ಒಂದು ಮಣ್ಣಿನ ಜೀವ


ಒಂದು ಮಣ್ಣಿನ ಜೀವ ಎಂದೂ ಮಣ್ಣಿನಲ್ಲಿಯೇ ಉಳಿಯದು
ಸಣ್ಣ ಸಸಿಯೇ ಬೆಳೆದು ಬೇರಿಗೆ ಪಾರಿಜಾತವ ಸುರಿವುದು

ನೀರು ತುಂಬಿದ ಮಣ್ಣ ಪಾತಿಯೇ ಕಂದರಿಗೆ ಕದಲಾರತಿ
ನೂರು ಗುಡಿಗಳ ದೀಪ ವೃಕ್ಷವೇ ಅಮ್ಮನೆತ್ತುವ ಆರತಿ
ಹಕ್ಕಿಪಕ್ಕಿಯ ಬಣ್ಣದಕ್ಷತೆ ಹರಕೆ ಬಾಗಿದ ಮುಡಿಯಲಿ
ಹಸಿರಿನೆಲೆಗಳ ಉಸಿರಿನಾಶೀರ್ವಚನ ಅರಗಿಳಿ ನುಡಿಯಲಿ

ಯಾವುದೋ ಸೋಬಾನೆ ಬಾನೆ ತುಂಬಿ ತುಳುಕಿದ ಝೇಂಕೃತಿ
ತುಟಿಯ ಬಟ್ಟಲು ಸುರಿವ ಅಮೃತಕೆ ಎಲ್ಲಿ ಇದೆಯೋ ಇತಿಮಿತಿ?
ಅಂದು ಒಂದೇ ಬಿಂದು ಇಂದೋ ಎಂದೂ ಬತ್ತದ ನಿರ್ಝರಿ
ಮಣ್ಣ ಮಕ್ಕಳ ಕಣ್ಣನೊರೆಸುವ ಹಸಿರ ಸೆರಗೋ ಥರಾವರಿ

ಹರಕೆ ಇದ್ದರೆ ಯಾವ ಅರಕೆ ನಮ್ಮ ಅಮ್ಮನ ಮಡಿಲಲಿ
ಹಾಲುಗೆನ್ನೆಯ ನಾರಿ ನನ್ನ ಅನ್ನಪೂರ್ಣೆಯ ಗುಡಿಯಲಿ
ಹೂವು ಸಾವಿರ ಸೇರಿ ಒಂದೇ ಹಾರವಾಗುವ ಪಕ್ಷಕೆ
ಲಕ್ಷ ಮಕ್ಕಳೆ ಅಕ್ಷಮಾಲೆ ನಮ್ಮ ತಾಯಿಯ ವಕ್ಷಕೆ

                                       - ಎಚ್. ಎಸ್. ವೆಂಕಟೇಶಮೂರ್ತಿ

ತೊರೆಯ ಹಂಬಲ



ಕಾಣದ ಕಡಲಿಗೆ ಹಂಬಲಿಸಿದೆ ಮನ
ಕಾಣಬಲ್ಲೆನೇ ಒಂದು ದಿನ?
ಕಡಲನು ಕೂಡಬಲ್ಲೆನೇ ಒಂದು ದಿನ?

ಕಾಣದ ಕಡಲಿನ ಮೊರೆತದ ಜೋಗುಳ
ಒಳಗಿವಿಗಿಂದು ಕೇಳುತಿದೆ
ನನ್ನ ಕಲ್ಪನೆಯು ತನ್ನ ಕಡಲನೇ
ಚಿತ್ರಿಸಿ ಚಿಂತಿಸಿ ಸುಯ್ಯುತಿದೆ
ಎಲ್ಲಿರುವುದೊ ಅದು
ಎಂತಿರುವುದೊ ಅದು
ನೋಡಬಲ್ಲೆನೇ ಒಂದು ದಿನ
ಕಡಲನು ಕೂಡಬಲ್ಲೆನೇ ಒಂದು ದಿನ?
 
ಸಾವಿರ ಹೊಳೆಗಳು ತುಂಬಿ ಹರಿದರೂ
ಒಂದೇ ಸಮನಾಗಿಹುದಂತೆ!
ಸುನೀಲ ವಿಸ್ತರ ತರಂಗ ಶೋಭಿತ
ಗಂಭಿರಾಂಬುಧಿ ತಾನಂತೆ!
ಮುನ್ನೀರಂತೆ
ಅಪಾರವಂತೆ
ಕಡಲನು ಕಾಣಬಲ್ಲೆನೇ ಒಂದು ದಿನ?
ಅದರೊಳು ಕರಗಲಾರೆನೇ ಒಂದುದಿನ?

ಜಟಿಲ ಕಾನನದ ಕುಟಿಲ ಪಥಗಳಲಿ
ಹರಿವ ತೊರೆಯು ನಾನು!
ಎಂದಿಗಾದರು ಕಾಣದ ಕಡಲಿಗೆ
ಸೇರಬಲ್ಲೆನೇನು
ಆ ಪುಣ್ಯವೆಂದಿಗೊ
ಕಾಲವೆಂದಿಗೊ
ಕಡಲೊಲವಿನ ಆ ರತ್ನ ಗರ್ಭದಲಿ
ಸೇರಬಹುದೆ ನಾನು
ಕಡಲ ನೀಲಿಯೊಳು
ಕರಗಬಹುದೆ ನಾನು?

                          - ಜಿ. ಎಸ್. ಶಿವರುದ್ರಪ್ಪ
                ('ಚೆಲುವು - ಒಲವು' ಕವನ ಸಂಕಲನದಿಂದ)

ಸ್ತ್ರೀ


ಆಕಾಶದ ನೀಲಿಯಲ್ಲಿ
ಚಂದ್ರ ತಾರೆ ತೊಟ್ಟಿಲಲ್ಲಿ
ಬೆಳಕನಿಟ್ಟು ತೂಗಿದಾಕೆ -

ಹಸುರನುಟ್ಟ ಬೆಟ್ಟಗಳಲಿ
ಮೊಲೆ ಹಾಲಿನ ಹೊಳೆಯ ಇಳಿಸಿ
ಬಯಲ ಹಸುರ ನಗಿಸಿದಾಕೆ -

ಮರಗಿಡ ಹೂ ಮುಂಗುರುಳನು
ತಂಗಾಳಿಯ ಬೆರಳ ಸವರಿ
ಹಕ್ಕಿಗಿಲಕಿ ಹಿಡಿಸಿದಾಕೆ -

ಮನೆಮನೆಯಲಿ ದೀಪ ಮುಡಿಸಿ
ಹೊತ್ತು ಹೊತ್ತಿಗನ್ನವುಣಿಸಿ
ತಂದೆ ಮಗುವ ತಬ್ಬಿದಾಕೆ -

ನಿನಗೆ ಬೇರೆ ಹೆಸರು ಬೇಕೆ
ಸ್ತ್ರೀ ಎಂದರೆ ಅಷ್ಟೆ ಸಾಕೆ?

             - ಜಿ. ಎಸ್. ಶಿವರುದ್ರಪ್ಪ
        ('ತೆರೆದ ದಾರಿ' ಕವನ ಸಂಕಲನದಿಂದ)

ವರಕವಿಯ ಪಂಥ


ಕೋಗಿಲೆಯ ಕಂಠಕ್ಕೆ ಸ್ವರ್ಣಪದಕವ ತೊಡಿಸಿ
     ನೇಣು ಬಿಗಿಯುವುದೇಕೆ ಬಹುಮಾನವೆಂದು?
ಹಾರ ಭಾರಕೆ ಗೋಣು ಕುಸಿದು ಕುಗ್ಗಲು, ಗಾನ
     ಕೊರಗಿ ಕರ್ಕಶವಾಗಿ ನರಳುವುದು ನೊಂದು!
ಬಿರುದು ಬಾವಲಿ ಹೆಚ್ಚೆ? ಹೆಸರು ಹೊಗಳಿಕೆ ಹೆಚ್ಚೆ?
     ಪಿಕವರಗೆ ಶಿವ ಕೊಟ್ಟ ಸವಿಗೊರಲಿಗಿಂತ?
ಕೇಳಿ ಸವಿದೆಯ? ಸಾಕು, ಅದೆ ಪರಮ ಬಹುಮಾನ!
     ದಿವ್ಯ ನಿರ್ಲಕ್ಷತೆಯೆ ವರಕವಿಯ ಪಂಥ!

                                   - ಕುವೆಂಪು
  ('ಕೋಗಿಲೆ ಮತ್ತು ಸೋವಿಯತ್ ರಷ್ಯ' ಕವನ ಸಂಕಲನದಿಂದ)

ಕವಿ - ವೇದಾಂತಿ


ವೇದಾಂತಿ ಹೇಳಿದನು:
     ಹೊನ್ನೆಲ್ಲ ಮಣ್ಣು;
ಕವಿಯೊಬ್ಬ ಹಾಡಿದನು:
     ಮಣ್ಣೆಲ್ಲ ಹೊನ್ನು!

ವೇದಾಂತಿ ಹೇಳಿದನು:
     ಈ ಹೆಣ್ಣು ಮಾಯೆ;
ಕವಿಯು ಕನವರಿಸಿದನು:
     ಓ ಇವಳೇ ಚೆಲುವೆ
ಇವಳ ಜೊತೆಯಲಿ ನಾನು
     ಸ್ವರ್ಗವನೆ ಗೆಲುವೆ!
   
ವೇದಾಂತಿ ಹೇಳಿದನು:
     ಈ ಬದುಕು ಶೂನ್ಯ;
ಕವಿ ನಿಂತು ಸಾರಿದನು:
     ಇದು ಅಲ್ಲ ಅನ್ಯ,
ಜನ್ಮ ಜನ್ಮದಿ ಸವಿದೆ
     ನಾನೆಷ್ಟು ಧನ್ಯ!

                 -  ಜಿ ಎಸ್ ಶಿವರುದ್ರಪ್ಪ
         ('ಕಾರ್ತೀಕ' ಕವನ ಸಂಕಲನದಿಂದ)

ಬದುಕು ಮಾಯೆಯ ಮಾಟ


ಬದುಕು ಮಾಯೆಯ ಮಾಟ
ಮಾತು ನೆರೆ ತೊರೆಯಾಟ
ಜೀವಮೌನದ ತುಂಬ ಗುಂಭ ಮುನ್ನೀರು
ಅರುಣೊದಯದ ಕೂಡ ಕರುಣೊದಯವು
ಇರಲು ಎದೆಯ ತುಂಬುತ್ತಿದೆ ಹೊಚ್ಚಹೊನ್ನೀರು

ನಿಜದಲ್ಲೇ ಒಲವಿರಲಿ
ಚೆಲುವಿನಲೇ ನಲಿವಿರಲಿ
ಒಳಿತಿನಲೆ ಗೆಲುವಿರಲಿ ಜೀವ ಗೆಳೆಯ
ಈ ನಾನು ಆ ನೀನು
ಒಂದೆ ತಾನಿನ ತಾನು
ತಾಳ ಲಯ ರಾಗಗಳು ಸಹಜಬರಲಿ

ಆತನಾಕೆಯೆ ನಮ್ಮ
ಜೀವ ನೌಕೆಯ ತಮ್ಮ
ಧ್ರುವ ಮರೆಯದಂತೆ ನಡೆಸುತ್ತಲಿರಲಿ
ದೇವ ಜೀವನ ಕೇಂದ್ರ
ಒಬ್ಬೊಬ್ಬನೂ ಇಂದ್ರ
ಏನಿದ್ದರೂ ಎಲ್ಲ ಎಲ್ಲೆ ತಿಳಿಯಾ

                             - ದ. ರಾ. ಬೇಂದ್ರೆ
('ಗಂಗಾವತರಣ' ಕವನ ಸಂಕಲನದಿಂದ)

ಪುಷ್ಪ ಭಗವಾನ್


 

೧
ಇದು ದರ್ಶನ:
ಇದು ಸಾಕ್ಷಾತ್ಕಾರ:
ಬರಿ ನೋಡುವುದಲ್ಲೋ!
ಈ ಅನುಭವಕ್ಕಿನ್ನಾವುದು ಬೇರೆಯ ಹೆಸರಿಲ್ಲೋ!
 

೨
ಇದು ಬರಿ ಹೂಬಿಡುವಾ
ಸಾಮಾನ್ಯದ ಪ್ರಾಕೃತ ಸಂಗತಿಯಲ್ಲೋ!
ಭಾವಿಸಿ ಕಾಣ್:
ಈ ಹೂವಿನ ಭಾವ್ಯಕಾರ
ಸಾರುತ್ತಿದೆ ತನಷ್ಟಕೆ ತಾನ್:
"ನಾನ್ ಅವತಾರ!"
 

 ೩
ಈ ಉದ್ಯಾನದಿ
ಈ ಹೊತ್ತರೆಯಲಿ
ಈ ಹೂಬಿಸಿಲಲಿ
ಧ್ಯಾನದಿ ನಿಂತವಲೋಕಿಸಿದರೆ ಪ್ರತ್ಯಕ್ಷಂ
ಇದು ಮಹದವತಾರ!
ಇದನೀಕ್ಷಿಸುವುದೆ ಸಾಕ್ಷಾತ್ಕಾರ!
ಹೇ ಭಗವತ್ ಪುಷ್ಪಾಕಾರ,
ನಿನಗಿದೋ ನಮಸ್ಕಾರ!
ಸಾಷ್ಟಾಂಗ ನಮಸ್ಕಾರ!

                                   - ಕುವೆಂಪು
                     ('ಅನಿಕೇತನ' ಕವನ ಸಂಕಲನದಿಂದ )