ನಿನ್ನ ಪ್ರೀತಿಗೆ, ಅದರ ರೀತಿಗೆ
ಕಣ್ಣ ಹನಿಗಳೆ ಕಾಣಿಕೆ ?
ಹೊನ್ನ ಚಂದಿರ, ನೀಲಿ ತಾರಗೆ
ಹೊಂದಲಾರದ ಹೋಲಿಕೆ.
ನಿನ್ನ ಪ್ರೀತಿಗೆ, ಅದರ ರೀತಿಗೆ
ಚೆಲುವು ಕನಸಿನ ಜವನಿಕೆ ;
ಬೆಳ್ಳಿನಿದ್ದೆಯ ತುಟಿಗಳಂಚಿಗೆ
ಸುಳಿದ ಕಿರುನಗೆ ತೋರಿಕೆ.
ತುಂಬಿ ಕೊರೆದಿಹ ಹೂವಿನೆದೆಯಲಿ
ನೋವು ಗಾಳಿಗೆ ಹಾಸಿಗೆ ;
ಜೇನು ಜೀವದ ನೆಳಲ ಪೊದೆಯಲಿ
ಗೂಡುಕಟ್ಟಿದೆ ಆಸೆಗೆ.
ತಂತಿಯಾಚೆಗೆ ವೀಣೆ ಮಿಂಚಿದೆ
ಬೆಂಕಿಬೆರಳಿನ ಹಾಡಿಗೆ ;
ನಿಟ್ಟುಸಿರ ಪಲ್ಲವಿ ಬೇಲಿಯಾಗಿದೆ
ಚಿಂತೆಯಾಳುವ ಕಾಡಿಗೆ.
ನಗುವ ಮುಖಗಳ ನೋಡಿಬಂದೆನು
ಹಾದಿ ಬೀದಿಯ ಕೆಲದಲಿ ;
ನಗದ ಒಂದೇ ಮುಖವ ಕಂಡೆನು
ನನ್ನ ಮನೆಯಂಗಳದಲಿ.
ನೂರು ಕನ್ನಡಿಗಳಲಿ ಕಂಡೆನು
ನೋಡಬಾರದ ಮುಖವನು ;
ಇಳಿದ ಮುಖದಿಂಗಿತವನರಿತೆನು
ಅಸುಖ ಮುದ್ರಿತ ಸುಖವನು.
ನಗದ ಮುಖದಲಿ ನಿನ್ನ ಕಂಡೆನು
ತಿಳಿದ ಬಾನಿನ ಹರಹನು,
ಮೊದಲ ಮೋಹದ ಮಂಜು ಕದಲಲು
ಬದುಕು ತುಂಬಿದ ಹಗಲನು.
ನಿನ್ನ ಪ್ರೀತಿಗೆ, ಅದರ ರೀತಿಗೆ
ನೀಡಬಲ್ಲೆನೆ ಕಾಣಿಕೆ ?
ಕಾಲವಳಿಸದ ನೆಲದ ಚೆಲುವಿಗೆ
ನಿನ್ನ ಪ್ರೀತಿಯೆ ಹೋಲಿಕೆ.
- ಕೆ ಎಸ್ ನರಸಿಂಹಸ್ವಾಮಿ
('ಮನೆಯಿಂದ ಮನೆಗೆ' ಕವನ ಸಂಕಲನದಿಂದ)