ಮತ್ತದೇ ಬೇಸರ

                                                                                    credit:http://flickrhivemind.net

ಮತ್ತದೇ ಬೇಸರ ಅದೇ ಸಂಜೆ ಅದೇ ಏಕಾಂತ
ನಿನ್ನ ಜೊತೆಯಿಲ್ಲದೆ ಮಾತಿಲ್ಲದೆ ಮನ ವಿಭ್ರಾಂತ || ಮತ್ತದೇ ||

ಕಣ್ಣನೇ ದಣಿಸುವ ಈ ಪಡುವಣ ಬಾನ್ ಬಣ್ಣಗಳು
ಮಣ್ಣನೇ ಹೊನ್ನಿನ ಹಣ್ಣಾಗಿಸುವೀ ಕಿರಣಗಳ
ಹಚ್ಚನೇ ಹಸುರಿಗೆ ಹಸೆಯಿಡುತಿರುವೀ ಖಗಗಾನ
ಚಿನ್ನ ನೀನಿಲ್ಲದೆ ಬಿಮ್ಮೆನ್ನುತಿದೆ ರಮ್ಯೋದ್ಯಾನ || ಮತ್ತದೇ ||

ಆಸೆಗಳ ಹಿಂಡಿನ ತುಳಿತಕ್ಕೆ ಹೊಲ ನನ್ನೀ ದೇಹ
ಬರುವೆಯೋ ಬಾರೆಯೋ ನೀನೆನ್ನುತಿದೆ ಸಂದೇಹ
ಮುತ್ತಿದಾಲಸ್ಯವ ಬಿಗಿ ಮೌನವ ಹೊಡೆದೋಡಿಸು ಬಾ
ಮತ್ತೆ ಆ ಸಮತೆಯ ಹಿರಿ ಬೇಲಿಯ ಸರಿ ನಿಲಿಸು ಬಾ || ಮತ್ತದೇ ||
                                            
                                                 - ಕೆ. ಎಸ್. ನಿಸಾರ್ ಅಹ್ಮದ್
                                            ('ನಿತ್ಯೋತ್ಸವ' ಕವನ ಸಂಕಲನದಿಂದ)

ಕರ್ನಾಟಕ ಗೀತ



ಪಡುವಣ ಕಡಲಿನ ನೀಲಿಯ ಬಣ್ಣ,
ಮುಡಿಯೊಳು ಸಂಜೆಯ ಅಂಚಿನ ಚಿನ್ನ,
ಹೊಳೆಗಳ ಸೆರೆಗಿನ ಪಚ್ಚೆಯ ಬಯಲು,
ಬಿರುಮಳೆಗಂಜದ ಬೆಟ್ಟದ ಸಾಲು,
ಹುಲಿ ಕಾಡನೆಗಳಲೆಯುವ ಕಾಡಿದು,
ಸಿರಿಗನ್ನಡ ನಾಡು!

ಕಲ್ಲಿಗೆ ಬಯಸಿದ ರೂಪವ ತೊಡಿಸಿ,
ಮುಗಿಲಿಗೆ ತಾಗುವ ಮೂರ್ತಿಯ ನಿಲಿಸಿ,
ದಾನ ಧರ್ಮಗಳ ಕೊಡುಗೈಯಾಗಿ,
ವೀರಾಗ್ರಣಿಗಳ ತೊಟ್ಟಿಲ ತೂಗಿ,
ಬೆಳಗಿದ ನಾಡಿದು, ಚಂದನಗಂಪಿನ
ಸಿರಿಗನ್ನಡ ನಾಡು!

ಇಲ್ಲಿ ಅರಳದಿಹ ಹೂವುಗಳಿಲ್ಲ :
ಹಾಡಲು ಬಾರದ ಹಕ್ಕಿಗಳಿಲ್ಲ -
ಸಾವಿರ ದೀಪಗಳರಮನೆಯೊಳಗೆ
ಶರಣೆನ್ನುವೆನೀ ವೀಣಾಧ್ವನಿಗೆ.
ಕನ್ನಡ ನಾಡಿದು ; ಮಿಂಚುವ ಕಂಗಳ
ಸಿರಿಗನ್ನಡ ನಾಡು.

            - ಕೆ ಎಸ್ ನರಸಿಂಹಸ್ವಾಮಿ
('ನವ ಪಲ್ಲವ' ಕವನ ಸಂಕಲನದಿಂದ)  

ವನಸುಮ

ಚಿತ್ರ ಕೃಪೆ : jayeckert.com
ವನಸುಮದೊಲೆನ್ನ ಜೀ
ವನವು ವಿಕಸಿಸುವಂತೆ
ಮನವನುಗೊಳಿಸು ಗುರುವೇ-ಹೇ ದೇವ

ಜನಕೆ ಸಂತಸವೀವ
ಘನನು ನಾನೆಂದೆಂಬ
ಎಣಿಕೆ ತೋರದೆ ಜಗದ ಪೊಗಳಿಕೆಗೆ ಬಾಯ್ ಬಿಡದೆ

ಕಾನನದಿ ಮಲ್ಲಿಗೆಯು
ಮೌನದಿಂ ಬಿರಿದು ನಿಜ
ಸೌರಭವ ಸೂಸಿ ನಲವಿಂ
ತಾನೆಲೆಯ ಪಿಂತಿರ್ದು
ದೀನತೆಯ ತೋರಿ ಅಭಿ
ಮಾನವನು ತೊರೆದು ಕೃತಕೃತ್ಯತೆಯ ಪಡೆವಂತೆ

ಉಪಕಾರಿ ನಾನು ಎ
ನ್ನುಪಕೃತಿಯು ಜಗಕೆಂಬ
ವಿಪರೀತ ಮತಿಯನುಳಿದು
ವಿಪುಲಾಶ್ರಯವನೀವ
ಸುಫಲ ಸುಮ ಭರಿತ ಪಾ
ದಪದಂತೆ ನೈಜಮಾದೊಳ್ಪಿನಿಂ ಬಾಳ್ವವೊಲು

                      - ಡಿ.ವಿ.ಗುಂಡಪ್ಪ 

ಬುದ್ಧ



ಬುದ್ಧ, ಬುದ್ಧ -
ಜಗವೆಲ್ಲ ಮಲಗಿರಲು ಇವನೊಬ್ಬನೆದ್ದ ;
ಮಡದಿ ಮಗು ಮನೆ - ಮಾರು ರಾಜ್ಯ - ಗೀಜ್ಯ
ಹೊತ್ತಿರುವ ಉರಿಯಲಿ ಆಯಿತಾಜ್ಯ
ಹಿಂದೆ ಬಿದ್ದವು ಎಲ್ಲೋ ಕುದುರೆ  ಕಾಲಾಳು
ಬಿಚ್ಚಿ ಉದಿರಿತು ಎಲ್ಲೋ ಮನದ ಬಾಳು
ಹೊರಟ ಹೊರಟೇ ಹೊರಟ, ಹೊರಟನೆತ್ತೋ
ಸಾಹಸಿಯ ಗೊತ್ತುಗುರಿ ಅವಗು ಗೊತ್ತೋ !

ಕಾಮ - ಕ್ರೋಧವ ದಾಟಿ, ಮದ - ಮತ್ಸರವ ತುಳಿದು
ಮೋಹ - ಲಾಭವ ಮೆಟ್ಟಿ ಅಡಿ ಕಿತ್ತಿ ಇಟ್ಟ,
ಇದೊ ತಗ್ಗು, ಅದೊ ಗುಡ್ಡ, ಆಗೋ ಮಲೆಯ ಬೆಟ್ಟ
ನೆಲ ತೆಳಗೆ ಬಿಟ್ಟ.

ಏರಿದೆರಿದನೇರಿ ಗಾಳಿಗುದುರೆ ಸವಾರಿ
ಚಂದ್ರಕಿರಣವ ಮೀರಿ ಸೂರ್ಯ ಸೇರಿ
ಬೆಳಕನ್ನೆ ಹಿಂದೊಗೆದು ತಮದ ಬಸಿರನೆ ಬಗೆದು
ಅಸ್ಪರ್ಶ ಅವಕಾಶದಲ್ಲಿ ಇದ್ದ.
ಬುದ್ಧ-ಬುದ್ಧ-ಬುದ್ಧ
ಶಬ್ದ-ನಾದ-ದ್ವನಿಯ ಸದ್ದ ಮೀರಿದ್ದ.
ಇಲ್ಲ ಎಂಬುವ ಕೊನೆಗೆ ಆತ್ಮ ಶುದ್ದ
ಇದ್ದರೆನಿಲದಿದ್ದರೇನೆನಲು ಗೆದ್ದ.

ಅಲ್ಲಿಂದ ಇಲ್ಲಿವರೆ ಹೊರಳಿ ನೋಡಿ
ಇದ್ದುದಿದ್ದಂತಿತ್ತು ಜನನ-ಮರಣದ ಜೋಡಿ
ಗೆದ್ದುದೇನೆಂದೆನುತ ಮರಳಿ ಜಿಗಿದ
ಭೂತಜಾತದ ಎದೆಯ ಸೀಳಿ ಸಿಗಿದ
ಅದೇ ತನ್ನ ಮನೆಯಂದು ಸಿದ್ಧ ಬಗೆದ.

ಬುದ್ಧನೆಂಬುವ ಒಬ್ಬ ಎಂದೊ ಇದ್ದ
ಎನುವಂತೆ ಇಂದಿಗೂ ಇಲ್ಲೇ ಇಲ್ಲ
ಬುದ್ಧ ಹುಟ್ಟಿದ ಮೇಲೆ ಹಳೆ ಜಗವು ಸತ್ತು
ಇದ್ದು ಇಲ್ಲದ ಹಾಗೆ, ಹಾಗೆ ಇತ್ತು.
ಬುದ್ಧ ಸತ್ತನು ಎಂದು ಯಾರೆಂದರೂ
ಬುದ್ಧನ ಜಯಂತಿಗಿದೆ ಜಯವೆಂದಿಗೂ
ಬುದ್ಧನ ಸಮಾಧಿಯದು ಮಾನವನ ಹೃದಯ
ಅದುವೆ ಕಾಯುತ್ತಲಿದೆ ಕಲ್ಕಿ ಉದಯ.

                                         - ದ ರಾ ಬೇಂದ್ರೆ
 ('ಗಂಗಾವತರಣ' ಕವನ ಸಂಕಲನದಿಂದ)

ದೀಪಾವಳಿ


ಹೂವು ಬಳ್ಳಿಗೆ ದೀಪ ;
ಹಸಿರು ಬಯಲಿಗೆ ದೀಪ ;
ಹುಲಿಯ ಕಣ್ಣಿನ ದೀಪ ಕಾಡಿನಲ್ಲಿ ;
ಮುತ್ತು ಕಡಲಿಗೆ ದೀಪ,
ಹಕ್ಕಿ ಗಾಳಿಗೆ ದೀಪ,
ಗ್ರಹತಾರೆಗಳ ದೀಪ ಬಾನಿನಲ್ಲಿ.

ಬಲ್ಮೆ ತೋಳಿಗೆ ದೀಪ ;
ದುಡಿಮೆ ಬೆವರಿನ ದೀಪ ;
ಸಹನೆ ಅನುಭವ - ದೀಪ ಬದುಕಿನಲ್ಲಿ ;
ಮುನಿಸು ಒಲವಿಗೆ ದೀಪ ;
ಉಣಿಸು ಒಡಲಿಗೆ ದೀಪ ;
ಕರುಣೆ ನಂದಾದೀಪ ಲೋಕದಲ್ಲಿ.

ತೋರಣದ ತಳಿರಲ್ಲಿ,
ಹೊಸಿಲ ಹಣತೆಗಳಲ್ಲಿ,
ಬಾಣಬಿರುಸುಗಳಲ್ಲಿ ನಲಿವು ಮೂಡಿ,
ಕತ್ತಲೆಯ ಪುಟಗಳಲಿ
ಬೆಳಕಿನಕ್ಷರಗಳಲಿ,
ದೀಪಗಳ ಸಂದೇಶ ಥಳಥಳಿಸಲಿ !

ಬೆಳಕಿನಸ್ತಿತ್ವವನೆ
ಅಣಕಿಸುವ ಕತ್ತಲೆಗೆ
ತಕ್ಕ ಉತ್ತರವಲ್ಲಿ ಕೇಳಿಬರಲಿ !
ದೀಪಾವಳಿಯ ಜ್ಯೋತಿ
ಅಭಯ ಹಸ್ತವನೆತ್ತಿ
ಎಲ್ಲರಿಗೆ ಎಲ್ಲಕ್ಕೆ ಶುಭಕೋರಲಿ !

                  - ಕೆ ಎಸ್ ನರಸಿಂಹಸ್ವಾಮಿ
('ನವ ಪಲ್ಲವ' ಕವನ ಸಂಕಲನದಿಂದ) 

ಮೆರವಣಿಗೆ

http://chestofbooks.com/travel/india/John-Stoddard-Lectures/images/The-Procession-Of-The-Sacred-Tooth.png


ಹೊಸಿಲ ಹಸೆಯನು ದಾಟಿ, ಗೆಜ್ಜೆಗಳ ಕುಣಿಸಿ
ಒಳಗೆ ಬಂದಳು ನಾಲ್ಕು ತುಂಬಿರದ ಹುಡುಗಿ;
'ಮಾವ ಮೇಜಿನ ಮೇಲೆ ಇರುವುದೇನೆಂದು 
ಓರೆಗಣ್ಣಿನಲವಳು ನನ್ನ ಕೇಳಿದಳು.

"ಅದೊಂದು ಹಳೆಯ ಕಥೆ ; ಹೆಸರು ಮೆರವಣಿಗೆ.
ಓದುವೆನು ಕೇಳೆಂದು ಪುಸ್ತಕವನು ತೆರೆದೆ :
"ಹಸಿರು ದೀಪದ ಒಂಟೆ ಕಾಣಿಸಿತು ಮೊದಲು,
ಬೀದಿಯುದ್ದಕು ದೀಪಮಾಲೆಗಳು ಹೊಳೆದು.

ನೌಪತ್ತು ಕೇಳಿಸಿತು, ಗುಡುಗಿತು ನಗಾರಿ
ಕಿಕ್ಕಿರಿದ ಇಕ್ಕೆಲದ ಚಪ್ಪಾಳೆಗಳಲಿ;
ಬಳಿಕ ಆನೆಯ ಬಂಡಿ, ಕುದುರೆ, ಕಾಲಾಳು,
ಹಾಡುತ್ತ ಮುನ್ನಡೆದ ಗಾಯಕರ ಸಾಲು.

ಬಂತು ಓಲಗದೊಡನೆ ಬಳಕುತ್ತ ಮೇನ ;
ತಂಗಾಳಿಯಲಿ ತೇಲಿಬಂತು ತಿಲ್ಲಾನ."
'ಮುಂದೇನು ಬಂತೆಂದು ಕೇಳಿದಳು ಚೆಲುವೆ ;
"ಒಂದೆರಡು ಮಳೆಯ ಹನಿ ಬಿತ್ತೆಂದು ನುಡಿದೆ.

"ಸೊಂಡಿಲಾಡಿಸಿ ಬಂತು ಸಿಂಗರಿಸಿದಾನೆ ;
ಮಹಡಿಯಂಚಿಗೆ ಸರಿದು ನೋಡಿದೆನು ನಾನೆ.
ಚಿನ್ನದಂಬಾರಿಯಲಿ ದೊರೆ ಬಂದ, ಬಂದ!-
ಉಕ್ಕಿದುದು ಎಲ್ಲರೆದೆಯೊಳಗೆ ಆನಂದ.

ಇಲ್ಲಿಗಿದು ಮುಗಿತೆಂದವನೆ ವಿರಮಿಸಿದೆ ;
ಅರ್ಥವಾಯಿತೆ ಇವಳಿಗೆಂದು ಶಂಕಿಸಿದೆ.
ಒಂಟೆ, ಆನೆ, ಕುದುರೆ - ಇವಳಿಗೂ ಗೊತ್ತು;
ನಮ್ಮೂರಿಗೊಮ್ಮೆ ಸರ್ಕಸ್ಸು ಬಂದಿತ್ತು.

ಇವಳಿಗೋಲಗ ಕೂಡ ಅಪರಿಚಿತವಲ್ಲ ;
ಅಕ್ಕನ ಮದುವೆಗಿವಳು ಹೋಗಿದ್ದಳಲ್ಲ!
ಗೊತ್ತಿರದ ಪದಗಳಿವು : ಗಾಯಕ, ನಗಾರಿ,
ನೌಪತ್ತು, ಮೇನ, ತಿಲ್ಲಾನ, ಅಂಬಾರಿ.

ಪದಗಳ ಬಿಡಿಸಿ ಅರ್ಥವನು ವಿವರಿಸಿದೆ ;
ಸ್ಪಷ್ಟವಾಗಿರಬಹುದು ಎಂದು ಭಾವಿಸಿದೆ ;
ಇವಳ ಹಿಂದೆಯೆ ನಡೆದೆ ಬಾಗಿಲಿನವರೆಗೆ.-
'ದೊರೆ' ಎಂದರೇನೆಂದು ಕೇಳಿದಳು ಕಡೆಗೆ.

                  - ಕೆ ಎಸ್ ನರಸಿಂಹಸ್ವಾಮಿ
         ('ನವ ಪಲ್ಲವ' ಕವನ ಸಂಕಲನದಿಂದ)  
 

ಋತು ವೈಭವ

          
     
ಮುನ್ನುಡಿ

ಕಳೆದ ಕಾಲ, ಇರುಳ ಕಾಲ, ಬರುವ ಕಾಲ, ಕಾಲ:
ವರುಷಕಾರು ಋತುಗಳೆಂದು ನುಡಿಯುತಿಹನು ಬಾಲ.
ಒಂದು ಋತುವಿಗೊಂದು ರೂಪ, ರಾಗ, ಭಾವ , ತಾಳ ;
ಒಂದೆ ಹೊಳೆಯ ನೀರಿನಲ್ಲಿ ಬೇರೆ ಬೇರೆ ಆಳ.

ಕಾಲಚಕ್ರ ಉರುಳುತಿದೆ, ಗಾಳಿ ಮೊರೆದು ಹೊರಳುತಿದೆ ;
ಗೆಜ್ಜೆಸದ್ದು ಹೆಜ್ಜೆನೆರಳು ದಾರಿಯುದ್ದಕೂ.
ಅರ್ಧ ಸುಖ, ಅರ್ಧ ದುಖಃ, ಬಾನ ಕಡೆಗೆ ತೆರೆದೆ ಮುಖ ;
ತಾಯ ಸೆರಗ ಹಿಡಿದ ಕಂದ ದಾರಿಯುದ್ದಕೂ.

ಬಾಳ ತೊಡೆಕು ಬೆಳೆಯುತಿದೆ, ಗೆಲುವಿನಲ್ಲಿ ಹರುಷವಿದೆ :
ಚಕ್ರ ತಿರುಗಿದಂತೆ ವರುಷ ದಾರಿಯುದ್ದಕೂ.
ಋತುಗಳಾರು ಪುಟಗಳಾರು ವರುಷವೆಂಬ ಕವಿತೆಗೆನೆ
ಬೇರೆ ರಾಗ ಬೇರೆ ತಾಳ ದಾರಿಯುದ್ದಕೂ.

ಬೆಟ್ಟ ನಿಂತು ನೋಡುತಿದೆ, ಹರಿವ ನೀರು ಹಾಡುತಿದೆ;
ಎಲೆಯ ಮರೆಯ ಹಕ್ಕಿಯಿಂಪು ದಾರಿಯುದ್ದಕೂ.
ಸಾವಿರಾರು ಹೂವ ಬಣ್ಣ, ಸಂಜೆಯ ಮುಗಿಲಿನೆದೆಯ ಚಿನ್ನ,
ತಾರೆಗಣ್ಣ ಬೆಳಕ ರನ್ನ ದಾರಿಯುದ್ದಕೂ.

ವಸಂತ

ಪರಿಮಳದ ತಂಗಾಳಿ ಹರಿದಾಡಿತು;
ದುಂಬಿಗಳ ಸಂಗೀತ ಮೊದಲಾಯಿತು:
ಬಿರಿದರಳ ಬಣ್ಣಗಳ ಹೊಳೆ ಹರಿಯಿತು;
ಚೈತ್ರ, ವೈಶಾಖ-ವಸಂತ ಋತು.

ಮೃದು ವಸಂತದ ಮುದ್ದು ಬೆರಳು ಮೊಗ್ಗಿನ ಕಣ್ಣ
ತೆರೆದು ಅರಳಾಗಿಸುವ ವೇಳೆಯಲ್ಲಿ
ಎಳಬಿಸಿಲ ಹೊದಿಕೆಯಲಿ ನಗಲು ಚಿಗುರಿದ ತೋಟ
ಬಗೆಬಗೆಯ ಪರಿಮಳದ ಜ್ವಾಲೆಯಲ್ಲಿ,

ತಿಂಗಳೊಂದರ ಹಿಂದೆ ಹಸಿರು ಪತ್ತಲವುಟ್ಟು
ಕಂಗಳಿಗೆ ತಂಪಾಗಿ ಹೊಳೆದ ಮಾವು
ಇಂದೇಕೊ ಕೋಪದಲಿ ಕೆಂಪಿನುಡುಗೆಯನುಟ್ಟು
ವಿರಹಾಗ್ನಿಯಂತೆ ಧಗಧಗಿಸುತಿರಲು,

ಮರದ ತುದಿಯಲ್ಲಿ ಕೋಗಿಲೆ ತಂಗಿ ಹಾಡುತ್ತ
ನಲಿವಿನೊಂದಿಗೆ ನೋವ ಬೆರೆಸುತಿರಲು,
ಹೂ ಮಗುವಿನುಸಿರಂತೆ ಮೆಲುನಡೆಯ ತಂಬೆಲರು
ಹಸಿದ ಬಡವನ ಕಣ್ಣನೊರಸುತಿರಲು,

ಓ ಒಲವೆ, ನಿನ್ನ ವರ್ಷೋದಯದ ಗೀತವನು
ಕೇಳುವೆನು ಮೈಮರೆತು ನೆರಳಿನಲ್ಲಿ ;
ಹೂವ ಬಳಸುವ ದುಂಬಿದನಿಯನನುಕರಿಸುವೆನು
ಕಾಡ ಬಿದಿರಿನ ನನ್ನ ಕೊಳಲಿನಲ್ಲಿ :

ಮೃದು ವಸಂತವೆ, ನೆಲದ ಹೃದಯ ಚಿಮ್ಮಿದ ಒಲವೆ,
ಹೊಸ ವರುಷ ತೆರೆದ ತಳಿರಿನ ಬಾಗಿಲೆ, -
ಕೊರೆವ ಚಳಿಯೂ ಇರದ, ಉರಿವ ಬಿಸಿಲೂ ಇರದ
ಹರುಷವೇ, ನನ್ನೊಲವೆ, ಬಾಳ ಚೆಲುವೆ !

ಗ್ರೀಷ್ಮ

ಸಿರಿವಸಂತದ ಚೆಲುವು ಕಳೆಗುಂದಿತು ;
ಉಸಿಬಿಸಿಲು ನಿಟ್ಟುಸಿರ ಕದ ತೆರೆಯಿತು ;
ಬಿಸಿ ಗಾಳಿ ಬೀದಿಯಲಿ ಸಂಚರಿಸಿತು;
ಜ್ಯೇಷ್ಠ ಆಷಾಢ-ಗ್ರೀಷ್ಮ ಋತು.

ಬೆಸಗೆಯಲ್ಲಿ ನಡುಹಗಲಿನ ಬಿಸಿಯುಸಿರಿಗೆ ಬಳಲಿ
ಗಿಡದಲ್ಲಿಯೆ ಬರಿದಾಗಿದೆ ದಳವಿರದ ಗುಲಾಬಿ ;
ಕೆರೆಯೊಣಗಿದೆ, ಕೆಸರಾಗಿದೆ ; ಕಂಗೆಟ್ಟಿವೆ ಮೀನು ;
ಮಾತಾಡಿದೆ ನೋಡುತ್ತಿದೆ ತುಟಿಯಿಲ್ಲದ ಬಾನು.

ದನಕರುಗಳು ತಲೆಯೆತ್ತಿವೆ ಮೇವಿಗೆ ಎಲ್ಲೆಲ್ಲು ;
ಬರಿಗಾಳಿಗೆ ತಲೆ ಹಾಸಿದೆ ಹಸಿರಿಲ್ಲದ ಹುಲ್ಲು ;
ಗಿಳಿ ಕೋಗಿಲೆ ಹಾಡಿದರೂ ತಲೆದೂಗದ ಬಾಳು ;
ಬಂಡೆಯ ಹಣೆಗೇರುತ್ತಿದೆ ಬಂಡಿಯ ಕೆಂಧೂಳು.

ಬತ್ತಿದ ಹೊಳೆ ; ಅದರಾಚೆಗೆ ತಿರುಗುತ್ತಿದೆ ಗಾಣ ;
ಮೇಲೆತ್ತಿದ ಚಾಟಿಯಲಿದೆ ಮುದಿಯೆತ್ತಿನ ಪ್ರಾಣ ;
ನಡುಬೇಸಗೆ ಹಗಲಾಗಿದೆ ಬಿಸಿಲಿನ ಅಸಿಧಾರೆ ;
ಇರುಳುದ್ದಕು ನೇಯುತ್ತಿದೆ ಬರಿಗನಸಿನ ಸೀರೆ.

ಜನಜೀವನ ಸಾಗುತ್ತಿದೆ ಉರಿಬಿಸಿಲನು ತಾಳಿ;
ವೀಣೆಯ ದನಿಯಾಳದಲೂ ಮದ್ದಳೆಯನು ಕೇಳಿ.
ಕರುಣೆಯ ಮಾತಾಡುವರೇ ಎಲ್ಲರು ಎಲ್ಲೆಲ್ಲು!
ಎಲೆಯುದುರಿದ ಮರವಿದ್ದರೆ ಅದರಡಿಯಲೆ ನಿಲ್ಲು !

ವರ್ಷ

ಬಾನ ಕಣ್ಣಿನ ತುಂಬ ನೀರಾಡಿತು ;
ಮನೆಮನೆಯ ಬಾಗಿಲನು ಮಳೆ ತಟ್ಟಿತು ;
ಉತ್ತ ಮಣ್ಣಿನ ಕನಸು ಕೆನೆಗಟ್ಟಿತು;
ಶ್ರಾವಣ ಭಾದ್ರಪದ-ವರ್ಷ ಋತು

ಮುಗಿಲು ಕಟ್ಟಿತು, ತೊಡೆಯ ತಟ್ಟಿತು,
ಗುಡುಗಿನೊಂದಿಗೆ ಮಿಂಚಿತು.
ಪುಟ್ಟ ಕಂದನ ಕೆನ್ನೆಯದುರಿತು,
ತಾಯ ಸೆರಗನು ಹಿಡಿಯಿತು.

ದೂರಗಿರಿಗಳ ತಲೆಯ ತುಳಿಯುತ ಓಡಿಬರುತಿಹ ಮುಗಿಲಿಗೆ
ಘೋರವಾದ್ಯದ ತಂತಿ ಮಿಡಿಯುವ ಹೃದಯದಾಳದ ಬಯಕೆಗೆ
ಮುಗಿಲ ಹಿಂಡಿನ ಹರಿತ ಕೊಂಬಿನ ಜೋರು ಕಾಳಗ ನಡೆಯಿತು ;
ಭಾರವಾಗಿಹ ಮುಗಿಲು ಕೆಚ್ಚಲು ಮನೆಯ ಚಾವಣಿಗಿಳಿಯಿತು.

ಹನಿಯ ತುಂಬಿದ ಗಾಳಿ ಬೀಸಿತು, ಕಿವಿಗೆ ರೊಯ್ಯನೆ ನುಗ್ಗಿತು.
ಬೆಳದ ತೆಂಗಿನ ಜಂಬವಡಗಿತು ; ತೋಟ ಭೂಮಿಗೆ ಬಗ್ಗಿತು.
ಧೂಳನೆಬ್ಬಿಸಿ ಗಾಳಿ ಬೀಸಿತು, ದಿಕ್ಕುದಿಕ್ಕಿಗೆ ಅಲೆಯಿತು.
ಧಾರೆಧಾರೆಗಳಾಗಿ ಸೋರಿದ ನೀರು ನೆಲವನು ತೊಳೆಯಿತು.

ತೊಳೆದ ಕನ್ನಡಿಯಂಥ ಬೀದಿಯ
ದೀಪ ತಣ್ಣಗೆ ಹೊಳೆಯಿತು ;
ಲೋಕ ಹುಟ್ಟಿತು ಮೊದಲ ಬೆಳಗಿನ
ಮೊದಲ ಕಳೆಯನು ನೆನೆಯಿತು.

ಶರತ್

ರಾತ್ರಿ ಕನ್ನಡಿಯಂತೆ ಕೋರೈಸಿತು ;
ನಕ್ಷತ್ರಗಳ ಕಣ್ಣು ಥಳಥಳಿಸಿತು ;
ಚಂದಿರನ ತುಂಬುನಗೆ ತಂಪೆರೆಯಿತು ;
ಆಶ್ವಯುಜ ಕಾರ್ತಿಕ-ಶರದೃತು.

ಶರತ್ ಕಾಲವೇ ಋತುಗಳ ರಾಣಿ, ತಾರಾಮಣಿವೇಣಿ,
ಇಂದ್ರನೀಲ ನೀಲಾಂಬರಧಾರಿಣಿ, ಕವಿಗಣದಭಿಮಾನಿ,
ಪುಷ್ಪರಹಿತ ಉದ್ಯಾನದ ಧ್ಯಾನದ ಹೃದಯದ ಅಧಿದೇವಿ,
ಹಸಿರೆಲೆಯಂಚಿಗೆ ಅರಿಸಿನ ಚೆಲ್ಲಿದ ಮಂಗಳ ವನದೇವಿ.

ಮೇರೆಯಿರದ ಮುಗಿಲಿಲ್ಲದ ನೀಲದ ತಾರಾಧೂಳಿಯಲಿ
ತಿಂಗಳ ಬೆಳಕಿನ ತಂಪನು ಹರಡುವ ಕುಡಿನೋಟವ ಬೀರಿ
ಧೂಳಿಲ್ಲದ ಹೂವಿಲ್ಲದ ಬಯಲಿನ ಶಾಂತಿ ಸೆರಗಿನಲಿ
ಹರುಷದಿಂದ ತುಳುಕಾಡುವ ಕಂಗಳ ಮೌನದ ಬೆಡಗಿನಲಿ

'ಕಣ್ಣ ತೊಳೆವೆ, ಕಾಡಿಗೆಯನು ಹಚ್ಚುವೆ ಮಂಕು ಹರಿಯಲೆ'ಂದು,
'ಚೆಲುವ ಬಾಳ ಕಾಣಿಸುವೆನು ಈಗಲೆ ಒಳಗೆ ಬನ್ನಿರೆ'ಂದು,
ಹಾದಿ ಬೀದಿಯಲಿ ಬಂದಳು ಹಾಡುತ ಶಾರದೆ, ಬಂಗಾರಿ.
ತೂಗುವ ಹಳದಿಯ ತೆನೆಗಳ ಮಿಡಿಯುತ ಋತುಗಳ ಸಿಂಗಾರಿ.

ಹೇಮಂತ, ಶಶಿರ

ಮಾರ್ಗಶಿರ ಪುಷ್ಪ - ಹೇಮಂತ ಋತು ;
ಹಿಮ ಸುರಿವ ಹಾದಿಯಲಿ ಬೆಳಗಾಯಿತು.
ಮಾಘ ಫಾಲ್ಗುಣ - ಶಿಶಿರ ಋತು;
ಕಂಬಳಿಯ ಹೊದ್ದರೂ ಮೈ ನಡುಗಿತು.

ಹೇಮಂತದ ಚಳಿಗಾಳಿಗಳೇ,
ಜೀವಕೆ ನಡುಕವ ತಾರದಿರಿ.
ಹಗೆಯೊಲು ಕೆಂಗಣ್ ತೆರೆಯದಿರಿ.
ಸಮರೋತ್ಸಾಹವ ತಳೆಯದಿರಿ.

ಹೇಮಂತದ ಚಳಿಗಾಳಿಗಳೇ,
ಹರಿತದ ಬಾಣವ ಹೂಡದಿರಿ.
ಎಲ್ಲವ ಗೆಲ್ಲುವ ದುಡುಕಿನಲಿ
ಸಾವಿನ ಗೀತವ ಹಾಡದಿರಿ.

ಮಾಗಿಯ ಮಂಜಿನ ಮುಸುಕುಗಳೇ,
ಕಣ್ಣಿಗೆ ಮೋಸವ ಮಾಡವಿರಿ.
ತರುಲತೆಗಳ ಜೀವಾಳವನೆ
ಹಿಡಿದಲ್ಲಾಡಿಸಿ ನೋಡುವಿರಿ.

ಶಿಶಿರದ ನಿರ್ಜಲ ನೋಟಗಳು
ಕಣ್ಣಿಗೆ ಅಯ್ಯೋ ಎನಿಸುವುವು.
ಕೊರೆಯುವ ಚಳಿಯಲಿ ನಿಂತವನು
ಎಡ ಬಲ ನೋಡಲು ಹೆದರುವನು.

ಚಳಿಗಾಲದ ಬಿಳಿ ಬಾನಿನಲಿ
ಚಂದಿರ ಮಂಕಾಗಲೆಯುವನು.
ಬೆಚ್ಚನೆ ಮೂಲೆಯ ಹಿಡಿದವನು
ಮುಗಿಯದ ಕತೆಯನು ಹೇಳುವನು.

ಹಿನ್ನುಡಿ

ಮೃದು ವಸಂತ ಮುಗಿಯಿತೆನಲು
ಗ್ರೀಷ್ಮ ಬಂದೆನೆನುವುದು.
ಗ್ರೀಷ್ಮದುರಿಯು ನಂದಿತೆನಲು
ವರ್ಷ ನುಗ್ಗಿ ಬರುವುದು.

ಮಳೆಯ ಹಿಂದೆ ಶರತ್ಕಾಲ
ಬಿಳಿಯ ಹೆಜ್ಜೆಯಿಡುವುದು.
ಹೇಮಂತದ ಹಿಂದೆ ಶಿಶಿರ;
ಕಾಲ ವೀಣೆ ಮಿಡಿವುದು.
         - ಕೆ ಎಸ್ ನರಸಿಂಹಸ್ವಾಮಿ
('ತೆರೆದ ಬಾಗಿಲು' ಕವನ ಸಂಕಲನದಿಂದ)

ಚಂದ್ರೋದಯ

ಚಿತ್ರ ಕೃಪೆ: cptprocrastination.tumblr.com

ಅದೊ ನೋಡು! ಓ ಅಲ್ಲಿ, ಪೂರ್ವದ ದಿಗಂತದಲಿ
ಹೊನ್ನಿನುರಿ ಹೊತ್ತುತಿದೆ ಮುಗಿಲಿನಲ್ಲಿ!
ಕಡೆದ ಕೆಂಗೆಂಡವೆಂಬಂತೆ ರಾರಾಜಿಪನು
ಚಂದ್ರನಾಕಾಶದ ಲಲಾಟದಲ್ಲಿ.
ಏನು ಮೌನವಿದೇನು ಶಾಂತಿಯಿದು! ಬಾನಿನಲಿ,
ಮುಗಿಲಿನಲಿ, ನೆಲದಲ್ಲಿ, ಕೆರೆಯ ಮೇಲೆ
ಹಾಲಿನಲಿ ಚಿನ್ನವನೆ ತೇದು ಲೇಪಿಸಿದಂತೆ
ಶೋಭಿಸಿದೆ ಬೆಳ್ದಿಂಗಳಮೃತ ಲೀಲೆ!
ಶಿವಶಿವಾ! ಮನುಜಕೃತ ಕಲೆಯಾವುದಿದಕೆ ಸಾಟಿ?
ರಾಜಧಾನಿಯು ತನ್ನ ಕೃತಕತೆಗೆ ತಾನೆ ನಾಚಿ
ಮೊಗಬಾಡುತಿದೆ! ಮಿಂಚು ಸೊಡರುಗಳು ಕೋಟಿ ಕೋಟಿ
ಮಿಣುಮಿಣುಕಲೇನಂತೆ? ರಾಕಾ ಶಶಾಂಕ ರೋಚಿ
ಎಲ್ಲವನು ಮುಳುಗಿಸಿದೆ! ಏನಿದು, ಅಜಾತವಾದಿ?
ಜಾಗ್ರತವೊ? ಸ್ವಪ್ನವೊ? ಸುಷುಪ್ತಿಯೋ? – ಇದು ಸಮಾಧಿ!

                              - ಕುವೆಂಪು

ರಾಷ್ಟ್ರೀಯ ವಿಷಮತೆ

ಉದುರುತಿವೆ ಹಣ್ಣೆಲೆಗಳೊಂದಾದ ಮೇಲೊಂದು;
ಬಂದಂತೆ ತೋರುತಿದೆ ನಮ್ಮ ನಾಡಿಗೆ ಮಾಗಿ.
ಹೆಪ್ಪುಗಡುತಿಹುದೆದೆಯ ಕೆನ್ನೀರು ಚಳಿ ತಾಗಿ;
ಸುಕ್ಕು ತೋರುತಿದೆ ಮುಖದಲ್ಲಿ. ಕುಳಿರಲಿ ಮಿಂದು
ಯುವಕ ತರು ವೃಂದವೂ ಮೃತವಾದವೊಲು ನಿಂದು
ಆಸೆಗೆ ನಿರಾಸೆಯನೆ ನೀಡುತಿದೆ. ಚಳಿ ಹೋಗಿ,
ಬಿಸಿಯ ಬಿಸಿಲೈತಂದು, ಮುದದಿ ಕೋಗಿಲೆ ಕೂಗಿ,
ಮೃದುಲ ಪಲ್ಲವ ನವ್ಯ ದಿವ್ಯಚೇತನ ಸಿಂಧು
ಮಧು ಮಹಾತ್ಮನು ತಾನು ಎಂದಿಗೈತಂದೆಮಗೆ
ಮತ್ತೆ ಮೊದಲಿನ ನೆಚ್ಚು ಕೆಚ್ಚುಗಳನೆದೆಗಿತ್ತು
ಸಲಹುವನೊ ಎಂದಳುಕಿ, ಬೇಸತ್ತು ತಮತಮಗೆ
ಉತ್ಸಾಹ ಹೀನರಾಗದಿರಿ: ಏಕೆನೆ, ಬಿತ್ತು
ಲಯವಾಗುವುದೆ ಮೊಳಕೆಗಾಯುಸ್ಸು. ಮುನ್ನುಗ್ಗಿ,
ತಳಿರುಗಳೆ, ಕಾಯುತಿದೆ ನಿಮಗಾಗಿ ಹೊಸಸುಗ್ಗಿ!

                                   -  ಕುವೆಂಪು

ಷೋಡಶಿ


ಷೋಡಶ ವಸಂತಗಳು ಸುಯ್ದಾನವಂ ಮಾಡಿ
ಕರುವಿಟ್ಟ ಲಾವಣ್ಯ ಲಕ್ಷ್ಮಿಯೆನೆ, ಸುಂದರಿಯೆ,
ಕಂಗೊಳಿಪೆ. ಜೀವನದ ಮಧುಕುಂಜಮಂಜರಿಯೆ,
ಕೂರ್ಮೆತೆಂಗಾಳಿಯಲಿ ನಲಿವ ನಿನ್ನನು ನೋಡಿ
ಹೃದಯದ ನಿರಾಕಾರ ಸ್ವಪ್ನಗಳು ಮೈಮೂಡಿ
ನುಡಿದೋರುತಿವೆ. – ಅವುಗಳರ್ಥವೇನೆಂದರಿಯೆ.
ಉದಯಗಿರಿ ಫಣೆಯಲ್ಲಿ ಪೂರ್ಣಚಂದ್ರನು ಮೆರೆಯೆ
ಯಾಮಿನಿಯು ಬಣ್ಣಬಣ್ಣದ ಮುಗಿಲ್ಗಳನು ಸೂಡಿ
ಕರೆವಂತೆ ಮೋಹಿಸಿಹೆ, ಓ ನನ್ನ ಸವಿಗಣಸೆ!
ನನ್ನಸಲ್ಲ! – ಹೇ ಸ್ವಪ್ನ ಸುಂದರಿಯೆ, ನೀನಂದು
ಮರ್ತ್ಯವನ್ನುಳಿದು ಹಾ ಸ್ವರ್ಗವಾದವಳಿಂದು
ಕನಸಿನಲಿ ಚುಂಬಿಸಿಹೆ! – ಅಯ್ಯೋ, ಕನಸು ಕನಸೆ? -
ಆದರಿದೊ, ಹಾಡುತಿದೆ ದಿನಮುಖದ ಕಾಜಾಣ:
ಬೆಂದೆದೆಗೆ ವಿಸ್ಮೃತಿಯ ಗಾಯನ ಸುರಾಪಾನ!

                            - ಕುವೆಂಪು
             ('ಕೃತ್ತಿಕೆ' ಕವನ ಸಂಕಲನದಿಂದ)

ಧರ್ಮ


ಓ ಮನೋಹರ ಭಯಂಕರ ವಿಧಾಯಕ ಮೂರ್ತಿ,
ಪುರುಷೋತ್ತಮನ ಸನಾತನ ನಿತ್ಯ ಸಹಯೋಗಿ,
ಹೇ ವಿಧಾತನ ವಾಣಿಯೇ, ಭಕ್ತಿಯಲಿ ಬಾಗಿ
ನಿನಗೆರಗುವೆನು. ಹೊರಗೆ ಪ್ರಕೃತಿನಿಯಮಸ್ಫೂರ್ತಿ
ನೀನು; ನನ್ನೆದೆಯ ಮಣೆಯಲಿ ನೀತಿಯಂದದಲಿ
ಮಂಡಿಸಿಹೆ. ಶಶಿ ಸೂರ್ಯ ತಾರೆಗಳು ನಿನಗಳ್ಕಿ
ತಪ್ಪದೆಯೆ ನಡೆಯುವರು ಪಥನಿಷ್ಠೆಯಲಿ; ಸಿಲ್ಕಿ
ನಿನ್ನ ರುದ್ರಾಧಿಕಾರದ ವಜ್ರಬಂಧದಲಿ
ಬೆಂಕಿಯುರಿಯುತಲಿಹುದು; ಬೀಸುತಿರುವುದು ಗಾಳಿ;
ಮೋಡ ಮಳೆ ಸಿಡಿಲು ಮಿಂಚುಗಳೆಲ್ಲವೂ ಕರ್ಮ
ಚಕ್ರದಲಿ ಸುತ್ತುತಿವೆ. ನಿನ್ನ ವಾಣಿಯ ಕೇಳಿ
ಸೆಡೆತುಕೊಂಡಿದೆ ನರನ ಹೀನತೆಯು. ಓ ಧರ್ಮ,
ನಿನ್ನನೊಲಿವುದೆ ಭಕ್ತಿ; ನೀನಾಗುವುದೆ ಶಕ್ತಿ;
ನಿನ್ನ ಕೈಂಕರ್ಯದಿಂ ನಿನ್ನ ಗೆಲುವುದೆ ಮುಕ್ತಿ!

                             -  ಕುವೆಂಪು