ಜಿಜ್ಞ್ಯಾಸೆ

ಚಿತ್ರ ಕೃಪೆ: http://media.radiosai.org

ಏನು? ಯಾಕೆ? ಎಲ್ಲಿ? ಯಾರು?
ಎಂದು ತೊದಲನಾಡಿದೆ.
ಅಂದಿನಿಂದ ಇಂದುವರೆಗು
ಅದೇ ಹಾಡ ಹಾಡಿದೆ.

ಹತ್ತು ದೇಶ ನೋಡಿದೆ.
ನೂರು ಶಾಸ್ತ್ರ ಓದಿದೆ
ಮೊದಲು ತೊದಲು ಮಾತಿನಲ್ಲೆ
ಇನ್ನೂ ಇದೆ ಅರಿವಿನಲ್ಲೇ

ಏನು? ಯಾಕೆ? ಎಲ್ಲಿ? ಯಾರು?
ಇನ್ನೂನು ಕೇಳುವೆ
ಎದಯೆಲವಿತು ಕುಳಿತ ಗುರುವೆ!
ಹೇಳು ಏನ ಹೇಳುವೆ?

ಕತ್ತಲುಗಳ ದಾಟಿ ದಾಟಿ
ಬೆಳಕು ಬೆಳಕು ಎಂದೆನು
ಸಾವು ಸಾಸಿರಗಳ ಸಾರಿ
ಅಮೃತ ಎನುತ ಬಂದೆನು.

ಸಟೆಯ ತೆರೆಯು ತೆರೆಯುತ
ದಿಟವು ಮೇರೆವರೆಯುತ
ಬಂದರೇನು ಎಂದಿನಂತೆ
ಮುಂದೆಯು ಹಿಂದಿದ್ದ ಚಿಂತೆ 

ಇದು ಅದೃಷ್ಟ ಇದು ಅಗಮ್ಯ
ಎನುತ ಎನುತ ಸಾಗಿದೆ
ನಿನ್ನ ಪಾದದೆಡೆಗೆ ತಲೆಯು
ಅಡಿಗಡಿಗೂ ಬಾಗಿದೆ.

ಎಲ್ಲಿ ಏನು ರಮ್ಯವಾಗಿ
ಕಂಡರೆ ಮರುಳಾಗಿದೆ.
ಅದರತನದ ಅಗಮ್ಯತೆಗೆ
ಸೋತು ತಲೆಯ ತೂಗಿದೆ.

ಕಾಣುತಲಿದೆ ಭವ್ಯವು
ನೋಡುತಲಿದೆ ದಿವ್ಯವು.
ಒಂದನೊಂದು ಅರಸಿ ಮರೆಸಿ
ಆಗ ಈಗ ಬಿಡಿಸಿ ಬೆರಸಿ

ಜೀವವು ಸಂಭ್ರಮದೊಳೆಂದು
ನಿನ್ನನ್ನೇ ಕರೆದಿದೆ.
ಇಗೋ ಸೃಷ್ಟಿಪುಟದೊಳೆಲ್ಲು
ನಿನ್ನ ಹೆಸರೆ ಬರೆದಿದೆ.

ಮಾನವ ಚಾರಿತ್ರ್ಯದಲ್ಲಿ
ಎಷ್ಟೊ ಪ್ರಳಯವಾಗಿವೆ.
ಸ್ತ್ರೀಯ ಪ್ರೇಮ ಪುರುಷ ಭಾಗ್ಯ
ಕಾದು ಕಾದು ಮಾಗಿವೆ.

ನಾಗರಿಕತೆ ಮುಳುಗಿವೆ.
ಸಂಸ್ಕೃತಿಗಳು ಬೆಳಗಿವೆ
ಅಧಃಪತನವಾಗುತಿರಲು
ಅವತಾರವು ತೇಗುತಿರಲು

ಉದ್ಧಾರದ ಆಸೆಯಾಗಿ
ಮೂಲಜಲಕೆ ಮರಳಿವೆ
ಅಂತರಂಗದತ್ತ ನಯನ
ತಾನಾಗಿಯೆ ಹೊರಳಿವೆ.

ಹೃದಯ ಹೂಡಿ ಹತ್ತು ಆಟ
ಇಳಿಸಿ ಪ್ರೇಮಪಾಕಕೆ
ಊಟೆಯಾಗಿ ಎತ್ತಲಿಹುದು
ನರರ ನರಕ ನಾಕಕೆ.

ವಿಧಿವಿಲಾಸ ನಡೆದಿದೆ
ಹಳೆಯ ಹಾದಿ ಹಿಡಿದಿದೆ
ಪ್ರಕೃತಿ ತನ್ನ ಹಾಸ ಹಾಸಿ
ಮಾಯೆ ತನ್ನ ಬಲೆಯ ಬೀಸಿ

ಬಯಲಿನಲ್ಲಿ ಗಾಲಿಯಾಡಿ-
ದಂತೆ ನಮ್ಮ ಆಡಿಸಿ
ಕ್ರೀಡಿಸುವದು, ಬಾ ಕರುಣಿಸಿ
ಬೇರೆ ಆಟ ಮೂಡಿಸಿ.

ನಿನಗೆ ಲೀಲೆ ಸೇರುವಾಗ
ನನಗೆ ಏಕೆ ಬೇಸರ?
ಕಟ್ಟಿ ಮುರಿದು ಕೆಡಿಸು ಬೆಳಿಸು
ನೀನೆ ನನಗೆ ಆಸರ.

ಸಾಗಲಿಂತು ಚಕ್ರವು
ನಿನ್ನ ರೀತಿ ವಕ್ರವು
ನೀನು ಬಾ ಅನಂತನಾಗಿ
ಜೀವ ಇರಲಿ ಅಮೃತವಾಗಿ

ತಾಪ, ಪಾಪ, ನೋವು, ದುಃಖ,
ಚಿಂತೆ ಭೋಗದಾಟವು.
ನಟನ ಹಾಗೆ ಎನಿಸಲೆನಗೆ
ನಿನ್ನ ಕಲೆಯ ಮಾಟವು.

ಏನು ಆಟ! ಏನು ಮಾಟ!
ಕುತೂಹಲಕೆ ಆಡುವೆ
ಪ್ರಪಂಚವನು ಚಿತ್ರಿಸುತ್ತ
ನೀನೊ ಕಥೆಯ ಮಾಡುವೆ

ತಿಳಿಯದೆಂದು ತಿಳಿದಿತು
ಇಷ್ಟು ನನಗೆ ಹೊಳೆದಿತು
ಅಷ್ಟರಲ್ಲಿ ತೃಪ್ತಿ ನನಗೆ
ದಿನವು ಇದೊ ವಿನೋದ ನಿನಗೆ

ಆದರೇನು ಮತ್ತೆ ನಾನು
ಏನು? ಏಕೆ? ಕೇಳುವೆ
ಹಳೆಯದನ್ನೆ ಹೊಸೆಯಿಸಿ ನೀ
ರಸ ಹುಟ್ಟಿಸಿ ಹೇಳುವೆ.

                - ದ ರಾ ಬೇಂದ್ರೆ
 ('ಗಂಗಾವತರಣ' ಕವನ ಸಂಕಲನದಿಂದ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಉನ್ಮಾದದ ನಶೆ ನಮ್ಮೊಂದಿಗಿಷ್ಟು ಹಂಚಿಕೊಳ್ರಿ....