ಮರವಾಗು



ಮರವಾಗೆಲೆ, ಓ ಜೀವವೇ, ಮರವಾಗು
ಹಲ ಬಗೆಯಲಿ ಈ ಲೋಕಕೆ ನೆರವಾಗು
ಅಲೆದಾಡುವ ಜೀವಕ್ಕೆಲ್ಲಿ ಯಾವ ನೆಲೆ?
ನೆಲದಾಳಕೆ ಬೇರನೂರಿ ಸ್ಥಿರವಾಗು

ಭೂಸಾರವ ನೀ ಹೀರಿ ತೊಡು ಹಸಿರನ್ನು
ಪರಿಸರಕೆ ನೀಡು ನಿರ್ಮಲ ಉಸಿರನ್ನು
ರೆಂಬೆಯಲ್ಲೂ ತುಂಬಲಿ ಹೂ ಹಣ್ಣು
ತಂಪು ನೆರಳ ಕೊಡುವ ಚಪ್ಪರವಾಗು

ಹಲವು ಜೀವಗಳಿಗೆ ಆಗು ನೀನು ನೆಲೆ
ಕಾರ್ಮುಗಿಲನು ಇಳೆಗೆ ಸೆಳೆದು ಸುರಿದು ಮಳೆ
ಪ್ರತಿ ಚೈತ್ರ ನಿನಗೆ ತರಲಿ ಹೊಸ ಜೀವಕಳೆ
ಹಡೆದ ನೆಲತಾಯಿಗೆ ನೀ ವರವಾಗು.

                            - ಬಿ ಆರ್ ಲಕ್ಷ್ಮಣರಾವ್

ಬೆಳಗು



ಮೂಡಲ ಮನೆಯಾ ಮುತ್ತಿನ ನೀರಿನ
ಎರಕಾವ ಹೊಯ್ದಾ
ನುಣ್ಣನೆ - ಎರಕಾವ 
ಹೊಯ್ದಾ
ಬಾಗಿಲ ತೆರೆದೂ ಬೆಳಕು ಹರಿದೂ
ಜಗವೆಲ್ಲಾ ತೊಯ್ದಾ
ಹೋಯ್ತೋ - ಜಗವೆಲ್ಲಾತೊಯ್ದಾ


ರತ್ನದರಸದಾ ಕಾರಂಜೀಯೂ
ಪುಟಪುಟನೇ ಪುಟಿದು
ತಾನೇ - ಪುಟಪುಟನೇ ಪುಟಿದು
ಮಘಮಘಿಸುವಾ ಮುಗಿದ ಮೊಗ್ಗೀ
ಪಟಪಟನೇ ಒಡೆದು
ತಾನೇ - ಪಟಪಟನೇ ಒಡೆದು

ಎಲೆಗಳ ಮೇಲೇ ಹೂಗಳ ಒಳಗೇ
ಅಮೃತದ ಬಿಂದು
ಕಂಡವು - ಅಮೃತದ ಬಿಂದು
ಯಾರಿರಿಸಿದವರು ಮುಗಿಲಮೇಲಿಂ-
ದಿಲ್ಲಿಗೇ ತಂದು
ಈಗ - ಇಲ್ಲಿಗೇ ತಂದು

ತಂಗಾಳೀಯ ಕೈಯೊಳಗಿರಿಸೀ
ಎಸಳೀನಾ ಚವರೀ
ಹೂವಿನ-ಎಸಳೀನಾ ಚವರಿ
ಹಾರಿಸಿ ಬಿಟ್ಟರು ತುಂಬಿಯ ದಂಡು
ಮೈಯೆಲ್ಲಾ ಸವರಿ
ಗಂಧಾ - ಮೈಯೆಲ್ಲಾ ಸವರಿ

ಗಿಡಗಂಟೆಯಾ ಕೊರಳೊಳಗಿಂದ
ಹಕ್ಕಿಗಳಾ ಹಾಡು
ಹೊರಟಿತು - ಹಕ್ಕಿಗಳಾ ಹಾಡು
ಗಂಧರ್ವರಾ ಸೀಮೆಯಾಯಿತು
ಕಾಡಿನಾ ನಾಡು
ಕ್ಷಣದೊಳು - ಕಾಡಿನಾ ನಾಡು.

ಕಂಡಿತು ಕಣ್ಣು ಸವಿದಿತು ನಾಲಗೆ
ಪಡೆದೀತೀ ದೇಹ
ಸ್ಪರ್ಶಾ - ಪಡೆದೀತೀ ದೇಹ
ಕೇಳಿತು ಕಿವಿಯು ಮೂಸಿತು ಮೂಗು
ತನ್ಮಯವೀ ಗೇಹಾ
ದೇವರ - ದೀ ಮನಸಿನ ಗೇಹಾ

ಅರಿಯದು ಅಳವು ತಿಳಿಯದು ಮನವು
ಕಾಣದೋ ಬಣ್ಣ
ಕಣ್ಣಿಗೆ - ಕಾಣದೋ ಬಣ್ಣ
ಶಾಂತಿರಸವೇ ಪ್ರೀತಿಯಿಂದಾ
ಮೈದೋರಿತಣ್ಣ
ಇದು ಬರಿ - ಬೆಳಗಲ್ಲೋ ಅಣ್ಣಾ



                                          - ದ ರಾ ಬೇಂದ್ರೆ
                              ('ಗರಿ' ಕವನ ಸಂಕಲನದಿಂದ)

ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ



ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ
ಸೋs ಎಂದು ಶ್ರುತಿ ಹಿಡಿದು ಸುರಿಯುತ್ತಿತ್ತು
ಅದಕೆ ಹಿಮ್ಮೇಳವೆನೆ ಸೋಸಿಪಹ ಸುಳಿಗಾಳಿ
ತೆಂಗುಗರಿಗಳ ನಡುವೆ ನುಸುಳುತಿತ್ತು.


ಇಳೆವೆಣ್ಣು ಮೈದೊಳೆದು ಮಕರಂದದರಿಶಿನದಿ
ಹೂ ಮುಡಿದು ಮದುಮಗಳ ಹೋಲುತಿತ್ತು
ಮೂಡಣದಿ ನೇಸರನ ನಗೆಮೊಗದ ಶ್ರೀಕಾಂತಿ
ಬಿಳಿಯ ಮೋಡದ ಹಿಂದೆ ಹೊಳೆಯುತ್ತಿತ್ತು.


ಹುಲ್ಲೆಸಳು ಹೂಪಕಳೆ ಮುತ್ತು ಹನಿಗಳ ಮಿಂಚು
ಸೊಡರಿನಲಿ ಆರತಿಯ ಬೆಳಗುತ್ತಿತ್ತು
ಕೊರಳುಕ್ಕಿ ಹಾಡುತಿಹ ಚಿಕ್ಕ ಪಕ್ಕಿಯ ಬಳಗ
ಶುಭಮಸ್ತು ಶುಭಮಸ್ತು ಎನ್ನುತ್ತಿತ್ತು .


ತಳಿರತೋರಣದಲ್ಲಿ ಬಳ್ಳಿಮಾಡಗಳಲ್ಲಿ
ದುಂಬಿಗಳ ಓಂಕಾರ ಹೊಮ್ಮುತ್ತಿತ್ತು
ಹಚ್ಚ ಹಸುರಿನ ಪಚ್ಚೆ ನೆಲಗಟ್ಟಿನಂಗಳದಿ
ಚಿಟ್ಟೆ ರಿಂಗಣಗುಣಿತ ಹಾಕುತಿತ್ತು.


ಉಷೆಯ ನುಣ್ಗದಪಿನಲಿ ಹರ್ಷ ಬಾಷ್ಪಗಳಂತೆ
ಮರದ ಹನಿ ತಟಪಟನೆ ಉದುರುತಿತ್ತು
ಸೃಷ್ಟಿ ಲೀಲೆಯೊಳಿಂತು ತಲ್ಲೀನವಾದಮನ
ಮುಂಬಾಳ ಸವಿಗನಸ ನೆನೆಯುತಿತ್ತು.


                                - ಚೆನ್ನವೀರ ಕಣವಿ 

ನಾನಾರೆಂಬುದು ನಾನಲ್ಲ


ನಾನಾರೆಂಬುದು ನಾನಲ್ಲ, ಈ ಮಾನುಷ ಜನ್ಮವು ನಾನಲ್ಲ.
ನಾರಾಯಣವರ ಬ್ಹ್ರಂಹಸದಾಶಿವ, ನೀಯೆಣಿಸುವ ಗುಣ ನಾನಲ್ಲ.


ಮಾತಾಪಿತಸುತ ನಾನಲ್ಲ, ಭೂನಾಥನಾದವ ನಾನಲ್ಲ.
ಜಾತಿಗೋತ್ರಗಳು ನಾನಲ್ಲ, ಬಹು ಪ್ರೀತಿಯ ಸತಿಸುಥ ನಾನಲ್ಲ.


ವೇದ ಓದುಗಳು ನಾನಲ್ಲ, ಬರಿ ವಾದ ಮಾಡಿದವ ನಾನಲ್ಲ.
ನಾದಬಿಂದು ಕಳೆ ಭೇದ ವಸ್ತು ನಿಜ ಬೋದದವದಲ್ಲಿದವ ನಾನಲ್ಲ.


ನಾನೀಬೇಧವು ನಾನಲ್ಲ,  ನಾ ಶಿಶುನಾಳದೀಶನ ಬಿಡಲಿಲ್ಲ.
ನಾ ಅಳಿಯದೆ ನಾ ತಿಳಿಯಲು ಬಾರದು ನೀಯೆಣಿಸುವ ಗುಣ ನಾನಲ್ಲ.

                                                 - ಶಿಶುನಾಳ ಷರೀಫ್ 

ಕುರುಡು ಕಾಂಚಾಣ



ಕುರುಡು ಕಾಂಚಾಣ ಕುಣಿಯುತ್ತಲಿತ್ತು,
ಕಾಲಿಗೆ ಬಿದ್ದವರ ತುಳಿಯುತ್ತಲಿತ್ತೋ


ಬಾಣಂತಿಯೆಲುಬ ಸಾ-
ಬಾಣದ ಬಿಳುಪಿನಾ
ಕಾಣದ ಕಿರುಗೆಜ್ಜಿ ಕಾಲಾಗ ಇತ್ತೋ;
ಸಣ್ಣ ಕಂದಮ್ಮಗಳ
ಕಣ್ಣೀನ ಕವಡೀಯ
ತಣ್ಣನ್ನ ಜೋಮಾಲೆ ಕೊರಳೊಳಗಿತ್ತೋ;


ಬಡವರ ಒಡಲಿನ
ಬಡಬಾsನಲದಲ್ಲಿ
ಸುಡು ಸುಡು ಪಂಜು ಕೈಯೊಳಗಿತ್ತೋ;
ಕಂಬನಿ ಕುಡಿಯುವ
ಹುಂಬ ಬಾಯಿಲೆ ಮೈ -
ದುಂಬಿಯಂತುಧೋ ಉಧೋ ಎನ್ನುತಲಿತ್ತೋ.


ಕೂಲಿ ಕುಂಬಳಿಯವರ
ಪಾಲಿನ ಮೈದೊಗಲ
ಧೂಳಿಯ ಭಂಡಾರ ಹಣೆಯಯೊಳಗಿತ್ತೋ;
ಗುಡಿಯೊಳಗೆ ಗಣಣ, ಮಾ -
ಹಡಿಯೊಳಗ ತನನ, ಅಂ -
ಗಡಿಯೊಳಗೆ ಝಣಣಣ ನುಡಿಗೊಡುತಿತ್ತೋ.


ಹ್ಯಾಂಗಾರೆ ಕುಣಿಕುಣಿದು
ಮಂಗಾಟ ನಡೆದಾಗ
ಅಂಗಾತ ಬಿತ್ತೋ, ಹೆಗಲಲಿ ಎತ್ತೋ.


                              - ದ ರಾ ಬೇಂದ್ರೆ

ಅಮೃತವಾಹಿನಿಯೊಂದು




ಅಮೃತವಾಹಿನಿಯೊಂದು ಹರಿಯುತಿದೆ
ಮಾನವನ ಎದೆಯಿಂದಲೆದೆಗೆ ಸತತ.

ಗ್ರೀಷ್ಮಗಳು ನೂರಾರು ಉರಿಸಿದರು ಆರದಿದು
ಸುತ್ತಮುತ್ತಲು ಮರಳು ಮೇಲೆ ಪಾಚಿ.
ಮುತ್ತಿಕೊಂಡರು ಲುಪ್ತವಾಗದೀ ಅಮೃತ ಧುನಿ
ಕಿರಿದಾಗಿ ಬರಿದಾಗಿ ನೀರ ಗೆರೆಯಾಗಿ
ತಳದೊಳೆಲ್ಲೋ ತಳುವಿ ಗುಳುಗುಳಿಸುತಿದೆ ಸೆಲೆಯು
ಏನನೋ ಕಾಯುತಿದೆ ಗುಪ್ತವಾಗಿ.

ಇಂದಲ್ಲ ನಾಳೆ ಹೊಸ ಬಾನು ಬಗೆ ತೆರೆದೀತು
ಕರಗೀತು ಮುಗಿಲ ಬಳಗ
ಬಂದೀತು ಸೊದೆಯ ಮಳೆ, ತುಂಬೀತು ಎದೆಯ ಹೊಳೆ
ತೊಳೆದೀತು ಒಳಗು ಹೊರಗ.

ಈ ಸೆಲೆಗೆ ಆ ಮಳೆಯು ಎದೆಗೆ ಎದೆ ಎದೆ ಹೊಳೆಯು
ಸೇರದಿರೆ ಇಲ್ಲ ನಿಸ್ತಾರ
ಬಂದೆ ಬರಬೇಕಯ್ಯೋ, ಬಂದೆ ತೀರಲು ಬೇಕು
ಈ ಬಾಳಿಗಾ ಮಹಾಪೂರ!
           

                                        - ಗೋಪಾಲಕೃಷ್ಣ ಅಡಿಗ

ಹೃದಯಸಮುದ್ರ

ಚಿತ್ರ ಕೃಪೆ: http://www.123rf.com/profile_srijanroyc

ಬಂಗಾರ ನೀರ ಕಡಲಾಚೆಗೀಚೆಗಿದೆ ನೀಲ ನೀಲ ತೀರಾ,
ಮಿಂಚುಬಳಗ ತೆರೆತೆರೆಗಳಾಗಿ ಅಲೆಯುವದು ಪುಟ್ಟಪೂರಾ,
ಅದು ನಮ್ಮ ಊರು, ಇದು ನಿಮ್ಮ ಊರು, ತಂತಮ್ಮ ಊರೊ ಧೀರಾ,
ಅದರೊಳಗೆ ನಾವು, ನಮ್ಮೊಳಗೆ ತಾವು ಅದು ಇಲ್ಲವಣ್ಣ ದೂರಾ.

ಕರೆ ಬಂದಿತಣ್ಣ, ತೆರೆ ಬಂದಿತಣ್ಣ, ನೆರೆ ಬಂದಿತಣ್ಣ ಬಳಿಗೆ,
ಹರಿತsದ ಭಾವ, ಬೆರಿತsದ ಜೀವ ಅದರೊಳಗೆ ಒಳಗೆ ಒಳಗೆ.
ಇದೆ ಸಮಯವಣ್ಣ ಇದೆ ಸಮಯ ತಮ್ಮ ನಮ್‌ನಿಮ್ಮ ಆತ್ಮಗಳಿಗೆ.
ಅಂಬಿಗನು ಬಂದ, ನಂಬಿಗನು ಬಂದ ಬಂದsದ ದಿವ್ಯಗಳಿಗೆ.

ಇದು ಉಪ್ಪು ನೀರ ಕಡಲಲ್ಲೊ; ನಮ್ಮ ಒಡಲಲ್ಲೆ ಇದರ ನೆಲೆಯು.
ಕಂಡವರಿಗಲ್ಲೊ ಕಂಡವರಿಗಷ್ಟೆ ತಿಳಿದsದ ಇದರ ಬೆಲೆಯು.
ಸಿಕ್ಕಲ್ಲಿ ಅಲ್ಲ ಸಿಕ್ಕಲೆ ಮಾತ್ರ ಒಡೆಯುವದು ಇದರ ಸೆಲೆಯು,
ಕಣ್ಣರಳಿದಾಗ ಕಣ್ ಹೊರಳಿದಾಗ ಹೊಳೆಯುವದು ಇದರ ಕಳೆಯು.

ಬಂದವರ ಬಳಿಗೆ ಬಂದsದ ಮತ್ತು ನಿಂದವರ ನೆರೆಗು
ಬಂದsದೋ ಬಂದsದ,
ನವಮನುವು ಬಂದ ಹೊಸ ದ್ವೀಪಗಳಿಗೆ ಹೊರಟಾನ ಬನ್ನಿ
ಅಂದsದೋ ಅಂದsದ.

                                                              - ದ ರಾ ಬೇಂದ್ರೆ