ಚಿತ್ರ ಕೃಪೆ: thepurebar.com |
ಚಿಗುರು ಹೂವಿನ ಕಾಯಿ ಹಣ್ಣಿನ ಬಯಕೆಗಾಗಿದೆ ಬಿಡುಗಡೆ!
ಎಂಥ ಬಡಕಲು ಗಿಡವು ಕೂಡಾ ಚೆಲುವಿಗಾಗಿದೆ ನಿಲುಗಡೆ!
ನೂರು ವರ್ಣದ ನೂರು ರಾಗದ ಚಿಲುಮೆ ಚಿಮ್ಮಿದೆ ಎಲ್ಲೆಡೆ!
ಋತುವಸಂತನ ವರ್ಣಶಿಲ್ಪದ ಮೋಡಿ ಮೂಡಿದೆ ಮರದಲಿ
ಕಾಣದಿಹ ಕಾರುಣ್ಯ ಕೊನರಿದೆ ಬರಲುಕೊಮ್ಬೆಯ ಮೈಯಲಿ!
ವಿಲಯದಲ್ಲೂ ಚೆಲುವು ಚಿಮ್ಮಿದ ಹಿರಿಯ ಚೋದ್ಯದ ಹೊನಲಲಿ
ಮಿಂದ ಮನಸಿಗೆ ಕೇಳಿ ಬರುತಿದೆ ರಸದ ಗೀತೆಯ ಮೆಲ್ಲುಲಿ!
ಮುಕ್ತವಾಯಿತು ಮಾಘಮಾಸದ ಕೊರೆವ ಶೀತದ ಶಾಪವು
ತೀವ್ರ ತಪದಲಿ ಕೊಚ್ಚಿ ಹೋಯಿತು ಹಳೆಯ ಜಡತೆಯ ಪಾಪವು
ಯೌವನೋದಯವಾಯಿತಿದಿಗೋ ಕಣ್ಣ ತುಂಬುವ ರೂಪವು
ನೂರು ತರುವಿನ ತಳಿರ ಕೈಯಲಿ ನೂರು ಹೂವಿನ ದೀಪವು!
ಯಾವ ಚೆಲುವಿನ ಹುಚ್ಚು ಈ ತೆರ ಮರದ ಮೈಯಲಿ ಕೆರಳಿದೆ!
ಯಾವ ಭಾವದ ಹೊನಲು ಪ್ರತಿಭೆಯನಿಂತು ದೀಪನಗೊಳಿಸಿದೆ!
ಯಾವ ಅಶ್ರುತವರ್ಣಗಾನವನಿಂತು ತರುಗಳು ಮಿಡಿದಿವೆ!
ಯಾವ ಜನ್ಮಾಂತರದ ಸಾಧನೆ ಇಂತು ಮುಕ್ತಿಯ ಪಡೆದಿದೆ!
ಹೂವಬಿಟ್ಟಿವೆ, ಹೂವತೊಟ್ಟಿವೆ, ಹೂವನುಟ್ಟಿವೆ ಮರಗಳು!
ಚೈತ್ರಜಾತ್ರೆಗೆ ಬಂದು ನಿಂತವೊ ನೂರು ಚೆಲುವಿನ ರಥಗಳು!
ಕಾಮ-ರತಿಯರು ಬಂದು ಆಡುವ ರಾಸಲೀಳಪದಗಳು!
ಸೃಷ್ಟಿ ಬರೆಯುವ ಚೈತ್ರ ಕಾವ್ಯದ ಮಧುಪವಾಡದ ಕಥೆಗಳು!
ಮರಗಳೆನಲೇ, ನಿಂತು ನಲವಿನ ಚಿಲುಮೆ ಚಿಮ್ಮುವ ಜೀವವ?
ನಿಂದು ಸಿಂಗಾರಗೊಂಡು ಶ್ಯಾಮನ ನೆನೆವ ಗೋಪಿ ಭಾವವ!
ಯಾವ ಬೃಂದಾವನದ ಕೊಳಲಿಗೆ ಮುಗ್ದವಾಗುತ ನಿಂತವೋ
ಯಾವ ಜನ್ಮದ ಒಲವು ಎದೆಯೋಳು ತುಳುಕಿ ಮೌನದಿ ನಿಂತವೋ!
- ಜಿ ಎಸ್ ಶಿವರುದ್ರಪ್ಪ
('ದೇವಶಿಲ್ಪ' ಕವನ ಸಂಕಲನದಿಂದ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಉನ್ಮಾದದ ನಶೆ ನಮ್ಮೊಂದಿಗಿಷ್ಟು ಹಂಚಿಕೊಳ್ರಿ....