ಅಮ್ಮ, ನಿನ್ನ ಎದೆಯಾಳದಲ್ಲಿ

ಚಿತ್ರ ಕೃಪೆ: Shutterstock.com
ಅಮ್ಮ, ನಿನ್ನ ಎದೆಯಾಳದಲ್ಲಿ
ಗಾಳಕ್ಕೆ ಸಿಕ್ಕ ಮೀನು
ಮಿಡುಕಾಡುತಿರುವೆ ನಾನು
ಕಡಿಯಲೊಲ್ಲೆ ನೀ ಕರುಳಬಳ್ಳಿ
ಒಲವೂಡುತಿರುವ ತಾಯೆ,
ಬಿಡದ ಬುವಿಯ ಮಾಯೆ

ನಿನ್ನ ರಕ್ಷೆಗೂಡಲ್ಲಿ ಬೆಚ್ಚಗೆ
ಅಡಗಲಿ ಎಷ್ಟು ದಿನ ?
ದೂಡು ಹೊರಗೆ ನನ್ನ
ಓಟ ಕಲಿವೆ, ಒಳನೋಟ ಕಲಿವೆ, ನಾ
ಕಲಿವೆ ಊರ್ಧ್ವ ಗಮನ,
ಓ ಅಗಾಧ ಗಗನ

ಮೇಲೆ ಹಾರಿ, ನಿನ್ನ ಸೆಳೆತ ಮೀರಿ,
ನಿರ್ಭಾರಸ್ಥಿತಿಗೆ ತಲುಪಿ
ಬ್ರಹ್ಮಾಂಡವನ್ನೇ ಬೆದಕಿ
ಇಂಧನ ತೀರಲು, ಬಂದೇ ಬರುವೆನು
ಮತ್ತೆ ನಿನ್ನ ತೊಡೆಗೆ,
ಮೂರ್ತ ಪ್ರೇಮದೆಡೆಗೆ

            - ಬಿ ಆರ್ ಲಕ್ಷ್ಮಣರಾವ್ 

ಗುರಿ

ಗುರಿಯಾವುದೆಂದೆಲ್ಲ ಕೇಳುವರು ಎನ್ನ !
ಅರಿಯರೇ ಗುರಿಯು ಸರ್ವಕೆ ನೀನೆ ಎಂದು ?


ಗುರಿಯು ನೀನೆಂದೆನಲು ನಾಚುವೆನು ಜನನಿ:
ಗುರಿಯು ನೀನೆನಲೆನ್ನ ಮರುಳನೆಂಬುವರು !
ತಿರೆಯ ಸಿರಿಸುತರೆದರು ತಲೆವಾಗಿ ನಿಂತು
ಮನದಿ ನಿನ್ನನ್ನು ನೆನೆವೆ ನಮ್ರಭಾವದೊಳು !


ವಾದಿಸುವರೆನ್ನೊಡನೆ ಜೀವನವ ನಡಸೆ
ಮೇದಿನಿಯ ಸಿರಿಯೊಲ್ಮೆಯಿರಲೆ ಬೇಕೆಂದು ;
ವಾದಗಳನಾಲಿಸುವೆ ನಸುನಗೆಯ ತಡೆದು,
ಹೇ ದೇವಿ, ನಿನ್ನ  ಕೃಪೆಯಿಹುದೆಂದು ತಿಳಿದು !


ಬಲ್ಲರೇ ಅವರೆನ್ನ ಹೃದಯದೊಳಗಿಹುದು
ಸಲ್ಲಲಿಲತದಾನಂದ ಸಾಗರವು ಎಂದು !
ಜಗದ ಸಿರಿಸುತರೆನ್ನ ಜಡನೆಂದರೇನು ?
 ಅಗಲದಿರು ಎಲೆ ತಾಯೆ ಮನದಿಂದ ನೀನು !


                                             - ಕುವೆಂಪು    
 

ನಾ ಮೇಲಿನವನು ಬಲು ದೊಡ್ಡವನು



ನಾ ಮೇಲಿನವನು ಬಲು ದೊಡ್ಡವನು ಎಂದು
ಮೆರೆದಾಡ ಬೇಡ ಗೆಳೆಯ |
ನಿನಗಿಂತ ಮಿಗಿಲವರು ಇದ್ದಾರೋ ಭುವಿಯಲ್ಲಿ
ಸುಳ್ಳು  ಭ್ರಮೆಯಲಿ ನೀ ಮುಳುಗಬೇಡ ||


ಬಲು ದೊಡ್ಡ ಚಂದಿರನು ಇರುಳೆಲ್ಲ ಬೆಳಗುವನು
ಮರೆಯಾಗುವನು ಹಗಲ ಕಿರಣದಲ್ಲಿ |
ಉರಿಯುವನು ಸೂರ್ಯ ಅವಗಿಂತ ಹಿರಿಯ
ಕಳೆದು ಹೋಗುವನು ಇರುಳ ಸೆರಗಿನಲ್ಲಿ |


ಗ್ರಹ ತಾರೆಗಳ ಹೊತ್ತ ಗಗನಕ್ಕೆ ಮರೆಯುಂಟೇ
ಸಾರಿ ಹೇಳಿತೆ ತಾ ಮಿಗಿಲು ಎಂದು ?
ಅಣುವಲ್ಲಿ ಅಣುವಾದ ಕಣ್ಣಿದ್ದು ಕುರುಡಾದ
ನೀ ಕೂಗಬಹುದೇ ಹಾಗೆಂದು?


ಮಣ್ಣು ಮೊಳಕೆಯ ಹುಟ್ಟು, ಬೀಜ ವೃಕ್ಷದ ಗುಟ್ಟು
ಬೆರಗುಗೊಳಿಸುವುದಿಲ್ಲವೇನು?
ಗಿರಿ ಝರಿಯ ಒರತೆ ಜೀವರಾಶಿಯ ಚರಿತೆ
ರೋಮಂಚನಗೊಳಿಸದೇನು?


ಜನನ ಮರಣದ ಒಗಟ ಬಿಚ್ಚಿ ಹೇಳುವೆಯೇನು?
ಲೋಕದೊಳತಿಗೆ ನಿನ್ನ ಕಾಣ್ಕೆ ಏನು?
ಹೇಳು ಗೆಳಯನೆ ಈಗ ಎದೆ ತಟ್ಟಿ ನೀ ಹೇಳು
ಪ್ರಕೃತಿಯ ಹಿರಿತನಕೆ ನೀ ಸಾಟಿ ಏನು?
              
                                 - ಬಿ.ಟಿ.ಲಲಿತಾ ನಾಯಕ್

ಏನ ಬೇಡಲಿ !


ದೇವ, ನಿನ್ನ ಮಾಯೆಗಂಜಿ
ನಡುಗಿ ಬಾಡೆನು ;
ನಿನ್ನ ಇಚ್ಛೆಯಂತೆ ನಡೆವೆ -
ನಡ್ಡಿ ಮಾಡೆನು.

ಮುಕ್ತಿ ! ಮುಕ್ತಿ ! ನನ್ನ ನಾನು
ತಿಳಿದುಕೊಳ್ವುದೋ,
ಸಾವಿಗಂಜಿ ನಿನ್ನಡಿಯಲಿ
ಅಡಗಿಕೊಳ್ವುದೋ ?

ಶಕ್ತಿಯಿತ್ತೆ ಮುಕ್ತಿಯನ್ನು
ಗಳಿಸಿಕೊಳ್ಳುಲು ;
ನೀರನೆರೆದೆ ಬಳ್ಳಿಯನ್ನು
ಬೆಳಸಿಕೊಳ್ಳಲು ;

ಜ್ಞಾನರವಿಯನಿತ್ತೆ ಎದೆಯ
ನೋಡಿಕೊಳ್ಳಲು ;
ಗೀತೆಯನ್ನು ಕೊಟ್ಟೆ ಕೊಳಲೊ -
ಳೂದಿಕೊಳ್ಳಲು.

ಎಲ್ಲವನ್ನು ಕೊಟ್ಟಿರುವೆ;
ಏನ ಬೇಡಲಿ !
ಜಗವನೆನಗೆ ಬಿಟ್ಟಿರುವೆ
ಏಕೆ ಕಾಡಲಿ !

                 - ಕೆ ಎಸ್ ನರಸಿಂಹಸ್ವಾಮಿ

ನೇಗಿಲ ಯೋಗಿ



ನೇಗಿಲ ಹಿಡಿದಾ ಹೊಲದೊಳು ಹಾಡುತ 
     ಉಳುವಾ ಯೋಗಿಯ ನೋಡಲ್ಲಿ.
ಫಲವನು ಬಯಸದೆ ಸೇವೆಯೆ ಪೂಜೆಯು 
     ಕರ್ಮವೆ ಇಹ ಪರ ಸಾಧನವು.
ಕಷ್ಟದೊಳನ್ನವ ದುಡಿವನೆ ತ್ಯಾಗಿ 
     ಸೃಷ್ಟಿನಿಯಮದೊಳಗವನೇ ಭೋಗಿ.
ಲೋಕದೊಳೇನೇ ನಡೆಯುತಲಿರಲಿ 
     ತನ್ನೀ ಕಾರ್ಯವ ಬಿಡನೆಂದೂ:
ರಾಜ್ಯಗಳುದಿಸಲಿ ರಾಜ್ಯಗಳಳಿಯಲಿ, 
     ಹಾರಲಿ ಗದ್ದುಗೆ ಮಕುಟಗಳು,
ಮುತ್ತಿಗೆ ಹಾಕಲಿ ಸೈನಿಕರೆಲ್ಲ, 
      ಬಿತ್ತುಳುವುದನವ ಬಿಡುವುದೆ ಇಲ್ಲ.


ಬಾಳಿತು ನಮ್ಮೀ ನಾಗರಿಕತೆ ಸಿರಿ
     ಮಣ್ಣುಣಿ ನೆಗಿಲಿನಾಶ್ರಯದಿ;
ನೇಗಿಲ ಹಿಡಿದು ಕೈಯಾಧಾರದಿ
     ದೊರೆಗಳು ದರ್ಪದೊಳಾಳಿದರು.
ನೇಗಿಲ ಬಳದೊಳು ವೀರರು ಮೆರೆದರು,
     ಶಿಲ್ಪಿಗಳೆಸೆದರು, ಕವಿಗಳು ಬರೆದರು.   

ಯಾರು ಅರಿಯದ ನೇಗಿಲ ಯೋಗಿಯೆ 
     ಲೋಕಕೆ ಅನ್ನವನೀಯುವನು.
ಹೆಸರನು ಬಯಸದೆ ಅತಿಸುಖಕೆಳಸದೆ 
     ದುಡಿವನು ಗೌರವಕಾಶಿಸದೆ.
ನೇಗಿಲ ಕುಲದೊಳಗಡಗಿದೆ ಕರ್ಮ; 
      ನೇಗಿಲ ಮೇಲೆಯೆ ನಿಂತಿದೆ ಧರ್ಮ 


                                             - ಕುವೆಂಪು 

ಅನಿರ್ವಚನೀಯ



ಓ ಮನವೆ, ಬಾ, ಮುಳುಗು ಭಕ್ತಿಜಲನಿಧಿಯಲ್ಲಿ !
     ಸಾಕಿನ್ನು ಹೆಮ್ಮೆಯೇಕೆ ?
ಈ ಮಹಾ ವಿಶ್ವದ ರಹಸ್ಯವನು ನೀನರಿಯೆ,
     ಬರಿಯ ಹೋರಾಟ ಸಾಕೆ ?
ಕಲ್ಪನೆಯೆರಂಕೆಗಳು ಬಳಲಿದುವು ದುಡುಕಿ 
ಕಾಲದೆಶಗಳೆಲ್ಲೆಯನು  ಹುಡುಕಿ ಹುಡುಕಿ !

ಹೋದಷ್ಟು ಕಾಣುವುದು; ಕಂಡಷ್ಟು ತೋರುವುದು;
     ತೋರಿಕೆಗೆ ಕೊನೆಯದೆಲ್ಲಿ?
ಹಾದು ದಡ ಸೇರುವೆವೆ? ಏರಿದಂತೆರುವುದು !
     ಮಾಯೆಯಿದು ಮುಗಿವುದೆಲ್ಲಿ?
ಮಾತುಗಳು ಸೋತು ಹಿಂಜರಿಯುವುವು ಹೆದರಿ,
ಚಿಂತೆಗಳನಂತದಲಿ ಕನಸಿನಂತುದುರಿ ! 

                                                - ಕುವೆಂಪು    





ಒಡವೆಗಳು

ಚಿತ್ರ ಕೃಪೆ: swatiphatak.sulekha.com/albums/allphotos/slideshow/145367.htm

ಚಿನ್ನದ ಒಡವೆಗಳೇತಕೆ ಅಮ್ಮಾ?
ತೊಂದರೆ ಕೊಡುವುವು ಬೇಡಮ್ಮಾ
ಬಣ್ಣದ ಬಟ್ಟೆಗಳೇತಕೆ ಅಮ್ಮಾ?
ಮಣ್ಣಿ ನೊಳಾಡಲು ಬಿಡವಮ್ಮಾ!

ಚೆಂದಕೆ, ಚೆಂದಕೆ ಎನ್ನುವೆಯಮ್ಮಾ!
ಚೆಂದವು ಯಾರಿಗೆ ಹೇಳಮ್ಮಾ
ನೋಡುವರಿಗೆ ಚೆಂದವು, ಆನಂದವು;
ಆಡುವ ಎನಗಿದು ಬಲು ಬಂಧ.

ನನ್ನೀ ಶಿಶುತನ ನಿನ್ನೀ ತಾಯ್ತನ
ಎರಡೇ ಒಡವೆಗಳೆಮಗಮ್ಮ
ನಾ ನಿನಗೊಡವೆಯು; ನೀ ನನಗೊಡವೆಯು;
ಬೇರೆಯ ಒಡವೆಗಳೇಕಮ್ಮ?
                          
                         - ಕುವೆಂಪು
 ('ನನ್ನ ಮನೆ' ಕವನ ಸಂಕಲನದಿಂದ)