ಭಗವಂತನೆ ಕವಿ, ಸಹೃದಯನಾಂ!



ರಸಪ್ರಯೋಜನ ಭುವನಂ ಕವನಂ: 
     ಭಗವಂತನೆ ಕವಿ, ಸಹೃದಯನಾಂ!

ಬಾನೋ ಬಯಲೋ ಕಾಡೋ ಮಿಗವೋ 
ಮಣ್ಣಿನೊಳಾಡುವ  ಮುದ್ದಿನ ಮಗುವೋ, 
ಹಕ್ಕಿಯ ಗೂಡಿನ ಮುತ್ತಿನ ಮೊಟ್ಟೆಯೊ 
ಮಿಂಚುವ ಚುಕ್ಕಿಯ ರೆಕ್ಕೆಯ ಚಿಟ್ಟೆಯೊ,
ಅಲೆ ಅಲೆ ಏರಿಳಿಯುವ ಮಲೆಬೆಟ್ಟವೊ
ಹೂವಕ್ಕಿಯ ಇಂಚರ ಟೂವ್ವಿಟ್ಟುವೊ, -
ರಸಪ್ರಯೋಜನ ಭುವನಂ ಕವನಂ: 
     ಭಗವಂತನೆ ಕವಿ, ಸಹೃದಯನಾಂ!

ಹೊನಲೋ ಹೊಳೆಯೋ ತಳಿರೋ ತರುವೋ 
ಕೆಚ್ಚಲ ಕರುವನು ನೆಕ್ಕುವ ತರುವೋ,
ಮುಳುಗುವ ನೆಸರೊ ಮೂಡುವ ತಿಂಗಳೊ
ಚೆಲುವಿನ ಹೆಂಗಳೊ ಒಲವಿನ ಕಂಗಳೊ,
ಆನೆಯೊ ಸಿಂಹವೊ ಮೊಸಳೆಯೊ ಮೀನೋ
ಉಗ್ರವೊ ಸಾಧುವೊ ಎಂತೋ ಏನೋ -
ರಸಪ್ರಯೋಜನ ಭುವನಂ ಕವನಂ: 
     ಭಗವಂತನೆ ಕವಿ, ಸಹೃದಯನಾಂ!

ಅಲ್ಪವೊ ಭುಮವೊ ಹಿರಿದೋ ಕಿರಿದೋ 
ಸಿಹಿಯೋ ಕಹಿಯೋ ಬಿಳಿದೋ ಕರಿದೋ,
ಬಂಜರು ಮಳಲೋ ಹಲುಸಿನ ಹೊಳಲೋ 
ಬರವೋ ಸಾವೋ ಕದನದ ನೋವೋ,
ನೆಲೆಗೆಟ್ಟಲೆವಾ ಜನತೆಯ ಬೇವೋ,
ಲೀಲಾಪ್ರಜ್ಞೆಗೆ ಸರ್ವಂ, ಓವೋ!-
ರಸಪ್ರಯೋಜನ ಭುವನಂ ಕವನಂ: 
     ಭಗವಂತನೆ ಕವಿ, ಸಹೃದಯನಾಂ!

                                     -ಕುವೆಂಪು 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಉನ್ಮಾದದ ನಶೆ ನಮ್ಮೊಂದಿಗಿಷ್ಟು ಹಂಚಿಕೊಳ್ರಿ....