ಮೆರವಣಿಗೆ

http://chestofbooks.com/travel/india/John-Stoddard-Lectures/images/The-Procession-Of-The-Sacred-Tooth.png


ಹೊಸಿಲ ಹಸೆಯನು ದಾಟಿ, ಗೆಜ್ಜೆಗಳ ಕುಣಿಸಿ
ಒಳಗೆ ಬಂದಳು ನಾಲ್ಕು ತುಂಬಿರದ ಹುಡುಗಿ;
'ಮಾವ ಮೇಜಿನ ಮೇಲೆ ಇರುವುದೇನೆಂದು 
ಓರೆಗಣ್ಣಿನಲವಳು ನನ್ನ ಕೇಳಿದಳು.

"ಅದೊಂದು ಹಳೆಯ ಕಥೆ ; ಹೆಸರು ಮೆರವಣಿಗೆ.
ಓದುವೆನು ಕೇಳೆಂದು ಪುಸ್ತಕವನು ತೆರೆದೆ :
"ಹಸಿರು ದೀಪದ ಒಂಟೆ ಕಾಣಿಸಿತು ಮೊದಲು,
ಬೀದಿಯುದ್ದಕು ದೀಪಮಾಲೆಗಳು ಹೊಳೆದು.

ನೌಪತ್ತು ಕೇಳಿಸಿತು, ಗುಡುಗಿತು ನಗಾರಿ
ಕಿಕ್ಕಿರಿದ ಇಕ್ಕೆಲದ ಚಪ್ಪಾಳೆಗಳಲಿ;
ಬಳಿಕ ಆನೆಯ ಬಂಡಿ, ಕುದುರೆ, ಕಾಲಾಳು,
ಹಾಡುತ್ತ ಮುನ್ನಡೆದ ಗಾಯಕರ ಸಾಲು.

ಬಂತು ಓಲಗದೊಡನೆ ಬಳಕುತ್ತ ಮೇನ ;
ತಂಗಾಳಿಯಲಿ ತೇಲಿಬಂತು ತಿಲ್ಲಾನ."
'ಮುಂದೇನು ಬಂತೆಂದು ಕೇಳಿದಳು ಚೆಲುವೆ ;
"ಒಂದೆರಡು ಮಳೆಯ ಹನಿ ಬಿತ್ತೆಂದು ನುಡಿದೆ.

"ಸೊಂಡಿಲಾಡಿಸಿ ಬಂತು ಸಿಂಗರಿಸಿದಾನೆ ;
ಮಹಡಿಯಂಚಿಗೆ ಸರಿದು ನೋಡಿದೆನು ನಾನೆ.
ಚಿನ್ನದಂಬಾರಿಯಲಿ ದೊರೆ ಬಂದ, ಬಂದ!-
ಉಕ್ಕಿದುದು ಎಲ್ಲರೆದೆಯೊಳಗೆ ಆನಂದ.

ಇಲ್ಲಿಗಿದು ಮುಗಿತೆಂದವನೆ ವಿರಮಿಸಿದೆ ;
ಅರ್ಥವಾಯಿತೆ ಇವಳಿಗೆಂದು ಶಂಕಿಸಿದೆ.
ಒಂಟೆ, ಆನೆ, ಕುದುರೆ - ಇವಳಿಗೂ ಗೊತ್ತು;
ನಮ್ಮೂರಿಗೊಮ್ಮೆ ಸರ್ಕಸ್ಸು ಬಂದಿತ್ತು.

ಇವಳಿಗೋಲಗ ಕೂಡ ಅಪರಿಚಿತವಲ್ಲ ;
ಅಕ್ಕನ ಮದುವೆಗಿವಳು ಹೋಗಿದ್ದಳಲ್ಲ!
ಗೊತ್ತಿರದ ಪದಗಳಿವು : ಗಾಯಕ, ನಗಾರಿ,
ನೌಪತ್ತು, ಮೇನ, ತಿಲ್ಲಾನ, ಅಂಬಾರಿ.

ಪದಗಳ ಬಿಡಿಸಿ ಅರ್ಥವನು ವಿವರಿಸಿದೆ ;
ಸ್ಪಷ್ಟವಾಗಿರಬಹುದು ಎಂದು ಭಾವಿಸಿದೆ ;
ಇವಳ ಹಿಂದೆಯೆ ನಡೆದೆ ಬಾಗಿಲಿನವರೆಗೆ.-
'ದೊರೆ' ಎಂದರೇನೆಂದು ಕೇಳಿದಳು ಕಡೆಗೆ.

                  - ಕೆ ಎಸ್ ನರಸಿಂಹಸ್ವಾಮಿ
         ('ನವ ಪಲ್ಲವ' ಕವನ ಸಂಕಲನದಿಂದ)  
 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಉನ್ಮಾದದ ನಶೆ ನಮ್ಮೊಂದಿಗಿಷ್ಟು ಹಂಚಿಕೊಳ್ರಿ....