ಹೆಸರು ಕೂಡ ತಿಳಿಯಲಿಲ್ಲ




ಹೆಸರು ಕೂಡ ತಿಳಿಯಲಿಲ್ಲ
ಅವನ ಒಲಿದೆನೋ
ಯಾವ ನೆಲೆಯೋ ಯಾವ ಕುಲವೋ
ಒಂದು ತಿಳಿಯೆನು.

ಕಂಡೊಡನೆ ಸೋತೆ ನಾನು ಏನೂ ನೋಡದೆ
ಮಾಯದಿರುಳ ಮರುಳಿನಲ್ಲಿ ಮನವ ನೀಡಿದೆ
ನಿನ್ನ ವಿನಾ ಬಾಳೆನು ನಾ ಎಂದು ನುಡಿವೆನು
ಮೊರೆವ ತೊರೆವ ಸೆಳವಿನಲ್ಲಿ ಕೈಯ ಹಿಡಿದೆನು
ಕೈಯ ಹಿಡಿದೆನು.

ತುಟಿಯ ಬಿಸಿ ಹಾಗೆ ಇದೆ ತುಸು ಆರದೇ
ಎದೆಯೊಳೆನೋ ಉರಿಯುತಿದೆ ಹೊರಗೆ ತೋರದೆ
ಪ್ರೇಮ ಪತ್ರ ಬರೆದು ಬರೆದು ಕಳಿಸಿ ಪ್ರಿಯನಿಗೆ
ಕಾಯುತಿರುವೆ ಉತ್ತರ ವಿಳಾಸ ಬರೆಯದೆ
ವಿಳಾಸ ಬರೆಯದೆ ವಿಳಾಸ ಬರೆಯದೆ.
 
                -  ಎಚ್. ಎಸ್. ವೆಂಕಟೇಶಮೂರ್ತಿ

ಏಳಿರೈ ಬಾಲರೇ!





ಏಳಿರೈ! ಬಾಲರೇ! ದೇಶಸೇವೆಗೈಯುವ!
ಕೇಳಿರೈ! ಕೇಳಿರೈ! ತಾಯ ಗೋಳ ರೋದನ!
ಪರಕೀಯರ ಪದತಳದೊಳು
ಹೊರಳಾಡುತ ಅಳುತಿರುವಳು!
ಕಂಡು ನೀವು ಸಹಿಪರೇ?
ಗಂಡುಗಲಿಗಳಲ್ಲವೇ?
ಅರೆಹರಿದಿಹ ಪರವಸನವ
ಧರಿಸುತ ತಾ ಮೊರೆಯಿಡುವಳು!
ಅಮ್ಮನಿರುವ ಗತಿಯನು
ನೋಡಿ ಸುಮ್ಮನಿರುವರೇ?
ಧೂಳಾಗಿದೆ ಜನನಿಯ ಮುಖ
ಹಾಳಾಗಿದೆ ಜನನಿಯ ಸುಖ!
ಏಳಿ! ಏಕೆ ಜಡತನ?
ಏಳಿ! ಸಾಕು ಬಡತನ!
ವೀರಶಿವನ ಮರೆತಿರುವಿರ?
ಧೀರತನವ ತೊರೆದಿರುವಿರ?
ಏಳಿ, ಅಮೃತ ಪುತ್ರರೆ !
ಏಳಿ, ಆನಂದಾತ್ಮರೆ !

                   - ಕುವೆಂಪು ('ಮೇಘಪುರ' ಕವನಸಂಕಲನದಿಂದ)