ಆಕಾಶದ ಹೆಬ್ಬಯಲಿನಲಿ


ಆಕಾಶದ ಹೆಬ್ಬಯಲಿನಲಿ
ಬೆಚ್ಚನೆ ಬಿಸಿಲಿನಲಿ
ಚಳಿಕಾಯುತ್ತಿವೆ
ಅಲೆಯುತ್ತಿವೆ
ಸುತ್ತುತ್ತಿವೆ
ಬಿಳಿ ಮುಗಿಲಿನ ಮುಂದೆ
ಹಿಂದೆ ಮುಂದೆ!
ನನ್ನಿಳೆಯೀ ಹಸುರ್ಬಯಲೀ
ಎಳೆ ಗರುಕೆಯ ಹಾಸಿನಲಿ
ಚಲಿಸದವೊಲೆ ಚಲಿಸುತ್ತಿವೆ
ಮೇಯುತ್ತಿಹ ಗೋವು!
ಮೃದುಗಾಳಿಯು ಬೀಸುತ್ತಿರೆ
ಹರೆಹರೆಯಲಿ ತಳಿರೆಲೆಯಲಿ
ಮರ್ಮರ ದನಿಗೈಯುತ್ತಿದೆ
ಎಲೆ ತುಂಬಿದ ಮಾವು
ಹೊಸ ಹಸಲೆಯ ಹಸುರೆದೆಯಲಿ
ಮುದ್ದಾಗಿಹ ಬಿಳಿ ಕುರಿಮರಿ
ನೆಗೆಯುತ್ತಿರೆ ಚಿಗಿಯುತ್ತಿರೆ,
ಕಂಠದೊಳಿಹ ಕಿಂಕಿಣಿಯೂ
ಟಿಂಟಿಣಿ ಟಿಣಿ ಟಿಂಟಿಣಿ ಟಿಣಿ
ಸಂತೋಷವ ಘೋಷಿಸುತಿರೆ
ಸುಖವಲ್ಲವೆ?-ಪೇಳಲ್ಲವೆ
ಈ ಬಾಳಿನ ನೋವೂ?
ಎಲ್ಲೆಲ್ಲಿಯು ಯಾರಲ್ಲಿಯು
ಉದ್ವೇಗವೆ ಇಲ್ಲ;
ಸೂಸುತ್ತಿದೆ ಹರಿಯುತ್ತಿದೆ
ತುಂಬುತ್ತಿದೆ ತುಳುಕುತ್ತಿದೆ
ಬಾಳಿನ ಜೇನ್ಬೆಲ್ಲ!
ಎಲ್ಲವು ‘ಇವೆ’! ಸುಮ್ಮನೆ ‘ಇವೆ’!
ಅರಿಯುವ ಗೋಜಿಲ್ಲ!
ಮನುಜನು ನಾನ್ ಎನ್ನೆದೆಯಲಿ
ಅರಿವೆಂಬುವ ಬಾವು
ಕೀವಾಗಿರೆ ನೋವಾಗಿರೆ
ಬಾಳ್ಬೆಲ್ಲವೆ ಬೇವು!

             - ಕುವೆಂಪು
('ಪಕ್ಷಿಕಾಶಿ' ಕವನ ಸಂಕಲನದಿಂದ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಉನ್ಮಾದದ ನಶೆ ನಮ್ಮೊಂದಿಗಿಷ್ಟು ಹಂಚಿಕೊಳ್ರಿ....