ಕುರುಡ

ಕತ್ತಲೆಯು: ನಡುವಗಲ ಬೇಸಗೆಯ ನೇಸರಿರೆ
          ಬಯಲಲ್ಲಿ ಬೆಮರುತಿಹೆ! ಕಗ್ಗತ್ತಲೆನಗೆ!
ಕೋಗಿಲೆಯು ಕೂಗೆನಗೆ! ಬನಬೆಟ್ಟ ನುಡಿಯೆನಗೆ !
          ಸೌಂದರ್ಯವೆಂಬುದದು ಬರಿಯ ಸದ್ದೆನಗೆ !

ನನ್ನ ಭಿಕ್ಷಾಪಾತ್ರೆಗವನೆಸೆವ ಕಾಸುಗಳ
          ಸದ್ದೆನಗೆ ಮಾನವನ ಮಂಗಳಾಕಾರ !
ಬೆಳಕಿಲ್ಲ, ಕಪ್ಪಿಲ್ಲ; ಹಗಲಿರುಳು ನನಗಿಲ್ಲ;
          ನನ್ನಿನನು ಮೂಡಿಮುಳುಗವನೆನ್ನ ಕೂಡೆ!

ನರಜನ್ಮವತ್ಯಧಿಕವೆಂದೇಕೆ ಸಾರುತಿಹರು?
ಮಿಗಗಳಾನಂದವೆನಗಿಲ್ಲವೈ, ದೇವದೇವ !
ಕಣ್ಣಿರದ ಮಾನವನ ಜನ್ಮವೆನಗೇಕೆ, ದೇವ?
ಕಣ್ಣಿರುವ ಮಿಗತನದ ಬಾಳೆನಗೆ ಲೇಸು, ಲೇಸು!

                                                   - ಕುವೆಂಪು
                                ('ಹೊನ್ನ ಹೊತ್ತಾರೆ' ಕವನಸಂಕಲನದಿಂದ)

ಕುರಿಗಳು ಸಾರ್ ಕುರಿಗಳು

ಚಿತ್ರ ಕೃಪೆ:http://patterico.com/files/2011/04/Sheep_mouton.rebelle.jpg

ಕುರಿಗಳು ಸಾರ್ ಕುರಿಗಳು;
ಸಾಗಿದ್ದೇ
ಗುರಿಗಳು.
ಮಂದೆಯಲಿ ಒಂದಾಗಿ, ಸ್ವಂತತೆಯೆ ಬಂದಾಗಿ
ಇದರ ಬಾಲ ಅದು ಮತ್ತೆ ಅದರ ಬಾಲ ಇದು ಮೂಸಿ
ದನಿ ಕುಗ್ಗಿಸಿ, ತಲೆ ತಗ್ಗಿಸಿ
ಹುಡುಕಿ ಹುಲ್ಲು ಕಡ್ಡಿ ಮೇವು, ಅಂಡಲೆಯುವ ನಾವು ನೀವು -
ಕುರಿಗಳು ಸಾರ್ ಕುರಿಗಳು;
ನಮಗೊ ನೂರು ಗುರಿಗಳು.

ಎಡ ದಿಕ್ಕಿಗೆ ಬಲ ದಿಕ್ಕಿಗೆ, ಒಮ್ಮೆ ದಿಕ್ಕು ಪಾಲಾಗಿ,
ಒಮ್ಮೆ ಅದೂ ಕಳೆದುಕೊಂಡು ತಾಟಸ್ಥ್ಯದಿ ದಿಕ್ಕೆಟ್ಟು
ಹೇಗೆ ಹೇಗೊ ಏಗುತಿರುವ,
ಬರೀ ಕಿರುಚಿ ರೇಗುತಿರುವ,
ನೊಣ ಕೂತರೆ ಬಾಗುತಿರುವ,
ತಿನದಿದ್ದರು ತೇಗುತಿರುವ,
ಹಿಂದೆ ಬಂದರೊದೆಯದ, ಮುಂದೆ ಬಂದರೆ ಹಾಯದ
ಅವರು, ಇವರು ನಾವುಗಳು
ಕುರಿಗಳು ಸಾರ್ ಕುರಿಗಳು.

ಮಂದೆಯಲ್ಲಿ ಎಲ್ಲವೊಂದೆ ಆದಾಗಲೆ ಸ್ವರ್ಗ ಮುಂದೆ
ಅದಕಿಲ್ಲವೆ ನಾವುತ್ತರ?
ಮೆದುಳಿನಲ್ಲಿ ತಗ್ಗೆತ್ತರ,
ಹಿರಿದು, ಕಿರಿದು ಮಾಯಿಸಿ,
ಒಬ್ಬೊಬ್ಬರಿಗಿರುವ ಮೆದುಳ ಸ್ವಾರ್ಥದ ಉಪಯೋಗದಿಂದ
ಇಡಿ ಮಂದೆಗೆ ಹಾಯಿಸಿ,
ಹೊಟ್ಟೆಬಟ್ಟೆಗೊಗ್ಗದಂಥ ಕಲೆಯ ಕರ್ಮಕಿಳಿಯದಂತೆ
ತಲೆಬೆಲೆಯ ಸುಧಾರಿಸಿ,
ಬಿಳಿಕಪ್ಪಿನ ದ್ವಂದ್ವಗಳಿಗೆ ಮಾಡಿಸಿ ಸಮಜಾಯಿಷಿ;
ನಮ್ಮ ಮೆದುಳು ಶುದ್ಧಿಯಾಗಿ, ಬುದ್ಧಿ ನಿರ್ಬುದ್ಧಿಯಾಗಿ,
ಕೆಂಬಣ್ಣವನೊಂದೆ ಪೂಸಿ,
ಅದರ ಬಾಲ ಇದು ಮತ್ತೆ ಇದರ ಬಾಲ ಅದು ಮೂಸಿ
ನಡೆವ ನಮ್ಮೊಳೆಲ್ಲಿ ಬಿರುಕು?

ನಮ್ಮ ಕಾಯ್ವ ಕುರುಬರು:
ಪುಟಗೋಸಿಯ ಮೊನ್ನೆ ತಾನೆ ಕಿತ್ತು ಪಂಚೆಯುಟ್ಟವರು.
ಶಾನುಭೋಗ ಗೀಚಿದ್ದಕ್ಕೆ ಹೆಬ್ಬೆಟ್ಟನು ಒತ್ತುವವರು.
ಜಮಾಬಂದಿಗಮಲ್ದಾರ ಬರಲು, ನಮ್ಮೊಳೊಬ್ಬನನ್ನ
ಮೆಚ್ಚಿ, ಮಸೆದ ಮಚ್ಚಹಿರಿದು ಕಚಕ್ಕೆಂದು ಕೊಚ್ಚಿ ಕತ್ತ,
ಬಿರಿಯಾನಿಯ ಮೆಹರುಬಾನಿ ಮಾಡಿ ಕೈಯ ಜೋಡಿಸುತ್ತ
ಕಿಸೆಗೆ ಹಸಿರುನೋಟು ತುರುಕಿ, ನುಡಿಗೆ ಬೆಣ್ಣೆ ಹಚ್ಚುವವರು.
ಬಿಸಿಲಲ್ಲಿ ನಮ್ಮದೂಡಿ, ಮರದಡಿಯಲಿ ತಾವು ಕೂತು
ಮಾತು, ಮಾತು, ಮಾತು, ಮಾತು:
ಮಾತಿನ ಗೈರತ್ತಿನಲ್ಲೆ ಕರಾಮತ್ತು ನಡೆಸುವವರು.
ನಮ್ಮ ಮೈಯ ತುಪ್ಪಟವ ರವಷ್ಟು ಬಿಡದ ಹಾಗೆ ಸವರಿ
ಕಂಬಳಿಗಳ ನೇಯುವಂಥ ಯೋಜನೆಗಳ ಹಾಕುವವರು.
ಮಾರಮ್ಮನ ಮುಡಿಗೆ ಕೆಂಪು ದಾಸವಾಳ ಆಯುವವರು
ಬೆಟ್ಟಾ ದಾಟಿ ಕಿರುಬ ನುಗ್ಗು, ನಮ್ಮೊಳಿಬ್ಬರನ್ನ ಮುಗಿಸಿ,
ನಾವು 'ಬ್ಯಾ, ಬ್ಯಾ' ಎಂದು ಬಾಯಿ ಬಾಯಿ ಬಡಿದುಕೊಂಡು
ಬೊಬ್ಬೆ ಹಾಕುತಿದ್ದರೂ
ಚಕ್ಕಭಾರ ಆಟದಲ್ಲೆ ಮಗ್ನರು ಇವರೆಲ್ಲರು-
ನಮ್ಮ ಕಾಯ್ವ ಗೊಲ್ಲರು.

ದೊಡ್ಡಿಯಲ್ಲಿ ಕೂಡಿಹಾಕಿ ನಿಲ್ಲಲಿಲ್ಲ, ಕೂರಲಿಲ್ಲ,
ಎದ್ದರೆ ಸರಿದಾಡಲಿಲ್ಲ, ಬಿದ್ದರೆ ಹರಿದಾಡಲಿಲ್ಲ,
ದೀಪದ ದೌಲತ್ತು ಇಲ್ಲ,
ಗಾಳಿಯ ಗಮ್ಮತ್ತು ಇಲ್ಲ.
ಕಿಂಡಿಯಿಂದ ತೆವಳಿಬಂದ ಗಾಳಿಕೂಡ ನಮ್ಮದೇನೆ:
ನಮ್ಮ ಮಂದೆ ಕುರಿಯ ಸುಲಿದು, ಆಚೆ ಅಲ್ಲಿ ಉಪ್ಪುಸವರಿ
ಒಣಗಲಿಟ್ಟ ಹಸಿತೊಗಲಿನ ಬಿಸಿಬಿಸಿ ಹಬೆವಸನೆ
ಇರಿಯುತಿಹುದು ಮೂಗನೆ!
ಕೊಬ್ಬಿರುವೀ ಮಬ್ಬಿನಲ್ಲಿ, ಮೈನಾತದ ಗಬ್ಬಿನಲ್ಲಿ,
ಇದರ ಉಸಿರು ಅದು ಮತ್ತೆ ಅದರ ಉಸಿರು ಇದು ಮೂಸಿ
ಹೇಸಿದರು ನಿಭಾಯಿಸಿ,
ತಾಳ್ಮೆಯನೆ ದಬಾಯಿಸಿ,
ನಮ್ಮನಾವೆ ಅಂದುಕೊಂಡೊ, ಉಗುಳುನುಂಗಿ ನೊಂದುಕೊಡೊ,
ನಂಬಿಕೊಂಡು ಏಗುತಿರುವ ನಾವು, ನೀವು, ಇಡೀ ಹಿಂಡು
ಕುರಿಗಳು ಸಾರ್ ಕುರಿಗಳು.

ತಳವೂರಿದ ಕುರುಬ ಕಟುಕನಾದ; ಅವನ ಮಚ್ಚೊ ಆಹ!
ಏನು ಝಳಪು, ಏನು ಹೊಳಪು, ಏನು ಜಾದು, ಏನು ಮೋಹ!
ಆ ಹೊಳಪಿಗೆ ದಂಗಾಗಿ, ಕಣ್ಣಿಗದೇ ರಂಗಾಗಿ,
ಒಳಗೊಳಗೇ ಜಂಗಾಗಿ,
ಕಣ್ಣುಕುಕ್ಕಿ ಸೊಕ್ಕಿರುವ, ಹೋಗಿಹೋಗಿ ನೆಕ್ಕಿರುವ,
ಕತ್ತನದಕೆ ತಿಕ್ಕಿರುವ
ನಾವು, ನೀವು, ಅವರು, ಇವರು
ಕುರಿಗಳು ಸಾರ್ ಕುರಿಗಳು.

ಮಚ್ಚಿನ ಆ ಮೆಚ್ಚಿನಲ್ಲಿ, ಅದರಾಳಾದ ಕಿಚ್ಚಿನಲ್ಲಿ
ಮನೆಮಾಡಿವೆ ಹುಚ್ಚಿನಲ್ಲಿ
ನಮ್ಮೆಲ್ಲರ ಗುರಿಗಳು!
ಕುರಿಗಳು, ಸಾರ್, ಕುರಿಗಳು...

                                        - ಕೆ.ಎಸ್. ನಿಸಾರ್ ಅಹಮದ್
                          ( 'ನೆನೆದವರ ಮನದಲ್ಲಿ' ಕವನಸಂಕಲನದಿಂದ )

ಮೂಕಂ ಕರೋತಿ ವಾಚಾಲಂ



ಶೂನ್ಯಾಂತರಂಗದಿಂದಡವಿಯೊಳು ಬೆಳದಿರುವ 
          ಕಿರುಬಿದಿರಿನಂತೆ ನಾನಿಹೆನು, ಗುರುವೆ.
ಸಮೆದದನು ಮಾಡಿ ಕೊಳಲನು ನಿನ್ನ ಉಸಿರೂದಿ
          ಶೂನ್ಯತೆಯ ಕಳೆದು ಪೂರ್ಣತೆಯ ನೀಡು .
ಟೊಳ್ಳಿನಿಂದಿಂಚರದ ರಸಲಹರಿ ಹೊಮ್ಮುವುದು
         ನಿನ್ನ ಕೈಯಲಿ ನಾನು ವೆಣುವಾಗೆ !
'ಮೂಕಂ ಕರೋತಿ ವಾಚಾಲಮ್ ' ಎಂಬಂದದಲಿ
        ಸೊನ್ನೆಯಿಂದುಣ್ಮುವುದು ಸುರಗಾನವು !

ನೀನುಳಿಯೆ ನಾನೇನು? ಬರಿ ಬಿದಿರಿನಂತೆ !
          ಶ್ರೀಕೃಷ್ಣನಿಲ್ಲದಿಹ ಕೊಳಲಿನಂತೆ !
          ಶೇಷಾರ್ಯನಿಲ್ಲದಿಹ ವೀಣೆಯಂತೆ !
ಭಾವವಿಲ್ಲದ ಬರಿಯ ಜಡಮೂಕನಂತೆ !

                                                        - ಕುವೆಂಪು
                                ('ಹೊನ್ನು ಹೊತ್ತಾರೆ' ಕವನ ಸಂಕಲನದಿಂದ)

ಮುಳುಗುತಿದೆ ಕಿರುದೋಣಿ

ಮುಳುಗುತಿದೆ, ಮುಳುಗುತಿದೆ ಕಿರುದೋಣಿ, ಗುರುದೇವ,
          ಮೇರೆಯಿಲ್ಲದ ಕಡಲು ಬಳಸಿ ಮೊರೆಯುತಿದೆ;
ಕತ್ತಲೆಯು ಕವಿಯುತಿದೆ; ಬಿರುಗಾಳಿ ಬೀಸುತಿದೆ;
          ಗುಡುಗುತಿದೆ, ಮಿಂಚುತಿದೆ, ಸಿಡಿಲು ಬಡಿಯುತಿದೆ.
ಕೆರಳಿರುವ ಕೇಸರಿಗಲಂದದದಲಿ ಗರ್ಜಿಸುತ
          ನುಗ್ಗುತಿಹವಪ್ಪಳಿಸಿ ಬಲ್ದೆರೆಗಳಾಲಿ;
ನೆಚ್ಚಿಲ್ಲ, ಕೆಚ್ಚಿಲ್ಲ, ಬಲವಿಲ್ಲ, ಚಲವಿಲ್ಲ ,
          ಹುಟ್ಟು ಕೈಯಿಂದುದುರಿ ಕೆಳಗೆ ಬಿದ್ದಿಹುದು!

ತೆರೆಗಳೋಡನು ನುಂಗುವಾ ಮುನ್ನ ಬಂದು ಕಾಯಿ!
ಅರೆಗೆ ದೋಣಿಯು ಬಡಿದೊಡೆವ ಮುನ್ನ ಬಂದು ಕಾಯಿ!
ಮುಳುಗಿ ನಾ ಕಡಲಡಿಯೊಳೊರಗುವಾ ಮುನ್ನ ಕಾಯಿ!
ಎದೆಯೊಡೆದು ಅಸುವಳಿವ ಮುನ್ನ ನೀನೆನ್ನ ಕಾಯಿ!

                                                        - ಕುವೆಂಪು
                                    ('ಹೊನ್ನ ಹೊತ್ತಾರೆ' ಕವನಸಂಕಲನದಿಂದ ) 

ಬೈರಾಗಿಯ ಹಾಡು


ಇಕೋ ನೆಲ-ಅಕೋ ಜಲ
ಅದರ ಮೇಲೆ ಮರದ ಫಲ
ಮನದೊಳಿದೆ ಪಡೆವ ಛಲ
ಬೆಳೆವಗೆ ನೆಲವೆಲ್ಲ ಹೊಲ.
ಜಲಧಿವರೆಗು ಒಂದೆ ಕುಲ
ಅನ್ನವೆ ಧರ್ಮದ ಮೂಲ
ಪ್ರೀತಿಯೆ ಮೋಕ್ಷಕ್ಕೆ ಬಲ
ಇದೇ ಶೀಲ ಸರ್ವಕಾಲ ।। ಇಕೋ ನೆಲ.....

                   - ದ ರಾ ಬೇಂದ್ರೆ
 ('ಸಖೀಗೀತ' ಕವನ ಸಂಕಲನದಿಂದ)

ಚೈತನ್ಯದ ಪೂಜೆ


ಚೈತನ್ಯದ ಪೂಜೆ ನಡೆದSದ
ನೋಡS ತಂಗಿ।। ಅಭಂಗದ ಭಂಗೀS ।। ಪ ।।

೧
ಸೌಜನ್ಯ ಎಂಬುದು ಮೊದಲನೆ ಹೂವು
ಅರಳೋಣ ನಾವೂ ನೀವೂ
ಸಾಮರ್ಥ್ಯ ಎಂಬುದು ಬೆಲಪತ್ರಿ
ಶಿವಗರ್ಪಿತ ಇರಲಿ ಖಾತ್ರಿ.

೨
ಸತ್ಯ ಎಂಬುವ ನಿತ್ಯದ ದೀಪ
ಸುತ್ತೆಲ್ಲಾ ಅವನದೇ ರೂಪ
ಪ್ರೀತಿ ಎಂಬುವ ನೈವೇದ್ಯ
ಇದು ಎಲ್ಲರ ಹೃದಯದ ಸಂವೇದ್ಯ.

೩
ಸೌಂದರ್ಯ ಧ್ಯಾನಾ ಎದೆಯಲ್ಲಿ
ಅಸ್ಪರ್ಶಾ ಚಿನ್ಮಯದಲ್ಲಿ
ಆನಂದಗೀತ ಸಾಮSವೇದಾ
ಸರಿಗಮ ನಾದಾ.

೪
'ಉದ್ಭವ'  'ಉದ್ಭವ' ಹೇ ಮಂಗಳ ಮೂರ್ತಿ
ಅಲಲಾ!  ಆಹಹಾ!  ಅಮಮಾ!
ಆತ್ಮಾ ಪರಮಾತ್ಮಾ ಅಂತSರಾತ್ಮಾ
ಘನವೋ ಘನ! ನಿಮ್ಮಾ ಮಹಿಮಾ!

                                               - ದ ರಾ ಬೇಂದ್ರೆ
                                 ( 'ನಾಕುತಂತಿ' ಕವನ ಸಂಕಲನದಿಂದ)

 ವಿಶೇಷ : ಬೇಂದ್ರೆಯವರು ತಮ್ಮ ಪ್ರಥಮ ಮೊಮ್ಮಗ ಚಿ. ಪ್ರಭಾಕರನ ಧ್ಯಾನಕ್ಕಾಗಿ ರಚಿಸಿದ ಸಾಧನಾಗೀತ ಇದು.

ಒಂದು

೧
ಆದರೂ ಹೋದರೂ
ಎಲ್ಲಾ ದಂತಕಥೀ
ಇರುವವರ ಸ್ಥಿತೀ - ಗತೀ
ಮುಂಗಾಣದೋ !

೨
ಇದ್ದದ್ದು ಇಲ್ಲದ್ದು
ಒಂದೇ ಮಾಡಬೇಡಾ
ಶುದ್ಧಿ ಇಲ್ಲದಾ ಸುದ್ಧಿ
ಬರಿದೋ ಅಶುದ್ಧೀ

೩
ಮಾತಿನೊಳಗಿನ ಭಾವ
ಮೌನದೊಳಗಿನ ಜೀವಾ
ಅಂದದ್ದೆಲ್ಲಾ
ಚೆಂದಾ
ಹೇಗಾದೀತು ?

                                     - ದ. ರಾ. ಬೇಂದ್ರೆ 
                       ('ಬಾಲಬೋಧೆ' ಕವನ ಸಂಕಲನದಿಂದ)