ನಿನ್ನ ಪ್ರೇಮದ ಪರಿಯ

ಚಿತ್ರ ಕೃಪೆ: http://files.myopera.com/heisenberg16/albums/8923052/light-and-shadow.jpg
ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ
ನಿನ್ನೊಳಿದೆ ನನ್ನ ಮನಸು.

ಹುಣ್ಣಿಮೆಯ ರಾತ್ರಿಯಲಿ ಉಕ್ಕುವುದು ಕಡಲಾಗಿ
ನಿನ್ನೊಲುಮೆ ನನ್ನ ಕಂಡು.

ಸಾಗರನ ಹೃದಯದಲಿ ರತ್ನಪರ್ವತ ಮಾಲೆ
ಮಿಂಚಿನಲಿ ಮೀವುದಂತೆ.

ತೀರದಲಿ ಬಳಕುವಲೆ ಕಣ್ಣ ಚುಂಬಿಸಿ ಮತ್ತೆ
ಸಾಗುವುದು ಕನಸಿನಂತೆ.

ಅಲೆ ಬಂದು ಕರೆಯುವುದು ನಿನ್ನೊಲುಮೆಯರಮನೆಗೆ
ಒಳಗಡಲ ರತ್ನಪುರಿಗೆ.

ಅಲೆಯಿಡುವ ಮುತ್ತಿನಲೆ ಕಾಣುವುದು ನಿನ್ನೊಲುಮೆ -
ಯೊಳಗುಡಿಯ ಮೂರ್ತಿಮಹಿಮೆ.

ನಿನ್ನ ಪ್ರೇಮದ ಪರಿಯ ನಾನರಿಯೆ, ಕನಕಾಂಗಿ
ತಾರೆಯಾಗದೆ ಕಾಣುವೀ ಮಿಂಚು, ನಾಳೆ, ಅರ್ಧಾಂಗಿ?

                    - ಕೆ. ಎಸ್. ನರಸಿಂಹಸ್ವಾಮಿ
           ('ಮೈಸೂರು ಮಲ್ಲಿಗೆ' ಕವನ ಸಂಕಲನದಿಂದ)

ಕನ್ನಡ ಪದಗೊಳು

ಚಿತ್ರ ಕೃಪೆ: www.flickr.com
ಯೆಂಡ ಯೆಡ್ತಿ ಕನ್ನಡ್ ಪದಗೊಳ್
ಅಂದ್ರೆ ರತ್ನಂಗ್ ಪ್ರಾಣ!
ಬುಂಡೇನ್ ಎತ್ತಿ ಕುಡದ್ಬುಟ್ಟಾಂಡೆದ್ರೆ-
ತಕ್ಕೊ! ಪದಗೊಳ್ ಬಾಣ!

ಬಗವಂತ್ ಏನ್ರ ಬೂಮೀಗ್ ಇಳದು
ನನ್ ತಾಕ್ ಬಂದಾಂತ್ ಅನ್ನು;
ಪರ್ ಗಿರೀಕ್ಸೆ ಮಾಡ್ತಾನ್ ಔನು-
ಬಕ್ತನ್ ಮೇಲ್ ಔನ್ ಕಣ್ಣು!

'ಯೆಂಡ ಕುಡಿಯಾದ್ ಬುಟ್ ಬುಡ್ ರತ್ನ!'
ಅಂತ್ ಔನ್ ಏನಾರ್ ಅಂದ್ರೆ-
ಮೂಗ್ ಮೂರ್ ಚೂರಾಗ್ ಮುರಸ್ಕೋಂತೀನಿ
ದೇವರ್ ಮಾತ್ಗ್ ಅಡ್ಬಂದ್ರೆ!

'ಯೆಂಡ ಬುಟ್ಟೆ. ಯೆಡ್ತೀನ್ ಬುಟ್ ಬುಡ್!'
ಅಂತ್ ಔನ್ ಏನಾರ್ ಅಂದ್ರೆ-
ಕಳದೋಯ್ತ್ ಅಂತ ಕುಣದಾಡ್ತೀನಿ
ದೊಡ್ಡ್ ಒಂದ್ ಕಾಟ! ತೊಂದ್ರೆ!

'ಕನ್ನಡ ಪದಗೊಳ್ ಆಡೋದ್ನೆಲ್ಲ
ನಿಲ್ಲೀಸ್ ಬುಡಬೇಕ್ ರತ್ನ!'
ಅಂತ್ ಔನ್ ಅಂದ್ರೆ - ದೇವ್ರ್ ಆದ್ರ್ ಏನು!
ಮಾಡ್ತೀನ್ ಔನ್ಗೆ ಖತ್ನ!

ಆಗ್ನೆ ಮಾಡೋ ಐಗೋಳ್ ಎಲ್ಲಾ
ದೇವ್ರೆ ಆಗ್ಲಿ - ಎಲ್ಲ!
ಕನ್ನಡ್ ಸುದ್ದೀಗ್ ಏನ್ರ ಬಂದ್ರೆ
ಮಾನಾ ಉಳಸಾಕಿಲ್ಲ!

ನರಕಕ್ಕ್ ಇಳ್ಸಿ ನಾಲ್ಗೆ ಸೀಳ್ಸಿ
ಬಾಯ್ ಒಲಿಸಾಕಿದ್ರೂನೆ-
ಮೂಗ್ನಲ್ ಕನ್ನಡ್ ಪದವಾಡ್ತೀನಿ!
ನನ್ ಮನಸನ್ನ್ ನೀ ಕಾಣೆ!

ಯೆಂಡ ಓಗ್ಲಿ! ಯೆಡ್ತಿ ಓಗ್ಲಿ!
ಎಲ್ಲಾ ಕೊಚ್ಕೊಂಡ್ ಓಗ್ಲಿ!
ಪರ್ಪಂಚ್ ಇರೋ ತನಕ ಮುಂದೆ
ಕನ್ನಡ್ ಪದಗೊಳ್ ನುಗ್ಲಿ!

ಬರಲಿ ಜಡದ ಬಡತನಕ್ಕೆ ಜೀವದೈಸಿರಿ!

ಚಿತ್ರ ಕೃಪೆ: http://www.brecorder.com

ಅಃ! ಮತ್ತದೊಮ್ಮೆ ಉಲಿ!
ಹಕ್ಕಿ, ಮತ್ತದೊಮ್ಮೆ ನಲಿ!
ಬತ್ತಿದೆದೆಗೆ ಬರಲಿ ನಿನ್ನ
ಗಾನದೊಳ್ಸರಿ!
ಬರಲಿ ಜಡದ ಬಡತನಕ್ಕೆ
ಜೀವದೈಸಿರಿ!
ರಸದ ಹನಿ
ನಿನ್ನ ದನಿ!
ಹಾಡು ಮತ್ತದೊಮ್ಮೆ, ಹಕ್ಕಿ!
ನಿನ್ನ ಪ್ರಾಣಲಹರಿಯುಕ್ಕಿ
ಜಗತ್ ಪ್ರಾಣನಾಡಿಯಲ್ಲಿ
ಹರುಷ ಹರಿಯಲಿ!
ಜಡದಪಾರ ಭಾರದಲ್ಲಿ
ಜೀವವುರಿಯಲಿ!
ಜಗನ್ನೇತ್ರ ಜೋಂಪಿಸುತಿದೆ
ಮೌನ ಭಾರದಿ!
ಚೈತನ್ಯವೆ ನಿದ್ರಿಸುತಿದೆ
ಜಡದ್ವಾರದಿ!
ಬಣ್ಣಗರಿ,
ವೀಣೆಮರಿ,
ಹಾಡು, ಹಕ್ಕಿ, ಮತ್ತದೊಮ್ಮೆ,
ಇಳಿಯುವಂತೆ ಜಡದ ಹೆಮ್ಮೆ!
ಅಃ! ಮತ್ತದೊಮ್ಮೆ ಉಲಿ!
ಹಕ್ಕಿ, ಮತ್ತದೊಮ್ಮೆ ನಲಿ!
ಬತ್ತಿದೆದೆಗೆ ಬರಲಿ ನಿನ್ನ
ಗಾನದೊಳ್ಸರಿ;
ಬರಲಿ ಜಡದ ಬಡತನಕ್ಕೆ
ಜೀವದೈಸಿರಿ!

          - ಕುವೆಂಪು
('ಪಕ್ಷಿಕಾಶಿ' ಕವನ ಸಂಕಲನದಿಂದ)

ನನ್ನವಳು

ಚಿತ್ರ ಕೃಪೆ:www.flickr.com

ನನ್ನವಳು ನನ್ನೆದೆಯ ಹೊನ್ನಾಡನಾಳುವಳು
ಬೆಳಗುಗೆನ್ನೆಯ ಚೆನ್ನೆ ನನ್ನ ಮಡದಿ।

ಹೊಳೆಯ ಸುಳಿಗಳಿಗಿಂತ ಆಳಗಣ್ಣಿನ ಚೆಲುವು
ಅವಳೊಮ್ಮೆ ಹೆರಳ ಕೆದರಿ ಕಪ್ಪುಗುರುಳನ್ನು
ಬೆನ್ನ ಮೇಲೆಲ್ಲ ಹರಡಿದರೆ…
ದೂರದಲಿ, ಗಿರಿಯ ಮೇಲೆ ಇಳಿದಂತೆ ಇರುಳ ಮಾಲೆ
ಇಳಿದಂತೆ ಇರುಳ ಮಾಲೆ.

ಕರೆದಾಗ ತೌರು ಮನೆ, ನೆನೆದಾಗ ನನ್ನ ಮನೆ
ಹಳ್ಳಿಯೆರಡರ ಮುದ್ದು ಬಳ್ಳಿ ಅವಳು
ಮುಚ್ಚು ಮರೆ ಇಲ್ಲದೆ ಅಚ್ಚ ಮಲ್ಲಿಗೆಯಂತೆ
ಅರಳುತಿಹುದು ಅವಳ ಬದುಕು
ಬಂಗಾರದೊಡವೆಗಳ ಬಯಸಿಲ್ಲ ಮನಸಿನಲಿ
ಬಂಗಾರದಂತ ಹುಡುಗಿ
ನನ್ನೊಡವೆ, ನನ್ನ ಬೆಡಗಿ.

ಹಸಿರು ಸೀರೆಯನುಟ್ಟು, ಕೆಂಪು ಬಳೆಗಳ ತೊಟ್ಟು
ತುಂಬು ದನಿಯಲಿ ಕರೆವಳೆನ್ನ ಚೆಲುವೆ
ಹಣೆಯನಾಳುವುದು ಅವಳ ಕುಂಕುಮದ ನಿಡುವಟ್ಟು
ಲಕ್ಷ್ಮಿ ಅವಳೆನ್ನ ಮನೆಗೆ
ನಮಗಿದುವೇ ಸೊಗಸು ಬದುಕಿನ ಬಣ್ಣಗಳಾ ಸಂತೆ
ನಮಗಿಲ್ಲ ನೂರು ಚಿಂತೆ,ನಾವು ಗಂಧರ್ವರಂತೆ
ನಾವು ಗಂಧರ್ವರಂತೆ.

                   - ಕೆ. ಎಸ್. ನರಸಿಂಹ ಸ್ವಾಮಿ
  ('ಇರುವಂತಿಗೆ' ಕವನ ಸಂಕಲನದಿಂದ)

ರತ್ನನ್ ಪರ್ಪಂಚ!

ಚಿತ್ರ ಕೃಪೆ: www.oldindianphotos.in

ಯೆಳ್ಕೊಳ್ಳಾಕ್ ಒಂದ್ ಊರು
ತಲೆಮೇಗೆ ಒಂದ್ ಸೂರು
ಮಲಗಾಕೆ ಬೂಮ್ತಾಯಿ ಮಂಚ;
ಕೈಯಿಡದೊಳ್ ಪುಟ್ನಂಜಿ
ನಗನಗತ ಉಪ್ಗಂಜಿ
ಕೊಟ್ರಾಯ್ತು ರತ್ನನ್ ಪರ್ಪಂಚ!

ಹಗಲೆಲ್ಲ ಬೆವರ್ ಅರ್ಸಿ
ತಂದಿದ್ರಲ್ ಒಸಿ ಮುರ್ಸಿ
ಸಂಜೇಲಿ ಉಳಿಯೆಂಡ ಕೊಂಚ
ಈರ್‍ತ ಮೈ ಝುಂ ಅಂದ್ರೆ
ವಾಸ್ನೆ ಘಂ ಘಂ ಅಂದ್ರೆ
ತುಂಭೋಯ್ತು ರತ್ನನ್ ಪರ್ಪಂಚ!

ಏನೋ ಕುಸಿಯಾದಾಗ
ಮತತ್  ಎಚ್ ಓದಾಗ
ಅಂಗೇನೆ ಪರಪಂಚದ್ ಅಂಚ
ದಾಟ್ಕಂಡಿ ಆರಾಡ್ತ
ಕನ್ನಡದಲ್ ಪದವಾಡ್ತ
ಹಿಗ್ಗೋದು ರತ್ನನ್ ಪರ್ಪಂಚ!

ದುಕ್ಕಿಲ್ಲದಾಲಿಲ್ಲ
ನಮಗ್ ಅದರಾಗ್ ಪಾಲಿಲ್ಲ
ನಾವ್ ಕಂಡಿಲ್ಲ್ ಆ ತಂಚ ವಂಚ;
ನಮ್ಮಸ್ಟಕ್ ನಾವಾಗಿ
ಇದ್ದಿದ್ರಲ್ಲ್ ಹಾಯಾಗಿ
ಬಾಳೋದು ರತ್ನನ್ ಪರ್ಪಂಚ!

ಬಡತನ ಗಿಡತನ
ಏನಿದ್ರೇನು? ನಡತೇನ
ಚೆಂದಾಗ್ ಇಟ್ಕೊಳ್ಳಾದೆ ಅಚ್ಛ!
ಅಂದ್ಕೊಂಡಿ ಸುಕವಾಗಿ
ಕಸ್ಟಕ್ಕೆ  ನಗಮೊಕವಾಗಿ
ನಗಿಯೋದೆ ರತ್ನನ್ ಪರ್ಪಂಚ!

ದೇವರ್ ಏನ್ರ ಕೊಡಲಣ್ಣ
ಕೊಡದಿದ್ರೆ ಬುಡಲಣ್ಣ
ನಾವೆಲ್ಲ ಔನೀಗೆ ಬಚ್ಚ!
ಔನ್ ಆಕಿದ್ ತಾಳ್ದಂಗೆ
ಕಣ್ ಮುಚ್ಚ್ಕೊಂಡ್ ಯೋಳ್ದಂಗೆ
ಕುಣಿಯಾದೆ ರತ್ನನ್ ಪರ್ಪಂಚ!

                    - ಜಿ ಪಿ ರಾಜರತ್ನಂ 

ದೇಶಭಕ್ತನೊರ್ವನಿಗೆ


ಶ್ರೀಕೃಷ್ಣನೆಂದನಂದರ್ಜುನಗೆ “ಹೇ ಪಾರ್ಥ,
ಕೀಳಾದೊಡಂ ತನ್ನ ಧರ್ಮದೊಳಳಿವೆ ಲೇಸು;
ಮೇಲಾಗಿ ತೋರ್ದಡಂ ಪರಧರ್ಮವದು ಹೇಸು,
ಭೀಕರಮಜಯಕರಂ; ತನಗನರ್ಥಂ, ವ್ಯರ್ಥ
ಅನ್ಯರಿಗೆ.” ಕಬ್ಬಿಣದ ಕರ್ಮ ಕಬ್ಬಿಣಕೆ ಹಿತ.
ಗಣಿಯಿಂದಮಲ್ತು ಗುಣದಿಂದೆ ಲೋಹದ ಕರ್ಮ
ನಿರ್ಣಯಂ. ಗುಣವರಿತ ನಡೆಯೆ ಯೋಗದ ಮರ್ಮ.
ಹೊರಗೊಳಗನಾಳ್ವ ಆ ಕಟ್ಟಳೆಯೆ ದಿವ್ಯ ಋತ.
ದೇಶಭಕ್ತನೆ, ನಿನ್ನ ಕರ್ಮಕೆ ಸುಲಭ ಕೀರ್ತಿ
ದೊರೆಯುತಿದೆ; ಶೀಘ್ರ ಫಲವೂ ಲಭಿಸುತಿದೆ ಜನಕೆ;
ನೀನಿಂದು ಲೋಕದಾರಾಧನೆಯ ಶ್ರೀಮೂರ್ತಿ:
ಕರುಬು ನಾಣ್ಗಳ ಸೋಂಕು ಸುಳಿಯದೈ ಕವಿಮನಕೆ!
ಸೌಂದರ್ಯಸೃಷ್ಟಿಯೆ ಕವಿಗೆ ಪೂಜೆ, ಕರ್ತವ್ಯ,
ಜನಸೇವೆ, ಸಾಧನೆ: ರಸವೆ ಪರಮಗಂತವ್ಯ!

                             - ಕುವೆಂಪು