ಅಮ್ಮ, ನಿನ್ನ ಎದೆಯಾಳದಲ್ಲಿ

ಚಿತ್ರ ಕೃಪೆ: Shutterstock.com
ಅಮ್ಮ, ನಿನ್ನ ಎದೆಯಾಳದಲ್ಲಿ
ಗಾಳಕ್ಕೆ ಸಿಕ್ಕ ಮೀನು
ಮಿಡುಕಾಡುತಿರುವೆ ನಾನು
ಕಡಿಯಲೊಲ್ಲೆ ನೀ ಕರುಳಬಳ್ಳಿ
ಒಲವೂಡುತಿರುವ ತಾಯೆ,
ಬಿಡದ ಬುವಿಯ ಮಾಯೆ

ನಿನ್ನ ರಕ್ಷೆಗೂಡಲ್ಲಿ ಬೆಚ್ಚಗೆ
ಅಡಗಲಿ ಎಷ್ಟು ದಿನ ?
ದೂಡು ಹೊರಗೆ ನನ್ನ
ಓಟ ಕಲಿವೆ, ಒಳನೋಟ ಕಲಿವೆ, ನಾ
ಕಲಿವೆ ಊರ್ಧ್ವ ಗಮನ,
ಓ ಅಗಾಧ ಗಗನ

ಮೇಲೆ ಹಾರಿ, ನಿನ್ನ ಸೆಳೆತ ಮೀರಿ,
ನಿರ್ಭಾರಸ್ಥಿತಿಗೆ ತಲುಪಿ
ಬ್ರಹ್ಮಾಂಡವನ್ನೇ ಬೆದಕಿ
ಇಂಧನ ತೀರಲು, ಬಂದೇ ಬರುವೆನು
ಮತ್ತೆ ನಿನ್ನ ತೊಡೆಗೆ,
ಮೂರ್ತ ಪ್ರೇಮದೆಡೆಗೆ

            - ಬಿ ಆರ್ ಲಕ್ಷ್ಮಣರಾವ್ 

ಗುರಿ

ಗುರಿಯಾವುದೆಂದೆಲ್ಲ ಕೇಳುವರು ಎನ್ನ !
ಅರಿಯರೇ ಗುರಿಯು ಸರ್ವಕೆ ನೀನೆ ಎಂದು ?


ಗುರಿಯು ನೀನೆಂದೆನಲು ನಾಚುವೆನು ಜನನಿ:
ಗುರಿಯು ನೀನೆನಲೆನ್ನ ಮರುಳನೆಂಬುವರು !
ತಿರೆಯ ಸಿರಿಸುತರೆದರು ತಲೆವಾಗಿ ನಿಂತು
ಮನದಿ ನಿನ್ನನ್ನು ನೆನೆವೆ ನಮ್ರಭಾವದೊಳು !


ವಾದಿಸುವರೆನ್ನೊಡನೆ ಜೀವನವ ನಡಸೆ
ಮೇದಿನಿಯ ಸಿರಿಯೊಲ್ಮೆಯಿರಲೆ ಬೇಕೆಂದು ;
ವಾದಗಳನಾಲಿಸುವೆ ನಸುನಗೆಯ ತಡೆದು,
ಹೇ ದೇವಿ, ನಿನ್ನ  ಕೃಪೆಯಿಹುದೆಂದು ತಿಳಿದು !


ಬಲ್ಲರೇ ಅವರೆನ್ನ ಹೃದಯದೊಳಗಿಹುದು
ಸಲ್ಲಲಿಲತದಾನಂದ ಸಾಗರವು ಎಂದು !
ಜಗದ ಸಿರಿಸುತರೆನ್ನ ಜಡನೆಂದರೇನು ?
 ಅಗಲದಿರು ಎಲೆ ತಾಯೆ ಮನದಿಂದ ನೀನು !


                                             - ಕುವೆಂಪು    
 

ನಾ ಮೇಲಿನವನು ಬಲು ದೊಡ್ಡವನು



ನಾ ಮೇಲಿನವನು ಬಲು ದೊಡ್ಡವನು ಎಂದು
ಮೆರೆದಾಡ ಬೇಡ ಗೆಳೆಯ |
ನಿನಗಿಂತ ಮಿಗಿಲವರು ಇದ್ದಾರೋ ಭುವಿಯಲ್ಲಿ
ಸುಳ್ಳು  ಭ್ರಮೆಯಲಿ ನೀ ಮುಳುಗಬೇಡ ||


ಬಲು ದೊಡ್ಡ ಚಂದಿರನು ಇರುಳೆಲ್ಲ ಬೆಳಗುವನು
ಮರೆಯಾಗುವನು ಹಗಲ ಕಿರಣದಲ್ಲಿ |
ಉರಿಯುವನು ಸೂರ್ಯ ಅವಗಿಂತ ಹಿರಿಯ
ಕಳೆದು ಹೋಗುವನು ಇರುಳ ಸೆರಗಿನಲ್ಲಿ |


ಗ್ರಹ ತಾರೆಗಳ ಹೊತ್ತ ಗಗನಕ್ಕೆ ಮರೆಯುಂಟೇ
ಸಾರಿ ಹೇಳಿತೆ ತಾ ಮಿಗಿಲು ಎಂದು ?
ಣುವಲ್ಲಿ ಣುವಾದ ಕಣ್ಣಿದ್ದು ಕುರುಡಾದ
ನೀ ಕೂಬಹುದೇ ಹಾಗೆಂದು?


ಮಣ್ಣು ಮೊಳಕೆಯ ಹುಟ್ಟು, ಬೀಜ ವೃಕ್ಷದ ಗುಟ್ಟು
ಬೆರಗುಗೊಳಿಸುವುದಿಲ್ಲವೇನು?
ಗಿರಿ ಝರಿ ಒರತೆ ಜೀವರಾಶಿಯ ಚರಿತೆ
ರೋಮಂಚನಗೊಳಿಸದೇನು?


ಜನನ ಮರಣದ ಒಗಟ ಬಿಚ್ಚಿ ಹೇಳುವೆಯೇನು?
ಲೋಕದೊಳತಿಗೆ ನಿನ್ನ ಕಾಣ್ಕೆ ಏನು?
ಹೇಳು ಗೆಳಯನೆ ಈಗ ಎದೆ ತಟ್ಟಿ ನೀ ಹೇಳು
ಪ್ರಕೃತಿಯ ಹಿರಿತನಕೆ ನೀ ಸಾಟಿ ಏನು?
              
                                 - ಬಿ.ಟಿ.ಲಲಿತಾ ನಾಯಕ್

ಏನ ಬೇಡಲಿ !


ದೇವ, ನಿನ್ನ ಮಾಯೆಗಂಜಿ
ನಡುಗಿ ಬಾಡೆನು ;
ನಿನ್ನ ಇಚ್ಛೆಯಂತೆ ನಡೆವೆ -
ನಡ್ಡಿ ಮಾಡೆನು.

ಮುಕ್ತಿ ! ಮುಕ್ತಿ ! ನನ್ನ ನಾನು
ತಿಳಿದುಕೊಳ್ವುದೋ,
ಸಾವಿಗಂಜಿ ನಿನ್ನಡಿಯಲಿ
ಅಡಗಿಕೊಳ್ವುದೋ ?

ಶಕ್ತಿಯಿತ್ತೆ ಮುಕ್ತಿಯನ್ನು
ಗಳಿಸಿಕೊಳ್ಳುಲು ;
ನೀರನೆರೆದೆ ಬಳ್ಳಿಯನ್ನು
ಬೆಳಸಿಕೊಳ್ಳಲು ;

ಜ್ಞಾನರವಿಯನಿತ್ತೆ ಎದೆಯ
ನೋಡಿಕೊಳ್ಳಲು ;
ಗೀತೆಯನ್ನು ಕೊಟ್ಟೆ ಕೊಳಲೊ -
ಳೂದಿಕೊಳ್ಳಲು.

ಎಲ್ಲವನ್ನು ಕೊಟ್ಟಿರುವೆ;
ಏನ ಬೇಡಲಿ !
ಜಗವನೆನಗೆ ಬಿಟ್ಟಿರುವೆ
ಏಕೆ ಕಾಡಲಿ !

                 - ಕೆ ಎಸ್ ನರಸಿಂಹಸ್ವಾಮಿ

ನೇಗಿಲ ಯೋಗಿ



ನೇಗಿಲ ಹಿಡಿದಾ ಹೊಲದೊಳು ಹಾಡುತ 
     ಉಳುವಾ ಯೋಗಿಯ ನೋಡಲ್ಲಿ.
ಫಲವನು ಬಯಸದೆ ಸೇವೆಯೆ ಪೂಜೆಯು 
     ಕರ್ಮವೆ ಇಹ ಪರ ಸಾಧನವು.
ಕಷ್ಟದೊಳನ್ನವ ದುಡಿವನೆ ತ್ಯಾಗಿ 
     ಸೃಷ್ಟಿನಿಯಮದೊಳಗವನೇ ಭೋಗಿ.
ಲೋಕದೊಳೇನೇ ನಡೆಯುತಲಿರಲಿ 
     ತನ್ನೀ ಕಾರ್ಯವ ಬಿಡನೆಂದೂ:
ರಾಜ್ಯಗಳುದಿಸಲಿ ರಾಜ್ಯಗಳಳಿಯಲಿ, 
     ಹಾರಲಿ ಗದ್ದುಗೆ ಮಕುಟಗಳು,
ಮುತ್ತಿಗೆ ಹಾಕಲಿ ಸೈನಿಕರೆಲ್ಲ, 
      ಬಿತ್ತುಳುವುದನವ ಬಿಡುವುದೆ ಇಲ್ಲ.


ಬಾಳಿತು ನಮ್ಮೀ ನಾಗರಿಕತೆ ಸಿರಿ
     ಮಣ್ಣುಣಿ ನೆಗಿಲಿನಾಶ್ರಯದಿ;
ನೇಗಿಲ ಹಿಡಿದು ಕೈಯಾಧಾರದಿ
     ದೊರೆಗಳು ದರ್ಪದೊಳಾಳಿದರು.
ನೇಗಿಲ ಬಳದೊಳು ವೀರರು ಮೆರೆದರು,
     ಶಿಲ್ಪಿಗಳೆಸೆದರು, ಕವಿಗಳು ಬರೆದರು.   

ಯಾರು ಅರಿಯದ ನೇಗಿಲ ಯೋಗಿಯೆ 
     ಲೋಕಕೆ ಅನ್ನವನೀಯುವನು.
ಹೆಸರನು ಬಯಸದೆ ಅತಿಸುಖಕೆಳಸದೆ 
     ದುಡಿವನು ಗೌರವಕಾಶಿಸದೆ.
ನೇಗಿಲ ಕುಲದೊಳಗಡಗಿದೆ ಕರ್ಮ; 
      ನೇಗಿಲ ಮೇಲೆಯೆ ನಿಂತಿದೆ ಧರ್ಮ 


                                             - ಕುವೆಂಪು 

ಅನಿರ್ವಚನೀಯ



ಓ ಮನವೆ, ಬಾ, ಮುಳುಗು ಭಕ್ತಿಜಲನಿಧಿಯಲ್ಲಿ !
     ಸಾಕಿನ್ನು ಹೆಮ್ಮೆಯೇಕೆ ?
ಈ ಮಹಾ ವಿಶ್ವದ ರಹಸ್ಯವನು ನೀನರಿಯೆ,
     ಬರಿಯ ಹೋರಾಟ ಸಾಕೆ ?
ಕಲ್ಪನೆಯೆರಂಕೆಗಳು ಬಳಲಿದುವು ದುಡುಕಿ 
ಕಾಲದೆಶಗಳೆಲ್ಲೆಯನು  ಹುಡುಕಿ ಹುಡುಕಿ !

ಹೋದಷ್ಟು ಕಾಣುವುದು; ಕಂಡಷ್ಟು ತೋರುವುದು;
     ತೋರಿಕೆಗೆ ಕೊನೆಯದೆಲ್ಲಿ?
ಹಾದು ದಡ ಸೇರುವೆವೆ? ಏರಿದಂತೆರುವುದು !
     ಮಾಯೆಯಿದು ಮುಗಿವುದೆಲ್ಲಿ?
ಮಾತುಗಳು ಸೋತು ಹಿಂಜರಿಯುವುವು ಹೆದರಿ,
ಚಿಂತೆಗಳನಂತದಲಿ ಕನಸಿನಂತುದುರಿ ! 

                                                - ಕುವೆಂಪು    





ಒಡವೆಗಳು

ಚಿತ್ರ ಕೃಪೆ: swatiphatak.sulekha.com/albums/allphotos/slideshow/145367.htm

ಚಿನ್ನದ ಒಡವೆಗಳೇತಕೆ ಅಮ್ಮಾ?
ತೊಂದರೆ ಕೊಡುವುವು ಬೇಡಮ್ಮಾ
ಬಣ್ಣದ ಬಟ್ಟೆಗಳೇತಕೆ ಅಮ್ಮಾ?
ಮಣ್ಣಿ ನೊಳಾಡಲು ಬಿಡವಮ್ಮಾ!

ಚೆಂದಕೆ, ಚೆಂದಕೆ ಎನ್ನುವೆಯಮ್ಮಾ!
ಚೆಂದವು ಯಾರಿಗೆ ಹೇಳಮ್ಮಾ
ನೋಡುವರಿಗೆ ಚೆಂದವು, ಆನಂದವು;
ಆಡುವ ಎನಗಿದು ಬಲು ಬಂಧ.

ನನ್ನೀ ಶಿಶುತನ ನಿನ್ನೀ ತಾಯ್ತನ
ಎರಡೇ ಒಡವೆಗಳೆಮಗಮ್ಮ
ನಾ ನಿನಗೊಡವೆಯು; ನೀ ನನಗೊಡವೆಯು;
ಬೇರೆಯ ಒಡವೆಗಳೇಕಮ್ಮ?
                          
                         - ಕುವೆಂಪು
 ('ನನ್ನ ಮನೆ' ಕವನ ಸಂಕಲನದಿಂದ)

ನಾನೇಕೆ ಬರೆಯುತ್ತೇನೆ?


ನಾನು ಬರೆಯುತ್ತೇನೆ
ಸುಮ್ಮನಿರಲಾರದ್ದಕ್ಕೆ;
ನನ್ನ ವೇದನೆ ಸಂವೇದನೆಗಳನ್ನು
ಕ್ರಿಯೆ ಪ್ರತಿಕ್ರಿಯೆಗಳನ್ನು
ದಾಖಲು ಮಾಡುವುದಕ್ಕೆ;
ನಿಂತ ನೀರಾಗದೆ ಮುಂದಕ್ಕೆ
ಹರಿಯುವುದಕ್ಕೆ,
ಎಲ್ಲದರ ಜತೆ ಬೇರೆಯುವುದಕ್ಕೆ.


ನಾನು ಬರೆಯುತ್ತೇನೆ
ನನ್ನನ್ನು ನಾನು ಕಂಡುಕೊಳ್ಳುವುದಕ್ಕೆ
ಮತ್ತೆ ಕಾಣಿಸುವುದಕ್ಕೆ;
ನಿಮ್ಮೊಂದಿಗೆ ಸಂವಾದಿಸುವುದಕ್ಕೆ..


ನಾನು ಬರೆಯುತ್ತೇನೆ
ಖುಷಿಗೆ, ನೋವಿಗೆ,
ರೊಚ್ಚಿಗೆ ಮತ್ತು ಹುಚ್ಚಿಗೆ
ಅಥವಾ ನಂದಿಸಲಾರದ ಕಿಚ್ಚಿಗೆ.


                  - ಜಿ ಎಸ್ ಶಿವರುದ್ರಪ್ಪ 
        ('ಕಾಡಿನ ಕತ್ತಲಲ್ಲಿ' ಕವನ ಸಂಕಲನದಿಂದ)    


ಭಗವಂತನೆ ಕವಿ, ಸಹೃದಯನಾಂ!



ರಸಪ್ರಯೋಜನ ಭುವನಂ ಕವನಂ: 
     ಭಗವಂತನೆ ಕವಿ, ಸಹೃದಯನಾಂ!

ಬಾನೋ ಬಯಲೋ ಕಾಡೋ ಮಿಗವೋ 
ಮಣ್ಣಿನೊಳಾಡುವ  ಮುದ್ದಿನ ಮಗುವೋ, 
ಹಕ್ಕಿಯ ಗೂಡಿನ ಮುತ್ತಿನ ಮೊಟ್ಟೆಯೊ 
ಮಿಂಚುವ ಚುಕ್ಕಿಯ ರೆಕ್ಕೆಯ ಚಿಟ್ಟೆಯೊ,
ಅಲೆ ಅಲೆ ಏರಿಳಿಯುವ ಮಲೆಬೆಟ್ಟವೊ
ಹೂವಕ್ಕಿಯ ಇಂಚರ ಟೂವ್ವಿಟ್ಟುವೊ, -
ರಸಪ್ರಯೋಜನ ಭುವನಂ ಕವನಂ: 
     ಭಗವಂತನೆ ಕವಿ, ಸಹೃದಯನಾಂ!

ಹೊನಲೋ ಹೊಳೆಯೋ ತಳಿರೋ ತರುವೋ 
ಕೆಚ್ಚಲ ಕರುವನು ನೆಕ್ಕುವ ತರುವೋ,
ಮುಳುಗುವ ನೆಸರೊ ಮೂಡುವ ತಿಂಗಳೊ
ಚೆಲುವಿನ ಹೆಂಗಳೊ ಒಲವಿನ ಕಂಗಳೊ,
ಆನೆಯೊ ಸಿಂಹವೊ ಮೊಸಳೆಯೊ ಮೀನೋ
ಉಗ್ರವೊ ಸಾಧುವೊ ಎಂತೋ ಏನೋ -
ರಸಪ್ರಯೋಜನ ಭುವನಂ ಕವನಂ: 
     ಭಗವಂತನೆ ಕವಿ, ಸಹೃದಯನಾಂ!

ಅಲ್ಪವೊ ಭುಮವೊ ಹಿರಿದೋ ಕಿರಿದೋ 
ಸಿಹಿಯೋ ಕಹಿಯೋ ಬಿಳಿದೋ ಕರಿದೋ,
ಬಂಜರು ಮಳಲೋ ಹಲುಸಿನ ಹೊಳಲೋ 
ಬರವೋ ಸಾವೋ ಕದನದ ನೋವೋ,
ನೆಲೆಗೆಟ್ಟಲೆವಾ ಜನತೆಯ ಬೇವೋ,
ಲೀಲಾಪ್ರಜ್ಞೆಗೆ ಸರ್ವಂ, ಓವೋ!-
ರಸಪ್ರಯೋಜನ ಭುವನಂ ಕವನಂ: 
     ಭಗವಂತನೆ ಕವಿ, ಸಹೃದಯನಾಂ!

                                     -ಕುವೆಂಪು 

ಗಂಗಾವತರಣ

ಹಿಮಾಚಲ ಪ್ರದೇಶದ ರೋತಂಗ್ ಬೆಟ್ಟದಲ್ಲಿನ ಜಲಪಾತ
ಚಿತ್ರ ಕೃಪೆ: WN / Yeshe Choesang
ಇಳಿದು ಬಾ ತಾಯಿ
ಇಳಿದು ಬಾ

ಹರನ ಜಡೆಯಿಂದ
ಹರಿಯ ಅಡಿಯಿಂದ
ಋಷಿಯ ತೊಡೆಯಿಂದ
ನುಸುಳಿ ಬಾ
ದೇವದೇವರನು ತಣಿಸಿ ಬಾ
ದಿಗ್ ದಿಗಂತದಲಿ ಹಣಿಸಿ ಬಾ
ಚರಾಚರಗಳಿಗೆ ಉಣಿಸಿ ಬಾ
ಇಳಿದು ಬಾ ತಾಯಿ
ಇಳಿದು ಬಾ.

ನಿನಗೆ ಪೊಡಮಡುವೆ
ನಿನ್ನನುಡತೊಡುವೆ
ಏಕೆ ಎಡೆತಡೆವೆ
ಸುರಿದು ಬಾ
ಸ್ವರ್ಗ ತೊರೆದು ಬಾ
ಬಯಲ ಜರೆದು ಬಾ
ನೆಲದಿ ಹರಿದು ಬಾ
ಬಾರೆ ಬಾ ತಾಯಿ ಇಳಿದು ಬಾ
ಇಳಿದು ಬಾ ತಾಯಿ
ಇಳಿದು ಬಾ.


ನನ್ನ ತಲೆಯೊಳಗೆ
ನನ್ನ ಬೆಂಬಳಿಗೆ
ನನ್ನ ಒಳಕೆಳಗೆ
ನುಗ್ಗಿ ಬಾ
ಕಣ್ಣ ಕಣ ತೊಳಿಸಿ
ಉಸಿರ ಎಳೆ ಎಳಸಿ
ನುಡಿಯ ಸಸಿ ಮೊಳೆಸಿ
ಹಿಗ್ಗಿ ಬಾ
ಎದೆಯ ನೆಲೆಯಲ್ಲಿ ನೆಲಿಸಿ ಬಾ
ಜೀವ ಜಲದಲ್ಲಿ ಚಲಿಸಿ ಬಾ
ಮೂಲ ಹೊಲದಲ್ಲಿ ನೆಲೆಸಿ ಬಾ
ಇಳಿದು ಬಾ ತಾಯಿ
ಇಳಿದು ಬಾ.


ಕಂಚು ಮಿಂಚಾಗಿ ತೆರಳಿ ಬಾ
ನೀರು ನೀರಾಗಿ ಉರುಳಿ ಬಾ 
ಮತ್ತೆ ಹೊಡೆಮರಳಿ ಹೊರಳಿ ಬಾ
ದಯೆಯಿರದ ದೀನ
ಹರೆಯಳಿದ ಹೀನ
ನೀರಿರದ ಮೀನ
ಕರೆಕರೆವ ಬಾ
ಇಳಿದು ಬಾ ತಾಯಿ
ಇಳಿದು ಬಾ.


ಕರು ಕಂಡ ಕರುಳೆ
ಮನ ಉಂಡ ಮರುಳೆ
ಉತ್ತಂಡ ಅರುಳೆ
ಸುಳಿ ಸುಳಿದು ಬಾ
ಶಿವಶುಭ್ರ ಕರುಣೆ
ಅತಿ ಕಿಂಚಿದರುಣೆ
ವಾತ್ಸಲ್ಯವರಣೆ
ಇಳಿ ಇಳಿದು ಬಾ
ಇಳಿದು ಬಾ ತಾಯಿ
ಇಳಿದು ಬಾ.

ಕೊಳೆಯ ತೊಳೆವವರು ಇಲ್ಲ ಬಾ
ಬೇರೆ ಶಕ್ತಿಗಳು ಹೊಲ್ಲ ಬಾ
ಹೀಗೆ ಮಾಡದಿರು, ಅಲ್ಲ ಬಾ 
ನಾಡಿ ನಾಡಿಯನು ತುತ್ತ ಬಾ 
ನಮ್ಮ ನಾಡನ್ನೆ ಸುತ್ತ ಬಾ
ಸತ್ತ ಜನರನ್ನು ಎತ್ತ ಬಾ

ಸುರಸ್ವಪ್ನವಿದ್ದ ಪ್ರತಿಬಿಂಬ ಬಿದ್ದ
ಉದ್ಬುದ್ಧ ಶುದ್ಧ ನೀರೇ 
ಎಚ್ಚೆತ್ತು ಎದ್ದ ಆಕಾಶದುದ್ದ
ಧರೆಗಿಳಿಯಲಿದ್ದ ಧೀರೇ 
ಸಿರಿವಾರಿಜಾತ ವರಪಾರಿಜಾತ
ತಾರಾ ಕುಸುಮದಿಂದೆ

ವೃಂದಾರವಂದ್ಯೆ  ಮಂದಾರಗಂಧೆ
ನೀನೇ ತಾಯಿ ತಂದೆ.
ರಸಪೂರಜನ್ಯೆ ನಿನ್ನಲ್ಲ ಅನ್ಯೆ
ಸಚ್ಚಿದಾನಂದ ಕನ್ಯೆ
ಬಂದರೆ ಬಾರೆ, ಒಂದಾರೆ ಸಾರೆ
ಕಣ್ಧಾರೆ ತಡೆವರೇನೇ?
ಅವತಾರವೆಂದೆ ಎಂದಾರೆ ತಾಯಿ, ಈ ಅಧಃಪಾತವನ್ನೇ
ಹರಕೆ ಸಂದಂತೆ
ಮಮತೆ ಮಿಂದಂತೆ
ತುಂಬಿ ಬಂದಂತೆ
ದುಂ ದುಂ ಎಂದಂತೆ
ದುಡುಕಿ ಬಾ
ನಿನ್ನ ಕಂದನ್ನ ಹುಡುಕಿ ಬಾ
ಹುಡುಕಿ ಬಾ ತಾಯಿ
ದುಡುಕಿ  ಬಾ.

ಹರಣ ಹೊಸದಾಗೆ ಹೊಳೆದು ಬಾ
ಬಾಳು ಬೆಳಕಾಗೆ ಬೆಳೆದು ಬಾ
ಕೈಯ ತೊಳೆದು ಬಾ
ಮೈಯ ತೊಳೆದು ಬಾ
ಇಳೆಗಿಳಿದು ಬಾ ತಾಯೀ
ಇಳಿದು ಬಾ ತಾಯಿ
ಇಳಿದು ಬಾ.

ಶಂಭು-ಶಿವ-ಹರನ ಚಿತ್ತೆ ಬಾ 
ದತ್ತ ನರಹರಿಯ ಮುತ್ತೆ ಬಾ
ಅಂಬಿಕಾತನಯನತ್ತೆ ಬಾ
ಇಳಿದು ಬಾ ತಾಯಿ
ಇಳಿದು ಬಾ.
        
                        - ದ ರಾ ಬೇಂದ್ರೆ
('ಗಂಗಾವತರಣ' ಕವನ ಸಂಕಲನದಿಂದ)

ದೋಣಿ ಸಾಗಲಿ ಮುಂದೆ ಹೋಗಲಿ


ದೋಣಿ ಸಾಗಲಿ ಮುಂದೆ ಹೋಗಲಿ ದೂರ ತೀರವ ಸೇರಲಿ
ಬೀಸು ಗಾಳಿಗೆ ಬೀಳುತೇಳುವ ತೆರೆಯ ಮೇಗಡೆ ಹಾರಲಿ.

ಹೊನ್ನಗಿಂಡಿಯ ಹಿಡಿದು ಕೈಯೊಳು ಹೇಮವಾರಿಯ ಚಿಮುಕಿಸೆ
ಮೇಘಮಾಲೆಗೆ ಬಣ್ಣವೀಯುತ ಯಕ್ಷಲೋಕವ ವಿರಚಿಸೆ
ನೋಡಿ ಮೂಡಣದಾ ದಿಗಂತದಿ ಮೂಡುವೆಣ್ಣಿನ ಮೈಸಿರಿ
ರಂಜಿಸುತ್ತಿದೆ ಚೆಲುವೆಯಾಕೆಗೆ ಸುಪ್ರಭಾತವ ಬಯಸಿರಿ.

ಕೆರೆಯ ಅಂಚಿನ ಮೇಲೆ ಮಿಂಚಿನ ಹನಿಗಳಂದದಿ ಹಿಮಮಣಿ
ಮಿಂಚುತಿರ್ಪುವು ಮೂಡುತೈತರೆ ಬಾಲಕೋಮಲ ದಿನಮಣಿ
ಹಸಿರು ಜೋಳದ ಹೊಲದ ಗಾಳಿಯು ತೀಡಿ ತಣ್ಣಗೆ ಬರುತಿದೆ
ಹುದುಗಿ ಹಾಡುವ ಮತ್ತ ಕೋಕಿಲ ಮಧುರ ವಾಣಿಯ ತರುತಿದೆ

ದೂರ ಬೆಟ್ಟದ ಮೇಲೆ ತೇಲುವ ಬಿಳಿಯ ಮೋಡವ ನೋಡಿರಿ
ಅದನೆ ಹೋಲುತ ಅಂತೆ ತೇಲುತ ದೋಣಿಯಾಟವನಾಡಿರಿ
ನಾವು ಲೀಲಾಮಾತ್ರ ಜೀವರು ನಮ್ಮ ಜೀವನ ಲೀಲೆಗೆ
ನೆನ್ನೆ ನೆನ್ನೆಗೆ ಇಂದು ಇಂದಿಗೆ ಇರಲಿ ನಾಳೆಯು ನಾಳೆಗೆ!

                                                      - ಕುವೆಂಪು


ಅತ್ತಿತ್ತ ನೋಡದಿರು


ಅತ್ತಿತ್ತ ನೋಡದಿರು, ಅತ್ತು ಹೊರಳಾಡದಿರು,
ನಿದ್ದೆ ಬರುವಳು ಹೊದ್ದು ಮಲಗು ಮಗುವೆ.
ಸುತ್ತಿ ಹೊರಳಾಡದಿರು, ಮತ್ತೆ ಹಠ ಹೂಡದಿರು,
ನಿದ್ದೆ ಬರುವಳು ಕದ್ದು ಮಲಗು ಮಗುವೆ.
ಜೋ ಜೋ ಜೋ ಜೋ

ಮಲಗು ಚೆಲ್ವಿನ ತೆರೆಯೆ, ಮಲಗು ಒಲ್ಮೆಯ ಸೆರೆಯೆ,
ಮಲಗು ತೊಟ್ಟಿಲ ಸಿರಿಯೇ ದೇವರಂತೆ.
ಮಲಗು ಮುದ್ದಿನ ಗಿಣಿಯೆ, ಮಲಗು ಮುತ್ತಿನ ಮಣಿಯೆ,
ಮಲಗು ಚಂದಿರನೂರ ಪೋಗುವೆಯಂತೆ.

ತಾರೆಗಳ  ಜರತಾರಿ ಅಂಗಿ ತೊಡಿಸುವರಂತೆ,
ಚಂದಿರನ ತಂಗಿಯರು ನಿನ್ನ ಕರೆದು.
ಹೂವ ಮುಡಿಸುವರಂತೆ, ಹಾಲ ಕುಡಿಸುವರಂತೆ,
ವೀಣೆ ನುಡಿಸುವರಂತೆ ಸುತ್ತ ನೆರೆದು .

ಬಣ್ಣ ಬಣ್ಣದ ಕನಸು ಕರಗುವುದು ಬಲು ಬೇಗ,
ಹಗಲು ಬರುವನು ಬೆಳ್ಳಿ ಮುಗಿಲಾ ನಡುವೆ.
ಚಿನ್ನದಮ್ಬರಿಯಲಿ ನಿನ್ನ ಕಳುಹುವರಾಗ,
ಪಟ್ಟದಾನೆಯ ಮೇಲೆ ಪುಟ್ಟ ಮಗುವೆ.


                             - ಕೆ.ಎಸ್. ನರಸಿಂಹಸ್ವಾಮಿ

ಕೊರಗಲೇಕೆ? ಮರುಗಲೇಕೆ?


ಕೊರಗಲೇಕೆ? ಮರುಗಲೇಕೆ?
ಹುಟ್ಟಿ ಬಂದಿಹೆ, ಹಳಿಯಲೇಕೆ?
     ಸುಖವೇ ಬರಲಿ, ದುಃಖ ಬರಲಿ,
     ರೋಗ ಭೋಗಗಳೇನೆ ಬರಲಿ,
ಎಲ್ಲ ಹೊತ್ತು ಋಣವ ತೆತ್ತು
ಮುಂದೆ ಪುಣ್ಯದ ಬೀಜ ಬಿತ್ತು.
     ಕೊರಗಲೇಕೆ? ಮರುಗಲೇಕೆ?
     ಹುಟ್ಟಿದಿಳೆಯನು ಹಳಿಯಲೇಕೆ?

ಕೊರಗಲೇನು? ಮರುಗಲೇನು?
ಬಿಗಿದ ಬಂಧನ ಹರಿವುದೇನು?
     ಸುಖವೇ ಬರಲಿ, ದುಃಖ ಬರಲಿ,
     ಜೀವದೆಡರುಗಳೇನೆ ಇರಲಿ,
ಭಕ್ತಿಯಿಂದ ಶಕ್ತಿಯಿಂದ
ಮುಕ್ತಿಗೇರು ಧೈರ್ಯದಿಂದ.
     ಕೊರಗಲೇಕೆ? ಮರುಗಲೇಕೆ?
     ಬಂದಬಾಳನು ಹಳಿಯಲೇಕೆ?

ಕೊಡುವನವನು, ಬಿಡುವನವನು,
ಎಂದು ನೀನಿರೆ ಸುಡುವನವನು.
     ಗೆಲುವೆ ಬರಲಿ, ಸೋಲೇ ಬರಲಿ,
     ನುಗ್ಗು ಮುಂದಕೆ ಇರುವುದಿರಲಿ.
ಅರಿಯ ಕೊಲ್ಲು, ತಿರಿಯ ಗೆಲ್ಲು;
ಇಲ್ಲ, ರನದಲಿ ಜವಗೆ ಸಲ್ಲು.
     ಕೊರಗಲೇಕೆ? ಮರುಗಲೇಕೆ?
     ಬಂದದಾಯಿತು ಹಳಿವುದೇಕೆ?

ನಮ್ಮ ಬಾಳು ಸವಿಯ ಬಾಳು;
ಯಾವುದಿಲ್ಲಿ ಕಡಿಮೆ ಹೇಳು?
     ತಿಳಿಯ ಬಾನು, ಹೊಳೆವ ಮೀನು .
     ಸೂರ್ಯಚಂದ್ರರು, ಬೆಟ್ಟ, ಕಾನು,
ಹರಿವೆ ತುಂಗೆ, ಡಿವಿಜ ಗಂಗೆ.
ಹಾಲು ಮಳೆಯಿದೆ ಬರವ ಪಿನ್ಗೆ.
     ಕರುಣೆಯೊಲ್ಮೆ ಎಲ್ಲ ಇಲ್ಲಿ!
     ಯಾವುದೆಮಗೆ ಕಡಿಮೆ ಇಲ್ಲಿ ?

ಕೊರಗಲೇಕೆ? ಮರುಗಲೇಕೆ?
ಬಂದ ಬದುಕನು ಬೈಯಲೇಕೆ?
     ಒಲಿದು ಕೂಡಿ, ನಲಿದು ಹಾಡಿ,
     ನಮ್ಮ ಪಡೆದವನಂತೆ ಆಡಿ,
ಪರವ ನಾವು ಪಡೆವ ಮುನ್ನ
ಪಡೆಯಲೆಳೆಸುವ ತಿರೆಯ ಹೊನ್ನ!
     ಕೊರಗಲೇಕೆ? ಮರುಗಲೇಕೆ?
     ಬರಿದೆ ಬಾಳನು ಜರೆವುದೇಕೆ?

                               - ಕುವೆಂಪು 
                    ('ಜಲಗಾರ' ನಾಟಕದಿಂದ)

ಓಂ ಅನವರತವೋ


ಓಂ
ಅನವರತವೋ
ನಿನ್ನ ಮಡಿಲೊಳೆಯೇ ಮಲಗಿರುವೆನೆಂಬೊಂದು
ಶಿಶುನಿರ್ಭರತೆ ನನ್ನದಾಗಿರಲಿ, ತಾಯಿ.
ಕಷ್ಟದಲಿ; ನಷ್ಟದಲಿ;
ದುಷ್ಟಪೀಡನೆಯಲ್ಲಿ;
ನಿಂದ ಸ್ತುತಿಗಳಲ್ಲಿ
ನಿನ್ನ
ಮಂತ್ರಮಯ ಮಾತೃವಕ್ಷಸ್ತನ್ಯಧೈರ್ಯವನೀಂಟುತಿರಲೆನ್ನ ಬಾಯಿ:
ದೇಹದಲಿ ವಿಶ್ರಾಂತಿ;
ನರಗಳಲಿ ವಿಶ್ರಾಂತಿ;
ಭಾವದಲಿ ವಿಶ್ರಾಂತಿ;
ಹೃದಯದಲಿ ವಿಶ್ರಾಂತಿ;
ಮನದಿ ವಿಶ್ರಾಂತಿ;
ಚೇತನದಿ ತುಂಬಿ ಬರಲಂಬುಧಿಯ ಗಂಭೀರ ಶಾಂತಿ!
ಓಂ ಶಾಂತಿಃ ಶಾಂತಿಃ ಶಾಂತಿಃ!

                              - ಕುವೆಂಪು  

ಹಕ್ಕಿಗಳ ಸಂಗದಲಿ

ಹಕ್ಕಿಗಳ ಸಂಗದಲಿ
ರೆಕ್ಕೆ ಮೂಡುವುದೆನೆಗೆ;
ಹಾರುವುದು ಹೃತ್ಪಕ್ಷಿ
         ಲೋಕಗಳ ಕೊನೆಗೆ!

ಹಾರಿ ಲೋಕದ ಕೊನೆಗೆ,
(ರಸದ ಪೈರಿನ ಮನೆಗೆ,)
ಬಾಣದಂತೆರಗುವುದು
         ಹಾಲು ಜೇನ್ದೆನೆಗೆ!

ಅಲ್ಲಿ ಮೂಡುವುದು ರವಿ:
ಆದರೀ ರವಿಯಲ್ಲ!
ಅಲ್ಲಿ ಹಾಡುವನು ಕವಿ:
         ಈ ಕವಿಯು ಅಲ್ಲ!

ಕೇಳಿದರೆ, ಹೃತ್ಪಕ್ಷಿ
ಮೌನವನೆ ಹಾಡುವುದು!
ಮೂಕ ಸುಂದರ ಅಕ್ಷಿ
         ಎದೆಯ ಕಾಡುವುದು!


                               - ಕುವೆಂಪು

ಅವ್ವ


ಚಿತ್ರ ಕೃಪೆ: ಜೇಮ್ಸ್ ಬ್ಲೈರ್, ನ್ಯಾಷನಲ್ ಜಿಯಾಗ್ರಫಿಕ್ 
ನನ್ನವ್ವ ಫಲವತ್ತಾದ ಕಪ್ಪು ನೆಲ
ಅಲ್ಲಿ ಹಸಿರು ಪತ್ರದ ಹರವು, ಬಿಳಿಯ ಹೂ ಹಬ್ಬ ;
ಸುಟ್ಟಷ್ಟು ಕಸುವು, ನೊಂದಷ್ಟು ಹೂ ಹಣ್ಣು
ಮಕ್ಕೊಳೊದ್ದರೆ ಅವಳ ಅಂಗಾಂಗ ಪುಲಕ ;
ಹೊತ್ತ ಬುಟ್ಟಿಯ ಇಟ್ಟು ನರಳಿ ಎವೆ ಮುಚ್ಚಿದಳು ತೆರೆಯದಂತೆ.

ಪಲ್ಲ ಜೋಳವ ಎತ್ತಿ ಅಪ್ಪನ್ನ ಮೆಚ್ಚಿಸಿ ತೋಳಬಂದಿಯ ಗೆದ್ದು ,

ಹೆಂಟೆಗೊಂದು ಮೊಗೆ ನೀರು ಹಿಗ್ಗಿ ;
ಮೆಣಸು, ಅವರೆ, ಜೋಳ, ತೊಗರಿಯ ಹೊಲವ ಕೈಯಲ್ಲಿ ಉತ್ತು ,
ಹೂವಲ್ಲಿ ಗದ್ದೆಯ ನೋಡಿಕೊಂಡು,
ಯೌವನವ ಕಳೆದವಳು ಚಿಂದಿಯ ಸೀರೆ ಉಟ್ಟುಕೊಂಡು.

ಸತ್ತಳು ಈಕೆ :
ಬಾಗು ಬೆನ್ನಿನ ಮುದುಕಿಗೆಷ್ಟು ಪ್ರಾಯ ?
ಎಷ್ಟು ಗಾದಿಯ ಚಂದ್ರ, ಒಲೆಯೆದುರು ಹೋಳಿಗೆಯ ಸಂಭ್ರಮ ?
ಎಷ್ಟು ಸಲ ಈ ಮುದುಕಿ ಅತ್ತಳು
ಕಾಸಿಗೆ, ಕೆಟ್ಟ ಪೈರಿಗೆ, ಸತ್ತ ಕರುವಿಗೆ;
ಎಷ್ಟು ಸಲ ಹುಡುಕುತ್ತ ಊರೂರು ಅಲೆದಳು
ತಪ್ಪಿಸಿಕೊಂಡ ಮುದಿಯ ಎಮ್ಮೆಗೆ ?

ಸತಿ ಸಾವಿತ್ರಿ, ಜಾನಕಿ, ಊರ್ಮಿಳೆಯಲ್ಲ ;
ಚರಿತ್ರೆ ಪುಸ್ತಕದ ಶಾಂತ, ಶ್ವೇತ, ಗಂಭೀರೆಯಲ್ಲ ;
ಗಾಂಧೀಜಿ , ರಾಮಕೃಷ್ಣರ ಸತಿಯರಂತಲ್ಲ ;
ಮುತ್ತೈದೆಯಾಗಿ ಕುಂಕುಮ ಕೂಡ ಇಡಲಿಲ್ಲ .

ಬನದ ಕರಡಿಯ ಹಾಗೆ
ಚಿಕ್ಕ ಮಕ್ಕಳ ಹೊತ್ತು
ಗಂಡನ್ನ ಸಾಕಿದಳು ಕಾಸು ಗಂಟಿಕ್ಕಿದಳು
ನೊಂದ ನಾಯಿಯ ಹಾಗೆ ಬೈದು, ಗೊಣಗಿ, ಗುದ್ದಾಡಿದಳು ;

ಸಣ್ಣತನ, ಕೊಂಕು, ಕೆರೆದಾಟ ಕೋತಿಯ ಹಾಗೆ :
ಎಲ್ಲಕ್ಕೆ ಮನೆತನದ ಉದ್ಧಾರ ಸೂತ್ರ.
ಈಕೆ ಉರೆದೆದ್ದಾಳು
ಮಗ ಕೆಟ್ಟರೆ, ಗಂಡ ಬೇರೆ ಕಡೆ ಹೋದಾಗ ಮಾತ್ರ.


ಬನದ ಕರಡಿಗೆ ನಿಮ್ಮ ಭಗವದ್ಗೀತೆ ಬೇಡ ;

ನನ್ನವ್ವ ಬದುಕಿದ್ದು
ಕಾಳುಕಡ್ಡಿಗೆ, ದುಡಿತಕ್ಕೆ, ಮಕ್ಕಳಿಗೆ ;
ಮೇಲೊಂದು ಸೂರು, ಅನ್ನ , ರೊಟ್ಟಿ , ಹಚಡಕ್ಕೆ ;
ಸರೀಕರ ಎದುರು ತಲೆಯೆತ್ತಿ ನಡೆಯಲಿಕ್ಕೆ.


ಇವಳಿಗೆ ಮೆಚ್ಚುಗೆ, ಕೃತಜ್ಞತೆಯ ಕಣ್ಣೀರು :
ಹೆತ್ತದ್ದಕ್ಕೆ ಸಾಕಿದ್ದಕ್ಕೆ ; ಮಣ್ಣಲ್ಲಿ ಬದುಕಿ,
ಮನೆಯಿಂದ ಹೊಲಕ್ಕೆ ಹೋದಂತೆ
ತಣ್ಣಗೆ ಮಾತಾಡುತ್ತಲೇ ಹೊರಟು ಹೋದದ್ದಕ್ಕೆ.

                                        - ಪಿ ಲಂಕೇಶ್

ಅನ್ವೇಷಣೆ



ಎಲ್ಲೋ ಹುಡುಕಿದೆ ಇಲ್ಲದ ದೇವರ
ಕಲ್ಲು ಮಣ್ಣುಗಳ ಗುಡಿಯೊಳಗೆ
ಇಲ್ಲೇ ಇರುವ ಪ್ರೀತಿ ಸ್ನೇಹಗಳ
ಗುರುತಿಸದಾದೆನು ನಮ್ಮೊಳಗೆ.

ಎಲ್ಲಿದೆ ನಂದನ ಎಲ್ಲಿದೆ ಬಂಧನ
ಎಲ್ಲಾ ಇವೆ ಈ ನಮ್ಮೊಳಗೆ
ಒಳಗಿನ ತಿಳಿಯನು ಕಲಕದೆ ಇದ್ದರೆ
ಅಮೃತದ ಸವಿಯಿದೆ ನಾಲಗೆಗೆ.

ಹತ್ತಿರವಿದ್ದೂ ದೂರ ನಿಲ್ಲುವೆವು
ನಮ್ಮ ಅಹಮ್ಮಿನ ಕೋಟೆಯಲಿ
ಎಷ್ಟು ಕಷ್ಟವೋ ಹೊಂದಿಕೆ ಎಂಬುದು
ನಾಲ್ಕು ದಿನದ ಈ ಬದುಕಿನಲಿ!



                         - ಜಿ ಎಸ್ ಶಿವರುದ್ರಪ್ಪ
               ('ಗೋಡೆ' ಕವನ ಸಂಕಲನದಿಂದ) 

ಅಚಿಂತ್ಯ


ಇರುಳ ಕರುಳನು ಹೊಕ್ಕು ನೋಡಿದೊಡೆ  ನೀನಲ್ಲಿ
ಬಿಳಿದಾಗಿ ತೋರುತಿರುವೆ !
ಹಗಲಿನೆದೆಯನು ಬಗೆಯುತಿಣುಕಿದೊಡೆ ನೀನಲ್ಲಿ
ಕರಿದಾಗಿ ತೋರುತಿರುವೆ !


ಕಗ್ಗಲ್ಲಿನೆದೆಯಲ್ಲಿ ನುಗ್ಗಿ ನೋಡಿದೋಡಲ್ಲಿ
ಹೂವಾಗಿ ತೋರುತಿರುವೆ !
ಹೂವುಗಳ ಹೃದಯದಲ್ಲಿ ಹುಡುಕಿ ನೋಡಿದೊಡಲ್ಲಿ
ಕಲ್ಲಾಗಿ ತೋರುತಿರುವೆ !


ಭೂತಳದ ರೂಪಗಳ ಸಿಗಿಸಿಗಿದು ನೋಡಿದರೆ
ನಾಕಾರನಾಗಿ ನೀ ತೋರುತಿರುವೆ !
ನಾಕಾರ ತತ್ತ್ವವನ್ನು ಅನುಭವಿಸಿ ನೋಡಿದರೆ
ಸಾಕರನಾಗಿ ನೀ ತೋರುತಿರೆ !


"ಅದು ಅಲ್ಲ ! ಇದು ಅಲ್ಲ !" ಎಂದೆಲ್ಲರೊರೆಯೆ,
"ಅದು ನಾನು ! ಇದು ನಾನು" ಎಂದು ನೀ ಮೊರೆವೆ !


                                                    - ಕುವೆಂಪು 

ಬದುಕಿನ ಹಾದ್ಯಾಗ


ಬದುಕಿನ ಹಾದ್ಯಾಗ ನೋವಿನ ಅನುಭವ
ತೊರೆ ತೊರೆದು ಹರಿದಾಂಗ  ಆಗ್ಯಾವ
ಹಸಿರು ಚೆಲ್ಲಿದ ಹಾದಿ ಕಣ್ಣಿಗೆ ಬಿದ್ದಾಗ
ಮನವೆದ್ದು ಉದದಿಂದ ಕುಣಿದಾವ                                         


ಬರ ಸಿಡಿಲು ಬಡಿದಾಗ ಬಾಳೆಲ್ಲ ಬರುಡಾಗಿ
ಜೀವ ದೇವದ ಹಂಗು ಮರೆತಾವ                                          
ಕರುಣೆಯ ಜರಿಯೊಂದು ಜುಳು ಜುಳು ಜುಳು
ಹರಿದಾಂಗ ಬದುಕೆಲ್ಲ ಬನವಾಗಿ ಅರಳ್ಯಾವ                              


ಬ್ಯಾಸರಿಕೆ ಬಂದ್ದೊಮ್ಮೆ ಹುಸ್ಯೆಂದು ಕುಳಿತಾಗ                           
ಆಸೆಯ ಗೆರೆಗಳು ಬತ್ಯಾವ                                                    
ಹೋರಾಟದ ಉಸಿರೊಂದು ಚಕ್ಕನ ಚಿಮ್ಮಿದಾಗ                        
ನರನಾಡಿ ತುಂಬೆಲ್ಲ ಹರೆದಾವ                                                


ಇದು ನಮ್ಮ ಕರ್ಮವೆಂದು ಇದು ನಮ್ಮ ಪಾಪವೆಂದು
ಬಾಳೆಲ್ಲ ಇಸಗಾಯಿ ಆಗ್ಯಾವ
ಕರ್ಮವ ಕಿತ್ತೊಗೆದು ಮೌಡ್ಯವ ಹರಿದೊಗೆದು
ಮುಂದೆ ಬಂದರ ಫಲವು ಕಂಡಾವ        
                                              
                                 -  ಡಾ || ಬಸವರಾಜ ಸಬರದ

ಯಾವ ಮೋಹನ ಮುರಳಿ



ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು?
          ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು?


ಹೂವು ಹಾಸಿಗೆ, ಚಂದ್ರ, ಚಂದನ, ಬಾಹುಬಂಧನ ಚುಂಬನ;
          ಬಯಕೆತೋಟದ ಬೇಲಿಯೊಳಗೆ ಕರಣಗಣದೀ ರಿಂಗಣ;


ಒಲಿದ ಮಿದುವೆದೆ, ರಕ್ತ ಮಾಂಸದ ಬಿಸಿದುಸೋಂಕಿನ ಪಂಜರ;
          ಇಷ್ಟೇ ಸಾಕೆಂದಿದ್ದೆಯಲ್ಲೋ! ಇಂದು ಏನಿದು ಬೇಸರ?


ಏನಿದೇನಿದು ಹೊರಳುಗಣ್ಣಿನ ತೇಲುನೋಟದ ಸೂಚನೆ?
          ಯಾವ ಸುಮಧುರ ಯಾತನೆ? ಯಾವ ದಿವ್ಯ ಯಾಚನೆ?


ಮರದೊಳಡಗಿದ ಬೆಂಕಿಯಂತೆ ಎಲ್ಲೊ ಮಲಗಿದ ಬೇಸರ;
          ಏನೋ ತೀಡಲು ಏನೋ ತಾಗಲು ಹೊತ್ತಿ ಉರಿವುದು ಕಾತರ.


ಸಪ್ತಸಾಗರದಾಚೆಯೆಲ್ಲೋ ಸುಪ್ತಸಾಗರ ಕಾದಿದೆ,
          ಮೊಳೆಯದಲೆಗಳ ಮೂಕ ಮರ್ಮರ ಇಂದು ಇಲ್ಲಿಗು ಹಾಯಿತೆ?


ವಿವಶವಾಯಿತು ಪ್ರಾಣ; ಹಾ! ಪರವಶವು ನಿನ್ನೀ ಚೇತನ;
          ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ?


ಯಾವ ಮೋಹನ ಮುರಳಿ ಕರೆಯಿತು ಇದ್ದಕಿದ್ದೊಲೆ ನಿನ್ನನು?
          ಯಾವ ಬೃಂದಾವನವು ಚಾಚಿತು ತನ್ನ ಮಿಂಚಿನ ಕೈಯನು?


                                                           - ಗೋಪಾಲಕೃಷ್ಣ ಅಡಿಗ 

ಚೈತ್ರ

ಚಿತ್ರ ಕೃಪೆ: thepurebar.com
ಸುಗ್ಗಿ ಬಂದಿತು ಹಿಗ್ಗು ಹೊಮ್ಮಿತು ಮರದ ಹರೆಹರೆಯೊಳಗಡೆ
ಚಿಗುರು ಹೂವಿನ ಕಾಯಿ ಹಣ್ಣಿನ ಬಯಕೆಗಾಗಿದೆ ಬಿಡುಗಡೆ!
ಎಂಥ ಬಡಕಲು ಗಿಡವು ಕೂಡಾ ಚೆಲುವಿಗಾಗಿದೆ ನಿಲುಗಡೆ!
ನೂರು ವರ್ಣದ ನೂರು ರಾಗದ ಚಿಲುಮೆ ಚಿಮ್ಮಿದೆ ಎಲ್ಲೆಡೆ!


ಋತುವಸಂತನ ವರ್ಣಶಿಲ್ಪದ ಮೋಡಿ ಮೂಡಿದೆ ಮರದಲಿ
ಕಾಣದಿಹ ಕಾರುಣ್ಯ ಕೊನರಿದೆ ಬರಲುಕೊಮ್ಬೆಯ ಮೈಯಲಿ!
ವಿಲಯದಲ್ಲೂ ಚೆಲುವು ಚಿಮ್ಮಿದ ಹಿರಿಯ ಚೋದ್ಯದ ಹೊನಲಲಿ
ಮಿಂದ ಮನಸಿಗೆ ಕೇಳಿ ಬರುತಿದೆ ರಸದ ಗೀತೆಯ ಮೆಲ್ಲುಲಿ!


ಮುಕ್ತವಾಯಿತು ಮಾಘಮಾಸದ ಕೊರೆವ ಶೀತದ ಶಾಪವು 
ತೀವ್ರ ತಪದಲಿ ಕೊಚ್ಚಿ  ಹೋಯಿತು ಹಳೆಯ ಜಡತೆಯ ಪಾಪವು 
ಯೌವನೋದಯವಾಯಿತಿದಿಗೋ ಕಣ್ಣ ತುಂಬುವ ರೂಪವು
ನೂರು ತರುವಿನ ತಳಿರ ಕೈಯಲಿ ನೂರು ಹೂವಿನ ದೀಪವು!


ಯಾವ ಚೆಲುವಿನ ಹುಚ್ಚು ಈ ತೆರ ಮರದ ಮೈಯಲಿ ಕೆರಳಿದೆ!
ಯಾವ ಭಾವದ ಹೊನಲು ಪ್ರತಿಭೆಯನಿಂತು ದೀಪನಗೊಳಿಸಿದೆ!
ಯಾವ ಅಶ್ರುತವರ್ಣಗಾನವನಿಂತು ತರುಗಳು ಮಿಡಿದಿವೆ!
ಯಾವ ಜನ್ಮಾಂತರದ ಸಾಧನೆ ಇಂತು ಮುಕ್ತಿಯ ಪಡೆದಿದೆ!


ಹೂವಬಿಟ್ಟಿವೆ, ಹೂವತೊಟ್ಟಿವೆ, ಹೂವನುಟ್ಟಿವೆ  ಮರಗಳು!
ಚೈತ್ರಜಾತ್ರೆಗೆ ಬಂದು ನಿಂತವೊ ನೂರು ಚೆಲುವಿನ ರಥಗಳು!
ಕಾಮ-ರತಿಯರು ಬಂದು ಆಡುವ ರಾಸಲೀಳಪದಗಳು!
ಸೃಷ್ಟಿ ಬರೆಯುವ ಚೈತ್ರ ಕಾವ್ಯದ ಮಧುಪವಾಡದ ಕಥೆಗಳು!


ಮರಗಳೆನಲೇ, ನಿಂತು ನಲವಿನ ಚಿಲುಮೆ ಚಿಮ್ಮುವ ಜೀವವ?
ನಿಂದು ಸಿಂಗಾರಗೊಂಡು ಶ್ಯಾಮನ ನೆನೆವ ಗೋಪಿ ಭಾವವ!
ಯಾವ ಬೃಂದಾವನದ ಕೊಳಲಿಗೆ ಮುಗ್ದವಾಗುತ ನಿಂತವೋ
ಯಾವ ಜನ್ಮದ ಒಲವು ಎದೆಯೋಳು ತುಳುಕಿ ಮೌನದಿ ನಿಂತವೋ!
                                                           
                                                    - ಜಿ ಎಸ್ ಶಿವರುದ್ರಪ್ಪ
                                         ('ದೇವಶಿಲ್ಪ' ಕವನ ಸಂಕಲನದಿಂದ) 

ಅಳುವ ಕಡಲೊಳು

ಕಲಾವಿದ: ಎದ್ವಾರ್ಡ್ ಮೊರಾನ್
ಚಿತ್ರ ಕೃಪೆ: http://commons.wikimedia.org/
ಅಳುವ ಕಡಲೊಳು ತೇಲಿ ಬರುತಲಿದೆ ನಗೆಯ ಹಾಯಿದೋಣಿ
ಬಾಳ ಗಂಗೆಯ ಮಹಾ ಪೂರದೊಳು ಸಾವಿನೊಂದು ವೇಣಿ
ನೆರೆತಿದೆ ಬೆರೆತಿದೆ ಕುಣಿವ ಮೊರೆವ ತೆರೆ ತೆರೆಗಳೋಳಿಯಲ್ಲಿ
ಜನನ ಮರಣಗಳ ಉಬ್ಬು ತಗ್ಗು ಹೊರಳೊರಳು ಆಟವಲ್ಲಿ

ಆಶೆ ಬೂದಿ ತಳದಲ್ಲು ಕೆರಳುತಿವೆ ಕಿಡಿಗಳೆನಿತೊ ಮರಳಿ
ಮುರಿದು ಬಿದ್ದ ಮನ ಮರದ ಕೊರಡೊಳು ಹೂವು ಹೂವು ಅರಳಿ
ಕೂಡಲಾರದೆದೆಯಲ್ಲು ಕಂಡೀತು ಏಕ ಸೂತ್ರ 
ಕಂಡುದುಂಟು ಬೆಸೆದೆದೆಗಳಲ್ಲು ಬಿನ್ನತೆಯ ವಿಕಟ ಹಾಸ್ಯ.

ಎತ್ತರೆತ್ತರಕೆ ಏರುವ ಮನಕು ಕೆಸರ ಲೇಪ ಲೇಪ
ಕೊಳೆಯ ಕೊಳಚೆಯಲಿ ಮುಳುಗಿ ಕಂಡೆನೊ ಬಾನಿನೊಂದು ಪೆಂಪ
ತುಂಬು ಗದ್ದಲಿನ ಬಸಿರನಾಳುತಿದೆ ಒಂದು ಅಗ್ನಿ ಪಿಂಡ
ತಮದಗಾದ ಹೊನಲಲ್ಲು ಹೊಳೆಯುತಿದೆ ಸತ್ವದೊಂದು ಖಂಡ.

ಆಶೆ ಎಂಬ ತಳವೊಡೆದ ದೋಣಿಯಲಿ ದೂರ ತೀರ ಯಾನ
ಯಾರ ಲೀಲೆಗೊ ಯಾರೋ ಏನು ಗುರಿಯಿರದೆ ಬಿಟ್ಟ ಬಾಣ
ಇದು ಬಾಳು ನೋಡು, ಇದ ತಿಳಿದೆನೆಂದರೂ ತಿಳಿದ ಧೀರನಿಲ್ಲ
ಹಲವು ತನದ ಮೈಮರೆಸುವಾಟವಿದು ನಿಜವು ತೋರದಲ್ಲ.

ಬೆಂಗಾಡು ನೋಡು ಇದು ಕಾಂಬ ಬಯಲು ದೊರಕಿಲ್ಲ ಆದಿ ಅಂತ್ಯ
ಅದ ಕುಡಿದೆನೆಂದ ಹಲರುಂಟು ತಣಿದೆನೆಂದವರ ಕಾಣೆನಯ್ಯ
ಅರೆ ಬೆಳಕಿನಲಿ ಬಾಳಲ್ಲಿ ಸುತ್ತಿ ನಾವೇಕೋ ಮರೆತು ಮೆರೆದು
ಕೊನೆಗೆ ಕರಗುವೆವು ಮರಣ ತೀರ ಘನ ತಿಮಿರದಲ್ಲಿ ಬೆರೆತು.

                                                     - ಗೋಪಾಲಕೃಷ್ಣ ಅಡಿಗ 

ದೀಪವು ನಿನ್ನದೆ


ದೀಪವು ನಿನ್ನದೆ ಗಾಳಿಯು ನಿನ್ನದೆ
ಆರದಿರಲಿ ಬೆಳಕು
ಕಡಲೂ ನಿನ್ನದೆ ಹಡಗೂ ನಿನ್ನದೆ
ಮುಳುಗದಿರಲಿ ಬದುಕು

ಬೆಟ್ಟವು ನಿನ್ನದೆ, ಬಯಲೂ ನಿನ್ನದೆ
ಹಬ್ಬಿನಗಲಿ ಪ್ರೀತಿ
ನೆರಳೋ ಬಿಸಿಲೋ, ಎಲ್ಲವು ನಿನ್ನದೆ
ಇರಲಿ ಏಕ ರೀತಿ

ಆಗೊಂದು ಸಿಡಿಲು, ಈಗೊಂದು ಮುಗಿಲು
ನಿನಗೆ ಅಲಂಕಾರ
ಅಲ್ಲೊಂದು ಹಕ್ಕಿ, ಇಲ್ಲೊಂದು ಮುಗುಳು
ನಿನಗೆ ನಮಸ್ಕಾರ

ಅಲ್ಲಿ ರಣದುಂದುಭಿ, ಇಲ್ಲೊಂದು ವೀಣೆ,
ನಿನ್ನ ಪ್ರತಿಧ್ವನಿ
ಆ ಮಹಾಕಾವ್ಯ, ಈ ಭಾವಗೀತೆ,
ನಿನ್ನ ಪದಧ್ವನಿ

                   - ಕೆ ಎಸ್ ನರಸಿಂಹಸ್ವಾಮಿ