ಚಿತ್ರ ಕೃಪೆ: www.oldindianphotos.in |
ಯೆಳ್ಕೊಳ್ಳಾಕ್ ಒಂದ್ ಊರು
ತಲೆಮೇಗೆ ಒಂದ್ ಸೂರು
ಮಲಗಾಕೆ ಬೂಮ್ತಾಯಿ ಮಂಚ;
ಕೈಯಿಡದೊಳ್ ಪುಟ್ನಂಜಿ
ನಗನಗತ ಉಪ್ಗಂಜಿ
ಕೊಟ್ರಾಯ್ತು ರತ್ನನ್ ಪರ್ಪಂಚ!
ಹಗಲೆಲ್ಲ ಬೆವರ್ ಅರ್ಸಿ
ತಂದಿದ್ರಲ್ ಒಸಿ ಮುರ್ಸಿ
ಸಂಜೇಲಿ ಉಳಿಯೆಂಡ ಕೊಂಚ
ಈರ್‍ತ ಮೈ ಝುಂ ಅಂದ್ರೆ
ವಾಸ್ನೆ ಘಂ ಘಂ ಅಂದ್ರೆ
ತುಂಭೋಯ್ತು ರತ್ನನ್ ಪರ್ಪಂಚ!
ಏನೋ ಕುಸಿಯಾದಾಗ
ಮತತ್ ಎಚ್ ಓದಾಗ
ಅಂಗೇನೆ ಪರಪಂಚದ್ ಅಂಚ
ದಾಟ್ಕಂಡಿ ಆರಾಡ್ತ
ಕನ್ನಡದಲ್ ಪದವಾಡ್ತ
ಹಿಗ್ಗೋದು ರತ್ನನ್ ಪರ್ಪಂಚ!
ದುಕ್ಕಿಲ್ಲದಾಲಿಲ್ಲ
ನಮಗ್ ಅದರಾಗ್ ಪಾಲಿಲ್ಲ
ನಾವ್ ಕಂಡಿಲ್ಲ್ ಆ ತಂಚ ವಂಚ;
ನಮ್ಮಸ್ಟಕ್ ನಾವಾಗಿ
ಇದ್ದಿದ್ರಲ್ಲ್ ಹಾಯಾಗಿ
ಬಾಳೋದು ರತ್ನನ್ ಪರ್ಪಂಚ!
ಬಡತನ ಗಿಡತನ
ಏನಿದ್ರೇನು? ನಡತೇನ
ಚೆಂದಾಗ್ ಇಟ್ಕೊಳ್ಳಾದೆ ಅಚ್ಛ!
ಅಂದ್ಕೊಂಡಿ ಸುಕವಾಗಿ
ಕಸ್ಟಕ್ಕೆ ನಗಮೊಕವಾಗಿ
ನಗಿಯೋದೆ ರತ್ನನ್ ಪರ್ಪಂಚ!
ದೇವರ್ ಏನ್ರ ಕೊಡಲಣ್ಣ
ಕೊಡದಿದ್ರೆ ಬುಡಲಣ್ಣ
ನಾವೆಲ್ಲ ಔನೀಗೆ ಬಚ್ಚ!
ಔನ್ ಆಕಿದ್ ತಾಳ್ದಂಗೆ
ಕಣ್ ಮುಚ್ಚ್ಕೊಂಡ್ ಯೋಳ್ದಂಗೆ
ಕುಣಿಯಾದೆ ರತ್ನನ್ ಪರ್ಪಂಚ!
- ಜಿ ಪಿ ರಾಜರತ್ನಂ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಉನ್ಮಾದದ ನಶೆ ನಮ್ಮೊಂದಿಗಿಷ್ಟು ಹಂಚಿಕೊಳ್ರಿ....