ ಸಖಿಯರು ನೆಟ್ಟಿಗೆ ಮುರಿದು ನನ್ನ ದೃಷ್ಟಿತೆಗೆದಿದ್ದನ್ನು
ನನ್ನ ಪೇಚಿಗೆ ನೀನು ಹಿಗ್ಗಿದ್ದನ್ನು
ಅಮ್ಮ ನೆನೆಯುತ್ತೇನೆ
ನನ್ನ ಕೂರಿಸಿಕೊಂಡು ದೋಸೆ ರುಬ್ಬುವುದನ್ನು
ರೊಟ್ಟಿಗೆ ಹಿಟ್ಟು ಕಲೆಸುವುದನ್ನು
ಮನೆ ತೊಳೆದು ಸಾರಿಸಿ ರಂಗೋಲೆಯಿಕ್ಕುವುದನ್ನು
ಊದುಗೊಳವೆಯಿಂದ ಊದಿ ಊದಿ ಹಸಿ ಕಟ್ಟಿಗೆಯಲ್ಲು ಬೆಂಕಿ ಹತ್ತಿಸಿ
ಧಗ ಧಗ ಉರಿಸುವುದನ್ನು
ಅಪ್ಪನ ಕಣ್ಣಿಗೆ ಸುಖವಾಗುವಂತೆ ಕಟ್ಟುವ ನಿನ್ನ ತುರುಬನ್ನು
ಅದರ ಬೆಳ್ಳಿ ತಿರುಪನ್ನು
ಕೊಂಚ ಓರೆ ಬೈತಲೆಯ ನಿನ್ನ ಮೋಜನ್ನು
ಆ ಕಾಲದ ಕುಪ್ಪಸದ ಭುಜಕೀರ್ತಿ ಪುಕ್ಕಗಳನ್ನು
ಹಬ್ಬದ ದಿನ ನೀ ತೊಡುವ ಬುಗುಡಿಯನ್ನು
ಮೀಸೆ ಮೂಡುವ ಮುನ್ನವೇ ಪಕ್ಕದ ಮನೆಯ ಜಾಂಬವಿ ಜೊತೆ
ನನ್ನ ಚೆಲ್ಲಾಟ ಗಮನಿಸಿ ಅವಳನ್ನು ದೂರವಿಟ್ಟ ನಿನ್ನ ಕುಟಿಲೋಪಾಯಗಳನ್ನು
ಅಪ್ಪನನ್ನು ಹದ್ದಿನಲ್ಲಿಟ್ಟ ನಿನ್ನ ತಂತ್ರಗಳನ್ನು
ನಿನ್ನ ಕೈರುಚಿಯನ್ನು
ಧಾರಾಳವನ್ನು
ನನ್ನ ಹಡೆದ ಗಂಡುಬೀರಿ ತುಂಟಿ
ಇರುತ್ತಲೇ ಇರುತ್ತ
ಅದೊಂದು ದಿನ ಸುಮ್ಮನೇ ಹೊರಟುಹೋದದ್ದನ್ನು
ಮಕ್ಕಳಿಟ್ಟ ಬೆಂಕಿಗೆ ಉರಿದು ಬೂದಿಯಾಗಿ
ಪಂಚಭೂತಗಳಲ್ಲಿ ಒಂದಾದ ನೀನು
ಹರಡಿದ ಮರಳಿನ ಮೇಲೆ ನನ್ನ ತೋರು ಬೆರಳನ್ನು ಆಡಿಸಿ ತಿದ್ದಿಸಿದ
ಅಕ್ಷರಗಳನ್ನು
ಇಗೋ
ಬರೆಯುತ್ತ ಇರುವ ಈ ನಾನು
ಅದೊಂದು ದ್ವಾದಶಿಯ ಬೆಳಗಿನ ಝಾವ
ಈಜಾಡಿಸಿಕೊಂಡ ತಂಪಿನ ತುಂಗೆಯನ್ನೂ
ಆತುರದಲ್ಲಿ ಕೈಮುಗಿಸಿಕೊಂಡ ದಡದ ಶಿವನನ್ನೂ
ಸಿಡಿಮಿಡಿಯುತ್ತ ಒಲ್ಲದೆ ಉರಿಯುವ ಬೆಂಕಿಗೆ ಕಾಯುವ
ತವರಿನಿಂದ ತಂದ ಕಾವಲಿ ಮೇಲೆ
ತೂತು ತೂತಾದ ಹದವಾಗಿ ಗರಿ ಗರಿಯಾದ
ತೆಳ್ಳನೆಯ
ಬಿಸಿಬಿಸಿ ದೋಸೆ ಹೊಯ್ದು, ಮಡಿಸಿ, ತುಪ್ಪ ಸವರಿ
ಚಿಗುರು ಬಾಳೆಯ ಮೇಲೆ ಬಡಿಸಿದ
ನಿನ್ನ ಕೈಕುಶಲವೇ ಆದ ವಾತ್ಸಲ್ಯವನ್ನು
ನೆನೆಯುತ್ತೇನೆ.
- ಯು ಆರ್ ಅನಂತಮೂರ್ತಿ