ಕನಸಿನ ಕನಸು

ಕನಸಿನೊಳು ಸಂಚರಿಪ ಕನಸಯ್ಯ ನಾನು;
ನೀನದನು ಹಿಡಿದು ಬಂಧಿಸಿಡಲಾರೆ.
ಸಿಟ್ಟಿನಲಿ ಕುಟ್ಟಿದೊಡೆ ಪುಡಿಮಾಡಲಾರೆ;
         ಕನಸೆಂದು ಕನಸಯ್ಯ ತುದಿಯವರೆಗೆ!

ಕನಸಿನಂತೆನಗೆಲ್ಲ ತೋರಿತಿಹುದಯ್ಯ;
        ಮಾನವರು, ಹಕ್ಕಿಗಳು, ಮಿಗಗಳೆಲ್ಲ.
ಬೆಟ್ಟಗಳು ಕೂಡ ಕಾಣುವುವು ಕನಸಂತೆ;
        ಬಾಲರೆನಗಾಡುತಿಹ ಕನಸ ಮಾಲೆ.

ಕನಸೊಡೆದು ಬೇರೊಂದು ಕನಸಪ್ಪುದಯ್ಯ ಕಡೆಗೆ!
ಸಾವುಬಾಳುಗಳೇನು? ಕನಸಿನಿಂ ಕನಸಿನೆಡೆಗೆ 
ಹಾರುವುದೆ ಸಂಸಾರ! ನಾನಾರು? ಯಾವ ಮನಸೊ
ಕಾಣುತಿಹ ಕನಸಿನಲಿ ಸುಳಿದಲೆವ ಕಿರಿಯ ಕನಸೋ?


                                                 - ಕುವೆಂಪು 
                   ( 'ಹೊನ್ನ ಹೊತ್ತಾರೆ' ಕವನ ಸಂಕಲದಿಂದ )

ಅಷ್ಟು ಪ್ರೀತಿ ಇಷ್ಟು ಪ್ರೀತಿ


ಅಷ್ಟು ಪ್ರೀತಿ ಇಷ್ಟು ಪ್ರೀತಿ--
ಎಣಿಸಿ ಕಷ್ಟಬಡದಿರು
ಒಲೆದು ಒಲಿಸಿ ಸುಖವಿರು
ಎಷ್ಟೆಯಿರಲಿ ಅಷ್ಟೆ ಮಿಗಿಲು--
ತಮ್ಮ ಕಿರಣ ತಮಗೆ ಹಗಲು ;
ಉಳಿದ ಬೆಳಕು ಕತ್ತಲು.
ಬಿಟ್ಟಲ್ಲಿಯೆ ಬೀಡು ಮತ್ತೆ ಆಡಿದಲ್ಲಿ ಅಂಗಳು
ಉಳಿದ ಲೋಕ ಹಿತ್ತಲು.

ಮುತ್ತಿನೆಕ್ಕಸರವನಿಕ್ಕೆ
ಮುದ್ದಿಗೆ ಕಳೆಕಟ್ಟಿತೆ ?
ತೊಯ್ದ ಎವೆಗೆ ಮುದ್ದನಿಡಲು
ಮುದ್ದಿಗೆ ಅದು ತಟ್ಟಿತೆ ?
ಕುದಿದ ಬಂದ ಕಂಬನಿಯಲು
ಕಂಪು ಬರದೆ ಬಿಟ್ಟಿತೆ ?

ಮುತ್ತು ರತುನ ಹೊನ್ನು ಎಲ್ಲ
ಕಲ್ಲು ಮಣ್ಣ ವೈಭವಾ
ಎಲವೊ ಹುಚ್ಚು ಮಾನವಾ
ಒಂದು ಷೋಕು---ಬರಿಯ ಝೋಕು
ಬದುಕಿನೊಂದು ಜಂಬವು
ಒಲವೆ ಮೂಲ ಬಿಂಬವು.

ಸಪ್ತ ನಾಕ ಸಪ್ತ ನರಕ
ಅದರ ಬೆಳಕು ಕತ್ತಲು
ಮನ್ವಂತರ ತನ್ವಂತರ
ಅದರ ಕೋಟೆ ಕೊತ್ತಲು
ಸಿಂಹಾಸನವನೇರಿ ಕುಳಿತೆ ;
ತೊಡೆಗೆ ತೊಡೆಯ ಹಚ್ಚಿದೆ
ಸರಿಯೆ, ಒಲಿದ ತೋಳಿಗಿಂತ
ಅದರೊಳೇನು ಹೆಚ್ಚಿದೆ?

ಎದೆಯ ಕಣ್ಣ ಮುಚ್ಚಿಕೊಂಡು
ಏಕೊ ಏನೊ ಮೆಚ್ಚಿದೆ
ಮರದ ಅಡಿಗೆ ಗುಡಿಸಲಿರಲಿ
ಅಲ್ಲೆ ಒಲವು ಮೆರೆಯದೇ
ನಲಿವು ಮೇರೆವರಿಯದೇ?

                      - ದ ರಾ ಬೇಂದ್ರೆ
('ಸಖೀಗೀತ' ಕವನ ಸಂಕಲನದಿಂದ)

ಶಿಶು

ಚಿತ್ರ ಕೃಪೆ: http://pixdaus.com/single.php?id=194871
ಹಸುರಿನುಯ್ಯಾಲೆಯಲಿ
ಬಿಸಿಲು ತೂಗಾಡುತಿದೆ;
ಚುಕ್ಕಿಯುದ್ಯಾನದಲಿ
ಹಕ್ಕಿ ಹಾರಾಡುತಿದೆ;
ಒಡಲವೀಣೆಯ ನಡುವೆ
ನುಡಿಯಿಲ್ಲದಿಂಚರಕೆ
ಮೊದಲು ತೊದಲಿನ ತುಟಿಯ
ಕೆಂಪು ತೆರೆಯುತಿದೆ!
ಮೈವೆತ್ತ ಗಾನಕ್ಕೆ
ಸುಖರಸದ ತಾನಕ್ಕೆ
ತನ್ನ ಸಂತಾನಕ್ಕೆ
ಸೃಷ್ಟಿ ಮರೆಯುತಿದೆ!

                          - ಕುವೆಂಪು
('ಪ್ರೇಮ ಕಾಶ್ಮೀರ' ಕವನ ಸಂಕಲನದಿಂದ)

ದೇವರು ರುಜು ಮಾಡಿದನು


ದೇವರು ರುಜು ಮಾಡಿದನು;
ರಸವಶನಾಗುತ ಕವಿ ಅದ ನೋಡಿದನು!

ಬಿತ್ತರದಾಗಸ ಹಿನ್ನೆಲೆಯಾಗಿರೆ
ಪರ್ವತದೆತ್ತರ ಸಾಲಗೆಸೆದಿರೆ
ಕಿಕ್ಕಿರಿದಡವಿಗಳಂಚಿನ ನಡುವೆ
ಮೆರೆದಿರೆ ಜಲಸುಂದರಿ ತುಂಗೆ
ದೇವರು ರುಜು ಮಾಡಿದನು,
ರಸವಶನಾಗುತ ಕವಿ ಅದ ನೋಡಿದನು!

ನದಿ ಹರಿದಿತ್ತು; ಬನ ನಿಂತಿತ್ತು;
ಬಾನ್ ನೀಲಿಯ ನಗೆ ಬೀರಿತ್ತು.
ನಿರ್ಜನ ದೇಶದ ನೀರವ ಕಾಲಕೆ
ಖಗರವ ಪುಲಕಂ ತೊರಿತ್ತು.
ಹೂಬಿಸಿಲಲಿ ಮಿರುಗಿರೆ ನಿರಿವೊನಲು
ಮೊರೆದಿರೆ ಬಂಡೆಗಳಲಿ ನೀರ್ತೊದಲು
ರಂಜಿಸ ಇಕ್ಕೆಲದಲಿ ಹೊಮ್ಮಳಲು
ಸಿಬ್ಬಲುಗುಡ್ಡೆಯ ಹೊಳೆಯಲಿ ಮೀಯುತ
ಕವಿಮನ ನಾಕದಿ ನೆಲಸಿತ್ತು;
ಮಧು ಸೌಂದರ್ಯದ ಮಧುರ ಜಗತ್ತು
ಹೃದಯ ಜಿಹ್ವೆಗೆ ಜೇನಾಗಿತ್ತು!

ದೃಶ್ಯದಿಗಂತದಿನೊಮ್ಮೆಯೆ ಹೊಮ್ಮಿ
ಗಿರಿವನ ಪಟದಾಕಾಶದಲಿ
ತೇಲುತ ಬರಲ್ಕೆ ಬಲಾಕಪಂಕ್ತಿ
ಲೇಖನ ರೇಖಾನ್ಯಾಸದಲಿ,
ಅವಾಙ್ಮಯ ಛಂದಃಪ್ರಾಸದಲಿ,
ಸೃಷ್ಟಿಯ ರಚನೆಯ ಕುಶಲತೆ ಚಂದಕೆ ಜಗದಚ್ಚರಿಯಂದದ ಒಪ್ಪಂದಕೆ
ಚಿರಚೇತನ ತಾನಿಹೆನೆಂಬಂದದಿ
ಬೆಳ್ಳಕ್ಕಿಯ ಹಂತಿಯ ಆ ನೆವದಿ
ದೇವರು ರುಜು ಮಾಡಿದನು:
ರಸವಶನಾಗುತ ಕವಿ ಅದ ನೋಡಿದನು!

                             - ಕುವೆಂಪು
      ('ಪಕ್ಷಿಕಾಶಿ' ಕವನ ಸಂಕಲನದಿಂದ)

ಅನಂತ ಪ್ರಣಯ


ಉತ್ತರದ್ರುವದಿಂ ದಕ್ಷಿಣದ್ರುವಕೂ
ಚುಂಬಕ ಗಾಳಿಯು ಬೀಸುತಿದೆ
ಸೂರ್ಯನ ಬಿಂಬಕೆ ಚಂದ್ರನ ಬಿಂಬವು
ರಂಜಿಸಿ ನಗೆಯಲಿ ಮೀಸುತಿದೆ.

ಭೂರಂಗಕೆ ಅಭಿಸಾರಕೆ ಕರೆಯುತ
ತಿಂಗಳು ತಿಂಗಳು ನವೆಯುತಿದೆ
ತುಂಬುತ ತುಳುಕುತ ತೀರುತ ತನ್ನೊಳು
ತಾನೇ ಸವಿಯನು ಸವಿಯುತಿದೆ.

ಭೂವನ ಕುಸುಮಿಸಿ ಪುಲಕಿಸಿ ಮರಳಿಸಿ
ಕೋಟಿ ಕೋಟಿ ಸಲ ಹೊಸೆಯಿಸಿತು
ಮಿತ್ರನ ಮೈತ್ರಿಯ ಒಸಗೆ ಮಸಗದಿದೆ
ಮರುಕದ ದಾರೆಯ ಮಸೆಯಿಸಿತು

ಅಕ್ಷಿನಮೀಲನ ಮಾಡದೆ
ನಕ್ಷತ್ರದ ಗಣ ಗಗನದಿ ಹಾರದಿದೆ
ಬಿದಿಗೆಯ ಬಿಂಬಾಧರದಲಿ ಇಂದಿಗು
ಮಿಲನದ ಚಿಹ್ನವು ತೋರದಿದೆ

                      - ದ ರಾ ಬೇಂದ್ರೆ
('ನಾದಲೀಲೆ' ಕವನ ಸಂಕಲನದಿಂದ)

ಅರ್ಧ ಚಂದ್ರ



ದೇವರ ಪೆಪ್ಪರಮೆಂಟೇನಮ್ಮಾ
ಗಗನದೊಳಲೆಯುವ ಚಂದಿರನು?
ಎಷ್ಟೇ ತಿಂದರು ಖರ್ಚೇ ಆಗದ
ಬೆಳೆಯುವ ಪೆಪ್ಪರಮೆಂಟಮ್ಮಾ!

ದಿನದಿನ ನೋಡುವೆ, ದಿನವೂ ಕರಗುತ
ಎರಡೇ ವಾರದೊಳಳಿಯುವುದು!
ಮತ್ತದು ದಿನದಿನ ಹೆಚ್ಚುತ ಬಂದು
ಎರಡೇ ವಾರದಿ ಬೆಳೆಯುವುದು!

ಅಕ್ಷಯವಾಗಿಹ ಪೆಪ್ಪರಮೆಂಟದು
ನನಗೂ ದೊರಕುವುದೇನಮ್ಮಾ? –
ನೀನೂ ದೇವರ ಬಾಲಕನಾಗುಲು
ನಿನಗೂ ಕೊಡುವನು, ಕಂದಯ್ಯ! –

ದೇವರ ಬಾಕನಾಗಲು ಒಲ್ಲೆ:
ಆತನ ಮೀರಿಹೆ ನೀನಮ್ಮಾ!
ತಾಯಿಯನಗಲಿಸಿ ದೇವರ ಹಿಡಿಸುವ
ಪೆಪ್ಪರಮೆಂಟೂ ಬೇಡಮ್ಮಾ!                  
                        - ಕುವೆಂಪು
('ನನ್ನ ಮನೆ' ಕವನ ಸಂಕಲನದಿಂದ)

ಹೋಗುವೆನು ನಾ


ಹೋಗುವೆನು ನಾ ಹೋಗುವೆನು ನಾ ನನ್ನ ಒಲುಮೆಯ ಗೂಡಿಗೆ;
ಮಲೆಯ ನಾಡಿಗೆ, ಮಳೆಯ ಬೀಡಿಗೆ, ಸಿರಿಯ ಚೆಲುವಿನ ರೂಢಿಗೆ.
ಬೇಸರಾಗಿದೆ ಬಯಲು, ಹೋಗುವೆ ಮಲೆಯ ಕಣಿವೆಯ ಕಾಡಿಗೆ:
ಹಸುರು ಸೊಂಪಿನ ಬಿಸಿಲು ತಂಪಿನ ಗಾನದಿಂಪಿನ ಕಾಡಿಗೆ!

ಬೇಸರಾಗಿದೆ ಬಯಲು ಸೀಮೆಯ ಬೋಳು ಬಯಲಿನ ಬಾಳಿದು.
ಬಿಸಿಲು, ಬೇಸಗೆ, ಬೀಸುವುರಿಸೆಕೆ; ತಾಳಲಾರದ ಗೋಳಿದು!
ಹೋಗುವೆನು ನಾ ಹೋಗುವೆನು ನಾ ನನ್ನ ಒಲುಮೆಯ ಗೂಡಿಗೆ:
ಬಿಳಿಯ ತಿಂಗಳ ಸಿರಿ ಬನಂಗಳ ಮಲೆಯ ಮಂಗಳ ನಾಡಿಗೆ!

ಅಲ್ಲಿ ಇಂತಿರಬೇಕು, ಇಂತಿರಬಾರದೆಂಬುವುದಿಲ್ಲವೈ;
ಅಲ್ಲಿ ಹೊರೆ ಹೊಣೆಯಿಲ್ಲ; ಶಾಸ್ತ್ರದ ವಿಧಿ ನಿಷೇಧಗಳಿಲ್ಲವೈ;
ಜಾತಿಗೀತಿಯ ವೇದಭೇದದ ಕಟ್ಟುಕಟ್ಟಳೆ ನಿಲ್ಲದೈ:
ಅಲ್ಲಿ ಪ್ರೀತಿಯೆ ನೀತಿ; ಧರ್ಮಕೆ ಬೇರೆ ಭೀತಿಯೆ ಸಲ್ಲದೈ!

ಅಲ್ಲಿ ತೆರೆತೆರೆಯದ್ರಿಪಂಕ್ತಿಗಳೆಲ್ಲೆ ಕಾಣದೆ ಹಬ್ಬಿವೆ:
ನಿಬಿಡ ಕಾನನರಾಜಿ ಗಿರಿಗಳನಪ್ಪಿ ಸುತ್ತಲು ತಬ್ಬಿವೆ.
ದೆಸೆಯ ಬಸವನ ಹಿಣಿಲ ಹೋಲಿವೆ; ಮುಗಿಲ ಚುಂಬನಗೈದಿವೆ
ತುಂಗ ಶೃಂಗಗಳಲ್ಲಿ; ದಿಕ್ತಟದಲ್ಲಿ ಸೊಂಡಿಲ ನೆಯ್ದಿವೆ!

ರವಿಯ ರಶ್ಮಿಯ ಪ್ರಜ್ಞೆಯಿಲ್ಲದ ವಿಪಿನ ನಿರ್ಜನ ರಂಗಕೆ,
ಮುಗಿಲನಂಡಲೆಯುತ್ತ ನಿಂತಿಹ ಧೀರ ಪರ್ವತ ಶೃಂಗಕೆ,
ವನ ವಿಹಂಗಸ್ವನ ತರಂಗಿತ ಪವನ ಪಾವನ ಸಂಗಕೆ,
ಹೋಗುವೆನು ನಾ ಮಧುರ ಸುಂದರ ಶೈಲವನ ಲಲಿತಾಂಗಕೆ!

ಅಲ್ಲಿ ಇವೆ ಕಾಜಾಣ, ಕೋಗಿಲೆ, ತೇನೆ, ಗಿಳಿ, ಕಾಮಳ್ಳಿಯು;
ಕಂಪೆಸೆವ ಸೀತಾಳಿ, ಕೇದಗೆ, ಬಕುಳ, ಮಲ್ಲಿಗೆ ಬಳ್ಳಿಯು.
ನೀಲಿ ಬಾನಲಿ; ಹಸುರು ನೆಲದಲಿ; ಕಂಗಳೆರಡನೆ ಬಲ್ಲವು:
ಅಲ್ಲಿ ಸಗ್ಗವೆ ಸೂರೆ ಹೋಗಿದೆ; ನಂದನವೆ ನಾಡೆಲ್ಲವು!

ನೆಳಲುಗತ್ತಲೆ ತೀವಿದಡವಿಯ ಹೊದರು ಹಳುವಿನ ಸರಲಲಿ
ಹುಲಿಯ ಗರ್ಜನೆ, ಹಂದಿಯಾರ್ಭಟೆ; ಕಾಡುಕೋಳಿಯ ಚೀರುಲಿ:
ದೊಡ್ಡು, ಕಡ, ಮಿಗ, ಮುಸಿಯ, ಕೋಡಗ, ಎರಳೆ, ಸಾರಗ, ಬರ್ಕವು,
ಹಾವು, ಉಡ, ಕಣೆಹಂದಿ, ಚಿಪ್ಪಿನ ಹಂದಿ, ಮುಂಗುಸಿ, ಕುರ್ಕವು!

ಬರಿಯ ಹೆಸರುಗಳಲ್ಲ, ನನಗಿವು ಸಾಹಸಂಗಳ ಕಿಡಿಗಳು;
ಕಂಡು ಕೇಳಿದ ಕಥೆಯನೊಡಲೊಳಗಾಂತ ಮಂತ್ರದ ನುಡಿಗಳು!
ಮಗುವುತನದಿಂದಿಂದುವರೆಗಾ ಒಂದು ಹೆಸರಿನ ಚೀಲಕೆ
ಸೇರಿ ಅನುಭವ ನೂರು ಕಲ್ಪನೆ, ಬಡ್ಡಿ ಮೀರಿದೆ ಸಾಲಕೆ!

ಅಲ್ಲಿ ಮೊರೆಮೊರೆದುರುಳಿ ಬರುತಿಹ ತೊರೆಯ ತೀರದ ಹಸುರಲಿ
ಮೊಲವು ಗರುಕೆಯ ಮೇದು ಕುಳಿತಿರೆ, ಬಳಿಯ ದಡದೆಡೆ ಕೆಸರಲಿ
ಒಂಟಿಕಾಲಲಿ ನಿಂತು ಕುಕ್ಕನ ಹಕ್ಕಿ ಬೆಳ್ಳಗೆ ಮೆರೆವುದು:
ಆಹ ನೆನೆದರೆ ಸಾಕು, ನನ್ನೆದೆಯುಕ್ಕಿ ಮೈಯನೆ ಮರೆವುದು!

ಅಲ್ಲಿ ನಡುಹಗಲಲ್ಲಿ, ಮೌನದಿ ನಿದ್ದೆಗೈದಿರೆ ಬನಗಳು,
ಬಿಸಿಲ ಬೇಗೆಗೆ ಮನೆಯ ಸೇರಿರೆ ಗೆಯ್ದು ದಣಿದಿಹ ಜನಗಳು,
ತಳಿತ ಹೊಂಗೆಯ ಕರಿಯ ನೆಳಲಲಿ ಮಲಗಿ ಜೋಂಪಿಸೆ ದನಗಳು,
ಕೊಳಲನೂದುವನಾಹ ಗೋಪನು ನಲಿಯಲಾ ಮೃಗ ಮನಗಳೂ!

ಗಗನದೆತ್ತರಕೆತ್ತಿ ಕಬ್ಬಿಗನೆದೆಯನೆದ್ದಿವೆ ಗಿರಿಗಳು;
ಗಗನದಾಚೆಗೆ ಬೀಸಿ ಮನವನು ಬಹವು ಮೋಡದ ಕರಿಗಳು;
ತೇಲಿ ಮುಂದಕೆ ನುಗ್ಗಿ, ತಿರುತಿರುಗುಬ್ಬಿ ಭೀಮಾಕಾರದಿ
ತಿರೆಗೆ ಬಾನಿಗೆ ನಡುವೆ ಬಂದಪವಡಗೆ ನೀಲದ ನೀರಧಿ!

ಅಲ್ಲಿ ಮಂದಾನಿಲನು ತೆಕ್ಕನೆಯಹನು ಜಂಝಾವಾತನು;
ಧ್ಯಾನ ಮೌನದ ವಿಪಿನ ತಾನಹುದಬ್ಬರಿಪ ಪೆರ್ಭೂತನು.
ಲಲಿತ ರುದ್ರಗಳಲ್ಲಿ ಯಮಳರು: ಹೂವು ಮುಳ್ಳಿಗೆ ಆರತಿ;
ಮುಗಿಲನಿರಿಯುವ ಶಿಖರಕಾಳದ ಕಣಿವೆ ತಕ್ಕೆಯ ಪೆಂಡಿತಿ!

ಅಲ್ಲಿ ಕಾನನ ಮಧ್ಯೆ ತುಂಗೆಯು ಮುತ್ತನಿಡುವಳು ಕಣ್ಣಿಗೆ;
ದಡದೊಳಿಡಿದಿಹ ಬಿದಿರು ಮೆಳೆಗಳ ಹಸುರು ಚಾಮರ ತಣ್ಣಗೆ
ಬೀಸುಗಾಳಿಗೆ ಒಲೆಯೆ, ಭದ್ರೆಯು ತುಂಬಿ ಹರಿವಳು ನುಣ್ಣಗೆ:
ಮಲೆಯ ಬಿತ್ತರದೆದುರು ಹೊನಲುಗಳೆನಿತು ನೋಡದೊ ಸಣ್ಣಗೆ!

ಚೈತ್ರ ಸಂಧ್ಯೆಯ ಮೊಗಕೆ ಮೆತ್ತುತೆ ಮುಗಿಲಕೂದಲ ಮಸಿಯನು,
ಮುಡಿಗೆದರಿ, ಸಿಡಿಲೊದರಿ, ಝಳಪಿಸಿ ಮಿಂಚಿನುಜ್ವಲ ಅಸಿಯನು
ಬಾನ ಕರೆಯಿಂ ನುಗ್ಗಿಬಹ ಮುಂಗಾರ ಕರಿ ರಕ್ಕಸಿಯನು
ಕಾಣುತುರ್ವರೆ ನವಿರುನಿಮಿರುವಳೆಳೆಯ ಹಸುರಿನ ಸಸಿಯನು!

ಮೊದಲು ಹದಮಳೆ ತಿರೆಯ ತೊಯ್ಯಲು ಮಿಂದ ಕಾಫಿಯ ತೋಟವು
ಇಂದ್ರನಂದನದಮರ ವೃಂದಕು ಬೆರಗನೀಯುವ ನೋಟವು!
ಬೆಟ್ಟದೋರೆಯು, ಕಣಿವೆ, ತಪ್ಪಲು, ಗಿರಿಯ ನೆತ್ತಿಯೊಳೆಲ್ಲಿಯೂ
ಕಣ್ಣು ಹೋಹೆಡೆಯಲ್ಲಿ ಕಾಫಿಯ ಹೂವು: ಬೆಣ್ಣೆಯು, ಬೆಳ್ಳಿಯು!

ಗಗನದಭ್ರತೆ ಜಗದ ಶುಭ್ರತೆಯೆಲ್ಲ ಸುಂದರ ಶಾಪದಿ
ಕಾಫಿಕಾನಿಗೆ ಬಂದು ನಿಂದಿವೆ ಪುಷ್ಪಪುಣ್ಯದ ರೂಪದಿ!
ಕಣ್ಣು ತಣಿವುದು; ಮನವು ಮಣಿವುದು: ಹಾಲುಹೂವಿನ ಹೊಳೆಯಲಿ
ಅಮೃತಸ್ನಾನವೊ ಮೇಣು ಪಾನವೊ ಬಿಳಿಯ ಮುತ್ತಿನ ಮಳೆಯಲಿ!

ಹಾತೊರೆಯುತಿದೆ; ಕಾತರಿಸುತಿದೆ; ಮನಕೆ ಮನೆಗಿರ ಹಿಡಿದಿದೆ!
ನೆನಹಿನಲರಿನ ಬಂಡನಾತ್ಮದ ಭೃಂಗ ಹೊಡೆನಲಿ ಕುಡಿದಿದೆ!
ಹೋಗುವೆನು ನಾ ಹೋಗುವೆನು ನಾ ನನ್ನ ಒಲುಮೆಯ ಗೂಡಿಗೆ:
ಬಿಳಿಯ ತಿಂಗಳ ಸಿರಿ ಬನಂಗಳ ಮಲೆಯ ಮಂಗಳ ನಾಡಿಗೆ!

ಮೂಡು ಬಾನಿನ ಮೊಗದಿ ಮಲರಲು ಉಷೆಯ ನಸುನಗೆ ತಾವರೆ,
ತುಂಬಿ ತುಳುಕೆ ದಿಗಂತದತ್ತಣಿನರುಣ ಕಾಂತಿಯ ಹೊಂದೊರೆ,
ಕುಸುಮಧೂಳಿಯ ಕೆದರ್ವ ಗಾಳಿಯು ಬೀಸಿ ಪರಿದಿರೆ ಕಳ್ತಲೆ,
ಏರುವೆನು ನಾ ನವಿಲುಕಲ್ಲಿಗೆ ನೇಸರುದಯವನಿದಿರ್ಗೊಳೆ!

ಸಂಜೆ ಕುಂಕುಮರಂಗಿನೋಕುಳಿಯೆರಚುತಿಳಿತರೆ ಬನದಲಿ,
ಗೂಡಿಗೋಡುವ ಹಕ್ಕಿಯಿಂಚರ ನೆಯ್ಯೆ ನಾಕವ ಮನದಲಿ,
ಹಾದಿಯಲಿ ಹೊಂಧೂಳಿಯೆಬ್ಬಿಸಿ ಗೋಗಳೈತರೆ ಹಟ್ಟಿಗೆ,
ಕಾನನದ ಕವಿಶೈಲಕೇರುವೆ, ಮನೆಯ ಮೇಲಕೆ ನೆಟ್ಟಗೆ!

ಗಾಳಿ ಸುಯ್ಯನೆ ಬೀಸಿ ಮರಗಳ ತೂಗುತುಯ್ಯಲೆಯಾಡಲು,
ಶೈಲಶೈಲಿಯ ಮೈಲಿಮೈಲಿಯ ದೂರ ದಿನಮಣಿ ಬಾಡಲು,
ಬೇಟೆಗಾರನನಡವಿಯಿಂ ಮನೆಗೆಳೆವ ಬೆಳ್ಳಿಯು ಮೂಡಲು
ಸಂಜೆಗಿರಿಯಾ ಶೃಂಗಕೇರುವೆ ದಿವ್ಯದೃಶ್ಯವ ನೋಡಲು!

ಎಲ್ಲಿ ತಿಂಗಳು ಕಾಡುಮಲೆಗಳ ಮೇಲೆ ಹಾಲ್ಮಳೆ ಸುರಿವುದೋ,
ಕಿವಿಯ ಜಿಹ್ವೆಗೆ ಎಲ್ಲಿ ಜೊನ್ನುಣಿ ತೇನೆ ಜೇನ್ಮಳೆ ಕರೆವುದೋ,
ಎಲ್ಲಿ ಕದ್ದಿಂಗಳಲಿ ತಾರಾಕೋಟಿ ಕಿಡಿಕಿಕ್ಕಿರಿವುದೋ,
ಕಾರಿನಿರುಳಲಿ ಮಿಂಚುಹುಳುಗಳ ಸೇನೆ ಕತ್ತಲೆಗಿರಿವುದೋ,

ಎಲ್ಲಿ ಹಸುರನು ಚಿಮ್ಮಿ ಕಣ್ಣಿಗೆ ಪೈರುಪಚ್ಚೆಯು ಬೆಳೆವುದೋ,
ಎಲ್ಲಿ ಗದ್ದೆಯ ಕೋಗು ಪವನನ ಹತಿಗೆ ತೆರೆತೆರೆಯೊಲೆವುದೋ,
ಬಿಂಗಗಣ್ಗಳ ಮಲೆಯ ಹೆಣ್ಗಳ ದಿಟ್ಟಿಯೆಲ್ಲೆದೆ ಸೆಳೆವುದೋ,
ಎಲ್ಲಿ ಕಾಲವು ತೇಲಿ ಸುಖದಲಿ ತಿಳಿಯದಂತೆಯೆ ಕಳೆವುದೋ,

ಅಲ್ಲಿಗೈದುವೆನಲ್ಲಿಗೈದುವೆನಿಲ್ಲಿ ಬೇಸರವಾಗಿದೆ:
ಕಾಡುಮಲೆಗಳನಲೆವ ಹುಚ್ಚಿನ ಕಿಚ್ಚು ಹೃದಯದಿ ರೇಗಿದೆ!
ಹೋಗುವೆನು ನಾ ಹೋಗುವೆನು ನಾ ನನ್ನ ಒಲುಮೆಯ ಗೂಡಿಗೆ:
ಹಸುರು ಸೊಂಪಿನ ಬಿಸಿಲು ತಂಪಿನ ಗಾನದಿಂಪಿನ ಕೂಡಿಗೆ!

ಅಲ್ಲಿ ಭಾವದ ಬೆಂಕಿಹಕ್ಕಿಯ ಮಿಂಚುರೆಕ್ಕೆಯನೇರುವೆ:
ಧರಣಿ, ದಿನಮಣಿ, ತಾರೆ, ನೀಹಾರಿಕೆಯ ನೇಮಿಯ ಮೀರುವೆ!
ಕಾಲದಾಚೆಗೆ, ದೇಶದಾಚೆಗೆ, ಚಿಂತೆಯಾಚೆಗೆ ಹಾರುವೆ:
ಕಾವ್ಯಕನ್ಯಾ ಶ್ರಾವ್ಯಕಂಠದೊಳಾತ್ಮಭೂತಿಯ ಸಾರುವೆ!

ನಗರ ನಾಗರಿಕತೆಯ ಗಲಿಬಿಲಿ ಅಲ್ಲಿ ಸೋಂಕದು, ಸುಳಿಯದು.
ದೇಶದೇಶದ ವೈರಯುದ್ಧದ ಸುದ್ದಿಯೊಂದೂ ತಿಳಿಯದು.
‘ತಿಳಿಯದಿರುವುದೆ ತಿಳಿವು’ ಎಂಬುವ ನನ್ನಿ ಆಯೆಡೆ ತಿಳಿವುದು.
‘ತಿಳಿಯೆ ನೋವಿರೆ, ತಿಳಿಯದಿರುವುದೆ ಜಾಣ್ಮೆ’ ಎಂಬರಿವುಳಿವುದು!

ಹೋಗುವೆನು ನಾ ಹೋಗುವೆನು ನಾ ನನ್ನ ಒಲುಮೆಯ ಗೂಡಿಗೆ:
ಮಲೆಯನಾಡಿಗೆ, ಮಳೆಯ ಬೀಡಿಗೆ, ಸಿರಿಯ ಚೆಲುವಿನ ರೂಢಿಗೆ.
ಬೇಸರಾಗಿದೆ ಬಯಲು, ಹೋಗುವೆ ಮಲೆಯ ಕಣಿವೆಯ ಕಾಡಿಗೆ:
ಹಸುರು ಸೊಂಪಿನ ಬಿಸಿಲು ತಂಪಿನ ಗಾನದಿಂಪಿನ ಕೂಡಿಗೆ!

                                                         - ಕುವೆಂಪು
                                   ('ಪಕ್ಷಿಕಾಶಿ' ಕವನ ಸಂಕಲನದಿಂದ)

ನನ್ನ ಹಾಡು



ನನ್ನ ಹರಣ
ನಿನಗೆ ಶರಣ
ಸಕಲ ಕಾರ್ಯ ಕಾರಣಾ
ನಿನ್ನ ಮನನ-
ದಿಂದ ತನನ-
ವೆನುತಿದೆ ತನು ಪಾವನಾ.

ಸುಖದ ಮಿಷವು
ದುಃಖ ವಿಷವು
ಹಿಗ್ಗಿ ಪ್ರಾಣಪೂರಣಾ
ಪಂಚಕರಣ-
ಗಳೀ ಗಡಣ
ಕಟ್ಟಿತು ಗುಡಿ ತೋರಣಾ.

ನಿನ್ನ ಚರಣ
ಸುಸಂತರಣ
ಜಗದ್ಭರಿತ ಭಾವನಾ
ಹಾಸ್ಯಕಿರಣ
ತದನುಸರಣ
ತದಿತರ ಪಥ ಕಾಣೆ ನಾ.

ಹರುಷ ರಸವೆ
ಕರುಣದಸುವೆ
ಜೀವಧರ್ಮಧಾರಣಾ.
ರಸವೆ ಜನನ
ವಿರಸ ಮರಣ
ಸಮರಸವೆ ಜೀವನ.

              - ದ ರಾ ಬೇಂದ್ರೆ

ಬಾ ಫಾಲ್ಗುಣ ರವಿ ದರ್ಶನಕೆ!


ಶಿವಮಂದಿರಸಮ ವನಸುಂದರ ಸುಮಶೃಂಗಾರದ ಗಿರಿಶೃಂಗಕೆ ಬಾ;
ಬಾ ಫಾಲ್ಗುಣ ರವಿ ದರ್ಶನಕೆ!

ಕುಂಕುಮ ಧೂಳಿಯ ದಿಕ್ತಟವೇದಿಯೊಳೋಕುಳಿಯಲಿ ಮಿಂದೇಳುವನು;
ಕೋಟಿವಿಹಂಗಮ ಮಂಗಲರವ ರಸನೈವೇದ್ಯಕೆ ಮುದ ತಾಳುವನು;
ಚಿನ್ನದ ಚೆಂಡನೆ ಮೂಡುವನು; ಹೊನ್ನನೆ ಹೊಯ್‌ನೀರ್ ನೀಡುವನು.
ಸೃಷ್ಟಿಯ ಹೃದಯಕೆ ಪ್ರಾಣಾಗ್ನಿಯ ಹೊಳೆಹರಿಯಿಸಿ ರವಿ ದಯಮಾಡುವನು!

ತೆರೆತೆರೆಯಾಗಿಹ ನೊರೆನೊರೆ ಕಡಲೆನೆ ನೋಡುವ ಕಣ್ಣೋಡುವವರೆಗೆ
ಬನಸಿರಿ ತುಂಬಿದ ಕಣಿವೆಯ ಹಂಬಿರೆ ಧೂಳೀಸಮಹಿಮ ಬಾನ್‌ಕರೆಗೆ
ಪ್ರತಿಭೆಯ ಹೋಮಾಗ್ನಿಯ ಮೇಲೆ ಕವಿಮನ ತಾನುರಿದುರಿದೇಳೆ
ಮರಗಿಡದಲಿ ಜಡದೊಡಲಲಿ ಇದೆಕೋ ಸ್ಪಂದಿಸುತಿದೆ ಭಾವಜ್ವಾಲೆ!

ವರ್ಣನದಿಂದ್ರಿಯ ನಂದನವನು ದಾಂಟುತೆ ದರ್ಶನ ಮುಕ್ತಿಯ ಸೇರಿ
ವ್ಯಕ್ತಿತೆ ಮೈಮರೆವುದು ಸೌಂದರ್ಯ ಸಮಾಧಿಯೊಳಾನಂದವ ಹೀರಿ:
ಸರ್ವೇಂದ್ರಿಯ ಸುಖನಿಧಿ ಅಲ್ಲಿ; ಸರ್ವಾತ್ಮನ ಸನ್ನಿಧಿ ಅಲ್ಲಿ;
ಸಕಲಾರಾಧನ ಸಾಧನಬೋಧನದನುಭವರಸ ತಾನಹುದಲ್ಲಿ!
                                       
                                                 - ಕುವೆಂಪು
                             ('ಪಕ್ಷಿಕಾಶಿ' ಕವನ ಸಂಕಲನದಿಂದ)

ಪರಾಗ


ಬಾ ಭೃಂಗವೆ ಬಾ, ವಿರಾಗಿಯಂದದಿ
ಭ್ರಮಿಸುವಿ ನೀನೇಕೆ?
ಕಂಪಿನ ಕರೆಯಿದು ಸರಾಗವಾಗಿರೆ
ಬೇರೆಯ ಕರೆ ಬೇಕೆ?

ಬರಲಿಹ ಕಾಯಿಯ ಪಾಡಿನ ರುಚಿಯೂ
ಇದರೊಳು ಮಡಗಿಹುದು.
ನಾಳಿನ ಹಣ್ಣಿನ ರಸವಿಲ್ಲಿಯ ಮಕ-
ರಂದದೊಳಡಗಿಹುದು.

ಕವನ ಕೋಶದೀ ಕಮಲ ಗರ್ಭದಲ್ಲಿ
ಪರಾಗವೊರಗಿಹುದು.
ನಿನ್ನ ಮುಖಸ್ಪರ್ಶವೂ ಸಾಕು; ಹೊಸ
ಸೃಷ್ಟಿಯೆ ಬರಬಹುದು.

                      - ದ ರಾ ಬೇಂದ್ರೆ
('ಸಖೀಗೀತ' ಕವನ ಸಂಕಲನದಿಂದ)

ಒಬ್ಬ ತಾಯಿಗೆ


ಜಗದೀಶ್ವರನೆ ವಿಶ್ವಸಂಸಾರಿಯಾಗಿರಲು
ಸಂಸಾರ ಪಾಶವೆಂದೆನಬೇಡವೈ.
ಹುಟ್ಟುಹಾಕಲು ನಿನಗೆ ಬಾರದಿರೆ, ಕೂಡದಿರೆ,
ಬರಿದೆ ನೀಂ ದೋಣಿಯನು ಶಪಿಸಬೇಡೈ!
ಮಾಡುವುದನೆಲ್ಲ ತನ್ನಾತ್ಮಸಾಧನೆಯೆಂದು
ಕರ್ಮಗೈ; ಅದುವೆ ಪೂಜೆಯ ಮರ್ಮವೈ.
ಶಿವನ ಕಾರ್ಯದೊಳಾವು ಶಿರಬಾಗಿ ನೆರವಾಗೆ
ನಮಗದುವೆ ಪರಮಪಾವನ ಧರ್ಮವೈ.
ಹಸುಳೆಯನು ಮೀಯಿಸಲು ಹರನಿಗಭಿಷೇಕವದು;
ಶಿಶುವಿಗೂಡಿಸೆ ಶಿವಗೆ ನೈವೇದ್ಯವೈ!
ಕಂದನಲಿ ಶಿವನ ಕಾಣುವ ಬಂಧನವೆ ಮುಕ್ತಿ;
ತಪಕೊಲ್ಲದದು ತಾಯ್ತನಕೆ ಸಾಧ್ಯವೈ!

                            - ಕುವೆಂಪು
('ಪ್ರೇಮ ಕಾಶ್ಮೀರ' ಕವನ ಸಂಕಲನದಿಂದ)

ಮೂರ್ತಿಯ ಚಂದ್ರ


ಎಲ್ಲಿಗೆ ನಾ ಹೋದರಲ್ಲಿಗೆ ಬರುವನು,
ಅಮ್ಮಾ, ಚಂದಿರ ನನ್ನವನು;
ನಿನ್ನವ ನಾನಾಗಿರುವುದರಿಂದ.
ಅಮ್ಮಾ, ಚಂದಿರ ನಿನ್ನವನು
ಮೂಡಣ ದೆಸೆಯೊಳು ಗಿರಿಗಳನೇರುತ
ಓಡುತ ಬರುತಿರೆ ನನಗಾಗಿ
ಮೂಡುವನೆಂಬರು ಜನರೆಲಮ್ಮಾ,
ಕೂಡಲು ಬರುತಿರೆ ಮೂರ್ತಿಯನು !
ನಮ್ಮನೆಯಂಗಳದಲ್ಲಾಡುತಿರೆ ನಾನು
ನೆತ್ತಿಯ ಮೇಲೆಯೆ ತೋರುವನು !
ಮಾವನ ಮನೆಯೊಳಗುಳಿಯಲು ಹೋದರೆ
ಅಲ್ಲಿಗು ಬರುವನು ಚಂದಿರನು !
ನೆರೆಮನೆ ಕಿಟ್ಟುವು ಕರೆದರೆ ಹೋಗನು;
ಮೂರ್ತಿಯನೆಂದೂ ಬಿಟ್ಟಿರನು !
ಎಲ್ಲಿಗೆ ನಾ ಹೋದರಲ್ಲಿಗೆ ಬರುವನು,
ಅಮ್ಮಾ, ಚಂದಿರ ನನ್ನವನು !

                    - ಕುವೆಂಪು
   ('ನನ್ನ ಮನೆ' ಕವನ ಸಂಕಲನದಿಂದ)

ಇಳಿದು ಬಾ ತಾಯೆ ಇಳಿದು ಬಾ

ಚಿತ್ರ: ಗೋಕಾಕ್ ಜಲಪಾತ, ಬೆಳಗಾವಿ 

ಓಂ ಸಚ್ಚಿದಾನಂದ ತ್ರಿತ್ವ ಮುಖವಾದ ಪರಬ್ರಹ್ಮದಲ್ಲಿ
ಅಭವದೊತ್ತಾದೆ ಭವದ ಬಿತ್ತಾದೆ ಋತದ ಚಿತ್ತಾದೆ ನೀ
ಇಳಿದು ಬಾ ಇಳೆಗೆ ತುಂಬಿ ತಾ ಬೆಳೆಗೆ ಜೀವ ಕೇಂದ್ರದಲ್ಲಿ
ಮತ್ತೆ ಮೂಡಿ ಬಾ ಒತ್ತಿ ನೀನೆನ್ನ ಚಿತ್ತ ಪೃಥ್ವಿಯಲ್ಲಿ ||

ಋತದ ಚಿತ್ತಾಗಿ ವಿಶ್ವಗಳ ಸೃಜಿಸಿ ನಡೆಸುತಿಹ ಶಕ್ತಿಯೆ
ಅನ್ನ ಪ್ರಾಣಗಳ ಮನೋಲೋಕಗಳ ಸೂತ್ರಧರ ಯುಕ್ತಿಯೆ
ಅಖಿಲ ಬಂಧನದ ಹೃದಯದಲ್ಲಿ ಅವಿನಾಶಿ ಆಸಕ್ತಿಯೆ
ನಿನ್ನ ಅವತಾರವೆನ್ನ ಉದ್ಧಾರ ಬಾ ದಿವ್ಯ ಮುಕ್ತಿಯೆ
ಎಲ್ಲವನು ಮಾಡಿ ಎಲ್ಲರೊಳಗೂಡಿ ನೀನೆ ಎಲ್ಲವಾದೆ
ಜ್ಯೋತಿಯಾದರೂ ತಮೋಲೀಲೆಯಲಿ ಜಡದ ಮುದ್ರೆಯಾದೆ
ಎನಿತು ಕರೆದರೂ ಓಕೊಳ್ಳದಿರುವಚಿನ್ನಿದ್ರೆಯಾದೆ
ಬೆಳಗಿ ನನ್ನಾತ್ಮಕಿಳಿದು ಬಾ ತಾಯೆ ನೀನೆ ಬ್ರಹ್ಮ ಬೋಧೆ
ಇಳಿದು ಬಾ ತಾಯೆ ಇಳಿದು ಬಾ ||

ಗಾಳಿಗುಸಿರು ನೀ ಬೆಂಕಿಗುರಿಯು ನೀನುದಕಕದರ ಜೀವ
ಅಗ್ನಿ ಇಂದ್ರ ವರುಣಾರ್ಕ ದೇವರನು ಮಾಡಿ ನೋಡಿ ಕಾವ
ಶಿವನ ಶಕ್ತಿ ನೀ, ವಿಷ್ಣು ಲಕ್ಷ್ಮೀ ನೀ, ಚತುರ್ಮುಖನ ರಾಣಿ
ದಿವ್ಯ ವಿಜ್ಞಾನ ನನ್ನೊಳುದ್ಭವಿಸೆ ಮತಿಗಾಗಮಿಸು, ವಾಣಿ
ಹೃದಯ ಪದ್ಮ ತಾನರಳೆ ಕರೆವೆ ಬಾರಮ್ಮ ಬಾ, ಇಳಿದು ಬಾ
ಮನೋದ್ವಾರ ತಾ ಬಿರಿಯೆ ಕರೆವೆ ಜಗದಂಬೆ ಬಾ, ಇಳಿದು ಬಾ
ಅಗ್ನಿ ಹಂಸ ಗರಿಗೆದರೆ ಕರೆವೆ ಬಾ ತಾಯೆ ಬಾ, ಇಳಿದು ಬಾ
ಚೈತ್ಯ ಪುರುಷ ಯಜ್ಞಕ್ಕೆ ನೀನೆ ಅಧ್ವರ್ಯು, ಬಾ, ಇಳಿದು ಬಾ
ಇಳಿದು ಬಾ ತಾಯಿ ಇಳಿದು ಬಾ ||

                                                 - ಕುವೆಂಪು

ಇದು ಲೋಕವಂತೆ !


ಹೊಗಳು ಭಟ್ಟರ ಸಂತೆ -
ಇದು ಲೋಕವಂತೆ !
ಎಲ್ಲೆಲ್ಲಿಯೂ ಇವರೆ,
ಕಂತೆ ಕಂತೆ !

ಆದರ್ಶ-ಗೀದರ್ಶ
ಬರಿ ಬಣಗು ಕಂಥೆ
ಪುಸ್ತಕದ ಬದನೆ ಕಾಯ್
ತಿನುವುದಕೆ ಬಂತೆ?

ಬಾ ಹರಟು ಒಣ ಹರಟೆ
ಸಿಗರೇಟು ಹಚ್ಚು,
ಅವಳಂತೂ, ಇವಳಿಂತು -
ಇದೆ ನನಗೆ ಮೆಚ್ಚು.

ರಸಿಕತನ ಬೇಕಯ್ಯ
ಏನಿದ್ದರೇನು?
ಬಂಡಿಗಟ್ಟಲೆ ಓದಿ
ನೀ ಪದೆದುದೇನು?

ನೀ ಇಂದ್ರ ನೀ ಚಂದ್ರ
ಕಲಿಕರ್ಣ ಪಿಂಡ !
(ನಾನು ಅವರೊಳಗೊಬ್ಬ)
ಬಹದ್ದೂರ ಗಂಡ !

ಹೊಗಳಿ ಹೊಗಳಿಸಿಕೊಳುವ
ಚಿಂತೆಯೇ ಚಿಂತೆ.
ಒಂಟೆ ಮದುವೆಗೆ ಕತ್ತೆ
ಪದ ಹೇಳಿದಂತೆ.

                    -  ಜಿ ಎಸ್ ಶಿವರುದ್ರಪ್ಪ
      ('ದೇವಶಿಲ್ಪ' ಕವನ ಸಂಕಲನದಿಂದ)   

ಹಿಂದೆ ಹೇಗೆ ಚಿಮ್ಮುತಿತ್ತು


ಹಿಂದೆ ಹೇಗೆ ಚಿಮ್ಮುತಿತ್ತು
ಕಣ್ಣ ತುಂಬ ಪ್ರೀತಿ
ಈಗ ಯಾಕೆ ಜ್ವಲಿಸುತಿದೆ
ಏನೋ ಶಂಕೆ ಭೀತಿ

ಜೇನು ಸುರಿಯುತಿತ್ತು ನಿನ್ನ
ದನಿಯ ಧಾರೆಯಲ್ಲಿ
ಕುದಿಯುತಿದೆ ಈಗ ವಿಷ
ಮಾತು ಮಾತಿನಲ್ಲಿ

ಒಂದು ಸಣ್ಣ ಮಾತಿನಿರಿತ
ತಾಳದಾಯ್ತೆ ಪ್ರೇಮ
ಜೀವವೆರಡು ಕೂಡಿ ಉಂಡ
ಸ್ನೇಹವಾಯ್ತೆ ಹೋಮ

ಹಮ್ಮು ಬೆಳದು ನಮ್ಮ ಬಾಳು
ಆಯ್ತು ಎರಡು ಸೀಳು
ಕೂಡಿಕೊಳಲಿ ಮತ್ತೆ ಪ್ರೀತಿ
ತಬ್ಬಿಕೊಳಲಿ ತೋಳು
 
                  - ಎನ್.ಎಸ್. ಲಕ್ಷ್ಮಿನಾರಾಯಣ ಭಟ್ಟ

ನೀನಿಲ್ಲದೇ ನನಗೇನಿದೆ


ನೀನಿಲ್ಲದೇ ನನಗೇನಿದೆ
ಮನಸೆಲ್ಲ ನಿನ್ನಲ್ಲೇ ನೆಲೆಯಾಗಿದೆ
ಕನಸೆಲ್ಲ ಕಣ್ಣಲ್ಲೇ ಸೆರೆಯಾಗಿದೆ

ನಿನಗಾಗಿ ಕಾದು ಕಾದು ಪರಿತಪಿಸಿ ನೊಂದೇ ನಾನು
ಕಹಿಯಾದ ವಿರಹದ ನೋವು ಹಗಲಿರುಳು ತಂದೇ ನೀನು
ಎದೆಯಾಸೆ ಎನೋ ಎಂದು ನೀ ಕಾಣದಾದೇ
ನಿಶೆಯೊಂದೇ ನನ್ನಲ್ಲಿ ನೀ ತುಂಬಿದೆ
ಬೆಳಕೊಂದೇ ನಿನ್ನಿಂದ ನಾ ಬಯಸಿದೆ

ಒಲವೆಂಬ ಕಿರಣ ಬೀರಿ ಒಳಗಿರುವ ಬಣ್ಣ ತೆರೆಸಿ
ಒಣಗಿರುವ ಎದೆನೆಲದಲ್ಲಿ ಭರವಸೆಯ ಜೀವ ಹರಿಸಿ
ಸೆರೆಯಿಂದ ಬಿಡಿಸಿ ನನ್ನ ಆತಂಕ ನೀಗು
ಹೊಸ ಜೀವ ನಿನ್ನಿಂದ ನಾ ತಾಳುವೆ
ಹೊಸ ಲೋಕ ನಿನ್ನಿಂದ ನಾ ಕಾಣುವೆ

                      - ಎಮ್ .ಏನ್ . ವ್ಯಾಸರಾವ್

ಕವಿತೆ


ಬಿಡುವು ಒಂದೇ ಸಾಕೆ ಪದ್ಯ ಬರೆಯುವುದಕ್ಕೆ
ಅದಕೆ ಕಾಗದ ಬೇಕು, ಕಪ್ಪುಮಸಿಯೂ ಬೇಕು.
ಭಾವಗಳು ತಾವಾಗಿ ಲೇಖನಿಗಿಳಿಯಬೇಕು
ಹೃತ್ಕಮಲದಿಂದ. ಬಾಳಿನ ನೋವು ನಲಿವುಗಳು
ಮಾತಿಗೆ ಒಲಿಯಬೇಕು. ಚೆಲುವು ಒಲವುಗಳು
ತಾನಾಗಿ ಅರಳಿರಬೇಕು. ದುಃಖ ಸೇತುವೆಯ
ದಾಟಿದ ಒಳದನಿಯ ಆಹ್ವಾನವೂ ಕವಿಗೆ
ಇರಬೇಕು. ನಡುಹೊಳೆಯಲ್ಲಿ ಬಂಡೆಯ ಮೇಲೆ
ಹಿಂದೊಮ್ಮೆ ಸ್ವಪ್ನದಲಿ ಕಂಡ ರಾಜಕುಮಾರಿ
ವೀಣೆಯನು ಮಿಡಿಯುತ್ತ ಹಾಡುತ್ತಲಿರಬೇಕು.
ಛಂದಸ್ಸು ಇರಬೇಕು ಕುದುರೆಗಳ ನಡೆಯಂತೆ.
ಕವಿತೆ ಆಲೋಚನಾಮೃತ; ರಸಿಕರೆದೆಯಲ್ಲಿ
ಹುಣ್ಣಿಮೆಯ ಹೊಂಬೆಳಕು; ಹನಿಯಲ್ಲಿ ಒಂದು ಹೊಳೆ.
ಕವಿತೆ ಮೂಡುವ ತನಕ ನಾವು ಕಾದಿರಬೇಕು.

                                 - ಕೆ ಎಸ್ ನರಸಿಂಹಸ್ವಾಮಿ

ಗೆಳೆತನ


ಕೊನೆಗಾಣದೆ ಬಿಗಿಮಾಣದೆ ತಳುವಬೇಕು - ಗೆಳೆತನ.
ತಳುವಬೇಕು - ನನಗೆ ನಿನಗೆ ಬರುವ ತನಕ ಕೊನೆದಿನ.
ತಳಿರ ತಳಿರ ತಳ್ಕೆಯಂತೆ ಮೃದುಲ ಮಧುರ ಜೀವನ.
ಮಲರ ಮಲರ ಮಾಳ್ಕೆಯಂತೆ ಮನದ ಮನದ ಮಿದುತನ.

ಒಂದೆ ಗಾನತಾನ ನನ್ನ ನಿನ್ನ ಹೃದಯ ಮಿಲನಕೆ.
ಒಂದೆ ಅಚ್ಚುಮೆಚ್ಚು ನಮ್ಮ ಭಾವ ಜೀವ ವಲನಕೆ.
ಒಂದೆ ಅಂಕೆಸಂಖ್ಯೆ ನಮ್ಮ ಸೌಖ್ಯದ ಸಂಕಲನಕೆ.
ಒಂದೆ ಗಮ್ಯಗತಿಯು ನಮ್ಮ ಜೀವನ ಸಂಚಲನಕೆ.

ಗುಡುಗು ಮಿಂಚಿನಂತೆ ಒಂದುಗೂಡಿ ಮೊಳಗಿ ಬೆಳಗುವಾ!
ಕಡಲುತಡಿಗಳಂತೆ ಒಂದನೊಂದು ತಡೆದು ತಡೆಹುವಾ
ಗಾಳಿ ಕಿಚ್ಚಿನಂತೆ ಕೂಡಿಯಾಡಿ ತಿರೆಯ ಬೆಳಗುವಾ!
ಬಾನುಬುವಿಗಳಂತೆ ಒಂದಕೊಂದು ಸೀಮೆ ಎನಿಸುವ!

ಮುಗಿಲ ಯುಗಲದಂತೆ ಬಂದು ಸೇರಿ ಸಾರಿ ಅಗಲದೆ,
ಹಗಲ ಮೊಗದ, ರಾಗದಂತೆ ಸಂಜೆಯೊಡನೆ ಜಗುಳದೆ
ಗಾಳಿಗೈಯ ತರಗಲಂತೆ ಕಲೆತು ತಿರುಗಿ ಕದಲದೆ
ಬಾಳಬೇಕು, ಬೆಳೆಯಬೇಕು ಸಖ್ಯ ಕ್ಷಣಿಕವೆನಿಸದೆ.

ನಿನ್ನೊಳೊಂದೆ ಭಿಕ್ಷೆ ಗೆಳತಿ, ಅದುವೆ ಹೃದಯದಾನವು!
ಜನ್ಮಮೃತ್ಯುಗಳಲು ನಗುವ ಪ್ರೇಮದಮೃತ ಪಾನವು.
ದುಃಖ ಸುಖಗಳನ್ನು ಮಿಗುವ ತ್ಯಾಗದ ಮರಗಾನವು
ಹೊಂದುವಳಿಕೆ ತವದ ಸೌಖ್ಯಯೋಗದ ಭ್ರಯಾನವು.

ನನ್ನ ನಿನ್ನ ಜೀವ, ಗೆಳತಿ, ಒಂದಕೊಂದು ಪೂರಕ,
ನನ್ನ ನಿನ್ನ ಭಾವ ಒಂದಕೊಂದು ಕಾಂತಿದಾಯಕ.
ಒಂದು ಹೃದಯ ಧನುವು, ಮೆಣದೊಂದು ನಿಶಿತ ಸಾಯಕ
ಒಂದು ಗಂಗೆ, ಒಂದು ಯಮುನೆ - ಏಕ ಮಾರ್ಗವಾಹಕ.

ಹೀಗೆ ಬಾಳ್ವೆನೆಂಬೆ ಬಯಕೆಯೊಂದದೇಕೆ ಹಿರಿದಿದೆ?
ಯೋಗವಿದು ನಿರರ್ಥ, ನಿನ್ನ ಹೃದಯ ಯೋಗ ಬರದಿರೆ.
ಬರಿಯ ಕೆಂಡ ಗಳಿಗೆಯೊಳಗೆ ನಂದಿ ಕಾಂತಿಯುಳಿಯದೆ?
ನೆರವು ಬರಲು ಗಾಳಿಯಿಂದ ಅದರ ಬಾಳು ಬೆಳಗದೆ?

                                   - ಗೋಪಾಲಕೃಷ್ಣ ಅಡಿಗ
                     ('ಕಟ್ಟುವೆವು ನಾವು' ಕವನ ಸಂಕಲನದಿಂದ)

ತಾಯಿ - ಕೂಸು


           ೧
ಹಸುಗೂಸು ಮಲಗಿಹುದು
ಹುಸಿನಗೆಯು ತೊಲಗಿಹುದು.
ಕನಸಿನಾಚೆಗಿರುವ ನಿದ್ದೆಯಲ್ಲಿ
ತನ್ನನ್ನೂ ಮರೆತಿಹುದೊ
ತನ್ನೊಳಗೆ ಬೆರೆತಿಹುದೊ
ಹಸಿವು ಭಯ ಮುದ್ದಾಟವಿಲ್ಲ ಅಲ್ಲಿ.

           ೨
ಉಸಿರ ದಾರದ ತುದಿಗೆ
ಹಾರುಹಕ್ಕಿಯ ಬದಿಗೆ
ಜೀವಪಟ ಹೆಡೆಯಾಟವಾಡುತಿಹುದು
ಮೇಲ್ಮುಗಿಲ ಗಾಳಿಯಲಿ
ತನ್ನೊಂದು ಲೀಲೆಯಲಿ
ತೀರಲದು ತಾನೆ ಇಳೆಗಿಳಿಯಲಹುದು.

           ೩
ಕೆಲಸದಲಿ ಬಿಡುವಿಲ್ಲ
ಕೂಸಿನಲಿ ಮನವೆಲ್ಲ
ತಾಯಿ ಯೋಗಿನಿ ಮೈಲಿ ದುಡಿಯುತಿಹಳು
ತನ್ನೆದೆಯ ತೊಟ್ಟಿಲಲಿ
ಕಂದನನು ಇಟ್ಟಲ್ಲಿ
ಕಂಠದಲಿ ಜೋಗುಳವ ನುಡಿಸುತಿಹಳು

          ೪
ಇತ್ತ ಮರುಳಾಟದಲೊ
ಜೀವದೊಳತೋಟಿಯಲೊ
ಮುಖರಂಗಮಂಡಲದಿ ಭಾವ ಭಾವ!
ಹುಬ್ಬು ಗಂಟಿಕ್ಕುವುದು ;
ಎದೆ ಏಕೊ ಬಿಕ್ಕುವುದು ;
ತುಟಿಯು ನಗುವುದು ; ಅದನು ಕಂಡನಾವ?

                   - ದ ರಾ ಬೇಂದ್ರೆ
      ('ನಾದಲೀಲೆ' ಕವನ ಸಂಕಲನದಿಂದ)

ಎದೆಯು ಮರಳಿ ತೊಳಲುತಿದೆ


ಎದೆಯು ಮರಳಿ ತೊಳಲುತಿದೆ
ದೊರೆಯದುದನೆ ಹುಡುಕುತಿದೆ ;
ಅತ್ತ ಇತ್ತ ದಿಕ್ಕುಗೆಟ್ಟು
ಬಳ್ಳಿ ಬಾಳು ಚಾಚುತಿದೆ
ತನ್ನ ಕುಡಿಯನು.

ಸಿಗಲಾರದ ಆಸರಕೆ
ಕಾದ ಕಾವ ಬೇಸರಕೆ
ಮಿಡುಕಿ ದುಡಿಯಲೆಳಸುತಿದೆ
ತನ್ನ ಗುಡಿಯನು.

ಅದಕು ಇದಕು ಅಂಗಲಾಚಿ
ತನ್ನೊಲವಿಗೆ ತಾನೆ ನಾಚಿ
ದಡವ ಮುಟ್ಟಿ ಮುಟ್ಟದೊಲು
ಹಿಂದೆಗೆಯುವ ವೀಚಿ ವೀಚಿ
ಮುರುಟುತಲಿವೆ ಮನದಲಿ!

ನೀರದಗಳ ದೂರ ತೀರ
ಕರೆಯುತಲಿದೆ ಎದೆಯ ನೀರ,
ಮೀರುತಲಿದೆ ಹೃದಯ ಭಾರ
ತಾಳಲೆಂದು ನಾ?

ಯಾವ ಬಲವು ಯಾವ ಒಲವು
ಕಾಯಬೇಕು ಅದರ ಹೊಳವು
ಕಾಣದೆ ದಳ್ಳಿಸಲು ಮನವು
ಬಾಳಲೆಂತು ನಾ?

              - ಗೋಪಾಲಕೃಷ್ಣ ಅಡಿಗ
     ('ಕಟ್ಟುವೆವು ನಾವು' ಕವನ ಸಂಕಲನದಿಂದ) 

ಈ ಬಾನು ಈ ಚುಕ್ಕಿ


ಈ ಬಾನು ಈ ಚುಕ್ಕಿ, ಈ ಹೂವು ಈ ಹಕ್ಕಿ
ತೇಲಿ ಸಾಗುವ ಮುಗಿಲು ಹರುಷವುಕ್ಕಿ
ಯಾರು ಇಟ್ಟರು ಇವನು ಹೀಗೆ ಇಲ್ಲಿ ?
ತುದಿ ಮೊದಲು ತಿಳಿಯದೀ ನೀಲಿಯಲಿ

ಒಂದೊಂದು ಹೂವಿಗೂ ಒಂದೊಂದು ಬಣ್ಣ
ಒಂದೊಂದು ಜೀವಕೂ ಒಂದೊಂದು ಕಣ್ಣ
ಯಾವುದೊ ಬಗೆಯಲ್ಲಿ ಎಲ್ಲರಿಗೂ ಅನ್ನ
ಕೊಟ್ಟ ಕರುಣೆಯ ಮೂಲ ಮರೆತಿಹುದು ತನ್ನ

ನೂರಾರು ನದಿ ಕುಡಿದು ಮೀರದ ಕಡಲು
ಬೋರೆಂದು ಸುರಿಸುರಿದು ಆರದ ಮುಗಿಲು
ಸೇರಿಯು ಕೋಟಿ ತಾರೆ ತುಂಬದ ಬಯಲು
ಯಾರದೀ ಮಾಯೆ ಯಾವ ಬಿಂಬದ ನೆರಳು ?

ಹೊರಗಿರುವ ಪರಿಯೆಲ್ಲ ಅಡಗಿಹುದೇ ಒಳಗೆ ?
ಹುಡುಕಿದರೆ ಕೀಲಿ ಕೈ ಸಿಗದೆ ಎದೆ ಯೊಳಗೆ
ತಿಳಿಯದ್ದೆಲ್ಲದರಲ್ಲಿ ಕುಳಿತಿರುವೆ ನೀನೆ, ಎನ್ನುವರು
ನನಗೀಗ ಸೋಜಿಗವು ನಾನೆ !
                                    
                          - ಎನ್.ಎಸ್ ಲಕ್ಷ್ಮೀನಾರಾಯಣ ಭಟ್ಟ

ನೋಡಮ್ಮಾ ಮುಗಿಲ ತುಂಬಾ....


ನೋಡಮ್ಮಾ ಮುಗಿಲ ತುಂಬಾ
ಬೆಳ್ ಬೆಳಕಿನ ಮಲ್ಲಿಗೆ
ಹಾರಿಹೋಗಿ ಕಿತ್ತು ತಂದು
ಮುಡಿಸಲೇನೆ ತರುಬಿಗೆ?

ನಮ್ಮ ಮನೆಯ ಅಂಗಳದಲಿ
ಅರಳಿ ನಗುವ ಹೂವಿಗಿಂತ
ದೊಡ್ದವೇನೆ ಅವುಗಳು?
ಹಸಿರು ನೆಲದ ಮೇಲೆ ಅರಳಿ
ನಗುವ ಬದಲು ಅಷ್ಟು ಮೇಲೆ
ಹೋದವೇಕೆ ಅವುಗಳು?

ನಾನೇ ದೇವರಾಗಿದ್ದರೆ
ಚಿಕ್ಕೆಯೆಲ್ಲ ನಮ್ಮೂರಿನ
ಮನೆ ಮನೆಯಲಿ ಅರಳುವಂತೆ
ಸೃಷ್ಟಿ ಮಾಡುತಿದ್ದೆನು
ಇಷ್ಟು ತಿಳಿಯಲಿಲ್ಲವೇನೆ
ಜಗವ ಮಾಡಿದಂಥ ದೇವ
ನಿಜವಾಗಿಯೂ ದಡ್ಡನು!

               - ಜಿ ಎಸ್ ಶಿವರುದ್ರಪ್ಪ
     ('ಪ್ರೀತಿ ಇಲ್ಲದ ಮೇಲೆ' ಕವನ ಸಂಕಲನದಿಂದ)

ಎಲ್ಲಿ ಜಾರಿತೋ ಮನವು


ಎಲ್ಲಿ ಜಾರಿತೋ ಮನವು ಎಲ್ಲೆ ಮೀರಿತೋ
ಎಲ್ಲಿ ಅಲೆಯುತಿಹುದೋ ಏಕೆ ನಿಲ್ಲದಾಯಿತೋ

ದೂರದೊಂದು ತೀರದಿಂದ ತೇಲಿ ಪಾರಿಜಾತ ಗಂಧ
ದಾಟಿ ಬಂತು ಬೇಲಿಸಾಲ ಮೀಟಿ ಹಳೆಯ ಮಧುರ ನೋವ

ಬಾನಿನಲ್ಲಿ ಒಂಟಿ ತಾರೆ ಸೋನೆ ಸುರಿವ ಇರುಳ ಮೊರೆ
ಕತ್ತಲಲ್ಲಿ ಕುಳಿತು ಒಳಗೆ ಬಿಕ್ಕುತಿಹಳು ಯಾರೋ ನೀರೆ

ಹಿಂದೆ ಯಾವ ಜನ್ಮದಲ್ಲೋ ಮಿಂದ ಪ್ರೇಮ ಜಲದ ಕಂಪು
ಬಂದು ಚೀರುವೆದೆಯ ಎದೆಯ ಹೇಳಲಾರೆ ತಾಳಲಾರೆ

ಎಲ್ಲಿ ಜಾರಿತೋ ಮನವು ಎಲ್ಲೆ ಮೀರಿತೋ
ಎಲ್ಲಿ ಅಲೆಯುತಿಹುದೋ ಏಕೆ ನಿಲ್ಲದಾಯಿತೋ

                                - ಎನ್.ಎಸ್ ಲಕ್ಷ್ಮೀನಾರಾಯಣ ಭಟ್ಟ

ದೇವರು ಸೆರೆಯಾಳ್


ದೇವರು ಸೆರೆಯಾಳ್, ದೇಗುಲ ಸೆರೆಮನೆ,
     ಕಾವಲು ಪೂಜಾರಿ!

ನೀನಾವಾಗಲು ನನ್ನಯ ಬಳಿಯಿರೆ
       ಬಲು ತೊಂದರೆ ಎಂದು
ಗಿರಿಶಿಕರದೊಳತಿದೂರದಿ ಕಟ್ಟಿದೆ
       ಗುಡಿಯನು ನಿನಗೊಂದು;
ಕಲ್ಲಿನ ಗೋಪುರ, ಕಲ್ಲಿನ ಗೋಡೆ,
ದುರ್ಗದವೊಲೆ ಬಲು ದುರ್ಗಮ ನೋಡೆ!

ಸೆರೆಯನು ತಪ್ಪಿಸಿ ಕೊಳ್ಳದ ತೆರದಲಿ
      ಅರ್ಚಕ ರಕ್ಷೆಯಿದೆ;
ತೆಂಗಿನ ಕಾಯೊಳೆ ತಲೆಯನು ಬಡಿಯುವ
       ಪೂಜೆಯ ಶಿಕ್ಷೆಯಿದೆ!
ಪುರಸತ್ತಾದರೆ ಕೆಲಸದೊಳಿಲ್ಲಿ
ಬೇಸರ ಪರಿಹಾರಕೆ ಬಹೆನಲ್ಲಿ!  
                     
                      - ಕುವೆಂಪು
('ಕೋಗಿಲೆ ಮತ್ತು ಸೋವಿಯತ್ ರಷ್ಯ' ಕವನ ಸಂಕಲನದಿಂದ)