ಕೋಗಿಲೆ ಮತ್ತು ಸೋವಿಯತ್ ರಷ್ಯ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಕೋಗಿಲೆ ಮತ್ತು ಸೋವಿಯತ್ ರಷ್ಯ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ನಾನು ಕವಿಯಲ್ಲ


ನನ್ನ ಕೃತಿ ಕಲೆಯಲ್ಲ;
ನಾನು ಕವಿಯಲ್ಲ.
ಕಲೆಗಾಗಿ ಕಲೆಯೆಂಬ 
ಹೊಳ್ಳು ನೆಲೆಯಿಲ್ಲ.

ಮೆಚ್ಚುಗೆಯೆ ನನಗೆ ಕೊಲೆ;
ಬದುಕುವುದೆ ನನಗೆ ಬೆಲೆ.
ಸಾಧನೆಯ ಛಾಯೆ ಕಲೆ;
ವಿಶ್ವಾತ್ಮವದಕೆ ನೆಲೆ.
ನಿನಗದು ಚಮತ್ಕಾರ;
ನನಗೊ ಸಾಕ್ಷಾತ್ಕಾರ!
ಮೌನದಿಂದನುಭವಿಸು:
           ಕೋ ನಮಸ್ಕಾರ!
ಕಲೆಯೆಂದು ಹೊಗಳುವೊಡೆ:
           ಕೋಟಿ ಧಿಕ್ಕಾರ!
                                - ಕುವೆಂಪು 
   ( 'ಕೋಗಿಲೆ ಮತ್ತು ಸೋವಿಯತ್ ರಷ್ಯ' ಕವನಸಂಕಲನದಿಂದ )

ಯಾವ ಕಾಲದ ಶಾಸ್ತ್ರವೇನು ಹೇಳಿದರೇನು ?


ಯಾವ  ಕಾಲದ  ಶಾಸ್ತ್ರವೇನು ಹೇಳಿದರೇನು ?
ಎದೆಯ  ದನಿಗೂ  ಮಿಗಿಲು  ಶಾಸ್ತ್ರವಿಹುದೇನು ?
ಎಂದೋ  ಮನು  ಬರೆದಿಟ್ಟುದಿಂದೆಮಗೆ  ಕಟ್ಟೇನು ?
ನಿನ್ನೆದೆಯ  ದನಿಯೆ ಋಷಿ ! ಮನು ನಿನಗೆ ನೀನು !

ನೀರಡಿಸಿ ಬಂದ  ಸೋದರಗೆ ನೀರನು ಕೊಡಲು 
ಮನುಧರ್ಮಶಾಸ್ತ್ರವೆನಗೊರೆಯಬೇಕೇನು ?
ನೊಂದವರ  ಕಂಬನಿಯನೊರಸಿ  ಸಂತೈಸುವೊಡೆ 
ಶಾಸ್ತ್ರ  ಪ್ರಮಾಣವದಕಿರಲೆ  ಬೇಕೇನು ?

ಪಂಚಮರ  ಶಿಶುವೊಂದು  ಕೆರೆಯಲ್ಲಿ  ಮುಳುಗುತಿರೆ 
ದಡದಲ್ಲಿ  ಮಿಯುತ್ತ  ನಿಂತಿರುವ  ನಾನು 
ಮುಟ್ಟಿದರೆ  ಬ್ರಹ್ಮತ್ವ   ಕೆಟ್ಟುಹೋಗುವುದೆಂದು 
ಸುಮ್ಮನಿದ್ದರೆ  ಶಾಸ್ತ್ರಸಮ್ಮತವದೇನು?

ಅಂತು  ಮನು  ತಾನು  ಹೆಲಿರಲಾರನಯ್ಯಯ್ಯೊ!
ಹೇಳಿದ್ದರವನನೂ ಶಾಸ್ತ್ರದೊಳೆ  ಸುತ್ತಿ,
ಸ್ವರ್ಗ  ಹೋಗಲಿ, ಮತ್ತೆ ನರಕ  ಬಂದರು ಬರಲಿ,
ಎದೆಯ  ಧೈರ್ಯವ  ಮಾಡಿ ಬಿಸುಡಾಚೆಗೆತ್ತಿ!

ಸ್ವರ್ಗ  ಹೋಗುವುದಿಲ್ಲ, ನರಕ  ಬರುವುದು ಇಲ್ಲ;
ಸ್ವರ್ಗ  ನರಕಗಳೇನು  ಶಾಸ್ತ್ರಸ್ಥವಲ್ಲ .
ಎದೆಯ  ದನಿ  ಧರ್ಮನಿಧಿ ! ಕರ್ತವ್ಯವದುವೆ  ವಿಧಿ !
ನಂಬದನು; ಅದನುಳಿದು  ಋಷಿಯು  ಬೇರಿಲ್ಲ!

ಹಿಂದಿನಾ  ಋಷಿಗಳೂ  ಮಾನವರೆ  ನಮ್ಮಂತೆ,
ಅವರ  ಶಾಸ್ತ್ರವು  ಅವರ  ಕಾಲಕ್ಕೆ  ಮಾತ್ರ;
ಕಾಲಕ್ಕೆ  ತಕ್ಕಂತೆ, ದೇಶಕ್ಕೆ  ತಕ್ಕಂತೆ,
ನಮ್ಮ  ಹೃದಯವೆ  ನಮೆಗೆ  ಶ್ರೀಧರ್ಮಸೂತ್ರ  !


                                                 - ಕುವೆಂಪು 
                 ( 'ಕೋಗಿಲೆ  ಮತ್ತು  ಸೋವಿಯಟ್  ರಷ್ಯ' ಕವನಸಂಕಲನದಿಂದ )

ದೇವರು ಸೆರೆಯಾಳ್


ದೇವರು ಸೆರೆಯಾಳ್, ದೇಗುಲ ಸೆರೆಮನೆ,
     ಕಾವಲು ಪೂಜಾರಿ!

ನೀನಾವಾಗಲು ನನ್ನಯ ಬಳಿಯಿರೆ
       ಬಲು ತೊಂದರೆ ಎಂದು
ಗಿರಿಶಿಕರದೊಳತಿದೂರದಿ ಕಟ್ಟಿದೆ
       ಗುಡಿಯನು ನಿನಗೊಂದು;
ಕಲ್ಲಿನ ಗೋಪುರ, ಕಲ್ಲಿನ ಗೋಡೆ,
ದುರ್ಗದವೊಲೆ ಬಲು ದುರ್ಗಮ ನೋಡೆ!

ಸೆರೆಯನು ತಪ್ಪಿಸಿ ಕೊಳ್ಳದ ತೆರದಲಿ
      ಅರ್ಚಕ ರಕ್ಷೆಯಿದೆ;
ತೆಂಗಿನ ಕಾಯೊಳೆ ತಲೆಯನು ಬಡಿಯುವ
       ಪೂಜೆಯ ಶಿಕ್ಷೆಯಿದೆ!
ಪುರಸತ್ತಾದರೆ ಕೆಲಸದೊಳಿಲ್ಲಿ
ಬೇಸರ ಪರಿಹಾರಕೆ ಬಹೆನಲ್ಲಿ!  
                     
                      - ಕುವೆಂಪು
('ಕೋಗಿಲೆ ಮತ್ತು ಸೋವಿಯತ್ ರಷ್ಯ' ಕವನ ಸಂಕಲನದಿಂದ)

ವರಕವಿಯ ಪಂಥ


ಕೋಗಿಲೆಯ ಕಂಠಕ್ಕೆ ಸ್ವರ್ಣಪದಕವ ತೊಡಿಸಿ
     ನೇಣು ಬಿಗಿಯುವುದೇಕೆ ಬಹುಮಾನವೆಂದು?
ಹಾರ ಭಾರಕೆ ಗೋಣು ಕುಸಿದು ಕುಗ್ಗಲು, ಗಾನ
     ಕೊರಗಿ ಕರ್ಕಶವಾಗಿ ನರಳುವುದು ನೊಂದು!
ಬಿರುದು ಬಾವಲಿ ಹೆಚ್ಚೆ? ಹೆಸರು ಹೊಗಳಿಕೆ ಹೆಚ್ಚೆ?
     ಪಿಕವರಗೆ ಶಿವ ಕೊಟ್ಟ ಸವಿಗೊರಲಿಗಿಂತ?
ಕೇಳಿ ಸವಿದೆಯ? ಸಾಕು, ಅದೆ ಪರಮ ಬಹುಮಾನ!
     ದಿವ್ಯ ನಿರ್ಲಕ್ಷತೆಯೆ ವರಕವಿಯ ಪಂಥ!

                                   - ಕುವೆಂಪು
  ('ಕೋಗಿಲೆ ಮತ್ತು ಸೋವಿಯತ್ ರಷ್ಯ' ಕವನ ಸಂಕಲನದಿಂದ)

ರೈತನ ದೃಷ್ಟಿ


ಕರಿಯರದೊ ಬಿಳಿಯರದೊ ಯಾರದಾದರೆ ಏನು?
     ಸಾಮ್ರಾಜ್ಯವಾವಗಂ ಸುಲಿಗೆ ರೈತರಿಗೆ !
ವಿಜಯನಗರವೊ? ಮೊಗಲರಾಳ್ವಿಕೆಯೊ? ಇಂಗ್ಲಿಷರೊ?
     ಎಲ್ಲರೂ ಜಿಗಣೆಗಳೆ  ನನ್ನ ನೆತ್ತರಿಗೆ!
ಕತ್ತಿ ಪರದೀಶಿಯಾದರೆ ಮಾತ್ರ ನೋವೆ?
ನಮ್ಮವರೇ ಹದಹಾಕಿ ತಿವಿದರದು ಹೂವೆ?

ಸೋಮಾರಿಗಳಿಗೆ ಸುಖಿಗಳಿಗೆ ರಸಿಕರಿಗಲ್ತೆ
     ಸಾಮ್ರಾಜ್ಯವೆಂಬುದದು ಕಾಮಧೇನು?
ನೃಪ ಎಂಬ ಹೆಸರೊಡನೆ ಮುಡಿಯೊಂದನಾಂತೊಡನೆ  
     ಕಳ್ಳರೊಡೆಯನು ಕೃಪೆಯ ಮೂರ್ತಿಯೇನು?
ತಿಂದುಂಡು ಮೆರೆವವರ ಮೆರವಣಿಗೆಗಾನು
ಬಾಯ್ದೆರೆದು ನೋಳ್ಪ ಬೆಪ್ಪಾಗಬೇಕೇನು?

ಹರಕೆ ಯಾರದೋ? ಹಬ್ಬವಾರಿಗೋ? ಅದಾವಗಂ
     ಸಾಮ್ರಾಜ್ಯಕಾಳಿಗಾನಲ್ತೆ ಕುರಿ ಕೊಲೆಗೆ? 
 ಕುಯ್ಗುರಿಯನೆಂತಂತೆ ಸಾವು ಬದುಕಿನ ನಡುವೆ
     ಕರುಣೆ ಗರಗಸದಿಂದೆ ಸೀಳುವರು ಬೆಲೆಗೆ.
ಸಾಕೆನಗೆ, ಸಾಕಯ್ಯ, ಸಾಮ್ರಾಜ್ಯ ಪೂಜೆ;
ಸಿಡಿಮದ್ದಿನಕ್ಷತೆಗೆ ಗುಂಡು ಚರೆ ಲಾಜೆ!

ನೇಗಿಲಿನ ಮೇಲಾಣೆ! ಬಸವಗಳ ಮೇಲಾಣೆ!
     ನೆತ್ತರಿಲ್ಲದೆ ಸುಕ್ಕಿ ಸೊರಗಿದೆನ್ನಾಣೆ!
ಸಾಮ್ರಾಜ್ಯ ಶೂರ್ಪನಖಿ ಮೋಹಿನಿಯ ರೂಪಕ್ಕೆ
     ಮರುಳಾಗೆನೆಂದಿಗೂ, ಸೀತೆ ಮೇಲಾಣೆ!
ಬಡತನದ ಗೊಬ್ಬರವನನುದಿನಂ ಹೀರಿ
ಹಿಡಿಸದೋ ಸಾಮ್ರಾಜ್ಯ ಸಿರಿಯ ಕಸ್ತೂರಿ!

                          - ಕುವೆಂಪು
 ('ಕೋಗಿಲೆ ಮತ್ತು ಸೋವಿಯತ್ ರಷ್ಯ' ಕವನ ಸಂಕಲನದಿಂದ)