ಕಲಾವಿದ: ಎದ್ವಾರ್ಡ್ ಮೊರಾನ್ ಚಿತ್ರ ಕೃಪೆ: http://commons.wikimedia.org/ |
ಬಾಳ ಗಂಗೆಯ ಮಹಾ ಪೂರದೊಳು ಸಾವಿನೊಂದು ವೇಣಿ
ನೆರೆತಿದೆ ಬೆರೆತಿದೆ ಕುಣಿವ ಮೊರೆವ ತೆರೆ ತೆರೆಗಳೋಳಿಯಲ್ಲಿ
ಜನನ ಮರಣಗಳ ಉಬ್ಬು ತಗ್ಗು ಹೊರಳೊರಳು ಆಟವಲ್ಲಿ
ಆಶೆ ಬೂದಿ ತಳದಲ್ಲು ಕೆರಳುತಿವೆ ಕಿಡಿಗಳೆನಿತೊ ಮರಳಿ
ಮುರಿದು ಬಿದ್ದ ಮನ ಮರದ ಕೊರಡೊಳು ಹೂವು ಹೂವು ಅರಳಿ
ಕೂಡಲಾರದೆದೆಯಲ್ಲು ಕಂಡೀತು ಏಕ ಸೂತ್ರ
ಕಂಡುದುಂಟು ಬೆಸೆದೆದೆಗಳಲ್ಲು ಬಿನ್ನತೆಯ ವಿಕಟ ಹಾಸ್ಯ.
ಎತ್ತರೆತ್ತರಕೆ ಏರುವ ಮನಕು ಕೆಸರ ಲೇಪ ಲೇಪ
ಕೊಳೆಯ ಕೊಳಚೆಯಲಿ ಮುಳುಗಿ ಕಂಡೆನೊ ಬಾನಿನೊಂದು ಪೆಂಪ
ತುಂಬು ಗದ್ದಲಿನ ಬಸಿರನಾಳುತಿದೆ ಒಂದು ಅಗ್ನಿ ಪಿಂಡ
ತಮದಗಾದ ಹೊನಲಲ್ಲು ಹೊಳೆಯುತಿದೆ ಸತ್ವದೊಂದು ಖಂಡ.
ಆಶೆ ಎಂಬ ತಳವೊಡೆದ ದೋಣಿಯಲಿ ದೂರ ತೀರ ಯಾನ
ಯಾರ ಲೀಲೆಗೊ ಯಾರೋ ಏನು ಗುರಿಯಿರದೆ ಬಿಟ್ಟ ಬಾಣ
ಇದು ಬಾಳು ನೋಡು, ಇದ ತಿಳಿದೆನೆಂದರೂ ತಿಳಿದ ಧೀರನಿಲ್ಲ
ಹಲವು ತನದ ಮೈಮರೆಸುವಾಟವಿದು ನಿಜವು ತೋರದಲ್ಲ.
ಬೆಂಗಾಡು ನೋಡು ಇದು ಕಾಂಬ ಬಯಲು ದೊರಕಿಲ್ಲ ಆದಿ ಅಂತ್ಯ
ಅದ ಕುಡಿದೆನೆಂದ ಹಲರುಂಟು ತಣಿದೆನೆಂದವರ ಕಾಣೆನಯ್ಯ
ಅರೆ ಬೆಳಕಿನಲಿ ಬಾಳಲ್ಲಿ ಸುತ್ತಿ ನಾವೇಕೋ ಮರೆತು ಮೆರೆದು
ಕೊನೆಗೆ ಕರಗುವೆವು ಮರಣ ತೀರ ಘನ ತಿಮಿರದಲ್ಲಿ ಬೆರೆತು.
- ಗೋಪಾಲಕೃಷ್ಣ ಅಡಿಗ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಉನ್ಮಾದದ ನಶೆ ನಮ್ಮೊಂದಿಗಿಷ್ಟು ಹಂಚಿಕೊಳ್ರಿ....