ಕೊರಗಲೇಕೆ? ಮರುಗಲೇಕೆ?
ಹುಟ್ಟಿ ಬಂದಿಹೆ, ಹಳಿಯಲೇಕೆ?
ಸುಖವೇ ಬರಲಿ, ದುಃಖ ಬರಲಿ,
ರೋಗ ಭೋಗಗಳೇನೆ ಬರಲಿ,
ಎಲ್ಲ ಹೊತ್ತು ಋಣವ ತೆತ್ತು
ಮುಂದೆ ಪುಣ್ಯದ ಬೀಜ ಬಿತ್ತು.
ಕೊರಗಲೇಕೆ? ಮರುಗಲೇಕೆ?
ಹುಟ್ಟಿದಿಳೆಯನು ಹಳಿಯಲೇಕೆ?
ಕೊರಗಲೇನು? ಮರುಗಲೇನು?
ಬಿಗಿದ ಬಂಧನ ಹರಿವುದೇನು?
ಸುಖವೇ ಬರಲಿ, ದುಃಖ ಬರಲಿ,
ಜೀವದೆಡರುಗಳೇನೆ ಇರಲಿ,
ಭಕ್ತಿಯಿಂದ ಶಕ್ತಿಯಿಂದ
ಮುಕ್ತಿಗೇರು ಧೈರ್ಯದಿಂದ.
ಕೊರಗಲೇಕೆ? ಮರುಗಲೇಕೆ?
ಬಂದಬಾಳನು ಹಳಿಯಲೇಕೆ?
ಕೊಡುವನವನು, ಬಿಡುವನವನು,
ಎಂದು ನೀನಿರೆ ಸುಡುವನವನು.
ಗೆಲುವೆ ಬರಲಿ, ಸೋಲೇ ಬರಲಿ,
ನುಗ್ಗು ಮುಂದಕೆ ಇರುವುದಿರಲಿ.
ಅರಿಯ ಕೊಲ್ಲು, ತಿರಿಯ ಗೆಲ್ಲು;
ಇಲ್ಲ, ರನದಲಿ ಜವಗೆ ಸಲ್ಲು.
ಕೊರಗಲೇಕೆ? ಮರುಗಲೇಕೆ?
ಬಂದದಾಯಿತು ಹಳಿವುದೇಕೆ?
ನಮ್ಮ ಬಾಳು ಸವಿಯ ಬಾಳು;
ಯಾವುದಿಲ್ಲಿ ಕಡಿಮೆ ಹೇಳು?
ತಿಳಿಯ ಬಾನು, ಹೊಳೆವ ಮೀನು .
ಸೂರ್ಯಚಂದ್ರರು, ಬೆಟ್ಟ, ಕಾನು,
ಹರಿವೆ ತುಂಗೆ, ಡಿವಿಜ ಗಂಗೆ.
ಹಾಲು ಮಳೆಯಿದೆ ಬರವ ಪಿನ್ಗೆ.
ಕರುಣೆಯೊಲ್ಮೆ ಎಲ್ಲ ಇಲ್ಲಿ!
ಯಾವುದೆಮಗೆ ಕಡಿಮೆ ಇಲ್ಲಿ ?
ಕೊರಗಲೇಕೆ? ಮರುಗಲೇಕೆ?
ಬಂದ ಬದುಕನು ಬೈಯಲೇಕೆ?
ಒಲಿದು ಕೂಡಿ, ನಲಿದು ಹಾಡಿ,
ನಮ್ಮ ಪಡೆದವನಂತೆ ಆಡಿ,
ಪರವ ನಾವು ಪಡೆವ ಮುನ್ನ
ಪಡೆಯಲೆಳೆಸುವ ತಿರೆಯ ಹೊನ್ನ!
ಕೊರಗಲೇಕೆ? ಮರುಗಲೇಕೆ?
ಬರಿದೆ ಬಾಳನು ಜರೆವುದೇಕೆ?
- ಕುವೆಂಪು
('ಜಲಗಾರ' ನಾಟಕದಿಂದ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಉನ್ಮಾದದ ನಶೆ ನಮ್ಮೊಂದಿಗಿಷ್ಟು ಹಂಚಿಕೊಳ್ರಿ....