ಕುರುಡ

ಕತ್ತಲೆಯು: ನಡುವಗಲ ಬೇಸಗೆಯ ನೇಸರಿರೆ
          ಬಯಲಲ್ಲಿ ಬೆಮರುತಿಹೆ! ಕಗ್ಗತ್ತಲೆನಗೆ!
ಕೋಗಿಲೆಯು ಕೂಗೆನಗೆ! ಬನಬೆಟ್ಟ ನುಡಿಯೆನಗೆ !
          ಸೌಂದರ್ಯವೆಂಬುದದು ಬರಿಯ ಸದ್ದೆನಗೆ !

ನನ್ನ ಭಿಕ್ಷಾಪಾತ್ರೆಗವನೆಸೆವ ಕಾಸುಗಳ
          ಸದ್ದೆನಗೆ ಮಾನವನ ಮಂಗಳಾಕಾರ !
ಬೆಳಕಿಲ್ಲ, ಕಪ್ಪಿಲ್ಲ; ಹಗಲಿರುಳು ನನಗಿಲ್ಲ;
          ನನ್ನಿನನು ಮೂಡಿಮುಳುಗವನೆನ್ನ ಕೂಡೆ!

ನರಜನ್ಮವತ್ಯಧಿಕವೆಂದೇಕೆ ಸಾರುತಿಹರು?
ಮಿಗಗಳಾನಂದವೆನಗಿಲ್ಲವೈ, ದೇವದೇವ !
ಕಣ್ಣಿರದ ಮಾನವನ ಜನ್ಮವೆನಗೇಕೆ, ದೇವ?
ಕಣ್ಣಿರುವ ಮಿಗತನದ ಬಾಳೆನಗೆ ಲೇಸು, ಲೇಸು!

                                                   - ಕುವೆಂಪು
                                ('ಹೊನ್ನ ಹೊತ್ತಾರೆ' ಕವನಸಂಕಲನದಿಂದ)

ಕುರಿಗಳು ಸಾರ್ ಕುರಿಗಳು

ಚಿತ್ರ ಕೃಪೆ:http://patterico.com/files/2011/04/Sheep_mouton.rebelle.jpg

ಕುರಿಗಳು ಸಾರ್ ಕುರಿಗಳು;
ಸಾಗಿದ್ದೇ
ಗುರಿಗಳು.
ಮಂದೆಯಲಿ ಒಂದಾಗಿ, ಸ್ವಂತತೆಯೆ ಬಂದಾಗಿ
ಇದರ ಬಾಲ ಅದು ಮತ್ತೆ ಅದರ ಬಾಲ ಇದು ಮೂಸಿ
ದನಿ ಕುಗ್ಗಿಸಿ, ತಲೆ ತಗ್ಗಿಸಿ
ಹುಡುಕಿ ಹುಲ್ಲು ಕಡ್ಡಿ ಮೇವು, ಅಂಡಲೆಯುವ ನಾವು ನೀವು -
ಕುರಿಗಳು ಸಾರ್ ಕುರಿಗಳು;
ನಮಗೊ ನೂರು ಗುರಿಗಳು.

ಎಡ ದಿಕ್ಕಿಗೆ ಬಲ ದಿಕ್ಕಿಗೆ, ಒಮ್ಮೆ ದಿಕ್ಕು ಪಾಲಾಗಿ,
ಒಮ್ಮೆ ಅದೂ ಕಳೆದುಕೊಂಡು ತಾಟಸ್ಥ್ಯದಿ ದಿಕ್ಕೆಟ್ಟು
ಹೇಗೆ ಹೇಗೊ ಏಗುತಿರುವ,
ಬರೀ ಕಿರುಚಿ ರೇಗುತಿರುವ,
ನೊಣ ಕೂತರೆ ಬಾಗುತಿರುವ,
ತಿನದಿದ್ದರು ತೇಗುತಿರುವ,
ಹಿಂದೆ ಬಂದರೊದೆಯದ, ಮುಂದೆ ಬಂದರೆ ಹಾಯದ
ಅವರು, ಇವರು ನಾವುಗಳು
ಕುರಿಗಳು ಸಾರ್ ಕುರಿಗಳು.

ಮಂದೆಯಲ್ಲಿ ಎಲ್ಲವೊಂದೆ ಆದಾಗಲೆ ಸ್ವರ್ಗ ಮುಂದೆ
ಅದಕಿಲ್ಲವೆ ನಾವುತ್ತರ?
ಮೆದುಳಿನಲ್ಲಿ ತಗ್ಗೆತ್ತರ,
ಹಿರಿದು, ಕಿರಿದು ಮಾಯಿಸಿ,
ಒಬ್ಬೊಬ್ಬರಿಗಿರುವ ಮೆದುಳ ಸ್ವಾರ್ಥದ ಉಪಯೋಗದಿಂದ
ಇಡಿ ಮಂದೆಗೆ ಹಾಯಿಸಿ,
ಹೊಟ್ಟೆಬಟ್ಟೆಗೊಗ್ಗದಂಥ ಕಲೆಯ ಕರ್ಮಕಿಳಿಯದಂತೆ
ತಲೆಬೆಲೆಯ ಸುಧಾರಿಸಿ,
ಬಿಳಿಕಪ್ಪಿನ ದ್ವಂದ್ವಗಳಿಗೆ ಮಾಡಿಸಿ ಸಮಜಾಯಿಷಿ;
ನಮ್ಮ ಮೆದುಳು ಶುದ್ಧಿಯಾಗಿ, ಬುದ್ಧಿ ನಿರ್ಬುದ್ಧಿಯಾಗಿ,
ಕೆಂಬಣ್ಣವನೊಂದೆ ಪೂಸಿ,
ಅದರ ಬಾಲ ಇದು ಮತ್ತೆ ಇದರ ಬಾಲ ಅದು ಮೂಸಿ
ನಡೆವ ನಮ್ಮೊಳೆಲ್ಲಿ ಬಿರುಕು?

ನಮ್ಮ ಕಾಯ್ವ ಕುರುಬರು:
ಪುಟಗೋಸಿಯ ಮೊನ್ನೆ ತಾನೆ ಕಿತ್ತು ಪಂಚೆಯುಟ್ಟವರು.
ಶಾನುಭೋಗ ಗೀಚಿದ್ದಕ್ಕೆ ಹೆಬ್ಬೆಟ್ಟನು ಒತ್ತುವವರು.
ಜಮಾಬಂದಿಗಮಲ್ದಾರ ಬರಲು, ನಮ್ಮೊಳೊಬ್ಬನನ್ನ
ಮೆಚ್ಚಿ, ಮಸೆದ ಮಚ್ಚಹಿರಿದು ಕಚಕ್ಕೆಂದು ಕೊಚ್ಚಿ ಕತ್ತ,
ಬಿರಿಯಾನಿಯ ಮೆಹರುಬಾನಿ ಮಾಡಿ ಕೈಯ ಜೋಡಿಸುತ್ತ
ಕಿಸೆಗೆ ಹಸಿರುನೋಟು ತುರುಕಿ, ನುಡಿಗೆ ಬೆಣ್ಣೆ ಹಚ್ಚುವವರು.
ಬಿಸಿಲಲ್ಲಿ ನಮ್ಮದೂಡಿ, ಮರದಡಿಯಲಿ ತಾವು ಕೂತು
ಮಾತು, ಮಾತು, ಮಾತು, ಮಾತು:
ಮಾತಿನ ಗೈರತ್ತಿನಲ್ಲೆ ಕರಾಮತ್ತು ನಡೆಸುವವರು.
ನಮ್ಮ ಮೈಯ ತುಪ್ಪಟವ ರವಷ್ಟು ಬಿಡದ ಹಾಗೆ ಸವರಿ
ಕಂಬಳಿಗಳ ನೇಯುವಂಥ ಯೋಜನೆಗಳ ಹಾಕುವವರು.
ಮಾರಮ್ಮನ ಮುಡಿಗೆ ಕೆಂಪು ದಾಸವಾಳ ಆಯುವವರು
ಬೆಟ್ಟಾ ದಾಟಿ ಕಿರುಬ ನುಗ್ಗು, ನಮ್ಮೊಳಿಬ್ಬರನ್ನ ಮುಗಿಸಿ,
ನಾವು 'ಬ್ಯಾ, ಬ್ಯಾ' ಎಂದು ಬಾಯಿ ಬಾಯಿ ಬಡಿದುಕೊಂಡು
ಬೊಬ್ಬೆ ಹಾಕುತಿದ್ದರೂ
ಚಕ್ಕಭಾರ ಆಟದಲ್ಲೆ ಮಗ್ನರು ಇವರೆಲ್ಲರು-
ನಮ್ಮ ಕಾಯ್ವ ಗೊಲ್ಲರು.

ದೊಡ್ಡಿಯಲ್ಲಿ ಕೂಡಿಹಾಕಿ ನಿಲ್ಲಲಿಲ್ಲ, ಕೂರಲಿಲ್ಲ,
ಎದ್ದರೆ ಸರಿದಾಡಲಿಲ್ಲ, ಬಿದ್ದರೆ ಹರಿದಾಡಲಿಲ್ಲ,
ದೀಪದ ದೌಲತ್ತು ಇಲ್ಲ,
ಗಾಳಿಯ ಗಮ್ಮತ್ತು ಇಲ್ಲ.
ಕಿಂಡಿಯಿಂದ ತೆವಳಿಬಂದ ಗಾಳಿಕೂಡ ನಮ್ಮದೇನೆ:
ನಮ್ಮ ಮಂದೆ ಕುರಿಯ ಸುಲಿದು, ಆಚೆ ಅಲ್ಲಿ ಉಪ್ಪುಸವರಿ
ಒಣಗಲಿಟ್ಟ ಹಸಿತೊಗಲಿನ ಬಿಸಿಬಿಸಿ ಹಬೆವಸನೆ
ಇರಿಯುತಿಹುದು ಮೂಗನೆ!
ಕೊಬ್ಬಿರುವೀ ಮಬ್ಬಿನಲ್ಲಿ, ಮೈನಾತದ ಗಬ್ಬಿನಲ್ಲಿ,
ಇದರ ಉಸಿರು ಅದು ಮತ್ತೆ ಅದರ ಉಸಿರು ಇದು ಮೂಸಿ
ಹೇಸಿದರು ನಿಭಾಯಿಸಿ,
ತಾಳ್ಮೆಯನೆ ದಬಾಯಿಸಿ,
ನಮ್ಮನಾವೆ ಅಂದುಕೊಂಡೊ, ಉಗುಳುನುಂಗಿ ನೊಂದುಕೊಡೊ,
ನಂಬಿಕೊಂಡು ಏಗುತಿರುವ ನಾವು, ನೀವು, ಇಡೀ ಹಿಂಡು
ಕುರಿಗಳು ಸಾರ್ ಕುರಿಗಳು.

ತಳವೂರಿದ ಕುರುಬ ಕಟುಕನಾದ; ಅವನ ಮಚ್ಚೊ ಆಹ!
ಏನು ಝಳಪು, ಏನು ಹೊಳಪು, ಏನು ಜಾದು, ಏನು ಮೋಹ!
ಆ ಹೊಳಪಿಗೆ ದಂಗಾಗಿ, ಕಣ್ಣಿಗದೇ ರಂಗಾಗಿ,
ಒಳಗೊಳಗೇ ಜಂಗಾಗಿ,
ಕಣ್ಣುಕುಕ್ಕಿ ಸೊಕ್ಕಿರುವ, ಹೋಗಿಹೋಗಿ ನೆಕ್ಕಿರುವ,
ಕತ್ತನದಕೆ ತಿಕ್ಕಿರುವ
ನಾವು, ನೀವು, ಅವರು, ಇವರು
ಕುರಿಗಳು ಸಾರ್ ಕುರಿಗಳು.

ಮಚ್ಚಿನ ಆ ಮೆಚ್ಚಿನಲ್ಲಿ, ಅದರಾಳಾದ ಕಿಚ್ಚಿನಲ್ಲಿ
ಮನೆಮಾಡಿವೆ ಹುಚ್ಚಿನಲ್ಲಿ
ನಮ್ಮೆಲ್ಲರ ಗುರಿಗಳು!
ಕುರಿಗಳು, ಸಾರ್, ಕುರಿಗಳು...

                                        - ಕೆ.ಎಸ್. ನಿಸಾರ್ ಅಹಮದ್
                          ( 'ನೆನೆದವರ ಮನದಲ್ಲಿ' ಕವನಸಂಕಲನದಿಂದ )

ಮೂಕಂ ಕರೋತಿ ವಾಚಾಲಂ



ಶೂನ್ಯಾಂತರಂಗದಿಂದಡವಿಯೊಳು ಬೆಳದಿರುವ 
          ಕಿರುಬಿದಿರಿನಂತೆ ನಾನಿಹೆನು, ಗುರುವೆ.
ಸಮೆದದನು ಮಾಡಿ ಕೊಳಲನು ನಿನ್ನ ಉಸಿರೂದಿ
          ಶೂನ್ಯತೆಯ ಕಳೆದು ಪೂರ್ಣತೆಯ ನೀಡು .
ಟೊಳ್ಳಿನಿಂದಿಂಚರದ ರಸಲಹರಿ ಹೊಮ್ಮುವುದು
         ನಿನ್ನ ಕೈಯಲಿ ನಾನು ವೆಣುವಾಗೆ !
'ಮೂಕಂ ಕರೋತಿ ವಾಚಾಲಮ್ ' ಎಂಬಂದದಲಿ
        ಸೊನ್ನೆಯಿಂದುಣ್ಮುವುದು ಸುರಗಾನವು !

ನೀನುಳಿಯೆ ನಾನೇನು? ಬರಿ ಬಿದಿರಿನಂತೆ !
          ಶ್ರೀಕೃಷ್ಣನಿಲ್ಲದಿಹ ಕೊಳಲಿನಂತೆ !
          ಶೇಷಾರ್ಯನಿಲ್ಲದಿಹ ವೀಣೆಯಂತೆ !
ಭಾವವಿಲ್ಲದ ಬರಿಯ ಜಡಮೂಕನಂತೆ !

                                                        - ಕುವೆಂಪು
                                ('ಹೊನ್ನು ಹೊತ್ತಾರೆ' ಕವನ ಸಂಕಲನದಿಂದ)

ಮುಳುಗುತಿದೆ ಕಿರುದೋಣಿ

ಮುಳುಗುತಿದೆ, ಮುಳುಗುತಿದೆ ಕಿರುದೋಣಿ, ಗುರುದೇವ,
          ಮೇರೆಯಿಲ್ಲದ ಕಡಲು ಬಳಸಿ ಮೊರೆಯುತಿದೆ;
ಕತ್ತಲೆಯು ಕವಿಯುತಿದೆ; ಬಿರುಗಾಳಿ ಬೀಸುತಿದೆ;
          ಗುಡುಗುತಿದೆ, ಮಿಂಚುತಿದೆ, ಸಿಡಿಲು ಬಡಿಯುತಿದೆ.
ಕೆರಳಿರುವ ಕೇಸರಿಗಲಂದದದಲಿ ಗರ್ಜಿಸುತ
          ನುಗ್ಗುತಿಹವಪ್ಪಳಿಸಿ ಬಲ್ದೆರೆಗಳಾಲಿ;
ನೆಚ್ಚಿಲ್ಲ, ಕೆಚ್ಚಿಲ್ಲ, ಬಲವಿಲ್ಲ, ಚಲವಿಲ್ಲ ,
          ಹುಟ್ಟು ಕೈಯಿಂದುದುರಿ ಕೆಳಗೆ ಬಿದ್ದಿಹುದು!

ತೆರೆಗಳೋಡನು ನುಂಗುವಾ ಮುನ್ನ ಬಂದು ಕಾಯಿ!
ಅರೆಗೆ ದೋಣಿಯು ಬಡಿದೊಡೆವ ಮುನ್ನ ಬಂದು ಕಾಯಿ!
ಮುಳುಗಿ ನಾ ಕಡಲಡಿಯೊಳೊರಗುವಾ ಮುನ್ನ ಕಾಯಿ!
ಎದೆಯೊಡೆದು ಅಸುವಳಿವ ಮುನ್ನ ನೀನೆನ್ನ ಕಾಯಿ!

                                                        - ಕುವೆಂಪು
                                    ('ಹೊನ್ನ ಹೊತ್ತಾರೆ' ಕವನಸಂಕಲನದಿಂದ ) 

ಬೈರಾಗಿಯ ಹಾಡು


ಇಕೋ ನೆಲ-ಅಕೋ ಜಲ
ಅದರ ಮೇಲೆ ಮರದ ಫಲ
ಮನದೊಳಿದೆ ಪಡೆವ ಛಲ
ಬೆಳೆವಗೆ ನೆಲವೆಲ್ಲ ಹೊಲ.
ಜಲಧಿವರೆಗು ಒಂದೆ ಕುಲ
ಅನ್ನವೆ ಧರ್ಮದ ಮೂಲ
ಪ್ರೀತಿಯೆ ಮೋಕ್ಷಕ್ಕೆ ಬಲ
ಇದೇ ಶೀಲ ಸರ್ವಕಾಲ ।। ಇಕೋ ನೆಲ.....

                   - ದ ರಾ ಬೇಂದ್ರೆ
 ('ಸಖೀಗೀತ' ಕವನ ಸಂಕಲನದಿಂದ)

ಚೈತನ್ಯದ ಪೂಜೆ


ಚೈತನ್ಯದ ಪೂಜೆ ನಡೆದSದ
ನೋಡS ತಂಗಿ।। ಅಭಂಗದ ಭಂಗೀS ।। ಪ ।।


ಸೌಜನ್ಯ ಎಂಬುದು ಮೊದಲನೆ ಹೂವು
ಅರಳೋಣ ನಾವೂ ನೀವೂ
ಸಾಮರ್ಥ್ಯ ಎಂಬುದು ಬೆಲಪತ್ರಿ
ಶಿವಗರ್ಪಿತ ಇರಲಿ ಖಾತ್ರಿ.


ಸತ್ಯ ಎಂಬುವ ನಿತ್ಯದ ದೀಪ
ಸುತ್ತೆಲ್ಲಾ ಅವನದೇ ರೂಪ
ಪ್ರೀತಿ ಎಂಬುವ ನೈವೇದ್ಯ
ಇದು ಎಲ್ಲರ ಹೃದಯದ ಸಂವೇದ್ಯ.


ಸೌಂದರ್ಯ ಧ್ಯಾನಾ ಎದೆಯಲ್ಲಿ
ಅಸ್ಪರ್ಶಾ ಚಿನ್ಮಯದಲ್ಲಿ
ಆನಂದಗೀತ ಸಾಮSವೇದಾ
ಸರಿಗಮ ನಾದಾ.


'ಉದ್ಭವ'  'ಉದ್ಭವ' ಹೇ ಮಂಗಳ ಮೂರ್ತಿ
ಅಲಲಾ!  ಆಹಹಾ!  ಅಮಮಾ!
ಆತ್ಮಾ ಪರಮಾತ್ಮಾ ಅಂತSರಾತ್ಮಾ
ಘನವೋ ಘನ! ನಿಮ್ಮಾ ಮಹಿಮಾ!

                                               - ದ ರಾ ಬೇಂದ್ರೆ
                                 ( 'ನಾಕುತಂತಿ' ಕವನ ಸಂಕಲನದಿಂದ)

 ವಿಶೇಷ : ಬೇಂದ್ರೆಯವರು ತಮ್ಮ ಪ್ರಥಮ ಮೊಮ್ಮಗ ಚಿ. ಪ್ರಭಾಕರನ ಧ್ಯಾನಕ್ಕಾಗಿ ರಚಿಸಿದ ಸಾಧನಾಗೀತ ಇದು.

ಒಂದು


ಆದರೂ ಹೋದರೂ
ಎಲ್ಲಾ ದಂತಕಥೀ
ಇರುವವರ ಸ್ಥಿತೀ - ಗತೀ
ಮುಂಗಾಣದೋ !


ಇದ್ದದ್ದು ಇಲ್ಲದ್ದು
ಒಂದೇ ಮಾಡಬೇಡಾ
ಶುದ್ಧಿ ಇಲ್ಲದಾ ಸುದ್ಧಿ
ಬರಿದೋ ಅಶುದ್ಧೀ


ಮಾತಿನೊಳಗಿನ ಭಾವ
ಮೌನದೊಳಗಿನ ಜೀವಾ
ಅಂದದ್ದೆಲ್ಲಾ
ಚೆಂದಾ
ಹೇಗಾದೀತು ?

                                     - ದ. ರಾ. ಬೇಂದ್ರೆ 
                       ('ಬಾಲಬೋಧೆ' ಕವನ ಸಂಕಲನದಿಂದ)

ಜಿಜ್ಞ್ಯಾಸೆ

ಚಿತ್ರ ಕೃಪೆ: http://media.radiosai.org

ಏನು? ಯಾಕೆ? ಎಲ್ಲಿ? ಯಾರು?
ಎಂದು ತೊದಲನಾಡಿದೆ.
ಅಂದಿನಿಂದ ಇಂದುವರೆಗು
ಅದೇ ಹಾಡ ಹಾಡಿದೆ.

ಹತ್ತು ದೇಶ ನೋಡಿದೆ.
ನೂರು ಶಾಸ್ತ್ರ ಓದಿದೆ
ಮೊದಲು ತೊದಲು ಮಾತಿನಲ್ಲೆ
ಇನ್ನೂ ಇದೆ ಅರಿವಿನಲ್ಲೇ

ಏನು? ಯಾಕೆ? ಎಲ್ಲಿ? ಯಾರು?
ಇನ್ನೂನು ಕೇಳುವೆ
ಎದಯೆಲವಿತು ಕುಳಿತ ಗುರುವೆ!
ಹೇಳು ಏನ ಹೇಳುವೆ?

ಕತ್ತಲುಗಳ ದಾಟಿ ದಾಟಿ
ಬೆಳಕು ಬೆಳಕು ಎಂದೆನು
ಸಾವು ಸಾಸಿರಗಳ ಸಾರಿ
ಅಮೃತ ಎನುತ ಬಂದೆನು.

ಸಟೆಯ ತೆರೆಯು ತೆರೆಯುತ
ದಿಟವು ಮೇರೆವರೆಯುತ
ಬಂದರೇನು ಎಂದಿನಂತೆ
ಮುಂದೆಯು ಹಿಂದಿದ್ದ ಚಿಂತೆ 

ಇದು ಅದೃಷ್ಟ ಇದು ಅಗಮ್ಯ
ಎನುತ ಎನುತ ಸಾಗಿದೆ
ನಿನ್ನ ಪಾದದೆಡೆಗೆ ತಲೆಯು
ಅಡಿಗಡಿಗೂ ಬಾಗಿದೆ.

ಎಲ್ಲಿ ಏನು ರಮ್ಯವಾಗಿ
ಕಂಡರೆ ಮರುಳಾಗಿದೆ.
ಅದರತನದ ಅಗಮ್ಯತೆಗೆ
ಸೋತು ತಲೆಯ ತೂಗಿದೆ.

ಕಾಣುತಲಿದೆ ಭವ್ಯವು
ನೋಡುತಲಿದೆ ದಿವ್ಯವು.
ಒಂದನೊಂದು ಅರಸಿ ಮರೆಸಿ
ಆಗ ಈಗ ಬಿಡಿಸಿ ಬೆರಸಿ

ಜೀವವು ಸಂಭ್ರಮದೊಳೆಂದು
ನಿನ್ನನ್ನೇ ಕರೆದಿದೆ.
ಇಗೋ ಸೃಷ್ಟಿಪುಟದೊಳೆಲ್ಲು
ನಿನ್ನ ಹೆಸರೆ ಬರೆದಿದೆ.

ಮಾನವ ಚಾರಿತ್ರ್ಯದಲ್ಲಿ
ಎಷ್ಟೊ ಪ್ರಳಯವಾಗಿವೆ.
ಸ್ತ್ರೀಯ ಪ್ರೇಮ ಪುರುಷ ಭಾಗ್ಯ
ಕಾದು ಕಾದು ಮಾಗಿವೆ.

ನಾಗರಿಕತೆ ಮುಳುಗಿವೆ.
ಸಂಸ್ಕೃತಿಗಳು ಬೆಳಗಿವೆ
ಅಧಃಪತನವಾಗುತಿರಲು
ಅವತಾರವು ತೇಗುತಿರಲು

ಉದ್ಧಾರದ ಆಸೆಯಾಗಿ
ಮೂಲಜಲಕೆ ಮರಳಿವೆ
ಅಂತರಂಗದತ್ತ ನಯನ
ತಾನಾಗಿಯೆ ಹೊರಳಿವೆ.

ಹೃದಯ ಹೂಡಿ ಹತ್ತು ಆಟ
ಇಳಿಸಿ ಪ್ರೇಮಪಾಕಕೆ
ಊಟೆಯಾಗಿ ಎತ್ತಲಿಹುದು
ನರರ ನರಕ ನಾಕಕೆ.

ವಿಧಿವಿಲಾಸ ನಡೆದಿದೆ
ಹಳೆಯ ಹಾದಿ ಹಿಡಿದಿದೆ
ಪ್ರಕೃತಿ ತನ್ನ ಹಾಸ ಹಾಸಿ
ಮಾಯೆ ತನ್ನ ಬಲೆಯ ಬೀಸಿ

ಬಯಲಿನಲ್ಲಿ ಗಾಲಿಯಾಡಿ-
ದಂತೆ ನಮ್ಮ ಆಡಿಸಿ
ಕ್ರೀಡಿಸುವದು, ಬಾ ಕರುಣಿಸಿ
ಬೇರೆ ಆಟ ಮೂಡಿಸಿ.

ನಿನಗೆ ಲೀಲೆ ಸೇರುವಾಗ
ನನಗೆ ಏಕೆ ಬೇಸರ?
ಕಟ್ಟಿ ಮುರಿದು ಕೆಡಿಸು ಬೆಳಿಸು
ನೀನೆ ನನಗೆ ಆಸರ.

ಸಾಗಲಿಂತು ಚಕ್ರವು
ನಿನ್ನ ರೀತಿ ವಕ್ರವು
ನೀನು ಬಾ ಅನಂತನಾಗಿ
ಜೀವ ಇರಲಿ ಅಮೃತವಾಗಿ

ತಾಪ, ಪಾಪ, ನೋವು, ದುಃಖ,
ಚಿಂತೆ ಭೋಗದಾಟವು.
ನಟನ ಹಾಗೆ ಎನಿಸಲೆನಗೆ
ನಿನ್ನ ಕಲೆಯ ಮಾಟವು.

ಏನು ಆಟ! ಏನು ಮಾಟ!
ಕುತೂಹಲಕೆ ಆಡುವೆ
ಪ್ರಪಂಚವನು ಚಿತ್ರಿಸುತ್ತ
ನೀನೊ ಕಥೆಯ ಮಾಡುವೆ

ತಿಳಿಯದೆಂದು ತಿಳಿದಿತು
ಇಷ್ಟು ನನಗೆ ಹೊಳೆದಿತು
ಅಷ್ಟರಲ್ಲಿ ತೃಪ್ತಿ ನನಗೆ
ದಿನವು ಇದೊ ವಿನೋದ ನಿನಗೆ

ಆದರೇನು ಮತ್ತೆ ನಾನು
ಏನು? ಏಕೆ? ಕೇಳುವೆ
ಹಳೆಯದನ್ನೆ ಹೊಸೆಯಿಸಿ ನೀ
ರಸ ಹುಟ್ಟಿಸಿ ಹೇಳುವೆ.

                - ದ ರಾ ಬೇಂದ್ರೆ
 ('ಗಂಗಾವತರಣ' ಕವನ ಸಂಕಲನದಿಂದ)

ನಾವು ಹುಡುಗಿಯರೇ ಹೀಗೆ....

 
-೧-
ಹೌದು ಕಣೆ ಉಷಾ 
ನಾವು ಹುಡುಗಿಯರೇ ಹೀಗೆ....

ಏನೇನೋ ವಟಗುಟ್ಟಿದರೂ
ಹೇಳಬೇಕಾದ್ದನ್ನು ಹೇಳದೆ
ಏನೇನೆಲ್ಲಾ ಅನುಭವಿಸಿ ಸಾಯುತ್ತೇವೆ.
ಜುಮ್ಮೆನ್ನಿಸುವ ಆಲೋಚನೆಗಳನ್ನೆಲ್ಲಾ
ಹಾಗೇ ಡಬ್ಬಿಯೊಳಗೆ ಹಿಟ್ಟು ಒತ್ತಿದಂತೆ
ಒತ್ತಿ ಒತ್ತಿ ಗಟ್ಟಿ ಮಾಡುತ್ತೇವೆ.
ಹೇಳಲೇಬೇಕು ಎನಿಸಿದ್ದನ್ನು
ಹೇಳಹೋಗಿ ಹೆದರಿ ಏನೇನೋ ತೊದಲುತ್ತೇವೆ.
'ಐ ಲವ್ ಯೂ' ಅಂತ ಹೇಳಲು ಕಷ್ಟಪಟ್ಟು
ಬೇರೆ ಏನೇನೋ ದಾರಿ ಹುಡುಕಿ
ಸಂದೇಶ ಮುಟ್ಟಿಸಲು ಹೆಣಗುತ್ತೇವೆ.
ಅದನ್ನು ಅರ್ಥ ಮಾಡಿಕೊಳ್ಳಲಾರದೆ
ಹುಡುಗರು ಕೈ ತಪ್ಪಿದಾಗ
ಮುಸು ಮುಸು ಅಳುತ್ತೇವೆ.
ಕೊನೆಗೆ ಬೇರೆ ಯಾರನ್ನೋ ಮದುವೆಯಾಗಬೇಕಾದಾಗ
ನಾವೇ ದುರಂತ ನಾಯಕಿಯರೆಂದು
ಭ್ರಮಿಸಿ ಎಲ್ಲರ ಅನುಕಂಪ ಬಯಸುತ್ತೇವೆ.
ಗಂಡನಲ್ಲಿ 'ಅವನನ್ನು' ಹುಡುಕುತ್ತೇವೆ.
ಗಂಡನಿಗೆ  ಮಾತ್ರ ಅದರ ಸುಳಿವೂ ಸಿಗದಂತೆ ನಟಿಸುತ್ತೇವೆ.
ಅಷ್ಟರಲ್ಲಿ ಒತ್ತಿಟ್ಟ ಭಾವನೆಗಳೆಲ್ಲ ಹರಳಾಗಿಬಿಟ್ಟಿರುತ್ತವೆ
ಅರಳುವುದೇ ಇಲ್ಲ ಉಷಾ...

-೨-
ನಾಲ್ಕು ವರ್ಷಗಳಲ್ಲಿ ವಿಪರೀತ ದಪ್ಪಗಾಗಿ
ಕೈಗೊಂದು ಕಾಲಿಗೊಂದು ಮಕ್ಕಳಾಗಿ
ಏದುಸಿರು ಬಿಡುತ್ತಾ ತರಕಾರಿ ಕೊಳ್ಳುವಾಗ
'ಅವನು' ಸಿಗುತ್ತಾನೆ.
ನಮ್ಮ ಇಂದಿನ ಅವಸ್ಥೆಗೆ ಇವನೇ ಕಾರಣ
ಅಂತ ರೋಷ ತಾಳುತ್ತೇವೆ.
ಆದರೆ ಮೇಲೆ ನಗುನಗುತ್ತಾ 'ಅವನ'
ಹೆಂಡತಿ ಮಕ್ಕಳ ಯೋಗಕ್ಷೇಮ ವಿಚಾರಿಸುತ್ತೇವೆ.
ಯಾಕೆಂದರೆ ಅವಳದ್ದೂ ಅದೇ ಕಥೆಯಲ್ಲವೇ?

ನಾವು ಹುಡುಗಿಯರೇ ಹೀಗೆ....

                       - ಪ್ರತಿಭಾ ನಂದಕುಮಾರ್ 

ಬುದ್ಧಿವಂತರಿಗೆ ಕನಸು ಬಿದ್ದರೆ


ಪ್ರಾಚೀನ ಚೀನದಲ್ಲಿ ಬುದ್ಧಿವಂತ
ಒಬ್ಬನಿಗೆ ಪ್ರತಿ ರಾತ್ರಿ
ಕನಸು.
         ಪ್ರತಿ ರಾತ್ರಿ ಮುಸುಂಬಿ-
ಬಣ್ಣದ ಚಿಟ್ಟೆಯಾಗಿ ನೈದಿಲೆಯಿಂದ
ಸೇವಂತಿಗೆ
         ಸೇವಂತಿಯಿಂದ ನೈದಿಲೆಗೆ
ಹಾರಿ ಹಾರಿ ಗಾಳಿಯಲ್ಲಿ ತೇಲಿದ ಹಾಗೆ
ಕನಸು.
        ಎಷ್ಟೋ ರಾತ್ರಿ ಚಿಟ್ಟೆಯಾಗಿ
ಕನಸು ಕಂಡು ಕಡೆಗೆ 
                    ಮನುಷ್ಯನೋ
ಚಿಟ್ಟೆಯೋ
         ರಾತ್ರಿಯ ಚಿಟ್ಟೆ
ಹಗಲು ಮನುಷ್ಯನ ಕನಸೋ
ಹಗಲು
        ರಾತ್ರಿಯ ಕನಸೋ
ತಿಳಿಯದೆ ಭ್ರಮೆ ಹಿಡಿಯಿತು.

           - ಎ ಕೆ ರಾಮಾನುಜನ್ 

ವಿರಹಿ - ಚುಂಬಿತ


ಕಾಮವಿದು ಮೈಗಾವು
ಜೀವದ ಬಾವು
ಚಿತ್ತದ ನೋವು
ಎನ್ನರಸಿ

ಪ್ರೆಮವದಕದೆ ಮದ್ದು
ಉಳಿದುದನೊದ್ದು
ಬಂತೀ ಮುದ್ದು
ನಿನ್ನರಸಿ

ವಿರಹಿ ಬಿಟ್ಟುಸಿರಂತೆ
ಅದರಾ ಚಿಂತೆ
ಯಾರಿಗೆ ಅಂತೆ
ಇದು ಸಂತೆ

ತೇಲುವದು ಪರದೇಸಿ
ಇರಲೂ ಹೇಸಿ
ಆ ದರವೇಶಿ
ಇರುವಂತೆ

ಜನುಮ ಜನುಮದ ದಾಹ
ಎಂದಿಗೆ ಸ್ನೇಹ
ದೊರೆವುದೊ ಆಹ
ಎಂದುರಿದು

ಇದುವೆ ಇರುಳಿನ ಹಾದಿ
ಬೆಳಕಿನ ಬೂದಿ
ಅದಕೆ ಅನಾದಿ
ಎಂದರಿದು

ಉಳಿವುದೇ ತಾ ಬಾಳಿ
ಹೇಳಿ ಕೇಳಿ
ಕೊನೆಗೂ ಗಾಳಿ
ಈ ಉಸಿರು.

ಕೊಲ್ಲುವವನೇ ಕಾವ
ತಾಳೆನೆ ನೋವ
ಇಂದಿಗೆ ಜೀವ
ಬರಿ ಹೆಸರು.

ಆಸೆಯುಸಿರನು ಚಾಚಿ
ಹೊರಟ ಪಿಶಾಚಿ
ಗಾಳಿಯ ಬಾಚಿ
ಬರುತಿಹುದೋ.

ನರಕ ತಪ್ಪಿಸಿ ಚಿನ್ನ
ಕಾವುದು ನನ್ನ
ಮುಕ್ತಿಯು ನಿನ್ನ
ಹೊರತಿಹುದೋ?

            - ದ ರಾ ಬೇಂದ್ರೆ
('ಗಂಗಾವತರಣ' ಕವನ ಸಂಕಲನದಿಂದ)