ಗಂಗಾವತರಣ

ಹಿಮಾಚಲ ಪ್ರದೇಶದ ರೋತಂಗ್ ಬೆಟ್ಟದಲ್ಲಿನ ಜಲಪಾತ
ಚಿತ್ರ ಕೃಪೆ: WN / Yeshe Choesang
ಇಳಿದು ಬಾ ತಾಯಿ
ಇಳಿದು ಬಾ

ಹರನ ಜಡೆಯಿಂದ
ಹರಿಯ ಅಡಿಯಿಂದ
ಋಷಿಯ ತೊಡೆಯಿಂದ
ನುಸುಳಿ ಬಾ
ದೇವದೇವರನು ತಣಿಸಿ ಬಾ
ದಿಗ್ ದಿಗಂತದಲಿ ಹಣಿಸಿ ಬಾ
ಚರಾಚರಗಳಿಗೆ ಉಣಿಸಿ ಬಾ
ಇಳಿದು ಬಾ ತಾಯಿ
ಇಳಿದು ಬಾ.

ನಿನಗೆ ಪೊಡಮಡುವೆ
ನಿನ್ನನುಡತೊಡುವೆ
ಏಕೆ ಎಡೆತಡೆವೆ
ಸುರಿದು ಬಾ
ಸ್ವರ್ಗ ತೊರೆದು ಬಾ
ಬಯಲ ಜರೆದು ಬಾ
ನೆಲದಿ ಹರಿದು ಬಾ
ಬಾರೆ ಬಾ ತಾಯಿ ಇಳಿದು ಬಾ
ಇಳಿದು ಬಾ ತಾಯಿ
ಇಳಿದು ಬಾ.


ನನ್ನ ತಲೆಯೊಳಗೆ
ನನ್ನ ಬೆಂಬಳಿಗೆ
ನನ್ನ ಒಳಕೆಳಗೆ
ನುಗ್ಗಿ ಬಾ
ಕಣ್ಣ ಕಣ ತೊಳಿಸಿ
ಉಸಿರ ಎಳೆ ಎಳಸಿ
ನುಡಿಯ ಸಸಿ ಮೊಳೆಸಿ
ಹಿಗ್ಗಿ ಬಾ
ಎದೆಯ ನೆಲೆಯಲ್ಲಿ ನೆಲಿಸಿ ಬಾ
ಜೀವ ಜಲದಲ್ಲಿ ಚಲಿಸಿ ಬಾ
ಮೂಲ ಹೊಲದಲ್ಲಿ ನೆಲೆಸಿ ಬಾ
ಇಳಿದು ಬಾ ತಾಯಿ
ಇಳಿದು ಬಾ.


ಕಂಚು ಮಿಂಚಾಗಿ ತೆರಳಿ ಬಾ
ನೀರು ನೀರಾಗಿ ಉರುಳಿ ಬಾ 
ಮತ್ತೆ ಹೊಡೆಮರಳಿ ಹೊರಳಿ ಬಾ
ದಯೆಯಿರದ ದೀನ
ಹರೆಯಳಿದ ಹೀನ
ನೀರಿರದ ಮೀನ
ಕರೆಕರೆವ ಬಾ
ಇಳಿದು ಬಾ ತಾಯಿ
ಇಳಿದು ಬಾ.


ಕರು ಕಂಡ ಕರುಳೆ
ಮನ ಉಂಡ ಮರುಳೆ
ಉತ್ತಂಡ ಅರುಳೆ
ಸುಳಿ ಸುಳಿದು ಬಾ
ಶಿವಶುಭ್ರ ಕರುಣೆ
ಅತಿ ಕಿಂಚಿದರುಣೆ
ವಾತ್ಸಲ್ಯವರಣೆ
ಇಳಿ ಇಳಿದು ಬಾ
ಇಳಿದು ಬಾ ತಾಯಿ
ಇಳಿದು ಬಾ.

ಕೊಳೆಯ ತೊಳೆವವರು ಇಲ್ಲ ಬಾ
ಬೇರೆ ಶಕ್ತಿಗಳು ಹೊಲ್ಲ ಬಾ
ಹೀಗೆ ಮಾಡದಿರು, ಅಲ್ಲ ಬಾ 
ನಾಡಿ ನಾಡಿಯನು ತುತ್ತ ಬಾ 
ನಮ್ಮ ನಾಡನ್ನೆ ಸುತ್ತ ಬಾ
ಸತ್ತ ಜನರನ್ನು ಎತ್ತ ಬಾ

ಸುರಸ್ವಪ್ನವಿದ್ದ ಪ್ರತಿಬಿಂಬ ಬಿದ್ದ
ಉದ್ಬುದ್ಧ ಶುದ್ಧ ನೀರೇ 
ಎಚ್ಚೆತ್ತು ಎದ್ದ ಆಕಾಶದುದ್ದ
ಧರೆಗಿಳಿಯಲಿದ್ದ ಧೀರೇ 
ಸಿರಿವಾರಿಜಾತ ವರಪಾರಿಜಾತ
ತಾರಾ ಕುಸುಮದಿಂದೆ

ವೃಂದಾರವಂದ್ಯೆ  ಮಂದಾರಗಂಧೆ
ನೀನೇ ತಾಯಿ ತಂದೆ.
ರಸಪೂರಜನ್ಯೆ ನಿನ್ನಲ್ಲ ಅನ್ಯೆ
ಸಚ್ಚಿದಾನಂದ ಕನ್ಯೆ
ಬಂದರೆ ಬಾರೆ, ಒಂದಾರೆ ಸಾರೆ
ಕಣ್ಧಾರೆ ತಡೆವರೇನೇ?
ಅವತಾರವೆಂದೆ ಎಂದಾರೆ ತಾಯಿ, ಈ ಅಧಃಪಾತವನ್ನೇ
ಹರಕೆ ಸಂದಂತೆ
ಮಮತೆ ಮಿಂದಂತೆ
ತುಂಬಿ ಬಂದಂತೆ
ದುಂ ದುಂ ಎಂದಂತೆ
ದುಡುಕಿ ಬಾ
ನಿನ್ನ ಕಂದನ್ನ ಹುಡುಕಿ ಬಾ
ಹುಡುಕಿ ಬಾ ತಾಯಿ
ದುಡುಕಿ  ಬಾ.

ಹರಣ ಹೊಸದಾಗೆ ಹೊಳೆದು ಬಾ
ಬಾಳು ಬೆಳಕಾಗೆ ಬೆಳೆದು ಬಾ
ಕೈಯ ತೊಳೆದು ಬಾ
ಮೈಯ ತೊಳೆದು ಬಾ
ಇಳೆಗಿಳಿದು ಬಾ ತಾಯೀ
ಇಳಿದು ಬಾ ತಾಯಿ
ಇಳಿದು ಬಾ.

ಶಂಭು-ಶಿವ-ಹರನ ಚಿತ್ತೆ ಬಾ 
ದತ್ತ ನರಹರಿಯ ಮುತ್ತೆ ಬಾ
ಅಂಬಿಕಾತನಯನತ್ತೆ ಬಾ
ಇಳಿದು ಬಾ ತಾಯಿ
ಇಳಿದು ಬಾ.
        
                        - ದ ರಾ ಬೇಂದ್ರೆ
('ಗಂಗಾವತರಣ' ಕವನ ಸಂಕಲನದಿಂದ)

1 ಕಾಮೆಂಟ್‌:

  1. ನನ್ನ ನೆಚ್ಚಿನ ಪದ್ಯ, ಕಾಳಿಂಗ ರಾಯರು ತಮ್ಮ ದ್ವನಿಯಿಂಧ ಈ ಗೀತೆಯನ್ನು ಅಮರವಾಗಿಸಿಧಾರೆ

    ಪ್ರತ್ಯುತ್ತರಅಳಿಸಿ

ನಿಮ್ಮ ಉನ್ಮಾದದ ನಶೆ ನಮ್ಮೊಂದಿಗಿಷ್ಟು ಹಂಚಿಕೊಳ್ರಿ....