ಗುರು

ಚಿತ್ರ ಕೃಪೆ: The Hindu

ಸಂಪಗೆ ಹೂವನು ಸಂಪಗೆ ಹೂವೆಂ–
ದೇತಕೆ ಕರೆವರು ಹೇಳಮ್ಮಾ!–
ಹಿಂದಿನ ಜನರದಕಾ ಹೆಸರಿಟ್ಟರು,
ಸಂಪಗೆ ಎನ್ನುವೆವದರಿಂದ.–
ಬೇರೆಯ ಹೆಸರುಗಳಾಗಿನ ಜನರಿಗೆ
ತಿಳಿದಿರಲಿಲ್ಲವೆ ಏನಮ್ಮಾ?
ಸಂಪಗೆಗಿಂತಲು ತಂಪಿಗೆ ಎಂದಿರೆ
ಇಂಪಾಗಿರುವುದು ಕೇಳ್ವರಿಗೆ.
ಜನರೇನಮ್ಮಾ, ಹಿಂದಿನದೆಂದರೆ
ಕಂಗಳ ಮುಚ್ಚಿಯೆ ಪೂಜಿಪರು.
ನನ್ನೀ ಸಲಹೆಯನಾದರೂ ಕೇಳರು,
ತಂಗಿಯ ಒಬ್ಬಳೆ ಒಪ್ಪಿಹಳು.
ಕಾಳಗೆ ಹೇಳಿದೆ, ಜಟ್ಟುಗೆ ಹೇಳಿದೆ,
ತಿಮ್ಮಗೆ ದಿನ ದಿನ ಬೋಧಿಸಿದೆ.
ಎಲ್ಲಾ ಸಂಪಗೆ ಸಂಪಗೆ ಎಂಬರು;
ತಂಪಿಗೆ ಎನ್ನುವರಾಗಿಲ್ಲ!
ನಾನೂ ತಂಗಿಯು ತಂಪಿಗೆ ಎಂಬೆವು,
ನೀನೂ ತಂಪಿಗೆ ಎನ್ನಮ್ಮಾ ! –
ಆಗಲಿ! ನಾನೂ ತಂಪಿಗೆ ಎಂಬೆನು:
ನನಗೂ ತಂಗಿಗು ನೀನೆ ಗುರು!

                   -  ಕುವೆಂಪು
  ('ನನ್ನ ಮನೆ' ಕವನ ಸಂಕಲನದಿಂದ)

ಶಕ್ತಿಯ ಕೊಡು


ಶಕ್ತಿಯ ಕೊಡು, ಶಕ್ತಿಯ ಕೊಡು,
ಶಕ್ತಿಯ ಕೊಡು ಹೇ ಪ್ರಭೂ.
ಸತ್ಯಕಾಗಿ ನಿಲುವ ಛಲವ
ದೀಪ್ತಗೊಳಿಸು ನನ್ನೊಳು.

ಎಡರ ಕಡಲ ತೆರೆ ಹೆಡೆಗಳು
ಭೋರ್ಗರೆಯುತ ಬಂದರೂ
ತಡೆದು ನಿಲುವ ಮಳಲ ತಡಿಯ
ಬಲವ ನೀಡು ಶ್ರೀ ಗುರೂ.

ನೂರುಲ್ಕೆಯ ರಭಸ ಮತಿಯ
ಅಬ್ಬರಗಳ ನಡುವೆಯೂ
ನಿಯತ ಗತಿಯ ತಾರಗೆಯೊಲು
ನೇರವಿರಿಸು ನನ್ನನು.

ಗುಡುಗು ಸಿಡಿಲ್ ಮಿಂಚಿನಾಚೆ
ಅಚಂಚಲದ ನೀಲಿಗೆ
ಸದಾ ತುಡಿವ ಗರುಡಗತಿಯ
ತುಂಬು ನನ್ನ ಹೃದಯಕೆ.

             -  ಜಿ ಎಸ್ ಶಿವರುದ್ರಪ್ಪ
  ('ಕಾರ್ತೀಕ' ಕವನ ಸಂಕಲನದಿಂದ)

ಯಾವ ಕಾಲದ ಶಾಸ್ತ್ರವೇನು ಹೇಳಿದರೇನು ?


ಯಾವ  ಕಾಲದ  ಶಾಸ್ತ್ರವೇನು ಹೇಳಿದರೇನು ?
ಎದೆಯ  ದನಿಗೂ  ಮಿಗಿಲು  ಶಾಸ್ತ್ರವಿಹುದೇನು ?
ಎಂದೋ  ಮನು  ಬರೆದಿಟ್ಟುದಿಂದೆಮಗೆ  ಕಟ್ಟೇನು ?
ನಿನ್ನೆದೆಯ  ದನಿಯೆ ಋಷಿ ! ಮನು ನಿನಗೆ ನೀನು !

ನೀರಡಿಸಿ ಬಂದ  ಸೋದರಗೆ ನೀರನು ಕೊಡಲು 
ಮನುಧರ್ಮಶಾಸ್ತ್ರವೆನಗೊರೆಯಬೇಕೇನು ?
ನೊಂದವರ  ಕಂಬನಿಯನೊರಸಿ  ಸಂತೈಸುವೊಡೆ 
ಶಾಸ್ತ್ರ  ಪ್ರಮಾಣವದಕಿರಲೆ  ಬೇಕೇನು ?

ಪಂಚಮರ  ಶಿಶುವೊಂದು  ಕೆರೆಯಲ್ಲಿ  ಮುಳುಗುತಿರೆ 
ದಡದಲ್ಲಿ  ಮಿಯುತ್ತ  ನಿಂತಿರುವ  ನಾನು 
ಮುಟ್ಟಿದರೆ  ಬ್ರಹ್ಮತ್ವ   ಕೆಟ್ಟುಹೋಗುವುದೆಂದು 
ಸುಮ್ಮನಿದ್ದರೆ  ಶಾಸ್ತ್ರಸಮ್ಮತವದೇನು?

ಅಂತು  ಮನು  ತಾನು  ಹೆಲಿರಲಾರನಯ್ಯಯ್ಯೊ!
ಹೇಳಿದ್ದರವನನೂ ಶಾಸ್ತ್ರದೊಳೆ  ಸುತ್ತಿ,
ಸ್ವರ್ಗ  ಹೋಗಲಿ, ಮತ್ತೆ ನರಕ  ಬಂದರು ಬರಲಿ,
ಎದೆಯ  ಧೈರ್ಯವ  ಮಾಡಿ ಬಿಸುಡಾಚೆಗೆತ್ತಿ!

ಸ್ವರ್ಗ  ಹೋಗುವುದಿಲ್ಲ, ನರಕ  ಬರುವುದು ಇಲ್ಲ;
ಸ್ವರ್ಗ  ನರಕಗಳೇನು  ಶಾಸ್ತ್ರಸ್ಥವಲ್ಲ .
ಎದೆಯ  ದನಿ  ಧರ್ಮನಿಧಿ ! ಕರ್ತವ್ಯವದುವೆ  ವಿಧಿ !
ನಂಬದನು; ಅದನುಳಿದು  ಋಷಿಯು  ಬೇರಿಲ್ಲ!

ಹಿಂದಿನಾ  ಋಷಿಗಳೂ  ಮಾನವರೆ  ನಮ್ಮಂತೆ,
ಅವರ  ಶಾಸ್ತ್ರವು  ಅವರ  ಕಾಲಕ್ಕೆ  ಮಾತ್ರ;
ಕಾಲಕ್ಕೆ  ತಕ್ಕಂತೆ, ದೇಶಕ್ಕೆ  ತಕ್ಕಂತೆ,
ನಮ್ಮ  ಹೃದಯವೆ  ನಮೆಗೆ  ಶ್ರೀಧರ್ಮಸೂತ್ರ  !


                                                 - ಕುವೆಂಪು 
                 ( 'ಕೋಗಿಲೆ  ಮತ್ತು  ಸೋವಿಯಟ್  ರಷ್ಯ' ಕವನಸಂಕಲನದಿಂದ )

ನೀತಿಬೋಧೆ


ಸಾಕು ಬಿಡು, ನೀತಿಯನು ಹೇಳದಿರು: "ಬೀಳದಿರು" 
         ಎಂದೆಲ್ಲರಂತೆ ನಾನಾಡಬಲ್ಲೆ.
ಪರಮಾತ್ಮನೆಲ್ಲೆಲ್ಲಿಯಡಗಿರುವನೆಂಬುದನು 
         ನೀ ಹೇಳಬೇಕೆ? ನಾನದನು ಬಲ್ಲೆ. 
ಜಗದೀಶನೆಲ್ಲವನು ನೋಡುತಿಹನೆಂಬುದದು 
         ಹೊಸತಲ್ಲ, ಹಳೆಯ ನುಡಿ, ಕೇಳಿಬಲ್ಲೆ!
ನೀತಿಯಲಿ ಪರಮಸು ವಿಹುದೆಂದು ನಾ ಬಲ್ಲೆ;
        ಆದರೆದೆಯಳುಕುತಿರೆ ನಿಲ್ಲಲಾರೆ!

ಮುಗ್ಗರಿಸಿ ಬೀಳುತಿರಲೆತ್ತುವಿಯೋ ಹೇಳು ನೀನು?
ನನ್ನೆದೆಗೆ ಶಕ್ತಿಯೊಂದನು ಸುರಿಯಬಲ್ಲೆಯೇನು?
ಹಾಗಲ್ಲದಿರೆ ಬರಿದೆ "ಬೀಳದಿರು" ಎನಲು ನೀನು
ಬಿದ್ದವರ ಗುಂಪಿನಲಿ ಸೇರಿಸುವೆ ನಿನ್ನ ನಾನು!

                                           - ಕುವೆಂಪು 
             ( 'ಹೊನ್ನ ಹೊತ್ತಾರೆ' ಕವನ ಸಂಕಲನದಿಂದ)  

ಸತ್ಯ ಮತ್ತು ಸೌಂದರ್ಯ

ಹೂವಿನ ಸೊಬಗನು ನೋಡುತ ನೀನು 
       ಕೋಮಲವೆನ್ನುತ ಮುತ್ತಿಡುವೆ;
ಹೂವಿನ ಪೆಂಪಿಗೆ ಬಾಳನು ಕೊಟ್ಟಾ
       ಮೊಳಕೆಯ ಗೋಳನು ನೀನರಿಯೆ!

ಬುವಿಯನು ನೋಡುತ ಸೊಬಗಿಗೆ ಮೆಚ್ಚಿ,
       ಕವಿಯೇ, ಕವಿತೆಯ ವಿರಚಿಸುವೆ;                    
ಬುವಿಯಾನಂದಕೆ ಜೀವವನಿತ್ತಾ 
       ಕರ್ತನ ವೆದನೆಯರಿತಿಹೆಯ?

ಯುಗ ಯುಗ ಯುಗಗಳ ಯಾತನೆಯಿಂದ 
        ಜನಿಸಿತು ನಲಿವೀ ಬ್ರಹ್ಮಾಂಡ;
ನಲಿಯುವ ಒಂದೊಂದಲರಿನ ಹೃದಯದಿ 
        ಬ್ರಹ್ಮವು ಮೌನದಿ ನರಳುತಿದೆ!

ಮುಂದಕೆ ನೋಡುವ ಕವಿಗಳ ಕಣ್ಣಿಗೆ 
        ಬ್ರಹ್ಮವು ಹರ್ಷದಿ ಕುಣಿಯುತಿದೆ;
ಹಿಂದಕೆ ನೋಡುವ ಋಷಿಗಳ ಕಣ್ಣಿಗೆ 
        ಯಾತನೆಯಿಂದದು ಹೊರಳುತಿದೆ!
                                     - ಕುವೆಂಪು 
                      ( 'ಕೊಳಲು' ಕವನ ಸಂಕಲನದಿಂದ )ಸತ್ಯ 

ಕಳಚಿ ಬೀಳುವೆನಯ್ಯಾ

ಕಳಚಿ  ಬೀಳುವೆನಯ್ಯಾ  ನಿನ್ನ ಸಿರಿಯಡಿಗೆ 
ಕಳಚಿ ಬೀಳುವೆನಯ್ಯಾ.

ತಣ್ಣೆಲರು ಬೀಸಿಬರೆ ಕರ್ಮವನು ಕಳೆದಿರುವ
ಹಣ್ಣೆಲೆಯು ಹೆತ್ತ ತಾಯ್ಮರವನಗಲಿ,
ಮುಳಿಯದೆಯೆ, ಹಳಿಯದೆಯೆ, ಮೌನದಲಿ, ದೈನ್ಯದಲಿ,
ಕಳಚಿ ತೊಟ್ಟುಳಿದು ನೆಲಕುದುರುವಂತೆ!       

ಜೀವನದ ತುದಿಯಲ್ಲಿ ಕೊಟ್ಟ ಕಾರ್ಯವನೆಸಗಿ 
ದೇವನೊಲ್ಮೆಯ ನಂಬಿ ಶಾಂತಿಯಿಂದ,
ಹಂಬಲಿಸಿ ಸವಿಯೊಲ್ಮೆಗಳುವ ಹೆಣ್ಣಿನ ಕಣ್ಣ 
ಕಂಬನಿಯು ಮಾತಿಲ್ಲದುರುಳುವಂತೆ 

                                          - ಕುವೆಂಪು 
                          ( 'ಕೊಳಲು' ಕವನ ಸಂಕಲನದಿಂದ )
 
 

ನಾವು ಬರತೇವಿನ್ನ......


              ೧

ನಾವು ಬರತೇವಿನ್ನ ನೆನಪಿರಲಿ ತಾಯಿ
ನಂ ನಮಸ್ಕಾರ ನಿಮಗ,
ಕಾಯ್ದಿರಿ—ಕೂಸಿನ್ಹಾಂಗ ನಮಗ—
ನಾವು ಬರತೇವಿನ್ನ

ಜಗದ ಕೂಡ ಬಂದೆವು ಜಗಳಾಡಿ
ಕೊಟ್ಟಿರಿ ನಿಮ್ಮ ತೊಡಿ
ಅಲ್ಲಿ ನಿದ್ದಿ ಮಾಡಿ—ಎದ್ದೆವೀಗ
ಯಾವುದೋ ಹೊಸಾ ನಸುಕಿನ್ಯಾಗs |

ನೀವು ತಾಯಿತನ ನಡಿಸಿದರಿ
ಹಾಲ ಕುಡಿಸಿದರಿ
ಮರಳು ಆಡಿಸಿದರಿ ಕನಸಿನ್ಯಾಗ
ಬೆಳಗು—ಆತು ಭಾಳ ಬ್ಯಾಗ

ಕಣ್ಣು ಮುಚ್ಚಿಕೊಳ್ಳತಾವ ಚಿಕ್ಕಿ
ಚಿವುಗುಡತಾವ ಹಕ್ಕಿ
ಕತ್ತಲಿ ತಲಿಕುಕ್ಕಿ—ಬಾನಮ್ಯಾಗ
ಬೆಳಕು—ಹಾರ್ಯಾವ ಮೂಡಲದಾಗ

ನಿಮ್ಮ ಸೆರಗ ಮರೀ ಮಾಡಿದಿರಿ
ಲಾಲಿ ಹಾಡಿದಿರಿ
ಆಟ ಆಡಿದಿರಿ—ಏನೋ ಹಾಂಗs
ಮರೆತೆವು—ಕಳೆದ ಜನ್ಮಧಾಂಗ

ಜೋಲಿ—ಹೋದಾಗ ಆದಿರಿ ಕೋಲು
ಹಿಡಿದಿರಿ ನಮ್ಮ ತೋಲು
ಏನು ನಿಮ್ಮ ಮೋಲು—ಲೋಕದಾಗ ?
ನಾವು -- ಮರತೇವದನ ಹ್ಯಾಂಗ ?

ಅಕ್ಕ—ತಂಗಿ—ಮಗಳು –ಹಡೆದ ತಾಯಿ…
ಕನ್ನಿ—ಗೆಳತಿ—ಮಡದಿ—ದಾಯಿ—ಸಾಕುದಾಯಿ…
ಜೋಡೆ—ಸೂಳೆ ಮತ್ತೆ ಮಾಯಿ—ವಿಧೀಮಾಯಿ…

ನೂರಾರು ವೇಷ ಕಳಿಸಿದಿರಿ
ಮಡ್ಡ ಇಳಿಸಿದಿರಿ
ಮಾನ ಬೆಳಿಸಿದಿರಿ

ಯಾಕೋ ಕರುಣ ಬಂತು ತಮಗs
ನಾವು—ಶರಣ ಬರಲಿಲ್ಲ ಸುಮಗs

ನಾವು ಬರತೇವಿನ್ನ......

           ೨

ಎಲ್ಲಿ ಹೋದಲ್ಲಿರಲಿ ನಮ್ಮ ಹತ್ರ
ನಿಮ್ಮ ಕೃಪಾ ಛತ್ರ
ಕಾರ್ಯ ಸುಸೂತ್ರ—ನಡೀತಿರಲಿ
ನಿಮ್ಮ—ಹೆಜ್ಜೆ ಜೋಡಿಗಿರಲಿ

ಹಗಲಾಗಲಿ ಧುರಂಧುರಿ ಜಾತ್ರಿ
ನಿದ್ದಿಗಿರಲಿ ರಾತ್ರಿ
ಜೀವಕ್ಕs ಖಾತ್ರಿ—ನಿಮ್ಮದಿರಲಿ
ಜನ್ಮ ಮರಣ, ಏನs ಬರಲಿ

ಮಾಡೀತೇನು ಮಣ್ಣಿನs ಗೊಂಬಿ ?
ನಿಮ್ಮ ಹೆಸರ ನಂಬಿ
ಹೊತ್ತುಕೊಂಡು ಕಂಬಿ—ಕುಣಿಯುತಿರಲಿ
ಸ್ವರ್ಗ—ನರಕ ಯಾವುದೂ ಇರಲಿ ?

ಮೂರು ಹೊತ್ತಿನ್ಯಾಗ ನಿಮ್ಮ ಧ್ಯಾನ
ಹೊತ್ತುತಿರಲಿ ಗ್ಯಾನ
ಸುಡಲಿ ಅಜ್ಞಾನ-ಪ್ರೇಮ ಮುರಲಿ
ಕಿವಿಗೆ ಅದೇ ಕೇಳಸತಿರಲಿ.

ನಿಮ್ಮ ಚಂದ್ರ ಜ್ಯೋತಿಯಾ ಬೆಳಕು
ಅದs ನಮಗ ಬೇಕು
ಸುಡೋ ಸೂರ್ಯ ಸಾಕು—ಯಾಕ ತರಲಿ ?
ಹೊತ್ತಾರ ಯಾರು ಒಣಾ ಹರಲಿ !

ಕತ್ತಲೀ ಕೆಚ್ಚ ಕೆದರೀ—ಕೆಚ್ಚಿ ಕೆದರಿ !
ಬಣ್ಣ ಬಣ್ಣ ಬಂತು ಚೆದರಿ—ಸುತ್ತ ಚೆದರಿ
ಮಕ್ಕಳಾಟ ತೋರಿಸಿದಿರಿ—ಹಾರಿಸಿದಿರಿ.

ನಿಮ್ಮ ಹೊಟ್ಟೀ ಕರುಳಿನಾ ತುಣುಕು
ಅಂತನs ಚುಣುಕು
ತೋರಿಸಿದಿರಿ ಮಿಣುಕು

ಮಿಣುಮಿಣುಕು ದೀಪದಾಗ
ಚಿಕ್ಕೀ ಮಳೀ ಸುರಿಸಿದ್ಹಾಂಗ |

ನಾವು ಬರತೇವಿನ್ನ....

                         - ದ ರಾ ಬೇಂದ್ರೆ
      ('ಮೂರ್ತಿ ಮತ್ತು ಕಾಮಕಸ್ತೂರಿ' ಕವನ ಸಂಕಲನದಿಂದ)

ಜಡಿಮಳೆ


ಮುಸಲ ವರ್ಷ ಧಾರೆ
ಮುಗಿಲಿನಿಂದ ಸೋರೆ
ಕುಣಿವ ನವಿಲು ನನ್ನ ಮನಂ,
ನಲ್ಮೆಯುಕ್ಕಿ ಮೀರೆ!

ಹಸುರು ಬಯಲ ಮೇಲೆ
ಬಾಣ ಜಾಲದೋಲೆ
ಮಳೆಯ ಹನಿಗಳೆರಗಲೊಡಂ
ತುಂತುರಾವಿ ಲೀಲೆ!

ತಲೆಯ ಕೆದರಿ ಕಾಳಿ
ಕುಣಿವ ತರೆನ ತಾಳಿ
ಪವನ ಹರಿಯು ಗರ್ಜಿಸಿಹಂ
ವಿಪಿನ ಕರಿಯ ಸೀಳಿ!

ನೀರು, ನೀರು, ನೀರು!
ಕಾರುತಿಹುದು ಕಾರು!
ನೋಡುತಿರುವ ಕವಿ ನಯನಂ
‘ನಂದದಿಂದೆ ನೀರು’!

               - ಕುವೆಂಪು
('ಪಕ್ಷಿಕಾಶಿ' ಕವನ ಸಂಕಲನದಿಂದ)

ಹಣ


ಹಣವನು ಗಳಿಸೆಂದಣ್ಣನಿಗೆಲ್ಲರು ಬುದ್ಧಿಯ ಹೇಳುವರೇಕಮ್ಮಾ!

ಹಣವೆಂದರೆ ನಾವಾಡುವ ಮಣ್ಣಿನ ಪುಡಿಗಿಂತಲು ಚೆಲುವೇನಮ್ಮಾ?
ಧೂಳಿನಷ್ಟು ಅದು ನುಣ್ಣಗಿಹದೇ ಹೇಳಮ್ಮಾ?
ಧೂಳಿನಷ್ಟು ಅದು ಸಣ್ಣಗಿಹುದೇ ಹೇಳಮ್ಮಾ?
ಧೂಳಿಯಂತೆ ಅದು ಗಾಳಿಯಲ್ಲಿ ಹಾರಾಡಬಲ್ಲುದೇ ತಿಳಿಸಮ್ಮಾ?
ಧೂಳಿಯಂತೆ ಅದು ಹುಡುಗರೆಲ್ಲರನು ಒಲಿಯಬಲ್ಲುದೇ ಹೇಳಮ್ಮಾ?

ಬೆಳಗಿನ ನೇಸರಿನೆಳಬಿಸಿಲಿನ ಮುದ್ದನು ಹಣ ಮೀರಿಹುದೇನಮ್ಮಾ?
ಎಳೆಹಸುರಲಿ ದಿನವೂ ನಾವಾಯುವ ಹೂಗಳ ಮೀರಿಹುದೇನಮ್ಮಾ?
ಮಳೆಯ ಬಿಲ್ಲಿನೊಲು ಮನವ ಮೋಹಿಪುದೆ ಹೇಳಮ್ಮಾ?
ಮಳೆಯ ಹನಿಗಳೊಲು ನಮ್ಮ ಕುಣಿಸುವುದೆ ಹೇಳಮ್ಮಾ?
ಹನಿಯೊಳು ಮಿಂದಿಹ ತಳಿರಲಿ ನಲಿಯುವ ಹಿಮಮಣಿಗದು ಚಲುವೇನಮ್ಮಾ?
ತಳಿತಿಹ ಬನದಲಿ ಉಲಿಯುವ ಕೋಗಿಲೆಯಿಂಚರಕದು ಇಂಪೇನಮ್ಮಾ?

                                       - ಕುವೆಂಪು
                             ('ನನ್ನ ಮನೆ' ಕವನ ಸಂಕಲನದಿಂದ)