ಗೆಳೆತನ


ಕೊನೆಗಾಣದೆ ಬಿಗಿಮಾಣದೆ ತಳುವಬೇಕು - ಗೆಳೆತನ.
ತಳುವಬೇಕು - ನನಗೆ ನಿನಗೆ ಬರುವ ತನಕ ಕೊನೆದಿನ.
ತಳಿರ ತಳಿರ ತಳ್ಕೆಯಂತೆ ಮೃದುಲ ಮಧುರ ಜೀವನ.
ಮಲರ ಮಲರ ಮಾಳ್ಕೆಯಂತೆ ಮನದ ಮನದ ಮಿದುತನ.

ಒಂದೆ ಗಾನತಾನ ನನ್ನ ನಿನ್ನ ಹೃದಯ ಮಿಲನಕೆ.
ಒಂದೆ ಅಚ್ಚುಮೆಚ್ಚು ನಮ್ಮ ಭಾವ ಜೀವ ವಲನಕೆ.
ಒಂದೆ ಅಂಕೆಸಂಖ್ಯೆ ನಮ್ಮ ಸೌಖ್ಯದ ಸಂಕಲನಕೆ.
ಒಂದೆ ಗಮ್ಯಗತಿಯು ನಮ್ಮ ಜೀವನ ಸಂಚಲನಕೆ.

ಗುಡುಗು ಮಿಂಚಿನಂತೆ ಒಂದುಗೂಡಿ ಮೊಳಗಿ ಬೆಳಗುವಾ!
ಕಡಲುತಡಿಗಳಂತೆ ಒಂದನೊಂದು ತಡೆದು ತಡೆಹುವಾ
ಗಾಳಿ ಕಿಚ್ಚಿನಂತೆ ಕೂಡಿಯಾಡಿ ತಿರೆಯ ಬೆಳಗುವಾ!
ಬಾನುಬುವಿಗಳಂತೆ ಒಂದಕೊಂದು ಸೀಮೆ ಎನಿಸುವ!

ಮುಗಿಲ ಯುಗಲದಂತೆ ಬಂದು ಸೇರಿ ಸಾರಿ ಅಗಲದೆ,
ಹಗಲ ಮೊಗದ, ರಾಗದಂತೆ ಸಂಜೆಯೊಡನೆ ಜಗುಳದೆ
ಗಾಳಿಗೈಯ ತರಗಲಂತೆ ಕಲೆತು ತಿರುಗಿ ಕದಲದೆ
ಬಾಳಬೇಕು, ಬೆಳೆಯಬೇಕು ಸಖ್ಯ ಕ್ಷಣಿಕವೆನಿಸದೆ.

ನಿನ್ನೊಳೊಂದೆ ಭಿಕ್ಷೆ ಗೆಳತಿ, ಅದುವೆ ಹೃದಯದಾನವು!
ಜನ್ಮಮೃತ್ಯುಗಳಲು ನಗುವ ಪ್ರೇಮದಮೃತ ಪಾನವು.
ದುಃಖ ಸುಖಗಳನ್ನು ಮಿಗುವ ತ್ಯಾಗದ ಮರಗಾನವು
ಹೊಂದುವಳಿಕೆ ತವದ ಸೌಖ್ಯಯೋಗದ ಭ್ರಯಾನವು.

ನನ್ನ ನಿನ್ನ ಜೀವ, ಗೆಳತಿ, ಒಂದಕೊಂದು ಪೂರಕ,
ನನ್ನ ನಿನ್ನ ಭಾವ ಒಂದಕೊಂದು ಕಾಂತಿದಾಯಕ.
ಒಂದು ಹೃದಯ ಧನುವು, ಮೆಣದೊಂದು ನಿಶಿತ ಸಾಯಕ
ಒಂದು ಗಂಗೆ, ಒಂದು ಯಮುನೆ - ಏಕ ಮಾರ್ಗವಾಹಕ.

ಹೀಗೆ ಬಾಳ್ವೆನೆಂಬೆ ಬಯಕೆಯೊಂದದೇಕೆ ಹಿರಿದಿದೆ?
ಯೋಗವಿದು ನಿರರ್ಥ, ನಿನ್ನ ಹೃದಯ ಯೋಗ ಬರದಿರೆ.
ಬರಿಯ ಕೆಂಡ ಗಳಿಗೆಯೊಳಗೆ ನಂದಿ ಕಾಂತಿಯುಳಿಯದೆ?
ನೆರವು ಬರಲು ಗಾಳಿಯಿಂದ ಅದರ ಬಾಳು ಬೆಳಗದೆ?

                                   - ಗೋಪಾಲಕೃಷ್ಣ ಅಡಿಗ
                     ('ಕಟ್ಟುವೆವು ನಾವು' ಕವನ ಸಂಕಲನದಿಂದ)

ತಾಯಿ - ಕೂಸು


           ೧
ಹಸುಗೂಸು ಮಲಗಿಹುದು
ಹುಸಿನಗೆಯು ತೊಲಗಿಹುದು.
ಕನಸಿನಾಚೆಗಿರುವ ನಿದ್ದೆಯಲ್ಲಿ
ತನ್ನನ್ನೂ ಮರೆತಿಹುದೊ
ತನ್ನೊಳಗೆ ಬೆರೆತಿಹುದೊ
ಹಸಿವು ಭಯ ಮುದ್ದಾಟವಿಲ್ಲ ಅಲ್ಲಿ.

           ೨
ಉಸಿರ ದಾರದ ತುದಿಗೆ
ಹಾರುಹಕ್ಕಿಯ ಬದಿಗೆ
ಜೀವಪಟ ಹೆಡೆಯಾಟವಾಡುತಿಹುದು
ಮೇಲ್ಮುಗಿಲ ಗಾಳಿಯಲಿ
ತನ್ನೊಂದು ಲೀಲೆಯಲಿ
ತೀರಲದು ತಾನೆ ಇಳೆಗಿಳಿಯಲಹುದು.

           ೩
ಕೆಲಸದಲಿ ಬಿಡುವಿಲ್ಲ
ಕೂಸಿನಲಿ ಮನವೆಲ್ಲ
ತಾಯಿ ಯೋಗಿನಿ ಮೈಲಿ ದುಡಿಯುತಿಹಳು
ತನ್ನೆದೆಯ ತೊಟ್ಟಿಲಲಿ
ಕಂದನನು ಇಟ್ಟಲ್ಲಿ
ಕಂಠದಲಿ ಜೋಗುಳವ ನುಡಿಸುತಿಹಳು

          ೪
ಇತ್ತ ಮರುಳಾಟದಲೊ
ಜೀವದೊಳತೋಟಿಯಲೊ
ಮುಖರಂಗಮಂಡಲದಿ ಭಾವ ಭಾವ!
ಹುಬ್ಬು ಗಂಟಿಕ್ಕುವುದು ;
ಎದೆ ಏಕೊ ಬಿಕ್ಕುವುದು ;
ತುಟಿಯು ನಗುವುದು ; ಅದನು ಕಂಡನಾವ?

                   - ದ ರಾ ಬೇಂದ್ರೆ
      ('ನಾದಲೀಲೆ' ಕವನ ಸಂಕಲನದಿಂದ)

ಎದೆಯು ಮರಳಿ ತೊಳಲುತಿದೆ


ಎದೆಯು ಮರಳಿ ತೊಳಲುತಿದೆ
ದೊರೆಯದುದನೆ ಹುಡುಕುತಿದೆ ;
ಅತ್ತ ಇತ್ತ ದಿಕ್ಕುಗೆಟ್ಟು
ಬಳ್ಳಿ ಬಾಳು ಚಾಚುತಿದೆ
ತನ್ನ ಕುಡಿಯನು.

ಸಿಗಲಾರದ ಆಸರಕೆ
ಕಾದ ಕಾವ ಬೇಸರಕೆ
ಮಿಡುಕಿ ದುಡಿಯಲೆಳಸುತಿದೆ
ತನ್ನ ಗುಡಿಯನು.

ಅದಕು ಇದಕು ಅಂಗಲಾಚಿ
ತನ್ನೊಲವಿಗೆ ತಾನೆ ನಾಚಿ
ದಡವ ಮುಟ್ಟಿ ಮುಟ್ಟದೊಲು
ಹಿಂದೆಗೆಯುವ ವೀಚಿ ವೀಚಿ
ಮುರುಟುತಲಿವೆ ಮನದಲಿ!

ನೀರದಗಳ ದೂರ ತೀರ
ಕರೆಯುತಲಿದೆ ಎದೆಯ ನೀರ,
ಮೀರುತಲಿದೆ ಹೃದಯ ಭಾರ
ತಾಳಲೆಂದು ನಾ?

ಯಾವ ಬಲವು ಯಾವ ಒಲವು
ಕಾಯಬೇಕು ಅದರ ಹೊಳವು
ಕಾಣದೆ ದಳ್ಳಿಸಲು ಮನವು
ಬಾಳಲೆಂತು ನಾ?

              - ಗೋಪಾಲಕೃಷ್ಣ ಅಡಿಗ
     ('ಕಟ್ಟುವೆವು ನಾವು' ಕವನ ಸಂಕಲನದಿಂದ) 

ಈ ಬಾನು ಈ ಚುಕ್ಕಿ


ಈ ಬಾನು ಈ ಚುಕ್ಕಿ, ಈ ಹೂವು ಈ ಹಕ್ಕಿ
ತೇಲಿ ಸಾಗುವ ಮುಗಿಲು ಹರುಷವುಕ್ಕಿ
ಯಾರು ಇಟ್ಟರು ಇವನು ಹೀಗೆ ಇಲ್ಲಿ ?
ತುದಿ ಮೊದಲು ತಿಳಿಯದೀ ನೀಲಿಯಲಿ

ಒಂದೊಂದು ಹೂವಿಗೂ ಒಂದೊಂದು ಬಣ್ಣ
ಒಂದೊಂದು ಜೀವಕೂ ಒಂದೊಂದು ಕಣ್ಣ
ಯಾವುದೊ ಬಗೆಯಲ್ಲಿ ಎಲ್ಲರಿಗೂ ಅನ್ನ
ಕೊಟ್ಟ ಕರುಣೆಯ ಮೂಲ ಮರೆತಿಹುದು ತನ್ನ

ನೂರಾರು ನದಿ ಕುಡಿದು ಮೀರದ ಕಡಲು
ಬೋರೆಂದು ಸುರಿಸುರಿದು ಆರದ ಮುಗಿಲು
ಸೇರಿಯು ಕೋಟಿ ತಾರೆ ತುಂಬದ ಬಯಲು
ಯಾರದೀ ಮಾಯೆ ಯಾವ ಬಿಂಬದ ನೆರಳು ?

ಹೊರಗಿರುವ ಪರಿಯೆಲ್ಲ ಅಡಗಿಹುದೇ ಒಳಗೆ ?
ಹುಡುಕಿದರೆ ಕೀಲಿ ಕೈ ಸಿಗದೆ ಎದೆ ಯೊಳಗೆ
ತಿಳಿಯದ್ದೆಲ್ಲದರಲ್ಲಿ ಕುಳಿತಿರುವೆ ನೀನೆ, ಎನ್ನುವರು
ನನಗೀಗ ಸೋಜಿಗವು ನಾನೆ !
                                    
                          - ಎನ್.ಎಸ್ ಲಕ್ಷ್ಮೀನಾರಾಯಣ ಭಟ್ಟ

ನೋಡಮ್ಮಾ ಮುಗಿಲ ತುಂಬಾ....


ನೋಡಮ್ಮಾ ಮುಗಿಲ ತುಂಬಾ
ಬೆಳ್ ಬೆಳಕಿನ ಮಲ್ಲಿಗೆ
ಹಾರಿಹೋಗಿ ಕಿತ್ತು ತಂದು
ಮುಡಿಸಲೇನೆ ತರುಬಿಗೆ?

ನಮ್ಮ ಮನೆಯ ಅಂಗಳದಲಿ
ಅರಳಿ ನಗುವ ಹೂವಿಗಿಂತ
ದೊಡ್ದವೇನೆ ಅವುಗಳು?
ಹಸಿರು ನೆಲದ ಮೇಲೆ ಅರಳಿ
ನಗುವ ಬದಲು ಅಷ್ಟು ಮೇಲೆ
ಹೋದವೇಕೆ ಅವುಗಳು?

ನಾನೇ ದೇವರಾಗಿದ್ದರೆ
ಚಿಕ್ಕೆಯೆಲ್ಲ ನಮ್ಮೂರಿನ
ಮನೆ ಮನೆಯಲಿ ಅರಳುವಂತೆ
ಸೃಷ್ಟಿ ಮಾಡುತಿದ್ದೆನು
ಇಷ್ಟು ತಿಳಿಯಲಿಲ್ಲವೇನೆ
ಜಗವ ಮಾಡಿದಂಥ ದೇವ
ನಿಜವಾಗಿಯೂ ದಡ್ಡನು!

               - ಜಿ ಎಸ್ ಶಿವರುದ್ರಪ್ಪ
     ('ಪ್ರೀತಿ ಇಲ್ಲದ ಮೇಲೆ' ಕವನ ಸಂಕಲನದಿಂದ)

ಎಲ್ಲಿ ಜಾರಿತೋ ಮನವು


ಎಲ್ಲಿ ಜಾರಿತೋ ಮನವು ಎಲ್ಲೆ ಮೀರಿತೋ
ಎಲ್ಲಿ ಅಲೆಯುತಿಹುದೋ ಏಕೆ ನಿಲ್ಲದಾಯಿತೋ

ದೂರದೊಂದು ತೀರದಿಂದ ತೇಲಿ ಪಾರಿಜಾತ ಗಂಧ
ದಾಟಿ ಬಂತು ಬೇಲಿಸಾಲ ಮೀಟಿ ಹಳೆಯ ಮಧುರ ನೋವ

ಬಾನಿನಲ್ಲಿ ಒಂಟಿ ತಾರೆ ಸೋನೆ ಸುರಿವ ಇರುಳ ಮೊರೆ
ಕತ್ತಲಲ್ಲಿ ಕುಳಿತು ಒಳಗೆ ಬಿಕ್ಕುತಿಹಳು ಯಾರೋ ನೀರೆ

ಹಿಂದೆ ಯಾವ ಜನ್ಮದಲ್ಲೋ ಮಿಂದ ಪ್ರೇಮ ಜಲದ ಕಂಪು
ಬಂದು ಚೀರುವೆದೆಯ ಎದೆಯ ಹೇಳಲಾರೆ ತಾಳಲಾರೆ

ಎಲ್ಲಿ ಜಾರಿತೋ ಮನವು ಎಲ್ಲೆ ಮೀರಿತೋ
ಎಲ್ಲಿ ಅಲೆಯುತಿಹುದೋ ಏಕೆ ನಿಲ್ಲದಾಯಿತೋ

                                - ಎನ್.ಎಸ್ ಲಕ್ಷ್ಮೀನಾರಾಯಣ ಭಟ್ಟ

ದೇವರು ಸೆರೆಯಾಳ್


ದೇವರು ಸೆರೆಯಾಳ್, ದೇಗುಲ ಸೆರೆಮನೆ,
     ಕಾವಲು ಪೂಜಾರಿ!

ನೀನಾವಾಗಲು ನನ್ನಯ ಬಳಿಯಿರೆ
       ಬಲು ತೊಂದರೆ ಎಂದು
ಗಿರಿಶಿಕರದೊಳತಿದೂರದಿ ಕಟ್ಟಿದೆ
       ಗುಡಿಯನು ನಿನಗೊಂದು;
ಕಲ್ಲಿನ ಗೋಪುರ, ಕಲ್ಲಿನ ಗೋಡೆ,
ದುರ್ಗದವೊಲೆ ಬಲು ದುರ್ಗಮ ನೋಡೆ!

ಸೆರೆಯನು ತಪ್ಪಿಸಿ ಕೊಳ್ಳದ ತೆರದಲಿ
      ಅರ್ಚಕ ರಕ್ಷೆಯಿದೆ;
ತೆಂಗಿನ ಕಾಯೊಳೆ ತಲೆಯನು ಬಡಿಯುವ
       ಪೂಜೆಯ ಶಿಕ್ಷೆಯಿದೆ!
ಪುರಸತ್ತಾದರೆ ಕೆಲಸದೊಳಿಲ್ಲಿ
ಬೇಸರ ಪರಿಹಾರಕೆ ಬಹೆನಲ್ಲಿ!  
                     
                      - ಕುವೆಂಪು
('ಕೋಗಿಲೆ ಮತ್ತು ಸೋವಿಯತ್ ರಷ್ಯ' ಕವನ ಸಂಕಲನದಿಂದ)