ಅಂಥಿಂಥ ಹೆಣ್ಣು ನೀನಲ್ಲ;

ಚಿತ್ರ ಕೃಪೆ : www.tumblr.com

ಅಂಥಿಂಥ ಹೆಣ್ಣು ನೀನಲ್ಲ;
ನಿನ್ನಂಥ ಹೆಣ್ಣು ಇನ್ನಿಲ್ಲ.

ಹೆಡೆಹೆಡೆಯ ಸಾಲು ತುರುಬೆಲ್ಲ,
ಗುಡಿನಿಂದ ಹೂವು ಮೇಲೆಲ್ಲ,
ತೆರೆತೆರೆಯ ಹೊರಳು ಕುರುಳೆಲ್ಲ,
ಸುಳಿಮಿಂಚು ಕಣ್ಣ ಹೊರಳೆಲ್ಲ!

ಮಣಿಮಲೆ ಕೊರಳ ದನಿಯೆಲ್ಲ,
ಹೊಂಬಾಳೆ ಆಸೆ ಒಳಗೆಲ್ಲ.
ಒತ್ತಾಯವಿಲ್ಲ: ಒಲವೆಲ್ಲ!
ನಿನ್ನಂಥ ಹೆಣ್ಣು ಹಲವಿಲ್ಲ.

ಎದೆಮಟ್ಟ ನಿಂತ ಹೂ ಬಳ್ಳಿ;
ಎಷ್ಟೊಂದು ಹೂವು ಅದರಲ್ಲಿ!
ಉಸಿರುಸಿರು ಮೊಗ್ಗು ಹೂವೆಲ್ಲ;
ನೀ ಬಳ್ಳಿ ಬೆಳಕು ಬದುಕೆಲ್ಲ!

ನಡುಬೆಟ್ಟದಲ್ಲಿ ನಿನ್ನೂರು;
ಅಲ್ಲಿಹವು ನವಿಲು ಮುನ್ನೂರು.
ಮುನ್ನೂರು ನವಿಲು ಬಂದಂತೆ
ನೀ ಬಂದರೆನಗೆ; ಸಿರಿವಂತೆ.

ನಡುದಾರಿಯಲ್ಲಿ ನನ್ನೂರು;
ಕುಡಿಮಿಂಚಿನೂರು ಹೊನ್ನೂರು
ಮುನ್ನೂರು ಮೆಂಚು ಹೊಳೆದಂತೆ
ನೀ ಬಂದರೆನಗೆ, ಸಿರಿವಂತೆ.

ಬಲುದೂರ ದೂರ ನೀನಾಗಿ,
ಹೊಂಗನಸು ನಡುವೆ ದನಿತೂಗಿ,
ಕಾದಿರಲು ನಾನು ನಿನಗಾಗಿ
ನೀ ಬರುವೆ ಚೆಲುವೆ ಹೊಳೆಯಾಗಿ.

ಏನಂಥ ಚೆಲುವೆ ನೀನಲ್ಲ.
ನೀನಲ್ಲ? ಚೆಲುವೆ ಇನ್ನಿಲ್ಲ!
ಹಾಡಲ್ಲ, ನೀನು ಕನಸಲ್ಲ;
ನಿನ್ನಿಂದ ಹಾಡು ಕನಸೆಲ್ಲ.

                  - ಕೆ. ಎಸ್. ನರಸಿಂಹಸ್ವಾಮಿ

ಕಣ್ಣೀರು

ಚಿತ್ರ ಕೃಪೆ http://www.fanpop.com
ಕಣ್ಣೀರು ಹನಿಯಲ್ಲಿ ಮೊಗದ ನಗೆಯನು ಕಂಡೆ
ಕಣ್ಣೀರ ಹನಿಯಲ್ಲಿ ಜಗದ ಹೃದಯವ ಕಂಡೆ
ಕಣ್ಣೀರಿನಲಿ ವಿವಿಧ ಅನುಭವದ ಸವಿಯುಂಡೆ
               ಕಣ್ಣೀರಿಗಿಂ ಮಿಗಿಲು ತತ್ವಬೋಧಕರಿಲ್ಲ
               ಮುನ್ನೀರು ಎಂಬುದೂ ಕಣ್ಣೀರೆ ಎಲ್ಲ !

ಕಣ್ಣೀರ ಹೊಳೆಯಲ್ಲಿ ರಾಜ್ಯಗಳು ಉದಿಸಿದುವು
ಕಣ್ಣೀರ ಹೊಳೆಯಲ್ಲಿ ಮಕುಟಗಳು ತೇಲಿದುವು
ಕಣ್ಣೀರಿನಲಿ ಕಾಲದೇಶಗಳು ಕರಗುವುವು
               ವಿಶ್ವದಲಿ ತೇಲುವೀ  ಬ್ರಹ್ಮಾಂಡಗಳು ಎಲ್ಲ
               ಕಣ್ಣೀರಿನುಂಡೆಗಳೋ, ಬಲ್ಲವನೆ  ಬಲ್ಲ !

                                                         - ಜಿ. ಎಸ್. ಶಿವರುದ್ರಪ್ಪ
                                               ( 'ಸಾಮಗಾನ' ಕವನ ಸಂಕಲನದಿಂದ )

ಕವಿತೆಗೆ

ಚಿತ್ರ ಕೃಪೆ: http://userserve-ak.last.fm
ಇಲ್ಲ, ಇನ್ನು ಬರೆಯಲಾರೆ
        ತೆರೆಯಲಾರೆ ಹೃದಯವ,
ನಿನ್ನ ನಿರೀಕ್ಷಣೆಯೋಳಿನ್ನು
        ತಳ್ಳಲಾರೆ ದಿವಸವ.

ಇಲ್ಲ, ಇನ್ನು ಹಿಡಿಯಲಾರೆ
         ಆ ಮಿಂಚಿನ ಚಾಣವ
ಇನ್ನು ನಾನು ಹೂಡಲಾರೆ
         ಹೆದೆಯೇರಿಸಿ ಬಾಣವ.

ಮತ್ತೆ ಎತ್ತಿ ನಿಲಿಸಲಾರೆ
         ಮುರಿದು ಬಿದ್ದ ಗುಡಿಗಳ
ಸುತ್ತ ಬಿದ್ದ ಬೂದಿಯೊಳಗೆ
         ಹುಡುಕಲಾರೆ ಕಿಡಿಗಳ.

ಬೇಡ ಬೇಡ ಬೇಡ ನನಗೆ
        ನಿನ್ನ ಕೃಪೆಯ ಸಂಕೋಲೆ,
ಇನ್ನೇತಕೆ ನಿನ್ನ ಹಂಗು
        ಕಾವ್ಯಸ್ಫೂರ್ತಿ ಚಂಚಲೆ.

                            - ಜಿ. ಎಸ್. ಶಿವರುದ್ರಪ್ಪ
                    ( 'ಕಾರ್ತೀಕ' ಕವನಸಂಕಲನದಿಂದ)

ನಿಂಬೆ ಗಿಡ

ಚಿತ್ರ ಕೃಪೆ: http://heatherbailey.typepad.com

ನಾ ಚಿಕ್ಕವನಾಗಿದ್ದಾಗ ಅಪ್ಪ ಹೇಳುತ್ತಿದ್ದರು
ಈ ನಿಂಬೆಯ ಗಿಡದಿಂದೊಂದು ಒಳ್ಳೆಯ ಪಾಠವ ಕಲಿ ಮಗು
ನೀ ಪ್ರೇಮದಲ್ಲಿ ಎಂದೂ ನಂಬಿಕೆ ಇಡಬೇಡಾ ಮರಿ
ಆ ಪ್ರೇಮವು ಸಹ ನಿಂಬೆಯ ಗಿಡದಂತೆಂಬುದ ನೀ ತಿಳಿ

ನಿಂಬೆ ಗಿಡ ತುಂಬ ಚಂದ
ನಿಂಬೆಯ ಹೂವು ತುಂಬ ಸಿಹಿ
ಆದರೆ ನಿಂಬೆಯ ಹಣ್ಣು ಕಂದ
ತಿನ್ನಲು ಬಹಳ ಹುಳೀ ಕಹಿ

ಯೌವ್ವನದಲ್ಲಿ ನಾನು ಒಂದು ಹುಡುಗಿಯ ಪ್ರೇಮಿಸಿದೆ
ಆ ಹುಡುಗಿಯು ನನಗೆ ಊಡಿಸುತಿದ್ದಳು ದಿನವು ಪ್ರೇಮಸುಧೆ
ಸೂರ್ಯನತ್ತಲೆ ಸೂರ್ಯ ಕಾಂತಿ ಮೊಗವೆತ್ತಿ ತಿರುಗುವಂತೆ
ಆ ಹುಡುಗಿಯ ಮೋಹದಲ್ಲಿ ಅಪ್ಪನ ಮಾತ ನಾ ಮರೆತೆ.

ನಿಂಬೆಯ ಗಿಡದ ರೆಂಬೆ ರೆಂಬೆಯಲು ನೂರು ನೂರು ಮುಳ್ಳು
ಹುಡುಗಿಯ ಪ್ರೇಮದ ಮಾತುಗಳೆಲ್ಲ ಶುದ್ಧ ಕಪಟ ಸುಳ್ಳು
ಬೇರೊಬ್ಬನ ಕೊಬ್ಬಿಗೆ ಶಾಖವಾಗಿಹಳು ನನ್ನ ಹುಡುಗಿ ಇಂದು
ಅಪ್ಪನ ಕಿರುನಗೆ ರೇಗಿಸುತ್ತಿದೆ ಬುದ್ಧಿ ಬಂತೆ ಎಂದು.

                                - ಬಿ. ಆರ್. ಲಕ್ಷ್ಮಣರಾವ್

ಪೋರಿ ಪೋರ

ಚಿತ್ರ ಕೃಪೆ: weheartit.com
ಪೋರೀ ನೀನು, ನಾನು ಪೂರಾ
ಮಾರಿ ಕಣ್ಣಿಗೆ ಮರುಳರಾಗಿ
ನೆಚ್ಚಿ ಮೆಚ್ಚಿ ಕೂಡಿದ್ದೇವs
ಬೇರೆ ಇಲ್ಲಾ। ಇದ್ದಾರೆ ಶಿವನೆ ಬಲ್ಲಾ.

ಯಾಕ? ಏನು? ಎಲ್ಲಿಗಂತs
ನಾಕು ಮಾತು ಕೂಡಾ ನಾವು
ಒಬ್ಬರಿಗೊಬ್ಬರು ಆಗs
ಕೇಳಲಿಲ್ಲಾ। ಉತ್ತರಾ ಹೇಳಲಿಲ್ಲಾ

ಹೆಣ್ಣು ಮಣ್ಣು ಹಾsಳಂತs
ಬಣ್ಣ ಕಡೆಬಾಳದಂತs
ಬಾಳುವೀ ಸುಳ್ಳಾಟಂತs
ಹೆದರಲಿಲ್ಲಾ। ಯಾರೂ ಹೆದರಿಸಲಿಲ್ಲಾ

ಆಡಿದ್ದೊಂದs ನೋಡಿದ್ದೊಂದs
ಹೂಡಿದ್ದೊಂದs ಕೂಡಿದ್ದೊಂದs
ಬೇರೆ ಮಾತು ನನಗ ನಿನಗs
ಗೊತ್ತs ಇಲ್ಲಾ। ಗುಟ್ಟು ಶಿವನೆ ಬಲ್ಲಾ.

              - ದ ರಾ ಬೇಂದ್ರೆ
 ('ನಾದಲೀಲೆ' ಕವನ ಸಂಕಲನದಿಂದ)

ಕುರುಡ

ಕತ್ತಲೆಯು: ನಡುವಗಲ ಬೇಸಗೆಯ ನೇಸರಿರೆ
          ಬಯಲಲ್ಲಿ ಬೆಮರುತಿಹೆ! ಕಗ್ಗತ್ತಲೆನಗೆ!
ಕೋಗಿಲೆಯು ಕೂಗೆನಗೆ! ಬನಬೆಟ್ಟ ನುಡಿಯೆನಗೆ !
          ಸೌಂದರ್ಯವೆಂಬುದದು ಬರಿಯ ಸದ್ದೆನಗೆ !

ನನ್ನ ಭಿಕ್ಷಾಪಾತ್ರೆಗವನೆಸೆವ ಕಾಸುಗಳ
          ಸದ್ದೆನಗೆ ಮಾನವನ ಮಂಗಳಾಕಾರ !
ಬೆಳಕಿಲ್ಲ, ಕಪ್ಪಿಲ್ಲ; ಹಗಲಿರುಳು ನನಗಿಲ್ಲ;
          ನನ್ನಿನನು ಮೂಡಿಮುಳುಗವನೆನ್ನ ಕೂಡೆ!

ನರಜನ್ಮವತ್ಯಧಿಕವೆಂದೇಕೆ ಸಾರುತಿಹರು?
ಮಿಗಗಳಾನಂದವೆನಗಿಲ್ಲವೈ, ದೇವದೇವ !
ಕಣ್ಣಿರದ ಮಾನವನ ಜನ್ಮವೆನಗೇಕೆ, ದೇವ?
ಕಣ್ಣಿರುವ ಮಿಗತನದ ಬಾಳೆನಗೆ ಲೇಸು, ಲೇಸು!

                                                   - ಕುವೆಂಪು
                                ('ಹೊನ್ನ ಹೊತ್ತಾರೆ' ಕವನಸಂಕಲನದಿಂದ)

ಕುರಿಗಳು ಸಾರ್ ಕುರಿಗಳು

ಚಿತ್ರ ಕೃಪೆ:http://patterico.com/files/2011/04/Sheep_mouton.rebelle.jpg

ಕುರಿಗಳು ಸಾರ್ ಕುರಿಗಳು;
ಸಾಗಿದ್ದೇ
ಗುರಿಗಳು.
ಮಂದೆಯಲಿ ಒಂದಾಗಿ, ಸ್ವಂತತೆಯೆ ಬಂದಾಗಿ
ಇದರ ಬಾಲ ಅದು ಮತ್ತೆ ಅದರ ಬಾಲ ಇದು ಮೂಸಿ
ದನಿ ಕುಗ್ಗಿಸಿ, ತಲೆ ತಗ್ಗಿಸಿ
ಹುಡುಕಿ ಹುಲ್ಲು ಕಡ್ಡಿ ಮೇವು, ಅಂಡಲೆಯುವ ನಾವು ನೀವು -
ಕುರಿಗಳು ಸಾರ್ ಕುರಿಗಳು;
ನಮಗೊ ನೂರು ಗುರಿಗಳು.

ಎಡ ದಿಕ್ಕಿಗೆ ಬಲ ದಿಕ್ಕಿಗೆ, ಒಮ್ಮೆ ದಿಕ್ಕು ಪಾಲಾಗಿ,
ಒಮ್ಮೆ ಅದೂ ಕಳೆದುಕೊಂಡು ತಾಟಸ್ಥ್ಯದಿ ದಿಕ್ಕೆಟ್ಟು
ಹೇಗೆ ಹೇಗೊ ಏಗುತಿರುವ,
ಬರೀ ಕಿರುಚಿ ರೇಗುತಿರುವ,
ನೊಣ ಕೂತರೆ ಬಾಗುತಿರುವ,
ತಿನದಿದ್ದರು ತೇಗುತಿರುವ,
ಹಿಂದೆ ಬಂದರೊದೆಯದ, ಮುಂದೆ ಬಂದರೆ ಹಾಯದ
ಅವರು, ಇವರು ನಾವುಗಳು
ಕುರಿಗಳು ಸಾರ್ ಕುರಿಗಳು.

ಮಂದೆಯಲ್ಲಿ ಎಲ್ಲವೊಂದೆ ಆದಾಗಲೆ ಸ್ವರ್ಗ ಮುಂದೆ
ಅದಕಿಲ್ಲವೆ ನಾವುತ್ತರ?
ಮೆದುಳಿನಲ್ಲಿ ತಗ್ಗೆತ್ತರ,
ಹಿರಿದು, ಕಿರಿದು ಮಾಯಿಸಿ,
ಒಬ್ಬೊಬ್ಬರಿಗಿರುವ ಮೆದುಳ ಸ್ವಾರ್ಥದ ಉಪಯೋಗದಿಂದ
ಇಡಿ ಮಂದೆಗೆ ಹಾಯಿಸಿ,
ಹೊಟ್ಟೆಬಟ್ಟೆಗೊಗ್ಗದಂಥ ಕಲೆಯ ಕರ್ಮಕಿಳಿಯದಂತೆ
ತಲೆಬೆಲೆಯ ಸುಧಾರಿಸಿ,
ಬಿಳಿಕಪ್ಪಿನ ದ್ವಂದ್ವಗಳಿಗೆ ಮಾಡಿಸಿ ಸಮಜಾಯಿಷಿ;
ನಮ್ಮ ಮೆದುಳು ಶುದ್ಧಿಯಾಗಿ, ಬುದ್ಧಿ ನಿರ್ಬುದ್ಧಿಯಾಗಿ,
ಕೆಂಬಣ್ಣವನೊಂದೆ ಪೂಸಿ,
ಅದರ ಬಾಲ ಇದು ಮತ್ತೆ ಇದರ ಬಾಲ ಅದು ಮೂಸಿ
ನಡೆವ ನಮ್ಮೊಳೆಲ್ಲಿ ಬಿರುಕು?

ನಮ್ಮ ಕಾಯ್ವ ಕುರುಬರು:
ಪುಟಗೋಸಿಯ ಮೊನ್ನೆ ತಾನೆ ಕಿತ್ತು ಪಂಚೆಯುಟ್ಟವರು.
ಶಾನುಭೋಗ ಗೀಚಿದ್ದಕ್ಕೆ ಹೆಬ್ಬೆಟ್ಟನು ಒತ್ತುವವರು.
ಜಮಾಬಂದಿಗಮಲ್ದಾರ ಬರಲು, ನಮ್ಮೊಳೊಬ್ಬನನ್ನ
ಮೆಚ್ಚಿ, ಮಸೆದ ಮಚ್ಚಹಿರಿದು ಕಚಕ್ಕೆಂದು ಕೊಚ್ಚಿ ಕತ್ತ,
ಬಿರಿಯಾನಿಯ ಮೆಹರುಬಾನಿ ಮಾಡಿ ಕೈಯ ಜೋಡಿಸುತ್ತ
ಕಿಸೆಗೆ ಹಸಿರುನೋಟು ತುರುಕಿ, ನುಡಿಗೆ ಬೆಣ್ಣೆ ಹಚ್ಚುವವರು.
ಬಿಸಿಲಲ್ಲಿ ನಮ್ಮದೂಡಿ, ಮರದಡಿಯಲಿ ತಾವು ಕೂತು
ಮಾತು, ಮಾತು, ಮಾತು, ಮಾತು:
ಮಾತಿನ ಗೈರತ್ತಿನಲ್ಲೆ ಕರಾಮತ್ತು ನಡೆಸುವವರು.
ನಮ್ಮ ಮೈಯ ತುಪ್ಪಟವ ರವಷ್ಟು ಬಿಡದ ಹಾಗೆ ಸವರಿ
ಕಂಬಳಿಗಳ ನೇಯುವಂಥ ಯೋಜನೆಗಳ ಹಾಕುವವರು.
ಮಾರಮ್ಮನ ಮುಡಿಗೆ ಕೆಂಪು ದಾಸವಾಳ ಆಯುವವರು
ಬೆಟ್ಟಾ ದಾಟಿ ಕಿರುಬ ನುಗ್ಗು, ನಮ್ಮೊಳಿಬ್ಬರನ್ನ ಮುಗಿಸಿ,
ನಾವು 'ಬ್ಯಾ, ಬ್ಯಾ' ಎಂದು ಬಾಯಿ ಬಾಯಿ ಬಡಿದುಕೊಂಡು
ಬೊಬ್ಬೆ ಹಾಕುತಿದ್ದರೂ
ಚಕ್ಕಭಾರ ಆಟದಲ್ಲೆ ಮಗ್ನರು ಇವರೆಲ್ಲರು-
ನಮ್ಮ ಕಾಯ್ವ ಗೊಲ್ಲರು.

ದೊಡ್ಡಿಯಲ್ಲಿ ಕೂಡಿಹಾಕಿ ನಿಲ್ಲಲಿಲ್ಲ, ಕೂರಲಿಲ್ಲ,
ಎದ್ದರೆ ಸರಿದಾಡಲಿಲ್ಲ, ಬಿದ್ದರೆ ಹರಿದಾಡಲಿಲ್ಲ,
ದೀಪದ ದೌಲತ್ತು ಇಲ್ಲ,
ಗಾಳಿಯ ಗಮ್ಮತ್ತು ಇಲ್ಲ.
ಕಿಂಡಿಯಿಂದ ತೆವಳಿಬಂದ ಗಾಳಿಕೂಡ ನಮ್ಮದೇನೆ:
ನಮ್ಮ ಮಂದೆ ಕುರಿಯ ಸುಲಿದು, ಆಚೆ ಅಲ್ಲಿ ಉಪ್ಪುಸವರಿ
ಒಣಗಲಿಟ್ಟ ಹಸಿತೊಗಲಿನ ಬಿಸಿಬಿಸಿ ಹಬೆವಸನೆ
ಇರಿಯುತಿಹುದು ಮೂಗನೆ!
ಕೊಬ್ಬಿರುವೀ ಮಬ್ಬಿನಲ್ಲಿ, ಮೈನಾತದ ಗಬ್ಬಿನಲ್ಲಿ,
ಇದರ ಉಸಿರು ಅದು ಮತ್ತೆ ಅದರ ಉಸಿರು ಇದು ಮೂಸಿ
ಹೇಸಿದರು ನಿಭಾಯಿಸಿ,
ತಾಳ್ಮೆಯನೆ ದಬಾಯಿಸಿ,
ನಮ್ಮನಾವೆ ಅಂದುಕೊಂಡೊ, ಉಗುಳುನುಂಗಿ ನೊಂದುಕೊಡೊ,
ನಂಬಿಕೊಂಡು ಏಗುತಿರುವ ನಾವು, ನೀವು, ಇಡೀ ಹಿಂಡು
ಕುರಿಗಳು ಸಾರ್ ಕುರಿಗಳು.

ತಳವೂರಿದ ಕುರುಬ ಕಟುಕನಾದ; ಅವನ ಮಚ್ಚೊ ಆಹ!
ಏನು ಝಳಪು, ಏನು ಹೊಳಪು, ಏನು ಜಾದು, ಏನು ಮೋಹ!
ಆ ಹೊಳಪಿಗೆ ದಂಗಾಗಿ, ಕಣ್ಣಿಗದೇ ರಂಗಾಗಿ,
ಒಳಗೊಳಗೇ ಜಂಗಾಗಿ,
ಕಣ್ಣುಕುಕ್ಕಿ ಸೊಕ್ಕಿರುವ, ಹೋಗಿಹೋಗಿ ನೆಕ್ಕಿರುವ,
ಕತ್ತನದಕೆ ತಿಕ್ಕಿರುವ
ನಾವು, ನೀವು, ಅವರು, ಇವರು
ಕುರಿಗಳು ಸಾರ್ ಕುರಿಗಳು.

ಮಚ್ಚಿನ ಆ ಮೆಚ್ಚಿನಲ್ಲಿ, ಅದರಾಳಾದ ಕಿಚ್ಚಿನಲ್ಲಿ
ಮನೆಮಾಡಿವೆ ಹುಚ್ಚಿನಲ್ಲಿ
ನಮ್ಮೆಲ್ಲರ ಗುರಿಗಳು!
ಕುರಿಗಳು, ಸಾರ್, ಕುರಿಗಳು...

                                        - ಕೆ.ಎಸ್. ನಿಸಾರ್ ಅಹಮದ್
                          ( 'ನೆನೆದವರ ಮನದಲ್ಲಿ' ಕವನಸಂಕಲನದಿಂದ )