೧
ಇದು ದರ್ಶನ:ಇದು ಸಾಕ್ಷಾತ್ಕಾರ:
ಬರಿ ನೋಡುವುದಲ್ಲೋ!
ಈ ಅನುಭವಕ್ಕಿನ್ನಾವುದು ಬೇರೆಯ ಹೆಸರಿಲ್ಲೋ!
೨
ಇದು ಬರಿ ಹೂಬಿಡುವಾಸಾಮಾನ್ಯದ ಪ್ರಾಕೃತ ಸಂಗತಿಯಲ್ಲೋ!
ಭಾವಿಸಿ ಕಾಣ್:
ಈ ಹೂವಿನ ಭಾವ್ಯಕಾರ
ಸಾರುತ್ತಿದೆ ತನಷ್ಟಕೆ ತಾನ್:
"ನಾನ್ ಅವತಾರ!"
೩
ಈ ಉದ್ಯಾನದಿ ಈ ಹೊತ್ತರೆಯಲಿ
ಈ ಹೂಬಿಸಿಲಲಿ
ಧ್ಯಾನದಿ ನಿಂತವಲೋಕಿಸಿದರೆ ಪ್ರತ್ಯಕ್ಷಂ
ಇದು ಮಹದವತಾರ!
ಇದನೀಕ್ಷಿಸುವುದೆ ಸಾಕ್ಷಾತ್ಕಾರ!
ಹೇ ಭಗವತ್ ಪುಷ್ಪಾಕಾರ,
ನಿನಗಿದೋ ನಮಸ್ಕಾರ!
ಸಾಷ್ಟಾಂಗ ನಮಸ್ಕಾರ!
- ಕುವೆಂಪು
('ಅನಿಕೇತನ' ಕವನ ಸಂಕಲನದಿಂದ )
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಉನ್ಮಾದದ ನಶೆ ನಮ್ಮೊಂದಿಗಿಷ್ಟು ಹಂಚಿಕೊಳ್ರಿ....