ಋತು ವೈಭವ

          
     
ಮುನ್ನುಡಿ

ಕಳೆದ ಕಾಲ, ಇರುಳ ಕಾಲ, ಬರುವ ಕಾಲ, ಕಾಲ:
ವರುಷಕಾರು ಋತುಗಳೆಂದು ನುಡಿಯುತಿಹನು ಬಾಲ.
ಒಂದು ಋತುವಿಗೊಂದು ರೂಪ, ರಾಗ, ಭಾವ , ತಾಳ ;
ಒಂದೆ ಹೊಳೆಯ ನೀರಿನಲ್ಲಿ ಬೇರೆ ಬೇರೆ ಆಳ.

ಕಾಲಚಕ್ರ ಉರುಳುತಿದೆ, ಗಾಳಿ ಮೊರೆದು ಹೊರಳುತಿದೆ ;
ಗೆಜ್ಜೆಸದ್ದು ಹೆಜ್ಜೆನೆರಳು ದಾರಿಯುದ್ದಕೂ.
ಅರ್ಧ ಸುಖ, ಅರ್ಧ ದುಖಃ, ಬಾನ ಕಡೆಗೆ ತೆರೆದೆ ಮುಖ ;
ತಾಯ ಸೆರಗ ಹಿಡಿದ ಕಂದ ದಾರಿಯುದ್ದಕೂ.

ಬಾಳ ತೊಡೆಕು ಬೆಳೆಯುತಿದೆ, ಗೆಲುವಿನಲ್ಲಿ ಹರುಷವಿದೆ :
ಚಕ್ರ ತಿರುಗಿದಂತೆ ವರುಷ ದಾರಿಯುದ್ದಕೂ.
ಋತುಗಳಾರು ಪುಟಗಳಾರು ವರುಷವೆಂಬ ಕವಿತೆಗೆನೆ
ಬೇರೆ ರಾಗ ಬೇರೆ ತಾಳ ದಾರಿಯುದ್ದಕೂ.

ಬೆಟ್ಟ ನಿಂತು ನೋಡುತಿದೆ, ಹರಿವ ನೀರು ಹಾಡುತಿದೆ;
ಎಲೆಯ ಮರೆಯ ಹಕ್ಕಿಯಿಂಪು ದಾರಿಯುದ್ದಕೂ.
ಸಾವಿರಾರು ಹೂವ ಬಣ್ಣ, ಸಂಜೆಯ ಮುಗಿಲಿನೆದೆಯ ಚಿನ್ನ,
ತಾರೆಗಣ್ಣ ಬೆಳಕ ರನ್ನ ದಾರಿಯುದ್ದಕೂ.

ವಸಂತ

ಪರಿಮಳದ ತಂಗಾಳಿ ಹರಿದಾಡಿತು;
ದುಂಬಿಗಳ ಸಂಗೀತ ಮೊದಲಾಯಿತು:
ಬಿರಿದರಳ ಬಣ್ಣಗಳ ಹೊಳೆ ಹರಿಯಿತು;
ಚೈತ್ರ, ವೈಶಾಖ-ವಸಂತ ಋತು.

ಮೃದು ವಸಂತದ ಮುದ್ದು ಬೆರಳು ಮೊಗ್ಗಿನ ಕಣ್ಣ
ತೆರೆದು ಅರಳಾಗಿಸುವ ವೇಳೆಯಲ್ಲಿ
ಎಳಬಿಸಿಲ ಹೊದಿಕೆಯಲಿ ನಗಲು ಚಿಗುರಿದ ತೋಟ
ಬಗೆಬಗೆಯ ಪರಿಮಳದ ಜ್ವಾಲೆಯಲ್ಲಿ,

ತಿಂಗಳೊಂದರ ಹಿಂದೆ ಹಸಿರು ಪತ್ತಲವುಟ್ಟು
ಕಂಗಳಿಗೆ ತಂಪಾಗಿ ಹೊಳೆದ ಮಾವು
ಇಂದೇಕೊ ಕೋಪದಲಿ ಕೆಂಪಿನುಡುಗೆಯನುಟ್ಟು
ವಿರಹಾಗ್ನಿಯಂತೆ ಧಗಧಗಿಸುತಿರಲು,

ಮರದ ತುದಿಯಲ್ಲಿ ಕೋಗಿಲೆ ತಂಗಿ ಹಾಡುತ್ತ
ನಲಿವಿನೊಂದಿಗೆ ನೋವ ಬೆರೆಸುತಿರಲು,
ಹೂ ಮಗುವಿನುಸಿರಂತೆ ಮೆಲುನಡೆಯ ತಂಬೆಲರು
ಹಸಿದ ಬಡವನ ಕಣ್ಣನೊರಸುತಿರಲು,

ಓ ಒಲವೆ, ನಿನ್ನ ವರ್ಷೋದಯದ ಗೀತವನು
ಕೇಳುವೆನು ಮೈಮರೆತು ನೆರಳಿನಲ್ಲಿ ;
ಹೂವ ಬಳಸುವ ದುಂಬಿದನಿಯನನುಕರಿಸುವೆನು
ಕಾಡ ಬಿದಿರಿನ ನನ್ನ ಕೊಳಲಿನಲ್ಲಿ :

ಮೃದು ವಸಂತವೆ, ನೆಲದ ಹೃದಯ ಚಿಮ್ಮಿದ ಒಲವೆ,
ಹೊಸ ವರುಷ ತೆರೆದ ತಳಿರಿನ ಬಾಗಿಲೆ, -
ಕೊರೆವ ಚಳಿಯೂ ಇರದ, ಉರಿವ ಬಿಸಿಲೂ ಇರದ
ಹರುಷವೇ, ನನ್ನೊಲವೆ, ಬಾಳ ಚೆಲುವೆ !

ಗ್ರೀಷ್ಮ

ಸಿರಿವಸಂತದ ಚೆಲುವು ಕಳೆಗುಂದಿತು ;
ಉಸಿಬಿಸಿಲು ನಿಟ್ಟುಸಿರ ಕದ ತೆರೆಯಿತು ;
ಬಿಸಿ ಗಾಳಿ ಬೀದಿಯಲಿ ಸಂಚರಿಸಿತು;
ಜ್ಯೇಷ್ಠ ಆಷಾಢ-ಗ್ರೀಷ್ಮ ಋತು.

ಬೆಸಗೆಯಲ್ಲಿ ನಡುಹಗಲಿನ ಬಿಸಿಯುಸಿರಿಗೆ ಬಳಲಿ
ಗಿಡದಲ್ಲಿಯೆ ಬರಿದಾಗಿದೆ ದಳವಿರದ ಗುಲಾಬಿ ;
ಕೆರೆಯೊಣಗಿದೆ, ಕೆಸರಾಗಿದೆ ; ಕಂಗೆಟ್ಟಿವೆ ಮೀನು ;
ಮಾತಾಡಿದೆ ನೋಡುತ್ತಿದೆ ತುಟಿಯಿಲ್ಲದ ಬಾನು.

ದನಕರುಗಳು ತಲೆಯೆತ್ತಿವೆ ಮೇವಿಗೆ ಎಲ್ಲೆಲ್ಲು ;
ಬರಿಗಾಳಿಗೆ ತಲೆ ಹಾಸಿದೆ ಹಸಿರಿಲ್ಲದ ಹುಲ್ಲು ;
ಗಿಳಿ ಕೋಗಿಲೆ ಹಾಡಿದರೂ ತಲೆದೂಗದ ಬಾಳು ;
ಬಂಡೆಯ ಹಣೆಗೇರುತ್ತಿದೆ ಬಂಡಿಯ ಕೆಂಧೂಳು.

ಬತ್ತಿದ ಹೊಳೆ ; ಅದರಾಚೆಗೆ ತಿರುಗುತ್ತಿದೆ ಗಾಣ ;
ಮೇಲೆತ್ತಿದ ಚಾಟಿಯಲಿದೆ ಮುದಿಯೆತ್ತಿನ ಪ್ರಾಣ ;
ನಡುಬೇಸಗೆ ಹಗಲಾಗಿದೆ ಬಿಸಿಲಿನ ಅಸಿಧಾರೆ ;
ಇರುಳುದ್ದಕು ನೇಯುತ್ತಿದೆ ಬರಿಗನಸಿನ ಸೀರೆ.

ಜನಜೀವನ ಸಾಗುತ್ತಿದೆ ಉರಿಬಿಸಿಲನು ತಾಳಿ;
ವೀಣೆಯ ದನಿಯಾಳದಲೂ ಮದ್ದಳೆಯನು ಕೇಳಿ.
ಕರುಣೆಯ ಮಾತಾಡುವರೇ ಎಲ್ಲರು ಎಲ್ಲೆಲ್ಲು!
ಎಲೆಯುದುರಿದ ಮರವಿದ್ದರೆ ಅದರಡಿಯಲೆ ನಿಲ್ಲು !

ವರ್ಷ

ಬಾನ ಕಣ್ಣಿನ ತುಂಬ ನೀರಾಡಿತು ;
ಮನೆಮನೆಯ ಬಾಗಿಲನು ಮಳೆ ತಟ್ಟಿತು ;
ಉತ್ತ ಮಣ್ಣಿನ ಕನಸು ಕೆನೆಗಟ್ಟಿತು;
ಶ್ರಾವಣ ಭಾದ್ರಪದ-ವರ್ಷ ಋತು

ಮುಗಿಲು ಕಟ್ಟಿತು, ತೊಡೆಯ ತಟ್ಟಿತು,
ಗುಡುಗಿನೊಂದಿಗೆ ಮಿಂಚಿತು.
ಪುಟ್ಟ ಕಂದನ ಕೆನ್ನೆಯದುರಿತು,
ತಾಯ ಸೆರಗನು ಹಿಡಿಯಿತು.

ದೂರಗಿರಿಗಳ ತಲೆಯ ತುಳಿಯುತ ಓಡಿಬರುತಿಹ ಮುಗಿಲಿಗೆ
ಘೋರವಾದ್ಯದ ತಂತಿ ಮಿಡಿಯುವ ಹೃದಯದಾಳದ ಬಯಕೆಗೆ
ಮುಗಿಲ ಹಿಂಡಿನ ಹರಿತ ಕೊಂಬಿನ ಜೋರು ಕಾಳಗ ನಡೆಯಿತು ;
ಭಾರವಾಗಿಹ ಮುಗಿಲು ಕೆಚ್ಚಲು ಮನೆಯ ಚಾವಣಿಗಿಳಿಯಿತು.

ಹನಿಯ ತುಂಬಿದ ಗಾಳಿ ಬೀಸಿತು, ಕಿವಿಗೆ ರೊಯ್ಯನೆ ನುಗ್ಗಿತು.
ಬೆಳದ ತೆಂಗಿನ ಜಂಬವಡಗಿತು ; ತೋಟ ಭೂಮಿಗೆ ಬಗ್ಗಿತು.
ಧೂಳನೆಬ್ಬಿಸಿ ಗಾಳಿ ಬೀಸಿತು, ದಿಕ್ಕುದಿಕ್ಕಿಗೆ ಅಲೆಯಿತು.
ಧಾರೆಧಾರೆಗಳಾಗಿ ಸೋರಿದ ನೀರು ನೆಲವನು ತೊಳೆಯಿತು.

ತೊಳೆದ ಕನ್ನಡಿಯಂಥ ಬೀದಿಯ
ದೀಪ ತಣ್ಣಗೆ ಹೊಳೆಯಿತು ;
ಲೋಕ ಹುಟ್ಟಿತು ಮೊದಲ ಬೆಳಗಿನ
ಮೊದಲ ಕಳೆಯನು ನೆನೆಯಿತು.

ಶರತ್

ರಾತ್ರಿ ಕನ್ನಡಿಯಂತೆ ಕೋರೈಸಿತು ;
ನಕ್ಷತ್ರಗಳ ಕಣ್ಣು ಥಳಥಳಿಸಿತು ;
ಚಂದಿರನ ತುಂಬುನಗೆ ತಂಪೆರೆಯಿತು ;
ಆಶ್ವಯುಜ ಕಾರ್ತಿಕ-ಶರದೃತು.

ಶರತ್ ಕಾಲವೇ ಋತುಗಳ ರಾಣಿ, ತಾರಾಮಣಿವೇಣಿ,
ಇಂದ್ರನೀಲ ನೀಲಾಂಬರಧಾರಿಣಿ, ಕವಿಗಣದಭಿಮಾನಿ,
ಪುಷ್ಪರಹಿತ ಉದ್ಯಾನದ ಧ್ಯಾನದ ಹೃದಯದ ಅಧಿದೇವಿ,
ಹಸಿರೆಲೆಯಂಚಿಗೆ ಅರಿಸಿನ ಚೆಲ್ಲಿದ ಮಂಗಳ ವನದೇವಿ.

ಮೇರೆಯಿರದ ಮುಗಿಲಿಲ್ಲದ ನೀಲದ ತಾರಾಧೂಳಿಯಲಿ
ತಿಂಗಳ ಬೆಳಕಿನ ತಂಪನು ಹರಡುವ ಕುಡಿನೋಟವ ಬೀರಿ
ಧೂಳಿಲ್ಲದ ಹೂವಿಲ್ಲದ ಬಯಲಿನ ಶಾಂತಿ ಸೆರಗಿನಲಿ
ಹರುಷದಿಂದ ತುಳುಕಾಡುವ ಕಂಗಳ ಮೌನದ ಬೆಡಗಿನಲಿ

'ಕಣ್ಣ ತೊಳೆವೆ, ಕಾಡಿಗೆಯನು ಹಚ್ಚುವೆ ಮಂಕು ಹರಿಯಲೆ'ಂದು,
'ಚೆಲುವ ಬಾಳ ಕಾಣಿಸುವೆನು ಈಗಲೆ ಒಳಗೆ ಬನ್ನಿರೆ'ಂದು,
ಹಾದಿ ಬೀದಿಯಲಿ ಬಂದಳು ಹಾಡುತ ಶಾರದೆ, ಬಂಗಾರಿ.
ತೂಗುವ ಹಳದಿಯ ತೆನೆಗಳ ಮಿಡಿಯುತ ಋತುಗಳ ಸಿಂಗಾರಿ.

ಹೇಮಂತ, ಶಶಿರ

ಮಾರ್ಗಶಿರ ಪುಷ್ಪ - ಹೇಮಂತ ಋತು ;
ಹಿಮ ಸುರಿವ ಹಾದಿಯಲಿ ಬೆಳಗಾಯಿತು.
ಮಾಘ ಫಾಲ್ಗುಣ - ಶಿಶಿರ ಋತು;
ಕಂಬಳಿಯ ಹೊದ್ದರೂ ಮೈ ನಡುಗಿತು.

ಹೇಮಂತದ ಚಳಿಗಾಳಿಗಳೇ,
ಜೀವಕೆ ನಡುಕವ ತಾರದಿರಿ.
ಹಗೆಯೊಲು ಕೆಂಗಣ್ ತೆರೆಯದಿರಿ.
ಸಮರೋತ್ಸಾಹವ ತಳೆಯದಿರಿ.

ಹೇಮಂತದ ಚಳಿಗಾಳಿಗಳೇ,
ಹರಿತದ ಬಾಣವ ಹೂಡದಿರಿ.
ಎಲ್ಲವ ಗೆಲ್ಲುವ ದುಡುಕಿನಲಿ
ಸಾವಿನ ಗೀತವ ಹಾಡದಿರಿ.

ಮಾಗಿಯ ಮಂಜಿನ ಮುಸುಕುಗಳೇ,
ಕಣ್ಣಿಗೆ ಮೋಸವ ಮಾಡವಿರಿ.
ತರುಲತೆಗಳ ಜೀವಾಳವನೆ
ಹಿಡಿದಲ್ಲಾಡಿಸಿ ನೋಡುವಿರಿ.

ಶಿಶಿರದ ನಿರ್ಜಲ ನೋಟಗಳು
ಕಣ್ಣಿಗೆ ಅಯ್ಯೋ ಎನಿಸುವುವು.
ಕೊರೆಯುವ ಚಳಿಯಲಿ ನಿಂತವನು
ಎಡ ಬಲ ನೋಡಲು ಹೆದರುವನು.

ಚಳಿಗಾಲದ ಬಿಳಿ ಬಾನಿನಲಿ
ಚಂದಿರ ಮಂಕಾಗಲೆಯುವನು.
ಬೆಚ್ಚನೆ ಮೂಲೆಯ ಹಿಡಿದವನು
ಮುಗಿಯದ ಕತೆಯನು ಹೇಳುವನು.

ಹಿನ್ನುಡಿ

ಮೃದು ವಸಂತ ಮುಗಿಯಿತೆನಲು
ಗ್ರೀಷ್ಮ ಬಂದೆನೆನುವುದು.
ಗ್ರೀಷ್ಮದುರಿಯು ನಂದಿತೆನಲು
ವರ್ಷ ನುಗ್ಗಿ ಬರುವುದು.

ಮಳೆಯ ಹಿಂದೆ ಶರತ್ಕಾಲ
ಬಿಳಿಯ ಹೆಜ್ಜೆಯಿಡುವುದು.
ಹೇಮಂತದ ಹಿಂದೆ ಶಿಶಿರ;
ಕಾಲ ವೀಣೆ ಮಿಡಿವುದು.
         - ಕೆ ಎಸ್ ನರಸಿಂಹಸ್ವಾಮಿ
('ತೆರೆದ ಬಾಗಿಲು' ಕವನ ಸಂಕಲನದಿಂದ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಉನ್ಮಾದದ ನಶೆ ನಮ್ಮೊಂದಿಗಿಷ್ಟು ಹಂಚಿಕೊಳ್ರಿ....