ಏಳಿರೈ! ಬಾಲರೇ! ದೇಶಸೇವೆಗೈಯುವ!
ಕೇಳಿರೈ! ಕೇಳಿರೈ! ತಾಯ ಗೋಳ ರೋದನ!
ಪರಕೀಯರ ಪದತಳದೊಳು
ಹೊರಳಾಡುತ ಅಳುತಿರುವಳು!
ಕಂಡು ನೀವು ಸಹಿಪರೇ?
ಗಂಡುಗಲಿಗಳಲ್ಲವೇ?
ಅರೆಹರಿದಿಹ ಪರವಸನವ
ಧರಿಸುತ ತಾ ಮೊರೆಯಿಡುವಳು!
ಅಮ್ಮನಿರುವ ಗತಿಯನು
ನೋಡಿ ಸುಮ್ಮನಿರುವರೇ?
ಧೂಳಾಗಿದೆ ಜನನಿಯ ಮುಖ
ಹಾಳಾಗಿದೆ ಜನನಿಯ ಸುಖ!
ಏಳಿ! ಏಕೆ ಜಡತನ?
ಏಳಿ! ಸಾಕು ಬಡತನ!
ವೀರಶಿವನ ಮರೆತಿರುವಿರ?
ಧೀರತನವ ತೊರೆದಿರುವಿರ?
ಏಳಿ, ಅಮೃತ ಪುತ್ರರೆ !
ಏಳಿ, ಆನಂದಾತ್ಮರೆ !
- ಕುವೆಂಪು ('ಮೇಘಪುರ' ಕವನಸಂಕಲನದಿಂದ)
Informative thanks
ಪ್ರತ್ಯುತ್ತರಅಳಿಸಿ