ಒಂದು ಮಣ್ಣಿನ ಜೀವ


ಒಂದು ಮಣ್ಣಿನ ಜೀವ ಎಂದೂ ಮಣ್ಣಿನಲ್ಲಿಯೇ ಉಳಿಯದು
ಸಣ್ಣ ಸಸಿಯೇ ಬೆಳೆದು ಬೇರಿಗೆ ಪಾರಿಜಾತವ ಸುರಿವುದು

ನೀರು ತುಂಬಿದ ಮಣ್ಣ ಪಾತಿಯೇ ಕಂದರಿಗೆ ಕದಲಾರತಿ
ನೂರು ಗುಡಿಗಳ ದೀಪ ವೃಕ್ಷವೇ ಅಮ್ಮನೆತ್ತುವ ಆರತಿ
ಹಕ್ಕಿಪಕ್ಕಿಯ ಬಣ್ಣದಕ್ಷತೆ ಹರಕೆ ಬಾಗಿದ ಮುಡಿಯಲಿ
ಹಸಿರಿನೆಲೆಗಳ ಉಸಿರಿನಾಶೀರ್ವಚನ ಅರಗಿಳಿ ನುಡಿಯಲಿ

ಯಾವುದೋ ಸೋಬಾನೆ ಬಾನೆ ತುಂಬಿ ತುಳುಕಿದ ಝೇಂಕೃತಿ
ತುಟಿಯ ಬಟ್ಟಲು ಸುರಿವ ಅಮೃತಕೆ ಎಲ್ಲಿ ಇದೆಯೋ ಇತಿಮಿತಿ?
ಅಂದು ಒಂದೇ ಬಿಂದು ಇಂದೋ ಎಂದೂ ಬತ್ತದ ನಿರ್ಝರಿ
ಮಣ್ಣ ಮಕ್ಕಳ ಕಣ್ಣನೊರೆಸುವ ಹಸಿರ ಸೆರಗೋ ಥರಾವರಿ

ಹರಕೆ ಇದ್ದರೆ ಯಾವ ಅರಕೆ ನಮ್ಮ ಅಮ್ಮನ ಮಡಿಲಲಿ
ಹಾಲುಗೆನ್ನೆಯ ನಾರಿ ನನ್ನ ಅನ್ನಪೂರ್ಣೆಯ ಗುಡಿಯಲಿ
ಹೂವು ಸಾವಿರ ಸೇರಿ ಒಂದೇ ಹಾರವಾಗುವ ಪಕ್ಷಕೆ
ಲಕ್ಷ ಮಕ್ಕಳೆ ಅಕ್ಷಮಾಲೆ ನಮ್ಮ ತಾಯಿಯ ವಕ್ಷಕೆ

                                       - ಎಚ್. ಎಸ್. ವೆಂಕಟೇಶಮೂರ್ತಿ

ತೊರೆಯ ಹಂಬಲ



ಕಾಣದ ಕಡಲಿಗೆ ಹಂಬಲಿಸಿದೆ ಮನ
ಕಾಣಬಲ್ಲೆನೇ ಒಂದು ದಿನ?
ಕಡಲನು ಕೂಡಬಲ್ಲೆನೇ ಒಂದು ದಿನ?

ಕಾಣದ ಕಡಲಿನ ಮೊರೆತದ ಜೋಗುಳ
ಒಳಗಿವಿಗಿಂದು ಕೇಳುತಿದೆ
ನನ್ನ ಕಲ್ಪನೆಯು ತನ್ನ ಕಡಲನೇ
ಚಿತ್ರಿಸಿ ಚಿಂತಿಸಿ ಸುಯ್ಯುತಿದೆ
ಎಲ್ಲಿರುವುದೊ ಅದು
ಎಂತಿರುವುದೊ ಅದು
ನೋಡಬಲ್ಲೆನೇ ಒಂದು ದಿನ
ಕಡಲನು ಕೂಡಬಲ್ಲೆನೇ ಒಂದು ದಿನ?
 
ಸಾವಿರ ಹೊಳೆಗಳು ತುಂಬಿ ಹರಿದರೂ
ಒಂದೇ ಸಮನಾಗಿಹುದಂತೆ!
ಸುನೀಲ ವಿಸ್ತರ ತರಂಗ ಶೋಭಿತ
ಗಂಭಿರಾಂಬುಧಿ ತಾನಂತೆ!
ಮುನ್ನೀರಂತೆ
ಅಪಾರವಂತೆ
ಕಡಲನು ಕಾಣಬಲ್ಲೆನೇ ಒಂದು ದಿನ?
ಅದರೊಳು ಕರಗಲಾರೆನೇ ಒಂದುದಿನ?

ಜಟಿಲ ಕಾನನದ ಕುಟಿಲ ಪಥಗಳಲಿ
ಹರಿವ ತೊರೆಯು ನಾನು!
ಎಂದಿಗಾದರು ಕಾಣದ ಕಡಲಿಗೆ
ಸೇರಬಲ್ಲೆನೇನು
ಆ ಪುಣ್ಯವೆಂದಿಗೊ
ಕಾಲವೆಂದಿಗೊ
ಕಡಲೊಲವಿನ ಆ ರತ್ನ ಗರ್ಭದಲಿ
ಸೇರಬಹುದೆ ನಾನು
ಕಡಲ ನೀಲಿಯೊಳು
ಕರಗಬಹುದೆ ನಾನು?

                          - ಜಿ. ಎಸ್. ಶಿವರುದ್ರಪ್ಪ
                ('ಚೆಲುವು - ಒಲವು' ಕವನ ಸಂಕಲನದಿಂದ)

ಸ್ತ್ರೀ


ಆಕಾಶದ ನೀಲಿಯಲ್ಲಿ
ಚಂದ್ರ ತಾರೆ ತೊಟ್ಟಿಲಲ್ಲಿ
ಬೆಳಕನಿಟ್ಟು ತೂಗಿದಾಕೆ -

ಹಸುರನುಟ್ಟ ಬೆಟ್ಟಗಳಲಿ
ಮೊಲೆ ಹಾಲಿನ ಹೊಳೆಯ ಇಳಿಸಿ
ಬಯಲ ಹಸುರ ನಗಿಸಿದಾಕೆ -

ಮರಗಿಡ ಹೂ ಮುಂಗುರುಳನು
ತಂಗಾಳಿಯ ಬೆರಳ ಸವರಿ
ಹಕ್ಕಿಗಿಲಕಿ ಹಿಡಿಸಿದಾಕೆ -

ಮನೆಮನೆಯಲಿ ದೀಪ ಮುಡಿಸಿ
ಹೊತ್ತು ಹೊತ್ತಿಗನ್ನವುಣಿಸಿ
ತಂದೆ ಮಗುವ ತಬ್ಬಿದಾಕೆ -

ನಿನಗೆ ಬೇರೆ ಹೆಸರು ಬೇಕೆ
ಸ್ತ್ರೀ ಎಂದರೆ ಅಷ್ಟೆ ಸಾಕೆ?

             - ಜಿ. ಎಸ್. ಶಿವರುದ್ರಪ್ಪ
        ('ತೆರೆದ ದಾರಿ' ಕವನ ಸಂಕಲನದಿಂದ)

ವರಕವಿಯ ಪಂಥ


ಕೋಗಿಲೆಯ ಕಂಠಕ್ಕೆ ಸ್ವರ್ಣಪದಕವ ತೊಡಿಸಿ
     ನೇಣು ಬಿಗಿಯುವುದೇಕೆ ಬಹುಮಾನವೆಂದು?
ಹಾರ ಭಾರಕೆ ಗೋಣು ಕುಸಿದು ಕುಗ್ಗಲು, ಗಾನ
     ಕೊರಗಿ ಕರ್ಕಶವಾಗಿ ನರಳುವುದು ನೊಂದು!
ಬಿರುದು ಬಾವಲಿ ಹೆಚ್ಚೆ? ಹೆಸರು ಹೊಗಳಿಕೆ ಹೆಚ್ಚೆ?
     ಪಿಕವರಗೆ ಶಿವ ಕೊಟ್ಟ ಸವಿಗೊರಲಿಗಿಂತ?
ಕೇಳಿ ಸವಿದೆಯ? ಸಾಕು, ಅದೆ ಪರಮ ಬಹುಮಾನ!
     ದಿವ್ಯ ನಿರ್ಲಕ್ಷತೆಯೆ ವರಕವಿಯ ಪಂಥ!

                                   - ಕುವೆಂಪು
  ('ಕೋಗಿಲೆ ಮತ್ತು ಸೋವಿಯತ್ ರಷ್ಯ' ಕವನ ಸಂಕಲನದಿಂದ)

ಕವಿ - ವೇದಾಂತಿ


ವೇದಾಂತಿ ಹೇಳಿದನು:
     ಹೊನ್ನೆಲ್ಲ ಮಣ್ಣು;
ಕವಿಯೊಬ್ಬ ಹಾಡಿದನು:
     ಮಣ್ಣೆಲ್ಲ ಹೊನ್ನು!

ವೇದಾಂತಿ ಹೇಳಿದನು:
     ಈ ಹೆಣ್ಣು ಮಾಯೆ;
ಕವಿಯು ಕನವರಿಸಿದನು:
     ಓ ಇವಳೇ ಚೆಲುವೆ
ಇವಳ ಜೊತೆಯಲಿ ನಾನು
     ಸ್ವರ್ಗವನೆ ಗೆಲುವೆ!
   
ವೇದಾಂತಿ ಹೇಳಿದನು:
     ಈ ಬದುಕು ಶೂನ್ಯ;
ಕವಿ ನಿಂತು ಸಾರಿದನು:
     ಇದು ಅಲ್ಲ ಅನ್ಯ,
ಜನ್ಮ ಜನ್ಮದಿ ಸವಿದೆ
     ನಾನೆಷ್ಟು ಧನ್ಯ!

                 -  ಜಿ ಎಸ್ ಶಿವರುದ್ರಪ್ಪ
         ('ಕಾರ್ತೀಕ' ಕವನ ಸಂಕಲನದಿಂದ)

ಬದುಕು ಮಾಯೆಯ ಮಾಟ


ಬದುಕು ಮಾಯೆಯ ಮಾಟ
ಮಾತು ನೆರೆ ತೊರೆಯಾಟ
ಜೀವಮೌನದ ತುಂಬ ಗುಂಭ ಮುನ್ನೀರು
ಅರುಣೊದಯದ ಕೂಡ ಕರುಣೊದಯವು
ಇರಲು ಎದೆಯ ತುಂಬುತ್ತಿದೆ ಹೊಚ್ಚಹೊನ್ನೀರು

ನಿಜದಲ್ಲೇ ಒಲವಿರಲಿ
ಚೆಲುವಿನಲೇ ನಲಿವಿರಲಿ
ಒಳಿತಿನಲೆ ಗೆಲುವಿರಲಿ ಜೀವ ಗೆಳೆಯ
ಈ ನಾನು ಆ ನೀನು
ಒಂದೆ ತಾನಿನ ತಾನು
ತಾಳ ಲಯ ರಾಗಗಳು ಸಹಜಬರಲಿ

ಆತನಾಕೆಯೆ ನಮ್ಮ
ಜೀವ ನೌಕೆಯ ತಮ್ಮ
ಧ್ರುವ ಮರೆಯದಂತೆ ನಡೆಸುತ್ತಲಿರಲಿ
ದೇವ ಜೀವನ ಕೇಂದ್ರ
ಒಬ್ಬೊಬ್ಬನೂ ಇಂದ್ರ
ಏನಿದ್ದರೂ ಎಲ್ಲ ಎಲ್ಲೆ ತಿಳಿಯಾ

                             - ದ. ರಾ. ಬೇಂದ್ರೆ
('ಗಂಗಾವತರಣ' ಕವನ ಸಂಕಲನದಿಂದ)

ಪುಷ್ಪ ಭಗವಾನ್


 

ಇದು ದರ್ಶನ:
ಇದು ಸಾಕ್ಷಾತ್ಕಾರ:
ಬರಿ ನೋಡುವುದಲ್ಲೋ!
ಈ ಅನುಭವಕ್ಕಿನ್ನಾವುದು ಬೇರೆಯ ಹೆಸರಿಲ್ಲೋ!
 

ಇದು ಬರಿ ಹೂಬಿಡುವಾ
ಸಾಮಾನ್ಯದ ಪ್ರಾಕೃತ ಸಂಗತಿಯಲ್ಲೋ!
ಭಾವಿಸಿ ಕಾಣ್:
ಈ ಹೂವಿನ ಭಾವ್ಯಕಾರ
ಸಾರುತ್ತಿದೆ ತನಷ್ಟಕೆ ತಾನ್:
"ನಾನ್ ಅವತಾರ!"
 

 ೩
ಈ ಉದ್ಯಾನದಿ
ಈ ಹೊತ್ತರೆಯಲಿ
ಈ ಹೂಬಿಸಿಲಲಿ
ಧ್ಯಾನದಿ ನಿಂತವಲೋಕಿಸಿದರೆ ಪ್ರತ್ಯಕ್ಷಂ
ಇದು ಮಹದವತಾರ!
ಇದನೀಕ್ಷಿಸುವುದೆ ಸಾಕ್ಷಾತ್ಕಾರ!
ಹೇ ಭಗವತ್ ಪುಷ್ಪಾಕಾರ,
ನಿನಗಿದೋ ನಮಸ್ಕಾರ!
ಸಾಷ್ಟಾಂಗ ನಮಸ್ಕಾರ!

                                   - ಕುವೆಂಪು
                     ('ಅನಿಕೇತನ' ಕವನ ಸಂಕಲನದಿಂದ )

ಯುಗ ಯುಗಾದಿ ಕಳೆದರೂ

 
ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ.
ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ.

ಹೊಂಗೆ ಹೂವ ತೊಂಗಳಲಿ, ಭೃಂಗದ ಸಂಗೀತ ಕೇಳಿ
                                 ಮತ್ತೆ ಕೇಳ ಬರುತಿದೆ.
ಬೇವಿನ ಕಹಿ ಬಾಳಿನಲಿ ಹೂವಿನ ನಸುಗಂಪು ಸೂಸಿ
                                 ಜೀವಕಳೆಯ ತರುತಿದೆ.

ವರುಷಕೊಂದು ಹೊಸತು ಜನ್ಮ, ಹರುಷಕೊಂದು ಹೊಸತು ನೆಲೆಯು
                                   ಅಖಿಲ ಜೀವಜಾತಕೆ.
ಒಂದೇ ಒಂದು ಜನ್ಮದಲಿ ಒಂದೇ ಬಾಲ್ಯ, ಒಂದೇ ಹರೆಯ
                                   ನಮಗದಷ್ಟೇ ಏತಕೋ.

ನಿದ್ದೆಗೊಮ್ಮೆ ನಿತ್ಯ ಮರಣ, ಎದ್ದ ಸಲ ನವೀನ ಜನನ,
                                    ನಮಗೆ ಏಕೆ ಬಾರದು?
ಎಲೆ ಸನತ್ಕುಮಾರ ದೇವ, ಎಲೆ ಸಾಹಸಿ ಚಿರಂಜೀವ,
                                   ನಿನಗೆ ಲೀಲೆ ಸೇರದೂ.
 
ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ.
ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ.

                                                  - ದ ರಾ ಬೇಂದ್ರೆ

ಮೌನ


ಮೌನ ತಬ್ಬಿತು ನೆಲವ; ಜುಮ್ಮೆನೆ ಪುಳಕಗೊಂಡಿತು ಧಾರಿಣಿ
ನೋಡಿ ನಾಚಿತು ಬಾನು; ಸೇರಿತು ಕೆಂಪು ಸಂಜೆಯ ಕದಪಲಿ
ಹಕ್ಕಿಗೊರಲಿನ ಸುರತಗಾನಕೆ ಬಿಗಿಯು ನಸುವೆ ಸಡಿಲಿತು
ಬೆಚ್ಚಬೆಚ್ಚನೆ ಉಸಿರಿನಂದದಿ ಗಾಳಿ ಮೆಲ್ಲನೆ ತೆವಳಿತು

ಇರುಳ ಸೆರಗಿನ ನೆಳಲು ಚಾಚಿತು, ಬಾನು ತೆರೆಯಿತು ಕಣ್ಣನು;
ನೆಲವು ತಣಿಯಿತು, ಬೆವರು ಹನಿಯಿತು; ಭಾಷ್ಪ ನೆನೆಸಿತು ಹುಲ್ಲನು

ಮೌನ ಉರುಳಿತು, ಹೊರಳಿತೆದ್ದಿತು; ಗಾಳಿ ಭೋರನೆ ಬೀಸಿತು,
ತೆಂಗುಗರಿಗಳ ಚಾಮರಕೆ ಹಾಯೆಂದು ಮೌನವು ಮಲಗಿತು


                                                           -ಗೋಪಾಲಕೃಷ್ಣ ಅಡಿಗ

ಮುಕ್ತ ಮುಕ್ತ


ಮಣ್ಣ  ತಿಂದು ಸಿಹಿ  ಹಣ್ಣ  ಕೊಡುವ  ಮರ  ನೀಡಿ  ನೀಡಿ  ಮುಕ್ತ
ಬೇವ  ಅಗಿವ ಸವಿಗಾನದ  ಹಕ್ಕಿ  ಹಾಡಿ ಮುಕ್ತ  ಮುಕ್ತ .

ಹಸಿರ  ತೋಳಿನಲಿ  ಬೆಂಕಿಯ  ಕೂಸ  ಪೊರೆವುದು ತಾಯಿಯ  ಹೃದಯ
ಮರೆಯುವುದುಂಟೆ ಮರೆಯಲಿನಿಂತೆ  ಕಾಯುವ  ಕರುಣಾಮಯಿಯ.

ತನ್ನಾವರಣವೇ ಸೆರೆಮನೆಯಾದರೆ ಜೀವಕೆ  ಎಲ್ಲಿಯ  ಮುಕ್ತಿ
ಬೆಳಕಿನ  ಬಟ್ಟೆಯ  ಬಿಚ್ಚುವ  ಜ್ಯೋತಿಗೆ  ಬಯಲೇ  ಜೀವನ್ಮುಕ್ತಿ

ಇರುಳ ವಿರುದ್ಧ  ಬೆಳಕಿನ  ಯುದ್ಧ  ಕೊನೆಯಿಲ್ಲದ  ಕಾದಾಟ
ತಡೆಯೇ ಇಲ್ಲದೆ ನಡೆಯಲೇ  ಬೇಕು  ಸೋಲಿಲ್ಲದ  ಹೋರಾಟ.

                                                      - ಎಚ್. ಎಸ್. ವೆಂಕಟೇಶ ಮೂರ್ತಿ.

ಮುಕ್ತ


ಕಾರಮೋಡ ಮಳೆಯಾಗಿ ಸುರಿದಾಗ, ಕಣ್ಣ ಹನಿಗೆ ಮುಕ್ತಿ.
ಮರದ ಹಕ್ಕಿ ಮರಿ ರೆಕ್ಕೆ ಬೀಸಿದರೆ, ಅದರ ಗರಿಗೆ ಮುಕ್ತಿ.

ಎದೆಯ ನೋವು ಹಾಡಾಗಿ ಹೊಮ್ಮಿದರೆ, ಭಾವಕ್ಕೆ ಬಂಧ ಮುಕ್ತಿ
ಎಂದು ಆದೆವು ನಾವು ಮುಕ್ತ ಮುಕ್ತ ಮುಕ್ತ.

ಏರು ನದಿಗೆ ಇದಿರಾಗಿ ಈಜಿ ದಡ
ಸೇರಬಹುದೆ ಜೀವ, ದಾಟಿ ಈ ಪ್ರವಾಹ?
ತಾನು ಬೆಂದು ತಿಳಿ ಬೆಳಕ ಬೀರುತಿದೆ
ಒಂದು ಇರುಳ ದೀಪ, ನಿಶ್ಚಯದ ಮೂರ್ತ ರೂಪ.

ಮೊಗ್ಗಿನಿಂದ ಸೆರೆ ಒಡೆದ ಗಂಧ
ಹೂವಿಂದ ದೂರ ದೂರ, ಎಲ್ಲುಂಟು ಆಚೆ ತೀರ

ಕಾರಮೋಡ ಮಳೆಯಾಗಿ ಸುರಿದಾಗ, ಕಣ್ಣ ಹನಿಗೆ ಮುಕ್ತಿ
ಮರದ ಹಕ್ಕಿ ಮರಿ ರೆಕ್ಕೆ ಬೀಸಿದರೆ, ಅದರ ಗರಿಗೆ ಮುಕ್ತಿ.

                                            
                                                      -  ಎಚ್. ಎಸ್. ವೆಂಕಟೇಶ ಮೂರ್ತಿ.

ಮಾನವ ಜೀವದ ನಾಲ್ಕು ಹಂತಗಳು



ದೇಹದ ಜೊತೆ ಸೆಣಸಾಡಿದ;
ಗೆದ್ದು ದೇಹವೆ, ನೆಟ್ಟ ನಡೆದಿದೆ.

ನಂತರ ಹೃದಯದ ಜೊತೆ ಹೋರಾಡಿದ;
ಶಾಂತಿ ಮುಗ್ಧತೆಗಳ ಕಳೆದ.

ತದ ನಂತರ ಬುದ್ಧಿಯ ಜೊತೆ ಗುದ್ದಾಡಿದ;
ಹಿಮ್ಮೆಟ್ಟಿತು ಹೆಮ್ಮೆಯ ಹೃದಯ.

ಈಗವನ ಸಮರ ದೇವರ ಜೊತೆ;
ಸರಿರಾತ್ರೆ ಗೆಲ್ಲುವುದು ದೇವರೇ.

             - ಯು ಆರ್ ಅನಂತಮೂರ್ತಿ
    ('ವಿಲಿಯಂ ಬಟ್ಲರ್ ಯೇಟ್ಸ'ನ 'ದಿ ಫೋರ್ ಯೆಜಸ್ ಆಫ್ ಮ್ಯಾನ್' ಕವಿತೆಯ ಅನುವಾದ)


ಮೂಲ ಕವಿತೆ:

He with body waged a fight,
But body won; It walks upright.

Then he struggled with he heart;
Innocence and peace depart.

Then he struggled with the mind;
His proud heart he left behind.

Now his wars on God begin;
At stroke of midnight God shall win.

             - W B Yeats

ಮುಂದಕೆಲ್ಲಿಗೆ ?


ಮೊದಲನರಿಯದಾದಿಯಿಂದ
ಆದಿ ತಿಮಿರದುದರದಿಂದ
       ಮೂಡಿ ಬಂದೆನು;
ಯಾರ ಬಯಕೆ ಎಂಬುದರಿಯೆ;
ಏಕೆ ಎಲ್ಲಿಗೆಂಬುದರಿಯೆ;
      ಮುಂದೆ ಹರಿಯುವೆ !

ಮಲಗಿ ಕಲ್ಲು ಮಣ್ಣುಗಳಲಿ,
ಜಡ ಸುಷುಪ್ತಿಯಲ್ಲಿ ಬಳಲಿ
       ಯುಗಗಳಾದುವು!
ಸಸ್ಯಗಳಲಿ ಕನಸ ಕಂಡು,
ಹುಟ್ಟು ಬಾಳು ಸಾವನುಂಡು
      ಕಲ್ಪ ಹೋದವು !

ಮರಳಿ ಮೈಯ ತಿಳಿದು ತಿರುಗಿ
ಮಿಗಗಳಂತೆ ಮೂಡಿ ಮರುಗಿ
      ಬಹಳ ಬಳಲಿದೆ.
ಇಂದು ಮನುಜ ಜನ್ಮದಲ್ಲಿ
ಬಂದು ಹಾಡುತಿರುವೆನಿಲ್ಲಿ!
      ಮುಂದಕೆಲ್ಲಿಗೆ ?  

                                      - ಕುವೆಂಪು 
            ('ಕೊಳಲು' ಕವನ ಸಂಕಲನದಿಂದ) 

ಸಮಾಜ ಭೈರವ


ನನ್ನ ಮನವ ನನಗೆ ಕೊಡು
     ಓ ಸಮಾಜ ಭೈರವ;
ನನ್ನ ನಗೆಯ ನನ್ನ ಬಗೆಯ
     ನನ್ನ ಜಗವ ನನಗೆ ಬಿಡು,
     ನನ್ನ ಮನವ ನನಗೆ ಕೊಡು.

ತೊಡಿಸ ಬರಲು ಬೇಡ ನಿನ್ನ ಹೊನ್ನ ಸಂಕೋಲೆಯ,
     ಬಳಿಕ ಮುಗುಳ ಮಾಲೆಯ;
ಉಡಿಸ ಬರಲು ಬೇಡ ನನ್ನ ಮನಕೆ ನಿನ್ನ ಚೇಲವ,
     ನಿನ್ನ ದಯೆಯ ಸಾಲವ;
ಬಿಟ್ಟು ಬಿಡೋ ಎಲೆಲೆ, ನನ್ನ ಮನವ ತನ್ನ ಪಾಡಿಗೆ,
     ತನ್ನ ಹಲವು ಹಾಡಿಗೆ.


ನೀನು ಸಮೆದ ಈ ಪಂಜರ ಅತಿ ಸುಂದರವಹ! ಮೆಚ್ಚಿಗೆ
     ನನ್ನದದಕೆ, ತಕ್ಕುದಯ್ಯ ಅದೇ ನಿನ್ನ ಹುಚ್ಚಿಗೆ,
     ಬಿಟ್ಟುಬಿಡು ನನ್ನ ಮಾತ್ರ ನನ್ನ ಎದೆಯ ನೆಚ್ಚಿಗೆ;
ನನ್ನನಲ್ಲಿ ಸೆರೆದೊಡಲು ಮಾಡಬೇಡ ಸಂಚನು,
      ಹಾಕಬೇಡ ಹೊಂಚನು.

ನನ್ನ ಮನವು ಹಾಯಬೇಕು ದಿಗ್ದಿಗಂತದಾಚೆಗೂ,
ಏರಬೇಕು ಮುಗಿಲಿನಾಚೆ ತಾರೆಯಾಚೆಯಾಚೆಗೂ,
ಇಳಿಯಬೇಕು ಪಾತಾಳದ ಗಹನ ತಿಮಿರದಾಳಕು,
     ಇನ್ನು ಇನ್ನು ಆಗಲಕೂ, ಮೇಲಕೂ, ಆಳಕೂ!


ನುಚ್ಚು ನೂರು ನಾನು ನಿನ್ನ ಒಂದೇ ಪದಘಾತಕೆ,
ನಿನ್ನ ನಿಃಶ್ವಾಸದೊಂದು ವೀಚಿಘಾತಮಾತ್ರಕೆ;
ತಳುವು ಕೊಂಚ; ನೀರ ಗುಳ್ಳೆ ಕುಣಿದು ಕುಣಿದು ಒಡೆಯಲಿ;
ಒಡೆವ ಮೊದಲು ಅದರ ಬಣ್ಣದಾಟವನಿತು ತೀರಲಿ.
ತಳುವು ಕೊಂಚ, ಓ ಭೈರವ, ಏತಕಿನಿತು ಅವಸರ?
ಬಂದ ಯಾತ್ರಿ ನಿಲ್ಲಲಾರ - ಅವನೂ ಗಮನಕಾತರ!

ಅಣುವಿನಲ್ಲು ಆ ಮಹತ್ತು ಬಿತ್ತದಂತೆ ಮಲಗಿದೆ;
ಅದುಮ ಬೇಡ ಅದನು; ಗಾಳಿ, ಬೆಳಕು ಮಳೆಗೆ, ಬಿಸಿಲಿಗೆ
ತೆರವಾಗಲಿ ಅದು ಯಥೇಚ್ಛ; ಮೊಳೆವ ಕಾಲ ಬಂದರೆ
ಮೊಳೆಯಲೇಳು ಅದು ಅಬಾಧ, ನಿನಗೇನಿದೆ ತೊಂದರೆ?

ಆ ಹೆಸರೂ ಸೇರದೇನು ನಿನ್ನ ಯಶೋಮಾಲೆಗೆ?
     ಹುಲ್ಲಿಗಿಲ್ಲ, ಕಳ್ಳಿಗಿಲ್ಲ.
     ಹೂವಿಗೇಕೆ ಸೌಸವ?
     ಎಂದು ಹಿಸುಕಬೇಡವದನು.
     ಅದನು ಅದರ ಲಸನಕೆ,
           ತನ್ನತನದ ತನನಕೆ
     ಬಿಟ್ಟು ಬಿಡು, ಬಿಟ್ಟು ಬಿಡು,
            ಓ ಸಮಾಜ ಭೈರವ!

                               - ಗೋಪಾಲಕೃಷ್ಣ ಅಡಿಗ

ಮಳೆಬಿಲ್ಲು


ನೋಡಲ್ಲಿ ಮೂಡಿಹುದು ಮುಗಿಲಿನಲ್ಲಿ ಮಳೆಬಿಲ್ಲು,
        ಬಾನ್ದೇವಿಯಾಂತ ಮಣಿಹಾರದಂತೆ!
ಮೂಕವಿಸ್ಮಿತನಾಗಿ ನಿಲ್ಲು, ಗೆಳೆಯನೆ, ನಿಲ್ಲು,
        ಗುಡಿಯೆದುರು ಕೈಮುಗಿದು ಭಕ್ತನಂತೆ!

ಚೆಲುವಿಕೆಯ ಚೈತನ್ಯ ಬಿಲ್ಲಾದುದೆಂಬಂತೆ,
        ಮಾಯೆ ಬರೆದಿಹ ಮಧುರ ಚಿತ್ರದಂತೆ,
ಆದಿಕವಿ ಹಾಡುತಿಹ ನಲ್ಗಬ್ಬವೆಂಬಂತೆ,
        ವೈಣಿಕನು ಮೀಟುತಿಹ ಬೀಣೆಯಂತೆ!

ಮಳೆಬಿಲ್ಲಿನಂತೆಮ್ಮ ಬಾಳು ಚಣವಾದರೇನು?
ಮಳೆಬಿಲ್ಲಿನಂತೆಯದು ಮಧುರತಮವಲ್ಲವೇನು?
ಮಹಿಮೆಯಾ ಜೀವಿತವದೊಂದು ದಿನವಾದರೇನು?
ಹೀನವಾಗಿಹ ಬಾಳು ಯುಗ ಯುಗಗಳಿದ್ದರೇನು?

                                       - ಕುವೆಂಪು

ತನುವು ನಿನ್ನದು ಮನವು ನಿನ್ನದು


ತನುವು ನಿನ್ನದು ಮನವು ನಿನ್ನದು
ನನ್ನ ಜೀವನ ಧನವು ನಿನ್ನದು.
ನಾನು ನಿನ್ನವನೆಂಬ ಹೆಮ್ಮೆಯ
ತೃಣವು ಮಾತ್ರವೆ ನನ್ನದು.

ನೀನು ಹೊಳೆದರೆ ನಾನು ಹೊಳೆವೆನು
ನೀನು ಬೆಳೆದರೆ ನಾನು ಬೆಳೆವೆನು.
ನನ್ನ ಹರಣದ ಹರಣ ನೀನು
ನನ್ನ ಮರಣದ ಮರಣವು.


ನನ್ನ ಮನದಲಿ ನೀನೆ ಯುಕ್ತಿ
ನನ್ನ ಹೃದಯದಿ ನೀನೆ ಭಕ್ತಿ.
ನೀನೆ ಮಾಯಾ ಮೋಹ ಶಕ್ತಿಯು
ನನ್ನ ಜೀವನ ಮುಕ್ತಿಯು.

                      - ಕುವೆಂಪು

ತೃಪ್ತಿ



ಎದೆತುಂಬಿ ಹಾಡಿದೆನು ಅಂದು ನಾನು,
ಮನವಿಟ್ಟು ಕೇಳಿದಿರಿ ಅಲ್ಲಿ ನೀವು
ಇಂದು ನಾ ಹಾಡಿದರು ಅಂದಿನಂತೆಯೆ ಕುಳಿತು
ಕೇಳುವಿರಿ ಸಾಕೆನಗೆ ಅದುವೆ ಬಹುಮಾನ.
ಹಾಡು ಹಕ್ಕಿಗೆ ಬೇಕೇ ಬಿರುದು ಸನ್ಮಾನ?

     ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ
     ಹಾಡುವುದು ಅನಿವಾರ್ಯ ಕರ್ಮ ನನಗೆ,
     ಕೇಳುವವರಿಹರೆಂದು ನಾ ಬಲ್ಲೆನದರಿಂದ
     ಹಾಡುವೆನು ಮೈದುಂಬಿ ಎಂದಿನಂತೆ
     ಯಾರು ಕಿವಿ ಮುಚ್ಚಿದರು ನನಗಿಲ್ಲ ಚಿಂತೆ.

                        - ಜಿ.ಎಸ್. ಶಿವರುದ್ರಪ್ಪ
            ('ಸಾಮಗಾನ' ಕವನ ಸಂಕಲನದಿಂದ)

ದ್ವಂದ್ವಯುದ್ಧ


ದ್ವಂದ್ವಯುದ್ಧದ ಜಗವಿದು, - ಇಬ್ಬರು ಜಟ್ಟಿಗಳು ಕೂಡಿ
ಒಬ್ಬರೊಬ್ಬರ ಸಾವಿಗಾಗಿ ಸಮರದಲಿ ಹೋರಾಡುತಿಹರು.
ಗೆದ್ದವನೇ ಎದ್ದ. ಬಿದ್ದವನೇ ಬಿದ್ದ.
ಗೆದ್ದವನ ಕುಲಕೋಟಿಯೆಲ್ಲ ಉದ್ಧಾರವಾಯ್ತು. 
ಬಿದ್ದವನಿಗೆ ಇದ್ದುಬಿದ್ದವರು, - ಗತಿಗೆಟ್ಟರು ಇದ್ದುಬಿದ್ದಲ್ಲಿ.
ಇಬ್ಬರ ಸೋಲು-ಗೆಲವು ತೂಗುವವು ಮೂಲೋಕದ ದೈವವನ್ನು.

ಜಟ್ಟಿಗಳು ಮಾನವರಲ್ಲ, - ಪ್ರಮೇಯಗಳೆರಡು. ಎರಡು ತತ್ವಗಳು!
ಹದ್ದನ್ನು ಹದ್ದು ಕಾಡಿದಂತೆ ಬೆನ್ನತ್ತುವವು ವಾಯುಲೋಕದಲ್ಲಿ.
ಹೋರಾಡುವವು ವಾರಿಧಿಯಲ್ಲಿ, - ತಿಮಿಂಗಿಲವು ತಿಮಿಂಗಿಲದೊಡನೆಯಂತೆ.
ಈ ಕಲ್ಪನೆಗಳ ಕಾದಾಟಕ್ಕೆ ಕಂಪಿಸಿತ್ತು ಜಗವೆಲ್ಲ;
ರಕ್ತದ ಕಾಲುವೆ ಹರಿಯಿತು; ಕೋಟಿ ನಾರಿಯರ ಕುಂಕುಮವಳಿಸಿತು;
ಆದರೆ ಮುಗಿದಿಲ್ಲ ತತ್ವಗಳ ತುಮುಲ ಯುದ್ಧ!

ಕಲ್ಪನೆಗಳಾವುವು ಗೊತ್ತೇ?
ಇದ್ದುದ್ದೇ ಇರಬೇಕೆಂಬ ಗೊಂದಲ, ಹೊಸತೊಂದು ಬರಬೇಕೆಂಬ ಹಂಬಲ;
ಶ್ರೀಮಂತರದಿರಬೇಕೆಂಬ ಕಸಿವು, ಶ್ರೀಮಂತರು ಸಾಯಬೇಕೆಂಬ ಹಸಿವು.
ಸಾಮ್ರಾಜ್ಯದ ಮಬ್ಬು, ಸ್ವಾತಂತ್ರ್ಯದ ಉಬ್ಬು;
ಬಿಳಿದೊಗಲಿನ ಕುಣಿತಕ್ಕೆ ಕರಿದೊಗಲು ಮಣಿದಿರಬೇಕೆಂಬಾಸೆ,   
ಕರಿಬಿಳಿದರ ಭೇದವನಳಿಸಿಬಿಡಬೇಕೆಂಬ ಭಾಷೆ;
ಉಳಿದವರ ಸುಖವೆಲ್ಲಾ ನನ್ನ ಸುಖಕ್ಕೆ ಬರಿ ಸವುದೆಯೆಂಬ ಭಾವ,
ವಿಶ್ವದ ಸುಖವೇ ವ್ಯಕ್ತಿಯ ಸುಖವೆನಿಸಬೇಕೆಂಬ ಹೇವ;
ಬಡವರ ಬಾಳ್ವೆಯನ್ನು ಹಿಂದಿ ಹಿಪ್ಪೆಯಾಗಿಸುವ ನೇತಿ,
ಹಣವಿದ್ದವರ ಹೆಣ ಕೆಡವಬೇಕೆಂಬ  ರೀತಿ -
ಉಯ್ಯಲೆಯಾಡುವುದು ಜಗತ್ತು, ಶಕ್ತಿಗಳೆರಡು ಜೀಕುವಲ್ಲಿ;
ಸ್ನೇಹತಂತುಗಳು ಹರಿದವು, ಮಣಿಯು ಕಳಚಿ ಬಿತ್ತು;
ಉರುಳಿ ಬೀಳುವದೆ ಮರವು? ಹೊರಳಿ ಹೊಗುವುದೆ ಜಗತ್ತು?

                                  - ವಿ ಕೃ ಗೋಕಾಕ್
                       ('ಬ್ರಿಟನ್ನಿನ ದ್ವೀಪದಲಿ' ಕವನ ಸಂಕಲನದಿಂದ)

ಜೋಗದ ಝೊಕ್

 
ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ
ಸಾಯೋ ತನಕ ಸಂಸಾರದೊಳಗೆ ಗಂಡಾಗುಂಡಿ
ಹೇರಿಕೊಂಡು ಹೋಗೋದಿಲ್ಲ ಸತ್ತಾಗ್ ಬಂಡಿ
ಇರೋದರೊಳಗೆ ನೋಡು ಒಮ್ಮೆ ಜೋಗದ ಗುಂಡಿ.

ತಾಳಗುಪ್ಪಿ ತಾರಕವೆಂಬ ಬೊಂಬಾಯ್ ಮಠ
ಸಾಲಗುಡ್ಡದ ಮ್ಯಾಲೆ ನೋಟಕ ಭಟ್ಕಳ್ ಮಠ
ದಾರಿ ಕಡಿದು ಮಾಡಿದರೆ ಗುಡ್ಡ ಬೆಟ್ಟ
ಪಶ್ಚಿಮ ಘಟ್ಟದ ಮ್ಯಾಲೆ ನೋಡು ಮೈಸೂರ್ ಬಾವುಟ.

ನಾಡಿನೊಳಗೆ ನಾಡು ಚೆಲುವ ಕನ್ನಡ ನಾಡು
ಬೆಳ್ಳಿ ಬಂಗಾರ ಬೆಳಿಯುತಾವೆ ಬೆಟ್ಟ ಕಾಡು
ಭೂಮಿತಾಯಿ ಮುಡಿದು ನಿಂತಾಳ್ ಬಾಸಿಂಗ್ ಜೋಡು
ಬಾಣಾವತಿ ಬೆಡಗಿನಿಂದ ಬರ್ತಾಳೆ ನೋಡು.

ಅಂಕು ಡೊಂಕು ವಂಕಿ ಮುರಿ ರಸ್ತೆದಾರಿ
ಹತ್ತಿ ಇಳಿದು ಸುತ್ತಿದಂಗೆ ಹಾವಿನ ಮರಿ
ತೊಟ್ಟಿಲ ಜೀಕಿ ಆಡಿದ್ಹಾಂಗೆ ಮನಸಿನ ಲಹರಿ
ನಡೆಯುತದೆ ಮೈಸೂರೊಳಗೆ ದರಂದುರಿ.

ಹೆಸರು ಮರ್ತಿ ಶರಾವತಿ ಅದೇನ್ ಕಷ್ಟ
ಕಡೆದ ಕಲ್ಲ ಕಂಬದ ಮ್ಯಾಲೆ ಪೂಲಿನಕಟ್ಟ
ಎಷ್ಟು ಮಂದಿ ಎದೆಯ ಮುರಿದು ಪಡುತಾರ್ ಕಷ್ಟ
ಸಣ್ಣದರಿಂದ ದೊಡ್ಡದಾಗಿ ಕಾಣೋದ್ ಬೆಟ್ಟ.

ಬುತ್ತಿ ಉಣುತಿದ್ರುಣ್ಣು ಇಲ್ಲಿ ಸೊಂಪಾಗಿದೆ
ಸೊಂಪು ಇದಪು ಸೇರಿ ಮನಸು ಕಂಪಾಗ್ತದೆ
ಕಂಪಿನಿಂದ ಜೀವಕ್ಕೊಂದು ತಂಪಾಗ್ತದೆ
ತಂಪಿನೊಳಗೆ ಮತ್ತೊಂದೇನೋ ಕಾಣಸ್ತದೆ.

ಅಡ್ಡ ಬದಿ ಒಡ್ಡು ನಲಿಸಿ ನೀರಿನ ಮಿತಿ
ಇದರ ಒಳಗೆ ಇನ್ನು ಒಂದು ಹುನ್ನಾರೈತಿ
ನೀರ ಕೆಡವಿ ರಾಟೆ ತಿರುವಿ ಮಿಂಚಿನ ಶಕ್ತಿ
ನಾಡಿಗೆಲ್ಲ ಕೊಡ್ತಾರಂತೆ ದೀಪದ ತಂತಿ.

ಊಟ ಮುಗಿದಿದ್ರೇಳು ಮುಂದೆ ನೋಡೋದದೆ
ನೋಡುತ್ತಿದ್ರೆ ಬುದ್ಧಿ ಕೆಟ್ಟು ಹುಚ್ಚಾಗ್ತದೆ
ಬೇಕಾದ್ರಲ್ಲಿ ಉಡುಪಿ ಮಾವನ ಮನೆಯೊಂದಿದೆ
ಉಳಿಯೋದಾದ್ರೆ ಮಹರಾಜ್ರ ಬಂಗ್ಲೆ ಅದೆ.

ನೋಡು ಗೆಳೆಯ ಜೋಕೆ ಮಾತ್ರ ಪಾತಾಳ ಗುಂಡಿ
ಹಿಂದಕೆ ಸರಿದು ನಿಲ್ಲು ತುಸು ಕೈತಪ್ಪಿಕೊಂಡಿ
ಕೈಗಳಳ್ತಿ ಕಾಣಸ್ತದೆ ಬೊಂಬಾಯ್ ದಂಡೀ
ನಮ್ಮದಂದ್ರೆ ಹೆಮ್ಮೆಯಲ್ಲ ಜೋಗದ ಗುಂಡೀ.

ಶಿಸ್ತುಗಾರ ಶಿವಪ್ಪನಾಯ್ಕ ಕೆಳದಿಯ ನಗರ
ಚಿಕ್ಕದೇವ ದೊಡ್ಡದೇವ ಮೈಸೂರಿನವರ
ಹಿಂದಕ್ಕಿಲ್ಲಿ ಬಂದಿದ್ರಂತೆ ಶ್ರೀರಾಮರ
ಎಲ್ಲ ಕಥೆ ಹೇಳುತದೆ ಕಲ್ಪಾಂತರ.

ರಾಜ ರಾಕೆಟ್ ರೋರರ್ ಲೇಡಿ ಚತುರ್ಮುಖ
ಜೋಡಿಗೂಡಿ ಹಾಡಿತಾವೆ ಹಿಂದಿನ ಸುಖ
ತಾನು ಬಿದ್ರೆ ಆದೀತೆಳು ತಾಯಿಗೆ ಬೆಳಕ
ಮುಂದಿನವರು ಕಂಡರೆ ಸಾಕು ಸ್ವಂತ ಸುಖ.

ಒಂದು ಎರಡು ಮೂರು ನಾಲ್ಕು ಆದಾವ್ ಮತ
ಹಿಂದಿನಿಂದ ಹರಿದು ಬಂದದ್ದೊಂದೇ ಮತ
ಗುಂಡಿ ಬಿದ್ದು ಹಾಳಾಗಲಿಕ್ಕೆ ಸಾವಿರ ಮತ
ಮುಂದೆ ಹೋಗಿ ಸೇರುವಲ್ಲಿಗೊಂದೇ ಮತ.

ಷಹಜಹಾನ ತಾಜಮಹಲು ಕೊಹಿನೂರ್ ಮಣಿ
ಸಾವಿರಿದ್ರು ಸಲ್ಲವಿದಕೆ ಚೆಲುವಿನ ಕಣಿ
ಜೀವವಂತ ಶರಾವತಿಗಿನ್ನಾವ್ದೆಣಿ
ಹೊಟ್ಟೆಕಿಚ್ಚಿಗಾಡಿಕೊಂಡ್ರೆ ಅದಕಾರ್ ಹೊಣೆ.

ಶರಾವತೀ ಕನ್ನಡ ನಾಡ ಭಾಗೀರಥಿ
ಪುಣ್ಯವಂತ್ರು ಬರ್ತಾರಿಲ್ಲಿ ದಿನಂಪ್ರತೀ
ಸಾವು ನೋವು ಸುಳಿಯದಿಲ್ಲಿಯ ಕರಾಮತಿ
ಮಲ್ಲೇಶನ ನೆನೆಯುತಿದ್ರೆ ಜೀವನ್ಮುಕ್ತಿ.

                            - ಮೂಗೂರು ಮಲ್ಲಪ್ಪ

ಕಟ್ಟುವೆವು ನಾವು



ಕಟ್ಟುವೆವು ನಾವು ಹೊಸ ನಾಡೊಂದನು,
                - ರಸದ ಬೀಡೊಂದನು.
ಹೊಸ ನೆತ್ತರುಕ್ಕುಕ್ಕಿ ಆರಿಹೋಗುವ ಮುನ್ನ,
ಹರೆಯದೀ ಮಾಂತ್ರಿಕನ ಮಾಟ ಮಸುಳುವ ಮುನ್ನ,
ಉತ್ಸಾಹ ಸಾಹಸದ ಉತ್ತುಂಗ ವೀಚಿಗಳ
ಈ ಕ್ಷುಬ್ಧ ಸಾಗರವು ಬತ್ತಿಹೋಗುವ ಮುನ್ನ
ಕಟ್ಟುವೆವು ನಾವು ಹೊಸ ನಾಡೊಂದನು!

      ನಮ್ಮೆದೆಯ ಕನಸುಗಳ ಕಾಮಧೇನು
      ಆದಾವು, ಕರೆದಾವು ವಾಂಛಿತವನು;
      ಕರೆವ ಕೈಗಿಹುದಿದೋ ಕಣಸುಗಳ ಹರಕೆ;
      ಗುರಿ ತಪ್ಪದೊಮ್ಮುಖದ ಬಯಕೆ ಬೆಮ್ಬಳಕೆ!

ಜಾತಿಮತ ಭೇದಗಳ ಕಂದಕವು ಸುತ್ತಲೂ,
ದುರ್ಭೇದ್ಯವೆನೆ ಕೋಟೆ ಕೊತ್ತಲಗಳು;
ರೂಢಿ ರಾಕ್ಷಸನರಸುಗೈಯುವನು, ತೊಳ್ತಟ್ಟಿ
ತೊಡೆತಟ್ಟಿ ಕರೆಯುವನು ಸಂಗ್ರಾಮಕೆ!

     ನಾವು ಹಿಂದೆಗೆವೆವೇ? ವೀರ ತರುಣರು ನಾವು!
     ಒಂದೆ ನೆಗೆತಕೆ ನೆಗೆವೆವೋ ಕಂದಕವನು,
     ಕುಟ್ಟಿ ಪುಡಿಮಾಡುವೆವು ಕೋಟೆಗಳನು,
     ಎದೆಯ ಮೆಟ್ಟಿ ಮುರಿಯುವೆವಸುರರಟ್ಟೆಗಳನು!

ಕೋಟೆಗೋಡೆಗೆ ನಮ್ಮ ಹೆನಗಲೇ ಮೆಟ್ಟಿಲು,
ನಮ್ಮ ಸಾವೇ ನೋವೆ ಹೊಸ ನಾಡ ತೊಟ್ಟಿಲು
ಆದಾವು; ಅನ್ಜುವೆದೆ ನಮ್ಮದಲ್ಲ;
ಸೋಲುಬಗೆ ವೀರನಿಗೆ ಸಲ್ಲ, ಹೊಲ್ಲ!

      ಎಡರುಗಳ ಕಡಲುಗಳನೀಸಿ ಬರುವೆವು, ಘೋರ
      ನೈರಾಶ್ಯದಗ್ನಿ ಮುಖದಲ್ಲುಕೂಡ
      ಹೊಕ್ಕು ಹೊರಡುವೆವೆಲ್ಲ ತೊಡಕುಗಳ ಒಡಕುಗಳ
      ಬಿಡಿಸಿ, ಇದಿಗೊಳಿಸಿ ಕಟ್ಟುವೆವು ನಾಡ!

ಇಂದು ಬಾಳಿದು ಕೂಲ ಕಾಲೆಗವು; ಹೊಟ್ಟೆಯೇ
ಕೇಂದ್ರವಾಗಿದೆ ನರನ ಜೀವಿತಕ್ಕೆ;
ಅನ್ನದನ್ಯಾಯದಾವಾಗ್ನಿಯಲಿ ಕರಗುತಿದೆ
ನರತೆ, ಸಂಸ್ಕೃತಿ, ಪ್ರೀತಿ, ದಿವದ ಬಯಕೆ!

      ಇರುವೆಲ್ಲವನು ಎಲ್ಲ ಜನಕೆ ತೆರವಾಗಿಸುವ
      ಸಮಬಗೆಯ ಸಮಸುಖದ ಸಮದುಃಖದ
      ಸಾಮರಸ್ಯದ ಸಮಗಾನಲಹರಿಯ ಮೇಲೆ
      ತೀರಿಬರಲಿದೆ ನೋಡು ನಮ್ಮ ನಾಡು!

ಇಲ್ಲೆ ಈ ಎಡೆಯಲ್ಲೆ , ನಮ್ಮ ಮುಂಗಡೆಯಲ್ಲೆ,
ಅಳಲುಗಳ ಹೆಡೆಯಲ್ಲೆ,
ಸೋಲುಗಳ ತೊಡೆಯಲ್ಲೆ
ಅರಳೀತು ನಮ್ಮ ನಾಡು;
ನಮ್ಮೆದೆಯ ತುಂಬಿರುವ ಅದರ ನರಗಂಪು ಹೊರ
ಹೊಮ್ಮುವುದು ಕಾದು ನೋಡು!

      ಉತ್ಸಾಹ ಉದ್ವೇಗ ಉದ್ರೇಕಗಳ ವೀರ
      ಯುವಜನದ ನಾಡ ಗುಡಿಯು;
      ಅದರ ಹಾರಾಟಕ್ಕೆ ಬಾನೆ ಗಡಿಯೂ,
      ಬರಲು ಬಿಡೆವೆಂದಿಗೂ ಅದಕೆ ತಡೆಯು!
      ತಡೆವವರು ಬನ್ನಿರೋ, ಹೊದೆವವರು ಬನ್ನಿರೋ,
      ಕೆಡೆನುಡಿವ ಕೆಡೆಬಗೆವ ಕೆಡುಕು ಜನರೇ ಬನ್ನಿ!
      ಕೊಟ್ಟೆವಿದೋ ವೀಳೆಯವನು;
      ನಿಮ್ಮಲ್ಲರನು ತೊಡೆದು ನಿಮ್ಮ ಮಸಣದ ಮೇಲೆ
      ಕಟ್ಟುವೆವು ನಾವು ಹೊಸ ನಾಡೊಂದನು,
             - ಸುಖದ ಬೀಡೊಂದನು!

                            - ಗೋಪಾಲಕೃಷ್ಣ ಅಡಿಗ
            ('ಕಟ್ಟುವೆವು ನಾವು' ಕವನ ಸಂಕಲನದಿಂದ)

ರೈತನ ದೃಷ್ಟಿ


ಕರಿಯರದೊ ಬಿಳಿಯರದೊ ಯಾರದಾದರೆ ಏನು?
     ಸಾಮ್ರಾಜ್ಯವಾವಗಂ ಸುಲಿಗೆ ರೈತರಿಗೆ !
ವಿಜಯನಗರವೊ? ಮೊಗಲರಾಳ್ವಿಕೆಯೊ? ಇಂಗ್ಲಿಷರೊ?
     ಎಲ್ಲರೂ ಜಿಗಣೆಗಳೆ  ನನ್ನ ನೆತ್ತರಿಗೆ!
ಕತ್ತಿ ಪರದೀಶಿಯಾದರೆ ಮಾತ್ರ ನೋವೆ?
ನಮ್ಮವರೇ ಹದಹಾಕಿ ತಿವಿದರದು ಹೂವೆ?

ಸೋಮಾರಿಗಳಿಗೆ ಸುಖಿಗಳಿಗೆ ರಸಿಕರಿಗಲ್ತೆ
     ಸಾಮ್ರಾಜ್ಯವೆಂಬುದದು ಕಾಮಧೇನು?
ನೃಪ ಎಂಬ ಹೆಸರೊಡನೆ ಮುಡಿಯೊಂದನಾಂತೊಡನೆ  
     ಕಳ್ಳರೊಡೆಯನು ಕೃಪೆಯ ಮೂರ್ತಿಯೇನು?
ತಿಂದುಂಡು ಮೆರೆವವರ ಮೆರವಣಿಗೆಗಾನು
ಬಾಯ್ದೆರೆದು ನೋಳ್ಪ ಬೆಪ್ಪಾಗಬೇಕೇನು?

ಹರಕೆ ಯಾರದೋ? ಹಬ್ಬವಾರಿಗೋ? ಅದಾವಗಂ
     ಸಾಮ್ರಾಜ್ಯಕಾಳಿಗಾನಲ್ತೆ ಕುರಿ ಕೊಲೆಗೆ? 
 ಕುಯ್ಗುರಿಯನೆಂತಂತೆ ಸಾವು ಬದುಕಿನ ನಡುವೆ
     ಕರುಣೆ ಗರಗಸದಿಂದೆ ಸೀಳುವರು ಬೆಲೆಗೆ.
ಸಾಕೆನಗೆ, ಸಾಕಯ್ಯ, ಸಾಮ್ರಾಜ್ಯ ಪೂಜೆ;
ಸಿಡಿಮದ್ದಿನಕ್ಷತೆಗೆ ಗುಂಡು ಚರೆ ಲಾಜೆ!

ನೇಗಿಲಿನ ಮೇಲಾಣೆ! ಬಸವಗಳ ಮೇಲಾಣೆ!
     ನೆತ್ತರಿಲ್ಲದೆ ಸುಕ್ಕಿ ಸೊರಗಿದೆನ್ನಾಣೆ!
ಸಾಮ್ರಾಜ್ಯ ಶೂರ್ಪನಖಿ ಮೋಹಿನಿಯ ರೂಪಕ್ಕೆ
     ಮರುಳಾಗೆನೆಂದಿಗೂ, ಸೀತೆ ಮೇಲಾಣೆ!
ಬಡತನದ ಗೊಬ್ಬರವನನುದಿನಂ ಹೀರಿ
ಹಿಡಿಸದೋ ಸಾಮ್ರಾಜ್ಯ ಸಿರಿಯ ಕಸ್ತೂರಿ!

                          - ಕುವೆಂಪು
 ('ಕೋಗಿಲೆ ಮತ್ತು ಸೋವಿಯತ್ ರಷ್ಯ' ಕವನ ಸಂಕಲನದಿಂದ)

ಇಲ್ಲಿ ಬಾ ಸಂಭವಿಸು


ಇಲ್ಲಿ ಬಾ ಸಂಭವಿಸು ಇಂದೆನ್ನ ಹೃದಯದಲಿ,
ನಿತ್ಯವೂ ಅವತರಿಪ ಸತ್ಯಾವತಾರ!
ಮಣ್ಣಾಗಿ ಮರವಾಗಿ ಮಿಗವಾಗಿ ಖಗವಾಗಿ
ಭವಭವದಿ ಭವಿಸಿ, ಓ ಭವವಿದೂರ,
ಮಣ್ತನಕೆ ಮರತನಕೆ ಮಿಗತನಕೆ ಖಗತನಕೆ
ಮುನ್ನಡೆಗೆ ಕಣ್ಣಾದ ಗುರುವೆ, ಬಾರ!
ಮೂಡಿ ಬಂದಿಂದೆನ್ನ ನರರೂಪ ಚೇತನದಿ
ನಾರಾಯಣತ್ವಕ್ಕೆ ದಾರಿ ತೋರ!
ಅಂದು ಅರಮನೆಯಲ್ಲಿ, ಮತ್ತೆ ಸೆರೆಮನೆಯಲ್ಲಿ,
ಅಲ್ಲಿ ತುರುಪಟ್ಟಿಯಲಿ, ಇಲ್ಲಿ ಕಿರುಗುಡಿಸಲಲಿ,

ದೇಶದೇಶದಿ ವೇಷವೇಷಾಂತರವನಾಂತು
ವಿಶ್ವಸಾರಥಿಯಾಗಿ ಲೀಲಾರಥವನೆಂತು
ಚೋದಿಸಿರುವೆಯೊ ಅಂತೆ, ಸೃಷ್ಟಿಲೋಲ,
ಅವತರಿಸು ಬಾ ಇಲ್ಲಿ ಇಂದೆನ್ನ ಚೈತ್ಯದಲಿ,
ಹೇ ದಿವ್ಯ ಸಚ್ಚಿದಾನಂದ ಶೀಲ!


                   - ಕುವೆಂಪು

ನಾಲ್ಕು ಮಾತು

ಚಿತ್ರ ಕೃಪೆ:: http://joker84.deviantart.com

ನೂರಾರು ಬೆಳಕುಗಳ ನೂಲಿರದ ಹಗ್ಗಕ್ಕೆ
ಹಿಗ್ಗಾ ಮುಗ್ಗಾ ಜಗ್ಗುವ ಕುದುರೆಯಾಗಿ
ತಡವರಿಸಬೇಡ.


ನೂರು ಧ್ವನಿವರ್ಧಕದ ಮಾತುಗಳ  ಸೆಳೆತಕ್ಕೆ
ನಿನ್ನ ಕಿವಿಯೊಡ್ಡುತ್ತ, ನಿನ್ನ ಒಳಗಿನ ದನಿಗೆ
ಕಿವುಡಾಗಬೇಡ.


ಅವರಿವರ ಬಾಲವನ್ನೇ ನಿನ್ನ ಗದೆಯೆಂದು
ಹೆಗಲಲ್ಲಿ ಹೊತ್ತು, ಬಂದಳಿಕೆ ಭೀಮನ ಪಾತ್ರ
ವಹಿಸಬೇಡ.


ನಿನ್ನೊಳಗನ್ನು ನೀನೆ ಅಗೆದು, ತೆಗೆದು,
ಕಮ್ಮಟದ ಕುಲುಮೆ ಬೆಂಕಿಗೆ ಹಿಡಿದು
ನಿನ್ನಿಷ್ಟಕ್ಕೆ ತಕ್ಕಂತೆ ಎರಕ ಹೊಯ್ಯುವವರೆಗೂ
ತೆಪ್ಪಗಿರಬೇಡ.


                                      - ಜಿ ಎಸ್ ಶಿವರುದ್ರಪ್ಪ
                            ('ಗೋಡೆ' ಕವನ ಸಂಕಲನದಿಂದ) 

ಎಲ್ಲ ಮರೆತಿರುವಾಗ.


ಎಲ್ಲ ಮರೆತಿರುವಾಗ ಇಲ್ಲಸಲ್ಲದ ನೆವವ
ಹೂಡಿ ಬರದಿರು ಮತ್ತೆ ಹಳೆಯ ನಿನಪೇ;
ಕಲ್ಲಿನಂದದಿ ಬಿದ್ದು ತಿಳಿಯಾದ ಎದೆಗೊಳವ
ರಾಡಿಗೊಳಿಸುವೆ ಏಕೆ, ಮಧುರ ನೆನಪೇ?

ಕಪ್ಪು ಕಣ್ಣೆನ ನೆಟ್ಟ ನೋಟದರೆಚಣವನ್ನೆ
ತೊಟ್ಟು ಬಾಣದ ಹಾಗೆ ಬಾರದಿರು ನೆನಪೇ;
ಬಿರಿದ ತುಟಿಗಳ ತುಂಬು ನಗೆಯ ಕಾರಣವನ್ನೆ
ಹಿರಿದು ಕೊಲ್ಲುಬಳಿಗೆ ಸಾರದಿರು ನೆನಪೇ.

ಸತ್ತ ಭೂತವನೆತ್ತಿ ಹದ್ದಿನಂದದಿ ತಂದು
ನನ್ನ ಮನದಂಗಳಕೆ ಹಾಕದಿರು ನೆನಪೇ;
ಭವ್ಯ ಭವಿತವ್ಯಕ್ಕೆ ಮೊಗ ಮಡಿ ನಿಂತಿರುವೆ,
ಬೆನ್ನಲ್ಲೆ ಇರಿಯದಿರು, ಓ! ಚೆನ್ನ ನೆನಪೇ,

                                 - ಕೆ.ಎಸ್.ನಿಸಾರ್ ಅಹಮದ್
                           ('ನಿತ್ಯೋತ್ಸವ' ಕವನ ಸಂಕಲನದಿಂದ)

ಗಮಗಮಾ ಗಮಾಡಿಸತಾವ ಮಲ್ಲಿಗಿ


ಗಮಗಮಾ ಗಮಾಡಿಸತಾವ ಮಲ್ಲಿಗಿ
ನೀವು ಹೊರಟಿದ್ದೀಗ ಎಲ್ಲಿಗೆ?

ತುಳುಕ್ಯಾಡತಾವ ತೂಕಡಿಕಿ
ಎವಿ ಅಪ್ಪತಾವ ಕಣ್ಣ ದುಡುಕಿ
ಕನಸು ತೇಲಿ ಬರತಾವ ಹುಡುಕಿ
ನೀವು ಹೊರಟಿದ್ದೀಗ ಎಲ್ಲಿಗೆ?

ಚಿಕ್ಕಿ ತೋರಸ್ತಾನ ಚಾಚಿ ಬೆರಳ
ಚಂದ್ರಾಮ ಕನ್ನಡಿ ಹರಳ
ಮನಸೋತು ಆಯಿತು ಮರುಳ
ನೀವು ಹೊರಟಿದ್ದೀಗ ಎಲ್ಲಿಗೆ?

ಗಾಳಿತಬ್ಬತಾವ ಹೂಗಂಪು
ಚಂದ್ರನ ತೆಕ್ಕಿಗಿದೆ ತಂಪು
ನಿಮ ಕಂಡರ ಕವದಾವ ಜೊಂಪು
ನೀವು ಹೊರಟಿದ್ದೀಗ ಎಲ್ಲಿಗೆ?

ನೆರಳಲ್ಲಾಡತಾವ ಮರದ ಬುಡಕs
ಕೆರಿ ತೆರಿ ನೂಗತಾವ ದಡsಕ
ಹೀಂಗೆ ಬಿಟ್ಟು ಇಲ್ಲಿ ನನ್ನ ನಡsಕ
ನೀವು ಹೊರಟಿದ್ದೀಗ ಎಲ್ಲಿಗೆ?

ನಮ್ಮ ನಿಮ್ಮ ಒಂದತನದಾಗ
ಹಾಡು ಹುಟ್ಟಿ ಒಂದು ಮನದಾಗ
ಬೆಳದಿಂಗಳಾತು ಬನದಾಗ
ನೀವು ಹೊರಟಿದ್ದೀಗ ಎಲ್ಲಿಗೆ?

ನಾವು ಬಂದೆವದಿಲ್ಲಿದಿಲ್ಲಿಗೆ
ಬಾಯಿ ಬಿಟ್ಟವಲ್ಲ ಮಲ್ಲಿಗೆ
ನೀರೊಡೆಡಿತಲ್ಲ ಕಲ್ಲಿಗೆ
ನೀವು ಹೊರಟಿದ್ದೀಗ ಎಲ್ಲಿಗೆ?

ಬಂತ್ಯಾಕ ನಿಮಗೆ ಇಂದ ಮುನಿಸು
ಬೀಳಲಿಲ್ಲ ನಮಗೆ ಇದರ ಕನಸು
ರಾಯ ತಿಳಿಯಲಿಲ್ಲ ನಿಮ್ಮ ಮನಸು
ನೀವು ಹೊರಟಿದ್ದೀಗ ಎಲ್ಲಿಗೆ?

                              - ದ ರಾ ಬೇಂದ್ರೆ 
              ('ಗಂಗಾವತರಣ' ಕವನ ಸಂಕಲನದಿಂದ)

ನಾಕುತಂತಿ



೧ 

ಆವು ಈವಿನ
ನಾವು ನೀವಿಗೆ
ಆನು ತಾನದ
ತನನನಾs

ನಾನು ನೀನಿನ
ಈ ನಿನಾನಿಗೆ
ಬೇನೆ ಏನೋ?
ಜಾಣಿ ನಾs

ಚಾರು ತಂತ್ರಿಯ
ಚರಣ ಚರಣದ
ಘನಘನಿತ ಚತು-
-ರಸ್ವನಾ

ಹತವೊ ಹಿತವೊ
ಆ ಅನಾಹತಾ
ಮಿತಿಮಿತಿಗೆ ಇತಿ
ನನನನಾ

ಬೆನ್ನಿನಾನಿಕೆ
ಜನನ ಜಾನಿಕೆ
ಮನನವೇ ಸಹಿ-
ತಸ್ತನಾ



ಗೋವಿನ ಕೊಡುಗೆಯ
ಹಡಗದ ಹುಡುಗಿ
ಬೆಡಗಿಲೆ ಬಂದಳು
ನಡು ನಡುಗಿ;

ಸಲಿಗೆಯ ಸುಲಿಗೆಯ
ಬಯಕೆಯ ಒಲುಮೆ
ಬಯಲಿನ ನೆಯ್ಗೆಯ
ಸಿರಿಯುಡುಗಿ;

ನಾಡಿಯ ನಡಿಗೆಯ
ನಲುವಿನ ನಾಲಿಗೆ
ನೆನೆದಿರೆ ಸೋಲುವ
ಸೊಲ್ಲಿನಲಿ;

ಮುಟ್ಟದ ಮಾಟದ
ಹುಟ್ಟದ ಹುಟ್ಟಿಗೆ
ಜೇನಿನ ಥಳಿಮಳಿ
ಸನಿಹ ಹನಿ;

ಬೆಚ್ಚಿದ ವೆಚ್ಚವು
ಬಸರಿನ ಮೊಳಕೆ
ಬಚ್ಚಿದ್ದಾವದೊ
ನಾ ತಿಳಿಯೆ.

ಭೂತದ ಭಾವ
ಉದ್ಭವ ಜಾವ
ಮೊಲೆ ಊಡಿಸುವಳು
ಪ್ರತಿಭೆ ನವ.



'ಚಿತ್ತೀಮಳಿ ತತ್ತೀ ಹಾಕತಿತ್ತು
ಸ್ವಾತಿ ಮುತ್ತಿನೊಳಗ
ಸತ್ತಿsಯೊ ಮಗನs
ಅಂತ ಕೂಗಿದರು
ಸಾವೀ ಮಗಳು, ಭಾವೀ ಮಗಳು
ಕೂಡಿ'

'ಈ ಜಗ, ಅಪ್ಪಾ, ಅಮ್ಮನ ಮಗ
ಅಮ್ಮನೊಳಗ ಅಪ್ಪನ ಮೊಗ
ಅಪ್ಪನ ಕತ್ತಿಗೆ ಅಮ್ಮನ ನೊಗ
ನಾ ಅವರ ಕಂದ
ಶ್ರೀ ಗುರುದತ್ತ ಅಂದ.'



'ನಾನು' 'ನೀನು'
'ಆನು' 'ತಾನು'
ನಾಕೆ ನಾಕು ತಂತಿ,

ಸೊಲ್ಲಿಸಿದರು
ನಿಲ್ಲಿಸಿದರು
ಓಂ ಓಂ ದಂತಿ!
ಗಣನಾಯಕ
ಮೈ ಮಾಯಕ
ಸೈ ಸಾಯಕ ಮಾಡಿ
ಗುರಿಯ ತುಂಬಿ
ಕುರಿಯ ಕಣ್ಣು
ಧಾತು ಮಾತು
ಕೂಡಿ.

                                - ದ ರಾ ಬೇಂದ್ರೆ 
               ('ನಾಕುತಂತಿ' ಕವನ ಸಂಕಲನದಿಂದ) 

ನಾನು ಬಡವಿ

ಚಿತ್ರ ಕೃಪೆ: K.R.Deepak, thehindu.com

ನಾನು ಬಡವಿ, ಆತ ಬಡವ
ಒಲವೆ ನಮ್ಮ ಬದುಕು
ಬಳಸಿಕೊಂಡೆವದನೆ ನಾವು
ಅದಕು ಇದಕು ಎದಕು

ಹತ್ತಿರಿರಲಿ ದೂರವಿರಲಿ
ಅವನೆ ರಂಗಸಾಲೆ
ಕಣ್ಣು ಕಟ್ಟುವಂತ ಮೂರ್ತಿ
ಕಿವಿಗೆ ಮೆಚ್ಚಿನೋಲೆ

ಚಳಿಗೆ ಬಿಸಿಲಿಗೊಂದೆ ಹದನ
ಅವನ ಮೈಯ ಮುತ್ತೆ
ಅದೇ ಗಳಿಗೆ ಮೈಯ ತುಂಬ
ನನಗೆ ನವಿರು ಬತ್ತೆ

ಆತ ಕೊಟ್ಟ ವಸ್ತು ಒಡವೆ
ನನಗೆ ಅವಗೆ ಗೊತ್ತು
ತೋಳುಗಳಿಗೆ ತೋಳ ಬಂಧಿ
ಕೆನ್ನೆ ತುಂಬ ಮುತ್ತು

ಕುಂದು ಕೊರತೆ ತೋರಲಿಲ್ಲ
ಬೇಕು ಹೆಚ್ಚಿಗೇನು?
ಹೊಟ್ಟೆಗಿತ್ತ ಜೀವಫಲವ
ತುಟಿಗೆ ಹಾಲು ಜೇನು

                         - ದ ರಾ ಬೇಂದ್ರೆ 

ನನ್ನ ಹಣತೆ




ಹಣತೆ ಹಚ್ಚುತ್ತೇನೆ ನಾನೂ.
ಈ ಕತ್ತಲನ್ನು ಗೆದ್ದು ನಿಲ್ಲುತ್ತೇನೆಂಬ ಜಿದ್ದಿನಿಂದಲ್ಲ;
ಲೆಕ್ಕವೇ ಇರದ ದೀಪಾವಳಿಯ ಹಡಗುಗಳೇ
ಇದರಲ್ಲಿ ಮುಳುಗಿ ಕರಗಿರುವಾಗ
ನಾನು ಹಚ್ಚುವ ಹಣತೆ ಶಾಶ್ವತವೆಂಬ ಭ್ರಾಂತಿ ನನಗಿಲ್ಲ.


ಹಣತೆ ಹಚ್ಚುತ್ತೇನೆ ನಾನೂ;
ಈ ಕತ್ತಲಿನಿಂದ ಬೆಳಕಿನ ಕಡೆಗೆ ನಡೆದೇನೆಂಬ
ಆಸೆಯಿಂದಲ್ಲ.
ಕತ್ತಲಿನಿಂದ ಕತ್ತಲಿಗೇ ತಡಕಾಡಿಕೊಂಡು ಬಂದಿದೆ ಹೆಜ್ಜೆ
ಶತಮಾನದಿಂದಲೂ.
ನಡು ನಡುವೆ ಒಂದಷ್ಟು ಬೆಳಕು ಬೇಕೆಂದು
ಆಗಾಗ ಕಡ್ಡಿ ಗೀಚಿದ್ದೇವೆ,
ದೀಪ ಮೂಡಿಸಿದ್ದೇವೆ,
ವೇದ, ಶಾಸ್ತ್ರ, ಪುರಾಣ, ಇತಿಹಾಸ, ಕಾವ್ಯ, ವಿಜ್ಞಾನಗಳ
ಮತಾಪು - ಪಟಾಕಿ - ಸುರುಸುರುಬತ್ತಿ - ಹೂಬಾಣ
ಸುಟ್ಟಿದ್ದೇವೆ.
'ತಮಸೋಮಾ ಜ್ಯೋತಿರ್ಗಮಯಾ' ಎನ್ನುತ್ತಾ ಬರೀ
ಬೂದಿಯನ್ನೇ ಕೊನೆಗೆ ಕಂಡಿದ್ದೇವೆ.

ನನಗೂ ಗೊತ್ತು, ಈ ಕತ್ತಲೆಗೆ
ಕೊನೆಯಿರದ ಬಾಯಾರಿಕೆ.
ಎಷ್ಟೊಂದು ಬೆಳಕನ್ನು ಇದು ಉಟ್ಟರೂ , ತೊಟ್ಟರೂ
ತಿಂದರೂ, ಕುಡಿದರೂ ಇದಕ್ಕೆ ಇನ್ನೂ ಬೇಕು
ಇನ್ನೂ ಬೇಕು ಎನ್ನುವ ಬಯಕೆ.

ಆದರೂ ಹಣತೆ ಹಚ್ಚುತ್ತೇನೆ ನಾನು;
ಕತ್ತಲೆಯನ್ನು ದಾಟುತ್ತೇನೆಂಬ ಭ್ರಮೆಯಿಂದಲ್ಲ,
ಇರುವಷ್ಟು ಹೊತ್ತು ನಿನ್ನ ಮುಖ ನಾನು, ನನ್ನ ಮುಖ ನೀನು
ನೋಡಬಹುದೆಂಬ ಒಂದೇ ಒಂದು ಆಸೆಯಿಂದ;
ಹಣತೆ ಆರಿದ ಮೇಲೆ, ನೀನು ಯಾರೋ, ಮತ್ತೆ
ನಾನು ಯಾರೋ.


                              - ಜಿ ಎಸ್ ಶಿವರುದ್ರಪ್ಪ 
                        ('ಗೋಡೆ' ಕವನ ಸಂಕಲನದಿಂದ)

ನೀ ಹೀಂಗ ನೋಡಬ್ಯಾಡ ನನ್ನ





ನೀ ಹೀಂಗ ನೋಡಬ್ಯಾಡ ನನ್ನ
ನೀ ಹೀಂಗ ನೋಡಿದರ ನನ್ನ,
ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ?

ಸಂಸಾರಸಾಗರದಾಗ, ಲೆಕ್ಕವಿರದಷ್ಟು ದುಃಖದ ಬಂಡಿ
ನಾ ಬಲ್ಲೆ ನನಗ ಗೊತ್ತಿಲ್ಲದಿದ್ದರು ಎಲ್ಲಿ ಆಚೆಯಾ ದಂಡಿ
ಮಲಗಿರುವ ಕೂಸು ಮಲಗಿರಲಿ ಅಲ್ಲಿ, ಮುಂದಿನದು ದೇವರ ಚಿತ್ತ
ನಾ ತಡೀಲಾರೆ ಅದು, ಯಾಕ ನೋಡತೀ ಮತ್ತ ಮತ್ತ ನೀ ಇತ್ತ?

ತಂಬಲs ಹಾಕದs ತುಂಬ ಕೆಂಪು ಗಿಣಿಗಡಕ ಹಣ್ಣಿನ ಹಾಂಗ
ಇದ್ದಂಥ ತುಟಿಯ ಬಣ್ಣೆತ್ತ ಹಾರಿತು ? ಯಾವ ಗಾಳಿಗೆ ಹೀಂಗ
ಈ ಗದ್ದ, ಗಲ್ಲ, ಹಣಿ, ಕಣ್ಣು, ಕಂಡು ಮಾರೀಗೆ ಮಾರಿsಯಾ ರೀತಿ
ಸಾವನs ತನ್ನ ಕೈ ಸವರಿತಿಲ್ಲಿ, ಬಂತೆನಗ ಇಲ್ಲದ ಭೀತಿ.

ದಾರೀಲೆ ನೆನೆದ ಕೈ ಹಿಡಿದೆ ನೀನು, ತಣ್ಣsಗ ಅಂತನ ತಿಳಿದು
ಬಿಡಲೊಲ್ಲಿ ಇನ್ನುನೂ, ಬೂದಿ ಮುಚ್ಚಿದ ಕೆಂಡ ಇದಂತ ಹೊಳೆದು
ಮುಗಿಲsನ ಕಪ್ಪರಿಸಿ ನೆಲಕ ಬಿದ್ದರ ನೆಲಕ ನೆಲಿ ಎಲ್ಲಿನ್ನs
ಆ ಗಾದಿ ಮಾತು ನಂಬಿ, ನಾನು ದೇವರಂತ ತಿಳಿದಿಯೇನ ನೀ ನನ್ನ?

ಇಬ್ಬನ್ನಿ ತೊಳೆದರೂ ಹಾಲು ಮೆತ್ತಿದಾ ಕವಳಿಕಂಟಿಯಾ ಹಣ್ಣು
ಹೊಳೆಹೊಳೆವ ಹಾಂಗ ಕಣ್ಣಿರುವ ಹೆಣ್ಣ, ಹೇಳು ನಿನ್ನವೇನ ಈ ಕಣ್ಣು?
ದಿಗಿಲಾಗಿ ಅನ್ನತದ ಜೀವ ನಿನ್ನ ಕಣ್ಣಾರೆ ಕಂಡ ಒಮ್ಮಿಗಿಲs
ಹುಣ್ಣವೀ ಚಂದಿರನ ಹೆಣಾ ಬಂತೊ ಮುಗಿಲಾಗ ತೇಲತs ಹಗಲ!

ನಿನ ಕಣ್ಣಿನ್ಯಾಗ ಕಾಲೂರಿ ಮಳೆಯು, ನಡನಡಕ ಹುಚ್ಚನಗಿ ಯಾಕ
ಹನಿ ಒಡೆಯಲಿಕ್ಕೆ ಬಂದಂಥ ಮೋಡ ತಡಧಾಂಗ ಗಾಳಿಯ ನೆವಕ
ಅತ್ತಾರೆ ಅತ್ತು ಬಿಡು, ಹೊನಲು ಬರಲಿ, ನಕ್ಕ್ಯಾಕ ಮರಸತೀ ದುಕ್ಕ?
ಎವೆ ಬಡಸಿ ಕೆಡವು, ಬಿರಿಗಣ್ಣು ಬ್ಯಾಡ, ತುಟಿಕಚ್ಚಿ ಹಿಡಿಯದಿರು ಬಿಕ್ಕ.


                                                            - ದ ರಾ ಬೇಂದ್ರೆ
                                       ('ನಾದಲೀಲೆ' ಕವನ ಸಂಕಲನದಿಂದ)

ಮರವಾಗು



ಮರವಾಗೆಲೆ, ಓ ಜೀವವೇ, ಮರವಾಗು
ಹಲ ಬಗೆಯಲಿ ಈ ಲೋಕಕೆ ನೆರವಾಗು
ಅಲೆದಾಡುವ ಜೀವಕ್ಕೆಲ್ಲಿ ಯಾವ ನೆಲೆ?
ನೆಲದಾಳಕೆ ಬೇರನೂರಿ ಸ್ಥಿರವಾಗು

ಭೂಸಾರವ ನೀ ಹೀರಿ ತೊಡು ಹಸಿರನ್ನು
ಪರಿಸರಕೆ ನೀಡು ನಿರ್ಮಲ ಉಸಿರನ್ನು
ರೆಂಬೆಯಲ್ಲೂ ತುಂಬಲಿ ಹೂ ಹಣ್ಣು
ತಂಪು ನೆರಳ ಕೊಡುವ ಚಪ್ಪರವಾಗು

ಹಲವು ಜೀವಗಳಿಗೆ ಆಗು ನೀನು ನೆಲೆ
ಕಾರ್ಮುಗಿಲನು ಇಳೆಗೆ ಸೆಳೆದು ಸುರಿದು ಮಳೆ
ಪ್ರತಿ ಚೈತ್ರ ನಿನಗೆ ತರಲಿ ಹೊಸ ಜೀವಕಳೆ
ಹಡೆದ ನೆಲತಾಯಿಗೆ ನೀ ವರವಾಗು.

                            - ಬಿ ಆರ್ ಲಕ್ಷ್ಮಣರಾವ್

ಬೆಳಗು



ಮೂಡಲ ಮನೆಯಾ ಮುತ್ತಿನ ನೀರಿನ
ಎರಕಾವ ಹೊಯ್ದಾ
ನುಣ್ಣನೆ - ಎರಕಾವ 
ಹೊಯ್ದಾ
ಬಾಗಿಲ ತೆರೆದೂ ಬೆಳಕು ಹರಿದೂ
ಜಗವೆಲ್ಲಾ ತೊಯ್ದಾ
ಹೋಯ್ತೋ - ಜಗವೆಲ್ಲಾತೊಯ್ದಾ


ರತ್ನದರಸದಾ ಕಾರಂಜೀಯೂ
ಪುಟಪುಟನೇ ಪುಟಿದು
ತಾನೇ - ಪುಟಪುಟನೇ ಪುಟಿದು
ಮಘಮಘಿಸುವಾ ಮುಗಿದ ಮೊಗ್ಗೀ
ಪಟಪಟನೇ ಒಡೆದು
ತಾನೇ - ಪಟಪಟನೇ ಒಡೆದು

ಎಲೆಗಳ ಮೇಲೇ ಹೂಗಳ ಒಳಗೇ
ಅಮೃತದ ಬಿಂದು
ಕಂಡವು - ಅಮೃತದ ಬಿಂದು
ಯಾರಿರಿಸಿದವರು ಮುಗಿಲಮೇಲಿಂ-
ದಿಲ್ಲಿಗೇ ತಂದು
ಈಗ - ಇಲ್ಲಿಗೇ ತಂದು

ತಂಗಾಳೀಯ ಕೈಯೊಳಗಿರಿಸೀ
ಎಸಳೀನಾ ಚವರೀ
ಹೂವಿನ-ಎಸಳೀನಾ ಚವರಿ
ಹಾರಿಸಿ ಬಿಟ್ಟರು ತುಂಬಿಯ ದಂಡು
ಮೈಯೆಲ್ಲಾ ಸವರಿ
ಗಂಧಾ - ಮೈಯೆಲ್ಲಾ ಸವರಿ

ಗಿಡಗಂಟೆಯಾ ಕೊರಳೊಳಗಿಂದ
ಹಕ್ಕಿಗಳಾ ಹಾಡು
ಹೊರಟಿತು - ಹಕ್ಕಿಗಳಾ ಹಾಡು
ಗಂಧರ್ವರಾ ಸೀಮೆಯಾಯಿತು
ಕಾಡಿನಾ ನಾಡು
ಕ್ಷಣದೊಳು - ಕಾಡಿನಾ ನಾಡು.

ಕಂಡಿತು ಕಣ್ಣು ಸವಿದಿತು ನಾಲಗೆ
ಪಡೆದೀತೀ ದೇಹ
ಸ್ಪರ್ಶಾ - ಪಡೆದೀತೀ ದೇಹ
ಕೇಳಿತು ಕಿವಿಯು ಮೂಸಿತು ಮೂಗು
ತನ್ಮಯವೀ ಗೇಹಾ
ದೇವರ - ದೀ ಮನಸಿನ ಗೇಹಾ

ಅರಿಯದು ಅಳವು ತಿಳಿಯದು ಮನವು
ಕಾಣದೋ ಬಣ್ಣ
ಕಣ್ಣಿಗೆ - ಕಾಣದೋ ಬಣ್ಣ
ಶಾಂತಿರಸವೇ ಪ್ರೀತಿಯಿಂದಾ
ಮೈದೋರಿತಣ್ಣ
ಇದು ಬರಿ - ಬೆಳಗಲ್ಲೋ ಅಣ್ಣಾ



                                          - ದ ರಾ ಬೇಂದ್ರೆ
                              ('ಗರಿ' ಕವನ ಸಂಕಲನದಿಂದ)

ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ



ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ
ಸೋs ಎಂದು ಶ್ರುತಿ ಹಿಡಿದು ಸುರಿಯುತ್ತಿತ್ತು
ಅದಕೆ ಹಿಮ್ಮೇಳವೆನೆ ಸೋಸಿಪಹ ಸುಳಿಗಾಳಿ
ತೆಂಗುಗರಿಗಳ ನಡುವೆ ನುಸುಳುತಿತ್ತು.


ಇಳೆವೆಣ್ಣು ಮೈದೊಳೆದು ಮಕರಂದದರಿಶಿನದಿ
ಹೂ ಮುಡಿದು ಮದುಮಗಳ ಹೋಲುತಿತ್ತು
ಮೂಡಣದಿ ನೇಸರನ ನಗೆಮೊಗದ ಶ್ರೀಕಾಂತಿ
ಬಿಳಿಯ ಮೋಡದ ಹಿಂದೆ ಹೊಳೆಯುತ್ತಿತ್ತು.


ಹುಲ್ಲೆಸಳು ಹೂಪಕಳೆ ಮುತ್ತು ಹನಿಗಳ ಮಿಂಚು
ಸೊಡರಿನಲಿ ಆರತಿಯ ಬೆಳಗುತ್ತಿತ್ತು
ಕೊರಳುಕ್ಕಿ ಹಾಡುತಿಹ ಚಿಕ್ಕ ಪಕ್ಕಿಯ ಬಳಗ
ಶುಭಮಸ್ತು ಶುಭಮಸ್ತು ಎನ್ನುತ್ತಿತ್ತು .


ತಳಿರತೋರಣದಲ್ಲಿ ಬಳ್ಳಿಮಾಡಗಳಲ್ಲಿ
ದುಂಬಿಗಳ ಓಂಕಾರ ಹೊಮ್ಮುತ್ತಿತ್ತು
ಹಚ್ಚ ಹಸುರಿನ ಪಚ್ಚೆ ನೆಲಗಟ್ಟಿನಂಗಳದಿ
ಚಿಟ್ಟೆ ರಿಂಗಣಗುಣಿತ ಹಾಕುತಿತ್ತು.


ಉಷೆಯ ನುಣ್ಗದಪಿನಲಿ ಹರ್ಷ ಬಾಷ್ಪಗಳಂತೆ
ಮರದ ಹನಿ ತಟಪಟನೆ ಉದುರುತಿತ್ತು
ಸೃಷ್ಟಿ ಲೀಲೆಯೊಳಿಂತು ತಲ್ಲೀನವಾದಮನ
ಮುಂಬಾಳ ಸವಿಗನಸ ನೆನೆಯುತಿತ್ತು.


                                - ಚೆನ್ನವೀರ ಕಣವಿ 

ನಾನಾರೆಂಬುದು ನಾನಲ್ಲ


ನಾನಾರೆಂಬುದು ನಾನಲ್ಲ, ಈ ಮಾನುಷ ಜನ್ಮವು ನಾನಲ್ಲ.
ನಾರಾಯಣವರ ಬ್ಹ್ರಂಹಸದಾಶಿವ, ನೀಯೆಣಿಸುವ ಗುಣ ನಾನಲ್ಲ.


ಮಾತಾಪಿತಸುತ ನಾನಲ್ಲ, ಭೂನಾಥನಾದವ ನಾನಲ್ಲ.
ಜಾತಿಗೋತ್ರಗಳು ನಾನಲ್ಲ, ಬಹು ಪ್ರೀತಿಯ ಸತಿಸುಥ ನಾನಲ್ಲ.


ವೇದ ಓದುಗಳು ನಾನಲ್ಲ, ಬರಿ ವಾದ ಮಾಡಿದವ ನಾನಲ್ಲ.
ನಾದಬಿಂದು ಕಳೆ ಭೇದ ವಸ್ತು ನಿಜ ಬೋದದವದಲ್ಲಿದವ ನಾನಲ್ಲ.


ನಾನೀಬೇಧವು ನಾನಲ್ಲ,  ನಾ ಶಿಶುನಾಳದೀಶನ ಬಿಡಲಿಲ್ಲ.
ನಾ ಅಳಿಯದೆ ನಾ ತಿಳಿಯಲು ಬಾರದು ನೀಯೆಣಿಸುವ ಗುಣ ನಾನಲ್ಲ.

                                                 - ಶಿಶುನಾಳ ಷರೀಫ್ 

ಕುರುಡು ಕಾಂಚಾಣ



ಕುರುಡು ಕಾಂಚಾಣ ಕುಣಿಯುತ್ತಲಿತ್ತು,
ಕಾಲಿಗೆ ಬಿದ್ದವರ ತುಳಿಯುತ್ತಲಿತ್ತೋ


ಬಾಣಂತಿಯೆಲುಬ ಸಾ-
ಬಾಣದ ಬಿಳುಪಿನಾ
ಕಾಣದ ಕಿರುಗೆಜ್ಜಿ ಕಾಲಾಗ ಇತ್ತೋ;
ಸಣ್ಣ ಕಂದಮ್ಮಗಳ
ಕಣ್ಣೀನ ಕವಡೀಯ
ತಣ್ಣನ್ನ ಜೋಮಾಲೆ ಕೊರಳೊಳಗಿತ್ತೋ;


ಬಡವರ ಒಡಲಿನ
ಬಡಬಾsನಲದಲ್ಲಿ
ಸುಡು ಸುಡು ಪಂಜು ಕೈಯೊಳಗಿತ್ತೋ;
ಕಂಬನಿ ಕುಡಿಯುವ
ಹುಂಬ ಬಾಯಿಲೆ ಮೈ -
ದುಂಬಿಯಂತುಧೋ ಉಧೋ ಎನ್ನುತಲಿತ್ತೋ.


ಕೂಲಿ ಕುಂಬಳಿಯವರ
ಪಾಲಿನ ಮೈದೊಗಲ
ಧೂಳಿಯ ಭಂಡಾರ ಹಣೆಯಯೊಳಗಿತ್ತೋ;
ಗುಡಿಯೊಳಗೆ ಗಣಣ, ಮಾ -
ಹಡಿಯೊಳಗ ತನನ, ಅಂ -
ಗಡಿಯೊಳಗೆ ಝಣಣಣ ನುಡಿಗೊಡುತಿತ್ತೋ.


ಹ್ಯಾಂಗಾರೆ ಕುಣಿಕುಣಿದು
ಮಂಗಾಟ ನಡೆದಾಗ
ಅಂಗಾತ ಬಿತ್ತೋ, ಹೆಗಲಲಿ ಎತ್ತೋ.


                              - ದ ರಾ ಬೇಂದ್ರೆ

ಅಮೃತವಾಹಿನಿಯೊಂದು




ಅಮೃತವಾಹಿನಿಯೊಂದು ಹರಿಯುತಿದೆ
ಮಾನವನ ಎದೆಯಿಂದಲೆದೆಗೆ ಸತತ.

ಗ್ರೀಷ್ಮಗಳು ನೂರಾರು ಉರಿಸಿದರು ಆರದಿದು
ಸುತ್ತಮುತ್ತಲು ಮರಳು ಮೇಲೆ ಪಾಚಿ.
ಮುತ್ತಿಕೊಂಡರು ಲುಪ್ತವಾಗದೀ ಅಮೃತ ಧುನಿ
ಕಿರಿದಾಗಿ ಬರಿದಾಗಿ ನೀರ ಗೆರೆಯಾಗಿ
ತಳದೊಳೆಲ್ಲೋ ತಳುವಿ ಗುಳುಗುಳಿಸುತಿದೆ ಸೆಲೆಯು
ಏನನೋ ಕಾಯುತಿದೆ ಗುಪ್ತವಾಗಿ.

ಇಂದಲ್ಲ ನಾಳೆ ಹೊಸ ಬಾನು ಬಗೆ ತೆರೆದೀತು
ಕರಗೀತು ಮುಗಿಲ ಬಳಗ
ಬಂದೀತು ಸೊದೆಯ ಮಳೆ, ತುಂಬೀತು ಎದೆಯ ಹೊಳೆ
ತೊಳೆದೀತು ಒಳಗು ಹೊರಗ.

ಈ ಸೆಲೆಗೆ ಆ ಮಳೆಯು ಎದೆಗೆ ಎದೆ ಎದೆ ಹೊಳೆಯು
ಸೇರದಿರೆ ಇಲ್ಲ ನಿಸ್ತಾರ
ಬಂದೆ ಬರಬೇಕಯ್ಯೋ, ಬಂದೆ ತೀರಲು ಬೇಕು
ಈ ಬಾಳಿಗಾ ಮಹಾಪೂರ!
           

                                        - ಗೋಪಾಲಕೃಷ್ಣ ಅಡಿಗ

ಹೃದಯಸಮುದ್ರ

ಚಿತ್ರ ಕೃಪೆ: http://www.123rf.com/profile_srijanroyc

ಬಂಗಾರ ನೀರ ಕಡಲಾಚೆಗೀಚೆಗಿದೆ ನೀಲ ನೀಲ ತೀರಾ,
ಮಿಂಚುಬಳಗ ತೆರೆತೆರೆಗಳಾಗಿ ಅಲೆಯುವದು ಪುಟ್ಟಪೂರಾ,
ಅದು ನಮ್ಮ ಊರು, ಇದು ನಿಮ್ಮ ಊರು, ತಂತಮ್ಮ ಊರೊ ಧೀರಾ,
ಅದರೊಳಗೆ ನಾವು, ನಮ್ಮೊಳಗೆ ತಾವು ಅದು ಇಲ್ಲವಣ್ಣ ದೂರಾ.

ಕರೆ ಬಂದಿತಣ್ಣ, ತೆರೆ ಬಂದಿತಣ್ಣ, ನೆರೆ ಬಂದಿತಣ್ಣ ಬಳಿಗೆ,
ಹರಿತsದ ಭಾವ, ಬೆರಿತsದ ಜೀವ ಅದರೊಳಗೆ ಒಳಗೆ ಒಳಗೆ.
ಇದೆ ಸಮಯವಣ್ಣ ಇದೆ ಸಮಯ ತಮ್ಮ ನಮ್‌ನಿಮ್ಮ ಆತ್ಮಗಳಿಗೆ.
ಅಂಬಿಗನು ಬಂದ, ನಂಬಿಗನು ಬಂದ ಬಂದsದ ದಿವ್ಯಗಳಿಗೆ.

ಇದು ಉಪ್ಪು ನೀರ ಕಡಲಲ್ಲೊ; ನಮ್ಮ ಒಡಲಲ್ಲೆ ಇದರ ನೆಲೆಯು.
ಕಂಡವರಿಗಲ್ಲೊ ಕಂಡವರಿಗಷ್ಟೆ ತಿಳಿದsದ ಇದರ ಬೆಲೆಯು.
ಸಿಕ್ಕಲ್ಲಿ ಅಲ್ಲ ಸಿಕ್ಕಲೆ ಮಾತ್ರ ಒಡೆಯುವದು ಇದರ ಸೆಲೆಯು,
ಕಣ್ಣರಳಿದಾಗ ಕಣ್ ಹೊರಳಿದಾಗ ಹೊಳೆಯುವದು ಇದರ ಕಳೆಯು.

ಬಂದವರ ಬಳಿಗೆ ಬಂದsದ ಮತ್ತು ನಿಂದವರ ನೆರೆಗು
ಬಂದsದೋ ಬಂದsದ,
ನವಮನುವು ಬಂದ ಹೊಸ ದ್ವೀಪಗಳಿಗೆ ಹೊರಟಾನ ಬನ್ನಿ
ಅಂದsದೋ ಅಂದsದ.

                                                              - ದ ರಾ ಬೇಂದ್ರೆ