ಹೋಗುವೆನು ನಾ


ಹೋಗುವೆನು ನಾ ಹೋಗುವೆನು ನಾ ನನ್ನ ಒಲುಮೆಯ ಗೂಡಿಗೆ;
ಮಲೆಯ ನಾಡಿಗೆ, ಮಳೆಯ ಬೀಡಿಗೆ, ಸಿರಿಯ ಚೆಲುವಿನ ರೂಢಿಗೆ.
ಬೇಸರಾಗಿದೆ ಬಯಲು, ಹೋಗುವೆ ಮಲೆಯ ಕಣಿವೆಯ ಕಾಡಿಗೆ:
ಹಸುರು ಸೊಂಪಿನ ಬಿಸಿಲು ತಂಪಿನ ಗಾನದಿಂಪಿನ ಕಾಡಿಗೆ!

ಬೇಸರಾಗಿದೆ ಬಯಲು ಸೀಮೆಯ ಬೋಳು ಬಯಲಿನ ಬಾಳಿದು.
ಬಿಸಿಲು, ಬೇಸಗೆ, ಬೀಸುವುರಿಸೆಕೆ; ತಾಳಲಾರದ ಗೋಳಿದು!
ಹೋಗುವೆನು ನಾ ಹೋಗುವೆನು ನಾ ನನ್ನ ಒಲುಮೆಯ ಗೂಡಿಗೆ:
ಬಿಳಿಯ ತಿಂಗಳ ಸಿರಿ ಬನಂಗಳ ಮಲೆಯ ಮಂಗಳ ನಾಡಿಗೆ!

ಅಲ್ಲಿ ಇಂತಿರಬೇಕು, ಇಂತಿರಬಾರದೆಂಬುವುದಿಲ್ಲವೈ;
ಅಲ್ಲಿ ಹೊರೆ ಹೊಣೆಯಿಲ್ಲ; ಶಾಸ್ತ್ರದ ವಿಧಿ ನಿಷೇಧಗಳಿಲ್ಲವೈ;
ಜಾತಿಗೀತಿಯ ವೇದಭೇದದ ಕಟ್ಟುಕಟ್ಟಳೆ ನಿಲ್ಲದೈ:
ಅಲ್ಲಿ ಪ್ರೀತಿಯೆ ನೀತಿ; ಧರ್ಮಕೆ ಬೇರೆ ಭೀತಿಯೆ ಸಲ್ಲದೈ!

ಅಲ್ಲಿ ತೆರೆತೆರೆಯದ್ರಿಪಂಕ್ತಿಗಳೆಲ್ಲೆ ಕಾಣದೆ ಹಬ್ಬಿವೆ:
ನಿಬಿಡ ಕಾನನರಾಜಿ ಗಿರಿಗಳನಪ್ಪಿ ಸುತ್ತಲು ತಬ್ಬಿವೆ.
ದೆಸೆಯ ಬಸವನ ಹಿಣಿಲ ಹೋಲಿವೆ; ಮುಗಿಲ ಚುಂಬನಗೈದಿವೆ
ತುಂಗ ಶೃಂಗಗಳಲ್ಲಿ; ದಿಕ್ತಟದಲ್ಲಿ ಸೊಂಡಿಲ ನೆಯ್ದಿವೆ!

ರವಿಯ ರಶ್ಮಿಯ ಪ್ರಜ್ಞೆಯಿಲ್ಲದ ವಿಪಿನ ನಿರ್ಜನ ರಂಗಕೆ,
ಮುಗಿಲನಂಡಲೆಯುತ್ತ ನಿಂತಿಹ ಧೀರ ಪರ್ವತ ಶೃಂಗಕೆ,
ವನ ವಿಹಂಗಸ್ವನ ತರಂಗಿತ ಪವನ ಪಾವನ ಸಂಗಕೆ,
ಹೋಗುವೆನು ನಾ ಮಧುರ ಸುಂದರ ಶೈಲವನ ಲಲಿತಾಂಗಕೆ!

ಅಲ್ಲಿ ಇವೆ ಕಾಜಾಣ, ಕೋಗಿಲೆ, ತೇನೆ, ಗಿಳಿ, ಕಾಮಳ್ಳಿಯು;
ಕಂಪೆಸೆವ ಸೀತಾಳಿ, ಕೇದಗೆ, ಬಕುಳ, ಮಲ್ಲಿಗೆ ಬಳ್ಳಿಯು.
ನೀಲಿ ಬಾನಲಿ; ಹಸುರು ನೆಲದಲಿ; ಕಂಗಳೆರಡನೆ ಬಲ್ಲವು:
ಅಲ್ಲಿ ಸಗ್ಗವೆ ಸೂರೆ ಹೋಗಿದೆ; ನಂದನವೆ ನಾಡೆಲ್ಲವು!

ನೆಳಲುಗತ್ತಲೆ ತೀವಿದಡವಿಯ ಹೊದರು ಹಳುವಿನ ಸರಲಲಿ
ಹುಲಿಯ ಗರ್ಜನೆ, ಹಂದಿಯಾರ್ಭಟೆ; ಕಾಡುಕೋಳಿಯ ಚೀರುಲಿ:
ದೊಡ್ಡು, ಕಡ, ಮಿಗ, ಮುಸಿಯ, ಕೋಡಗ, ಎರಳೆ, ಸಾರಗ, ಬರ್ಕವು,
ಹಾವು, ಉಡ, ಕಣೆಹಂದಿ, ಚಿಪ್ಪಿನ ಹಂದಿ, ಮುಂಗುಸಿ, ಕುರ್ಕವು!

ಬರಿಯ ಹೆಸರುಗಳಲ್ಲ, ನನಗಿವು ಸಾಹಸಂಗಳ ಕಿಡಿಗಳು;
ಕಂಡು ಕೇಳಿದ ಕಥೆಯನೊಡಲೊಳಗಾಂತ ಮಂತ್ರದ ನುಡಿಗಳು!
ಮಗುವುತನದಿಂದಿಂದುವರೆಗಾ ಒಂದು ಹೆಸರಿನ ಚೀಲಕೆ
ಸೇರಿ ಅನುಭವ ನೂರು ಕಲ್ಪನೆ, ಬಡ್ಡಿ ಮೀರಿದೆ ಸಾಲಕೆ!

ಅಲ್ಲಿ ಮೊರೆಮೊರೆದುರುಳಿ ಬರುತಿಹ ತೊರೆಯ ತೀರದ ಹಸುರಲಿ
ಮೊಲವು ಗರುಕೆಯ ಮೇದು ಕುಳಿತಿರೆ, ಬಳಿಯ ದಡದೆಡೆ ಕೆಸರಲಿ
ಒಂಟಿಕಾಲಲಿ ನಿಂತು ಕುಕ್ಕನ ಹಕ್ಕಿ ಬೆಳ್ಳಗೆ ಮೆರೆವುದು:
ಆಹ ನೆನೆದರೆ ಸಾಕು, ನನ್ನೆದೆಯುಕ್ಕಿ ಮೈಯನೆ ಮರೆವುದು!

ಅಲ್ಲಿ ನಡುಹಗಲಲ್ಲಿ, ಮೌನದಿ ನಿದ್ದೆಗೈದಿರೆ ಬನಗಳು,
ಬಿಸಿಲ ಬೇಗೆಗೆ ಮನೆಯ ಸೇರಿರೆ ಗೆಯ್ದು ದಣಿದಿಹ ಜನಗಳು,
ತಳಿತ ಹೊಂಗೆಯ ಕರಿಯ ನೆಳಲಲಿ ಮಲಗಿ ಜೋಂಪಿಸೆ ದನಗಳು,
ಕೊಳಲನೂದುವನಾಹ ಗೋಪನು ನಲಿಯಲಾ ಮೃಗ ಮನಗಳೂ!

ಗಗನದೆತ್ತರಕೆತ್ತಿ ಕಬ್ಬಿಗನೆದೆಯನೆದ್ದಿವೆ ಗಿರಿಗಳು;
ಗಗನದಾಚೆಗೆ ಬೀಸಿ ಮನವನು ಬಹವು ಮೋಡದ ಕರಿಗಳು;
ತೇಲಿ ಮುಂದಕೆ ನುಗ್ಗಿ, ತಿರುತಿರುಗುಬ್ಬಿ ಭೀಮಾಕಾರದಿ
ತಿರೆಗೆ ಬಾನಿಗೆ ನಡುವೆ ಬಂದಪವಡಗೆ ನೀಲದ ನೀರಧಿ!

ಅಲ್ಲಿ ಮಂದಾನಿಲನು ತೆಕ್ಕನೆಯಹನು ಜಂಝಾವಾತನು;
ಧ್ಯಾನ ಮೌನದ ವಿಪಿನ ತಾನಹುದಬ್ಬರಿಪ ಪೆರ್ಭೂತನು.
ಲಲಿತ ರುದ್ರಗಳಲ್ಲಿ ಯಮಳರು: ಹೂವು ಮುಳ್ಳಿಗೆ ಆರತಿ;
ಮುಗಿಲನಿರಿಯುವ ಶಿಖರಕಾಳದ ಕಣಿವೆ ತಕ್ಕೆಯ ಪೆಂಡಿತಿ!

ಅಲ್ಲಿ ಕಾನನ ಮಧ್ಯೆ ತುಂಗೆಯು ಮುತ್ತನಿಡುವಳು ಕಣ್ಣಿಗೆ;
ದಡದೊಳಿಡಿದಿಹ ಬಿದಿರು ಮೆಳೆಗಳ ಹಸುರು ಚಾಮರ ತಣ್ಣಗೆ
ಬೀಸುಗಾಳಿಗೆ ಒಲೆಯೆ, ಭದ್ರೆಯು ತುಂಬಿ ಹರಿವಳು ನುಣ್ಣಗೆ:
ಮಲೆಯ ಬಿತ್ತರದೆದುರು ಹೊನಲುಗಳೆನಿತು ನೋಡದೊ ಸಣ್ಣಗೆ!

ಚೈತ್ರ ಸಂಧ್ಯೆಯ ಮೊಗಕೆ ಮೆತ್ತುತೆ ಮುಗಿಲಕೂದಲ ಮಸಿಯನು,
ಮುಡಿಗೆದರಿ, ಸಿಡಿಲೊದರಿ, ಝಳಪಿಸಿ ಮಿಂಚಿನುಜ್ವಲ ಅಸಿಯನು
ಬಾನ ಕರೆಯಿಂ ನುಗ್ಗಿಬಹ ಮುಂಗಾರ ಕರಿ ರಕ್ಕಸಿಯನು
ಕಾಣುತುರ್ವರೆ ನವಿರುನಿಮಿರುವಳೆಳೆಯ ಹಸುರಿನ ಸಸಿಯನು!

ಮೊದಲು ಹದಮಳೆ ತಿರೆಯ ತೊಯ್ಯಲು ಮಿಂದ ಕಾಫಿಯ ತೋಟವು
ಇಂದ್ರನಂದನದಮರ ವೃಂದಕು ಬೆರಗನೀಯುವ ನೋಟವು!
ಬೆಟ್ಟದೋರೆಯು, ಕಣಿವೆ, ತಪ್ಪಲು, ಗಿರಿಯ ನೆತ್ತಿಯೊಳೆಲ್ಲಿಯೂ
ಕಣ್ಣು ಹೋಹೆಡೆಯಲ್ಲಿ ಕಾಫಿಯ ಹೂವು: ಬೆಣ್ಣೆಯು, ಬೆಳ್ಳಿಯು!

ಗಗನದಭ್ರತೆ ಜಗದ ಶುಭ್ರತೆಯೆಲ್ಲ ಸುಂದರ ಶಾಪದಿ
ಕಾಫಿಕಾನಿಗೆ ಬಂದು ನಿಂದಿವೆ ಪುಷ್ಪಪುಣ್ಯದ ರೂಪದಿ!
ಕಣ್ಣು ತಣಿವುದು; ಮನವು ಮಣಿವುದು: ಹಾಲುಹೂವಿನ ಹೊಳೆಯಲಿ
ಅಮೃತಸ್ನಾನವೊ ಮೇಣು ಪಾನವೊ ಬಿಳಿಯ ಮುತ್ತಿನ ಮಳೆಯಲಿ!

ಹಾತೊರೆಯುತಿದೆ; ಕಾತರಿಸುತಿದೆ; ಮನಕೆ ಮನೆಗಿರ ಹಿಡಿದಿದೆ!
ನೆನಹಿನಲರಿನ ಬಂಡನಾತ್ಮದ ಭೃಂಗ ಹೊಡೆನಲಿ ಕುಡಿದಿದೆ!
ಹೋಗುವೆನು ನಾ ಹೋಗುವೆನು ನಾ ನನ್ನ ಒಲುಮೆಯ ಗೂಡಿಗೆ:
ಬಿಳಿಯ ತಿಂಗಳ ಸಿರಿ ಬನಂಗಳ ಮಲೆಯ ಮಂಗಳ ನಾಡಿಗೆ!

ಮೂಡು ಬಾನಿನ ಮೊಗದಿ ಮಲರಲು ಉಷೆಯ ನಸುನಗೆ ತಾವರೆ,
ತುಂಬಿ ತುಳುಕೆ ದಿಗಂತದತ್ತಣಿನರುಣ ಕಾಂತಿಯ ಹೊಂದೊರೆ,
ಕುಸುಮಧೂಳಿಯ ಕೆದರ್ವ ಗಾಳಿಯು ಬೀಸಿ ಪರಿದಿರೆ ಕಳ್ತಲೆ,
ಏರುವೆನು ನಾ ನವಿಲುಕಲ್ಲಿಗೆ ನೇಸರುದಯವನಿದಿರ್ಗೊಳೆ!

ಸಂಜೆ ಕುಂಕುಮರಂಗಿನೋಕುಳಿಯೆರಚುತಿಳಿತರೆ ಬನದಲಿ,
ಗೂಡಿಗೋಡುವ ಹಕ್ಕಿಯಿಂಚರ ನೆಯ್ಯೆ ನಾಕವ ಮನದಲಿ,
ಹಾದಿಯಲಿ ಹೊಂಧೂಳಿಯೆಬ್ಬಿಸಿ ಗೋಗಳೈತರೆ ಹಟ್ಟಿಗೆ,
ಕಾನನದ ಕವಿಶೈಲಕೇರುವೆ, ಮನೆಯ ಮೇಲಕೆ ನೆಟ್ಟಗೆ!

ಗಾಳಿ ಸುಯ್ಯನೆ ಬೀಸಿ ಮರಗಳ ತೂಗುತುಯ್ಯಲೆಯಾಡಲು,
ಶೈಲಶೈಲಿಯ ಮೈಲಿಮೈಲಿಯ ದೂರ ದಿನಮಣಿ ಬಾಡಲು,
ಬೇಟೆಗಾರನನಡವಿಯಿಂ ಮನೆಗೆಳೆವ ಬೆಳ್ಳಿಯು ಮೂಡಲು
ಸಂಜೆಗಿರಿಯಾ ಶೃಂಗಕೇರುವೆ ದಿವ್ಯದೃಶ್ಯವ ನೋಡಲು!

ಎಲ್ಲಿ ತಿಂಗಳು ಕಾಡುಮಲೆಗಳ ಮೇಲೆ ಹಾಲ್ಮಳೆ ಸುರಿವುದೋ,
ಕಿವಿಯ ಜಿಹ್ವೆಗೆ ಎಲ್ಲಿ ಜೊನ್ನುಣಿ ತೇನೆ ಜೇನ್ಮಳೆ ಕರೆವುದೋ,
ಎಲ್ಲಿ ಕದ್ದಿಂಗಳಲಿ ತಾರಾಕೋಟಿ ಕಿಡಿಕಿಕ್ಕಿರಿವುದೋ,
ಕಾರಿನಿರುಳಲಿ ಮಿಂಚುಹುಳುಗಳ ಸೇನೆ ಕತ್ತಲೆಗಿರಿವುದೋ,

ಎಲ್ಲಿ ಹಸುರನು ಚಿಮ್ಮಿ ಕಣ್ಣಿಗೆ ಪೈರುಪಚ್ಚೆಯು ಬೆಳೆವುದೋ,
ಎಲ್ಲಿ ಗದ್ದೆಯ ಕೋಗು ಪವನನ ಹತಿಗೆ ತೆರೆತೆರೆಯೊಲೆವುದೋ,
ಬಿಂಗಗಣ್ಗಳ ಮಲೆಯ ಹೆಣ್ಗಳ ದಿಟ್ಟಿಯೆಲ್ಲೆದೆ ಸೆಳೆವುದೋ,
ಎಲ್ಲಿ ಕಾಲವು ತೇಲಿ ಸುಖದಲಿ ತಿಳಿಯದಂತೆಯೆ ಕಳೆವುದೋ,

ಅಲ್ಲಿಗೈದುವೆನಲ್ಲಿಗೈದುವೆನಿಲ್ಲಿ ಬೇಸರವಾಗಿದೆ:
ಕಾಡುಮಲೆಗಳನಲೆವ ಹುಚ್ಚಿನ ಕಿಚ್ಚು ಹೃದಯದಿ ರೇಗಿದೆ!
ಹೋಗುವೆನು ನಾ ಹೋಗುವೆನು ನಾ ನನ್ನ ಒಲುಮೆಯ ಗೂಡಿಗೆ:
ಹಸುರು ಸೊಂಪಿನ ಬಿಸಿಲು ತಂಪಿನ ಗಾನದಿಂಪಿನ ಕೂಡಿಗೆ!

ಅಲ್ಲಿ ಭಾವದ ಬೆಂಕಿಹಕ್ಕಿಯ ಮಿಂಚುರೆಕ್ಕೆಯನೇರುವೆ:
ಧರಣಿ, ದಿನಮಣಿ, ತಾರೆ, ನೀಹಾರಿಕೆಯ ನೇಮಿಯ ಮೀರುವೆ!
ಕಾಲದಾಚೆಗೆ, ದೇಶದಾಚೆಗೆ, ಚಿಂತೆಯಾಚೆಗೆ ಹಾರುವೆ:
ಕಾವ್ಯಕನ್ಯಾ ಶ್ರಾವ್ಯಕಂಠದೊಳಾತ್ಮಭೂತಿಯ ಸಾರುವೆ!

ನಗರ ನಾಗರಿಕತೆಯ ಗಲಿಬಿಲಿ ಅಲ್ಲಿ ಸೋಂಕದು, ಸುಳಿಯದು.
ದೇಶದೇಶದ ವೈರಯುದ್ಧದ ಸುದ್ದಿಯೊಂದೂ ತಿಳಿಯದು.
‘ತಿಳಿಯದಿರುವುದೆ ತಿಳಿವು’ ಎಂಬುವ ನನ್ನಿ ಆಯೆಡೆ ತಿಳಿವುದು.
‘ತಿಳಿಯೆ ನೋವಿರೆ, ತಿಳಿಯದಿರುವುದೆ ಜಾಣ್ಮೆ’ ಎಂಬರಿವುಳಿವುದು!

ಹೋಗುವೆನು ನಾ ಹೋಗುವೆನು ನಾ ನನ್ನ ಒಲುಮೆಯ ಗೂಡಿಗೆ:
ಮಲೆಯನಾಡಿಗೆ, ಮಳೆಯ ಬೀಡಿಗೆ, ಸಿರಿಯ ಚೆಲುವಿನ ರೂಢಿಗೆ.
ಬೇಸರಾಗಿದೆ ಬಯಲು, ಹೋಗುವೆ ಮಲೆಯ ಕಣಿವೆಯ ಕಾಡಿಗೆ:
ಹಸುರು ಸೊಂಪಿನ ಬಿಸಿಲು ತಂಪಿನ ಗಾನದಿಂಪಿನ ಕೂಡಿಗೆ!

                                                         - ಕುವೆಂಪು
                                   ('ಪಕ್ಷಿಕಾಶಿ' ಕವನ ಸಂಕಲನದಿಂದ)

2 ಕಾಮೆಂಟ್‌ಗಳು:

ನಿಮ್ಮ ಉನ್ಮಾದದ ನಶೆ ನಮ್ಮೊಂದಿಗಿಷ್ಟು ಹಂಚಿಕೊಳ್ರಿ....