ಕವನಗಳೆ ಮಂತ್ರಗಳು

ಕವನ ಪರ್ವತಧಾತ್ರಿ; ಕವನ ನೀಲಾಂಭೋಧಿ: ಕವನ ನೀಲಾಂಬರಂ;

ಕವನಗಳೆ ಮಂತ್ರಗಳು ರಸಯೋಗಿ ಋಷಿಕವಿಗೆ;
ಕವನಗಳೆ ದೇವಾಲಯಂ. ಕವನಗಳೆ ಪಾತ್ರೆ
ಕುಸುಮಾನುಭವಗಳಿಗೆ; ತೀರ್ಥಗಳಮೃತಯಾತ್ರೆ
ಕವನ ಪಠನಂ. ಕವನಗಳೆ ವೇದಮನುಭವಿಗೆ!
ಕವನ ರಚನೆಯೆ ಪೂಜೆ; ಕವನ ಗಾನವೆ ಭಕ್ತಿ.
ಕವನ ಮಂತ್ರದಿ ಸೃಷ್ಟಿ, ಕವನ ಮಂತ್ರದಿ ಲಯಂ;
ದೇವ ದೇವ ಪ್ರಾಣಕಂಪನ ರಸಾಲಯಂ!
ಕವನಗಳೆ ಭುಕ್ತಿ ಮೇಣತ್ಯಂತ ಸುಖಮುಕ್ತಿ!
ಕವನ ಕಾನನ ಪಂಕ್ತಿ; ಕವನ ಪರ್ವತಧಾತ್ರಿ;
ಕವನ ನೀಲಾಂಭೋಧಿ: ಕವನ ನೀಲಾಂಬರಂ;
ಕವನ ರವಿ; ಕವನ ಶಶಿ; ಕವನ ತಾರಾರಾತ್ರಿ;
ಕವನ ಶಿವನುನ್ಮಾದ ತಾಂಡವಾಡಂಬರಂ! -
ಪಾಂಡಿತ್ಯದರ್ಥಫಣಿಗಿದು ಕಾವ್ಯಗರುಡಮಣಿ:
ಕವಿಗೊರ್ವನಿಗೆ ಸಾಧ್ಯ; ಕವಿಗೊರ್ವನಿಗೆ ವೇದ್ಯ!

                                -  ಕುವೆಂಪು
            ('ಕೃತ್ತಿಕೆ' ಕವನ ಸಂಕಲನದಿಂದ)