ಬೆಳಗಾಗುವುದೇ ಬೇಡ!


ಹುಣ್ಣಿಮೆ ಬಾನಿನ ಕೆನ್ನೆಯ ಮೇಲೆ
ಪೂರ್ಣ ಚಂದಿರ ಬಂದಿತ್ತು ;
ಅದರ ಕೆಳಗೆ, ಎಲ್ಲೋ ಬಲು ಕೆಳಗೆ,
ರೋಹಿಣಿ ಹೊಳೆದಿತ್ತು.

ಒಸಗೆಯ ಕೋಣೆಯ ಮಂಚದ ಮೇಲೆ
ಕುಳಿತಿದ್ದವು ಗಂಡು ಹೆಣ್ಣು ;
ಸುತ್ತಲು ಬಗೆ ಬಗೆ ತಿನಿಸು, ಹಣ್ಣು,
ಹೂವಿನ ನರುಗಂಪು.

ತೆರೆದ ಕಿಟಕಿಯಿಂದೊಳಗೆ ಬಂದಿತ್ತು
ಮೆಲ್ಲಗೆ ತಂಬೆಲರು ;
ಗಂಡಿಗೆ ಒರಗಿದ ಹೆಣ್ಣು ಹೇಳಿತು -
'ಸುಖಮಯವೀ ಬದುಕು'.

ಕಿಟಕಿಯ ತುಂಬಾ ಚಂದಿರ, ತಾರಗೆ
ದೂರದಿ ಯಾವೂದೊ ಹಾಡು ;
ಮುತ್ತಿಕ್ಕುತ ಗಂಡಿಗೆ ಅದು ನುಡಿಯಿತು -
'ಚಂದಿರನಂತೀ ಬದುಕು'.

ಚಂದಿರನಡಿಯಲಿ ಚಲಿಸಿತು ಮೋಡ,
ಹೊಳೆಯಿತು ತಾರಗೆ ಎಲ್ಲೆಲ್ಲು ;
ಹೆಣ್ಣು ಹೇಳಿತು ಸಂತಸದಿಂದ -
'ಬೆಳಗಾಗುವುದೇ ಬೇಡ!'

        -  ಕೆ ಎಸ್ ನರಸಿಂಹಸ್ವಾಮಿ
('ಮೌನದಲಿ ಮಾತ ಹುಡುಕುತ್ತ' ಕವನ ಸಂಕಲನದಿಂದ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಉನ್ಮಾದದ ನಶೆ ನಮ್ಮೊಂದಿಗಿಷ್ಟು ಹಂಚಿಕೊಳ್ರಿ....