ರೈತನ ದೃಷ್ಟಿ


ಕರಿಯರದೊ ಬಿಳಿಯರದೊ ಯಾರದಾದರೆ ಏನು?
     ಸಾಮ್ರಾಜ್ಯವಾವಗಂ ಸುಲಿಗೆ ರೈತರಿಗೆ !
ವಿಜಯನಗರವೊ? ಮೊಗಲರಾಳ್ವಿಕೆಯೊ? ಇಂಗ್ಲಿಷರೊ?
     ಎಲ್ಲರೂ ಜಿಗಣೆಗಳೆ  ನನ್ನ ನೆತ್ತರಿಗೆ!
ಕತ್ತಿ ಪರದೀಶಿಯಾದರೆ ಮಾತ್ರ ನೋವೆ?
ನಮ್ಮವರೇ ಹದಹಾಕಿ ತಿವಿದರದು ಹೂವೆ?

ಸೋಮಾರಿಗಳಿಗೆ ಸುಖಿಗಳಿಗೆ ರಸಿಕರಿಗಲ್ತೆ
     ಸಾಮ್ರಾಜ್ಯವೆಂಬುದದು ಕಾಮಧೇನು?
ನೃಪ ಎಂಬ ಹೆಸರೊಡನೆ ಮುಡಿಯೊಂದನಾಂತೊಡನೆ  
     ಕಳ್ಳರೊಡೆಯನು ಕೃಪೆಯ ಮೂರ್ತಿಯೇನು?
ತಿಂದುಂಡು ಮೆರೆವವರ ಮೆರವಣಿಗೆಗಾನು
ಬಾಯ್ದೆರೆದು ನೋಳ್ಪ ಬೆಪ್ಪಾಗಬೇಕೇನು?

ಹರಕೆ ಯಾರದೋ? ಹಬ್ಬವಾರಿಗೋ? ಅದಾವಗಂ
     ಸಾಮ್ರಾಜ್ಯಕಾಳಿಗಾನಲ್ತೆ ಕುರಿ ಕೊಲೆಗೆ? 
 ಕುಯ್ಗುರಿಯನೆಂತಂತೆ ಸಾವು ಬದುಕಿನ ನಡುವೆ
     ಕರುಣೆ ಗರಗಸದಿಂದೆ ಸೀಳುವರು ಬೆಲೆಗೆ.
ಸಾಕೆನಗೆ, ಸಾಕಯ್ಯ, ಸಾಮ್ರಾಜ್ಯ ಪೂಜೆ;
ಸಿಡಿಮದ್ದಿನಕ್ಷತೆಗೆ ಗುಂಡು ಚರೆ ಲಾಜೆ!

ನೇಗಿಲಿನ ಮೇಲಾಣೆ! ಬಸವಗಳ ಮೇಲಾಣೆ!
     ನೆತ್ತರಿಲ್ಲದೆ ಸುಕ್ಕಿ ಸೊರಗಿದೆನ್ನಾಣೆ!
ಸಾಮ್ರಾಜ್ಯ ಶೂರ್ಪನಖಿ ಮೋಹಿನಿಯ ರೂಪಕ್ಕೆ
     ಮರುಳಾಗೆನೆಂದಿಗೂ, ಸೀತೆ ಮೇಲಾಣೆ!
ಬಡತನದ ಗೊಬ್ಬರವನನುದಿನಂ ಹೀರಿ
ಹಿಡಿಸದೋ ಸಾಮ್ರಾಜ್ಯ ಸಿರಿಯ ಕಸ್ತೂರಿ!

                          - ಕುವೆಂಪು
 ('ಕೋಗಿಲೆ ಮತ್ತು ಸೋವಿಯತ್ ರಷ್ಯ' ಕವನ ಸಂಕಲನದಿಂದ)

1 ಕಾಮೆಂಟ್‌:

ನಿಮ್ಮ ಉನ್ಮಾದದ ನಶೆ ನಮ್ಮೊಂದಿಗಿಷ್ಟು ಹಂಚಿಕೊಳ್ರಿ....