ಈ ಕತ್ತಲನ್ನು ಗೆದ್ದು ನಿಲ್ಲುತ್ತೇನೆಂಬ ಜಿದ್ದಿನಿಂದಲ್ಲ;
ಲೆಕ್ಕವೇ ಇರದ ದೀಪಾವಳಿಯ ಹಡಗುಗಳೇ
ಇದರಲ್ಲಿ ಮುಳುಗಿ ಕರಗಿರುವಾಗ
ನಾನು ಹಚ್ಚುವ ಹಣತೆ ಶಾಶ್ವತವೆಂಬ ಭ್ರಾಂತಿ ನನಗಿಲ್ಲ.
ಹಣತೆ ಹಚ್ಚುತ್ತೇನೆ ನಾನೂ;
ಈ ಕತ್ತಲಿನಿಂದ ಬೆಳಕಿನ ಕಡೆಗೆ ನಡೆದೇನೆಂಬ
ಆಸೆಯಿಂದಲ್ಲ.
ಕತ್ತಲಿನಿಂದ ಕತ್ತಲಿಗೇ ತಡಕಾಡಿಕೊಂಡು ಬಂದಿದೆ ಹೆಜ್ಜೆ
ಶತಮಾನದಿಂದಲೂ.
ನಡು ನಡುವೆ ಒಂದಷ್ಟು ಬೆಳಕು ಬೇಕೆಂದು
ಆಗಾಗ ಕಡ್ಡಿ ಗೀಚಿದ್ದೇವೆ,
ದೀಪ ಮೂಡಿಸಿದ್ದೇವೆ,
ವೇದ, ಶಾಸ್ತ್ರ, ಪುರಾಣ, ಇತಿಹಾಸ, ಕಾವ್ಯ, ವಿಜ್ಞಾನಗಳ
ಮತಾಪು - ಪಟಾಕಿ - ಸುರುಸುರುಬತ್ತಿ - ಹೂಬಾಣ
ಸುಟ್ಟಿದ್ದೇವೆ.
'ತಮಸೋಮಾ ಜ್ಯೋತಿರ್ಗಮಯಾ' ಎನ್ನುತ್ತಾ ಬರೀ
ಬೂದಿಯನ್ನೇ ಕೊನೆಗೆ ಕಂಡಿದ್ದೇವೆ.
ನನಗೂ ಗೊತ್ತು, ಈ ಕತ್ತಲೆಗೆ
ಕೊನೆಯಿರದ ಬಾಯಾರಿಕೆ.
ಎಷ್ಟೊಂದು ಬೆಳಕನ್ನು ಇದು ಉಟ್ಟರೂ , ತೊಟ್ಟರೂ
ತಿಂದರೂ, ಕುಡಿದರೂ ಇದಕ್ಕೆ ಇನ್ನೂ ಬೇಕು
ಇನ್ನೂ ಬೇಕು ಎನ್ನುವ ಬಯಕೆ.
ಆದರೂ ಹಣತೆ ಹಚ್ಚುತ್ತೇನೆ ನಾನು;
ಕತ್ತಲೆಯನ್ನು ದಾಟುತ್ತೇನೆಂಬ ಭ್ರಮೆಯಿಂದಲ್ಲ,
ಇರುವಷ್ಟು ಹೊತ್ತು ನಿನ್ನ ಮುಖ ನಾನು, ನನ್ನ ಮುಖ ನೀನು
ನೋಡಬಹುದೆಂಬ ಒಂದೇ ಒಂದು ಆಸೆಯಿಂದ;
ಹಣತೆ ಆರಿದ ಮೇಲೆ, ನೀನು ಯಾರೋ, ಮತ್ತೆ
ನಾನು ಯಾರೋ.
- ಜಿ ಎಸ್ ಶಿವರುದ್ರಪ್ಪ
('ಗೋಡೆ' ಕವನ ಸಂಕಲನದಿಂದ)
('ಗೋಡೆ' ಕವನ ಸಂಕಲನದಿಂದ)
e padya da anuvada kaluhisi.....plz sir
ಪ್ರತ್ಯುತ್ತರಅಳಿಸಿLakshmi
ಅಳಿಸಿe padya da bhavartha kaluhisi plz....
ಪ್ರತ್ಯುತ್ತರಅಳಿಸಿBahavatra pls
ಪ್ರತ್ಯುತ್ತರಅಳಿಸಿSummary and questions answered plsss
ಪ್ರತ್ಯುತ್ತರಅಳಿಸಿNotes
ಪ್ರತ್ಯುತ್ತರಅಳಿಸಿ